ಆಧಿಪತ್ಯ ಯಾವನ ಕೈವಶದಲ್ಲಿದೆಯೋ ಅವನು ಪರಮ ಪರಿಶುದ್ಧನು. ಅವನು ಸಕಲ ವಸ್ತುವಿನ ಮೇಲೆ ಸರ್ವ ಸಮರ್ಥನು .
ನಿಮ್ಮ ಪೈಕಿ ಯಾರು ಹೆಚ್ಚು ಚೆನ್ನಾಗಿ ಕರ್ಮಾಚರಣೆ ಮಾಡುತ್ತಾನೆ ಎಂದು ಪರೀಕ್ಷಿಸಿ ನೋಡಲಿಕ್ಕಾಗಿ ಅವನು ಮರಣವನ್ನೂ ಜೀವನವನ್ನೂ ಸೃಷ್ಟಿಸಿದವನಾಗಿದ್ದಾನೆ. ಅವನು ಅಜೇಯನೂ ಕ್ಷಮಾಶೀಲನೂ ಆಗಿರುತ್ತಾನೆ.
ಅಂತಸ್ತುಗಳಾಗಿ ಸಪ್ತ ಗಗನಗಳನ್ನು ಉಂಟು ಮಾಡಿದವನು ಅವನೇ. ಕರುಣಾಮಯಿಯ ಸೃಷ್ಟಿಯಲ್ಲಿ ನೀನು ಯಾವುದೇ ಅಸಂಗತವನ್ನು ಕಾಣಲಾರೆ. (ಬೇಕಿದ್ದರೆ) ಇನ್ನೊಮ್ಮೆ ನೋಡು, ನಿನಗೆಲ್ಲಾದರೂ ಬಿರುಕು ಕಾಣಿಸುತ್ತಿದೆಯೇ ?
ಮತ್ತೆ ಎರಡು ಬಾರಿ ಆವರ್ತಿಸಿ ನೋಡು. ದೃಷ್ಟಿಯು ಸೋತು ಹತಾಶವಾಗಿ ನಿನ್ನಲ್ಲಿಗೆ ಮರಳಿ ಬರುವುದು.
ಅತಿ ಸಮೀಪದ ಆಕಾಶವನ್ನು ನಾವು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರನ್ನು ಹೊಡೆದಟ್ಟುವ ಸಾಧನವಾಗಿ ಮಾಡಿದ್ದೇವೆ . ನಾವು ಆ ಶೈತಾನರಿಗಾಗಿ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುತ್ತೇವೆ.
ತಮ್ಮ ಪ್ರಭುವನ್ನು ನಿಷೇಧಿಸುವವರಿಗೆ ನರಕ ಶಿಕ್ಷೆ ಇದೆ ಮತ್ತು ಅದು ಅತ್ಯಂತ ಕೆಟ್ಟ ಸಂಕೇತವೇ ಆಗಿದೆ.
ಅವರು ಆ ನರಕಕ್ಕೆ ಎಸೆಯಲ್ಪಡುವಾಗ ಅದರಿಂದ ಒಂದು ಭೋರ್ಗರೆತವನ್ನು ಕೇಳುವರು. ಅಲ್ಲದೆ ಅದು ಕುದಿಯುತ್ತಲಿರುವುದು.
ಸಿಟ್ಟಿನಿಂದ ಅದು ಸಿಡಿಯುವಂತಿರುವುದು. ಪ್ರತಿ ಬಾರಿಯೂ ಒಂದೊಂದು ಕೂಟ ಜನರನ್ನು ಅದರೊಳಗೆ ಹಾಕಲ್ಪಡುವಾಗಲೆಲ್ಲಾ ಅದರ ಕಾವಲುಗಾರರು ಅವರೊಡನೆ, ‘ನಿಮ್ಮ ಬಳಿಗೆ ಎಚ್ಚರಿಕೆ ಕೊಡುವವನಾರೂ ಬಂದಿರಲಿಲ್ಲವೇ ?’ ಎಂದು ಕೇಳುವರು.
