ಖಚಿತವಾದ ಆ ಮಹಾ ಘಟನೆ!
ಆ ಮಹಾ ಘಟನೆ ಏನದು?
ಆ ಖಚಿತವಾದ ಮಹಾ ಸಂಭವ ಏನೆಂಬುದು ತಮಗೆ ಗೊತ್ತೆ?
ಸಮೂದ್ ಮತ್ತು ಆದ್ ಸಮುದಾಯವು ಆ ಭಯಾನಕ ಘಟನೆಯನ್ನು ನಿರಾಕರಿಸಿಬಿಟ್ಟವು!
ಸಮೂದ್ ಸಮುದಾಯ ಒಂದು ಭೀಕರ ಶಿಕ್ಷೆಯ ಮೂಲಕ ನಾಶಗೊಳಿಸಲ್ಪಟ್ಟರು.
ಆದ್ ಜನಾಂಗದವರು ರುದ್ರನಾದದ ಒಂದು ಪ್ರಚಂಡ ಚಂಡಮಾರುತದಿಂದ ನಾಶವಾದರು.
ಅವನು (ಅಲ್ಲಾಹನು) ಅದನ್ನು ನಿರಂತರ ಏಳು ರಾತ್ರೆ ಮತ್ತು ಎಂಟು ಹಗಲುಗಳ ಕಾಲ ಅವರ ಮೇಲೆ ಛೂ ಬಿಟ್ಟನು. ಅದರಿಂದಾಗಿ ಆ ಜನಾಂಗ ಖರ್ಜೂರದ ವೃಕ್ಷಗಳು ಬುಡಕಳಚಿ ಬಿದ್ದಂತೆ ಬಿದ್ದು ಕೊಂಡಿರುವುದನ್ನು ನಿನಗೆ ಕಾಣಬಹುದಾಗಿತ್ತು!
ಇನ್ನು ಅವರಿಗೆ ಏನಾದರೂ ಉಳಿದಿರುವುದು ತಮಗೆ ಕಾಣಿಸುತ್ತಿದೆಯೇ?
ಫಿರ್‍ಔನ್ ಮತ್ತು ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡುಗಳ ಜನರು ಮಹಾಪರಾಧವನ್ನು ಎಸಗಿದ್ದರು.
ಅವರೆಲ್ಲರೂ ತಮ್ಮ ಪ್ರಭುವಿನ ದೂತರನ್ನು ಧಿಕ್ಕರಿಸಿದರು. ಆಗ ಅವನು ಅವರನ್ನು ಅತ್ಯು ಗ್ರವಾಗಿ ಹಿಡಿದನು.
ಜಲವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿ ರಕ್ಷಿಸಿದ್ದೆವು .
ಅದನ್ನು ನಿಮ್ಮ ಪಾಲಿಗೆ ಒಂದು ಪಾಠ ಬೋಧಕ ಸ್ಮರಣೆಯಾಗಿ ಮಾಡಲು ಮತ್ತು ಕಿವಿಗೊಟ್ಟು ಆಲಿಸುವ ಕಿವಿಗಳು ಇದರ ನೆನಪನ್ನು ಅಚ್ಚಳಿಯದೆ ಉಳಿಸಲು.
ಮುಂದೆ ಒಂದೇ ಒಂದು ಬಾರಿ ಕಹಳೆಯನ್ನೂದಿದಾಗ!
ಹಾಗೂ ಭೂಮಿ ಮತ್ತು ಪರ್ವತಗಳನ್ನೆತ್ತಿ ಒಂದೇ ಏಟಿಗೆ ನುಚ್ಚುನೂರು ಮಾಡಲಾದಾಗ.
ಅಂದು, ಆ ಘಟನೆಯು ಸಂಭವಿಸಿ ಬಿಡುವುದು.
ಆಕಾಶವು ಬಿರಿಯುವುದು. ಅಂದು ಅದು ದುರ್ಬಲವಾಗಿರುವುದು.
ದೇವಚರರು ಅದರ ನಾನಾ ಅಂಚುಗಳಲ್ಲಿರುವರು. ಮತ್ತು ಅವರ ಮೇಲಕ್ಕೆ ತಮ್ಮ ಪ್ರಭುವಿನ ಅರ್ಶ್‍ನ್ನು ಎಂಟು ಮಲಕ್‍ಗಳು ಹೊತ್ತಿರುವರು.
