ಧೂಳೆಬ್ಬಿಸುವ ಗಾಳಿಗಳ ಆಣೆ.
ಭಾರವೇರಿದ ಘನೀಕೃತ ಮೋಡಗಳ ಆಣೆ.
ಅನಾಯಾಸವಾಗಿ ಚಲಿಸುತ್ತಿರುವ ಹಡಗುಗಳ ಆಣೆ.
ಯೋಜನೆಗಳನ್ನು ವಿತರಿಸುವ ದೇವಚರರುಗಳಾಣೆ.
ಖಂಡಿತವಾಗಿಯೂ ನಿಮಗೆ ತಾಕೀತು ನೀಡಲಾದ ವಿಷಯಗಳು ಪರಮಸತ್ಯ.
(ಅಂತ್ಯ ದಿನದ) ವಿಧಿಯ ತೀರ್ಪು ಖಂಡಿತವಾಗಿಯೂ ಸಂಭವನೀಯವಾಗಿದೆ .
ವಿವಿಧ ಪಥಗಳಿರುವ ಗಗನದ ಆಣೆ.
ನಿಜವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲೇ ಇದ್ದೀರಿ .
ವಿಮುಖನಾಗಲ್ಪಟ್ಟವನು ನಬಿಯವರಿಂದ ವಿಮುಖನಾಗಲ್ಪಡುವನು.
ಸುಳ್ಳುಗಾರರು ಶಪಿಸಲ್ಪಟ್ಟಿರುವರು .
ಅವರು ಅಜ್ಞಾನದ ಮಡುವಿನಲ್ಲಿ ಮುಳುಗಿ ನಿರ್ಲಕ್ಷ್ಯರಾಗಿರುವರು.
ಪ್ರತಿಫಲದ ದಿನ ಯಾವಾಗ ಬರಲಿದೆ? ಎಂದು ಅವರು ಕುಚೋದ್ಯವಾಡುತ್ತಿದ್ದಾರೆ.
ಅದು, ಅವರು ಅಗ್ನಿಯಲ್ಲಿ ಶಿಕ್ಷಿಸಲ್ಪಡುವಂದು (ಬರಲಿದೆ.)
ಈಗ ನೀವು ನಿಮ್ಮ ವಿನಾಶದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕಾಗಿ ಇಹದಲ್ಲಿ ತ್ವರೆ ಮಾಡುತ್ತಿದ್ದಿರೋ ಅದುವೇ ಇದು. (ಎಂದು ಅವರೊಡನೆ ಹೇಳಲಾಗುವುದು.)
ಖಂಡಿತವಾಗಿಯೂ ಧರ್ಮನಿಷ್ಟರು ಅಂದು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ ಇರುವರು.
ಅವರ ಪ್ರಭು ಅವರಿಗೆ ದಯಪಾಲಿಸಿದ್ದನ್ನು ಸಂತೋಷದಿಂದ ಸ್ವೀಕರಿಸುತ್ತಿರುವರು. ಅವರು ಅದಕ್ಕೂ ಮುನ್ನ ಸಚ್ಚರಿತರಾಗಿದ್ದರು.
ರಾತ್ರೆಯಲ್ಲಿ ಅವರು ಸ್ವಲ್ಪ ಸಮಯವೇ ನಿದ್ರಿಸುತ್ತಿದ್ದರು
ಅವರು ರಾತ್ರಿಯ ಕೊನೆಯ ಜಾವಗಳಲ್ಲಿ ಕ್ಷಮಾಯಾಚನೆ ಮಾಡುತ್ತಿದ್ದರು.
ಅವರ ಸೊತ್ತುಗಳಲ್ಲಿ ಬೇಡುವವನಿಗೂ ಬೇಡಲು ತಟಸ್ಥವಿದ್ದವನಿಗೂ ಹಕ್ಕಿರುವುದು.
ದೃಢ ವಿಶ್ವಾಸಿಗಳಿಗೆ ಭೂಮಿಯಲ್ಲಿ ಅಸಂಖ್ಯಾತ ನಿದರ್ಶನಗಳಿವೆ.
ಸ್ವತಃ ನಿಮ್ಮಲ್ಲೂ (ನಿದರ್ಶನಗಳು) ಇವೆ. ನೀವು ಕಂಡರಿಯುವುದಿಲ್ಲವೇ?
