All Islam Directory
1

ಓ ಪ್ರವಾದಿವರ್ಯರೇ, ತಾವು ತಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸಿಕೊಂಡು ಅಲ್ಲಾಹನು ತಮಗೆ ಹಲಾಲ್ (ಧರ್ಮಸಮ್ಮತ)ಗೊಳಿಸಿರುವ ವಸ್ತುವನ್ನು ತಾವೇಕೆ ಹರಾಮ್ (ನಿಷಿದ್ಧ) ಗೊಳಿಸುತ್ತೀರಿ? ಅಲ್ಲಾಹನು ಕ್ಷಮಾದಾನಿಯೂ ಕೃಪಾನಿಧಿಯೂ ಆಗಿರುತ್ತಾನೆ.

2

ಅಲ್ಲಾಹನು ನಿಮ್ಮ ಶಪಥಗಳ ಪರಿಹಾರ ನಿಯಮವನ್ನು ನಿಶ್ಚಯಿಸಿರುತ್ತಾನೆ. ಅಲ್ಲಾಹನೇ ತಮ್ಮ ಯಜಮಾನನು. ಅವನು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ.

3

ಪ್ರವಾದಿಯು ತಮ್ಮ ಓರ್ವ ಪತ್ನಿಯೊಡನೆ ಒಂದು ಸಮಾಚಾರವನ್ನು ರಹಸ್ಯವಾಗಿ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ತರುವಾಯ ಆ ಪತ್ನಿಯು ಆ ರಹಸ್ಯವನ್ನು (ಬೇರೊಬ್ಬರಲ್ಲಿ) ಬಯಲುಗೊಳಿಸಿ ದಾಗ ಮತ್ತು ಅಲ್ಲಾಹನು ಪ್ರವಾದಿಗೆ ಈ ಸುದ್ದಿಯನ್ನು ತಿಳಿಸಿದಾಗ, ಅವರು ಅದರ ಸ್ಪಲ್ಪಾಂಶವನ್ನು ತಿಳಿಸಿದರು ಮತ್ತು ಸ್ವಲ್ಪಾಂಶವನ್ನು ಕಡೆಗಣಿಸಿದರು. ಹಾಗೆ ಪ್ರವಾದಿಯವರು ಆ ಪತ್ನಿಗೆ ಆ ಸುದ್ದಿಯನ್ನು ತಿಳಿಸಿದಾಗ ಆ ಪತ್ನಿ; ``ತಮಗೆ ಈ ಸುದ್ದಿ ತಿಳಿಸಿದವರು ಯಾರು?’’ ಎಂದು ಕೇಳಿದರು. ಪ್ರವಾದಿಯವರು, ``ನನಗೆ ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನು ತಿಳಿಸಿ ಕೊಟ್ಟನು’ ಎಂದರು .

4

ನೀವಿಬ್ಬರೂ ಅಲ್ಲಾಹನೆಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೀರಾದರೆ (ಉತ್ತಮ). ಏಕೆಂದರೆ, ನಿಮ್ಮಿ ಬ್ಬರ ಹೃದಯಗಳು (ಕೆಡುಕಿಗೆ) ವಾಲಿಬಿಟ್ಟಿವೆ. ಇನ್ನು ನೀವಿಬ್ಬರೂ ಪ್ರವಾದಿಯ ವಿರುದ್ಧ ಪರಸ್ಪರ ಸಹಕರಿಸಿದರೆ, (ನೆನಪಿರಲಿ) ಅಲ್ಲಾಹನು ಅವರ ಸಂರಕ್ಷನಾಗಿದ್ದಾನೆ ಮತ್ತು ಜಿಬ್‍ರೀಲರು, ಎಲ್ಲ ಸಜ್ಜನ ಸತ್ಯವಿಶ್ವಾಸಿಗಳು ಮತ್ತು ತದನಂತರ ಎಲ್ಲ ದೇವಚರರೂ (ಪ್ರವಾದಿಯ) ಸಹಾಯಿಗಳಾಗಿರುವರು.

