ಆಲ್ ಇಸ್ಲಾಂ ಲೈಬ್ರರಿ
1

ಅಣಿಅಣಿಯಾಗಿ ಕಿಕ್ಕಿರಿದು ನಿಂತಿರುವ ಮಲಕುಗಳಾಣೆ.

2

ಮೋಡವನ್ನು ಎಳೆದೊಯ್ಯುವ ಮಲಕುಗಳಾಣೆ.

3

ಖುರ್‍ಆನನ್ನು ಉಪದೇಶವನ್ನಾಗಿ ಓದುವವರಾಣೆ.

4

ಖಂಡಿವಾಗಿಯೂ ನಿಮ್ಮ ಆರಾಧ್ಯನು ಏಕೈಕನು.

5

ಅವನು ಭೂಮಿ-ಆಕಾಶಗಳ ಹಾಗೂ ಅವುಗಳ ಎಡೆಯಲ್ಲಿರುವ ಸಕಲ ವಸ್ತುಗಳ ಪರಿಪಾಲಕನು ಮತ್ತು ಉದಯಸ್ಥಾನಗಳ ಒಡೆಯನು.

6

ನಾವು ಇಹದಾಕಾಶವನ್ನು ನಕ್ಷತ್ರಗಳ ಚೆಲುವಿ ನಿಂದ ಅಲಂಕೃತಗೊಳಿಸಿದ್ದೇವೆ.

7

ಅದನ್ನು ಪ್ರತಿಯೊಬ್ಬ ಧಿಕ್ಕಾರಿ ಶೈತಾನನಿಂದ ಸಂರಕ್ಷಿಸಿದ್ದೇವೆ.

8

9

ಶೈತಾನರು (ಮಲಕ್‍ಗಳ) ಉನ್ನತ ಲೋಕದಿಂದ ಆಲಿಸಲಾರರು, ಎಲ್ಲ ದಿಕ್ಕುಗಳಿಂದಲೂ ಅವರನ್ನು ಹೊಡೆದು ಅಟ್ಟಲಾಗುತ್ತದೆ ಮತ್ತು ಅವರಿಗೆ ನಿರಂತರ ಶಿಕ್ಷೆ ಇದೆ.

10

ಆದರೂ ಅವರ ಪೈಕಿ ಯಾರಾದರೂ ಕದ್ದಾಲಿಸಿದರೆ ತೂರಿ ಬರುವ ತೀಕ್ಷ್ಣ ಜ್ವಾಲೆಯು ಅವರನ್ನು ಬೆನ್ನಟ್ಟುತ್ತದೆ.

11

ಅವರಲ್ಲಿ ಕೇಳಿ ನೋಡಿರಿ, ಅವರ ಸೃಷ್ಟಿಯು ಹೆಚ್ಚು ಕಷ್ಟವೋ ಅಥವಾ ನಾವು ಸೃಷ್ಟಿಸಿಟ್ಟಿರುವ ಇತರ ವಸ್ತುಗಳ ಸೃಷ್ಟಿಯೋ? ಅಂಟಾದ ರಾಡಿ ಮಣ್ಣಿನಿಂದ ಅವರನ್ನು ನಾವು ಸೃಷ್ಟಿಸಿರುತ್ತೇವೆ.

12

ಆದರೆ ನೀವು ಅಚ್ಚರಿ ಪಡುತ್ತೀರಿ. ಅವರು ಅದನ್ನು ಪರಿಹಾಸ್ಯ ಮಾಡುತ್ತಾರೆ.

13

ಉಪದೇಶ ಕೊಟ್ಟರೆ ಅವರು ನೆನಪಿಟ್ಟು ಗ್ರಹಿಸುವುದಿಲ್ಲ.

14

ಯಾವುದೇ ದೃಷ್ಟಾಂತವನ್ನು ಕಂಡಾಗ ಪರಿಹಾಸ್ಯ ಮಾಡುತ್ತಾರೆ

15

ಅವರು ಹೇಳುತ್ತಾರೆ; “ಇದು ಸ್ಪಷ್ಟವಾದ ಜಾದುವೇ ಹೊರತು ಇನ್ನೇನಲ್ಲ.

16

ನಾವು ಸತ್ತು ಮಣ್ಣಾಗಿ ಅಸ್ಥಿಪಂಜರವಾಗಿ ಹೋದ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವುದು ಖಚಿತವೇ?

17

ಗತಕಾಲದ ನಮ್ಮ ಪೂರ್ವಜರೂ ಪುನರ್ಜೀವ ತಾಳಿ ಎಬ್ಬಿಸಲ್ಪಡುವರೇ?”

18

ಉತ್ತರಿಸಿರಿ, “ಹೌದು! ಆಗ ನೀವು ನಿಂದ್ಯರಾಗಿರುತ್ತೀರಿ!”

19

ಅದು ಕೇವಲ ಒಂದು ಘರ್ಜನೆಯಾಗಿರುವುದು. ಆಗ ಹಠಾತ್ತನೆ ಅವರು ಕಣ್ಣುಬಿಟ್ಟು ನೋಡುವರು.

20

ಆಗ ಅವರು, “ಅಯ್ಯೋ ನಮ್ಮ ನಾಶವೇ! ಎನ್ನುವರು. (ಆಗ ಹೇಳಲಾಗುವುದು;) ಇದು ಪ್ರತಿಫಲದ ದಿನ.

