ಕ್ವಾಫ್, ಘನವೆತ್ತ ಕುರ್‍ಆನಿನಾಣೆ
ಆದರೆ ಅವರಿಂದಲೇ ಇರುವ ಓರ್ವ ಮುನ್ನೆಚ್ಚರಿಕೆ ನೀಡುವವನು ಅವರ ಬಳಿಗೆ ಬಂದುದು ಇವರಿಗೆ ಅದ್ಭುತವೆನಿಸಿತು. ತರುವಾಯ ಸತ್ಯನಿಷೇಧಿಗಳು ಹೇಳಿದರು; `ಇದು ಸೋಜಿಗದ ವಿಷಯ’.
ನಾವು ಸತ್ತು ಮಣ್ಣಾಗಿ ಹೋದ ಬಳಿಕ (ಒಂದು ಪುನರ್ಜನ್ಮವೇ?) ಅದು ರೂಢಿಗೆ ವಿದೂರವಾದ ವಾಪಾಸಾತಿಯೇ ಸರಿ.
ಭೂಮಿಯು ಅವರ ಶರೀರದಿಂದ ಕುಂದಿಸಿ ಬಿಡುವುದನ್ನು ಖಂಡಿತ ನಾವು ಬಲ್ಲೆವು. ನಮ್ಮ ಬಳಿಯಲ್ಲೊಂದು ಸುರಕ್ಷಿತ ಗ್ರಂಥವಿದೆ.
ಆದರೆ ಸತ್ಯವು ಅವರ ಬಳಿಗೆ ಬಂದು ತಲುಪಿದಾಗ ಅವರು ಅದನ್ನು ಸ್ಪಷ್ಟವಾಗಿ ನಿಷೇಧಿಸಿಬಿಟ್ಟರು. ಆದ್ದರಿಂದಲೇ ಅವರು ಚಂಚಲದಲ್ಲಿದ್ದಾರೆ.
ಅವರು ತಮ್ಮ ಮೇಲಿರುವ ಆಕಾಶದ ಕಡೆಗೆ ನೋಡಿಲ್ಲವೇ? ನಾವು ಅದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿದೆವು. ಅದರಲ್ಲಿ ಎಲ್ಲೂ ಬಿರುಕಿಲ್ಲ.
ಭೂಮಿಯನ್ನು ನಾವು ಹರಡಿದೆವು, ಅದರಲ್ಲಿ ಊರಿನಿಂತ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಸೊಗಸಾದ ಸಸ್ಯ ಜೋಡಿಗಳನ್ನು ಬೆಳೆಸಿದೆವು.
(ಅಲ್ಲಾಹನ ಬಳಿಗೆ) ವಿಧೇಯತ್ವವಿರುವ ಪ್ರತಿಯೊಬ್ಬ ದಾಸನು ಕಂಡು ತಿಳಿಯಲು ಮತ್ತು ಅವನಿಗೆ ಪಾಠ ಲಭಿಸಲು (ಹೀಗೆ ಮಾಡಿರುವುದು).
ನಾವು ಆಕಾಶದಿಂದ ಅನುಗ್ರಹೀತ ನೀರನ್ನಿಳಿಸಿದೆವು, ತರುವಾಯ ಅದರಿಂದ ತೋಟಗಳನ್ನೂ ಕೊಯ್ದು ತೆಗೆಯುವ ಧಾನ್ಯಗಳನ್ನೂ ನಾವು ಉತ್ಪಾದಿಸಿದೆವು.
ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರದ ಮರಗಳನ್ನೂ ಸೃಷ್ಟಿಸಿದೆವು.
(ಇದು, ನಮ್ಮ) ದಾಸರಿಗೆ ಉಪಜೀವನವಾಗಿ. ಆ ನೀರಿನ ಮೂಲಕ ನಿರ್ಜೀವ ನಾಡನ್ನು ನಾವು ಸಜೀವಗೊಳಿಸುತ್ತೇವೆ. (ಸಮಾಧಿಯಿಂದ) ಹೊರ ಬರುವುದೂ ಹೀಗೆಯೇ.
ಇವರಿಗಿಂತ ಮುಂಚೆ ನೂಹರ ಜನಾಂಗವೂ ರಸ್ಸ್‍ನವರೂ ಸಮೂದ್ ಗೋತ್ರದವರೂ ಸತ್ಯವನ್ನು ನಿಷೇಧಿಸಿದ್ದರು.
