ಆಲ್ ಇಸ್ಲಾಂ ಲೈಬ್ರರಿ
1

ಅಂತ್ಯ ಸಮಯ ಸನ್ನಿಹಿತವಾಯಿತು ಮತ್ತು ಚಂದ್ರನು ಹೋಳಾದನು.

2

ಆದರೆ ಯಾವ ದೃಷ್ಟಾಂತವನ್ನು ಕಂಡರೂ ಅವರು ವಿಮುಖರಾಗುತ್ತಾರೆ ಮತ್ತು ಇದೊಂದು ಸ್ಥಾಯೀ ಮಾಟಗಾರಿಕೆ ಎನ್ನುತ್ತಾರೆ.

3

ಅವರು (ಪ್ರವಾದಿಯವರನ್ನು) ಸುಳ್ಳಾಗಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನೇ ಅನುಸರಿಸಿದರು. ಎಲ್ಲ ಕಾರ್ಯಗಳು ಸ್ಥಿರ ನಿಶ್ಚಿತವೇ ಆಗಿರುತ್ತದೆ.

4

(ದೇವ ನಿಷೇಧದಿಂದ) ತಡೆಯಬಲ್ಲಷ್ಟು ಪಾಠವುಳ್ಳ ವಾರ್ತೆಗಳು ಅವರಿಗೆ ಬಂದು ತಲುಪಿವೆ.

5

ಸಂಪೂರ್ಣವಾದ ತತ್ವ. (ಅವರ ಮುಂದೆ ಬಂದಿವೆ.) ಆದರೆ ಯಾವ ಎಚ್ಚರಿಕೆಯೂ ಅವರ ಮೇಲೆ ಪರಿಣಾಮ ಬೀರುವುದಿಲ್ಲ.

6

ಆದುದರಿಂದ (ಸಂದೇಶವಾಹಕರೇ,) ಅವರಿಂದ ವಿಮುಖರಾಗಿರಿ. ಕೂಗುವಾತನು ಒಂದು ಅತ್ಯಂತ ಅನಿಷ್ಟಕರ ವಿಚಾರದ ಕಡೆಗೆ ಕೂಗುವಂದು,

7

ಅವರು ತಲ್ಲಣಗೊಂಡ ದೃಷ್ಟಿಯೊಂದಿಗೆ ಕೂಟ ಚದುರಿದ ಕತ್ತರಿಗಿಳಿಗಳಂತೆ ತಮ್ಮ ಸಮಾಧಿಗಳಿಂದ ಹೊರಬರುವರು.

8

ಕೂಗುವವನ ಕಡೆಗೆ ಧಾವಿಸುತ್ತಿರುವರು. (ಅದೇ) ಸತ್ಯನಿಷೇಧಿಗಳು ಅಂದು, ಇದು ಕಠಿಣವಾದ ದಿನ ಎಂದು ಹೇಳುವರು.

9

ಇವರಿಗಿಂತ ಮುಂಚೆ ನೂಹರ ಜನಾಂಗವು (ಸತ್ಯವನ್ನು) ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು (ನೂಹ್‍ರನ್ನು) ಸುಳ್ಳುಗಾರನೆಂದರು. ಇವನು ಹುಚ್ಚನೆಂದರು. ಮತ್ತು ನೂಹರು ತೀವ್ರವಾಗಿ ಅಟ್ಟಲ್ಪಟ್ಟರು.

10

ಕೊನೆಗೆ ಅವರು ತನ್ನ ಪ್ರಭುವಿನೊಂದಿಗೆ ನಾನು ಸೋತೆ, ಇನ್ನು ನೀನು ರಕ್ಷಾಕ್ರಮ ಕೈಗೊಳ್ಳು ಎಂದು ಪ್ರಾರ್ಥಿಸಿದರು.

11

ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ಆಕಾಶದ ದ್ವಾರಗಳನ್ನು ನಾವು ತೆರೆದು ಬಿಟ್ಟೆವು.

12

ಭೂಮಿಯನ್ನು ಸೀಳಿ ಚಿಲುಮೆಗಳಾಗಿ ಮಾರ್ಪಡಿಸಿ ಬಿಟ್ಟೆವು ಮತ್ತು ವಿಧಿಸಲ್ಪಟ್ಟಿದ್ದ ಒಂದು ಕಾರ್ಯಕ್ಕಾಗಿ ನೀರು ಸಂಧಿಸಿತು.

13

ಹಲಗೆ ಹಾಗೂ ಮೊಳೆಗಳಿದ್ದ ಒಂದು ವಸ್ತುವಿನ (ಹಡಗಿನ) ಮೇಲೆ ಅವರನ್ನು (ನೂಹ್‍ರನ್ನು) ನಾವು ಸವಾರಿ ಮಾಡಿಸಿದೆವು.