21

ಇದು ನೀವು ಸುಳ್ಳಾಗಿಸುತ್ತಿದ್ದ ವಿಧಿ ನಿರ್ಣಾಯಕ ದಿನವೇ ಆಗಿದೆ .

22

23

(ಓ ಮಲಕ್‍ಗಳೇ)” ಅಕ್ರಮಿಗಳನ್ನೂ ಅವರ ಜೊತೆಗಾರರನ್ನೂ ಅವರು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿದ್ದ ಆರಾಧ್ಯರನ್ನೂ ಒಟ್ಟುಗೂಡಿಸಿರಿ. ಅನಂತರ ಅವರನ್ನು ಹೊತ್ತಿ ಉರಿಯುವ ನರಕದ ದಾರಿಗೆ ಒಯ್ಯಿರಿ.

24

ಇವರನ್ನು ತಡೆದು ನಿಲ್ಲಿಸಿರಿ. ಇವರನ್ನು ಪ್ರಶ್ನಿ ಸಲಿಕ್ಕಿದೆ”.

25

“ನಿಮಗೇನಾಗಿದೆ? ಈಗ ಪರಸ್ಪರ ಸಹಾಯ ಮಾಡುವುದಿಲ್ಲವೇಕೆ?”

26

“ಹಾಗಲ್ಲ! ಇವರಿಂದು ಸ್ವತಃ ಶರಣಾಗತರು!”

27

ಆ ಬಳಿಕ ಪರಸ್ಪರ ಪ್ರಶ್ನಿಸುತ್ತಾ ಅವರು ಎದುರಾಗುವರು.

28

(ಅನುಯಾಯಿಗಳು) “ನೀವು ನಮ್ಮ ಬಳಿಗೆ ಆಣೆ ಹಾಕುತ್ತ ಬರುತ್ತಿದ್ದೀರಲ್ಲವೆ?” ಎಂದು ಕೇಳುವರು.

29

ಆಗ ಅವರು ಹೇಳುವರು, “ಅಲ್ಲ, ನೀವು ಸತ್ಯವಿಶ್ವಾಸ ಸ್ವೀಕರಿಸುವವರೇ ಆಗಿರಲಿಲ್ಲ.

30

ನಿಮ್ಮ ಮೇಲೆ ನಮ್ಮ ಪ್ರಭುತ್ವವೇನೂ ಇರಲಿಲ್ಲ. ನೀವೂ (ನಮ್ಮಂತೆಯೇ) ದಾರಿ ಕೆಟ್ಟವರಾಗಿದ್ದಿರಿ.

31

ಅಂತೂ ನಮ್ಮ ಪ್ರಭುವಿನ ವಚನವು ನಮ್ಮ ಮೇಲೆ ನಿಜವಾಯಿತು. ನಾವೆಲ್ಲರೂ ಶಿಕ್ಷೆಯ ರುಚಿ ಅನುಭವಿಸಲೇಬೇಕು.

32

ಹೀಗೆ ನಿಮ್ಮನ್ನು ನಾವು ದಾರಿಗೆಡಿಸಿದೆವು, ನಾವು ಸ್ವತಃ ದಾರಿಗೆಟ್ಟಿದ್ದೆವು.”

33

ಹೀಗೆ, ಅಂದು ಅವರು ಶಿಕ್ಷೆಯಲ್ಲಿ ಸಹಭಾಗಿಗಳಾಗಿರುವರು.

34

ನಾವು ಅಪರಾಧಿಗಳೊಂದಿಗೆ ಹೀಗೆಯೇ ವರ್ತಿಸುತ್ತೇವೆ.

35

ಅಲ್ಲಾಹನ ಹೊರತು ನೈಜ ಆರಾಧ್ಯನಿಲ್ಲ ಎಂದು ಅವರಿಗೆ ಹೇಳಿದಾಗ ಇವರು ದರ್ಪ ತೋರುತ್ತಿದ್ದರು.

36

“ನಾವು ಒಬ್ಬ ಹುಚ್ಚ ಕವಿಗಾಗಿ ನಮ್ಮ ಆರಾಧ್ಯರನ್ನು ಬಿಟ್ಟುಬಿಡಬೇಕೆ?” ಎನ್ನುತ್ತಿದ್ದರು.

37

ಹಾಗಲ್ಲ, ಆ ವ್ಯಕ್ತಿ ಸತ್ಯವನ್ನು ತಂದಿದ್ದರು ಮತ್ತು ಗತ ಸಂದೇಶವಾಹಕರನ್ನು ದೃಢೀಕರಿಸಿದ್ದರು.

38

(ಆಗ ಅವರಿಗೆ ಹೇಳಲಾಗುವುದು) “ನೀವು ವೇದನಾತ್ಮಕ ಶಿಕ್ಷೆಯನ್ನು ಖಂಡಿತ ಸವಿಯಲಿರುವಿರಿ.

39

ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ಕೊಡಲಾಗುತ್ತಿದೆ”.

40

ಆದರೆ ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ.

41

ಅವರಿಗೆ ಚಿರಪರಿಚಿತ ಆಹಾರವಿದೆ.

42

ಅಂದರೆ ಮೋಜಿನ ಆಹಾರಗಳು. ಅವರು ಗೌರವಾನ್ವಿತರು

43

ಅನುಗ್ರಹೀತ ಸ್ವರ್ಗೋದ್ಯಾನಗಳಲ್ಲಿ.

