All Islam Directory
1

(ಪ್ರವಾದಿವರ್ಯರೇ,) ನಾವು ತಮಗೆ ಸುಸ್ಪಷ್ಟ ವಿಜಯವೊಂದನ್ನು ಪ್ರದಾನ ಮಾಡಿದೆವು.

2

3

ಅಲ್ಲಾಹನು ತಮ್ಮ ಹಿಂದಿನ ಹಾಗೂ ಮುಂದಿನ ಎಲ್ಲ ಎಡವುಗಳನ್ನು ತಮಗೆ ಕ್ಷಮಿಸಲಿಕ್ಕಾಗಿ, ತಮ್ಮ ಮೇಲೆ ತನ್ನ ಅನುಗ್ರಹವನ್ನು ಪರಿಪೂರ್ಣಗೊಳಿಸಲಿಕ್ಕಾಗಿ, ತಮಗೆ ಸನ್ಮಾರ್ಗವನ್ನು ನೆಲೆಗೊಳಿಸಲಿಕ್ಕಾಗಿ ಮತ್ತು ತಮಗೆ ಘನವೆತ್ತ ಸಹಾಯವನ್ನು ನೀಡಲಿಕ್ಕಾಗಿ.

4

ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಪ್ರಶಾಂತತೆಯನ್ನು ಇಳಿಸಿದವನು ಅವನೇ. ಅವರು ತಮ್ಮ ವಿಶ್ವಾಸದ ಮೇಲೆ ವಿಶ್ವಾಸವನ್ನು ವರ್ಧಿಸಿಕೊಳ್ಳುವಂತಾಗಲಿಕ್ಕಾಗಿ, ಅಲ್ಲಾಹನಿಗೆ ಆಕಾಶಗಳಲ್ಲೂ, ಭೂಮಿಯಲ್ಲೂ ಸೇನೆಗಳಿವೆ. ಅವನು ಸರ್ವಜ್ಞನೂ, ಯುಕ್ತಿವಂತನೂ ಆಗಿರುತ್ತಾನೆ.

5

ಸತ್ಯವಿಶ್ವಾಸಿ ಪುರುಷರನ್ನು ಮತ್ತು ಸ್ತೀಯರನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂ ತಹ ಸ್ವರ್ಗೋದ್ಯಾನಗಳಲ್ಲಿ ಸ್ಥಿರವಾಸಿಗಳಾಗಿ ಪ್ರವೇಶಗೊಳಿಸಲಿಕ್ಕಾಗಿ ಮತ್ತು ಅವರ ದೋಷಗಳನ್ನು ಕ್ಷಮಿಸಿ ಕೊಡಲಿಕ್ಕಾಗಿ. ಅಲ್ಲಾಹನ ಬಳಿ ಅದು ಮಹಾ ವಿಜಯವಾಗಿದೆ.

6

ಅಲ್ಲಾಹನ ಕುರಿತು ಕೆಟ್ಟ ಭಾವನೆಗಳನ್ನಿಟ್ಟುಕೊಂಡಿದ್ದ ಕಪಟ ವಿಶ್ವಾಸಿಗಳಾದ ಸ್ತ್ರೀ-ಪುರುಷರನ್ನೂ ಬಹುದೇವಾರಾಧಕರಾದ ಸ್ತ್ರೀ-ಪುರುಷರನ್ನೂ ಶಿಕ್ಷಿಸಲಿಕ್ಕಾಗಿ. ಅವರಿಗೆ ನಾಶವು ಸುತ್ತುವರಿದಿದೆ. ಅವರ ಮೇಲೆ ಅಲ್ಲಾಹನು ಕ್ರೋಧಗೊಂಡನು ಮತ್ತು ಅವರನ್ನು ಶಪಿಸಿದನು. ಅವರಿಗಾಗಿ ಅತ್ಯಂತ ಕೆಟ್ಟ ವಾಸಸ್ಥಾನವಾಗಿರುವ ನರಕವನ್ನು ಕಾದಿರಿಸಿದನು.