ಅದು ನಿಮ್ಮನ್ನು (ಅಲ್ಲಾಹನ ಸನ್ನಿಧಿಯಲ್ಲಿ) ಪ್ರದರ್ಶಿಸಲ್ಪಡುವ ದಿನವಾಗಿರುವುದು. ಯಾವ ರಹಸ್ಯವೂ ನಿಮ್ಮಿಂದ ಅಡಗಿರಲಾರದು.
ಅಂದು ಯಾವನ ಕರ್ಮಗ್ರಂಥವನ್ನು ಅವನ ಬಲಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು; `ಇದೋ ನನ್ನ ಕರ್ಮಗ್ರಂಥ. ಒಮ್ಮೆ ಹಿಡಿದುಕೊಂಡು ಓದಿ ನೋಡಿರಿ.
ನನಗೆ ವಿಚಾರಣೆಯನ್ನು ಎದುರಿಸಲಿಕ್ಕಿದೆ ಎಂದು ನಾನು ಮೊದಲೇ ನಂಬಿಕೊಂಡಿದ್ದೆ.
ಆಗ ಅವನು ಸಂತೃಪ್ತಿಯ ಜೀವನದಲ್ಲಿರುವನು.
ಅಂದರೆ, ಅತ್ಯುನ್ನತ ಸ್ವರ್ಗೋದ್ಯಾನದಲ್ಲಿ.
ಅದರ ಹಣ್ಣುಗಳ ಗೊಂಚಲುಗಳು (ಕೊಯ್ದು ತೆಗೆಯಲು ಸುಲಭವಾಗುವಂತೆ) ಅವರಿಗೆ ನಿಕಟವಾಗಿರುವುವು.
ಕಳೆದು ಹೋದ ದಿನಗಳಲ್ಲಿ ನೀವು ಮಾಡಿರುವ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ. (ಎಂದು ಅವರೊಂದಿಗೆ ಹೇಳಲಾಗುವುದು.)
ಯಾವನ ಕರ್ಮಗ್ರಂಥವನ್ನು ಅವನ ಎಡಗೈಯಲ್ಲಿ ಕೊಡಲಾಗುವುದೋ ಅವನು ಹೇಳುವನು, ‘ಅಯ್ಯೋ! ನನ್ನ ಕರ್ಮಗ್ರಂಥವನ್ನು ನನಗೆ ಕೊಡದೆ ಇರುತ್ತಿದ್ದರೆ !
ಮತ್ತು ನನ್ನ ವಿಚಾರಣಾ ಫಲವೇನೆಂದು ನನಗೆ ತಿಳಿಯದೆ ಇರುತ್ತಿದ್ದರೆ ಉತ್ತಮವಿತ್ತು.
ಅಯ್ಯೋ ನನ್ನ ಮರಣವೇ ಅಂತಿಮವಾಗಿರುತ್ತಿದ್ದರೆ (ಉತ್ತಮವಿತ್ತು.)
ನನ್ನ ಸಂಪತ್ತು (ಇಂದು) ನನಗೇನೂ ಪ್ರಯೋಜನ ಕೊಡಲಿಲ್ಲ.
ನನ್ನ ಅಧಿಕಾರವೆಲ್ಲವೂ ನನಗೆ ನಷ್ಟಗೊಂಡಿತು.
(ದೇವಚರರೊಂದಿಗೆ ಅಲ್ಲಾಹು ಹೇಳುವನು) ಅವನನ್ನು ಹಿಡಿಯಿರಿ ಮತ್ತು ಅವನಿಗೆ (ಕೈ, ಕೊರಳಿಗೆ) ಬೇಡಿ ತೊಡಿಸಿರಿ.
ಅನಂತರ ಅವನನ್ನು ನರಕದೊಳಕ್ಕೆ ಪೂರ್ಣವಾಗಿ ಮುಳುಗಿಸಿರಿ.
ಆ ಬಳಿಕ ಅವನನ್ನು ಎಪ್ಪತ್ತು ಮೊಳ ಉದ್ದದ ಸಂಕೋಲೆಯೊಳಕ್ಕೆ ಬಿಗಿಯಿರಿ.
ಅವನು ಮಹಾನನಾದ ಅಲ್ಲಾಹನ ಮೇಲೆ ವಿಶ್ವಾ ಸವಿರಿಸುತ್ತಿರಲಿಲ್ಲ.