44

ಸುಖಾಸನಗಳಲ್ಲಿ ಎದುರು ಬದುರಾಗಿ ಕುಳಿತು ಕೊಳ್ಳುವರು.

45

ಮದಿರೆಯ ಚಿಲುಮೆಯಿಂದ ತುಂಬಿಸಿಕೊಂಡ ಪಾನಪಾತ್ರೆಯನ್ನು ಅವರ ಸುತ್ತಲೂ ತರಲಾ ಗುವುದು.

46

ಬಿಳಿಯಾದ, ಕುಡಿಯುವವರಿಗೆ ಅತ್ಯಂತ ರುಚಿಕರವಾದ ಮದ್ಯ.

47

ಆ ಸುರೆಯಲ್ಲಿ ಮತಿವಿಕಲತೆಯಿಲ್ಲ, ಅದರ ಪಾನದಿಂದ ಅವರಿಗೆ ನಶೆಯೇರುವುದೂ ಇಲ್ಲ.

48

ದೃಷ್ಟಿಯನ್ನು ಕಾಪಾಡಿಕೊಳ್ಳುವ ಬಟ್ಟಲು ಕಂಗಳ ತರುಣಿಯರು ಅವರ ಪಕ್ಕದಲ್ಲಿರುವರು.

49

ಅವರು ಬಕಪಕ್ಷಿಯ ಮುಚ್ಚಿಟ್ಟ ಮೊಟ್ಟೆಯಂತೆ (ತಿಳಿ ಕೆಂಬಣ್ಣದ) ಸುಂದರಿಯರು.

50

ಅನಂತರ ಅವರು ಪರಸ್ಪರ ಅಭಿಮುಖವಾಗಿ ಸ್ಥಿತಿಗತಿಗಳನ್ನು ವಿಚಾರಿಸುವರು.

51

ಅವರಲ್ಲೊಬ್ಬನು ಹೀಗೆನ್ನುವನು, ‘ನನಗೊಬ್ಬ ಸಂಗಾತಿಯಿದ್ದನು.

52

ಅವನು ನನ್ನೊಡನೆ ಹೀಗೆ ಕೇಳುತ್ತಿದ್ದನು, ‘ಪುನರುತ್ಥಾನ ಸತ್ಯವೆಂದು ನಂಬುವವರ ಪೈಕಿ ನೀನು ಸೇರಿದ್ದೀಯಾ?

53

ನಿಜಕ್ಕೂ ನಾವು ಸತ್ತು ಮಣ್ಣಾಗಿ, ಅಸ್ಥಿಪಂಜರ ವಾದ ಬಳಿಕ ನಮಗೆ ಪ್ರತಿಫಲ ನೀಡಲಾಗುವುದೇ?’

54

‘ನೀವೊಮ್ಮೆ ಆತನನ್ನು ನೋಡುವಿರಾ?’ ಎಂದು ಅವನು ಕೇಳುವನು.

55

ಸರಿಯಾಗಿ ನೋಡಿದಾಗ ನರಕದ ಆಳದಲ್ಲಿ ಅವನನ್ನು ಕಾಣುವನು.

56

ಅವನನ್ನು ಉದ್ದೇಶಿಸಿ ಹೀಗೆನ್ನುವನು, - “ಅಲ್ಲಾ ಹನಾಣೆ, ನೀನು ನನ್ನನ್ನು ವಿನಾಶಕ್ಕೆ ತಳ್ಳುತ್ತಿದ್ದೆ.

57

ನನ್ನ ಪ್ರಭುವಿನ ಅನುಗ್ರಹ ಇಲ್ಲದಿರುತ್ತಿದ್ದರೆ ಇಂದು ನಾನು ಕೂಡಾ ನಿನ್ನ ಜೊತೆ ಹಾಜರಾಗ ಬೇಕಿತ್ತು.

58

ಆದರೆ ನಾವು ಸಾಯುವವರಲ್ಲ ತಾನೆ?

59

ನಮ್ಮ ಮೊದಲನೆಯ ಮರಣವನ್ನು ಹೊರತು ಪಡಿಸಿ. ಇನ್ನು ನಾವು ಶಿಕ್ಷಿಸಲ್ಪಡುವವರಲ್ಲ”.

60

ನಿಶ್ಚಯವಾಗಿಯೂ ಇದುವೇ ಮಹತ್ತರ ವಿಜಯವಾಗಿದೆ.

61

ಕರ್ಮವೆಸಗುವವರು ಇಂತಹ ಕಾರ್ಯಕ್ಕಾಗಿ ಕರ್ಮವೆಸಗಲಿ.

62

ಹೇಳಿರಿ, ಕಾದಿರಿಸಲಾದ ಈ ಆತಿಥ್ಯ ಉತ್ತಮವೋ ಅಥವಾ ಝಖ್ಖೂಮ್ ವೃಕ್ಷ ಉತ್ತಮವೋ?

63

ಅಕ್ರಮಿಗಳ ಪಾಲಿಗೆ ನಾವು ಆ ವೃಕ್ಷವನ್ನು ಪರೀಕ್ಷೆಯ ಸಾಧನವಾಗಿ ಮಾಡಿದ್ದೇವೆ.

64

ಅದು ನರಕದ ತಳಭಾಗದಿಂದ ಹೊರಡುವ ಒಂದು ವೃಕ್ಷವಾಗಿದೆ.

