ಆಳಕ್ಕಿಳಿದು ನಿಷ್ಠುರವಾಗಿ ಎಳೆದೊಯ್ಯುವವರಾಣೆ!
ಮೃದುವಾಗಿ ಹೊರತೆಗೆಯುವವರಾಣೆ!
ವೇಗವಾಗಿ ಈಜಿ ಬರುತ್ತಿರುವವರಾಣೆ!
ಧಾವಿಸಿ ಮುನ್ನೇರುತ್ತಿರುವವರಾಣೆ!
(ಪ್ರಪಂಚದ) ಕಾರ್ಯಗಳನ್ನು ನಿಯಂತ್ರಿಸುವವರಾಣೆ!
ಕಂಪಿಸುವುದೆಲ್ಲಾ ಕಂಪಿಸುವ ದಿನ.
ನಂತರದ ಕಾರ್ಯವು ಆದರ ಹಿಂದೆಯೇ ಬರುವುದು.
ಹೃದಯಗಳು ಅಂದು ಭಯದಿಂದ ತತ್ತರಿಸಿವೆ.
ಅಂದು ಅವರ ಕಣ್ಣುಗಳು ಭಯಗ್ರಸ್ತವಾಗಿವೆ.
ಅವರು ಈಗ ಕೇಳುವರು, (ಸತ್ತ ನಂತರ) ನಮ್ಮನ್ನು ಪೂರ್ವಸ್ಥಿತಿಗೆ ಮರಳಿಸಲಾಗುವುದೇ?!
ನಾವು ಜೀರ್ಣಿಸಿದ ಎಲುಬುಗಳಾಗಿ ಬಿಟ್ಟರೂ,
ಹಾಗಾದರೆ ಅದೊಂದು ನಷ್ಟದ ಮರಳುವಿಕೆಯೇ ಸರಿ ಎನ್ನುತ್ತಾರವರು.
ಅದು ಒಂದೇ ಒಂದು ಭೀಕರ ಘರ್ಜನೆ ಮಾತ್ರ ವಾಗಿರುವುದು.
ಅಷ್ಟರಲ್ಲೇ ಅವರು (ಸತ್ತವರು) ಭೂಮಿಯ ಮೇಲೆ ಬರುವರು.
ತಮಗೆ ಮೂಸಾರ ವೃತ್ತಾಂತವು ತಲುಪಿದೆಯೇ?
ಅಂದರೆ ಪವಿತ್ರ ‘ಥುವಾ’ ಕಣಿವೆಯಲ್ಲಿ ಅವರ ಪ್ರಭುವು ಅವರನ್ನು ಕರೆದಾಗ!
ಫಿರ್‍ಔನನ ಬಳಿಗೆ ಹೋಗು. ಖಂಡಿತ, ಅವನು ಮಹಾ ಧಿಕ್ಕಾರಿಯಾಗಿದ್ದಾನೆ.
ಶುದ್ಧನಾಗಲು ನೀನು ಬಯಸುತ್ತೀಯಾ? ಎಂದು ಕೇಳು.
ನಿನಗೆ ನಾನು ನಿನ್ನ ಪ್ರಭುವಿನ ದಾರಿ ತೋರಿಸುವೆನು. ಆಗ ನೀನು ಅವನನ್ನು ಭಯಪಟ್ಟು ಜೀವಿಸುವೆ.
ತರುವಾಯ ಮೂಸಾ ಅವನಿಗೆ ದೊಡ್ಡ ದೃಷ್ಟಾಂತವನ್ನು ತೋರಿಸಿದರು.
ಅವನು ನಿಷೇಧಿಸಿದನು ಹಾಗೂ ಧಿಕ್ಕರಿಸಿದನು.
ನಂತರ ಬಹಿರ್ಮುಖನಾದನು. ಕ್ಷೋಭೆಯಲ್ಲಿ ತೀವ್ರೋನ್ಮುಖನಾಗಿ.
(ತನ್ನವರನ್ನು) ಒಗ್ಗೂಡಿಸಿದನು. ಕೂಗಿ ಕರೆದನು.
ನಾನೇ ನಿಮ್ಮ ಪರಮೋಚ್ಚ ಪ್ರಭು ಎಂದು ಘೋಷಿಸಿದನು.
ಕೊನೆಗೆ ಅಲ್ಲಾಹನು ಆತನನ್ನು ಪಾರತ್ರಿಕ ಮತ್ತು ಐಹಿಕ ಶಿಕ್ಷೆಗಳಿಗೆ ಗುರಿಪಡಿಸಿದನು.