7

ಅಲ್ಲಾಹನಿಗೆ ಆಕಾಶ-ಭೂಮಿಗಳಲ್ಲಿ ಸೇನೆಗಳಿವೆ. ಅವನು ಪ್ರಬಲನೂ ಯುಕ್ತಿಜ್ಞನೂ ಆಗಿರುತ್ತಾನೆ.

8

(ಸಂದೇಶವಾಹಕರೇ,) ನಾವು ತಮ್ಮನ್ನು ಸಾಕ್ಷಿ ಯಾಗಿಯೂ, (ಸ್ವರ್ಗದ) ಸುವಾರ್ತೆ ನೀಡುವವ ರಾಗಿಯೂ ಮತ್ತು (ನರಕದ) ಎಚ್ಚರಿಕೆ ನೀಡುವವರಾಗಿಯೂ ನಿಯೋಗಿಸಿದ್ದೇವೆ.

9

(ಜನರೇ,) ನೀವು ಅಲ್ಲಾಹನಲ್ಲೂ ಅವನ ದೂತರಲ್ಲೂ ವಿಶ್ವಾಸವಿರಿಸಲು, ಅವನಿಗೆ (ಅಲ್ಲಾಹನಿಗೆ) ನೆರವಾಗಲು, ಅವನನ್ನು ಗೌರವಿಸಲು ಮತ್ತು ಸಂಜೆ- ಮುಂಜಾನೆ ಅವನ ಪರಿಶುದ್ಧಿಯನ್ನು ಪ್ರಕೀರ್ತಿಸಲಿಕ್ಕಾಗಿ.

10

(ಸಂದೇಶವಾಹಕರೇ,) ತಮ್ಮೊಂದಿಗೆ (ಹುದೈಬಿ ಯಾದಲ್ಲಿ) ಒಪ್ಪಂದ ಮಾಡಿಕೊಂಡವರು ವಾಸ್ತವದಲ್ಲಿ ಅಲ್ಲಾಹನೊಂದಿಗೆ ಒಪ್ಪಂದ ಮಾಡಿಕೊಂಡರು. ಅವರ ಹಸ್ತಗಳ ಮೇಲೆ ಅಲ್ಲಾಹನ ಜ್ಞಾನ ಹಸ್ತವಿದೆ . ಹೀಗಾಗಿ ಯಾರು ಈ ಒಪ್ಪಂದವನ್ನು ಉಲ್ಲಂಘಿಸುತ್ತಾರೆ ಅವನು ತನ್ನ ವಿರುದ್ಧವೇ ಆ ಉಲ್ಲಂಘನೆ ನಡೆಸುತ್ತಾನೆ. ಯಾರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಪಾಲಿಸುವನೋ ಅವನಿಗೆ ಅಲ್ಲಾಹನು ಶೀಘ್ರವೇ ಘನವೆತ್ತ ಪ್ರತಿಫಲವನ್ನು ದಯಪಾಲಿಸುವನು.

11

(ಸಂದೇಶವಾಹಕರೇ,) ನಿಮ್ಮ ಜತೆ ಬಾರದೆ ಉಳಿದ ಗುಡ್ಡಗಾಡು ಜನಾಂಗದವರು ಖಂಡಿತ ನಿಮ್ಮ ಬಳಿ ಬಂದು; “ನಮ್ಮ ಸೊತ್ತು ಮತ್ತು ಮನೆ ಮಂದಿಯ ಚಿಂತೆಯು ನಮಗೆ ತಡೆಯಾದುವು. ನಮ್ಮ ಕ್ಷಮೆಗಾಗಿ ತಾವು ಪ್ರಾರ್ಥಿಸಿರಿ” ಎಂದು ಹೇಳುವರು. ಇವರು ತಮ್ಮ ಹೃದಯಗಳಲ್ಲಿಲ್ಲದ ಮಾತುಗಳನ್ನು ನಾಲಗೆಗಳಿಂದ ಆಡುತ್ತಾರೆ. ಹೇಳಿರಿ; “ಹಾಗಾದರೆ ಅಲ್ಲಾಹನು ನಿಮಗೆ ಯಾವುದೇ ದೋಷವನ್ನು ಮಾಡಲು ಇಚ್ಛಿಸಿದರೆ, ಅಥವಾ ನಿಮಗೆ ಯಾವುದೇ ಗುಣ ವನ್ನು ಅವನು ಇಚ್ಛಿಸಿದರೆ ಅಲ್ಲಾಹನಿಂದ ಯಾವುದೇ ವಸ್ತುವನ್ನು ಅಧೀನಗೊಳಿಸಬಲ್ಲವರು ಯಾರಿದ್ದಾರೆ? ಆದರೆ ನೀವು ಮಾಡುವ ಕರ್ಮದ ಬಗ್ಗೆ ಅಲ್ಲಾಹನು ಸೂಕ್ಷ್ಮಜ್ಞಾನಿಯಾಗಿದ್ದಾನೆ.