65

ಅದರ ಗೊನೆಗಳು ಶೈತಾನರ ತಲೆಗಳೋ ಎಂಬಂತಿವೆ .

66

ನರಕವಾಸಿಗಳು ಅದನ್ನು ತಿನ್ನುವರು. ಅದರಿಂದಲೇ ಹೊಟ್ಟೆ ತುಂಬುವರು.

67

ಆ ಮೇಲೆ ಅವರಿಗೆ ಅದರ ಮೇಲೆ ಬೆರೆಸಲು ಪರಮ ತಾಪದ ದುರ್ಜಲದ ಮಿಶ್ರಣವೂ ಇದೆ!

68

ನಂತರ ಅವರ ಮರಳುವಿಕೆಯ ಸ್ಥಾನ ನರಕವೇ ಆಗಿದೆ.

69

ಅವರು ತಮ್ಮ ಪೂರ್ವಿಕರನ್ನು ಪಥಭೃಷ್ಟರಾಗಿ ಕಂಡಿದ್ದರು.

70

ಅದಾಗ್ಯೂ ಅವರನ್ನಿವರು ತ್ವರೆಪಟ್ಟು ಅನುಸರಿಸಿದರು!

71

ನಿಜವಾಗಿಯೂ ಅವರಿಗಿಂತ ಮುಂಚೆ ಪೂರ್ವಿಕರಲ್ಲಿ ಹೆಚ್ಚಿನವರು ಪಥಭ್ರಷ್ಟರಾಗಿದ್ದರು

72

ಎಚ್ಚರಿಕೆ ನೀಡುವ ಸಂದೇಶವಾಹಕರನ್ನು ಅವರಿಗೆ ನಾವು ಕಳುಹಿಸಿದ್ದೆವು.

73

ನೋಡಿರಿ, ಎಚ್ಚರಿಕೆ ನೀಡಲಾಗಿದ್ದ ಆ ಜನರ ಗತಿಯೇನಾಯಿತು?

74

ಅಲ್ಲಾಹನ ನಿಷ್ಕಳಂಕ ದಾಸರು ಮಾತ್ರ ಇದರಿಂದ ಹೊರತಾಗಿದ್ದಾರೆ.

75

ನೂಹರು ನಮ್ಮನ್ನು ಕೂಗಿ ಕರೆದಿದ್ದರು. ಉತ್ತರಿಸುವವರಲ್ಲಿ ನಾವು ಎಷ್ಟು ಉತ್ತಮರು!

76

ನಾವು ಅವರನ್ನೂ ಅವರ ಜನರನ್ನೂ ಮಹಾ ದುರಂತದಿಂದ ರಕ್ಷಿಸಿದೆವು

77

ಮತ್ತು ಅವರ ಸಂತತಿಯನ್ನು ಉಳಿಸಿದೆವು.

78

ಅನಂತರದ ಪೀಳಿಗೆಗಳಲ್ಲಿ ಅವರ ಸತ್ಕೀರ್ತಿಯನ್ನು ಉಳಿಸಿದೆವು.

79

ಸಕಲ ಲೋಕವಾಸಿಗಳಲ್ಲಿ ನೂಹರಿಗೆ ‘ಸಲಾಮ್’ ಇರುವುದು.

80

ಸುಕೃತರಿಗೆ ಇಂತಹ ಸತ್ಫಲವನ್ನೇ ನೀಡುತ್ತೇವೆ.

81

ಖಂಡಿತ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲೊಬ್ಬರು.

82

ನಂತರ ಉಳಿದವರನ್ನು ನಾವು ಮುಳುಗಿಸಿದೆವು.

83

ನಿಜವಾಗಿಯೂ ಇಬ್‍ರಾಹೀಮರು ನೂಹರ ಧರ್ಮದವರೇ ಆಗಿದ್ದರು.

84

ಅವರು ತಮ್ಮ ಪ್ರಭುವಿನ ಸನ್ನಿಧಿಗೆ ನಿರ್ಮಲ ಮನಸ್ಸಿನೊಂದಿಗೆ ಬಂದಾಗ,

85

ಅಂದರೆ ಅವರು ತಮ್ಮ ತಂದೆ ಹಾಗೂ ಜನಾಂಗದೊಡನೆ ಕೇಳಿದರು, “ನೀವು ಏನನ್ನು ಪೂಜಿಸುತ್ತಿರುವಿರಿ?

86

ಅಲ್ಲಾಹನನ್ನು ಬಿಟ್ಟು ಮಿಥ್ಯ ಆರಾಧ್ಯರನ್ನು ಬಯಸುತ್ತೀರಾ?

87

ಆದರೆ ಸರ್ವಲೋಕಗಳ ಪಾಲಕ ಪ್ರಭುವಿನ ಕುರಿತು ನಿಮ್ಮ ಕಲ್ಪನೆಯೇನು?”

88

ತರುವಾಯ ಅವರು ನಕ್ಷತ್ರಗಳ ಕಡೆಗೆ ದೃಷ್ಟಿ ಬೀರಿದರು.

89

ಆಮೇಲೆ ಹೇಳಿದರು, ನಾನು ರೋಗಿಯಾಗಿದ್ದೇನೆ .

90

ಆಗ ಜನರು ಅವರನ್ನು ಬಿಟ್ಟು ಹೋದರು.

