ಸ್ವಾದ್, ಉಪದೇಶವನ್ನೊಳಗೊಂಡ ಖುರ್‍ಆನಿ ನಾಣೆ .
ನಿಜವಾಗಿ, ಸತ್ಯವನ್ನು ನಿಷೇಧಿಸಿದ ಜನರು ತೀವ್ರ ದುರಭಿಮಾನ ಮತ್ತು ಭಿನ್ನತೆಯಲ್ಲಿದ್ದಾರೆ.
ಇವರಿಗಿಂತ ಮುಂಚೆ ಅದೆಷ್ಟು ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ! ಆಗ (ರಕ್ಷಣೆಗಾಗಿ) ಅವರು ಗೋಳಿಟ್ಟಿದ್ದಾರೆ. ಆದರೆ ಅದು ಓಡಿ ಪಾರಾಗುವ ಸಮಯವಾಗಿರಲಿಲ್ಲ.
ಇವರಿಂದಲೇ ಓರ್ವ ಎಚ್ಚರಿಕೆ ನೀಡುವಾತನು ಇವರಿಗೆ ಬಂದಾಗ ಇವರು ಅಚ್ಚರಿಗೊಂಡಿದ್ದಾರೆ. ಸತ್ಯನಿಷೇಧಿಗಳು ಹೇಳಿದರು, `ಇವನೊಬ್ಬ ಜಾದುಗಾರ, ಮಹಾ ಸುಳ್ಳುಗಾರ.
ಇವನು ದೇವರುಗಳನ್ನು ಏಕ ದೇವನಾಗಿ ಮಾಡಿ ಬಿಟ್ಟನೇ? ನಿಜಕ್ಕೂ ಇದೊಂದು ಬಹಳ ವಿಚಿತ್ರ ಸಂಗತಿ’.
ಜನಾಂಗದ ಸರದಾರರು ಹೀಗೆ ಹೇಳುತ್ತಾ ಹೊರ ನಡೆದರು. “ಹೊರಡಿರಿ. ನಿಮ್ಮ ಆರಾಧ್ಯರ ಮೇಲೆ ಸಹನೆಯಿಂದ ಸ್ಥಿರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಇದು ನಮ್ಮ ಮೇಲೆ ಉದ್ದೇಶವಿದ್ದ ಸಂಗತಿಯಾಗಿದೆ.
ಇದನ್ನು ಕೊನೆಯ ಧರ್ಮದಲ್ಲೂ ನಾವು ಕೇಳಿಲ್ಲ. ಇದು ಕೇವಲ ಸ್ವಯಂ ಸೃಷ್ಟಿ.
ನಮ್ಮ ನಡುವೆ ಕೇವಲ ಈತನಿಗೆ ಈ ಬೋಧನೆ ಅವತೀರ್ಣಗೊಂಡಿತೆ?” ಆದರೆ ನನ್ನ ಬೋಧನೆಯ ಬಗ್ಗೆ ಇವರು ಸಂಶಯದಲ್ಲೇ ಇರುವರು. ವಾಸ್ತವದಲ್ಲಿ ಇವರು ಈ ತನಕ ನನ್ನ ಯಾತನೆಯ ರುಚಿಯನ್ನು ಸವಿದಿಲ್ಲ.
ಅಥವಾ ಮಹಾ ಪ್ರತಾಪಿಯೂ ಅತ್ಯುದಾರನೂ ಆದ ನಿಮ್ಮ ಪ್ರಭುವಿನ ಕೃಪೆಯ ಭಂಡಾರಗಳು ಇವರ ಕೈಯಲ್ಲಿವೆಯೇ?
ಅಥವಾ ಭೂಮಿ-ಆಕಾಶಗಳ ಹಾಗೂ ಅವುಗಳ ನಡುವೆ ಇರುವ ವಸ್ತುಗಳ ಆಧಿಪತ್ಯ ಇವರಿಗಿದೆಯೇನು? ಹಾಗಿದ್ದರೆ ಇವರು ಅದರ ಮಾರ್ಗಗಳಿಗೆ ಹತ್ತಿ ನೋಡಲಿ.
