All Islam Directory
1

(ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್‍ಗಳ ಒಂದು ತಂಡವು ಖುರ್‍ಆನನ್ನು ಶ್ರದ್ಧಾಪೂರ್ವಕ ಆಲಿಸಿತು ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್‍ಆನನ್ನು ಆಲಿಸಿದ್ದೇವೆ.’

2

ಅದು (ಖುರ್‍ಆನ್) ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಆದುದರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು. ಇನ್ನು ಮೇಲೆ ನಮ್ಮ ಪ್ರಭುವಿನೊಂದಿಗೆ ಯಾರನ್ನೂ ನಾವು ಸಹಭಾಗಿಯಾಗಿ ಮಾಡಲಾರೆವು.

3

ನಮ್ಮ ಪ್ರಭುವಿನ ಮಹತ್ವವು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಸಂಗಾತಿ ಅಥವಾ ಪುತ್ರನಾಗಿ ಮಾಡಿಕೊಂಡಿಲ್ಲ.

4

ಅಲ್ಲದೆ, ನಮ್ಮ ಕೂಟದಲ್ಲಿರುವ ತಿಳಿಗೇಡಿಗಳು ಅಲ್ಲಾಹನ ಕುರಿತು ಘೋರ ಅತಿರೇಕವನ್ನು ಹೇಳುತ್ತಿದ್ದರು.

5

ಜಿನ್ನ್‍ಗಳು ಮತ್ತು ಮಾನವರು ಅಲ್ಲಾಹನ ಹೆಸರಲ್ಲಿ ಎಂದೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.

6

ಮಾನವರ ಪೈಕಿ ಕೆಲವು ವ್ಯಕ್ತಿಗಳು ಜಿನ್ನ್‍ಗಳ ಪೈಕಿ ಕೆಲವು ವ್ಯಕ್ತಿಗಳಲ್ಲಿ ಅಭಯ ಬೇಡುತ್ತಿದ್ದರು. ಹೀಗೆ ಅವರು ಜಿನ್ನ್‍ಗಳ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಿದರು.

7

ಅವರು (ಮಾನವರು) ಕೂಡಾ ನೀವು ಭಾವಿಸಿದಂತೆಯೇ ಅಲ್ಲಾಹನು ಯಾರನ್ನೂ ಪುನರುಜ್ಜೀವಗೊಳಿಸಲಾರನೆಂದು ಭಾವಿಸಿ ಕೊಂಡಿದ್ದರು.

8

ನಾವು ಆಕಾಶವನ್ನು ಸ್ಪರ್ಶಿಸಿ ನೋಡಿದಾಗ ಅದು ಸಶಕ್ತ ಕಾವಲುಗಾರರಿಂದ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿರುವುದನ್ನು ಕಂಡೆವು.

9

ಹಿಂದೆ ನಾವು ಕದ್ದಾಲಿಸಲಿಕ್ಕಾಗಿ ಆಕಾಶದ ಕೆಲವು ಕಡೆಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾವನಾದರೂ ಕದ್ದಾಲಿಸಲು ಪ್ರಯತ್ನಿಸುವು ದಾದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆ (ಉಲ್ಕೆ)ಯನ್ನು ಕಾಣುತ್ತಾನೆ.

10

ಭೂಮಿಯ ನಿವಾಸಿಗಳಿಗೆ ಕೆಡುಕನ್ನು ಉದ್ದೇಶಿ ಸಲಾಗಿದೆಯೋ? ಅಥವಾ ಅವರ ಪ್ರಭುವು ಅವರಿಗೆ ಸನ್ಮಾರ್ಗವನ್ನು ತೋರಿಸ ಬಯಸಿರುವನೋ? ಎಂದೇನೂ ನಮಗೆ ತಿಳಿಯದು.

11

ನಮ್ಮ ಕೂಟದಲ್ಲಿ ಸಜ್ಜನರಿದ್ದಾರೆ ಮತ್ತು ಅದರ ಕೆಳಗಿನವರೂ ನಮ್ಮಲ್ಲಿದ್ದಾರೆ. ನಾವು ನಾನಾ ದಾರಿಗಳಲ್ಲಿ ಹರಿಹಂಚಿ ಹೋಗಿದ್ದೇವೆ.

