ಆಲ್ ಇಸ್ಲಾಂ ಲೈಬ್ರರಿ
1

ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಯಾರೋ ಅವರ ಕರ್ಮ ಗಳನ್ನು ಅಲ್ಲಾಹನು ವ್ಯರ್ಥಗೊಳಿಸಿಬಿಟ್ಟನು.

2

ಸತ್ಯವಿಶ್ವಾಸ ಸ್ವೀಕರಿಸಿದ ಹಾಗೂ ಸತ್ಕರ್ಮ ಮಾಡಿದ, ಮುಹಮ್ಮದರ ಮೇಲೆ ಅವತೀರ್ಣ ಗೊಂಡದ್ದನ್ನು ಅವರ ಪ್ರಭುವಿನ ಕಡೆಯಿಂದ ಪರಮ ಸತ್ಯವಾದುದೆಂದು ನಂಬಿದವರ ಪಾಪಗಳನ್ನು ಅಲ್ಲಾಹು ಅವರಿಂದ ದೂರೀಕರಿಸಿ, ಅವರ ಸ್ಥಿತಿಯನ್ನು ಸರಿಪಡಿಸಿದನು.

3

ಅದೇಕೆಂದರೆ, ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ಅವರ ಪ್ರಭುವಿನ ಕಡೆಯಿಂದ ಬಂದಿರುವ ಸತ್ಯವನ್ನು ಅನುಸರಿಸಿದರು. ಈ ರೀತಿಯಲ್ಲಿ ಅಲ್ಲಾಹನು ಜನರಿಗೆ ಅವರ ಉಪಮೆಗಳನ್ನು ವಿವರಿಸಿ ಕೊಡುತ್ತಾನೆ.

4

ಆದುದರಿಂದ ಸತ್ಯನಿಷೇಧಿಗಳನ್ನು (ಯುದ್ಧದಲ್ಲಿ) ನೀವು ಎದುರುಗೊಂಡರೆ, ನೀವು ಅವರ ಕತ್ತು ಕಡಿಯಿರಿ. ನೀವು ಅವರನ್ನು ಸದೆಬಡಿದ ಬಳಿಕ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಆ ಬಳಿಕ ನೀವು ಅವರ ಮೇಲೆ ಸೌಜನ್ಯ ತೋರಿ ಬಿಡಬಹುದು ಅಥವಾ ಮೋಕ್ಷದ್ರವ್ಯ ಪಡೆದು ಬಿಟ್ಟು ಬಿಡಬಹುದು. ಇದು ಯುದ್ಧವು ಅದರ (ಆಯುಧ) ಹೊರೆಗಳನ್ನು ಕೆಳಗಿಡುವ ತನಕ. ಇದು ಯುದ್ಧದ ವಿಧಾನ. ಅಲ್ಲಾಹನಿಚ್ಛಿಸುತ್ತಿದ್ದರೆ (ಯುದ್ಧ ರಹಿತವಾಗಿ) ಸ್ವತಃ ಅವನೇ ಅವರನ್ನು ಶಿಕ್ಷಿಸುತ್ತಿದ್ದನು. ಆದರೆ, ನಿಮ್ಮನ್ನು ಪರಸ್ಪರರ ಮೂಲಕ ಪರೀಕ್ಷಿಸಲಿಕ್ಕಾಗಿ (ಅವನು ನಿಮ್ಮೊಂದಿಗೆ ಯುದ್ಧಕ್ಕೆ ಆದೇಶಿಸಿದನು) . ಅಲ್ಲಾಹನು ತನ್ನ ಮಾರ್ಗದಲ್ಲಿ ಹತರಾಗುವವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು.

5

ಅವನು ಅವರಿಗೆ (ಗೆಲುವಿಗೆ) ಮಾರ್ಗದರ್ಶನ ಮಾಡುವನು, ಅವರ ಸ್ಥಿತಿಯನ್ನು ಉತ್ತಮ ಗೊಳಿಸುವನು.

6

ಅವನು ಅವರಿಗೆ (ಮೊದಲೇ) ಪರಿಚಯಿಸಿ ಕೊಟ್ಟಿರುವಂತಹ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು.

7

ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ, ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು.

8

ಸತ್ಯನಿಷೇಧಿಗಳಿಗೆ ವಿನಾಶ ಕಾದಿದೆ ಮತ್ತು ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸಿಬಿಟ್ಟಿರುವನು.