ಈ ನಿಷೇಧಿಗಳದ್ದು ಕೂಟಗಳ ಪೈಕಿ ಅಲ್ಲಿ ಸೋಲಿಸಲ್ಪಡುವ ಯಕಶ್ಚಿತ್ ಸಂಘ.
ಇವರಿಗಿಂತ ಮುಂಚೆ ನೂಹರ ಜನಾಂಗ, ಆದ್, ಮೊಳೆಗಾರ ಫಿರ್‍ಔನ್, ಸಮೂದ್, ಲೂಥ್ ಜನಾಂಗ ಮತ್ತು ಐಕದವರು ಸುಳ್ಳಾಗಿಸಿದ್ದಾರೆ. ಅವರು ಸಂಘ ಪರಿವಾರದವರು.
ಅವರ ಪೈಕಿ ಪ್ರತಿಯೊಂದು ಕೂಟವೂ ಸಂದೇಶ ವಾಹಕರನ್ನು ಸುಳ್ಳಾಗಿಸಿತು. ಇದರಿಂದ ನನ್ನ ಶಿಕ್ಷೆಯು ಅವರ ಮೇಲೆ ನಿಜವಾಯಿತು.
ಒಂದು ಘೋರ ಘರ್ಜನೆಯನ್ನಲ್ಲದೆ ಅವರು ನಿರೀಕ್ಷಿಸುತ್ತಿಲ್ಲ. ಅದಕ್ಕೆ ಇನ್ನು ಹೆಚ್ಚು ಕಾಲ ತಡವಿಲ್ಲ.
ಇವರು, “ಓ ನಮ್ಮ ಪ್ರಭೂ, ಲೆಕ್ಕಾಚಾರದ ದಿನ ಬರುವ ಮೊದಲೇ ನಮ್ಮ ಪಾಲು ನಮಗೆ ಬೇಗನೆ ಕೊಟ್ಟುಬಿಡು” ಎನ್ನುತ್ತಾರೆ.
(ಸಂದೇಶವಾಹಕರೇ,) ಇವರು ಹೇಳುವ ಮಾತುಗಳನ್ನು ಸಹಿಸಿಕೊಳ್ಳಿರಿ. ಇವರಿಗೆ (ದೇವೋಪಾ ಸನೆಯಲ್ಲಿ) ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರ ವೃತ್ತಾಂತವನ್ನು ವಿವರಿಸಿರಿ. ಅವರು ಅಲ್ಲಾಹನ ಕಡೆಗೆ ಅತೀ ಹೆಚ್ಚು ಮರಳುವವರಾಗಿದ್ದರು.
ಪರ್ವತಗಳು ಬೆಳಗು ಬೈಗುಗಳಲ್ಲಿ ಅವರೊಂದಿಗೆ ದೇವ ಕೀರ್ತನೆ ಮಾಡುವ ಸ್ಥಿತಿಯಲ್ಲಿ ಅವುಗಳ ನ್ನು ನಾವು ಅವರಿಗೆ ನಿಯಂತ್ರಿಸಿಕೊಟ್ಟಿದ್ದೆವು.
ಒಟ್ಟಾಗಿ ಬಂದು ಸೇರುತ್ತಿದ್ದ ಪಕ್ಷಿಗಳನ್ನೂ, ಅವೆಲ್ಲವೂ ಅವರಿಗೆ ಸಂಪೂರ್ಣ ವಿಧೇಯವಾಗಿದ್ದವು.
ನಾವು ಅವರ ಸಾಮ್ರಾಜ್ಯವನ್ನು ಬಲಿಷ್ಟಗೊಳಿಸಿದ್ದೆವು. ಅವರಿಗೆ ನಾವು ಯುಕ್ತಿಜ್ಞಾನವನ್ನೂ ನಿರ್ಣಾಯಕವಾಗಿ ಮಾತನಾಡುವ ಸಾಮಥ್ರ್ಯವನ್ನೂ ನೀಡಿದ್ದೆವು.
