ಪ್ರಸ್ತಾಪಿಸತಕ್ಕ ಒಂದು ವಸ್ತುವೇ ಆಗಿರದಂತಹ ಕಾಲವೊಂದು ಮಾನವನ ಮೇಲೆ ಕಳೆದಿಲ್ಲವೇ?
ನಾವು ಮಾನವನನ್ನು ಒಂದು ಸಮ್ಮಿಶ್ರ ಶುಕ್ಲ ಬಿಂದುವಿನಿಂದ ಸೃಷ್ಟಿಸಿದೆವು. ಅವನನ್ನು ನಾವು ಪರೀಕ್ಷಿಸಲಿದ್ದೇವೆ. (ಈ ಉದ್ದೇಶದಿಂದ) ನಾವು ಅವನನ್ನು ಆಲಿಸುವವನಾಗಿಯೂ, ಕಾಣುವವನಾಗಿಯೂ ಮಾಡಿದೆವು.
ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಒಂದೋ ಅವನು ಕೃತಜ್ಞತೆ ಸಲ್ಲಿಸುವವನಾಗಿರ ಬಹುದು ಅಥವಾ ಕೃತಘ್ನನಾಗಬಹುದು.
ಸತ್ಯನಿಷೇಧಿಗಳಿಗೆ ನಾವು ಕೆಲವು ಸಂಕೋಲೆಗಳನ್ನೂ ಕೋಳಗಳನ್ನೂ ಹೊತ್ತಿ ಉರಿಯುವ ನರಕವನ್ನೂ ಸಿದ್ಧಗೊಳಿಸಿಟ್ಟಿದ್ದೇವೆ.
ಪುಣ್ಯವಂತರು (ಸುರೆ ತುಂಬಿದ) ಪಾನಪಾತ್ರೆಯಿಂದ ಕುಡಿಯುತ್ತಿರುವರು. ಅದರ ಮಿಶ್ರಿತವು ಕರ್ಪೂರವಾಗಿದೆ.
ಅಲ್ಲಾಹನ ದಾಸರು ಪಾನ ಮಾಡುವ ಒಂದು ಚಿಲುಮೆಯ ನೀರು ಅದು. ಮತ್ತು (ತಾವಿಚ್ಛಿಸಿ ದೆಡೆಗೆ) ಅವರು ಅದನ್ನು ಚಿಮ್ಮಿಸಿ ಹರಿಸಿ ಬಿಡುವರು.
ಅವರು ಹರಕೆಯನ್ನು ಪೂರ್ತಿಗೊಳಿಸುತ್ತಾರೆ. ಎಲ್ಲೆಲ್ಲೂ ಸಂಕಷ್ಟಗಳೇ ವ್ಯಾಪಕವಾಗಿರುವ ಒಂದು ದಿನವನ್ನು ಅವರು ಭಯಪಡುತ್ತಾರೆ.
ಆಹಾರ ತಮಗೆ ಅಗತ್ಯವಿದ್ದೂ ಕೂಡಾ ಅವರು ಅಲ್ಲಾಹನಲ್ಲಿರುವ ಒಲವಿನಿಂದ ಬಡವರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಉಣ ಬಡಿಸುತ್ತಾರೆ.
ನಾವು ನಿಮಗೆ ಕೇವಲ ಅಲ್ಲಾಹನ ಪ್ರೀತಿಗಾಗಿ (ಅವನ ತೃಪ್ತಿಯನ್ನು ಬಯಸಿ) ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನೋ, ಕೃತಜ್ಞತೆಯನ್ನೋ ಬಯಸುವುದಿಲ್ಲ (ಎಂದವರು ಹೇಳುವರು).
(ಕಳೆಗುಂದುವ) ಮುಖ ಸುರುಟಿ ಹೋಗುವ, ಅತ್ಯಂತ ಕಾಠಿಣ್ಯದ ಸುದೀರ್ಘ ದಿನವನ್ನು ನಮ್ಮ ಪ್ರಭುವಿನಿಂದ (ಖಂಡಿತ ನಾವು) ಭಯಪಡುತ್ತೇವೆ.