9

ಏಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿದುದನ್ನು ಅನಿಷ್ಟಪಟ್ಟರು. ಆದುದರಿಂದ ಅಲ್ಲಾಹನು ಅವರ ಕರ್ಮಗಳನ್ನು ನಿಷ್ಪಲಗೊಳಿಸಿಬಿಟ್ಟನು.

10

ಅವರಿಗಿಂತ ಮುಂಚೆ ಗತಿಸಿದವರ ಗತಿಯೇ ನಾಯಿತೆಂಬುದನ್ನು ಕಂಡುಕೊಳ್ಳಲು ಅವರು ಭೂಮಿಯಲ್ಲಿ ಸಂಚರಿಸಲಿಲ್ಲವೇ? ಅಲ್ಲಾಹನು ಅವರನ್ನು ಧ್ವಂಸಗೊಳಿಸಿದನು. ಸತ್ಯನಿಷೇಧಿಗಳಿಗೆ ಇಂತಹದೇ ಆದ ಅನುಭವಗಳಿವೆ.

11

ಇದೇಕೆಂದರೆ, ಅಲ್ಲಾಹನು ಸತ್ಯವಿಶ್ವಾಸಿಗಳ ಸಹಾಯಕನಾಗಿದ್ದಾನೆ ಮತ್ತು ಸತ್ಯನಿಷೇಧಿಗಳಿಗೆ ಯಾರೂ ಸಹಾಯಕರಿಲ್ಲ.

12

ಸತ್ಯವಿಶ್ವಾಸವನ್ನು ಸ್ವೀಕರಿಸಿ ಸದಾಚಾರ ಕೈ ಗೊಂಡವರನ್ನು ಅಲ್ಲಾಹನು ತಳಭಾಗದಲ್ಲಿ ನದಿಗಳು ಹರಿಯುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಸತ್ಯನಿಷೇಧಿಗಳು (ಇಹಲೋಕದಲ್ಲಿ) ಸುಖಿಸುತ್ತಾ ಪಶುಗಳಂತೆ ತಿನ್ನುತ್ತಿದ್ದಾರೆ. ನರಕವೇ ಅವರ ಅಂತಿಮ ನೆಲೆಯಾಗಿದೆ.

13

(ಸಂದೇಶವಾಹಕರೇ,) ತಮ್ಮನ್ನು ಹೊರಹಾಕಿದ ತಮ್ಮ ನಾಡಿಗಿಂತ ಬಹಳಷ್ಟು ಬಲಿಷ್ಠವಾಗಿದ್ದ ಅದೆ ಷ್ಟೋ ನಾಡುಗಳಿವೆ. ನಾವು ಅವರನ್ನು ನಾಶಗೊಳಿಸಿದ್ದೇವೆ. ಆಗ ಅವರನ್ನು ರಕ್ಷಿಸುವ ಯಾವ ಸಹಾಯಕನೂ ಇರಲಿಲ್ಲ.

14

ತನ್ನ ಪ್ರಭುವಿನ ಕಡೆಯಿಂದ ಒಂದು ಸುಸ್ಪಷ್ಟ ಆಧಾರದಡಿಯಲ್ಲಿ ನೆಲೆಗೊಳ್ಳುವ ಒಬ್ಬನು ಸ್ವಯಂ ದುಷ್ಕøತ್ಯ ಚಂದಗಾಣಿಸಲ್ಪಟ್ಟು ತಮ್ಮ ಸ್ವೇಚ್ಛೆಗಳ ಬೆನ್ನು ಹತ್ತಿರುವ ಒಬ್ಬನಂತೆ ಆಗಬಲ್ಲನೇ? (ಒಮ್ಮೆಯೂ ಇಲ್ಲ).