ದಾವೂದರ ಆರಾಧನಾಲಯದ ಗೋಡೆಯ ಮೇಲೇರಿ ಇಳಿದು ಬಂದಿದ್ದ ಕಕ್ಷಿದಾರರ ಸುದ್ದಿ ನಿಮಗೆ ತಲುಪಿದೆಯೇ?
ಅಂದರೆ ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಬೆಚ್ಚಿದರು. ಆಗ ಅವರು `ಹೆದರಬೇಡಿರಿ, ನಾವು ಎರಡು ಕಕ್ಷಿದಾರರಾಗಿದ್ದು, ನಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ಅನ್ಯಾಯವೆಸಗಿರುವನು. ತಾವು ನಮ್ಮ ನಡುವೆ ನ್ಯಾಯ ಪೂರ್ಣ ತೀರ್ಮಾನ ಮಾಡಿರಿ, ಅತಿ ಕ್ರಮಿಸಬೇಡಿರಿ. ಸರಿಯಾದ ದಾರಿಗೆ ನಮ್ಮನ್ನು ಮುನ್ನಡೆಸಿರಿ.
ಇವನು ನನ್ನ ಸಹೋದರ, ಇವನಿಗೆ ತೊಂಬ ತ್ತೊಂಬತ್ತು ಹೆಣ್ಣಾಡುಗಳಿವೆ. ನನಗೆ ಒಂದು ಆಡು ಮಾತ್ರ ಇದೆ. ಇವನು ಆ ಒಂದು ಆಡನ್ನೂ ನನಗೆ ಬಿಟ್ಟು ಕೊಡಬೇಕೆಂದು ನನ್ನೊಡನೆ ಹೇಳಿದನು ಮತ್ತು ಮಾತಿನಲ್ಲಿ ನನ್ನನ್ನು ಗೆದ್ದನು.
ಆಗ ದಾವೂದರು- ‘ಇವನು ತನ್ನ ಹೆಣ್ಣು ಆಡುಗಳೊಂದಿಗೆ ನಿನ್ನ ಆಡನ್ನು ಸೇರಿಸಿಕೊಳ್ಳಲು ಕೇಳುವ ಮೂಲಕ ನಿಜಕ್ಕೂ ನಿನ್ನ ಮೇಲೆ ಅಕ್ರಮವೆಸಗಿರುವನು. ಸಹಬಾಳುವೆ ನಡೆಸುವವರಲ್ಲಿ ಹೆಚ್ಚಿನವರೂ ಪರಸ್ಪರ ಅತಿರೇಕವೆಸಗುತ್ತಾರೆ. ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರು ಮಾತ್ರ ಇದರಿಂದ ದೂರವಿರುತ್ತಾರೆ. ಇಂತಹವರು ಬಹಳ ವಿರಳ’ ಎಂದರು. ದಾವೂದರು ಭಾವಿಸಿದರು, ‘ನಾವು ಅವರನ್ನು ಪರೀಕ್ಷಿಸುತ್ತಿದ್ದೇವೆ’ ಎಂದು. ನಂತರ ಅವರು ತಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ನಡೆಸಿದರು. ಸಾಷ್ಟಾಂ ಗವೆರಗಿದರು. ಪಶ್ಚಾತ್ತಾಪಪಟ್ಟು ಮರಳಿದರು.
ಆಗ ನಾವು ಅವರಿಗೆ ಅದನ್ನು ಕ್ಷಮಿಸಿದೆವು. ನಿಶ್ಚಯ ನಮ್ಮ ಬಳಿ ಅವರಿಗಾಗಿ ನಿಕಟ ಸ್ಥಾನ ಹಾಗೂ ಉತ್ತಮವಾದ ಅಂತಿಮ ನೆಲೆ ಇದೆ.
ಓ, ದಾವೂದ್! ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದುದರಿಂದ ನೀವು ಜನರ ನಡುವೆ ನ್ಯಾಯ ಪ್ರಕಾರ ವಿಧಿಸಿರಿ. ಸ್ವೇಚ್ಛೆಯನ್ನು ಅನುಸರಿಸಬೇಡಿರಿ. ಅದು ನಿಮ್ಮ ನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುವುದು. ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುವವರಿಗೆ, ಅವರು ಲೆಕ್ಕಾಚಾರದ ದಿನವನ್ನು ಮರೆತುಬಿಟ್ಟ ಕಾರಣಕ್ಕೆ ಖಂಡಿತ ಕಠಿಣ ಶಿಕ್ಷೆ ಇದೆ.
ಆಕಾಶವನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ನಾವು ವೃಥಾ ಸೃಷ್ಟಿಸಲಿಲ್ಲ. ಅದು ಸತ್ಯನಿಷೇಧಿಗಳ ಭಾವನೆಯಾಗಿದೆ. ಹೀಗಾಗಿ ಸತ್ಯನಿಷೇಧಿಗಳಿಗೆ ನರಕಾಗ್ನಿಯ ಮೂಲಕ ಘೋರ ವಿನಾಶವಿದೆ.
ಅಥವಾ ಸತ್ಯವಿಶ್ವಾಸವಿರಿಸಿ ಸತ್ಕರ್ಮ ವೆಸಗು ವವರನ್ನು ಭೂಮಿಯಲ್ಲಿ ಕ್ಷೋಭೆ ಸೃಷ್ಟಿಸುವವ ರಂತೆ ನಾವೇಕೆ ಮಾಡಬೇಕು? ಅಥವಾ ಧರ್ಮ ನಿಷ್ಠರನ್ನು ನಾವು ಧರ್ಮಭ್ರಷ್ಟರಂತೆ ಮಾಡುವುದು ಏಕೆ?
(ಪೈಗಂಬರರೇ,) ಇದೊಂದು ಅನುಗ್ರಹೀತ ಗ್ರಂಥವಾಗಿದ್ದು ಇವರು ಇದರ ಸೂಕ್ತಗಳ ಕುರಿತು ಚಿಂತನೆ ನಡೆಸಲೆಂದು ಮತ್ತು ಬುದ್ಧಿಜೀವಿಗಳು ಇದರಿಂದ ಉಪದೇಶ ಪಡೆಯಲೆಂದು ನಾವಿದ ನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ.
ದಾವೂದರಿಗೆ ನಾವು ಸುಲೈಮಾನರನ್ನು (ಪುತ್ರ ನಾಗಿ) ದಯಪಾಲಿಸಿದೆವು. ಅವರು ಅತ್ಯು ತ್ತಮ ದಾಸರು. ತಮ್ಮ ಪ್ರಭುವಿನ ಕಡೆಗೆ ಅತಿ ಹೆಚ್ಚಾಗಿ ಮರಳುವವರು !
ಅತಿ ವೇಗದ, ಸನ್ನದ್ಧ ಯುದ್ಧಾಶ್ವಗಳನ್ನು ಅವರ ಮುಂದೆ ಸಂಜೆಯ ವೇಳೆ ಪ್ರದರ್ಶಿಸಲಾದ ಸಂದರ್ಭವು ಸ್ಮರಣೀಯ.
ಆಗ ಅವರು ಹೇಳಿದರು, ನನ್ನ ಪ್ರಭುವಿನ ಸ್ಮರಣೆಯನ್ನು ಬಿಟ್ಟು ಸಂಪತ್ತಿನ ಪ್ರೀತಿಗೆ ಒಲಿದು ಬಿಟ್ಟೆ. ಸೂರ್ಯನು ಮರೆಯಾಗುವವರೆಗೂ!
ಆದ್ದರಿಂದ ಅವುಗಳನ್ನು ನನ್ನ ಬಳಿಗೆ ಮರಳಿ ತನ್ನಿರಿ. ಆಮೇಲೆ ಅವರು ಆ ಕುದುರೆಗಳನ್ನು ಬಲಿದಾನ ನೀಡಿದರು. ಅವುಗಳ ಮೊಣಕಾಲನ್ನು ಕಡಿದರು .