12

ವಾಸ್ತವದಲ್ಲಿ ದೂತರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಕುಟುಂಬಗಳಿಗೆ ಎಂದಿಗೂ ಮರಳಲಾರರು ಎಂದು ನೀವು ಭಾವಿಸಿಕೊಂಡಿದ್ದಿರಿ. ಅದು ನಿಮ್ಮ ಮನಸ್ಸುಗಳಲ್ಲಿ ಮೆರುಗು ಮೂಡಿಸಿತು. ನೀವು ಬಹಳ ಕೆಟ್ಟ ಗುಮಾನಿಗಳನ್ನು ಮಾಡಿದಿರಿ. ನೀವು ನಾಶ ಹೊಂದಿದ ಜನಾಂಗವಾದಿರಿ”.

13

ಯಾರು ಅಲ್ಲಾಹು ಮತ್ತು ಅವನ ದೂತರಲ್ಲಿ ವಿಶ್ವಾಸವಿರಿಸಲಿಲ್ಲವೋ, (ಅವನು ಪರಾಜಿತನಾ ದನು. ಏಕೆಂದರೆ,) ಸತ್ಯನಿಷೇಧಿಗಳಿಗಾಗಿ ನಾವು ಕಠಿಣವಾದ ನರಕಾಗ್ನಿಯನ್ನು ಸಿದ್ಧ ಗೊಳಿಸಿಟ್ಟಿರುತ್ತೇವೆ.

14

ಆಕಾಶಗಳು ಮತ್ತು ಭೂಮಿಯ ಆಧಿಪತ್ಯ ಅಲ್ಲಾಹನಿಗೆ. ಅವನು ತಾನಿಚ್ಛಿಸಿದವರಿಗೆ ಕ್ಷಮಿ ಸುತ್ತಾನೆ, ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅವನು ಕ್ಷಮಾಶೀಲನೂ ದಯಾಳುವೂ ಆಗಿರುತ್ತಾನೆ.

15

ನೀವು ಸಮರಾರ್ಜಿತ ಸೊತ್ತನ್ನು ಪಡೆಯಲು ಹೊರಟಾಗ ಹಿಂದುಳಿದ ಈ ಜನರು-ನಮ್ಮನ್ನೂ ನೀವು (ತಡೆಯದೆ) ಬಿಟ್ಟು ಬಿಡಿರಿ. ನಿಮ್ಮ ಜೊತೆ ನಾವು ಹಿಂಬಾಲಿಸುತ್ತೇವೆ ಎಂದು ನಿಮ್ಮೊಡನೆ ಖಂಡಿತ ಹೇಳುವರು. ಇವರು ಅಲ್ಲಾಹನ ಮಾತನ್ನು ಬದಲಿಸಿ ಬಿಡಬೇಕೆಂದು ಇಚ್ಛಿಸುತ್ತಾರೆ. ಹೇಳಿರಿ; ‘ಖಂಡಿತ ನೀವು ನಮ್ಮ ಜೊತೆ ಬರುವಂತಿಲ್ಲ. ಅಲ್ಲಾಹನು ಈ ಮೊದಲೇ ಇದನ್ನು ಹೇಳಿರುತ್ತಾನೆ’. ಆಗ ಇವರು - ‘ಇಲ್ಲ, ನೀವು ನಮ್ಮ ಬಗ್ಗೆ ಅಸೂಯೆಪಡುತ್ತಿರುವಿರಿ’ ಎಂದು ಹೇಳುವರು. ಆದರೆ ಗ್ರಹಿಸಿಕೊಳ್ಳುವವರು ಇವರಲ್ಲಿ ಅಲ್ಪ ಜನ ಮಾತ್ರವೇ ಹೊರತು ಇನ್ನಾರೂ ಯೋಚಿಸುವುದಿಲ್ಲ.