ಆಗ ಅವರು ಹೇಳುವರು; ಹೌದು, ಎಚ್ಚರಿಕೆ ಕೊಡುವವರು ಬಂದಿದ್ದರು. ಆದರೆ ನಾವು ಅವರನ್ನು ಸುಳ್ಳಾಗಿಸಿದೆವು ಮತ್ತು ಅಲ್ಲಾಹನು ಏನನ್ನೂ ಅವತೀರ್ಣಗೊಳಿಸಿಲ್ಲ, ನೀವು ದೊಡ್ಡ ದಾರಿಗೇಡಿನಲ್ಲಿ ಬಿದ್ದಿರುವಿರಿ’ ಎಂದು ನಾವು (ಅವರಲ್ಲಿ) ಹೇಳಿದೆವು.
ಮತ್ತು ಅವರು ಹೀಗೂ ಹೇಳುವರು; ‘ನಾವು (ದೂತರ ಮಾತು) ಕೇಳಿರುತ್ತಿದ್ದರೆ ಮತ್ತು ಗ್ರಹಿಸಿರುತ್ತಿದ್ದರೆ ನಾವು ಧಗಧಗಿಸುವ ಜನರಲ್ಲಿ ಸೇರುತ್ತಿರಲಿಲ್ಲ’.
ಹಾಗೆ ಅವರು ತಮ್ಮ ಅಪರಾಧವನ್ನು ತಾವೇ ಒಪ್ಪಿಕೊಳ್ಳುವರು. ನರಕವಾಸಿಗಳು (ಅಲ್ಲಾಹನ ಅನುಗ್ರಹದಿಂದ) ಎಷ್ಟು ವಿದೂರ !
ತಮ್ಮ ಪ್ರಭುವನ್ನು ಅದೃಶ್ಯವಾಗಿ ಭಯಪಡುವವರಿಗೆ ಖಂಡಿತವಾಗಿಯೂ ಕ್ಷಮಾದಾನ ಮತ್ತು ದೊಡ್ಡ ಪ್ರತಿಫಲವಿದೆ.
ನೀವು ರಹಸ್ಯವಾಗಿ ಮಾತನಾಡಿರಿ, ಬಹಿರಂಗವಾಗಿ ಮಾತನಾಡಿರಿ, (ಹೇಗಿದ್ದರೂ) ಅವನು ಹೃದ್ಗತಗಳನ್ನು ಬಲ್ಲ ಸರ್ವಜ್ಞಾನಿಯಾಗಿರುತ್ತಾನೆ.
ಸೃಷ್ಟಿಸಿದವನು ಅರಿಯದಿರುವನೇ ? ಅವನು ಅತ್ಯಂತ ಸೂಕ್ಷ್ಮಜ್ಞನೂ ವಿವರಪೂರ್ಣನೂ ಆಗಿರುತ್ತಾನೆ.
ನಿಮಗೆ ಭೂಮಿಯನ್ನು ಅಧೀನಗೊಳಿಸಿ ಕೊಟ್ಟವನು ಅವನೇ. ಆದುದರಿಂದ ನೀವು ಅದರ ಪಾಶ್ರ್ವಗಳಲ್ಲಿ ನಡೆದಾಡಿರಿ ಮತ್ತು ಅಲ್ಲಾಹನ ಆಹಾರದಿಂದ ನೀವು ಭುಜಿಸಿರಿ. ಪುನಃ (ಜೀವಂತರಾಗಿ) ಮರಳುವುದು ಅವನ ಬಳಿಗೇ ಆಗಿದೆ.
ಆಕಾಶದಲ್ಲಿ (ಆಧಿಪತ್ಯ) ಇರುವವನು ಭೂಮಿಯಲ್ಲಿ ನಿಮ್ಮನ್ನು ಹುಗಿದು ಬಿಡುವ ಕುರಿತು ನೀವು ನಿರ್ಭೀತರಾಗಿರುವಿರಾ? ಆಗ ಅದು (ಭೂಮಿ) ನಡುಗುತ್ತಲಿರುತ್ತವೆ.