15

ಧರ್ಮನಿಷ್ಟರಿಗೆ ವಾಗ್ಧಾನ ಮಾಡಲಾಗಿರುವ ಸ್ವರ್ಗದ ಉಪಮೆಯೇನೆಂದರೆ ಅದರಲ್ಲಿ ಕಳಂಕ ವಿಲ್ಲದ ತಿಳಿನೀರಿನ ಕಾಲುವೆಗಳಿವೆ. ಸ್ವಲ್ಪವೂ ರುಚಿ ಬದಲಾಗಿರದಂತಹ ಹಾಲಿನ ಕಾಲುವೆ ಗಳೂ ಕುಡಿಯುವವರಿಗೆ ಅತ್ಯಂತ ರುಚಿಕರವಾಗಿರುವ ಮದಿರೆಯ ಕಾಲುವೆಗಳೂ, ಸಂಸ್ಕರಿತ ಶುದ್ಧ ಜೇನಿನ ಕಾಲುವೆಗಳೂ ಇವೆ. ಅದರಲ್ಲಿ ಅವರಿಗಾಗಿ ಎಲ್ಲ ಬಗೆಯ ಫಲ ಮೂಲಗಳಿವೆ ಮತ್ತು ತಮ್ಮ ಪ್ರಭುವಿನ ಕಡೆಯಿಂದ ಅವರಿಗೆ ಕ್ಷಮೆಯೂ ಇದೆ. (ಇವರು) ಸದಾಕಾಲ ನರಕದಲ್ಲೇ ವಾಸಿಸಲಿರುವ ಜನರಿಗೆ ಸಮಾನರಾಗ ಬಲ್ಲರೇ? ಅವರಿಗೆ ಕರುಳುಗಳನ್ನು ಕತ್ತರಿಸಿ ಬಿಡುವಂತಹ ಕುದಿಯುವ ನೀರನ್ನು ಕುಡಿಸಲಾ ಗುವುದು .

16

ಅವರ ಪೈಕಿ ಕೆಲವರು ತಮ್ಮ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಾರೆ. ಆ ಬಳಿಕ ನಿಮ್ಮಲ್ಲಿಂದ ಹೊರಟು ಹೋದಾಗ, ವೇದಜ್ಞಾನದ ಅನುಗ್ರಹ ನೀಡಲ್ಪಟ್ಟವರೊಡನೆ, ಅವರು (ಪರಿಹಾಸಪೂರ್ವ) ಈಗ ಅವರು ಹೇಳಿದ್ದೇನು?’ ಎಂದು ಕೇಳುತ್ತಾರೆ. ಅಂಥವರ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರುವನು. ಮತ್ತು ಅವರು ತಮ್ಮ ಸ್ವೇಚ್ಛೆಗಳ ಬೆನ್ನು ಹತ್ತಿರುವರು .

17

ಸನ್ಮಾರ್ಗ ಹೊಂದಿದವರಿಗೆ ಅಲ್ಲಾಹನು ಇನ್ನಷ್ಟು ಸನ್ಮಾರ್ಗ ಬೋಧವನ್ನು ವರ್ಧಿಸಿ ಕೊಡುತ್ತಾನೆ. ಮತ್ತು ಅವರಿಗೆ ಭಕ್ತಿಯ ಬೋಧವನ್ನೂ ದಯಪಾಲಿಸುತ್ತಾನೆ.

18

ಇನ್ನು ಲೋಕಾಂತ್ಯವು ಹಠಾತ್ತನೆ ಅವರಿಗೆ ಬಂದೆರಗುವುದನ್ನೇ ಹೊರತು ಬೇರೇನನ್ನಾದರೂ ಅವರು ಕಾಯುತ್ತಿರುವರೇ? ಆದರೆ ಅದರ ಕುರುಹುಗಳು ಬಂದೇ ಬಿಟ್ಟಿವೆ. ಇನ್ನು ಅದುವೇ ಅವರಿಗೆ ಬಂದುಬಿಟ್ಟಾಗ, ಅವರ ನೆನಪು ಅವರಿಗೆ ಪ್ರಯೋಜನವಾಗುವುದೆಂತು?

19

(ಪ್ರವಾದಿಯರೇ,) ನಿಮಗೆ ತಿಳಿದಿರಲಿ! ಅಲ್ಲಾಹನ ಹೊರತು ಖಂಡಿತವಾಗಿಯೂ ಬೇರೆ ಆರಾಧ್ಯನಿಲ್ಲ ಎಂಬುದು. ನಿಮ್ಮ ಪಾಪಮೋಚನೆಗಾಗಿಯೂ ಸತ್ಯವಿಶ್ವಾಸಿಗಳಾದ ಪುರುಷರಿಗಾಗಿಯೂ, ಸ್ತ್ರೀಯರಿಗಾಗಿಯೂ ಪ್ರಾರ್ಥಿಸಿರಿ. ಅಲ್ಲಾಹನು ನಿಮ್ಮ ಹಗಲಿನ ಚಲನವನ್ನೂ ನಿಮ್ಮ ರಾತ್ರಿಯ ವಿಶ್ರಮ ತಾಣವನ್ನೂ ಬಲ್ಲನು.