16

ಹಿಂಜರಿದಂತಹ ಈ ಗ್ರಾಮೀಣ ಅರಬರೊಂದಿಗೆ ಹೇಳಿರಿ: “ಶೀಘ್ರವೇ ನಿಮ್ಮನ್ನು ಬಹಳ ಬಲಿಷ್ಟರಾಗಿರುವ ಜನಾಂಗದೊಂದಿಗೆ ಯುದ್ಧ ಮಾಡಲಿಕ್ಕಾಗಿ ಕರೆಯಲಾಗುವುದು. ನೀವು ಅವರೊಂದಿಗೆ ಯುದ್ದ ಮಾಡಬೇಕಾದೀತು. ಅಥವಾ ಅವರು ಶರಣಾಗುವರು. ಆಗ ನೀವು ಆಜ್ಞೆಯನ್ನು ಪಾಲಿಸಿದರೆ, ಅಲ್ಲಾಹು ನಿಮಗೆ ಅತ್ಯುತ್ತಮ ಪ್ರತಿಫಲ ನೀಡುವನು. ನೀವು ಈ ಹಿಂದೆ ವಿಮುಖರಾದಂತೆಯೇ ಪುನಃ ವಿಮುಖರಾದರೆ ಅಲ್ಲಾಹು ನಿಮಗೆ ವೇದನಾಯುಕ್ತ ಯಾತನೆ ಕೊಡುವನು.

17

ಕುರುಡನ ಮೇಲೆ ತಪ್ಪಿಲ್ಲ. ಕುಂಟನ ಮೇಲೂ ತಪ್ಪಿಲ್ಲ. ಮತ್ತು ರೋಗಿಯ ಮೇಲೂ ತಪ್ಪಿಲ್ಲ. ಯಾರು ಅಲ್ಲಾಹು ಮತ್ತು ಅವನ ದೂತರ ಅನು ಸರಣೆ ಮಾಡುತ್ತಾರೋ, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿಗೆ ಅಲ್ಲಾಹನು ಪ್ರವೇಶ ಕೊಡುವನು. ಯಾರು ವಿಮುಖನಾಗುವನೋ ಅವನಿಗೆ ಅವನು ವೇದನಾಯುಕ್ತ ಶಿಕ್ಷೆಯನ್ನು ಕೊಡುವನು.

18

ಆ ವೃಕ್ಷದಡಿಯಲ್ಲಿ ನಿಮ್ಮೊಂದಿಗೆ ಸತ್ಯವಿಶ್ವಾಸಿ ಗಳು ಆಜ್ಞಾನುಸರಣೆಯ ಒಪ್ಪಂದ ಮಾಡುತ್ತಿದ್ದಾಗ ಅಲ್ಲಾಹನು ಅವರಿಂದ ಸಂತುಷ್ಟನಾದನು. ಅವನು ಅವರ ಮನಸ್ಸಿನಲ್ಲಿರುವುದನ್ನು ತಿಳಿದಿದ್ದನು. ಆದುದರಿಂದ ಅವನು ಅವರ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಅವರಿಗೆ ಶೀಘ್ರ ವಿಜಯವನ್ನು ಪ್ರತಿಫಲವನ್ನಾಗಿ ನೀಡಿದನು.

19

ಮತ್ತು ಅವರು ಪಡೆದುಕೊಳ್ಳುವಂತಹ ಧಾರಾಳ ಸಮರಾರ್ಜಿತ ಸೊತ್ತನ್ನು ನೀಡಲಿರುವನು. ಅಲ್ಲಾಹು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.

