ಸತ್ಯನಿಷೇಧಿಗಳಿಗೆ ಸಂಭವಿಸಲಿಕ್ಕಿರುವ ಒಂದು ಶಿಕ್ಷೆಯ ಕುರಿತು ಪ್ರಶ್ನಿಸುವವನೊಬ್ಬನು ಪ್ರಶ್ನಿಸಿದ್ದಾನೆ. (ಸಂಭವಿಸಲಿರುವ) ಅದನ್ನು ತಡೆಯ ಬಲ್ಲವರು ಯಾರೂ ಇಲ್ಲ.
ಆರೋಹಣ ಪಥಗಳ ಒಡೆಯನಾದ ಅಲ್ಲಾಹನ ಕಡೆಯಿಂದ. (ಆ ಶಿಕ್ಷೆ ಸಂಭವಿಸುವುದು)
ದೇವಚರರು ಮತ್ತು ರೂಹ್ ಅವನ ಸಾನಿಧ್ಯಕ್ಕೆ ಏರಿ ಹೋಗುತ್ತಾರೆ. ಐವತ್ತು ಸಾವಿರ ವರುಷಗಳ ಅವಧಿಯುಳ್ಳ ಒಂದು ದಿನದಲ್ಲಿ. (ಆ ಶಿಕ್ಷೆ ಸಂಭವಿಸಲಿದೆ)
ಆದುದರಿಂದ (ಸಂದೇಶವಾಹಕರೇ,) ತಾವು ತಾಳ್ಮೆ ವಹಿಸಿರಿ, ಸುಂದರವಾದ ತಾಳ್ಮೆ.
ಅವರು ಅದನ್ನು ವಿದೂರವಾಗಿ ಕಾಣುತ್ತಾರೆ.
ನಾವು ಅದನ್ನು ಸಮೀಪದಲ್ಲಿ ಕಾಣುತ್ತಿದ್ದೇವೆ.
ಆ ದಿನ ಆಕಾಶವು ಕರಗಿದ ಲೋಹದಂತಾಗುವುದು.
ಮತ್ತು ಪರ್ವತಗಳು ಹಿಂಜಿದ ಉಣ್ಣೆರೋಮದಂತಾಗುವುವು.
ಅಂದು ಯಾವ ಆಪ್ತ ಬಂಧುವೂ ತನ್ನ ಆಪ್ತ ಬಂಧುವಿನಲ್ಲಿ ಏನನ್ನೂ ಕೇಳಲಾರನು.
ಅವರು ಪರಸ್ಪರರಿಗೆ ತೋರಿಸಲ್ಪಡುವರು. (ಆದರೂ ಅವರು ಪರಸ್ಪರ ಕೇಳಲಾರರು) ಅಪರಾಧಿಯು ತನ್ನ ಮಕ್ಕಳನ್ನು, ತನ್ನ ಪತ್ನಿ ಯನ್ನು, ತನ್ನ ಸಹೋದರರನ್ನು, ತನಗೆ ಆಶ್ರಯ ನೀಡುತ್ತಿದ್ದ ತನ್ನ ಅತ್ಯಂತ ಆಪ್ತ ಕುಟುಂಬವನ್ನು ಮತ್ತು ಭೂಮುಖದಲ್ಲಿರುವ ಎಲ್ಲ ಜನರನ್ನೂ ಪ್ರಾಯಶ್ಚಿತ್ತವಾಗಿ ಕೊಟ್ಟು ಆ ದಿನದ ಶಿಕ್ಷೆಯಿಂದ ಪಾರಾಗಬಯಸುವನು.
ಅದು (ಆ ಮೋಹ) ಬೇಡ. ಅದು ಧಗಧಗಿಸುವ ನರಕವಾಗಿರುವುದು.
ತಲೆಯ ಚರ್ಮವನ್ನು ಸುಲಿಯುವ ಅಗ್ನಿ!
ಸತ್ಯದಿಂದ ವಿಮುಖನಾದ, ಬೆನ್ನು ತಿರುಗಿಸಿದ, ಸಂಪತ್ತನ್ನು ಕಲೆ ಹಾಕಿ (ಅದನ್ನು ದಾನ ನೀಡದೆ) ಜೋಪಾನವಾಗಿ ಸಂಗ್ರಹಿಸಿಟ್ಟ ಪ್ರತಿಯೊಬ್ಬನನ್ನೂ ಅದು ತನ್ನ ಕಡೆಗೆ ಕೂಗಿ ಕರೆಯುವುದು.
ಮಾನವನು ಬಹಳ ಅಕ್ಷಮನಾಗಿಯೂ ಅತ್ಯಾ ಗ್ರಹಿಯಾಗಿಯೂ ಸೃಷ್ಟಿಸಲ್ಪಟ್ಟಿದ್ದಾನೆ.
ಅವನಿಗೆ ಸಂಕಷ್ಟ ಬಂದಾಗ ಕಳವಳಗೊಳ್ಳುತ್ತಾನೆ.
ಮತ್ತು ಸುಖ ಬಂದಾಗ (ದಾನ ನೀಡದೆ) ಲೋಭ ತೋರುತ್ತಾನೆ.
ಆದರೆ ನಮಾಝ್ ಮಾಡುವವರ ಹೊರತು.
ಅವರು ತಮ್ಮ ನಮಾಝನ್ನು ತಪ್ಪದೆ ನಿರ್ವಹಿಸುವರು.
ಅವರ ಸಂಪತ್ತುಗಳಲ್ಲಿ ಒಂದು ನಿಶ್ಚಿತ ಹಕ್ಕಿದೆ.