ಅಥವಾ ಆಕಾಶದಲ್ಲಿ (ಆಧಿಪತ್ಯ) ಹೊಂದಿರುವನು ನಿಮ್ಮ ಮೇಲೆ ಒಂದು ಕಲ್ಲು ಮಳೆಯನ್ನು ಕಳುಹಿಸಿ ಬಿಡುವ ಕುರಿತು ನೀವು ನಿರ್ಭಿತರಾಗಿರುವಿರಾ? ನನ್ನ ಮುನ್ನೆಚ್ಚರಿಕೆ ಹೇಗಿರುತ್ತದೆಂಬುದು ಆಗ ನಿಮಗೆ ತಿಳಿದು ಬರುವುದು.
ಇವರಿಗಿಂತ ಮುಂಚೆ ಗತಿಸಿ ಹೋದವರು ಸತ್ಯವನ್ನು ಸುಳ್ಳಾಗಿಸಿದ್ದರು. ಆಗ ನನ್ನ ಪ್ರತಿಷೇಧವು ಹೇಗಿತ್ತು ?
ತಮ್ಮ ಮೇಲೆ ಪಕ್ಷಿಗಳು ರೆಕ್ಕೆ ಬಿಚ್ಚಿಕೊಂಡೂ ಮಡಚಿಕೊಂಡೂ ಹಾರಾಡುತ್ತಿರುವುದನ್ನು ಅವರು ನೋಡುತ್ತಿಲ್ಲವೇ ? ಪರಮದಯಾಮಯನ ಹೊರತು ಅವುಗಳನ್ನು ಹಿಡಿದಿರಿಸಿಕೊಳ್ಳುವವರು ಬೇರಾರೂ ಇಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಕಾಣುವವನೇ ಆಗಿದ್ದಾನೆ.
ಅದಲ್ಲ, ಪರಮ ದಯಾಮಯನ ಹೊರತು ನಿಮಗೆ ಸಹಾಯ ಮಾಡಬಲ್ಲಂತಹ ಒಂದು ಸೈನ್ಯವಾಗಿ ನಿಮಗೆ ಯಾರಿದ್ದಾರೆ? ಸತ್ಯನಿಷೇಧಿಗಳು ಖಂಡಿತ ಮೋಸಕ್ಕೊಳಗಾಗದೇ ಇಲ್ಲ.
ಅಥವಾ ಪರಮ ದಯಾಮಯನು ತನ್ನ ಜೀವನಾಧಾರಗಳನ್ನು ತಡೆ ಹಿಡಿದರೆ, ನಿಮಗೆ ಜೀವನಾಧಾರ ನೀಡಬಲ್ಲವನು ಯಾರು? ಆದರೆ ಅವರು ದರ್ಪದಲ್ಲೂ ಸತ್ಯದಿಂದ ದೂರ ಚದುರುವುದರಲ್ಲೂ ನಿರತ ರಾಗಿದ್ದಾರೆ.
ತಲೆಕೆಳಗಾಗಿ ನಡೆಯುತ್ತಿರುವವನೋ ಅಥವಾ ನೇರವಾಗಿ ಸಮತಟ್ಟಾದ ಮಾರ್ಗದಲ್ಲಿ ನಡೆಯುತ್ತಿರುವವನೋ? ಯಾವನು ಸನ್ಮಾರ್ಗ ಪ್ರಾಪ್ತನು?
(ಸಂದೇಶವಾಹಕರೇ), ಹೇಳಿರಿ; ನಿಮ್ಮನ್ನು ಸೃಷ್ಟಿಸಿದವನೂ ನಿಮಗೆ ಶ್ರವಣ ಮತ್ತು ದೃಷ್ಟಿಗಳನ್ನು ಹಾಗೂ ಹೃದಯಗಳನ್ನು ನೀಡಿದವನೂ ಅವನೇ ಆಗಿರುವನು. ಆದರೆ, ನೀವು ಸ್ವಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ’.