14

ಅದು (ಹಡಗು) ನಮ್ಮ ಮೇಲ್ನೋಟದಲ್ಲಿ ಚಲಿಸುತ್ತಿತ್ತು. ಅದು ನಿಷೇಧಿಸಿ ತಳ್ಳಲಾದ ವ್ಯಕ್ತಿಯ (ನೂಹ್‍ರ) ಪರವಾಗಿ ಪ್ರತೀಕಾರವಾಗಿತ್ತು .

15

ಆ ಹಡಗನ್ನು ನಾವು ಒಂದು ದೃಷ್ಟಾಂತವಾಗಿ ಉಳಿಸಿದೆವು. ಯಾರಿದ್ದಾರೆ ಇದರಿಂದ (ಚಿಂತಿಸಿ) ಉಪದೇಶ ಪಡೆಯುವವರು ?

16

ಹೇಗಿತ್ತು ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳು!

17

ಖುರ್‍ಆನನ್ನು ಚಿಂತಿಸಲಿಕ್ಕಾಗಿ ನಾವು ಸರಳಗೊಳಿಸಿದ್ದೇವೆ. ಯಾರಿದ್ದಾರೆ ಯೋಚಿಸುವವರು?

18

ಆದ್ ಜನಾಂಗದವರು (ಸತ್ಯವನ್ನು) ಧಿಕ್ಕರಿಸಿದರು. ಆಗ ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು ಹೇಗಾಯಿತೆಂದು ನೋಡಿರಿ.

19

ಒಂದು ಸ್ಥಿರವಾದ ಅಶುಭ ದಿನದಂದು ಅವರ ವಿರುದ್ಧ ತೀವ್ರ ಝೇಂಕಾರದ ಬಿರುಗಾಳಿಯನ್ನು ನಾವು ಕಳುಹಿಸಿದೆವು.

20

ಆ ಗಾಳಿಯು ಖರ್ಜೂರದ ಮರಗಳನ್ನು ಬುಡ ಕಳಚಿ ಬೀಳಿಸುವಂತೆ ಜನರನ್ನು ಎತ್ತಿ ಅಪ್ಪಳಿಸಿ ಹಾಕಿತು.

21

ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು!

22

ಚಿಂತಿಸಲಿಕ್ಕಾಗಿ ಖುರ್‍ಆನನ್ನು ನಾವು ಸರಳ ಗೊಳಿಸಿರುವೆವು. ಯಾರಿದ್ದಾರೆ ಚಿಂತಿಸುವರು?

23

ಸಮೂದ್ ಜನಾಂಗದವರು ಎಚ್ಚರಿಕೆಗಳನ್ನು ಸುಳ್ಳಾಗಿಸಿದರು.

24

ನಮ್ಮವನೇ ಆದ ವ್ಯಕ್ತಿಯೊಬ್ಬನನ್ನು ನಾವು ಅನುಸರಿಸುವುದೆ? ಹಾಗಾದರೆ ನಾವು ದಾರಿಗೆಟ್ಟವರೂ ಮರುಳರೂ ಆಗಿಬಿಡುವೆವು.

25

ನಮ್ಮ ನಡುವೆ ಸಂದೇಶ (`ದಿಕ್ರ್’) ಇಳಿಸಲ್ಪಡಲು ಅವನೊಬ್ಬನೇ ಇರುವುದೇ? (ಅಲ್ಲ) ಅವನು ಮಹಾ ಸುಳ್ಳುಗಾರನೂ, ದುರಹಂಕಾರಿಯೂ ಆಗಿದ್ದಾನೆ ಎಂದು ಅವರು ಹೇಳಿದರು.

26

ಮಹಾ ಸುಳ್ಳುಗಾರನೂ ದುರಹಂಕಾರಿಯೂ ಯಾರೆಂದು ನಾಳೆ ಅವರಿಗೆ ತಿಳಿಯಲಿದೆ.

27

ಒಂದು ಒಂಟೆಯನ್ನು ಅವರಿಗೆ ಪರೀಕ್ಷೆಯಾಗಿ ಕಳುಹಿಸುತ್ತಿದ್ದೇವೆ. ಆದ್ದರಿಂದ ಅವರನ್ನು ನಿರೀಕ್ಷಿಸುತ್ತಿರಿ, ಕ್ಷಮೆಗೊಳ್ಳಿರಿ.

28

ನೀರನ್ನು ಅವರ ನಡುವೆ ಹಂಚಲ್ಪಟ್ಟದ್ದೆಂದೂ ಪ್ರತಿಯೊಬ್ಬರೂ ತನ್ನ ಜಲಪಾನದ ಪಾಳಿಯಂತೆ ಹಾಜರಾಗುವಂತೆಯೂ ಅವರಿಗೆ ತಿಳಿಸಿ. (ಎಂದು ಸಾಲಿಹ್ ನಬಿಗೆ ನಾವು ಹೇಳಿದೆವು).