20

ಸತ್ಯವಿಶ್ವಾಸಿಗಳು ಹೇಳುವರು; `(ಯುದ್ಧದ ಕುರಿ ತು) ಒಂದು ಅಧ್ಯಾಯ ಅವತೀರ್ಣಗೊಳಿಸಲಾಗಿಲ್ಲವೇಕೆ?’. ಆದರೆ ನಿಯಮ ವ್ಯಕ್ತವಾಗಿ ವಿವರಿ ಸಲ್ಪಟ್ಟ ಅಧ್ಯಾಯವೊಂದನ್ನು ಅವತೀರ್ಣಗೊಳಿಸಿ, ಅದರಲ್ಲಿ ಯುದ್ಧದ ಕುರಿತು ಹೇಳಲ್ಪಟ್ಟಾಗ, ಹೃದಯದೊಳಗೆ ರೋಗವಿದ್ದವರು, ಮೃತ್ಯು ಆವರಿಸಿ ಪ್ರಜ್ಞಾಹೀನನಾದ ವ್ಯಕ್ತಿ ನೋಡುವಂತೆ ತಮ್ಮ ಕಡೆ ನೋಡುವುದನ್ನು ಕಾಣುವಿರಿ. ಆಗ ಅವರಿಗೆ ಅತ್ಯಂತ ಸೂಕ್ತವಾದುದು.

21

ಅನುಸರಣೆ ಮತ್ತು ಹಿತದ ಮಾತು. ಕಾರ್ಯವು ನಿರ್ಧಾರವಾದಾಗ (ಯುದ್ಧ ಕಡ್ಡಾಯವಾದಾಗ) ಅವರು ಅಲ್ಲಾಹನೊಂದಿಗೆ (ಮಾಡಿಕೊಂಡ ಕರಾರಿನಲ್ಲಿ) ಸತ್ಯಸಂಧತೆಯನ್ನು ತೋರುತ್ತಿದ್ದರೆ ಅದು ಅವರಿಗೇ ಹಿತಕರವಾಗಿರುತ್ತಿತ್ತು.

22

ನೀವು ಈ ಧರ್ಮದಿಂದ ವಿಮುಖರಾದರೆ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಿ, ನಿಮ್ಮ ಕುಟುಂಬ ಸಂಬಂಧಗಳನ್ನು ಮುರಿದು ಹಾಕು ತ್ತೀರೇನೋ?

23

ಅಂಥವರನ್ನು ಅಲ್ಲಾಹನು ಶಪಿಸಿರುತ್ತಾನೆ. ಹೀಗಾಗಿ ಅವರನ್ನು ಕಿವುಡರಾಗಿಯೂ, ಕುರುಡರಾಗಿಯೂ ಮಾಡಿಬಿಟ್ಟಿರುತ್ತಾನೆ.

24

ಅವರು ಖುರ್‍ಆನ್‍ನ ಬಗ್ಗೆ ಮನಸ್ಸಿಟ್ಟು ಚಿಂತನೆ ನಡೆಸಲಿಲ್ಲವೇ? ಅಥವಾ ಹೃದಯಗಳ ಮೇಲೆ ಅವುಗಳ ಬೀಗಮುದ್ರೆ ಬಿದ್ದಿದೆಯೇ?

25

ಸನ್ಮಾರ್ಗವು ಸ್ಪಷ್ಟಗೊಂಡ ಬಳಿಕ ಅದರಿಂದ ಹಿಂದಕ್ಕೆ ಮರಳಿ ಬಿಟ್ಟವರಿಗೆ ಶೈತಾನನು (ಅವರ ಕರ್ಮವನ್ನು) ಚಂದಗಾಣಿಸಿರುವನು ಹಾಗೂ ಅವರಿಗೆ ವ್ಯಾಮೋಹಗಳನ್ನು ದೀರ್ಘ ಮಾಡಿ ಕೊಟ್ಟಿರುವನು.

