ಪ್ರಭಾತದಾಣೆ,
ಹತ್ತು ರಾತ್ರಿಗಳಾಣೆ,
ಸಮ ಹಾಗೂ ಬೆಸಗಳ ಆಣೆ,
ಸಂಚಲಿತ ರಾತ್ರಿಯಾಣೆ,
ಇದರಲ್ಲಿ ಆಣೆಗೆ ಯೋಗ್ಯವಾದ ದೃಷ್ಟಾಂತಗಳು ಇದೆಯೆಂದು ವಿವೇಕಮತಿಗಳಿಗೆ ತಿಳಿಯುವುದಿಲ್ಲವೇ?
ಆದ್ ಸಮೂಹದೊಂದಿಗೆ ನಿಮ್ಮ ಪ್ರಭು ಹೇಗೆ ವರ್ತಿಸಿದನೆಂಬುದನ್ನು ನೀವು ತಿಳಿದಿಲ್ಲವೇ?
ಅಂದರೆ ಸ್ಥಂಭಗಳ ಒಡೆಯರಾದ ಇರಮ್ ಜನಾಂಗದೊಂದಿಗೆ,
ಅಂತಹ ಜನಾಂಗವನ್ನು ಯಾವುದೇ ನಾಡುಗಳಲ್ಲಿ ಸೃಷ್ಟಿಸಲಾಗಿಲ್ಲ.
ಕಣಿವೆಯಲ್ಲಿ ಬಂಡೆ ಕಲ್ಲುಗಳನ್ನು ಕೊರೆದು ಮನೆ ನಿರ್ಮಿಸುತ್ತಿದ್ದ ಸಮೂದ್ ಜನಾಂಗದೊಂದಿಗೆ,
ಮೊಳೆಗಾರನಾದ ಫಿರ್‍ಔನನೊಂದಿಗೆ,
ಅವರು ನಾಡಿನಲ್ಲಿ ಅಕ್ರಮಗಳನ್ನು ಎಸಗಿದವರಾಗಿದ್ದರು.
ಅವರು ನಾಡಿನಲ್ಲಿ ಹೇರಳ ಕ್ಷೋಭೆ ನಡೆಸಿದ್ದರು.
ಅವರ ಮೇಲೆ ತಮ್ಮ ಪಾಲಕನು ಶಿಕ್ಷೆಯ ದಂಡವನ್ನು ಸುರಿಸಿದನು.
ನಿಜವಾಗಿಯೂ ತಮ್ಮ ಪ್ರಭುವು ನಿಗಾ ಇರಿಸಿ ಕೊಂಡು ವೀಕ್ಷಿಸುವವನು.
ಆದರೆ ಮನುಷ್ಯನು, ಅವನ ಪ್ರಭುವು ಅವನನ್ನು ಪರೀಕ್ಷೆಗೊಳಪಡಿಸಿ ಅವನಿಗೆ ಗೌರವ ಹಾಗೂ ಅನುಕೂಲ ನೀಡಿದರೆ “ನನ್ನ ರಕ್ಷಕನು ನನ್ನನ್ನು ಗೌರವಿಸಿದನು” ಎಂದು ಹೇಳುವನು.
ಅವನನ್ನು ಪರೀಕ್ಷೆಗೊಳಪಡಿಸಿ ಅವನ ಜೀವನಾ ಧಾರವನ್ನು ಇಕ್ಕಟ್ಟುಗೊಳಿಸಿದರೆ ನನ್ನ ರಕ್ಷಕನು ನನ್ನನ್ನು ಅಪಮಾನಿಸಿದನು ಎಂದು ಹೇಳುವನು
ವಸ್ತು ಸ್ಥಿತಿ ಹಾಗಲ್ಲ. ಆದರೆ ನೀವು ಅನಾಥರನ್ನು ಪರಿಗಣಿಸುವುದಿಲ್ಲ.
ನಿರ್ಗತಿಕರಿಗೆ ಆಹಾರ ನೀಡುವುದರ ಮೇಲೆ ನೀವು ಪರಸ್ಪರ ಪ್ರೋತ್ಸಾಹಿಸುವುದಿಲ್ಲ.
ನೀವು (ಪರರ) ವಾರೀಸುಸೊತ್ತನ್ನು ಹೇರಳವಾಗಿ ತಿನ್ನುತ್ತೀರಿ.
ನೀವು ಸಂಪತ್ತನ್ನು ಅತಿಯಾಗಿ ಪ್ರೀತಿಸುತ್ತೀರಿ.
ಇದು ಸಲ್ಲದು, ಭೂಮಿ ನುಚ್ಚುನೂರು ಮಾಡಲ್ಪಟ್ಟಾಗ !
ತಮ್ಮ ಪ್ರಭುವಿನ ಆದೇಶ ಬಂದು ಮಲಕುಗಳು ಸಾಲುಸಾಲಾಗಿ ನಿಂತಾಗ.
ಅಂದು ನರಕವನ್ನು ತರಲಾಗುವುದು, ಅಂದು ಮನುಷ್ಯನು ಚಿಂತನೆ ನಡೆಸುವನು. ಆದರೆ ಅಂದು ಚಿಂತನೆ ನಡೆಸಿ ಏನು ಫಲವಿದೆ?
‘ನನ್ನ ನಾಶವೇ! ನನ್ನ ಈ ಜೀವನಕ್ಕಾಗಿ ನಾನು ಸಿದ್ಧಪಡಿಸಿಟ್ಟಿದ್ದರೆ ! ಎನ್ನುವನು.
ಅಂದು ಅಲ್ಲಾಹನು ನೀಡುವಂತಹ ಶಿಕ್ಷೆಯನ್ನು ನೀಡಬಲ್ಲವನು ಯಾವೊಬ್ಬನೂ ಇರುವುದಿಲ್ಲ.
ಅವನು ಬಂಧಿಸುವಂತೆ ಬೇರಾರೂ ಬಂಧಿಸುವವರಿಲ್ಲ
ಓ ಪ್ರಶಾಂತ ಆತ್ಮವೇ,
ನೀನು ನಿನ್ನ ರಕ್ಷಕನೆಡೆಗೆ ಸ್ವತೃಪ್ತನೂ ದೇವಕೃಪಾ ಪಾತ್ರನೂ ಆಗಿ ಮರಳು
ನನ್ನ ಸಜ್ಜನ ದಾಸರಲ್ಲಿ ನೀನು ಸೇರು.
ನನ್ನ ಸ್ವರ್ಗಕ್ಕೆ ಪ್ರವೇಶಿಸು.