ಬೇಡುವವನಿಗೆ ಮತ್ತು (ಬೇಡದ ಕಾರಣದಿಂದ) ತಡೆಯಲ್ಪಟ್ಟವನಿಗೆ.
ಅವರು ಪ್ರತಿಫಲ ದಿನವನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾರೆ.
ಅವರು ತಮ್ಮ ಪ್ರಭುವಿನ ಶಿಕ್ಷೆಯನ್ನು ಭಯಪಡುತ್ತಾರೆ.
ಅವರ ಪ್ರಭುವಿನ ಶಿಕ್ಷೆಯು (ಸಂಭವಿಸದೆಂದು) ನಿರ್ಭೀತಿಯಿಂದಿರುವಂತಹದ್ದಲ್ಲ.
ಅವರು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳುತ್ತಾರೆ.
ತಮ್ಮ ಪತ್ನಿಯರ ಮತ್ತು ತಮ್ಮ ದಾಸಿಯರ ಹೊರತು. ಅದರಿಂದ ಅವರು ಆಕ್ಷೇಪಾರ್ಹರಲ್ಲ.
ಆದರೆ, ಅದಕ್ಕಿಂತ ಆಚೆ ಯಾರಾದರೂ ಬಯಸುತ್ತಾರಾದರೆ ಅವರು ಮೇರೆ ಮೀರಿದವರು.
ಅವರು ತಮ್ಮಲ್ಲಿರಿಸಿದ ಅಮಾನತುಗಳನ್ನು ಮತ್ತು ತಮ್ಮ ವಾಗ್ದಾನಗಳನ್ನು ಪಾಲಿಸುವವರೂ ಆಗಿರುತ್ತಾರೆ.
ಅವರು ತಮ್ಮ ಸಾಕ್ಷ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ.
ಮತ್ತು ತಮ್ಮ ನಮಾಝ್‍ಗಳಲ್ಲಿ ಅವರು ಸೂಕ್ಷ್ಮತೆ ಪಾಲಿಸುತ್ತಾರೆ.
ಇವರು (ಇಂತಹವರು) ಸ್ವರ್ಗೋದ್ಯಾನಗಳಲ್ಲಿ ಸನ್ಮಾನಿಸಲ್ಪಡುವರು.
ಆದುದರಿಂದ (ಸಂದೇಶವಾಹಕರೇ,) ಈ ಸತ್ಯನಿಷೇಧಿಗಳಿಗೆ ಏನಾಗಿದೆ? ಅವರು ನಿಮ್ಮತ್ತ ದೀರ್ಘ ನೋಟ ಬೀರುತ್ತಾರೆ. ತಮ್ಮ ಎಡಬಲಗಳಿಂದ ಗುಂಪುಗುಂಪಾಗಿ ಚದುರುತ್ತಿದ್ದಾರೆ.
ಅವರಲ್ಲಿ ಪ್ರತಿಯೊಬ್ಬನೂ ತಾನು ಸುಖಾನು ಭೂತಿಯ ಸ್ವರ್ಗೋದ್ಯಾನಗಳಲ್ಲಿ ಪ್ರವೇಶ ಗೊಳಿಸಲ್ಪಡುವೆನೆಂದು ಮೋಹಿಸುತ್ತಿರುವನೇ?
ಖಂಡಿತ ಅದು ಬೇಡ. ಅವರು ಬಲ್ಲ ವಸ್ತುವಿನಿಂದಲೇ ನಾವು ಅವರನ್ನು ಸೃಷ್ಟಿಸಿರುತ್ತೇವೆ.
ಉದಯ ಸ್ಥಾನಗಳ ಮತ್ತು ಅಸ್ತಮ ಸ್ಥಾನಗಳ ಒಡೆಯನ ಆಣೆ ಹಾಕುತ್ತೇನೆ. ಖಂಡಿತ ಅವರ ಸ್ಥಾನದಲ್ಲಿ ಅವರಿಗಿಂತ ಉತ್ತಮರನ್ನು ತರಲು ನಮಗೆ ಸಾಮಥ್ರ್ಯವಿದೆ. ನಾವು ಖಂಡಿತ ಪರಾಜಯಗೊಳ್ಳಲಾರೆವು.
ಆದುದರಿಂದ (ಪ್ರವಾದಿಯವರೇ) ಅವರಿಗೆ ತಾಕೀತು ನೀಡಲಾದ ಅವರ ಆ ದಿನಕ್ಕೆ ಹೋಗಿ ಮುಟ್ಟುವವರೆಗೂ ಅವರ ಪಾಪದಲ್ಲಿ ಮುಳುಗಲು ಮತ್ತು ಆಟವಾಡಿಕೊಂಡಿರಲು ಅವರನ್ನು ಬಿಟ್ಟು ಬಿಡಿರಿ.
ಅವರು ಗೋರಿಗಳಿಂದ ಹೊರಬಂದು ಧಾವಿಸುವ ಆ ದಿನ. ಅವರು ಒಂದು ನಾಟೆ ಗುರಿಯತ್ತ ಓಡುತ್ತಿರುವಂತಿರುತ್ತಾರೆ.
ಅವರ ಕಣ್ಣುಗಳು ಭಯವಿಹ್ವಲವಾಗಿರುವುವು. ನಿಂದ್ಯತೆಯು ಅವರನ್ನು ಆವರಿಸಿಕೊಂಡಿರುವುದು. ಅದುವೇ ಅವರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದ ದಿನ.