ಈ ಹೇಳಿದುದರಲ್ಲಿ ಅಲ್ಲಾಹನನ್ನು ಭಯ ಪಡುವವರಿಗೆ ಖಂಡಿತ ಪಾಠವಿದೆ.
ನಿಮ್ಮನ್ನು ಸೃಷ್ಟಿಸುವುದೋ ಅಥವಾ ಆಕಾಶವನ್ನು ಸೃಷ್ಟಿಸುವುದೋ ಹೆಚ್ಚು ಪ್ರಯಾಸಕರ? ಅವನು ಆಕಾಶವನ್ನು ಸೃಷ್ಟಿಸಿದನು.
ಅದರ ಛಾವಣಿಯನ್ನು ಎತ್ತರಿಸಿದನು ಹಾಗೂ ಅದನ್ನು ಸಮರ್ಪಕಗೊಳಿಸಿದನು.
ಅವನು ಅದರ ರಾತ್ರಿಗೆ ಕತ್ತಲು ಕವಿಸಿದನು ಹಾಗೂ ಅದರ ಬೆಳಕನ್ನು ಪ್ರಕಟಗೊಳಿಸಿದನು.
ಅದರ ನಂತರ ಭೂಮಿಯನ್ನು ಹಾಸಿದನು.
ಅದರಿಂದ ಅದರ ನೀರನ್ನೂ ಮೇವನ್ನೂ ಹೊರಡಿಸಿದನು.
ಅದರಲ್ಲಿ ಪರ್ವತಗಳನ್ನು ನಾಟಿದನು.
ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಪ್ರಯೋಜನಕ್ಕಾಗಿ.
ಮುಂದೆ ಅತೀ ಭಯಂಕರವಾದ ವಿಪತ್ತು ಬಂದಾಗ,
ಮನುಷ್ಯನು ತಾನು ಮಾಡಿದ್ದನ್ನು ಸ್ಮರಿಸುವ ದಿನವದು!
ಜ್ವಲಿಸುವ ನರಕವು ನೋಡುಗರಿಗೆ ಪ್ರದರ್ಶಿಸಲ್ಪಡುವ ದಿನ.
ಯಾವನು ದುರ್ಮಾರ್ಗಿಯಾಗಿರುವನೋ,
ಹಾಗೂ ಕೇವಲ ಭೌತಿಕ ಜೀವನವನ್ನು ಆಯ್ದು ಕೊಂಡಿರುವನೋ,
ಖಂಡಿತವಾಗಿಯೂ ನರಕವೇ ಅವನ ಅಂತಿಮ ನೆಲೆಯಾಗಿರುವುದು.
ಯಾವನು ತನ್ನ ಪ್ರಭುವಿನ ಸನ್ನಿಧಾನವನ್ನು ಭಯಪಟ್ಟಿರುವನೋ ಹಾಗೂ ದೇಹವನ್ನು ಕಾಮನೆಗಳಿಂದ ದೂರವಿರಿಸಿಕೊಳ್ಳುವನೋ,
ಖಂಡಿತ, ಸ್ವರ್ಗವೇ ಅವನ ಅಂತಿಮ ನೆಲೆಯಾಗಿರುವುದು.
ಅವರು ಅಂತ್ಯದಿನ ಬರುವುದು ಯಾವಾಗ ಎಂದು ತಮ್ಮಲ್ಲಿ ಪ್ರಶ್ನಿಸುತ್ತಾರೆ.
ಅದನ್ನು ಅವರಿಗೆ ತಿಳಿಸಿಕೊಡುವ ಅರಿವು ತಮಗೆಲ್ಲಿದೆ?
ಅದರ ಅರಿವಿನ ಪಾರಮ್ಯವು ನಿಮ್ಮ ಪ್ರಭುವಿನ ಕಡೆಗಿದೆ.
ಅಂತ್ಯದಿನವನ್ನು ಭಯಪಡುವವರಿಗೆ ತಾವು ಎಚ್ಚರಿಕೆಯನ್ನು ನೀಡುವವರು ಮಾತ್ರವಾಗಿರುವಿರಿ.
ಅಂತ್ಯದಿನವನ್ನು ಅವರು ಕಣ್ಣಾರೆ ಕಾಣುವ ದಿನ ನಾವು ಭೂಮಿಯಲ್ಲಿ ತಂಗಿದ್ದು ಕೇವಲ ಸಂಜೆ ಅಥವಾ ಮುಂಜಾನೆ ಮಾತ್ರವಾಗಿದೆಯೆಂದು ಅವರು ಭಾವಿಸುವರು.