29

ಕೊನೆಗೆ ಅವರು ತಮ್ಮ ಸ್ನೇಹಿತನನ್ನು ಕೂಗಿ ಕರೆದರು. ಅವನು ಈ ಕಾರ್ಯದ ಹೊಣೆಹೊತ್ತನು ಮತ್ತು ಅದನ್ನು ಕೊಂದು ಹಾಕಿದನು.

30

ಅನಂತರ ನೋಡಿರಿ, ಹೇಗಿತ್ತು ನನ್ನ ಶಿಕ್ಷೆ ಮತ್ತು ನನ್ನ ಎಚ್ಚರಿಕೆಗಳು?

31

ನಾವು ಅವರ ಮೇಲೆ ಒಂದೇ ಒಂದು ಘೋರ ವಾದ ಶಬ್ಧವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ಕಟ್ಟುವವನ ತ್ಯಾಜ್ಯದಂತಾದರು.

32

ಚಿಂತಿಸುವವರಿಗೆ ಈ ಖುರ್‍ಆನನ್ನು ನಾವು ಸುಲಭಗೊಳಿಸಿದ್ದೇವೆ. ಯಾರಿದ್ದಾರೆ ಚಿಂತಿಸುವವರು?

33

ಲೂಥರ ಜನಾಂಗವು ಎಚ್ಚರಿಕೆಗಳನ್ನು ಸುಳ್ಳಾಗಿಸಿತು.

34

ನಾವು ಅವರ ಮೇಲೆ ಕಲ್ಲಿನ ಸುಳಿಗಾಳಿಯನ್ನು ಕಳುಹಿಸಿದೆವು. ಲೂಥರ ಕುಟುಂಬವನ್ನು ಅದರಿಂದ ಹೊರತುಪಡಿಸಲಾಗಿತ್ತು. ರಾತ್ರೆಯ ಅಂತಿಮ ಜಾವದಲ್ಲಿ ನಾವು ಅವರನ್ನು ಸಂರಕ್ಷಿಸಿದೆವು.

35

ನಮ್ಮ ಕಡೆಯಿಂದಿರುವ ಒಂದು ಅನುಗ್ರಹವಾಗಿ. ಕೃತಜ್ಞರಾಗಿರುವವರಿಗೆ ಈ ರೀತಿ ನಾವು ಪ್ರತಿಫಲ ನೀಡುತ್ತೇವೆ.

36

ಲೂಥರು ತಮ್ಮ ಜನಾಂಗದವರಿಗೆ ನಮ್ಮ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಅವರು ಎಲ್ಲ ಎಚ್ಚರಿಕೆಗಳ ಬಗೆಗೆ ಕುತರ್ಕ ಹೂಡಿ ಸುಳ್ಳಾಗಿಸಿದರು.

37

ತಮ್ಮ (ಲೂಥರ) ಅತಿಥಿಗಳನ್ನು (ದುರ್ಬಳಕೆಗೆ) ಬಿಟ್ಟು ಕೊಡುವಂತೆ ಅವರು ಲೂಥರಲ್ಲಿ ಅಪೇಕ್ಷಿಸಿದರು. ಆಗ ಅವರ ಕಣ್ಣುಗಳನ್ನು ಸವರಿ ಸಮತಟ್ಟು ಮಾಡಿಬಿಟ್ಟೆವು. ನನ್ನ ಶಿಕ್ಷೆ ಹಾಗೂ ಮುನ್ನೆಚ್ಚರಿಕೆಗಳ ಫಲವನ್ನು ಅನುಭವಿಸಿರಿ (ಎಂದು ಹೇಳಿದೆವು).

38

ಒಂದು ಪ್ರಾತಃಕಾಲದಲ್ಲಿ ಸ್ಥಿರ ಶಿಕ್ಷೆಯು ಅವರನ್ನು ಆವರಿಸಿತು.

39

ನನ್ನ ಶಿಕ್ಷೆಯ ಮತ್ತು ನನ್ನ ಎಚ್ಚರಿಕೆಗಳ ರುಚಿಯನ್ನು ಸವಿಯಿರಿ (ಎಂದು ಅವರಲ್ಲಿ ಹೇಳ ಲಾಯಿತು).

40

ನಾವು ಈ ಖುರ್‍ಆನನ್ನು ಚಿಂತಿಸಲಿಕ್ಕಾಗಿ ಸರಳಗೊಳಿಸಿರುವೆವು. ಚಿಂತಿಸುವವರು ಯಾರಾದರೂ ಇದ್ದಾರೆಯೇ?

41

ಫಿರ್‍ಔನ್‍ನ ಪರಿವಾರಕ್ಕೂ ಎಚ್ಚರಿಕೆಗಳು ಬಂದಿದ್ದುವು.