ಆದ್ ಸಮುದಾಯವೂ ಫಿರ್‍ಔನನೂ `ಲೂಥ’ ರ ಸಹೋದರರೂ, ಐಕದವರೂ, ತುಬ್ಬಅï ಜನಾಂಗದವರೂ ಕೂಡಾ. ಅವರೆಲ್ಲರೂ ದೇವ ದೂತರನ್ನು ಸುಳ್ಳಾಗಿದರು. ಕೊನೆಗೆ ನನ್ನ ಎಚ್ಚರಿಕೆಯು ಅವರಿಗೆ ನಿಜವಾಗಿ ಪರಿಣಮಿಸಿತು.
ಪ್ರಥಮ ಬಾರಿಯ ಸೃಷ್ಟಿಯಿಂದ ನಾವೇನು ಬಳಲಿದ್ದೇವೆಯೇ? (ಇಲ್ಲ) ಆದರೂ ಅವರು ಹೊಸ ಸೃಷ್ಟಿಯ ಬಗ್ಗೆ ಸಂಶಯಗ್ರಸ್ಥರಾಗಿದ್ದಾರೆ.
ನಿಶ್ಚಯ ನಾವು ಮಾನವನನ್ನು ಸೃಷ್ಟಿಸಿದೆವು. ಅವನ ಮನಸ್ಸನ್ನು ಚಂಚಲಗೊಳಿಸುತ್ತಿರುವ ದುರ್ಭಾವನೆಗಳನ್ನೂ ನಾವು ಬಲ್ಲೆವು. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹೆಚ್ಚು ಸಮೀಪವಿದ್ದೇವೆ .
ಬಲ ಹಾಗೂ ಎಡಭಾಗಗಳಲ್ಲಿ ಕುಳಿತು ಸ್ವೀಕರಿಸುವ (ದಾಖಲಿಸುವ) ಇಬ್ಬರು (ದೇವಚರರು) ಸ್ವೀಕರಿಸುವ ಸಂದರ್ಭ.
ನಿರೀಕ್ಷಕ, ಉಪಸ್ಥಿತರ (ರಖೀಬ್ - ಅತೀದ್ ಎಂಬ ದೇವಚರರ) ನಿಗಾಕ್ಕೊಳಪಡದೆ ಮನುಷ್ಯ ಒಂದು ಮಾತನ್ನೂ ಉಚ್ಛರಿಸಲಾರ. ಮರಣದ ಕಠಿಣ ಸಂಕಟವು ಸತ್ಯವನ್ನು ತಂದಿದೆ. ನೀನು ಯಾವುದರಿಂದ ತಪ್ಪಿಸಿಕೊಂಡು ಓಡುತ್ತಿದ್ದೀಯೋ ಅದುವೇ ಇದು. (ಎಂದು ಹೇಳಲಾಗುವುದು)
ಸೂರ್ (ಕಹಳೆಯಿಂದ) ಊದಲ್ಪಟ್ಟಿತು. ಅದುವೇ ತಾಕೀತು ನೀಡಲ್ಪಟ್ಟ ದಿನ.
ಪ್ರತಿಯೊಂದು ಶರೀರವು (ಅಂದು - ಮಹ್‍ಶರ ದಲ್ಲಿ) ಬರುವುದು. ಅಟ್ಟಿಕೊಂಡು ಬರುವ ಒಬ್ಬನೂ ಓರ್ವ ಸಾಕ್ಷಿಯೂ ಅವನ ಜೊತೆಗಿರುವರು.
ನೀನು ಇದರ ಬಗ್ಗೆ ಅಲಕ್ಷ್ಯನಾಗಿದ್ದೆ. ಇದೀಗ ನಾವು ನಿನ್ನ ಮುಂದಿದ್ದ ತೆರೆಯನ್ನು ಸರಿಸಿ ಬಿಟ್ಟಿದ್ದೇವೆ. ಆದ್ದರಿಂದ ಇಂದು ನಿನ್ನ ದೃಷ್ಟಿಯು ಬಹಳ ತೀಕ್ಷ್ಣವಿದೆ (ಎಂದು ಸತ್ಯನಿಷೇಧಿಗೆ ಹೇಳಲಾಗುವುದು).
ಇದು ನನ್ನ ಬಳಿ ಸಿದ್ಧಗೊಂಡ ದಾಖಲೆ ಎಂದು ಅವನ ಜೊತೆಗಾರ (ಮಲಕ್) ಹೇಳುವನು.
