ಓ ಹೊದ್ದು ಕೊಂಡವರೇ ! (ಪ್ರವಾದಿಯರೇ!)
ಎದ್ದೇಳಿರಿ ಮತ್ತು (ಜನರನ್ನು) ಎಚ್ಚರಿಸಿರಿ.
ತಮ್ಮ ಪ್ರಭುವಿನ ಹಿರಿಮೆಯನ್ನು ಪ್ರಕೀರ್ತಿಸಿರಿ.
ತಮ್ಮ ವಸ್ತ್ರಗಳನ್ನು ಶುಚಿಗೊಳಿಸಿರಿ.
ಮತ್ತು ಪಾಪ ಮಾಲಿನ್ಯವನ್ನು ವರ್ಜಿಸಿರಿ.
ಅಧಿಕ ಲಭಿಸುವ ಆಗ್ರಹದಿಂದ ಔದಾರ್ಯ ತೋರಬೇಡಿರಿ .
ಮತ್ತು ತಮ್ಮ ಪ್ರಭುವಿಗಾಗಿ ತಾಳ್ಮೆವಹಿಸಿರಿ.
ಕಹಳೆಯಲ್ಲಿ ಮೊಳಗಿಸಲ್ಪಟ್ಟಾಗ,
ಆ ದಿನವು ಅತ್ಯಂತ ಪ್ರಯಾಸಕರ ದಿನವಾಗಿರುವುದು.
ಸತ್ಯನಿಷೇಧಿಗಳಿಗೆ ಅದು ಅನಾಯಾಸವಲ್ಲದ ದಿನವಾಗಿದೆ.
ನನ್ನನ್ನು ಮತ್ತು ಏಕನಾದ ಸ್ಥಿತಿಯಲ್ಲಿ ನನ್ನಿಂದ ಸೃಷ್ಠಿಯಾಗಿರುವ ಒಬ್ಬನನ್ನು ನಮ್ಮಿಬ್ಬರ ಪಾಡಿಗೆ ಬಿಡು.
ಅವನಿಗೆ ನಾನು ಹೇರಳ ಸಂಪತ್ತನ್ನು ಕೊಟ್ಟೆನು.
ಉಪಸ್ಥಿತರಾದ ಪುತ್ರರನ್ನೂ ಕೊಟ್ಟೆನು.
ಮತ್ತು ಅವನ ಪಾಲಿಗೆ ಬೇಕಾದ ಸೌಕರ್ಯಗಳನ್ನು ನಾನು ಏರ್ಪಡಿಸಿಕೊಟ್ಟೆನು.
ಇಷ್ಟಿದ್ದೂ ನಾನು ಅವನಿಗೆ ಇನ್ನಷ್ಟು ಕೊಡ ಬೇಕೆಂದು ಅವನು ಹಂಬಲಿಸುತ್ತಿರುವನು.
ಖಂಡಿತ ಇಲ್ಲ. ಅವನು ನಮ್ಮ ದೃಷ್ಟಾಂತಗಳಿಗೆ ಪ್ರತಿಸ್ಪರ್ಧಿಯಾಗಿರುವನು.
ಅವನನ್ನು ನಾನು ಒಂದು ಕಠಿಣವಾದ ಯಾತನೆಯನ್ನು ಅನುಭವಿಸಲು ಶೀಘ್ರವೇ ನಿರ್ಬಂಧಿಸುವೆನು.
ಅವನು ಯೋಚಿಸಿದನು ಮತ್ತು (ಒಂದು ನಿರ್ಧಾರ) ನಿರ್ಣಯಿಸಿಕೊಂಡನು.
ಅದರಿಂದಾಗಿ ಅವನು ನಾಶವಾಗಲಿ. ಅವನು ಹೇಗೆ ನಿರ್ಣಯಿಸಿಕೊಂಡನು?
ಪುನಃ ಅವನು ನಾಶವಾಗಲಿ! ಅವನು ಹೇಗೆ ನಿರ್ಣಯಿಸಿಕೊಂಡನು?
ಪುನಃ ಅವನು (ಸಭಿಕರ ಮುಖಕ್ಕೆ) ನೋಡಿದನು.
ತರುವಾಯ ಮುಖ ಸಿಂಡರಿಸಿದನು ಮತ್ತು ಮುಖ ಮುರಿದುಕೊಂಡನು.