91

ನಂತರ ಇವರು ಮೆಲ್ಲನೆ ಅವರ ಆರಾಧ್ಯರ ಮಂದಿರದೊಳಗೆ ನುಗ್ಗಿದರು. ಆಮೇಲೆ ಕೇಳಿ ದರು, “ನೀವು ತಿನ್ನುವುದಿಲ್ಲವೇಕೆ?

92

ನಿಮಗೇನಾಗಿದೆ? ನೀವೇಕೆ ಮಾತನಾಡುವುದಿಲ್ಲ?”

93

ಅನಂತರ ಅವರು ಬಲವಾಗಿ ಹೊಡೆಯುತ್ತ ಅವುಗಳತ್ತ ತಿರುಗಿದರು.

94

ಆಗ ಅವರು ಇವರ ಬಳಿಗೆ ಓಡೋಡಿ ಬಂದರು.

95

ಆಗ ಇವರು, ಅವರಲ್ಲಿ ಕೇಳಿದರು, “ನೀವೇ ಕೆತ್ತಿದ ವಸ್ತುಗಳನ್ನು ನೀವು ಪೂಜಿಸುತ್ತಿದ್ದೀರಾ?

96

ನಿಮ್ಮನ್ನೂ ನೀವು ಮಾಡುವ ಕರ್ಮಗಳನ್ನೂ ಸೃಷ್ಟಿಸಿದವನು ಅಲ್ಲಾಹನೇ ಆಗಿರುವನು”.

97

ಅವರು ಪರಸ್ಪರ ಹೀಗೆಂದರು. “ಇವನಿಗಾಗಿ ಒಂದು ಅಗ್ನಿಕುಂಡವನ್ನು ತಯಾರಿಸಿರಿ. ಆಮೇಲೆ ಹೊತ್ತಿ ಉರಿಯುವ ಬೆಂಕಿಯ ರಾಶಿಗೆ ಇವನನ್ನು ಎಸೆದು ಬಿಡಿರಿ” .

98

ಅವರು ಇವರನ್ನು ಮೋಸಕ್ಕೆ ಕೆಡಹಲು ಬಯಸಿದ್ದರು. ಆದರೆ, ನಾವು ಅವರನ್ನೇ ಅತ್ಯಂತ ಕೀಳಾಗಿಸಿಬಿಟ್ಟೆವು.

99

ಇಬ್‍ರಾಹೀಮರು ಹೇಳಿದರು, ‘ನಾನು ನನ್ನ ಪ್ರಭುವಿನ ಕಡೆಗೆ ಹೋಗುತ್ತೇನೆ. ಅವನು ನನಗೆ ಮಾರ್ಗದರ್ಶನ ಮಾಡಲಿರುವನು.

100

ನನ್ನ ಪ್ರಭು! ನನಗೆ ಸಜ್ಜನರ ಸಾಲಿಗೆ ಸೇರಿದ ಒಬ್ಬ ಮಗನನ್ನು ದಯಪಾಲಿಸು’.

101

ಆಗ ನಾವು ಅವರಿಗೆ ಒಬ್ಬ ಸಹನಶೀಲ ಪುತ್ರನ ಸುವಾರ್ತೆ ನೀಡಿದೆವು.

102

ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲುಪಿದಾಗ ಇಬ್‍ರಾಹೀಮರು “ಪ್ರಿಯ ಪುತ್ರ, ಕನಸಿನಲ್ಲಿ ನಾನು ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕಂಡಿದ್ದೇನೆ. ಆದ್ದರಿಂದ ನಿನ್ನ ಅಭಿಪ್ರಾಯವೇನೆಂದು ಯೋಚಿಸು” ಎಂದರು. ಆಗ ಅವನು “ಪ್ರೀತಿಯ ಅಪ್ಪಾ, ತಮಗೆ ಅಜ್ಞಾಪಿಸಲಾಗಿರುವುದನ್ನು ಮಾಡಿರಿ. ಅಲ್ಲಾಹನಿಚ್ಛಿಸಿದರೆ ತಾವು ನನ್ನನ್ನು ಸಹನ ಶೀಲರ ಸಾಲಿನಲ್ಲಿ ಗುರುತಿಸುವಿರಿ” ಎಂದನು.

103

ಕೊನೆಗೆ ಇಬ್ಬರೂ ಆಜ್ಞೆಗೆ ವಿಧೇಯರಾದಾಗ, ಇಬ್‍ರಾಹೀಮರು ಮಗನನ್ನು ಕೆನ್ನೆಯೊರಗಿಸಿ ಮಲಗಿಸಿದಾಗ.

104

ನಾವು ಹೀಗೆ ಕೂಗಿ ಹೇಳಿದೆವು, “ಓ ಇಬ್‍ರಾ ಹೀಮ್!

105

ನೀವು ಸ್ವಪ್ನವನ್ನು ಖಂಡಿತ ನಿಜಗೊಳಿಸಿದ್ದೀರಿ”. ನಾವು ಸುಕೃತರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ.

106

ನಿಶ್ಚಯವಾಗಿಯೂ ಇದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು.

107

ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು.

108

ಅವನ ಸತ್ಕೀರ್ತಿಯನ್ನು ಶಾಶ್ವತವಾಗಿ ಮುಂದಿನ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.

109

ಇಬ್‍ರಾಹೀಮರ ಮೇಲೆ ಶ್ರೀ ರಕ್ಷೆ ಇದೆ.

110

ಇದೇ ಪ್ರಕಾರ ನಾವು ಸುಕೃತರಿಗೆ ಸತ್ಫಲ ನೀಡುತ್ತೇವೆ.