ಮತ್ತು ಬಡವರಿಗೆ (ಮಿಸ್ಕೀನರಿಗೆ) ಆಹಾರ ಕೊಡಲು ಪ್ರೇರೇಪಿಸುತ್ತಲೂ ಇರಲಿಲ್ಲ.
ಆದುದರಿಂದ ಇಂದು ಅವನಿಗೆ ಇಲ್ಲಿ ಬಂಧುಗಳು ಯಾರೂ ಇಲ್ಲ.
ಗಿಸ್ಲೀನ್ (ನರಕದಲ್ಲಿ ಮಡುಗಟ್ಟುವ ರಕ್ತ, ಕೀವು, ಕೊಳಚೆ ನೀರುಗಳ ಸಂಗ್ರಹ) ಹೊರತು ಅವನಿಗೆ ಬೇರೆ ಯಾವ ಆಹಾರವೂ ಇಲ್ಲ.
ಅದನ್ನು ಪಾಪಿಗಳ ಹೊರತು ಇನ್ನಾರೂ ತಿನ್ನುವುದಿಲ್ಲ.
ನೀವು ಕಾಣುವ ವಸ್ತುಗಳ ಮತ್ತು ಕಾಣದ ವಸ್ತುಗಳ ಆಣೆ ಹಾಕುತ್ತೇನೆ!
ಇದು (ಖುರ್‍ಆನ್) ಓರ್ವ ಗೌರವಾನ್ವಿತ ದೂತರ ಮಾತಾಗಿದೆ.
(ಇದು) ಯಾವುದೇ ಒಂದು ಕವಿಯ ಮಾತಲ್ಲ. ನೀವು ಸ್ವಲ್ಪ ಮಾತ್ರವೇ ವಿಶ್ವಾಸ ಹೊಂದಿರುತ್ತೀರಿ.
ಇದೊಂದು ಜ್ಯೋತಿಷಿಯ ಮಾತೂ ಅಲ್ಲ. ನೀವು ಅತ್ಯಲ್ಪವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ.
ಇದು ಸರ್ವಲೋಕ ಪಾಲಕ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.
ಪ್ರವಾದಿಯು ನಮ್ಮ ಮೇಲೆ (ನಾವು ಹೇಳದ) ಯಾವುದೇ ಮಾತುಗಳನ್ನು ಸ್ವಂತದ್ದಾಗಿ ರಚಿಸಿ ಹೇಳಿರುತ್ತಿದ್ದರೆ,
ಖಂಡಿತ ನಾವು ನಮ್ಮ ಬಲದಿಂದ ಅವರಿಗೆ ಶಿಕ್ಷೆ ಯನ್ನು ಕೊಡುತ್ತಿದ್ದೆವು.
ಮತ್ತು ಅವರ ಹೃದಯದ ಜೀವನಾಡಿಯನ್ನು ಕತ್ತರಿಸಿ ಹಾಕುತ್ತಿದ್ದೆವು.
ಆಗ, ನಿಮ್ಮ ಪೈಕಿ ಯಾರಿಗೂ ಅವರಿಂದ ನನ್ನ ಶಿಕ್ಷೆಯನ್ನು ತಡೆಯಲು ಸಾಧ್ಯವಿರುತ್ತಿರಲಿಲ್ಲ.
ಇದು (ಖುರ್‍ಆನ್) ದೇವಭಯವುಳ್ಳವರಿ ಗೊಂದು ಉಪದೇಶವಾಗಿದೆ.
ನಿಮ್ಮ ಪೈಕಿ ಇದನ್ನು (ಖುರ್‍ಆನನ್ನು) ನಿಷೇಧಿಸಿ ತಳ್ಳುವವರಿದ್ದಾರೆಂಬುದನ್ನು ನಾವು ಬಲ್ಲೆವು.
ಸತ್ಯನಿಷೇಧಿಗಳಿಗೆ ಖಂಡಿತವಾಗಿಯೂ ಇದು ಖೇದವೇ ಆಗಿರುತ್ತದೆ.
ಖಂಡಿತ ಇದು ಅತ್ಯಂತ ಖಚಿತವಾದ ಸತ್ಯವಾಗಿದೆ.
ಆದುದರಿಂದ (ಸಂದೇಶವಾಹಕರೇ,) ತಾವು ತಮ್ಮ ಮಹೋನ್ನತ ಪ್ರಭುವಿನ ನಾಮವನ್ನು ಕೊಂಡಾಡಿರಿ.