26

ಅವರಿಗೆ ಈ ದುರ್ಮಾರ್ಗವು ಏಕೆ ಒದಗಿತೆಂದರೆ ಅಲ್ಲಾಹನು ಅವತೀರ್ಣಗೊಳಿಸಿದ ಧರ್ಮವನ್ನು ಮೆಚ್ಚದವರೊಡನೆ, “ಕೆಲವು ವಿಷಯಗಳಲ್ಲಿ ನಾವು ನಿಮ್ಮನ್ನು ಅನುಸರಿಸುವೆವು” ಎಂದು ಅವರು ಹೇಳಿಬಿಟ್ಟ ಕಾರಣಕ್ಕಾಗಿದೆ. ಅವರು ರಹಸ್ಯಗೊಳಿಸುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.

27

ದೇವಚರರು ಅವರ ಮುಖಗಳಿಗೂ ಬೆನ್ನುಗಳಿಗೂ ಹೊಡೆಯುತ್ತಾ ಅವರನ್ನು ಮರಣಗೊಳಿಸುವಾಗ ಅವರ ಸ್ಥಿತಿ ಏನಾದೀತು?

28

ಅದು ಏಕೆಂದರೆ, ಅಲ್ಲಾಹನನ್ನು ಕುಪಿತಗೊಳಿಸುವಂತಹ ಕಾರ್ಯವನ್ನು ಅವರು ಅನುಸರಿಸಿದರು ಮತ್ತು ಅವನ ಮೆಚ್ಚುಗೆಯನ್ನು ಅನಿಷ್ಟಪಟ್ಟರು. ಆದುದರಿಂದಲೇ ಅವರ ಕರ್ಮಗಳನ್ನು ಅಲ್ಲಾಹು ನಿರರ್ಥಕಗೊಳಿಸಿಬಿಟ್ಟನು.

29

ಅದಲ್ಲ, ಹೃದಯಗಳಲ್ಲಿ ರೋಗವುಳ್ಳವರು, ಅವರ ಹೃದಯಗಳೊಲಗಿರುವ ಹಗೆಯನ್ನು ಅಲ್ಲಾಹು ಹೊರತರಲಾರನೆಂದು ಭಾವಿಸಿಕೊಂಡಿರುವರೇ?

30

(ಪ್ರವಾದಿಯರೇ,) ನಾವಿಚ್ಛಿಸಿದರೆ ಅವರನ್ನು ನಿಮಗೆ ತೋರಿಸಿಕೊಡುತ್ತಿದ್ದೆವು. ಆಗ ನೀವು ಅವರನ್ನು ಅವರ ಲಕ್ಷಣಗಳಿಂದಲೇ ಗುರುತಿಸ ಬಲ್ಲಿರಿ. ಅವರ ಮಾತಿನ ಶೈಲಿಯಿಂದಲೂ ನೀವು ಅವರನ್ನು ಗುರುತಿಸಿಯೇ ತೀರುವಿರಿ. ಅಲ್ಲಾಹು ನಿಮ್ಮ ಕರ್ಮಗಳನ್ನು ಚೆನ್ನಾಗಿ ಬಲ್ಲನು.

31

ನಿಮ್ಮಲ್ಲಿ ಧರ್ಮಯೋಧರೂ ಕ್ಷಮಾಶೀಲರೂ ಯಾರೆಂದು ತಿಳಿಯಲಿಕ್ಕಾಗಿ ಹಾಗೂ ನಿಮ್ಮ ಸ್ಥಿತಿಗತಿಗಳನ್ನು ಬೆಳಕಿಗೆ ತರುವ ತನಕ ನಾವು ಖಂಡಿತವಾಗಿಯೂ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುವೆವು.

32

ಸತ್ಯವನ್ನು ನಿಷೇಧಿಸಿದವರು, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದವರು ಮತ್ತು ತಮಗೆ ಸನ್ಮಾರ್ಗ ಸ್ಪಷ್ಟವಾಗಿ ತಿಳಿದ ಬಳಿಕ ದೇವ ದೂತರೊಡನೆ ಜಗಳವಾಡಿದವರು ಯಾರೋ ವಾಸ್ತವದಲ್ಲಿ ಅವರು ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರರು, ಕೊನೆಗೆ ಅವರ ಕರ್ಮಗಳನ್ನು ಅಲ್ಲಾಹನೇ ನಿಷ್ಪಲಗೊಳಿಸುವನು.