111

ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದರು.

112

ನಾವು ಅವರಿಗೆ ಸಜ್ಜನರ ಪೈಕಿ ಒಬ್ಬ ಪ್ರವಾದಿ ಯಾಗಿ ಬರಲಿರುವ ಇಸ್‍ಹಾಖರ ಸುವಾರ್ತೆ ನೀಡಿದೆವು.

113

ಅವರಿಗೂ ಇಸ್‍ಹಾಖರಿಗೂ ನಾವು ಸಮೃದ್ಧಿ ದಯಪಾಲಿಸಿದೆವು. ಅವರಿಬ್ಬರ ಸಂತತಿಯಲ್ಲಿ ಸದ್ಭಕ್ತರಿದ್ದಾರೆ. ತಮ್ಮ ಮೇಲೆ ತಾವೇ ಬಹಿರಂಗವಾದ ಅಕ್ರಮವೆಸಗುವವರೂ ಇದ್ದಾರೆ.

114

ಮೂಸಾ ಮತ್ತು ಹಾರೂನರ ಮೇಲೆ ನಾವು ಅನುಗ್ರಹ ತೋರಿದೆವು.

115

ಅವರನ್ನೂ ಅವರ ಜನಾಂಗವನ್ನೂ ಘೋರ ಕಂಟಕದಿಂದ ಪಾರುಗೊಳಿಸಿದೆವು.

116

ಅವರಿಗೆ ಸಹಾಯ ಮಾಡಿದೆವು. ಇದರಿಂದಾಗಿ ಅವರೇ ಗೆಲುವು ಸಾಧಿಸಿದರು.

117

ಅವರಿಗೆ ಅತ್ಯಂತ ಸ್ಪಷ್ಟವಾದ ಮಾಹಿತಿಯುಳ್ಳ ಗ್ರಂಥ ನೀಡಿದೆವು.

118

ಅವರಿಬ್ಬರನ್ನೂ ಸತ್ಪಥಕ್ಕೆ ಸೇರಿಸಿದೆವು.

119

ನಂತರದ ತಲೆಮಾರುಗಳಲ್ಲಿ ಅವರ ಪ್ರಶಂಸೆಯನ್ನು ಉಳಿಸಿದೆವು.

120

ಮೂಸಾ ಮತ್ತು ಹಾರೂನರ ಮೇಲೆ ಶ್ರೀರಕ್ಷೆ ಇದೆ.

121

ನಿಶ್ಚಯವಾಗಿಯೂ ನಾವು ಸುಕೃತರಿಗೆ ಇಂತಹುದೇ ಸತ್ಫಲ ನೀಡುತ್ತೇವೆ.

122

ನಿಶ್ಚಯವಾಗಿಯೂ ಅವರಿಬ್ಬರೂ ನಮ್ಮ ಸತ್ಯ ವಿಶ್ವಾಸಿ ದಾಸರಲಾಗಿದ್ದರು.

123

ಇಲ್ಯಾಸರೂ ನಿಜವಾಗಿಯೂ ಸಂದೇಶ ವಾಹಕರಲ್ಲೊಬ್ಬರು.

124

ಅವರು ತಮ್ಮ ಜನಾಂಗಕ್ಕೆ ಹೀಗೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ, ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

125

ನೀವು `ಬಅïಲ’ ವಿಗ್ರಹವನ್ನು ಪೂಜಿಸು ತ್ತೀರಾ ? ಅತ್ಯುತ್ತಮ ಸೃಷ್ಟಿಕರ್ತನನ್ನು ಬಿಟ್ಟು ಬಿಡುತ್ತೀರಾ?

126

ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಜರ ಪ್ರಭುವಾಗಿರುವ ಅಲ್ಲಾಹನನ್ನು.

127

ಆದರೆ, ಅವರು ಇಲ್ಯಾಸರನ್ನು ಸುಳ್ಳಾಗಿಸಿದರು. ಆದ್ದರಿಂದ ಖಂಡಿತ ಅವರು ನರಕದಲ್ಲಿ ಹಾಜರುಗೊಳಿಸಲ್ಪಡುವರು.

128

ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿರುವರು.

129

ಇಲ್ಯಾಸರ ಪ್ರಶಂಸೆಯನ್ನು ಅನಂತರದ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು.

130

ಇಲ್ಯಾಸರ ಮೇಲೆ ಶ್ರೀರಕ್ಷೆ ಇದೆ.

131

ನಾವು ಸುಕೃತರಿಗೆ ಇಂತಹದೇ ಪ್ರತಿಫಲವನ್ನು ಕೊಡುತ್ತೇವೆ.

132

ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು.

133

ಲೂಥರೂ ನಿಜವಾಗಿಯೂ ಸಂದೇಶ ವಾಹಕರಲ್ಲೊಬ್ಬರು.

134

ಅವರನ್ನೂ ಅವರ ಕುಟುಂಬದವರನ್ನೂ ನಾವು ರಕ್ಷಿಸಿದ್ದ ಸಂದರ್ಭವನ್ನು ಸ್ಮರಿಸಿರಿ.

135

ಶಿಕ್ಷೆಗೆ ಗುರಿಯಾದವರ ಪೈಕಿ ಓರ್ವ ವೃದ್ದೆಯ ಹೊರತು,

136

ನಂತರ ಉಳಿದವರನ್ನು ನಾವು ನಾಶಗೊಳಿಸಿದೆವು.

