ಆಲ್ ಇಸ್ಲಾಂ ಲೈಬ್ರರಿ
1

ನಾನು ಪುನರುತ್ಥಾನ ದಿನದ ಆಣೆ ಹಾಕಿ ಹೇಳುತ್ತೇನೆ.

2

ಸ್ವದೂಷಣೆ ಮಾಡಿಕೊಳ್ಳುತ್ತಿರುವ ಮನಸ್ಸಿನ ಆಣೆ ಹಾಕುತ್ತಿದ್ದೇನೆ.

3

ನಾವು ಅವನ ಎಲುಬುಗಳನ್ನು (ಅವು ದ್ರವಿಸಿದ ಬಳಿಕ) ಒಟ್ಟುಗೂಡಿಸಲಾರೆವೆಂದು ಮಾನವನು ಭಾವಿಸುತ್ತಿರುವನೇ?

4

ಹೌದು, ನಾವು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ.

5

ಆದರೆ ಮಾನವನು ತನ್ನ ಭವಿಷ್ಯವನ್ನು (ಪುನರುತ್ಥಾನವನ್ನು) ಸುಳ್ಳಾಗಿಸಲು ಬಯಸುತ್ತಿದ್ದಾನೆ.

6

ಅವನು, ಪುನರುತ್ಥಾನ ದಿನ ಯಾವಾಗ? ಎಂದು ಕೇಳುತ್ತಾನೆ.

7

ಆದರೆ, ದೃಷ್ಟಿಗಳು ಸ್ಥಂಭೀಭೂತವಾದಾಗ!

8

ಚಂದ್ರನು ಕಳೆಗುಂದಿದಾಗ;

9

ಮತ್ತು ಸೂರ್ಯ ಚಂದ್ರರು ಒಟ್ಟು ಸೇರಿಸಲ್ಪಟ್ಟಾಗ.

10

ಆ ದಿನ ಮನುಷ್ಯನು ``ಎಲ್ಲಿಗೆ ಓಡಿ ಹೋಗಿ ರಕ್ಷೆ ಪಡೆಯಲಿ?’’ ಎಂದು ಹೇಳುವನು.

11

ಖಂಡಿತ ಇಲ್ಲ, ಯಾವ ಅಭಯ ಸ್ಥಾನವೂ ಇಲ್ಲ.

12

ಅಂದು ತನ್ನ ಪ್ರಭುವಿನ ಮುಂದೆಯೇ (ಎಲ್ಲರೂ) ಹೋಗಿ ತಲುಪಬೇಕಾಗುವುದು.

13

ಅಂದು ಮಾನವನಿಗೆ ಅವನ ಹಿಂದಿನ ಮತ್ತು ಮುಂದಿನ ಎಲ್ಲಾ ಕರ್ಮಗಳನ್ನೂ ತೋರಿಸಿ ಕೊಡಲಾಗುವುದು.

14

ಅಷ್ಟೇ ಅಲ್ಲ, ಮಾನವನು ತನಗೆ ವಿರುದ್ಧ ತಾನೇ ಒಂದು ರುಜುವಾಗಿದ್ದಾನೆ. (ಪುರಾವೆಯಾಗಿದ್ದಾನೆ)

15

ಅವನು ತನಗಾಗಿ ಎಷ್ಟೇ ನೆಪಗಳನ್ನೊಡ್ಡಿದ್ದರೂ ಸರಿ.

16

(ಸಂದೇಶವಾಹಕರೇ,) ತಾವು ಖುರ್‍ಆನನ್ನು ದೃತಿಯಿಂದ ಕಂಠಪಾಠ ಮಾಡಿಕೊಳ್ಳಲಿಕ್ಕಾಗಿ ತಮ್ಮ ನಾಲಗೆಯನ್ನು ಚಲಿಸಬೇಡಿರಿ.

17

ಅದನ್ನು ಒಗ್ಗೂಡಿಸಿಕೊಡುವ ಮತ್ತು ಓದಿಸಿ ಕೊಡುವ ಹೊಣೆ ನಮ್ಮದೇ ಆಗಿರುತ್ತದೆ.

18

ಆದುದರಿಂದ ನಾವು ಅದನ್ನು ಓದಿ ಕೊಟ್ಟರೆ, ತಾವು ಅದರ ಪಠಣವನ್ನು ಅನುಗಮಿಸಿರಿ.

19

ಬಳಿಕ ಅದನ್ನು ವಿವರಿಸುವ ಹೊಣೆಯೂ ನಮ್ಮ ಮೇಲಿದೆ.

20

ಖಂಡಿತ ಬೇಡ. ನೀವು ಕ್ಷಣಿಕವಾದ ಈ (ಐಹಿಕ) ಬದುಕನ್ನು ಪ್ರೀತಿಸುತ್ತೀರಿ.

