ಅವರು (ಪ್ರವಾದಿ) ನಿರ್ಲಕ್ಷ್ಯಮುಖಿಯಾದರು ಹಾಗೂ ವಿಮುಖರಾದರು.
ಅಂಧ ವ್ಯಕ್ತಿಯು (ಇಬ್‍ನು ಉಮ್ಮಿ ಮಕ್ತೂಮ್) ಅವರ ಬಳಿ ಬಂದ ಕಾರಣಕ್ಕಾಗಿ.
ತಮಗೆ ತಿಳಿಸಿಕೊಟ್ಟ ವಸ್ತು ಯಾವುದು? ಆ ವ್ಯಕ್ತಿ ಬಹುಶಃ ಪರಿಶುದ್ಧಿ ಪ್ರಾಪ್ತನಾಗುವ ಬಗ್ಗೆ!
ಅಥವಾ ತಮ್ಮ ಉಪದೇಶವನ್ನು ಆಲಿಸುವ ಬಗ್ಗೆ! ಆ ಉಪದೇಶ ಆತನಿಗೆ ಫಲಕೊಟ್ಟೀತು.
ಆದರೆ (ಸಿರಿವಂತಿಕೆಯಿಂದ) ಸ್ವಾವಲಂಬಿಯಾ ದವನು.
ಅವನ ಕಡೆಗೆ ತಾವು ಗಮನಹರಿಸಿದ್ದೀರಿ.
ಅವನು ಶುದ್ಧನಾಗದಿದ್ದರೆ ತಮ್ಮ ಮೇಲೆ ಯಾವುದೇ ದೋಷವಿಲ್ಲ.
ಆದರೆ ಒಳಿತನ್ನು ಅರಸಿ ತಮ್ಮ ಬಳಿ ಧಾವಿಸುತ್ತಿರುವ,
ಮತ್ತು ಅಲ್ಲಾಹನನ್ನು ಭಯಪಡುವ,
ವ್ಯಕ್ತಿಯ ಬಗ್ಗೆ ನೀವು ನಿರ್ಲಕ್ಷ್ಯ ವಹಿಸಿದಿರಿ.
ಖಂಡಿತ ಹಾಗೆ ಮಾಡಬೇಡಿರಿ. ಇದೊಂದು ಉಪದೇಶವಾಗಿರುತ್ತದೆ.
ಇಚ್ಚಿಸುವವರು ಇದನ್ನು ಸ್ಮರಿಸಿ ಪಾಠ ಕಲಿಯಲಿ.
ಇದು ಪವಿತ್ರವಾದ ಗ್ರಂಥಗಳಲ್ಲಿ ದಾಖಲಾಗಿದೆ.
ಅದು ಪರಿಶುದ್ಧವಾದ, ಮೇರು ಮಟ್ಟದ ಗ್ರಂಥ.
ಮಾನ್ಯರೂ ಸಚ್ಚರಿತರೂ ಆದ ದೇವಚರರ ಕರಲಿಪಿಗಳಿಂದ ಲಿಖಿತವಾಗಿದೆ .
ಸತ್ಯನಿಷೇಧಿಯು ಶಪಿತನಾದನು. ಅವನನ್ನು ಇಷ್ಟೊಂದು ಧಿಕ್ಕಾರಿಯನ್ನಾಗಿ ಮಾಡಿದ್ದಾದರೂ ಏನು?
ಅಲ್ಲಾಹನು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದಾನೆ?
ಅವನನ್ನು ವೀರ್ಯ ಬಿಂದುವಿನಿಂದ ಸೃಷ್ಟಿಸಿರುವನು ಹಾಗೂ ಹಲವು ಹಂತಗಳಾಗಿ ನಿರ್ಣಯಿಸಿರುವನು.
ತರುವಾಯ ಹೊರ ಬರುವ ಹಾದಿಯನ್ನು ಅವನಿಗೆ ಸುಗಮಗೊಳಿಸಿದನು.
ಆಮೇಲೆ ಅವನನ್ನು ಮರಣಗೊಳಿಸುವನು. ಬಳಿಕ ಅವನನ್ನು ಸಮಾಧಿಯೊಳಗೆ ತಲುಪಿಸುವನು.
ನಂತರ ತಾನು ಉದ್ದೇಶಿಸಿದಾಗ ಅವನಿಗೆ ಪುನರ್ಜೀವ ನೀಡಿ ಹೊರತರುವನು.
ಖಂಡಿತ! ಅಲ್ಲಾಹು ಆದೇಶಿಸಿದ್ದನ್ನು ಅವನು ಪಾಲಿಸಲಿಲ್ಲ.
ಮನುಷ್ಯನು ತನ್ನ ಆಹಾರ ಪದಾರ್ಥಗಳನ್ನು ನೋಡಲಿ.
ಖಂಡಿತವಾಗಿಯೂ ನಾವು ಧಾರಾಕಾರ ಜಲಧಾರೆ ಗೈದಿರುವೆವು.
ನಂತರ ನಾವು ಭೂಮಿಯನ್ನು ಶಕ್ತವಾಗಿ ಸೀಳಿದೆವು.
ಅನಂತರ ನಾವು ಧಾನ್ಯಗಳನ್ನು ಮೊಳಕೆ ಯೊಡೆಯಿಸಿದೆವು.
ದ್ರಾಕ್ಷೆಯನ್ನೂ ಹುಲ್ಲುಗಳನ್ನೂ. (ಉತ್ಪಾದಿಸಿದೆವು)
ಆಲಿವ್ ಹಾಗೂ ಖರ್ಜೂರದ ವೃಕ್ಷಗಳನ್ನೂ.
ದಟ್ಟವಾದ ತೋಟಗಳನ್ನೂ.
ಹಣ್ಣು ಹಂಪಲುಗಳನ್ನೂ ಮೇವನ್ನೂ.
ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಅನುಕೂಲಕ್ಕಾಗಿ.
ಭೀಕರ ಶಬ್ದ ಮೊಳಗಿದರೆ,
ಆ ದಿನ ಮನುಷ್ಯನು ತನ್ನ ಸಹೋದರನಿಂದ ಓಡಿ ಹೋಗುವನು,
ತನ್ನ ತಾಯಿಯಿಂದಲೂ ತಂದೆಯಿಂದಲೂ,
ತನ್ನ ಪತ್ನಿಯಿಂದಲೂ ಮಕ್ಕಳಿಂದಲೂ. (ಓಡಿ ಹೋಗುವನು)
ಅಂದು ಪ್ರತಿಯೊಬ್ಬರಿಗೂ ಇತರರ ಚಿಂತೆಯಿಂದ ಮುಕ್ತವಾದ ಕಾರ್ಯವಿರುವುದು.
ಅಂದು ಕೆಲವು ಮುಖಗಳು ಬೆಳಗಿರುತ್ತವೆ.
ನಗುತ್ತಿರುತ್ತವೆ, ಆನಂದ ತುಂದಿಲವಾಗಿರುತ್ತವೆ.
ಅಂದು ಕೆಲವು ಮುಖಗಳು ಧೂಳುಮಯವಾಗಿರುತ್ತವೆ.
ಅವುಗಳ ಮೇಲೆ ಇರುಳು, ಕರಿ ಆವರಿಸಿರುತ್ತವೆ.
ಅವರೇ ದುಷ್ಕರ್ಮಿಗಳಾದ ಅವಿಶ್ವಾಸಿಗಳು.