ಓ, ಹೊದ್ದು ಕೊಂಡವರೇ! (ಪ್ರವಾದಿಯರೇ!)
ರಾತ್ರಿ ಎದ್ದು ನಿಂತು ನಮಾಝ್ ನಿರ್ವಹಿಸಿರಿ, ಸ್ವಲ್ಪ ಹೊತ್ತು ಹೊರತುಪಡಿಸಿ.
ರಾತ್ರಿಯ ಅರ್ಧಭಾಗ ಅಥವಾ ಅದಕ್ಕಿಂತ ಸ್ವಲ್ಪ (ಸಮಯ) ಕಡಿತಗೊಳಿಸಿರಿ.
ಅಥವಾ ಅದಕ್ಕಿಂತ ತುಸು (ಸಮಯ) ವರ್ಧಿಸಿಕೊಳ್ಳಿರಿ ಮತ್ತು ಖುರ್‍ಆನನ್ನು ಸಾವಕಾಶವಾಗಿ ಪಠಿಸಿರಿ.
ಖಂಡಿತ ನಾವು ತಮ್ಮ ಮೇಲೆ ಒಂದು ಘನವಾದ ಮಾತನ್ನು ಅವತೀರ್ಣಗೊಳಿಸಲಿದ್ದೇವೆ.
ರಾತ್ರಿ ಎದ್ದು ನಿರ್ವಹಿಸುವ ನಮಾಝ್‍ನಿಂದ ಹೃದಯ ಸಾನಿಧ್ಯಕ್ಕೆ ಬಲವೂ ಮಾತುಗಳಿಗೆ ಸ್ಪಷ್ಟತೆಯೂ ಪ್ರಾಪ್ತವಾಗುತ್ತದೆ.
ಹಗಲು ಹೊತ್ತಿನಲ್ಲಿ ತಮಗೆ ದೀರ್ಘವಾದ ಕೆಲಸ ಕಾರ್ಯಗಳಿರುತ್ತವೆ.
ತಮ್ಮ ಪ್ರಭುವಿನ ನಾಮವನ್ನು ಜಪಿಸಿರಿ ಮತ್ತು ಸರ್ವಾತ್ಮನಾ ಅವನಲ್ಲಿಗೆ ಮನ ಸಮರ್ಪಿಸಿರಿ. (ನಿಷ್ಕಳಂಕವಾಗಿ ಆರಾಧಿಸಿರಿ)
ಪೂರ್ವ-ಪಶ್ಚಿಮದ ಒಡೆಯನವನು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಆದುದರಿಂದ ತಾವು ಅವನನ್ನೇ ಕಾರ್ಯಾಸಾಧಕನಾಗಿ ಸ್ವೀಕರಿಸಿರಿ.
ಅವರು (ಸತ್ಯನಿಷೇಧಿಗಳು) ಆಡುತ್ತಿರುವ ಮಾತುಗಳ ಮೇಲೆ ತಾಳ್ಮೆವಹಿಸಿರಿ ಮತ್ತು ಸುಂದರ ರೀತಿಯಲ್ಲಿ ಅವರಿಂದ ಬೇರ್ಪಟ್ಟು ನಿಲ್ಲಿರಿ.
ಸುಖಲೋಲುಪರಾದ ಸತ್ಯನಿಷೇಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ನನ್ನನ್ನು ಬಿಟ್ಟು ಬಿಡಿರಿ. ಅವರಿಗೆ ಸ್ವಲ್ಪ ಸಾವಕಾಶವನ್ನು ನೀಡಿರಿ.
ನಮ್ಮ ಬಳಿ ಭಾರವಾದ ಬೇಡಿಗಳಿವೆ ಮತ್ತು ಹೊತ್ತಿ ಉರಿಯುವ ಅಗ್ನಿಯಿದೆ.
ಗಂಟಲಲ್ಲಿ ಸಿಕ್ಕಿಕೊಳ್ಳುವ ಭೋಜನ ಮತ್ತು ವೇದನಾಜನಕ ಶಿಕ್ಷೆಯೂ ಇದೆ.
ಭೂಮಿ ಮತ್ತು ಪರ್ವತಗಳು ನಡುಗುವ ಹಾಗೂ ಪರ್ವತಗಳು ಕೊಚ್ಚಿ ಹೋದ ಮರಳ ರಾಶಿಯಂತೆ ಆಗಿ ಬಿಡುವ ದಿನ. (ಆ ಶಿಕ್ಷೆ ಸಂಭವಿಸುವುದು.)
(ಜನರೇ) ನಿಜವಾಗಿಯೂ ನಿಮ್ಮ ಕಡೆಗೆ, ನಿಮ್ಮ ವಿಷಯಗಳಲ್ಲಿ ಸಾಕ್ಷಿಯಾಗಿರುವ ಓರ್ವ ದೂತ ನನ್ನು ನಾವು ಕಳುಹಿಸಿರುತ್ತೇವೆ. ಫಿರ್‍ಔನನ ಕಡೆಗೆ ನಾವು ದೂತನನ್ನು ಕಳುಹಿಸಿದ್ದಂತೆ.