ಆಕಾಶದಲ್ಲಿ ನಿಮ್ಮ ಜೀವನಾಧಾರವೂ ನಿಮಗೆ ವಾಗ್ದಾನ ಮಾಡಲಾಗುತ್ತಿರುವವುಗಳೂ ಇವೆ .
ಆದುದರಿಂದ ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಇದು ಸತ್ಯವಾಗಿದೆ. ನೀವು ಆ ಕುರಿತು ಮಾತನಾಡಿಕೊಳ್ಳುವಷ್ಟೇ ಅದು ಖಚಿತವಾಗಿದೆ.
(ಸಂದೇಶವಾಹಕರೇ,) ಇಬ್‍ರಾಹೀಮರ ಮಾನ್ಯ ಅತಿಥಿಗಳ ವೃತ್ತಾಂತವು ನಿಮಗೆ ತಲುಪಿದೆಯೇ?
ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ಸಲಾಮ್ ಹೇಳಿದ ಸಂದರ್ಭ, ಅವರು (ಇಬ್‍ರಾ ಹೀಮ್) ಸಲಾಮ್, ನೀವು ಅಪರಿಚಿತರು ಎಂದರು.
ಅನಂತರ ಅವರು ದೃತಿಯಿಂದ ತಮ್ಮ ಮನೆ ಯವರ ಬಳಿಗೆ ಹೋದರು. ಆಮೇಲೆ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು.
ತರುವಾಯ ಅದನ್ನು ಅವರ ಹತ್ತಿರ ಇಟ್ಟರು. ನೀವು ತಿನ್ನುವುದಿಲ್ಲವೇ? ಎಂದು ಕೇಳಿದರು.
(ಅವರು ತಿನ್ನಲಿಲ್ಲ) ಆಗ ಇಬ್‍ರಾಹೀಮರು ಅವರ ಬಗೆಗೆ ಅಂಜಿದರು. ಆಗ ಅತಿಥಿಗಳು; `ತಾವು ಹೆದರಬೇಡಿ’ ಎಂದರು ಮತ್ತು ಅವರಿಗೆ ಓರ್ವ ಸುಜ್ಞಾನಿ ಪುತ್ರನು ಜನಿಸುವನೆಂಬ ಸುವಾರ್ತೆ ನೀಡಿದರು .
ಆಗ ಅವರ ಪತ್ನಿಯು ಚೀರುತ್ತ ಮುಂದೆ ಬಂದರು ಮತ್ತು ತನ್ನ ಮುಖಕ್ಕೆ ಬಡಿದುಕೊಳ್ಳುತ್ತ, ಬಂಜೆಯಾದ ಓರ್ವ ವೃದ್ಧೆ! (ಹೆರುವುದು ಹೇಗೆ?) ಎಂದು ಕೇಳಿದರು.
ಆಗ ಅತಿಥಿಗಳು; “ನಿನ್ನ ಪ್ರಭು ಹೀಗೆಯೇ ಹೇಳಿರುತ್ತಾನೆ. ಅವನು ಮಹಾ ಯುಕ್ತಿವಂತನೂ, ಸರ್ವಜ್ಞನೂ ಆಗಿರುತ್ತಾನೆ”ಎಂದರು.
ಇಬ್ರಾಹೀಮರು ಕೇಳಿದರು, ದೇವದೂತರೇ, ನಿಮ್ಮ ಉದ್ದೇಶವೇನು?
ಅವರು ಹೇಳಿದರು, ನಾವು ಒಂದು ಅಪರಾಧಿ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.
ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆಯಲಿಕ್ಕಾಗಿ.
ಆ ಕಲ್ಲುಗಳನ್ನು ಅತಿಕ್ರಮಿಗಳಿಗಾಗಿ ನಿಮ್ಮ ಪ್ರಭುವಿನ ಬಳಿ ಗುರುತು ಹಾಕಿಡಲಾಗಿದೆ.
ಆ ನಾಡಿನಲ್ಲಿದ್ದ ಸತ್ಯವಿಶ್ವಾಸಿಗಳನ್ನೆಲ್ಲ ನಾವು ಅಲ್ಲಿಂದ ಹೊರಕಳುಹಿಸಿ ರಕ್ಷಿಸಿದೆವು.