137

ನೀವು ಹಗಲಲ್ಲಿ ಅವರ ಅವಶೇಷಗಳ ಮೂಲಕ ಹಾದು ಹೋಗುತ್ತೀರಿ.

138

ರಾತ್ರಿಯಲ್ಲೂ ! ಅದಾಗ್ಯೂ ನೀವು ಯೋಚಿಸುವು ದಿಲ್ಲವೆ ?

139

ನಿಶ್ಚಯವಾಗಿ ಯೂನುಸರೂ ಸಂದೇಶವಾಹಕರಲ್ಲೊಬ್ಬರು.

140

ಅವರು ಭಾರ ತುಂಬಿದ ನಾವೆಯ ಕಡೆಗೆ ಓಡಿದ ಸಂದರ್ಭವನ್ನು ಸ್ಮರಿಸಿರಿ.

141

ಹಾಗೆ ನಾವೆಯರು ಅದೃಷ್ಟಚೀಟಿ ಎತ್ತಿದರು. ಹಾಗೆ ಅವರು ಪರಾಜಿತರಲ್ಲಿ ಸೇರಿದರು.

142

ಆಗ ಅವರನ್ನು ಮೀನು ನುಂಗಿ ಹಾಕಿತು. ಅವರು ಆಕ್ಷೇಪಾರ್ಹರಾಗಿ!

143

ಅವರು ತಸ್‍ಬೀಹ್ ಹೇಳುವವರಲ್ಲಿ ಒಬ್ಬರಾಗದಿರುತ್ತಿದ್ದಲ್ಲಿ,

144

ಪುನರುತ್ಥಾನ ದಿನದವರೆಗೂ ಆ ಮೀನಿನ ಹೊಟ್ಟೆಯೊಳಗೆ ಖಂಡಿತ ಇರುತ್ತಿದ್ದರು.

145

ಕೊನೆಗೆ ಅವರನ್ನು ನಾವು ಒಂದು ಕಡಲು ತೀರಕ್ಕೆ ತಂದು ಎಸೆದೆವು. ಅವರು ತೀವ್ರ ಬಳಲಿದ್ದರು.

146

ಅವರ ಮೇಲೆ ಸಿಹಿ ಕುಂಬಳಕಾಯಿ ವರ್ಗದ ಗಿಡವೊಂದನ್ನು ಬೆಳೆಸಿದೆವು.

147

ನಾವು ಅವರನ್ನು ಒಂದು ಲಕ್ಷ ಅಥವಾ ಅದ ಕ್ಕಿಂತಲೂ ಅಧಿಕ ಸಂಖ್ಯೆಯ ಜನರ ಕಡೆಗೆ ಕಳುಹಿಸಿದೆವು.

148

ಆಗ ಅವರು ಸತ್ಯವಿಶ್ವಾಸವನ್ನು ಸ್ವೀಕರಿಸಿದರು. ಹಾಗೆ ಒಂದು ನಿಶ್ಚಿತ ಕಾಲದವರೆಗೆ ಅವರಿಗೆ ನಾವು ಸುಖಜೀವನವನ್ನು ಕೊಟ್ಟೆವು.

149

ಇವರನ್ನು ಹೀಗೆ ಕೇಳಿರಿ; “ನಿಮ್ಮ ಪ್ರಭುವಿಗೆ ಪುತ್ರಿಯರೂ ಇವರಿಗೆ ಪುತ್ರರೂ ಇರುವುದೇ?

150

ಅಥವಾ ಅವರು ದೃಕ್‍ಸಾಕ್ಷಿಗಳಾದ ಸ್ಥಿತಿಯಲ್ಲಿ ನಾವು ದೇವಚರರನ್ನು ಸ್ತ್ರೀಯರಾಗಿ ಸೃಷ್ಟಿ ಸಿದ್ದೇವೆಯೇ?”

151

152

ಚೆನ್ನಾಗಿ ಗಮನವಿಟ್ಟು ಕೇಳಿರಿ, ಅಲ್ಲಾಹನು ಸಂತಾನವನ್ನು ಹುಟ್ಟಿಸಿದ್ದಾನೆ ಎಂದು ಇವರು ಸ್ವಯಂ ಸೃಷ್ಟಿಸಿಕೊಂಡು ಹೇಳುತ್ತಿದ್ದಾರೆ. ಇವರು ಖಂಡಿತ ಸುಳ್ಳುಗಾರರು.

153

ಅಲ್ಲಾಹನು ತನಗಾಗಿ ಪುತ್ರರ ಬದಲು ಪುತ್ರಿಯ ರನ್ನು ಆಯ್ಕೆ ಮಾಡಿದನೇ?

154

ನಿಮಗೆ ಏನಾಗಿದೆ? ಎಂತಹ ತೀರ್ಮಾನ ಕೈಗೊಳ್ಳುತ್ತಿರುವಿರಿ.

155

ನೀವು ಯೋಚಿಸುವುದಿಲ್ಲವೇ?

156

ಅಥವಾ ನಿಮ್ಮ ಬಳಿ ಏನಾದರೂ ಸ್ಪಷ್ಟವಾದ ಆಧಾರವಿದೆಯೇ?

157

ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಆಧಾರ ಗ್ರಂಥವನ್ನು ತನ್ನಿರಿ.