5

(ಪ್ರವಾದಿ ಪತ್ನಿಯರೇ!) ಪ್ರವಾದಿಯು ನಿಮ್ಮನ್ನು ತಲಾಖ್ ಹೇಳಿದರೆ ಅಲ್ಲಾಹನು ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ನೈಜ ಮುಸ್ಲಿಮರೂ ಸತ್ಯವಿಶ್ವಾಸವುಳ್ಳವರೂ, ಭಯಭಕ್ತಿಯುಳ್ಳವರೂ, ಪಶ್ಚಾತ್ತಾಪಪಡುವವರೂ ಆರಾಧನಾಶೀಲೆಯರೂ ಉಪವಾಸವೃತ ಆಚರಿಸುವವರೂ ಆದ - ವಿಧವೆಯರೂ, ಕನ್ಯೆಯರೂ ಆದ ಪತ್ನಿಯರನ್ನು ದಯಪಾಲಿಸಬಹುದು.

6

ಸತ್ಯವಿಶ್ವಾಸಿಗಳೇ, ನೀವು ಸ್ವಶರೀರಗಳನ್ನೂ, ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಮನುಷ್ಯರು ಮತ್ತು ಕಲ್ಲುಗಳು ಅದರ ಇಂಧನವಾಗಿರುವುದು. ಅದರ ಮೇಲೆ ಅತ್ಯಂತ ಕಠೋರ ಮತ್ತು ಬಲಾಡ್ಯರಾದ ದೇವಚರರು ನಿಯುಕ್ತರಾಗಿರುವರು. ಅವರೆಂದೂ ಅಲ್ಲಾಹನ ಅಜ್ಞೋಲ್ಲಂಘನೆ ಮಾಡುವುದಿಲ್ಲ. ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪಣೆಯನ್ನೂ ಅವರು ಪಾಲಿಸುತ್ತಾರೆ.

7

ಸತ್ಯನಿಷೇಧಿಗಳೇ, ನೀವಿಂದು ನೆಪಗಳನ್ನು ಹೇಳ ಬೇಡಿರಿ. ನೀವು ಮಾಡುತ್ತಿದ್ದ ಕರ್ಮಗಳಿಗೆ ತಕ್ಕುದಾದ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ. (ಎಂದು ಸತ್ಯನಿಷೇಧಿಗಳೊಂದಿಗೆ ಹೇಳಲಾಗುವುದು.)

8

ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನೆಡೆಗೆ ನಿಷ್ಕಳಂಕವಾದ ಪಶ್ಚಾತ್ತಾಪ ಕೈಗೊಂಡು ಮರಳಿರಿ. ನಿಮ್ಮ ಪ್ರಭು ನಿಮ್ಮ ದೋಷಗಳನ್ನು ಅಳಿಸಬಹುದು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ನಿಮ್ಮನ್ನು ಪ್ರವೇಶಗೊಳಿಸಲೂಬಹುದು. ಅದು ಅಲ್ಲಾಹನು ತನ್ನ ಪ್ರವಾದಿಯನ್ನಾಗಲಿ, ಅವರೊಂದಿಗೆ ವಿಶ್ವಾಸವಿರಿಸಿದ ಜನರನ್ನಾಗಲಿ ಅವಮಾನಗೊಳಿಸದಂತಹ ದಿನವಾಗಿರುವುದು. ಅವರ ಪ್ರಕಾಶವು ಅವರ ಮುಂದಿನಿಂದಲೂ ಅವರ ಬಲಬದಿಯಲ್ಲೂ ಚಲಿಸುತ್ತಿರುವುದು. ಅವರು, ನಮ್ಮ ಪ್ರಭು, ನಮ್ಮ ಪ್ರಕಾಶವನ್ನು ನಮಗೆ ನೀನು ಪರಿಪೂರ್ಣಗೊಳಿಸಿಕೊಡು ಮತ್ತು ನಮ್ಮನ್ನು ಕ್ಷಮಿಸು, ನೀನು ಸಕಲ ವಸ್ತುವಿನ ಮೇಲೆ ಸರ್ವ ಸಮರ್ಥನು ಎಂದು ಹೇಳುತ್ತಿರುವರು.