ಅಲ್ಲಿ ಮುಸ್ಲಿಮರ ಒಂದು ಮನೆಯ ಹೊರತು ಬೇರಾವ ಮನೆಯನ್ನೂ ನಾವು ಕಾಣಲಿಲ್ಲ.
ವೇದನಾಯುಕ್ತ ಶಿಕ್ಷೆಯನ್ನು ಭಯಪಡುವ ಜನರಿಗಾಗಿ ಒಂದು ನಿದರ್ಶನವನ್ನು ಅಲ್ಲಿ ನಾವು ಉಳಿಸಿದೆವು.
ಮೂಸಾರ ವೃತ್ತಾಂತದಲ್ಲಿ (ದೃಷ್ಟಾಂತಗಳಿವೆ). ಸುಸ್ಪಷ್ಟ ಆಧಾರ ಪ್ರಮಾಣದೊಂದಿಗೆ ಫಿರ್‍ಔನನ ಬಳಿಗೆ ನಾವು ಅವರನ್ನು ಕಳುಹಿಸಿದ ಸಂದರ್ಭ.
ಅವನು ತನ್ನ ಸೈನಿಕ ಶಕ್ತಿಯ ಧೈರ್ಯದಿಂದ ಸತ್ಯಕ್ಕೆ ವಿಮುಖನಾದನು. ಮತ್ತು ಇವನು ಮಾಟಗಾರನೋ ಹುಚ್ಚನೋ ಆಗಿದ್ದಾನೆ ಎಂದನು.
ಕೊನೆಗೆ ನಾವು ಅವನನ್ನೂ ಅವನ ಸೇನೆಗಳನ್ನೂ ಹಿಡಿದೆವು. ಅನಂತರ ಅವರನ್ನು ಸಮುದ್ರಕ್ಕೆ ಎಸೆದು ಬಿಟ್ಟೆವು ಮತ್ತು ಅವನು ನಿಂದ್ಯನಾಗಿ ಬಿಟ್ಟನು.
`ಆದ್’ ಜನಾಂಗದಲ್ಲಿ (ದೃಷ್ಟಾಂತವಿದೆ). ನಾವು ಅವರ ಮೇಲೆ ಒಂದು ವಿನಾಶಕರ ಗಾಳಿಯನ್ನು ಕಳುಹಿಸಿದ ಸಂದರ್ಭ.
ಅದು ಹಾದು ಹೋದ ಯಾವುದೇ ಒಂದು ವಸ್ತುವನ್ನೂ ಧೂಳೀಪಟದಂತೆ ಶಿಥಿಲಗೊಳಿಸದೆ ಬಿಟ್ಟಿಲ್ಲ.
`ಸಮೂದ್’ ಜನಾಂಗದಲ್ಲೂ (ನಿದರ್ಶನವಿದೆ). ಒಂದು ನಿಶ್ಚಿತ ಕಾಲದವರೆಗೆ ನೀವು ಸುಖ ಭೋಗಗಳನ್ನು ಅನುಭವಿಸಿಕೊಳ್ಳಿರೆಂದು ಅವರೊಡನೆ ಹೇಳಲ್ಪಟ್ಟ ಸಂದರ್ಭ.
ಆದರೆ, ಅವರು ತಮ್ಮ ಪ್ರಭುವಿನ ಆಜ್ಞೆಯ ವಿರುದ್ಧ ಧಿಕ್ಕಾರ ತೋರಿದರು. ಕೊನೆಗೆ ಅವರು ನೋಡುತ್ತಿದ್ದಂತೆಯೇ ಹಠಾತ್ತನೆ ಘೋರ ಶಬ್ದ ಅವರ ಮೇಲೆರಗಿತು.
ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮಥ್ರ್ಯವಾಗಲಿ ಉಳಿಯಲಿಲ್ಲ.
ಅದಕ್ಕೂ ಮುಂಚೆ `ನೂಹ’ರ ಜನಾಂಗವನ್ನು (ನಾವು ನಾಶಗೊಳಿಸಿದೆವು.) ಅವರು ಕೂಡಾ ಕರ್ಮಭ್ರಪ್ಟರಾದ ಒಂದು ಜನಾಂಗವಾಗಿದ್ದರು.