12

ನಮಗೆ ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾಗದು ಮತ್ತು ನಾವು ತಪ್ಪಿಸಿ ಓಡಿ ಹೋಗಿಯೂ ಅವನನ್ನು ಸೋಲಿಸಲಾರೆವು ಎಂದು ನಾವು ಖಚಿತಪಡಿಸಿಕೊಂಡಿರುತ್ತೇವೆ.

13

ನಾವು ಸನ್ಮಾರ್ಗ (ಖುರ್‍ಆನ್)ವನ್ನು ಕೇಳಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು. ತನ್ನ ಪ್ರಭುವಿನ ಮೇಲೆ ಯಾವನು ವಿಶ್ವಾಸವಿರಿಸುವನೋ ಅವನು ಅಲ್ಲಾಹನಿಂದ ಯಾವುದೇ ನಷ್ಟವನ್ನೂ, ಅನೀತಿಯನ್ನೂ ಭಯಪಡಬೇಕಾಗಿಲ್ಲ.

14

ನಮ್ಮ ಕೂಟದಲ್ಲಿ ವಿಧೇಯರು (ಮುಸ್ಲಿಮರು) ಇದ್ದಾರೆ. ಅನ್ಯಾಯಗಾರರೂ ನಮ್ಮಲ್ಲಿ ಇದ್ದಾರೆ. ಯಾರು ವಿಧೇಯರಾಗುತ್ತಾರೋ (ಇಸ್ಲಾಮನ್ನು ಸ್ವೀಕರಿಸಿಕೊಳ್ಳುತ್ತಾರೋ) ಅವರು ಸತ್ಪಥವನ್ನು ಕಂಡುಕೊಂಡರು.

15

ಯಾರು ಅನ್ಯಾಯಗಾರರೋ ಅವರು ನರಕದ ಇಂಧನವಾಗುವರು.

16

(ಅಲ್ಲಾಹು ಹೇಳುತ್ತಾನೆ) ಅವರು ಸನ್ಮಾರ್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ, ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಕೊಡುತ್ತಿದ್ದೆವು.

17

ಅದರಲ್ಲಿ (ಈ ಅನುಗ್ರಹದ ಮೂಲಕ) ಅವರನ್ನು ಪರೀಕ್ಷಿಸಲಿಕ್ಕಾಗಿ. ಯಾರು ತನ್ನ ಪ್ರಭುವಿನ ದಿಕ್‍ರ್‍ನಿಂದ (ಖುರ್‍ಆನ್‍ನಿಂದ) ವಿಮುಖ ನಾಗುವನೋ, ಅವನನ್ನು ಅವನ ಪ್ರಭುವು ಕಠಿಣ ಸಜೆಗೆ ಗುರಿಪಡಿಸುವನು.

18

ಮಸೀದಿಗಳು ಅಲ್ಲಾಹನಿಗಿರುವುದಾಗಿವೆ. ಆದುದರಿಂದ ಅವುಗಳಲ್ಲಿ ಅಲ್ಲಾಹನೊಂದಿಗೆ ಇತರ ಯಾರನ್ನೂ ಆರಾಧಿಸಬೇಡಿರಿ .

19

ಅಲ್ಲಾಹನ ದಾಸನು (ಪ್ರವಾದಿ) ಅವನನ್ನು ಆರಾಧಿಸುತ್ತಾ ನಿಂತಾಗ, ಅವರು (ಜಿನ್ನ್‍ಗಳು) ಆ ದಾಸನ ಸುತ್ತ ಕೂಟ-ಕೂಟವಾಗಿ ಕಿಕ್ಕಿರಿದು ತುಂಬ ಹತ್ತಿದರು.

20

(ಸಂದೇಶವಾಹಕರೇ,) ತಾವು ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.

21

ಹೇಳಿರಿ; ನಿಮಗೆ ಯಾವುದೇ ಹಾನಿ ಮಾಡಲಿಕ್ಕಾಗಲಿ, ಸನ್ಮಾರ್ಗ ನೀಡಲಿಕ್ಕಾಗಲಿ ನಾನು ಒಡೆತನ (ಅಧಿಕಾರ) ಹೊಂದಿಲ್ಲ.