ಅನಂತರ (ಸತ್ಯದಿಂದ) ಹಿಂದಕ್ಕೆ ಮರಳಿದನು ಮತ್ತು ಅಹಂಭಾವ ತೋರಿದನು.
ಕೊನೆಗೆ ಹೀಗೆಂದನು, ಇದು (ಖುರ್‍ಆನ್) (ಯಾರಿಂದಲೋ) ಬಿತ್ತರಿಸಲ್ಪಡುವ ಮಾಂತ್ರಿಕತೆಯಲ್ಲದೆ ಇನ್ನೇನೂ ಅಲ್ಲ.
ಇದೊಂದು ಮನುಷ್ಯನ ಮಾತಲ್ಲದೆ ಬೇರೇನೂ ಅಲ್ಲ.
ನಾನು ಸದ್ಯವೇ ಅವನನ್ನು ಸಖರಿಗೆ (ನರಕಕ್ಕೆ) ತಳ್ಳಿಬಿಡುವೆನು.
``ಸಖರ್’’ನ ಕುರಿತು ತಮಗೆ ಗೊತ್ತಾ?
. ಅದು ಯಾವುದನ್ನೂ ಬಾಕಿ ಬಿಡುವುದೋ ಉಳಿಸುವುದೋ ಇಲ್ಲ.
ಅದು ಚರ್ಮವನ್ನು ಸುಟ್ಟು ಕರಕಲು ಮಾಡುವುದು.
ಆ ನರಕದ ಮೇಲೆ ಹತ್ತೊಂಬತ್ತು ಕಿಂಕರರಿದ್ದಾರೆ.
ನಾವು ನರಕದ ಕಾರ್ಯಕರ್ತರನ್ನಾಗಿ ನೇಮಿಸಿರುವುದು ದೇವಚರರನ್ನು ಮಾತ್ರವಾಗಿದೆ . ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಒಂದು ಪರೀಕ್ಷಾ ಸಾಧನವಾಗಿ ಮಾಡಿದ್ದೇವೆ. ಗ್ರಂಥ ನೀಡಲ್ಪಟ್ಟವರಿಗೆ ದೃಢನಂಬಿಕೆ ಉಂಟಾಗಲಿಕ್ಕಾಗಿ, ಸತ್ಯವಿಶ್ವಾಸಿಗಳ ವಿಶ್ವಾಸವು ವರ್ಧಿಸಲಿಕ್ಕಾಗಿ, ಗ್ರಂಥ ನೀಡಲ್ಪಟ್ಟವರು ಮತ್ತು ವಿಶ್ವಾಸಿಗಳು ಸಂಶಯದಲ್ಲಿ ಬೀಳದಿರಲಿಕ್ಕಾಗಿ ಮತ್ತು ಮನಸ್ಸಿನಲ್ಲಿ ರೋಗವಿರುವವರು ಹಾಗೂ ಸತ್ಯ ನಿಷೇಧಿಗಳು ಈ ಉದಾಹರಣೆಯ ಮೂಲಕ ಅಲ್ಲಾಹನು ಉದ್ದೇಶಿಸುವುದಾದರೂ ಏನನ್ನು? ಎಂದು ಹೇಳುವಂತಾಗಲು. ಈ ರೀತಿ ಅಲ್ಲಾಹನು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ನೇರ ದಾರಿ ತೋರುತ್ತಾನೆ. ತಮ್ಮ ಪ್ರಭುವಿನ ಸೇನೆಗಳನ್ನು ಸ್ವತಃ ಅವನ ಹೊರತು ಇನ್ನಾರೂ ಅರಿತಿಲ್ಲ. ಇದು ಮನುಷ್ಯರಿಗೆ ಒಂದು ಉದ್ಭೋಧನೆಯಲ್ಲದೆ ಇನ್ನೇನೂ ಅಲ್ಲ.
ನಿಸ್ಸಂದೇಹ! ಚಂದ್ರನಾಣೆ!
ಮತ್ತು ರಾತ್ರಿಯಾಣೆ. ಅದು ಮರಳುವಾಗ,
ಮತ್ತು ಮುಂಜಾವಿನಾಣೆ ! ಅದು ಬೆಳಗುವಾಗ,
ಖಂಡಿತವಾಗಿಯೂ ಸಕರ್ ನರಕವು ಗಂಭೀರ ವಿನಾಶಗಳ ಪೈಕಿ ಒಂದಾಗಿದೆ.