ಹೇಳಿರಿ; ‘ನಿಮನ್ನು ಭೂಮಿಯ ಮೇಲೆ ಸೃಷ್ಟಿಸಿ ಬೆಳೆಸಿದವನು ಅವನೇ (ಅಲ್ಲಾಹನೇ). ಅವನ ಕಡೆಗೇ ನೀವು ಒಟ್ಟುಗೂಡಿಸಲ್ಪಡುವಿರಿ’.
ಈ ವಾಗ್ದಾನವು ಪೂರ್ತಿ ಗೊಳ್ಳುವುದು ಯಾವಾಗ, ನೀವು ನಿಜ ಹೇಳುವುದಾಗಿದ್ದರೆ ಎಂದು ಅವರು ಕೇಳುತ್ತಾರೆ.
ಹೇಳಿರಿ; (ಪ್ರವಾದಿಯವರೇ,) ಅದರ ಜ್ಞಾನ ಅಲ್ಲಾಹನಿಗೆ ಮಾತ್ರವಿದೆ. ನಾನು ಸ್ಪಷ್ಟವಾದ ಎಚ್ಚರಿಕೆ ನೀಡುವವನು ಮಾತ್ರ.
ಮುಂದೆ ಶಿಕ್ಷೆಯು ಸಮೀಪವಾಗಿರುವುದನ್ನು ಅವರು ಕಂಡಾಗ, ಸತ್ಯನಿಷೇಧಿಗಳ ಮುಖಗಳಿಗೆ ಮ್ಲಾನತೆ ಬಾಧಿಸುವುದು. ನೀವು (ಇಲ್ಲವೆಂದು) ವಾದಿಸುತ್ತಿದ್ದ ವಿಚಾರವು ಇದುವೇ ಆಗಿದೆ’ ಎಂದು (ಅವರಿಗೆ) ಹೇಳಲಾಗುವುದು.
ಹೇಳಿರಿ; (ಪ್ರವಾದಿಯವರೇ,) ನೀವು ಯೋಚಿಸಿದ್ದೀರಾ? ನನ್ನನ್ನು ಮತ್ತು ನನ್ನ ಜೊತೆಗಿರುವವರನ್ನು ಅಲ್ಲಾಹನು ಶಿಕ್ಷಿಸಿದರೆ ಅಥವಾ ನಮ್ಮಲ್ಲಿ ಕರುಣೆ ತೋರಿಸಿದರೆ (ಈ ಎಡರಡರಲ್ಲೂ ನಿಮಗೇನು ಲಾಭ?) ವೇದನಾಜನಕ ಶಿಕ್ಷೆಯಿಂದ ಸತ್ಯನಿಷೇಧಿಗಳನ್ನು ಯಾರು ರಕ್ಷಿಸುವರು?’
ಹೇಳಿರಿ; ಅವನು ಪರಮ ಕಾರುಣಿಕನು. ನಾವು ಅವನಲ್ಲಿ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಆದರೆ ಸ್ಪಷ್ಟ- ಪಥಭ್ರಷ್ಟತೆಯಲ್ಲಿರುವವನು ಯಾರೆಂದು ಸದ್ಯದಲ್ಲೇ ನಿಮಗೆ ತಿಳಿದುಬರುವುದು’.
(ಪ್ರವಾದಿಯವರೇ,) ಹೇಳಿರಿ; ನಿಮ್ಮ ನೀರು ನೆಲದೊಳಕ್ಕೆ ಇಂಗಿ ಹೋದರೆ, ಹರಿಯುವ ಚಿಲುಮೆಗಳನ್ನು ನಿಮಗೆ ತಂದು ಕೊಡುವವನು ಯಾರೆಂದು ನೀವು ಹೇಳಬಲ್ಲಿರಾ?’.