20

ನೀವು ಪಡೆಯುವಂತಹ ಧಾರಾಳ ಸಮರಾರ್ಜಿತ ಸೊತ್ತಿನ ವಾಗ್ದಾನವನ್ನು ಅಲ್ಲಾಹನು ನೀಡಿರುವನು. ಇದನ್ನು (ಖೈಬರಿನ ಸಮರಾರ್ಜಿತ ಸ್ವತ್ತನ್ನು) ಅವನು ನಿಮಗೆ ಧೃತಿಯಲ್ಲಿ ಕೊಟ್ಟನು ಮತ್ತು ಜನರ ಕೈಗಳು ನಿಮ್ಮ ವಿರುದ್ಧ ಏಳದಂತೆ ತಡೆದನು. ಸತ್ಯವಿಶ್ವಾಸಿಗಳ ಪಾಲಿಗೆ ಇದು ಒಂದು ನಿದರ್ಶನವಾಗಲೆಂದು ಮತ್ತು ಅಲ್ಲಾ ಹನು ನಿಮ್ಮನ್ನು ಸನ್ಮಾರ್ಗದೆಡೆಗೆ ಸಾಗಿಸಲೆಂದು.

21

ನಿಮಗಿನ್ನೂ ಗಳಿಸಲು ಸಾಧ್ಯವಾಗದ ಮತ್ತಷ್ಟು ಸಮರಾರ್ಜಿತ ಸೊತ್ತನ್ನೂ ಅವನು ನಿಮಗೆ ವಾಗ್ದಾನ ಮಾಡಿರುವನು. ಅಲ್ಲಾಹನು ಅವುಗಳನ್ನು ಸುತ್ತುವರಿದಿದ್ದಾನೆ. ಅಲ್ಲಾಹನು ಸಕಲ ವಿಷಯಗಳಿಗೆ ಸಾಮಥ್ರ್ಯವುಳ್ಳವನಾಗಿದ್ದಾನೆ.

22

ಆ ಸತ್ಯನಿಷೇಧಿಗಳು ನಿಮ್ಮೊಂದಿಗೆ ಯುದ್ಧ ಮಾಡುತ್ತಿದ್ದರೆ ಖಂಡಿತ ಪಲಾಯನ ಮಾಡುತ್ತಿದ್ದರು. ನಂತರ ಅವರಿಗೆ ರಕ್ಷಕ ಮಿತ್ರರಾಗಲಿ, ಸಹಾಯಕರಾಗಲಿ ಯಾರೂ ಸಿಗುತ್ತಿರಲಿಲ್ಲ.

23

ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಅಲ್ಲಾಹನ ಕಾರ್ಯವಿಧಾನವಾಗಿದೆ. ಅಲ್ಲಾಹನ ಕಾರ್ಯವಿಧಾನದಲ್ಲಿ ಯಾವ ಬದಲಾವಣೆಯನ್ನೂ ನೀವು ಕಾಣಲಾರಿರಿ.

24

ಅವರನ್ನು ನೀವು ಗೆದ್ದ ನಂತರ ಮಕ್ಕಾ ಕಣಿವೆಯಲ್ಲಿ (ಹುದೈಬಿಯಾದಲ್ಲಿ) ಅವರ ಕೈಗಳನ್ನು ನಿಮ್ಮಿಂದಲೂ ನಿಮ್ಮ ಕೈಗಳನ್ನು ಅವರಿಂದಲೂ ತಡೆದವನು ಅವನೇ, ನೀವು ಮಾಡುತ್ತಿದ್ದುದನ್ನೆಲ್ಲ ಅಲ್ಲಾಹನು ವೀಕ್ಷಿಸುತ್ತಿದ್ದನು.