42

ಅವರು ನಮ್ಮ ಎಲ್ಲ ದೃಷ್ಟಾಂತಗಳನ್ನು ನಿಷೇಧಿಸಿ ತಳ್ಳಿಹಾಕಿದರು. ಕೊನೆಗೆ ಪ್ರಚಂಡ ಶಕ್ತಿಶಾಲಿಯೊಬ್ಬನು ಹಿಡಿಯುವಂತೆ ಅವರನ್ನು ನಾವು ಹಿಡಿದು ಶಿಕ್ಷಿಸಿದೆವು.

43

(ಜನರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ (ಆ ಶಿಕ್ಷೆಗೊಳಗಾದವರಿಗಿಂತ) ಉತ್ತಮರೇ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗಾಗಿ ಏನಾದರೂ ಶಿಕ್ಷೆಯಿಂದ ವಿನಾಯಿತಿ ಲಿಖಿತವಾಗಿ ದೆಯೇ?

44

ಅಥವಾ `ನಾವು ಸಹಾಯ ಪ್ರಾಪ್ತರಾದ ಸಂಘ’ ಎಂದವರು ಹೇಳಿಕೊಳ್ಳುತ್ತಿದ್ದಾರೆಯೆ?

45

ಆದರೆ ಸದ್ಯದಲ್ಲೇ ಈ ಸಂಘವು ಸೋತು ಹೋಗುವುದು ಮತ್ತು ಅವರು ಬೆನ್ನು ತಿರುಗಿಸಿ ಓಡಿ ಹೋಗುವರು.

46

ಮಾತ್ರವಲ್ಲ, ಅವರಿಗೆ ಶಿಕ್ಷೆಯ ವಾಗ್ದಾನ ಸಮಯವು ಅಂತಿಮ ದಿನವಾಗಿರುತ್ತದೆ. ಆ ದಿನದ ಶಿಕ್ಷೆಯು ಅತ್ಯಂತ ಘೋರವೂ ಅತ್ಯಂತ ಕಹಿಯೂ ಆಗಿರುವುದು.

47

ನಿಜವಾಗಿಯೂ ಈ ಅಪರಾಧಿಗಳು ವಿನಾಶ ಹಾಗೂ ಘೋರ ಅಗ್ನಿಯಲ್ಲಿರುವರು.

48

ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆಯಲ್ಪಡುವ ದಿನ, ಅವರೊಡನೆ - ಈಗ ನರಕ ಸ್ಪರ್ಶವನ್ನು ಸವಿಯಿರಿ ಎನ್ನಲಾಗುವುದು.

49

ನಾವು ಪ್ರತಿಯೊಂದು ವಸ್ತುವನ್ನು ಒಂದು ನಿರ್ಣಯ ಪ್ರಕಾರ ಸೃಷ್ಟಿಸಿರುವೆವು .

50

ನಮ್ಮ ಆಜ್ಞೆಯು ಕೇವಲ ಒಂದೇ ಒಂದು ಆಜ್ಞೆಯಾಗಿರುತ್ತದೆ. ಕಣ್ಣಿನ ರೆಪ್ಪೆ ಬಡಿಯುವಷ್ಟು (ವೇಗದಲ್ಲಿ ಉದ್ದೇಶಿತ ಕಾರ್ಯ ಜರುಗುವುದು).

51

(ಸತ್ಯನಿಷೇಧಿಗಳೇ!) ನಿಮ್ಮಂತಹ ಅನೇಕ ಪಂಗಡಗಳನ್ನು ನಾವು ನಾಶಗೊಳಿಸಿರುತ್ತೇವೆ. ಹೀಗಿರುತ್ತ, ಚಿಂತಿಸಲು ಸಿದ್ಧರುಳ್ಳ ಯಾರಾದರೂ ಇದ್ದಾರೆಯೇ?

52

ಅವರು ಮಾಡಿರುವುದೆಲ್ಲವೂ ದಾಖಲೆಗಳಲ್ಲಿ ಲಿಖಿತವಿದೆ.

53

ಪ್ರತಿಯೊಂದು ಚಿಕ್ಕ ಮತ್ತು ದೊಡ್ಡ ವಿಷಯವನ್ನೂ ಬರೆದಿಡಲಾಗಿದೆ.

54

ಖಂಡಿತವಾಗಿಯೂ ಭಕ್ತರು ಸ್ವರ್ಗೋದ್ಯಾನಗಳಲ್ಲಿ ಮತ್ತು ಕಾಲುವೆಗಳಲ್ಲಿ ಇರುವರು.

55

ನೈಜತೆಯ ಸೋಪಾನದಲ್ಲಿ ಪರಮ ಶಕ್ತ ಸಾಮ್ರಾಟನ ಸನ್ನಿಧಿಯಲ್ಲಿ.