ಮಾನವರ ಪಾಲಿಗೆ ಒಂದು ಎಚ್ಚರಿಕೆ ಎಂಬ ನೆಲೆಯಲ್ಲಿ.
ಅಂದರೆ ನಿಮ್ಮ ಪೈಕಿ ಮುಂದುವರಿಯಲು ಅಥವಾ ಹಿಂದುಳಿಯಲು ಇಚ್ಛಿಸುವವರಿಗೆ (ಅದೊಂದು ಎಚ್ಚರಿಕೆಯಾಗಿದೆ).
ಪ್ರತಿಯೊಂದು ಶರೀರವೂ ಅದರ ಪ್ರವೃತ್ತಿ ಯೊಂದಿಗೆ ಅಡವಿಡಲ್ಪಟ್ಟಿದೆ.
ಬಲಗಡೆಯವರ ಹೊರತು.
(ಅವರು)ಸ್ವರ್ಗೋದ್ಯಾನಗಳಲ್ಲಿರುವರು.
ಅವರು ಅಪರಾಧಿಗಳೊಡನೆ ಕೇಳುವರು;
``ನಿಮ್ಮನ್ನು ನರಕಕ್ಕೆ ಒಯ್ದುದು ಯಾವುದು?’’
ಅವರು ಹೇಳುವರು; ``ನಾವು ನಮಾಝ್ ಮಾಡುವವರಲ್ಲಿ ಸೇರಿದವರಾಗಿರಲಿಲ್ಲ’’.
ನಾವು ಬಡವರಿಗೆ ಆಹಾರ ಉಣಿಸುತ್ತಿರಲಿಲ್ಲ.
ದುರ್ವೃತ್ತಿಗಳಲ್ಲಿ ನಿರತರಾದವರೊಂದಿಗೆ ಸೇರಿ ನಾವು ಅದರಲ್ಲಿ ನಿರತರಾಗಿದ್ದೆವು.
ಮತ್ತು ನಾವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿದ್ದೆವು.
ಕೊನೆಗೆ ಖಚಿತವಾದುದು (ಮರಣ) ನಮಗೆ ಬಂದೇ ಬಿಟ್ಟಿತು.
(ಅಂದು) ಶಿಫಾರಸು ಮಾಡುವವರ ಶಿಫಾರಸು ಅವರಿಗೆ ಯಾವುದೇ ಪ್ರಯೋಜನ ನೀಡದು.
ಅವರು ಉಪದೇಶದಿಂದ ವಿಮುಖರಾಗಲು ಅವರಿಗೆ ಸಂಭವಿಸಿರುವುದಾದರೂ ಏನು?
.ಅವರ ಅವಸ್ಥೆಯು ಸಿಂಹದಿಂದ ಓಡಿ ಪಾರಾಗುವ ಅಂಜಿ ತತ್ತರಿಸಿದ ಕಾಡು ಕತ್ತೆಗಳಂತೆ ಆಗಿದೆ.
ಅಲ್ಲ, ಅವರ ಪೈಕಿ ಪ್ರತಿಯೊಬ್ಬನೂ, ತನಗೆ ಅಲ್ಲಾಹನಿಂದ ತೆರೆದಿಡಲ್ಪಟ್ಟ ಗ್ರಂಥಗಳನ್ನು ಕೊಡಲ್ಪ ಡಬೇಕೆಂದು ಬಯಸುವನು.
ಖಂಡಿತ ಇಲ್ಲ. ಆದರೆ ಅವರು ಪರಲೋಕವನ್ನು ಭಯಪಡುವುದಿಲ್ಲ.
ಖಂಡಿತವಾಗಿಯೂ ಇದು (ಖುರ್‍ಆನ್) ಒಂದು ನೀತಿಪಾಠವಾಗಿದೆ.
ಆದುದರಿಂದ ಇಷ್ಟವುಳ್ಳವರು ಇದರಿಂದ ಓದಿ ಉಪದೇಶ ಪಡೆದುಕೊಳ್ಳಲಿ.
ಅಲ್ಲಾಹನು ಇಚ್ಛಿಸದೇ ಅವರು ಯಾರೂ ಪಠಿಸಿ ಓದಿ ಉಪದೇಶ ಪಡಕೊಳ್ಳಲಾರರು. ಅವನು ಭಯಭಕ್ತಿಗೆ ಅರ್ಹನೂ ಪಾಪ ಮುಕ್ತಿಗೆ ಅರ್ಹನೂ ಆಗಿರುತ್ತಾನೆ.