25

ಇವರೇ ಅವಿಶ್ವಾಸ ತಾಳಿದವರು. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದವರು ಮತ್ತು ಬಲಿ ಪ್ರಾಣಿಗಳನ್ನು ಅವುಗಳ ನೆಲೆಗೆ ತಲುಪಲು ಬಿಡದವರು. ನಿಮಗೆ ತಿಳಿಯದ ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರು (ಮಕ್ಕಾದಲ್ಲಿ ಇವರ ಜೊತೆ) ಇಲ್ಲದಿರುತ್ತಿದ್ದರೆ, ಅಂದರೆ (ನಿಮಗೆ ಯುದ್ಧಾನುಮತಿ ಸಿಕ್ಕಿದರೆ) ನೀವು ಅವರ ಬಗ್ಗೆ ತಿಳುವಳಿಕೆಯಿಲ್ಲದೆ (ಅವಿಶ್ವಾಸಿಗಳೊಂದಿಗೆ) ವಧಿಸಿ ಬಿಡುವ ಹಾಗೂ ಮತ್ತು ಅದರಿಂದ ನಿಮಗೆ ದೋಷ ಬರುವ ಅಪಾಯವಿಲ್ಲದಿರುತ್ತಿದ್ದರೆ, (ಮಕ್ಕಾದ ಮೇಲೆ ದಾಳಿ ಮಾಡಲು ನಿಮಗೆ ಅನುಮತಿ ನೀಡಲಾಗುತ್ತಿತ್ತು). ಇದು ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಕೃಪೆಯಲ್ಲಿ ಸೇರಿಸಿಕೊಳ್ಳುವಂತಾಗಲು. ಆ ಸತ್ಯವಿಶ್ವಾಸಿಗಳು (ಅವಿಶ್ವಾಸಿಗಳಿಂದ) ಬೇರ್ಪಟ್ಟಿರುತ್ತಿದ್ದರೆ ಸತ್ಯನಿಷೇಧಿಗಳಿಗೆ ನಾವು ಖಂಡಿತವಾಗಿಯೂ ವೇದನಾಯುಕ್ತ ಶಿಕ್ಷೆ ಕೊಡುತ್ತಿದ್ದೆವು .

26

ಆ ಸತ್ಯನಿಷೇಧಿಗಳು ತಮ್ಮ ಹೃದಯಗಳಲ್ಲಿ ಅಜ್ಞಾನ ಜನ್ಯ ದುರಭಿಮಾನವನ್ನಿರಿಸಿಕೊಂಡಾಗ ಅಲ್ಲಾಹನು ತನ್ನ ದೂತರ ಮತ್ತು ಸತ್ಯವಿಶ್ವಾಸಿಗಳ ಮೇಲೆ ಪ್ರಶಾಂತತೆಯನ್ನು ಇಳಿಸಿದನು. ಮತ್ತು ಅವರನ್ನು ದೇವಭಕ್ತಿಯ ನುಡಿಗೆ ಬದ್ಧರಾಗಿರುವಂತೆ ಮಾಡಿದನು. ಏಕೆಂದರೆ ಇದಕ್ಕೆ ಅವರೇ ಹೆಚ್ಚು ಹಕ್ಕುದಾರರೂ ಅರ್ಹರೂ ಆಗಿದ್ದರು. ಅಲ್ಲಾಹನು ಸಕಲ ವಿಷಯಗಳ ಜ್ಞಾನವುಳ್ಳವನಾಗಿರುತ್ತಾನೆ.

