ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ``ನಿನ್ನ ಜನಾಂಗದವರಿಗೆ ವೇದನಾಯುಕ್ತ ಶಿಕ್ಷೆ ಬಂದೆರಗುವುದಕ್ಕೆ ಮುಂಚೆಯೇ ಅವರಿಗೆ ಮುನ್ನೆಚ್ಚರಿಕೆ ನೀಡು’’ ಎಂಬ ಆದೇಶದೊಂದಿಗೆ.
ಅವರು ಹೇಳಿದರು; `ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಎಚ್ಚರಿಕೆ ಕೊಡುವವನಾಗಿದ್ದೇನೆ.
ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಹಾಗಾದರೆ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ಒಂದು ನಿಶ್ಚಿತ ಕಾಲದವರೆಗೆ ಮುಂದೂಡುವನು. ಅಲ್ಲಾಹನ ಅವಧಿ ಬಂದು ಬಿಟ್ಟರೆ ಮತ್ತೆ ಅದನ್ನು ಮುಂದೂಡಲಾಗುವುದಿಲ್ಲ. ನಿಮಗಿದು ತಿಳಿದಿರುತ್ತಿದ್ದರೆ!
ಅವರು (ನೂಹ್) ಹೇಳಿದರು; `ನನ್ನ ಪ್ರಭೂ, ನಾನು ನನ್ನ ಜನಾಂಗದವರನ್ನು ರಾತ್ರಿಯೂ ಹಗಲೂ (ನಿನ್ನ ಮಾರ್ಗಕ್ಕೆ) ಕರೆದೆನು.
ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು.
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲ ಅವರು ತಮ್ಮ ಕಿವಿಗಳಲ್ಲಿ ಬೆರಳುಗಳನ್ನು ತುರುಕಿಸಿಕೊಂಡರು, ತಮ್ಮ ವಸ್ತ್ರಗಳಿಂದ (ಮುಖ) ಮುಚ್ಚಿಕೊಂಡರು, (ಅಸತ್ಯದಲ್ಲಿ) ಊರಿ ನಿಂತರು. ಮತ್ತು ಭಾರೀ ಅಹಂಭಾವ ತೋರಿದರು.
ತರುವಾಯ ನಾನು ಅವರಿಗೆ ಜೋರಾಗಿ ಕರೆಕೊಟ್ಟೆನು.
ಅನಂತರ ನಾನು ಅವರಿಗಾಗಿ ಬಹಿರಂಗ ಆಹ್ವಾನ ನೀಡಿದೆನು ಮತ್ತು ಬಹಳ ರಹಸ್ಯವಾಗಿಯೂ ಬೋಧಿಸಿದೆನು.
ನಾನು ಹೇಳಿದೆನು; ನಿಮ್ಮ ಪ್ರಭುವಿನಲ್ಲಿ ನೀವು ಕ್ಷಮೆಯನ್ನು ಯಾಚಿಸಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ.
ಹಾಗಾದಲ್ಲಿ ನಿಮಗೆ ಅವನು ಆಕಾಶದಿಂದ ಸಮೃದ್ಧವಾಗಿ ಮಳೆ ಸುರಿಸಿ ಕೊಡುವನು.
ನಿಮಗೆ ಸೊತ್ತುಗಳನ್ನೂ ಸಂತಾನಗಳನ್ನೂ ಕೊಟ್ಟು ಪೋಷಿಸುವನು, ನಿಮಗಾಗಿ ತೋಟ ಗಳನ್ನೂ ನದಿಗಳನ್ನೂ ನಿರ್ಮಿಸಿ ಕೊಡುವನು.
ಅಲ್ಲಾಹು ನಿಮ್ಮನ್ನು ಗೌರವಿಸುವುದನ್ನು ಯಾಕೆ ನೀವು ಆಗ್ರಹಪಡುವುದಿಲ್ಲ?
ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.
ನೀವು ನೋಡುತ್ತಿಲ್ಲವೇ? ಅಲ್ಲಾಹನು ಸಪ್ತಗಗನಗಳನ್ನು (ಒಂದರ ಮೇಲೆ ಒಂದರಂತೆ) ಅಂತಸ್ತುಗಳಾಗಿ ಹೇಗೆ ಸೃಷ್ಟಿಸಿದನು?
ಮತ್ತು ಅವುಗಳಲ್ಲಿ ಚಂದ್ರನನ್ನು ಒಂದು ಪ್ರಕಾಶವಾಗಿಯೂ ಸೂರ್ಯನನ್ನು ಒಂದು ಬೆಳಕಾಗಿಯೂ ಮಾಡಿರುವನು.
ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಬೆಳೆ ಬೆಳೆಸಿದನು.
