ಗ್ರಂಥದವರು ಹಾಗೂ ಬಹುದೇವ ವಿಶ್ವಾಸಿಗಳಾದ ಸತ್ಯನಿಷೇಧಿಗಳು ಅವರಿಗೆ ಸುವ್ಯಕ್ತ ಪುರಾವೆ ಬರುವವರೆಗೆ ಆದರ್ಶವನ್ನು ಬಿಡಿಸಿಕೊಂಡವರಲ್ಲ.
(ಸುವ್ಯಕ್ತ ಪುರಾವೆ ಏನೆಂದರೆ) ಅಲ್ಲಾಹನ ಕಡೆಯಿಂದ ಪರಿಶುದ್ಧವಾದ ಹೊತ್ತಗೆಗಳನ್ನು ಓದಿ ಕೊಡುವ ಓರ್ವ ದೂತರು .
ಅದರಲ್ಲಿ ನೇರ, ಸರಳ ಲಿಖಿತ ನಿಯಮಗಳಿವೆ . (ಆಗ ಕೆಲವರು ವಿಶ್ವಾಸ ತಾಳಿದರು. ಕೆಲವರು ನಿಷೇಧಿಸಿದರು).
(ಆದರೆ) ವೇದಗ್ರಂಥ ನೀಡಲ್ಪಟ್ಟವರು ಭಿನ್ನಾಭಿಪ್ರಾಯ ತಾಳಿದ್ದು ಅವರಿಗೆ ಸುವ್ಯಕ್ತ ಪುರಾವೆ ಬಂದ ಬಳಿಕ ಮಾತ್ರವೇ ಆಗಿತ್ತು .
ತಮ್ಮ ಧರ್ಮವನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕವಾಗಿ ಮೀಸಲಿಟ್ಟು ಎಲ್ಲ ಮಿಥ್ಯ ಧರ್ಮಗಳಿಂದ ದೂರವಾಗಿ ಅಲ್ಲಾಹನನ್ನು ಮಾತ್ರ ಆರಾಧಿಸಲೂ, ನಮಾಝ್ ಸಂಸ್ಥಾಪಿಸಲೂ, ಕಡ್ಡಾಯ ದಾನ ನೀಡಲೂ ಮಾತ್ರವೇ ಅವರಲ್ಲಿ (ಅವರ ವೇದಗಳಲ್ಲಿ) ಆದೇಶಿಸಲಾಗಿತ್ತು. ಅದುವೇ ಸರಿಯಾದ ಧರ್ಮ.
ಗ್ರಂಥದವರೂ, ಬಹುದೇವಾರಾಧಕರೂ ಆದ ಸತ್ಯ ನಿಷೇಧಿಗಳು ಖಂಡಿತವಾಗಿಯೂ ಜಹನ್ನಮ್ ಎಂಬ ನರಕದ ಬೆಂಕಿಯಲ್ಲಿ ಸದಾಕಾಲ ಬಿದ್ದು ಕೊಂಡಿರುವರು, ಅವರೇ ಸೃಷ್ಟಿಗಳ ಪೈಕಿ ಅತ್ಯಂತ ನಿಕೃಷ್ಟರು!
Àತ್ಯವಿಶ್ವಾಸವನ್ನು ತಾಳಿ ಸತ್ಕರ್ಮ ಮಾಡಿದವರು, ಖಂಡಿತ ಅವರೇ ಸೃಷ್ಟಿಗಳ ಪೈಕಿ ಅತ್ಯುತ್ತಮರು.
ಅವರ ಪಾಲಕನ ಬಳಿ ಅವರಿಗಿರುವ ಪ್ರತಿಫಲವು ತಳಭಾಗದಲ್ಲಿ ನದಿಗಳು ಹರಿಯುವವಾಸ ಯೋಗ್ಯವಾದ ಸ್ವರ್ಗೋದ್ಯಾನಗಳಾಗಿವೆ. ಅದರಲ್ಲಿ ಅವರು ಶಾಶ್ವತವಾಗಿ ನೆಲೆಸುವರು. ಅಲ್ಲಾಹು ಅವರ ಬಗ್ಗೆ ಪ್ರಸನ್ನನಾದನು, ಅವರೂ ಅಲ್ಲಾಹನ ಕುರಿತು ಪ್ರಸನ್ನರಾದರು. ಈ ಪ್ರತಿಫಲವು ತನ್ನ ಪ್ರಭುವನ್ನು ಭಯಪಟ್ಟವನಿಗೆ.