21

ಪರಲೋಕವನ್ನು ನೀವು ಬಿಟ್ಟು ಬಿಡುತ್ತೀರಿ.

22

ಅಂದು ಕೆಲವು ಮುಖಗಳು ಪ್ರಸನ್ನಗೊಂಡಿವೆ.

23

ತಮ್ಮ ಪ್ರಭುವಿನ ಕಡೆಗೆ ದೃಷ್ಟಿನೆಟ್ಟಿವೆ.

24

ಅಂದು ಕೆಲವು ಮುಖಗಳು ಖಿನ್ನವಾಗಿವೆ.

25

ಮತ್ತು ತಮ್ಮೊಂದಿಗೆ ಅಮಿತಾಪತ್ತಿನಿಂದ ವರ್ತಿಸಲಾಗುವುದೆಂದು (ಯಾವುದೋ ದುರಂತ ತಮ್ಮನ್ನು ಬಾಧಿಸಲಿವೆ ಎಂದು) ಭಾವಿಸುತ್ತಿರುವುವು.

26

ತಿಳಿಯಿರಿ, ಪ್ರಾಣವು ಗಂಟಲಿಗೆ ತಲಪಿದಾಗ,

27

``ಯಾರಾದರೂ ಮಂತ್ರಿಸುವವನು ಇದ್ದಾನೆಯೇ?’’ ಎಂದು ಕೇಳಲಾದಾಗ,

28

ಇದು ತನ್ನ ಅಗಲುವ ಸಮಯವೆಂದು ಅವನು ಖಚಿತಪಡಿಸಿಕೊಂಡಾಗ,

29

ಮತ್ತು ಮೊಣಕಾಲು ಮೊಣಕಾಲಿನೊಂದಿಗೆ ಸೇರಿಕೊಂಡಾಗ,

30

ಅಂದು ತಮ್ಮ ಪ್ರಭುವಿನ ಕಡೆಗೆ (ಅವನನ್ನು) ಕೊಂಡುಹೋಗಲಾಗುವುದು.

31

ಆದರೆ, ಅವನಾಗ ಸತ್ಯವನ್ನು ಅಂಗೀಕರಿಸಲೂ ಇಲ್ಲ, ನಮಾಝ್ ನಿರ್ವಹಿಸಲೂ ಇಲ್ಲ.

32

ವಾಸ್ತವದಲ್ಲಿ, ಅವನು (ಸತ್ಯವನ್ನು) ಸುಳ್ಳಾಗಿಸಿ ದನು ಮತ್ತು ವಿಮುಖನಾದನು.

33

ಮಾತ್ರವಲ್ಲ, ಅವನು ದುರಭಿಮಾನ ತೋರಿಕೊಂಡು ತನ್ನ ಕುಟುಂಬದ ಕಡೆಗೆ ನಡೆದುಬಿಟ್ಟನು.

34

(ಓ ಮಾನವ ನೀನು ಅನಿಷ್ಟಪಡುವಂತಹುದು) ನಿನಗೆ ಒದಗಿ ಬಂದಿದೆ. ಅದು ನಿನಗೆ ತಕ್ಕುದಾಗಿಯೇ ಇದೆ.

35

ಪುನಃ ಅದು ನಿನಗೆ ಒದಗಿ ಬಂದಿದೆ. ಅದು ನಿನಗೆ ತಕ್ಕುದಾಗಿಯೇ ಇದೆ.

36

ತನ್ನನ್ನು ಸುಮ್ಮನೆ ಬಿಟ್ಟು ಬಿಡಬಹುದೆಂದು ಮಾನವನು ಭಾವಿಸಿಕೊಂಡಿರುವನೇ?

37

ಅವನು (ಮಾತೆಯ ಗರ್ಭಾಶಯದೊಳಗೆ) ಸುರಿಯಲ್ಪಡುವ ಒಂದು ಶುಕ್ಲ ಬಿಂದು ಮಾತ್ರವಾಗಿರಲಿಲ್ಲವೇ?

38

ನಂತರ ಅವನು ಒಂದು ರಕ್ತ ಪಿಂಡವಾದನು. (ಭ್ರೂಣವಾದನು) ಅನಂತರ ಅಲ್ಲಾಹನು ಅವನನ್ನು (ಒಂದು ಮನುಷ್ಯನಾಗಿ) ಸೃಷ್ಟಿಸಿ ರೂಪುಗೊಳಿಸಿದನು.

39

ಆ ರೀತಿಯಲ್ಲಿ ಅವನು ಅದರಿಂದ ಪುರುಷ ಮತ್ತು ಸ್ತ್ರೀ ಎಂಬೆರಡು ವರ್ಗವನ್ನು ಮಾಡಿದನು.

40

(ಅಂತಹ) ಅಲ್ಲಾಹನು ಮೃತರನ್ನು ಪುನಃ ಜೀವಂತಗೊಳಿಸಲು ಶಕ್ತನಲ್ಲವೇ?