ನಾವು ಆಕಾಶವನ್ನು ನಮ್ಮ ಶಕ್ತಿಯಿಂದಲೇ ನಿರ್ಮಿಸಿರುತ್ತೇವೆ ಮತ್ತು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ.
ಭೂಮಿಯನ್ನು ನಾವು ಹಾಸಿರುತ್ತೇವೆ, ಅದನ್ನು ಜನ ವಾಸಯೋಗ್ಯಗೊಳಿಸಿದವನು ಎಷ್ಟು ಉತ್ತಮನು!
ನಾವು ಪ್ರತಿಯೊಂದು ವಸ್ತುವಿಗೂ ಜೋಡಿಗಳನ್ನು ಸೃಷ್ಟಿಸಿರುತ್ತೇವೆ. ನೀವು ಚಿಂತಿಸುವಂತಾಗಲು.
ಆದುದರಿಂದ (ತಾವು ಹೇಳಿರಿ;) ನೀವು ಅಲ್ಲಾಹನ ಕಡೆಗೆ ಧಾವಿಸಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನಾಗಿದ್ದೇನೆ.
ಅಲ್ಲಾಹನೊಂದಿಗೆ ಬೇರೆ ಆರಾಧ್ಯರನ್ನು ಮಾಡಿ ಕೊಳ್ಳಬೇಡಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನೇ ಆಗಿ ದ್ದೇನೆ.
ಇದೇ ರೀತಿ ಇವರಿಗಿಂತ ಮುಂಚಿನ ಜನಾಂಗ ಗಳ ಬಳಿಗೂ ಯಾವುದೇ ದೂತರು ಬಂದಾಗ ಅವರನ್ನು ಇವರು ಮಾಟಗಾರ ಅಥವಾ ಹುಚ್ಚ ಎಂದು ಹೇಳದೆ ಬಿಡಲಿಲ್ಲ.
ಅದಕ್ಕೆ (ಹಾಗೆ ಹೇಳುವುದಕ್ಕೆ) ಅವರೇನು ಪರಸ್ಪರ ಒಪ್ಪಂದ ಮಾಡಿಕೊಂಡಿರುವರೇ? ಇಲ್ಲ. ವಾಸ್ತವ ದಲ್ಲಿ ಅವರು ಅತಿಕ್ರಮಿ ಜನತೆಯಾಗಿದ್ದಾರೆ.
ಆದುದರಿಂದ (ಸಂದೇಶವಾಹಕರೇ,) ಅವರ ಬಗ್ಗೆ ನಿರ್ಲಕ್ಷ್ಯ ತಾಳಿರಿ. (ಅವರ ವಿಮುಖತೆಗೆ) ತಾವು ಆಕ್ಷೇಪಾರ್ಹರಲ್ಲ.
ತಾವು ಉಪದೇಶ ಮಾಡಿರಿ. ಏಕೆಂದರೆ ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಫಲ ನೀಡುತ್ತದೆ.
ನಾನು ಜಿನ್ನ್‍ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ .
ನಾನು ಅವರಿಂದ ಜೀವನಾಧಾರವನ್ನೇನೂ ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ಆಗ್ರಹಿಸುವುದಿಲ್ಲ.
ನಿಜವಾಗಿಯೂ ಅಲ್ಲಾಹನು ಮಹಾ ಅನ್ನದಾತನು , ಮಹಾಶಕ್ತಿಶಾಲಿ ಮತ್ತು ಪ್ರಚಂಡನೂ ಆಗಿರುವನು.
ಆದುದರಿಂದ (ಇಂದು) ಅಕ್ರಮವೆಸಗಿದವರಿಗೆ (ಪೂರ್ವಿಕರಾದ) ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಯಾತನೆಯ ಪಾಲು ಸಿದ್ಧವಿದೆ. ಆದ್ದರಿಂದ ಶಿಕ್ಷೆಗಾಗಿ ಅವರು ನನ್ನೊಡನೆ ಆತುರ ತೋರುವುದು ಬೇಡ.
ಯಾವ ದಿನದ ಬಗ್ಗೆ ಎಚ್ಚರಿಸಲಾಗುತ್ತಿದೆಯೋ ಆ ದಿನ ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯಿದೆ.