ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹು ಮತ್ತು ಅವನ ದೂತರ ಮುಂದೆ ಮೀರಿ ನಡೆಯಬೇಡಿರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಸರ್ವಶೃತನೂ ಸರ್ವಜ್ಞನೂ ಆಗಿದ್ದಾನೆ.
ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಗಳನ್ನು ಪ್ರವಾದಿವರ್ಯರ ಧ್ವನಿಗಿಂತ ಎತ್ತರಿಸಬೇಡಿರಿ! ನೀವು ಪರಸ್ಪರ ಸ್ವರವೆತ್ತಿ ಮಾತನಾಡುವಂತೆ ಪ್ರವಾದಿವರ್ಯರೊಡನೆ ಉಚ್ಚ ಸ್ವರದಲ್ಲಿ ಮಾತನಾಡ ಬೇಡಿರಿ. ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಸುಕೃತಗಳು ನಿಷ್ಪಲವಾಗುವ ಅಪಾಯವಿರುವುದರಿಂದ (ಈ ಆದೇಶ ನೀಡಲಾಗಿದೆ).
ಅಲ್ಲಾಹನ ದೂತರ ಸನ್ನಿಧಿಯಲ್ಲಿ ತಮ್ಮ ಧ್ವನಿಯನ್ನು ತಗ್ಗಿಸಿಕೊಳ್ಳುವವರ್ಯಾರೋ ಅವರ ಹೃದಯಗಳನ್ನು ಅಲ್ಲಾಹನು ತಕ್ವಾಕ್ಕೆ (ಭಯ ಭಕ್ತಿಗೆ) ಪರೀಕ್ಷಿಸಿ ತೆಗೆದಿರುವನು. ಅವರಿಗೆ ಪಾಪ ಮುಕ್ತಿ ಯೂ ಘನವೆತ್ತ ಪ್ರತಿಫಲವೂ ಇದೆ .
(ಸಂದೇಶವಾಹಕರೇ,) ತಮ್ಮನ್ನು ಕೊಠಡಿಗಳ ಹೊರಗಿನಿಂದ ಕೂಗಿ ಕರೆಯುವವರ ಪೈಕಿ ಹೆಚ್ಚಿನವರು (ತಮ್ಮ ಮಹತ್ವವನ್ನು) ಗ್ರಹಿಸಿಕೊಂಡವರಲ್ಲ.
ತಾವು ಅವರ ಬಳಿಗೆ ಹೊರಟು ಬರುವ ತನಕ ಅವರು ತಾಳ್ಮೆ ವಹಿಸುತ್ತಿದ್ದರೆ ಅದು ಅವರಿಗೆ ಬಹಳ ಒಳ್ಳೆಯದಿತ್ತು. ಅಲ್ಲಾಹನು ಅತಿ ಕ್ಷಮಾಶೀಲನೂ ಕರುಣಾವಾರಿಧಿಯೂ ಆಗಿರುತ್ತಾನೆ.
ಸತ್ಯವಿಶ್ವಾಸಿಗಳೇ, ಅಶ್ರದ್ಧನೊಬ್ಬನು ನಿಮ್ಮ ಬಳಿ ಗೇನಾದರೂ ಸುದ್ದಿ ತಂದರೆ ಅದರ ಬಗ್ಗೆ ಸ್ಪಷ್ಟವಾಗಿ (ಸತ್ಯಾಸತ್ಯತೆಯನ್ನು) ತಿಳಿದುಕೊಳ್ಳಿರಿ. ನೀವು ತಿಳಿಯದೆ ಯಾವುದೇ ಒಂದು ಸಮೂಹಕ್ಕೆ ಹಾನಿ ಮಾಡಿ, ಆ ಬಳಿಕ ನಿಮ್ಮ ಕೃತ್ಯದ ಬಗ್ಗೆ ಪಶ್ಚಾ ತ್ತಾ ಪಪಡುವಂತಾಗದಿರಲು (ಈ ಆದೇಶ)
ನಿಮ್ಮಲ್ಲಿ ಅಲ್ಲಾಹನ ಸಂದೇಶವಾಹಕರಿದ್ದಾರೆ ಎಂಬುದನ್ನು ನೀವು ಚೆನ್ನಾಗಿ ತಿಳಿದುಕೊಳ್ಳಿರಿ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಮಾತನ್ನು ಅನುಸರಿಸಿದರೆ, ನೀವು ಸಂಕಷ್ಟಕ್ಕೊಳಗಾಗುವಿರಿ. ಆದರೆ, ಅಲ್ಲಾಹನು ನಿಮಗೆ ಸತ್ಯವಿಶ್ವಾಸವನ್ನು ಪ್ರಿಯಗೊಳಿಸಿರುವನು ಹಾಗೂ ಅದನ್ನು ನಿಮ್ಮ ಹೃದಯಗಳಲ್ಲಿ ಚಂದಗಾಣಿಸಿರುವನು. ಅವಿಶ್ವಾಸ, ಕರ್ಮಭ್ರಷ್ಟತೆ, ಆಜ್ಞೋಲ್ಲಂಘನೆಯನ್ನು ನಿಮಗೆ ಅನಿಷ್ಟಗೊಳಿಸಿದನು. ಅವರೇ ಸನ್ಮಾರ್ಗದರ್ಶಿಗಳು.
(ಈ ವಿಜಯವು) ಅಲ್ಲಾಹನ ಔದಾರ್ಯ ಮತ್ತು ಕೃಪೆಯಿಂದಲೇ ಆಗಿದೆ. ಅಲ್ಲಾಹು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ.
ಸತ್ಯವಿಶ್ವಾಸಿಗಳಲ್ಲಿ ಎರಡು ಗುಂಪುಗಳು ಪರಸ್ಪರ ಕಾದಾಡಿದರೆ, ಅವರ ನಡುವೆ ನೀವು ಸಂಧಾನ ಮಾಡಿಸಿರಿ. ಅವರಲ್ಲಿ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿರೇಕವೆಸಗಿದರೆ, ಅತಿರೇಕವೆಸಗಿದವರು ಅಲ್ಲಾಹನ ಆದೇಶದೆಡೆಗೆ ಮರಳಿ ಬರುವವರೆಗೂ ನೀವು ಅವರ ವಿರುದ್ಧ ಹೋರಾಡಿರಿ. ಆಮೇಲೆ ಅವರು ಮರಳಿ ಬಂದರೆ, ಅವರ ಮಧ್ಯೆ ನ್ಯಾಯಬದ್ಧ ಸಂಧಾನ ಮಾಡಿಸಿರಿ ಮತ್ತು ನ್ಯಾಯವನ್ನು ಪಾಲಿಸಿರಿ. ನ್ಯಾಯ ಪರಿಪಾಲಕರನ್ನು ಅಲ್ಲಾಹು ಖಂಡಿತಾ ಪ್ರೀತಿಸುತ್ತಾನೆ.
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರು. ಆದುದರಿಂದ ನಿಮ್ಮ ಇಬ್ಬರು ಸಹೋದರರ ನಡುವೆ ಸಂಧಾನ ನಡೆಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. ನೀವು ಅನುಗ್ರಹೀತರಾಗಬಹುದು.
ಓ ಸತ್ಯವಿಶ್ವಾಸಿಗಳೇ, ಒಂದು ವಿಭಾಗ ಇನ್ನೊಂದು ವಿಭಾಗವನ್ನು ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯಕ್ಕೊಳಗಾದವರು) ಇವರಿಗಿಂತ ಉತ್ತಮರಿರಲೂಬಹುದು. ಸ್ತ್ರೀಯರು ಇತರ ಸ್ತ್ರೀಯರನ್ನೂ ಪರಿಹಾಸ್ಯ ಮಾಡದಿರಲಿ. ಅವರು (ಪರಿಹಾಸ್ಯ ಕ್ಕೊಳಗಾದ ಸ್ತ್ರೀಯರು) ಇವರಿಗಿಂತ ಉತ್ತಮರಿರಲೂಬಹುದು. ನೀವು ನಿಮ್ಮನ್ನೇ ಹಳಿದುಕೊಳ್ಳಬೇಡಿರಿ. ಮತ್ತು ಪರಸ್ಪರ ಅಡ್ಡ ಹೆಸರಿನಿಂದ ಕರೆದುಕೊಳ್ಳದಿರಿ. ಸತ್ಯ ವಿಶ್ವಾಸ ಸ್ವೀಕರಿಸಿದ ಬಳಿಕ ಅಧಾರ್ಮಿಕ ಹೆಸರು ಎಷ್ಟೊಂದು ನಿಕೃಷ್ಟ. ಯಾರು ಇದರಿಂದ ಪಶ್ಚಾತ್ತಾಪಪಟ್ಟು ಮರಳುವುದಿಲ್ಲವೋ ಅವರೇ ಅಕ್ರಮಿಗಳು.
ಓ ಸತ್ಯವಿಶ್ವಾಸಿಗಳೇ, ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿ ಗಳು ಪಾಪಕರವಾಗಿವೆ. ನೀವು ಗೂಡಚಾರಿಕೆ ನಡೆಸದಿರಿ. ನೀವು ಪರಸ್ಪರ ಪರದೂಷಣೆ ಮಾಡದಿರಿ. ನೀವು ಪ್ರತಿಯೊಬ್ಬರು ತನ್ನ ಸಹೋದರ ಮೃತನಾಗಿರುವಾಗ ಅವನ ಕಳೇಬರದ ಮಾಂಸ ತಿನ್ನಲು ಇಷ್ಟಪಡುವಿರಾ? ನೀವದನ್ನು ಅನಿಷ್ಟಪಡುವಿರಿ. ಅಲ್ಲಾಹನನ್ನು ಭಯಪಡಿರಿ, ಅಲ್ಲಾಹು ಯಥೇಚ್ಚಪಶ್ಚಾತ್ತಾಪ ಸ್ವೀಕರಿಸುವವನೂ ಪರಮ ದಯಾಳುವೂ ಆಗಿರುತ್ತಾನೆ .