ಸುಲೈಮಾನರನ್ನು ನಾವು ಪರೀಕ್ಷೆಗೊಳಪಡಿಸಿದೆವು. ಅವರ ಸಿಂಹಾಸನದ ಮೇಲೆ ಒಂದು ಜಡಶರೀರವನ್ನು ತಂದು ಹಾಕಿದೆವು. ಅನಂತರ ಅವರು ಪಶ್ಚಾತ್ತಾಪಪಟ್ಟು ಮರಳಿದರು.
ಅವರು ಪ್ರಾರ್ಥಿಸಿದರು, “ನನ್ನ ಪ್ರಭೂ, ನನ್ನನ್ನು ಕ್ಷಮಿಸು, ನನ್ನ ಬಳಿಕ ಇನ್ನಾರಿಗೂ ಸಲ್ಲದ ರಾಜ ಪದವಿಯನ್ನು ನನಗೆ ದಯಪಾಲಿಸು. ನಿಜಕ್ಕೂ ನೀನೇ ಅತೀ ಉದಾರನಾಗಿರುವೆ”.
ಆಗ ಅವರಿಗೆ ನಾವು ಗಾಳಿಯನ್ನು ನಿಯಂತ್ರಿಸಿ ಕೊಟ್ಟೆವು. ಅದು ಅವರ ಅಪ್ಪಣೆಯಂತೆ ಅವರು ಇಚ್ಚಿಸಿದ ದಿಕ್ಕಿಗೆ ಮಂದವಾಗಿ ಬೀಸುತ್ತಿತ್ತು.
ಎಲ್ಲ ವಿಧದ ಕಟ್ಟಡ ನಿರ್ಮಾಣಗಾರರೂ ಮುಳುಗು ಪ್ರವೀಣರೂ ಆದ ಶೈತಾನರನ್ನೂ
ಸಂಕೋಲೆಗಳಲ್ಲಿ ಬಿಗಿಯಲ್ಪಟ್ಟ ಇತರ ಶೈತಾನರನ್ನೂ ನಾವು ಅವರಿಗೆ ಅಧೀನಗೊಳಿಸಿದೆವು.
“ಇದು ನಮ್ಮ ಕೊಡುಗೆ, ಆದ್ದರಿಂದ ಲೆಕ್ಕ ನೋಡದೆ ಕೊಡಿರಿ ಇಲ್ಲವೇ ತಡೆದಿರಿಸಿರಿ” (ಎಂದು ಸುಲೈಮಾನರಿಗೆ ನಾವು ಹೇಳಿದೆವು).
ನಿಶ್ಚಯವಾಗಿಯೂ ಅವರಿಗೆ ನಮ್ಮ ಬಳಿ ನಿಕಟ ಸ್ಥಾನವೂ ಉತ್ಕøಷ್ಟವಾದ ಅಂತಿಮ ನೆಲೆಯೂ ಇದೆ.
ನಮ್ಮ ದಾಸ ಅಯ್ಯೂಬರನ್ನು ಸ್ಮರಿಸಿರಿ. ಸಂಕಟ ಹಾಗೂ ಪೀಡನೆಯ ಮೂಲಕ ನನ್ನನ್ನು ಶೈತಾನನು ಸ್ಪರ್ಶಿಸಿದ್ದಾನೆಂದು ಅವರು ತಮ್ಮ ಪ್ರಭುವನ್ನು ಪ್ರಾರ್ಥಿಸಿದ ಸಂದರ್ಭ.
(ನಾವು ಆಜ್ಞಾಪಿಸಿದೆವು) “ನಿಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದೋ ಸ್ನಾನದ ತಣ್ಣೀರು, ಮತ್ತು ಕುಡಿಯುವ ನೀರು”.
ಅವರ ಮನೆಯವರನ್ನೂ ಅವರೊಂದಿಗೆ ಪುನಃ ಅಷ್ಟನ್ನೂ ಅವರಿಗೆ ನಾವು ಕೊಟ್ಟೆವು. ಇದು ನಮ್ಮ ವತಿಯಿಂದ ಕರುಣೆಯಾಗಿಯೂ ಬುದ್ದಿಜೀವಿಗ ಳಿಗೆ ನೀತಿ ಪಾಠವಾಗಿಯೂ ನೀಡಿದುದಾಗಿತ್ತು.