ಮುಂದೆ ಅವನು ನಿಮ್ಮನ್ನು ಅದಕ್ಕೆ ಮರಳಿ ಸುವನು ಮತ್ತು ಅದರಿಂದ ಒಮ್ಮೆಲೇ ನಿಮ್ಮನ್ನು ಹೊರತೆಗೆಯುವನು.
ಅಲ್ಲಾಹನು ನಿಮಗಾಗಿ ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿದನು.
ನೀವು ಅದರಲ್ಲಿ ವಿಶಾಲವಾದ ಮಾರ್ಗಗಳಲ್ಲಿ ಪ್ರವೇಶಿಸುವಂತಾಗಲು.
ನೂಹ್ ಹೇಳಿದರು; `ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು. ಸಂಪತ್ತು ಹಾಗೂ ಸಂತಾನಗಳನ್ನು ಪಡೆದು ನಷ್ಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಕೆಲವರನ್ನು ಅವರು ಅನುಸರಿಸಿದರು.
ಅವರು ಬಹುದೊಡ್ಡ ಕುತಂತ್ರವನ್ನು ಹೂಡಿದರು.
ಅವರು, `(ಜನರೇ) ನೀವು ಖಂಡಿತ ನಿಮ್ಮ ದೈವಗಳನ್ನು ತ್ಯಜಿಸಬೇಡಿರಿ. ವದ್ದ್, ಸುವಾಅï, ಯಗೂಸ್, ಯಊಖ್ ಮತ್ತು ನಸ್ರ್‍ಗಳನ್ನು ನೀವು ಖಂಡಿತ ಉಪೇಕ್ಷಿಸದಿರಿ’ ಎಂದು ಹೇಳಿದರು.
ಅವರು ಅನೇಕ ಮಂದಿಯನ್ನು ದಾರಿಗೆಡಿಸಿದ್ದಾರೆ. (ಆದುದರಿಂದ ಪ್ರಭೂ!) ನೀನು ಈ ಅಕ್ರಮಿಗಳಿಗೆ ಪಥಭ್ರಷ್ಟತೆಯಲ್ಲದೆ ಬೇರೇನನ್ನೂ ವರ್ಧಿಸಿ ಕೊಡಬೇಡ.
ತಮ್ಮ ಪಾಪಗಳ ಕಾರಣದಿಂದಾಗಿಯೇ ಅವರು ನೀರಲ್ಲಿ ಮುಳುಗಿಸಲ್ಪಟ್ಟರು ಮತ್ತು ನರಕಾಗ್ನಿಗೆ ಸೇರಿಸಲ್ಪಟ್ಟರು. ಅನಂತರ ಅವರಿಗೆ, ಅಲ್ಲಾಹನ ಹೊರತು ಸಹಾಯಕನಾರೂ ಲಭಿಸಲಿಲ್ಲ.
ನೂಹ್ ಹೇಳಿದರು; `ನನ್ನ ಪ್ರಭೂ, ಸತ್ಯನಿಷೇಧಿಗಳ ಪೈಕಿ ಯಾವನೇ ಗೃಹಸ್ಥನನ್ನು (ಯಾರನ್ನೂ) ಈ ಭೂಮಿಯ ಮೇಲೆ ನೆಲೆಸಲು ಬಿಡಬೇಡ.
ನೀನು ಅವರನ್ನು ನಾಶಪಡಿಸದೆ ಹಾಗೆ ಬಿಟ್ಟರೆ, ಅವರು ನಿನ್ನ ದಾಸರನ್ನು ದಾರಿಗೆಡಿಸುವರು. ಮತ್ತು ಸತ್ಯನಿಷೇಧಿಗಳಾದ ದುರಾಚಾರಿ ಸಂತತಿಗಳನ್ನಲ್ಲದೆ ಅವರು ಹುಟ್ಟುಹಾಕಲಾರರು.
ನನ್ನ ಪ್ರಭೂ, ನನಗೂ, ನನ್ನ ಮಾತಾಪಿತರಿಗೂ ಸತ್ಯವಿಶ್ವಾಸಿಯಾಗಿ ನನ್ನ ಮನೆಗೆ ಪ್ರವೇಶಿಸಿದ ಪ್ರತಿಯೊಬ್ಬರಿಗೂ ಮತ್ತು ಎಲ್ಲ ಸತ್ಯವಿಶ್ವಾಸಿ ಸ್ತ್ರೀ - ಪುರುಷರಿಗೂ ನೀನು ಕ್ಷಮೆ ನೀಡು. ಅಕ್ರಮಿಗಳಿಗೆ ವಿನಾಶದ ಹೊರತು ಇನ್ನೇನನ್ನೂ ವರ್ಧಿಸ ಬೇಡ.