ಪ್ರತಿಸ್ಪರ್ಧಿ, ಒಳಿತಿಗೆ ವಿಘ್ನಕಾರಿ, ದುಷ್ಕರ್ಮಿ ಹಾಗೂ ಸಂಶಯಗ್ರಸ್ತನಾದ ಎಲ್ಲ ಸತ್ಯನಿಷೇಧಿ ಯನ್ನೂ ನರಕಕ್ಕೆ ತಳ್ಳಿ ಬಿಡು, (ಎಂದು ನರಕ ಪಾಲಕ ರಾದ ಮಲಕ್ - ಮಾಲಿಕರಿಗೆ ಆಜ್ಞೆ ಬರುವುದು)
ಅವನು ಅಲ್ಲಾಹನೊಂದಿಗೆ ಇತರರನ್ನು ದೇವ ರಾಗಿ ಮಾಡಿಕೊಂಡಿದ್ದನು. ಆದ್ದರಿಂದ ಅವನನ್ನು ಘೋರ ಶಿಕ್ಷೆಗೆ ಹಾಕಿಬಿಡು.
ಅವನ ಜೊತೆಗಾರನು (ಶೈತಾನ) ಹೇಳುವನು; ನಮ್ಮ ಪ್ರಭೂ, ನಾನು ಇವನನ್ನು ದಾರಿತಪ್ಪಿಸಲಿಲ್ಲ. ಅವನೇ ಅತ್ಯಂತ ಅಸಹಜವಾದ ಪಥಭೃಷ್ಟತೆಯಲ್ಲಿದ್ದನು.
ಅವನು (ಅಲ್ಲಾಹು) ಹೇಳಿದನು; ನೀವು ನನ್ನ ಸಮ್ಮುಖದಲ್ಲಿ ತರ್ಕಿಸಬೇಡಿರಿ. ನಾನು ನಿಮಗೆ (ಶಿಕ್ಷೆಯ ಬಗ್ಗೆ) ಮೊದಲೇ ಎಚ್ಚರಿಸಿದ್ದೆ.
ನನ್ನಲ್ಲಿ ಮಾತು ಬದಲಾಯಿಸಲಾಗುವುದಿಲ್ಲ. ಮತ್ತು ನಾನು ನನ್ನ ದಾಸರ ಮೇಲೆ ಅಕ್ರಮವೆ ಸಗುವವನಲ್ಲ.
ಅಂದು ನಾವು ನರಕದೊಡನೆ - ನೀನು ತುಂಬಿ ಕೊಂಡೆಯಾ? ಎಂದು ಕೇಳುವೆವು, ಆಗ ಅದು, ಇನ್ನಷ್ಟು ಇದೆಯೇ? ಎಂದು ಕೇಳುವುದು.
ಧರ್ಮ ಭಕ್ತರಿಗೆ ಸ್ವರ್ಗವನ್ನು ದೂರವಾಗದ ಸ್ಥಿತಿಯಲ್ಲಿ ಹತ್ತಿರಗೊಳಿಸಲಾಗುವುದು.
ಈ ಕಾಣುತ್ತಿರುವುದು ನಿಮಗೆ ಸುವಾರ್ತೆ ನೀಡಲ್ಪಡುತ್ತಿದ್ದುದೇ ಆಗಿದೆ. ಬಹಳಷ್ಟು ಪಶ್ಚಾ ತ್ತಾಪಿಸಿ ಮರಳುತ್ತಿದ್ದ ಮತ್ತು (ಅಲ್ಲಾಹನ ವಿಧಿ- ಮೇರೆಗಳನ್ನು) ಪಾಲಿಸುತ್ತಿದ್ದ ಪ್ರತಿಯೊಬ್ಬರಿಗೂ.
(ಅಂದರೆ) ಪರಮ ದಯಾಮಯನಾದ ಅಲ್ಲಾಹ ನನ್ನು ಕಣ್ಣಾರೆ ಕಾಣದೆಯೇ ಭಯಪಡುತ್ತಿದ್ದ ಮತ್ತು ವಿನಯಾನ್ವಿತ ಹೃದಯದೊಂದಿಗೆ ಬಂದಿರುವವನಿಗಾಗಿ.
ಶಾಂತಿಯೊಂದಿಗೆ ನೀವು ಇದಕ್ಕೆ (ಸ್ವರ್ಗಕ್ಕೆ) ಪ್ರವೇಶಿಸಿರಿ. ಇದು ಶಾಶ್ವತ ಜೀವನದ ದಿನವಾಗಿರುವುದು.