(ಅಂದು) ಫಿರ್‍ಔನನು ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಅತ್ಯಂತ ಉಗ್ರವಾಗಿ ಹಿಡಿದು ಬಿಟ್ಟೆವು.
ನೀವು ಅವಿಶ್ವಾಸವನ್ನು ತಾಳಿದರೆ, ಮಕ್ಕಳನ್ನು (ನೆರೆ ಕೂದಲಿನ) ವೃದ್ಧರಾಗಿ ಮಾಡಿ ಬಿಡುವ ಒಂದು ಭಯಂಕರ ದಿನ ನೀವು ಹೇಗೆ ರಕ್ಷಣೆ ಹೊಂದುವಿರಿ?
ಅಂದು ಆಕಾಶವು ಸಿಡಿದು ನುಚ್ಚುನೂರಾಗುವುದು. ಅಲ್ಲಾಹನ ವಾಗ್ದಾನವು ಕಾರ್ಯಗತ ಗೊಂಡೇ ತೀರುವುದು.
ಇದೊಂದು ಉದ್ಭೋಧನೆಯಾಗಿದೆ. ಆದುದರಿಂದ ಇಚ್ಛೆಯುಳ್ಳವನು ತನ್ನ ಪ್ರಭುವಿನ ಕಡೆಗೆ ಒಂದು ದಾರಿಯನ್ನು ಮಾಡಿಕೊಳ್ಳಲಿ.
(ಸಂದೇಶವಾಹಕರೇ,) ತಾವು ಸರಿಸುಮಾರು ರಾತ್ರೆಯ ಮೂರರಲ್ಲಿ ಎರಡು ಭಾಗ (ಇನ್ನು ಕೆಲವೊಮ್ಮೆ) ಅರ್ಧಭಾಗ ಮತ್ತು (ಕೆಲವೊಮ್ಮೆ) ಮೂರನೆಯ ಒಂದುಭಾಗ ನಮಾಝ್ ಮಾಡು ತ್ತೀರೆಂದು ತಮ್ಮ ಪ್ರಭು ಖಂಡಿತ ತಿಳಿದಿರುತ್ತಾನೆ. ತಮ್ಮ ಸಂಗಡ ಒಂದು ಕೂಟದವರೂ. (ಹಾಗೇ ಮಾಡುತ್ತಿದ್ದಾರೆ) ರಾತ್ರಿ ಮತ್ತು ಹಗಲನ್ನು ಅಲ್ಲಾಹನು ಲೆಕ್ಕವಿಡುವನು. ನಿಮಗೆ ಕಾಲಗಣನೆ ಯನ್ನು ಸರಿಯಾಗಿ ಮಾಡಲಾಗದೆಂದು ಅವನಿಗೆ ತಿಳಿದಿದೆ. ಆದುದರಿಂದ ಅವನು ನಿಮ್ಮ ಮೇಲೆ ವಿನಾಯಿತಿ ತೋರಿದನು. ಹೀಗಾಗಿ ನೀವು ಖುರ್‍ಆನ್‍ನಿಂದ, ಸೌಕರ್ಯವಾದುದನ್ನು ಪಠಿಸಿ (ನಮಾಝ್ ಮಾಡಿ)ಕೊಳ್ಳಿರಿ. ನಿಮ್ಮ ಪೈಕಿ ರೋಗಿಗಳಿರಬಹುದೆಂದೂ, ಇನ್ನು ಕೆಲವರು ಅಲ್ಲಾಹನ ಅನುಗ್ರಹವನ್ನರಸಿ ಕೊಂಡು ಭೂಮಿಯಲ್ಲಿ ಸಂಚರಿಸಲಿರುವರೆಂದೂ ಮತ್ತೆ ಕೆಲವರು ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೋಗಲಿರುವರೆಂದೂ ಅವನಿಗೆ (ಅಲ್ಲಾಹನಿಗೆ ) ತಿಳಿದಿದೆ. ಆದುದರಿಂದ ನೀವು ಖುರ್‍ಆನ್‍ನಿಂದ ಸೌಕರ್ಯವಾದುದನ್ನು ಪಠಿಸಿರಿ, ನಮಾಝ್ ಕ್ರಮಪ್ರಕಾರ ನಿರ್ವಹಿಸಿರಿ. ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು ಕೊಡಿರಿ. ನೀವು ಸ್ವಂತಕ್ಕಾಗಿ ಯಾವುದೇ ಸತ್ಕರ್ಮವನ್ನು ಮುಂದಾಗಿ ನಿರ್ವಹಿಸುತ್ತೀರೆಂದಾದರೆ, ಅಲ್ಲಾಹನ ಬಳಿ ಅದು ಅತ್ಯಧಿಕ ಗುಣಕರವಾಗಿಯೂ, ಮಹತ್ತರ ಪ್ರತಿಫಲವುಳ್ಳದ್ದಾಗಿಯೂ ನೀವು ಕಾಣುವಿರಿ. ನೀವು ಅಲ್ಲಾಹನೊಡನೆ ಪಾಪ ಮುಕ್ತಿಗೆ ಬೇಡಿರಿ. ಖಂಡಿತವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.