ಓ ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿದೆವು. ನೀವು ಪರಸ್ಪರ ಗುರುತಿಸಿಕೊಳ್ಳುವ ಸಲುವಾಗಿ ನಾವು ನಿಮ್ಮನ್ನು ವಿವಿಧ ಜನಾಂಗಗಳಾಗಿಯೂ, ಗೋತ್ರ ಗಳಾಗಿಯೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಟನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮಜ್ಞನೂ ಆಗಿರುತ್ತಾನೆ.
ಗ್ರಾಮೀಣ ಅರಬರು `ನಾವು ವಿಶ್ವಾಸವಿರಿಸಿದ್ದೇವೆ’ ಎನ್ನುತ್ತಾರೆ. (ಪ್ರವಾದಿಯರೇ,) ಹೇಳಿರಿ: `ನೀವು ವಿಶ್ವಾಸವಿರಿಸಲಿಲ್ಲ. (ಬಾಹ್ಯವಾಗಿ ಶರಣಾಗಿರು ವುದು ಮಾತ್ರ). ಆದರೆ `ನಾವು ವಿಧೇಯರಾಗಿದ್ದೇವೆ’ ಎಂದು ನೀವು ಹೇಳಿಕೊಳ್ಳಿರಿ. ಸತ್ಯ ವಿಶ್ವಾಸವು ನಿಮ್ಮ ಹೃದಯಗಳಲ್ಲಿ ಪ್ರವೇಶಿಸಿಲ್ಲ. ನೀವು ಅಲ್ಲಾಹು ಮತ್ತು ಅವನ ದೂತರನ್ನು ಅನುಸರಣೆ ಮಾಡಿದರೆ, ಅವನು ನಿಮಗೆ ನಿಮ್ಮ ಸುಕೃತಗಳ ಪ್ರತಿಫಲದಿಂದ ಒಂದಿಷ್ಟು ಕಡಿತ ಗೊಳಿಸಲಾರನು. ನಿಶ್ಚಯವಾಗಿಯೂ ಅಲ್ಲಾಹು ಮಹಾ ಕ್ಷಮಾಶೀಲನೂ ತೀವ್ರ ದಯಾಳುವೂ ಆಗಿರುತ್ತಾನೆ.
ಅಲ್ಲಾಹು ಮತ್ತು ಅವನ ದೂತರಲ್ಲಿ ವಿಶ್ವಾಸವಿಟ್ಟು, ಆ ಬಳಿಕ ಸ್ವಲ್ಪವೂ ಸಂಶಯಗ್ರಸ್ತರಾಗದವರು ಮತ್ತು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡಿದವರು ಯಾರೋ ಅವರೇ ವಾಸ್ತವದಲ್ಲಿ ಸತ್ಯವಿಶ್ವಾಸಿಗಳು. ಅವರೇ ಸತ್ಯಸಂಧರು.
(ಸಂದೇಶವಾಹಕರೇ,) ಕೇಳಿರಿ, ನಿಮ್ಮ ಧರ್ಮ ನಿಷ್ಠೆಯ ಕುರಿತು ನೀವು ಅಲ್ಲಾಹನಿಗೆ ಕಲಿಸುತ್ತಿ ರುವಿರಾ? ಭೂಮ್ಯಾಕಾಶಗಳಲ್ಲಿರುವುದನ್ನೆಲ್ಲ ಅಲ್ಲಾಹನು ಬಲ್ಲನು. ಅಲ್ಲಾಹು ಸಕಲ ವಸ್ತುಗಳ ಜ್ಞಾನವುಳ್ಳವನಾಗಿರುತ್ತಾನೆ.
ಅವರು ಇಸ್ಲಾಮ್ ಸ್ವೀಕರಿಸಿಕೊಂಡಿರುವುದನ್ನು ತಮಗೆ ಮಾಡಿದ ಒಂದು ಔದಾರ್ಯವನ್ನಾಗಿ ಎತ್ತಿ ತೋರಿಸುತ್ತಾರೆ. ನೀವು ಹೇಳಿರಿ. ‘ನೀವು ಇಸ್ಲಾಮ್ ಸ್ವೀಕರಿಸಿರುವುದನ್ನು ನನ್ನ ಮೇಲಿನ ಒಂದು ಔದಾರ್ಯವನ್ನಾಗಿ ಪ್ರದರ್ಶಿಸಬೇಡಿರಿ. ವಾಸ್ತವದಲ್ಲಿ ನೀವು ಸತ್ಯವಂತರಾಗಿದ್ದರೆ ನಿಮಗೆ ಸತ್ಯವಿಶ್ವಾಸದ ದಾರಿ ತೋರುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಔದಾರ್ಯ ತೋರಿದ್ದಾನೆ’.
ನಿಶ್ಚಯವಾಗಿಯೂ ಅಲ್ಲಾಹನು ಆಕಾಶಗಳ ಮತ್ತು ಭೂಮಿಯ ಅದೃಶ್ಯವನ್ನು ಬಲ್ಲವನು ಮತ್ತು ನಿಮ್ಮ ಕಾರ್ಯ ಪ್ರವರ್ತಿಗಳನ್ನು ಕಂಡರಿಯುವವನು.