ಅಲ್ಲಿ ಅವರಿಗಾಗಿ ಅವರು ಬಯಸಿದ್ದೆಲ್ಲವೂ ಲಭಿಸುವುದು ಮತ್ತು (ಅವರಿಗಾಗಿ) ಅದಕ್ಕಿಂತಲೂ ಬಹಳಷ್ಟು ನಮ್ಮಲ್ಲಿ ಕೊಡಲಿಕ್ಕಿದೆ.
ಇವರಿಗಿಂತ ಮುಂಚೆ ಅನೇಕ ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ. ಅವರು ಇವರಿಗಿಂತ ತುಂಬಾ ಬಲಶಾಲಿಗಳಾಗಿದ್ದರು. ಮತ್ತು ಅವರು ನಾಡುಗಳಲ್ಲಿ ಜಾಲಾಡಿದ್ದರು. ಆದರೆ (ನಮ್ಮ ಶಿಕ್ಷೆ ಬಂದೆರಗಿದಾಗ) ಅವರು ಯಾವುದಾದರೂ ಅಭಯ ಸ್ಥಾನವನ್ನು ಪಡೆದರೆ?
(ಇಲ್ಲ) ಹೃದಯವುಳ್ಳ ಅಥವಾ ಹೃದಯ ಸಾನಿ ಧ್ಯದಿಂದ ಲಕ್ಷ್ಯಕೊಟ್ಟು ಕೇಳುವ ಪ್ರತಿಯೊಬ್ಬನಿಗೆ ಇದರಲ್ಲಿ ಬೋಧಪ್ರದ ಪಾಠವಿದೆ.
ನಾವು ಆಕಾಶಗಳನ್ನೂ, ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ (ಆರು ಹಂತಗಳಲ್ಲಿ) ಸೃಷ್ಟಿಸಿದೆವು. ಆದರೆ ನಮಗೇನೂ ದಣಿವಾಗಲಿಲ್ಲ.
ಆದುದರಿಂದ (ಸಂದೇಶವಾಹಕರೇ,) ಅವರಾಡುವ ಮಾತುಗಳ ಬಗ್ಗೆ ತಾಳ್ಮೆವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತ ಮಾನಕ್ಕಿಂತ ಮುಂಚೆಯೂ ನಿಮ್ಮ ಪ್ರಭುವಿನ ಸ್ತುತಿ ಮಾಡುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ .
ಪುನಃ ರಾತ್ರಿ ವೇಳೆಯೂ ಸಾಷ್ಟಾಂಗವೆರಗಿದ ಬಳಿಕವೂ ಅವನನ್ನು ಜಪಿಸಿರಿ.
(ಓ ಮನುಷ್ಯಾ) ಕರೆಯುವವನು (ಪ್ರತಿಯೊಬ್ಬನ) ಸಮೀಪದಿಂದಲೇ ಕರೆಯುವ ದಿನವನ್ನು ಗಮನವಿಟ್ಟಿರು.
ಅಂದರೆ, ಆ ಘೋರ ಶಬ್ಧವನ್ನು ಅವರು ನಿಜವಾಗಿಯೂ ಕೇಳಿಸಿಕೊಳ್ಳುವ ದಿನ. ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿದೆ.
ನಾವೇ ಜೀವದಾನ ಮಾಡುತ್ತೇವೆ ಮತ್ತು ನಾವೇ ಮರಣ ಕೊಡುತ್ತೇವೆ. ನಮ್ಮ ಕಡೆಗೇ ಮರಳ ಬೇಕಾಗಿದೆ.
ಅಂದರೆ, ಭೂಮಿಯು ಅವರೊಂದಿಗೆ ಬಿರಿದು ಅವರು ಅತಿ ಬೇಗನೆ ಹೊರಡುವ ದಿನ. ಅದು ನಮಗೆ ಅತಿ ಸುಲಭದ ಒಟ್ಟುಗೂಡಿಸುವಿಕೆಯಾಗಿದೆ.
(ಸಂದೇಶವಾಹಕರೇ,) ಅವರು ಹೇಳುವುದರ ಕುರಿತು ನಾವು ಚೆನ್ನಾಗಿ ಬಲ್ಲೆವು. ತಮಗೆ ಅವರ ನ್ನು ಬಲಾತ್ಕರಿಸುವ ಅಧಿಕಾರವಿಲ್ಲ. ಆದುದರಿಂದ ನನ್ನ ಎಚ್ಚರಿಕೆಯ ಭಯವಿರುವವರಿಗೆ ಈ ಖುರ್‍ಆನಿನ ಮೂಲಕ ನೀವು ಉಪದೇಶ ನೀಡಿರಿ.