`ತಾವು ಒಂದು ಹಿಡಿ ಹುಲ್ಲನ್ನು ತೆಗೆದುಕೊಳ್ಳಿರಿ, ಅದರಿಂದ (ಪತ್ನಿಗೆ) ಹೊಡೆಯಿರಿ. ನಿಮ್ಮ ಶಪಥವನ್ನು ಮುರಿಯಬೇಡಿರಿ. ‘ನಾವು ಅವರನ್ನು ತಾಳ್ಮೆಗಾರರಾಗಿ ಕಂಡೆವು. ಅವರು ಅತ್ಯುತ್ತಮ ದಾಸರು, ತಮ್ಮ ಪ್ರಭುವಿನ ಕಡೆಗೆ ಬಹಳಷ್ಟು ಮರಳುವವರು.
ಕರ್ಮ ಶಕ್ತಿ ಹಾಗೂ ಒಳದೃಷ್ಟಿಯುಳ್ಳ ನಮ್ಮ ದಾಸರಾದ ಇಬ್‍ರಾಹೀಮ್, ಇಸ್‍ಹಾಖ್ ಮತ್ತು ಯಅïಖೂಬರನ್ನು ಸ್ಮರಿಸಿರಿ.
ಒಂದು ವಿಶಿಷ್ಟ ಗುಣದಿಂದಾಗಿ ಅವರನ್ನು ನಾವು ಪುನೀತರಾಗಿ ಮಾಡಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು.
ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ದ ಶ್ರೇಷ್ಟರ ಸಾಲಿಗೆ ಸೇರಿದವರು.
ಇಸ್ಮಾಈಲ್, ಅಲ್‍ಯಸಅï ಮತ್ತು ದುಲ್ ಕಿಫ್ಲರನ್ನು ಸ್ಮರಿಸಿರಿ. ಇವರೆಲ್ಲರೂ ಶ್ರೇಷ್ಟರ ಲ್ಲಾಗಿದ್ದರು.
ಇದೊಂದು ಬೋಧನೆಯಾಗಿದ್ದು ಧರ್ಮನಿಷ್ಟರಿಗೆ ಖಂಡಿತ ಉತ್ಕøಷ್ಟವಾದ ಅಂತಿಮ ನೆಲೆಯಿದೆ.
ಅಂದರೆ ಶಾಶ್ವತವಾದ ಸ್ವರ್ಗೋದ್ಯಾನಗಳಿದ್ದು ಅವುಗಳ ಕದಗಳು ಅವರ ಪಾಲಿಗೆ ತೆರೆದಿಡಲಾಗಿದೆ.
ಅವರು ಅದರಲ್ಲಿ ದಿಂಬುಗಳಿಗೆ ಒರಗಿ ಕುಳಿತು ಕೊಂಡು, ಹೇರಳ ಫಲಗಳನ್ನೂ ಪಾನೀಯಗಳನ್ನೂ ತರಿಸುತ್ತಿರುವರು.
ಅವರ ಬಳಿ ದೃಷ್ಟಿಯನ್ನು ನಿಯಂತ್ರಿಸುವ ಸಮವಯಸ್ಕ ಸುಂದರಿಯರಿರುವರು
ಇವೆಲ್ಲ, ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ಮಾಡಲಾಗುತ್ತಿರುವ ವಸ್ತುಗಳು.
ಇದು ನಮ್ಮ ಅನುಗ್ರಹವಾಗಿದ್ದು, ಇದೆಂದಿಗೂ ಬತ್ತಿ ಹೋಗಲಾರದು.
ಇದು ಧರ್ಮನಿಷ್ಠರ ಸ್ಥಿತಿ. ಪಾಪಿಗಳಿಗೆ ಅತ್ಯಂತ ನಿಕೃಷ್ಟ ನಿವಾಸವಿದೆ.
ನರಕ, ಅದರಲ್ಲಿ ಅವರು ಉರಿದು ಹೋಗುವರು. ಅದೆಷ್ಟು ಕೆಟ್ಟ ಶಯ್ಯೆಯಾಗಿದೆ!