ಆದುದರಿಂದ ಅಲ್ಲಾಹನು ಅವರನ್ನು ಆ ದಿನದ ಕೇಡಿನಿಂದ ರಕ್ಷಿಸುವನು ಮತ್ತು ಅವರಿಗೆ ಪ್ರಸನ್ನತೆಯನ್ನೂ ಸಂತೋಷವನ್ನೂ ನೀಡುವನು.
ಅವರು ಸಹಿಸಿದ ಸಹನೆಯ ಪ್ರತಿಫಲವಾಗಿ ಅವರಿಗೆ ಸ್ವರ್ಗೋದ್ಯಾನವನ್ನೂ ರೇಶ್ಮೆಯ ಉಡುಪನ್ನೂ ದಯಪಾಲಿಸುವನು.
ಅಲ್ಲಿ ಅವರು ಆರಾಮ ಮಂಚಗಳ ಮೇಲೆ ಒರಗಿ ಸುಖಿಸುವರು. ಅಲ್ಲಿ ಅವರಿಗೆ ಬಿಸಿಲಿನ ಧಗೆಯಾಗಲಿ, ಚಳಿಯ ತೀವ್ರತೆಯಾಗಲಿ ಬಾಧಿಸಲಾರದು.
ಅದರ (ಸ್ವರ್ಗದ ಮರಗಳ) ನೆರಳು ಅವರಿಗೆ ನಿಕಟವಿರುವುದು. ಮತ್ತು ಅದರ ಹಣ್ಣು ಗೊನೆಗಳು (ಯಾವಾಗ ಕೊಯ್ಯಲೂ) ಅವರಿಗೆ ಅನುಕೂಲ ಗೊಳಿಸಲ್ಪಟ್ಟಿರುವುವು.
ಬೆಳ್ಳಿಯ ಪಾತ್ರೆಗಳನ್ನೂ ನುಣುಪಿನಿಂದ ಸ್ಫಟಿಕ ದಂತಾದ ಬೆಳ್ಳಿಯ ಹೂಜಿಗಳನ್ನೂ ಅವರ ಸುತ್ತ ತರಲಾಗುವುದು.
ಅವು ಬೆಳ್ಳಿಯಿಂದಲೇ ನಿರ್ಮಿತವಾದ ಸ್ಫಟಿಕ ಪಾತ್ರೆಗಳು. ಅವರು (ಸೇವಕರು) ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ನಿರ್ಣಯಿಸಿರುವರು.
ಅಲ್ಲಿ ಅವರಿಗೆ ಸುರೆ ತುಂಬಿದ ಪಾತ್ರೆಗಳಿಂದ ಕುಡಿಸಲಾಗುವುದು. ಅದು ಶುಂಠಿ ಬೆರೆತಿರುವಂತಹ ಮದಿರೆಯಾಗಿರುತ್ತದೆ.
ಅದು ಸಲ್‍ಸಬೀಲ್ ಎಂಬ ಹೆಸರಿನ ಒಂದು ಚಿಲುಮೆಯಾಗಿದೆ.
ಅವರ (ಸ್ವರ್ಗವಾಸಿಗಳ) ಮಧ್ಯೆ ಚಿರಕುಮಾರ ರಾದ ಕೆಲವು ಬಾಲಕರು ಸುತ್ತಾಡುತ್ತಿರುವರು. ತಾವು ಅವರನ್ನು ಕಂಡರೆ ಹರಡಿದ ಮುತ್ತುಗಳೆಂದೇ ಭಾವಿಸುವಿರಿ.
ಅಲ್ಲಿ ತಾವು ಎತ್ತ ನೋಡಿದರೂ ಅನುಗ್ರಹಗಳನ್ನೂ ಒಂದು ಬೃಹತ್ ಸಾಮ್ರಾಜ್ಯವನ್ನೂ ಕಾಣುವಿರಿ.
ಹಸಿರು ಬಣ್ಣದ ತೆಳು ರೇಶ್ಮೆ ಹಾಗೂ ದಪ್ಪ ರೇಷ್ಮೆಯ ಉಡುಪುಗಳು ಅವರ ಮೇಲಿರುವುದು. ಅವರಿಗೆ ಬೆಳ್ಳಿಯ ಬಳೆಗಳನ್ನು ತೊಡಿಸಲಾಗುವುದು ಮತ್ತು ಅವರ ಪ್ರಭು ಅವರಿಗೆ ನಿರ್ಮಲವಾದ ಪಾನೀಯವನ್ನು ಕುಡಿಸುವನು.