33

ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ. ದೇವದೂತರನ್ನೂ ಅನುಸರಿಸಿರಿ, ಮತ್ತು ನಿಮ್ಮ ಸ್ವಂತ ಕರ್ಮಗಳನ್ನು ನಿರರ್ಥಕ ಗೊಳಿಸಬೇಡಿರಿ.

34

ಸತ್ಯವನ್ನು ನಿಷೇಧಿಸಿ, ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆದು, ಆ ನಂತರ ಸತ್ಯನಿಷೇಧಿಗಳಾಗಿಯೇ ಸತ್ತವರನ್ನು ಅಲ್ಲಾಹನು ಖಂಡಿತ ಕ್ಷಮಿಸಲಾರನು.

35

ಆದುದರಿಂದ (ಸತ್ಯವಿಶ್ವಾಸಿಗಳೇ,) ನೀವು ಬಲಹೀನರಾಗದಿರಿ. ನೀವು ಸಂಧಾನಕ್ಕಾಗಿ ನಿವೇದಿಸಬೇಡಿರಿ. ನೀವು ಉನ್ನತರು. ಅಲ್ಲಾಹು ನಿಮ್ಮ ಜೊತೆಗಿದ್ದಾನೆ ಮತ್ತು ಅವನು ನಿಮ್ಮ ಕರ್ಮಗಳನ್ನು (ಅದರ ಪ್ರತಿಫಲವನ್ನು) ಖಂಡಿತ ಕಡಿತಗೊಳಿಸಲಾರನು.

36

ಇಹಲೋಕದ ಜೀವನವು ಕೇವಲ ಆಟ ಮತ್ತು ವಿನೋದವಾಗಿದೆ. ನೀವು ವಿಶ್ವಾಸವಿರಿಸಿದರೆ ಮತ್ತು (ಧರ್ಮನಿಷ್ಟರಾಗಿ ಅಲ್ಲಾಹನನ್ನು) ಭಯ ಪಟ್ಟರೆ ಅಲ್ಲಾಹನು ನಿಮಗೆ ನಿಮ್ಮ ಪ್ರತಿಫಲವನ್ನು ನೀಡುವನು. ಅವನು ನಿಮ್ಮಿಂದ ನಿಮ್ಮ ಸೊತ್ತುಗಳನ್ನು ಕೇಳಲಾರನು.

37

ಇನ್ನು ಅವನು ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳಿ ನಿಮ್ಮನ್ನು ತೊಂದರೆಗೊಳಿಸುತ್ತಿದ್ದರೆ, ನೀವು ಜಿಪುಣತೆ ತೋರುವಿರಿ. ಅದು ನಿಮಗೆ ಧರ್ಮದ ಮೇಲೆ ಜಿಗುಪ್ಸೆ ಮೂಡಿಸುತ್ತಿತ್ತು.

38

ತಿಳಿಯಿರಿ, ಓ ಸಮೂಹವೇ, ಅಲ್ಲಾಹನ ಮಾರ್ಗದಲ್ಲಿ ಸಂಪತ್ತನ್ನು ಖರ್ಚು ಮಾಡಬೇಕೆಂದು ನಿಮಗೆ ಕರೆ ನೀಡಲಾಗುತ್ತಿದೆ. ಆಗ ನಿಮ್ಮಲ್ಲಿ ಕೆಲವರು ಜಿಪುಣತೆ ತೋರುತ್ತಿದ್ದಾರೆ. ಯಾವನು ಜಿಪುಣತೆ ತೋರುವನೋ ವಾಸ್ತವದಲ್ಲಿ ಅವನು ತನ್ನ ಮೇಲೆ ತಾನೇ ಜಿಪುಣತೆ ತೋರುತ್ತಿದ್ದಾನೆ. ಅಲ್ಲಾಹನು ಶ್ರೀಮಂತನು. ನೀವು ಬಡವರು. ನೀವು ವಿಮುಖರಾದರೆ ಅಲ್ಲಾಹನು ನೀವಲ್ಲದ ಬೇರೊಂದು ಜನಾಂಗವನ್ನು ಬದಲಿಗೆ ತರುವನು. ಅವರು ನಿಮ್ಮಂತೆ ಆಗಲಾರರು.