158

159

ಅಲ್ಲಾಹು ಮತ್ತು ಜಿನ್ನ್‍ಗಳ ನಡುವೆ ಇವರು ವಂಶ ಸಂಬಂಧವನ್ನು ಸ್ಥಾಪಿಸಿದರು. ಖಂಡಿತ ಇವರು (ಶಿಕ್ಷೆಗಾಗಿ) ಹಾಜರುಗೊಳಿಸಲ್ಪಡು ವರು ಎಂದು ಜಿನ್ನ್‍ಗಳಿಗೆ ಚೆನ್ನಾಗಿ ತಿಳಿದಿದೆ.

160

ಇವರು ಹಚ್ಚುತ್ತಿರುವ ದುರಾರೋಪದಿಂದ ಅಲ್ಲಾಹನು ಮುಕ್ತಶುದ್ಧನು. ಅಲ್ಲಾಹನ ನಿಷ್ಕಳಂಕ ದಾಸರ ಹೊರತು.

161

ಆದುದರಿಂದ ನೀವು ಮತ್ತು ನಿಮ್ಮ ಆರಾಧ್ಯರು,

162

ಅಲ್ಲಾಹನ ವಿರುದ್ಧ ಯಾರನ್ನೂ ದಂಗೆಯೆಬ್ಬಿ ಸಲು ಪ್ರಾಪ್ತರಲ್ಲ.

163

ನರಕಾಗ್ನಿಯಲ್ಲಿ ಬಿದ್ದು ಸುಡುವಾತನ ಹೊರತು.

164

ನಮಗೆಲ್ಲರಿಗೂ ನಿಶ್ಚಿತವಾದ ಒಂದು ಸ್ಥಾನ ಇದ್ದೇ ಇದೆ.

165

ನಾವು ಪಂಕ್ತಿಬದ್ಧರು.

166

ಮತ್ತು ಕೀರ್ತನೆ ಮಾಡುವವರು.

167

ಇವರು (ಬಹುದೇವಾರಾಧಕರು) ಹೀಗೆ ಹೇಳುತ್ತಿದ್ದರು.

168

“ನಮ್ಮ ಬಳಿ ಹಿಂದಿನವರಿಂದ ಪ್ರಮಾಣವೇನಾದರೂ ಇರುತ್ತಿದ್ದರೆ,

169

ಖಂಡಿತವಾಗಿಯೂ ನಾವು ಅಲ್ಲಾಹನ ನಿಷ್ಠ ದಾಸರಾಗುತ್ತಿದ್ದೆವು”.

170

ಆದರೆ, ಇವರು ಅದನ್ನು ನಿಷೇಧಿಸಿದರು. ಇನ್ನು ಸದ್ಯವೇ ಇವರಿಗೆ ತಿಳಿದು ಬರುವುದು.

171

ನಾವು ನಮ್ಮ ಸಂದೇಶವಾಹಕ ದಾಸರ ಬಗ್ಗೆ ನಮ್ಮ ವಚನವು ಈ ಮೊದಲೇ ಆಗಿದೆ.

172

ಖಂಡಿತವಾಗಿಯೂ ಅವರಿಗೆ ಸಹಾಯ ಸಿಗುವುದು ಎಂದು.

173

ಮತ್ತು ನಮ್ಮ ಸೇನೆಯೇ ಗೆಲ್ಲುವುದು ಎಂದು.

174

ಆದುದರಿಂದ (ಪೈಗಂಬರರೇ,) ನಿರ್ದಿಷ್ಟ ಕಾಲದ ವರೆಗೆ ಇವರಿಂದ ತಾವು ಬಿಟ್ಟು ನಿಲ್ಲಿರಿ.

175

ಮತ್ತು ನೋಡುತ್ತಲಿರಿ. ಸದ್ಯವೇ ಇವರು ಸ್ವತಃ ಕಾಣುವರು.

176

ಇವರು ನಮ್ಮ ಶಿಕ್ಷೆಗಾಗಿ ದುಡುಕುತ್ತಿರು ವರೇನು?

177

ಆದರೆ ಆ ಶಿಕ್ಷೆ ಅವರ ಅಂಗಳದಲ್ಲೇ ಬಂದಿಳಿ ದಾಗ ಆ ಎಚ್ಚರಿಕೆ ನೀಡಲ್ಪಟ್ಟವರ ಪ್ರಭಾತವು ಅತ್ಯಂತ ಕೆಟ್ಟದಾಗಿರುವುದು.

178

ಆದುದರಿಂದ ನಿರ್ದಿಷ್ಟಕಾಲ ಇವರಿಂದ ಬಿಟ್ಟು ನಿಲ್ಲಿರಿ.

179

ಮತ್ತು ನೋಡುತ್ತಲಿರಿ. ಸದ್ಯವೇ ಇವರು ಸ್ವತಃ ಕಾಣುವರು.

180

ನಿಮ್ಮ ಪ್ರಭು ಪ್ರತಾಪದ ಒಡೆಯನು. ಇವರು ವರ್ಣಿಸುತ್ತಿರುವ ಆರೋಪಗಳಿಂದ ಮುಕ್ತನಾದ ಪರಮಪಾವನನು.

181

ಸಂದೇಶವಾಹಕರುಗಳ ಮೇಲೆ ‘ಸಲಾಮ್’ ಇದೆ.

182

ಸಕಲ ಸ್ತುತಿಗಳೂ ಸರ್ವಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೇ ಮೀಸಲು.