ರಾತ್ರಿಯಾಣೆ, ಅದು ಇರುಳಾವರಿಸಿದಾಗ,
ಹಗಲಿನಾಣೆ, ಅದು ಬೆಳಗಿದಾಗ,
ಗಂಡು-ಹೆಣ್ಣುಗಳನ್ನು ಸೃಷ್ಟಿಸಿದವನಾಣೆ!
ಖಂಡಿತ ನಿಮ್ಮ ಪರಿಶ್ರಮವು ವಿಭಿನ್ನವಾಗಿರುವುದು.
ಆದ್ದರಿಂದ ಯಾರು ದಾನ ನೀಡುತ್ತಾನೆ ಹಾಗೂ ಅಲ್ಲಾಹನನ್ನು ಭಯಪಡುತ್ತಾನೆ,
ಹಾಗೂ ಅತ್ಯುತ್ತಮವಾದುದನ್ನು ಸತ್ಯವೆಂದು ಅಂಗೀಕರಿಸುತ್ತಾನೆ,
ಅವನಿಗೆ ನಾವು (ಸ್ವರ್ಗಕ್ಕಿರುವ) ಸರಳ ಪಥವನ್ನು ಸುಗಮಗೊಳಿಸುವೆವು.
ಯಾರು ಜಿಪುಣತೆ ತೋರುತ್ತಾನೆ ಮತ್ತು ಅಲ್ಲಾಹನಿಂದ ನಿರಪೇಕ್ಷನಾಗುತ್ತಾನೆ,
ಹಾಗೂ ಅತ್ಯುತ್ತಮವಾದುದನ್ನು ಸುಳ್ಳಾಗಿಸುತ್ತಾನೆ,
ಅವನಿಗೆ ನಾವು ಕಷ್ಟಕರವಾದ (ನರಕದ) ಹಾದಿಯನ್ನು ಸುಗಮಗೊಳಿಸುವೆವು.
ಅವನು ನರಕದಲ್ಲಿ ಬೀಳುವಾಗ ಅವನ ಸಂಪತ್ತು ಅವನನ್ನು ಪಾರುಮಾಡಲಾರದು.
ದಾರಿತೋರಿಸುವ ಹೊಣೆ ನಮ್ಮ ಮೇಲಿದೆ.
ಖಂಡಿತ ಪರಲೋಕ ಮತ್ತು ಇಹಲೋಕವು ನಮ್ಮ ಒಡೆತನಕ್ಕೆ ಸೇರಿದೆ.
ಧಗಧಗಿಸುವ ನರಕಾಗ್ನಿಯ ಕುರಿತು ನಿಮಗೆ ನಾನು ಮುನ್ನೆಚ್ಚರಿಕೆ ನೀಡಿರುತ್ತೇನೆ.
ಸುಳ್ಳಾಗಿಸಿದ ಹಾಗೂ ವಿಮುಖನಾದ ಹತ ಭಾಗ್ಯನ ಹೊರತು ಇನ್ನಾರೂ ಅದರಲ್ಲಿ ಪ್ರವೇಶಿಸಲಾರರು.
ಸದ್ಭಕ್ತನು ಅದರಿಂದ ದೂರವಾಗಲಿರುವನು.
ಅವನು ಅಲ್ಲಾಹನ ಬಳಿ ಪುನೀತನೆನಿಸಿಕೊಳ್ಳಲು ತನ್ನ ಸಂಪತ್ತನ್ನು ದಾನ ನೀಡುವನು.
ಅವನ ಮೇಲೆ ಪ್ರತ್ಯುಪಕಾರ ಮಾಡಬೇಕಾದಂತಹ ಯಾವುದೇ ಉಪಕಾರ ಭಾರ ಯಾರಿಗೂ ಇಲ್ಲ.
ಅವನ ಸರ್ವೋನ್ನತ ಪಾಲಕ ಪ್ರಭುವಾದ ಅಲ್ಲಾಹನ ಪ್ರಸನ್ನತೆಯ ಉದ್ದೇಶದ ಹೊರತು.
ಅವನು ಖಂಡಿತವಾಗಿಯೂ ಸಂತೃಪ್ತ ಗೊಳ್ಳಲಿರುವನು.