22

ಹೇಳಿರಿ; ಅಲ್ಲಾಹನ ಶಿಕ್ಷೆಯಿಂದ ಯಾರೂ ನನ್ನನ್ನು ರಕ್ಷಿಸಲಾರರು. ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದೂ ಕಂಡುಕೊಳ್ಳಲಾರೆನು.

23

ಅಲ್ಲಾಹನ ಸಂದೇಶಗಳನ್ನು ತಲುಪಿಸುವ ಮತ್ತು ಅವನ ದೌತ್ಯವನ್ನು ನಿರ್ವಹಿಸುವ ಹೊರತು (ಬೇರೇನೂ ನನ್ನ ಅಧೀನತೆಯಲ್ಲಿಲ್ಲ.) ಯಾರು ಅಲ್ಲಾಹನ ಮತ್ತು ಅವನ ದೂತರನ್ನು ದಿಕ್ಕರಿಸುತ್ತಾರೋ ಅವನಿಗೆ ನರಕಾಗ್ನಿ ಇದೆ. ಅದರಲ್ಲಿ ಅವರು ಚಿರವಾಸಿಗಳಾಗಿರುವರು ಎಂದೆಂದಿಗೂ.

24

ಅವರಿಗೆ ತಾಕೀತು ನೀಡಲಾಗುತ್ತಿರುವುದನ್ನು (ಶಿಕ್ಷೆ) ಕಣ್ಣಾರೆ ಕಂಡುಕೊಳ್ಳುವಾಗ ಯಾರ ಸಹಾಯಕರು ಅತ್ಯಂತ ದುರ್ಬಲರು ಮತ್ತು ಸಂಖ್ಯೆಯಲ್ಲಿ ಅತ್ಯಲ್ಪರು ಎಂಬುದು ಅವರಿಗೆ ತಿಳಿದು ಬಿಡುವುದು.

25

ತಾವು ಹೇಳಿರಿ; ನಿಮಗೆ ಏನನ್ನು ತಾಕೀತು ನೀqಲಾಗುತ್ತಿದೆಯೋ ಅದು (ಶಿಕ್ಷೆ) ಸದ್ಯವೇ ಸಂಭವಿಸುವುದೋ ಅಥವಾ ನನ್ನ ಪ್ರಭು ಅದಕ್ಕೆ (ದೀರ್ಘವಾದ) ಅವಧಿ ನಿಶ್ಚಯಿಸುವನೋ ಎಂಬುದು ನನಗೆ ತಿಳಿದಿಲ್ಲ.

26

ಅವನು ಅದೃಶ್ಯ ಜ್ಞಾನಿಯಾಗಿದ್ದಾನೆ. ಅವನು ತನ್ನ ಅದೃಶ್ಯ ಜ್ಞಾನವನ್ನು ಯಾರಿಗೂ ಬಹಿ ರಂಗಪಡಿಸುವುದಿಲ್ಲ.

27

ತಾನು ಮೆಚ್ಚಿಕೊಂಡ ಯಾವುದೇ ದೂತರಿಗೆ ಹೊರತು. ಆಗ ಆ ದೂತರ ಮುಂದೆಯೂ ಹಿಂದೆ ಯೂ ಅವನು ಕಾವಲುಗಾರರನ್ನು ಖಂಡಿತ ಏರ್ಪಡಿಸುವನು.

28

ಅದು ಅವರು ತಮ್ಮ ಪ್ರಭುವಿನ ಸಂದೇಶಗಳನ್ನು ತಲುಪಿಸಿರುವರೆಂಬುದನ್ನು ಅವನು ಪ್ರತ್ಯಕ್ಷವಾಗಿ ತಿಳಿಯಲಿಕ್ಕಾಗಿ, ಅವರ ಬಳಿ ಇರುವುದನ್ನು ಅವನು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವನ್ನೂ ಅವನು ಲೆಕ್ಕ ಮಾಡಿಟ್ಟಿರುತ್ತಾನೆ.