27

ನಿಜಕ್ಕೂ ಅಲ್ಲಾಹನು ತನ್ನ ದೂತರಿಗೆ ಸ್ವಪ್ನವನ್ನು ಸಂಪೂರ್ಣ ಸತ್ಯವಾಗಿ ನಿಜಗೊಳಿಸಿದನು. ಅಂದರೆ ಅಲ್ಲಾಹನಿಚ್ಛಿಸಿದರೆ, ನೀವು ಸಮಾಧಾನ ಚಿತ್ತರಾಗಿ ಕೇಶ ಮುಂಡನ ಮಾಡಿದವರೂ, ಕೂದಲು ಕತ್ತರಿಸಿಕೊಂಡವರೂ ಆಗಿ ಯಾವುದೇ ಭಯವಿಲ್ಲದೆ ಮಸ್ಜಿದುಲ್ ಹರಾಮನ್ನು ಖಂಡಿತ ಪ್ರವೇಶಿಸುವಿರಿ ಎಂಬ ಸ್ವಪ್ನವನ್ನು. ಆದರೆ ನೀವು ಅರಿಯದಿದ್ದುದನ್ನು ಅವನು ಅರಿತಿದ್ದನು. ಆದುದರಿಂದ ಅದಕ್ಕೆ (ಮಕ್ಕಾ ಪ್ರವೇಶಕ್ಕೆ) ಹೊರತಾಗಿ ಅವನು ಸನ್ನಿಹಿತವಾದ ಒಂದು ವಿಜಯವನ್ನು (ಖೈಬರ್ ವಿಜಯವನ್ನು) ನಿಮಗೆ ದಯಪಾಲಿಸಿದನು.

28

ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ಕಳುಹಿಸಿದವನು. ಅದನ್ನು ಸಕಲ ಧರ್ಮಗಳ ಮೇಲೆ ಸಮರ್ಥಿಸಿ ತೋರಿಸಲಿಕ್ಕಾಗಿ. ಸಾಕ್ಷಿಯಾಗಿ ಅಲ್ಲಾಹನೇ ಸಾಕು .

29

ಮುಹಮ್ಮದರು ಅಲ್ಲಾಹನ ಸಂದೇಶವಾಹಕರು. ಅವರ ಜೊತೆಗಿರುವವರು ಸತ್ಯನಿಷೇಧಿಗಳ ಪಾಲಿಗೆ ಕಠಿಣರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ. ಅಲ್ಲಾಹನ ಅನುಗ್ರಹ ಮತ್ತು ಸಂಪ್ರೀತಿಯನ್ನು ಅರಸುತ್ತ ಅವರು ರುಕೂಅï ಮತ್ತು ಸುಜೂದ್ ಮಾಡಿ ನಮಾಝ್ ಮಾಡು ವುದನ್ನು ನೀವು ಕಾಣುವಿರಿ. ಸುಜೂದ್‍ನ ಫಲ ವಾಗಿ ಅವರ ಗುರುತುಗಳು ಅವರ ಮುಖಗಳಲ್ಲಿವೆ. ಇದು ತೌರಾತ್‍ನಲ್ಲಿರುವ, ಅವರ ಗುಣ ವಿಶೇಷವಾಗಿದೆ. ಇನ್ಜೀಲ್‍ನಲ್ಲಿ ಅವರ ಉದಾಹರಣೆಯನ್ನು ಹೀಗೆ ಕೊಡಲಾಗಿದೆ. ಒಂದು ಪೈರು, ಅದು ಟಿಸಿಲೊಡೆಯಿತು. ತರುವಾಯ ಅದನ್ನು ಬಲಪಡಿಸಿಕೊಂಡಿತು. ಅನಂತರ ಅದು ಬಿರುಸುಗೊಂಡಿತು. ನಂತರ ಅದು ಕೃಷಿಕನನ್ನು ಮುದಗೊಳಿಸುತ್ತಾ ತನ್ನ ಕಾಂಡದ ಮೇಲೆ ನೆಲೆಯೂರಿತು. (ಸತ್ಯವಿಶ್ವಾಸಿಗಳಿಗೆ ಈ ಉಪಮೆ ನೀಡಿದ್ದು) ಇವರ ಮುಖಾಂತರ ಸತ್ಯನಿಷೇಧಿಗ ಳನ್ನು ಕೆರಳಿಸುವ ಸಲುವಾಗಿ. ಇವರ ಕೂಟದಲ್ಲಿ ಸತ್ಯವಿಶ್ವಾಸವಿರಿಸಿಕೊಂಡು ಸತ್ಕರ್ಮವೆಸಗಿದವರಿಗೆ ಅಲ್ಲಾಹನು ಕ್ಷಮೆ ಮತ್ತು ಘನವೆತ್ತ ಪ್ರತಿಫಲ ವಾಗ್ದಾನವಿತ್ತಿರುತ್ತಾನೆ.