(ಓ ಪುಣ್ಯವಂತರೇ!) ನಿಮಗಿರುವ ಪ್ರತಿ ಫಲವಿದು, ನಿಮ್ಮ ಪರಿಶ್ರಮವನ್ನು ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗಿತ್ತು. (ಎಂದು ಅವರೊಂದಿಗೆ ಹೇಳಲಾಗುವುದು.)
(ಸಂದೇಶವಾಹಕರೇ,) ನಾವೇ ಈ ಖುರ್‍ಆನನ್ನು ತಮ್ಮ ಮೇಲೆ ಸ್ವಲ್ಪ ಸ್ವಲ್ಪವಾಗಿ ಅವತೀರ್ಣ ಗೊಳಿಸಿದ್ದೇವೆ.
ಆದುದರಿಂದ ತಾವು ತಮ್ಮ ಪ್ರಭುವಿನ ತೀರ್ಪಿಗಾಗಿ ತಾಳ್ಮೆವಹಿಸಿರಿ. ಅವರ ಪೈಕಿ ಯಾವುದೇ ಪಾಪಿಯನ್ನಾಗಲಿ, ಕೃತಘ್ನನನ್ನಾಗಲಿ ತಾವು ಅನುಸರಿಸಬೇಡಿರಿ.
ತಾವು ಸಂಜೆ - ಮುಂಜಾನೆಗಳಲ್ಲಿ ತಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.
ರಾತ್ರಿಯಲ್ಲಿ (ಸ್ವಲ್ಪ ಸಮಯ) ಅವನಿಗೆ ಸಾಷ್ಟಾಂಗವೆರಗಿರಿ. ರಾತ್ರೆಯ ದೀರ್ಘ ಸಮಯ ಅವನನ್ನು ಪ್ರಕೀರ್ತಿಸಿರಿ.
ಅವರು ಕ್ಷಣಿಕವಾದ (ಶೀಘ್ರ ಪ್ರಾಪ್ತವಾಗುವ) ಐಹಿಕ ಜೀವನವನ್ನು ಪ್ರೀತಿಸುತ್ತಾರೆ ಮತ್ತು ಭಾರವೇರಿದ ಒಂದು ದಿನವನ್ನು ಅವರು ಉಪೇ ಕ್ಷಿಸುತ್ತಾರೆ.
ನಾವೇ ಅವರನ್ನು ಸೃಷ್ಟಿಸಿರುತ್ತೇವೆ ಮತ್ತು ಅವರ ಶರೀರ ಘಟನೆಯನ್ನು ಬಲಾಢ್ಯಗೊಳಿಸಿದ್ದೇವೆ. ನಾವಿಚ್ಛಿಸಿದರೆ ಅವರಂಥವರನ್ನು ಖಂಡಿತ ಬದಲಿಸಿ ತರಬಲ್ಲೆವು.
ಇದೊಂದು ಉದ್ಭೋಧನೆಯಾಗಿದೆ. ಆದುದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ಮಾರ್ಗ ವನ್ನು ಮಾಡಿಕೊಳ್ಳಲಿ.
ಅಲ್ಲಾಹನು ಇಚ್ಛಿಸದೆ ನೀವು ಇಚ್ಛಿಸಲಾರಿರಿ. ಖಂಡಿತವಾಗಿಯೂ ಅಲ್ಲಾಹನು ಸರ್ವಜ್ಞನೂ, ಯುಕ್ತಿವಂತನೂ ಆಗಿರುತ್ತಾನೆ.
ಅವನು ತಾನಿಚ್ಛಿಸಿದವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುತ್ತಾನೆ. ಅಕ್ರಮಿಗಳಿಗಾಗಿ ವೇದ ನಾಜನಕವಾದ ಶಿಕ್ಷೆಯನ್ನು ಅವನು ಸಜ್ಜು ಗೊಳಿಸಿದ್ದಾನೆ.