9

ಓ ಪ್ರವಾದಿಯರೇ, ಸತ್ಯನಿಷೇಧಿಗಳೊಂದಿಗೂ ಕಪಟವಿಶ್ವಾಸಿಗಳೊಂದಿಗೂ ಸಮರ ಹೂಡಿರಿ. ಅವರೊಡನೆ ಕಠಿಣವಾಗಿ ವರ್ತಿಸಿರಿ. ನರಕವೇ ಅವರ ನಿವಾಸವಾಗಿದೆ. ಅದು ಅತ್ಯಂತ ಕೆಟ್ಟ ನಿರ್ಗಮನ ಕೇಂದ್ರವಾಗಿದೆ.

10

ಅಲ್ಲಾಹನು ನೂಹರ ಪತ್ನಿಯನ್ನು ಮತ್ತು ಲೂಥರ ಪತ್ನಿಯನ್ನು ಸತ್ಯನಿಷೇಧಿಗಳಿಗೆ ಉದಾ ಹರಣೆಯಾಗಿ ಮುಂದಿಡುತ್ತಾನೆ. ಆ ಇಬ್ಬರು ಸ್ತ್ರೀಯರು ನಮ್ಮ ದಾಸರ ಪೈಕಿ ಇಬ್ಬರು ಸಜ್ಜನ ದಾಸರ ದಾಂಪತ್ಯ ಬಂಧನದಲ್ಲಿದ್ದರು. ಅವರೀರ್ವರೂ ತಮ್ಮ ಪತಿಯರನ್ನು ವಂಚಿಸಿದರ . ಆ ಇಬ್ಬರು ಸ್ತ್ರೀಯರನ್ನೂ ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡಲು ಆ ಪ್ರವಾದಿಗಳಿಗೆ ಸಾಧ್ಯವಾಗಲಿಲ್ಲ. ‘ಅಗ್ನಿಯಲ್ಲಿ ಬೀಳುವವರ ಜೊತೆಗೆ ನೀವಿಬ್ಬರೂ ಬೀಳಿರಿ’ ಎಂದು ಹೇಳಲಾಯಿತು.

11

ಸತ್ಯವಿಶ್ವಾಸಿಗಳಿಗೆ ಉದಾಹರಣೆಯಾಗಿ ಫಿರ್ ಔನನ ಪತ್ನಿಯನ್ನು ಅಲ್ಲಾಹನು ಮುಂದಿಡು ತ್ತಾನೆ. ಆಕೆ ಹೇಳಿದ ಸಂದರ್ಭ; ನನ್ನ ಪ್ರಭೂ, ನನಗಾಗಿ ನಿನ್ನ ಬಳಿ ಸ್ವರ್ಗದಲ್ಲೊಂದು ಭವನವನ್ನು ನಿರ್ಮಿಸಿಕೊಡು ಮತ್ತು ನನ್ನನ್ನು ಫಿರ್ ಔನನಿಂದಲೂ ಅವನ ಕರ್ಮಗಳಿಂದಲೂ ರಕ್ಷಿಸು ಮತ್ತು ಅಕ್ರಮಿ ಜನಾಂಗದಿಂದ ನನ್ನನ್ನು ಪಾರುಗೊಳಿಸು’.

12

ಅವನು ಇಮ್ರಾನರ ಪುತ್ರಿ ಮರ್ಯಮರನ್ನೂ (ಸತ್ಯವಿಶ್ವಾಸಿಗಳಿಗೆ ಉದಾಹರಣೆಯಾಗಿ) ಮುಂದಿಡುತ್ತಾನೆ. ಅವರು ತಮ್ಮ ಶೀಲವನ್ನು ಕಾಪಾಡಿಕೊಂಡಿದ್ದರು. ಆಗ ನಾವು ಅವರೊಳಗೆ ನಮ್ಮ ಆತ್ಮದಿಂದ ಊದಿದೆವು. ಆಕೆ ತಮ್ಮ ಪ್ರಭುವಿನ ವಚನಗಳಲ್ಲೂ, ಅವನ ಗ್ರಂಥಗಳಲ್ಲೂ ವಿಶ್ವಾಸವಿರಿಸಿದ್ದರು. ಮತ್ತು ಆಕೆ ಭಕ್ತಿಯುಳ್ಳವರಲ್ಲಿ ಒಳಪಟ್ಟವರಾದರು .