ಇದು ಸ್ಥಿತಿ. ಆದುದರಿಂದ ಅವರು ಸವಿದು ಕೊಳ್ಳಲಿ, ಕುದಿಯುತ್ತಿರುವ ನೀರನ್ನು, ದುರ್ಗಂಧಪೂರಿತ ಕೀವನ್ನು
ಇಂತಹದೇ ಬೇರೊಂದು ಜಲವನ್ನೂ, ಇನ್ನಿತರ ವಿಧಗಳ ಶಿಕ್ಷೆಯನ್ನೂ.
ಈ ತುಕಡಿಯು ನಿಮ್ಮ ಜೊತೆಗೇ ತಳ್ಳಿ ಬರುತ್ತಿದೆ. ಅವರಿಗೆ ಯಾವ ಕ್ಷೇಮವೂ ಇಲ್ಲ. ನಿಜವಾಗಿಯೂ ಅವರು ನರಕಕ್ಕೆ ಪ್ರವೇಶಿಸಿಯೇ ಬಿಟ್ಟರು .
ಇವರು ಹೇಳುತ್ತಾರೆ; ``ಅಷ್ಟೇ ಅಲ್ಲ, ನಿಮಗೂ ಕ್ಷೇಮವಿಲ್ಲ. ಇದನ್ನು ನೀವು ನಮ್ಮ ಮುಂದಿರಿಸಿ ಕೊಟ್ಟವರು, ಈ ತಾಣವು ಬಹಳ ನಿಕೃಷ್ಟ”.
ಇವರು ಹೇಳುತ್ತಾರೆ; ``ನಮ್ಮ ಪ್ರಭೂ! ಇದನ್ನು ಯಾರು ನಮಗೆ ಮುಂದಿರಿಸಿಕೊಟ್ಟರೋ ಅವರಿಗೆ ಈ ಶಿಕ್ಷೆಯನ್ನು ನರಕದಲ್ಲಿ ಇಮ್ಮಡಿಯಾಗಿ ಹೆಚ್ಚಿಸಿ ಕೊಡು!
ಅವರು ಹೀಗೆ ಹೇಳುವರು; ``ನಮಗೇನಾ ಯಿತು? ನಾವು ಕೆಟ್ಟವರೆಂದು ಭಾವಿಸುತ್ತಿದ್ದವರು ಇಲ್ಲೆಲ್ಲೂ ನಮಗೆ ಕಾಣುತ್ತಿಲ್ಲವಲ್ಲ?
ನಾವು ಅವರನ್ನು ವೃಥಾ ಪರಿಹಾಸ್ಯ ಮಾಡುತ್ತಿ ದ್ದೆವೋ ಅಥವಾ ಅವರನ್ನು ಬಿಟ್ಟು ಕಣ್ಣುಗಳೂ ಕದಲಿತೇ?
ನರಕವಾಸಿಗಳಲ್ಲಿ ಈ ತರದ ವಾಗ್ದಾನ ನಡೆಯಲಿರುವುದು. ಖಂಡಿತವಾಗಿಯೂ ಸತ್ಯ.
(ಪೈಗಂಬರರೇ) ಹೇಳಿರಿ, ನಾನು ಕೇವಲ ಎಚ್ಚರಿಕೆ ಕೊಡುವವನು, ಏಕನೂ ಸರ್ವಾಧಿಪತಿಯೂ ಆಗಿರುವ ಅಲ್ಲಾಹನ ಹೊರತು ಯಾವುದೇ ಆರಾಧ್ಯರಿಲ್ಲ.
ಅವನು ಭೂಮಿ-ಆಕಾಶಗಳ ಹಾಗೂ ಅವುಗಳ ನಡುವೆ ಇರುವುದರ ಒಡೆಯನೂ ಪ್ರಬಲನೂ ಅತ್ಯಂತ ಕ್ಷಮಾಶೀಲನೂ ಆಗಿರುತ್ತಾನೆ.
ಹೇಳಿರಿ- “ಇದೊಂದು ಗಂಭೀರ ವಾರ್ತೆ!
ನೀವು ಅದನ್ನು ಅವಗಣಿಸುತ್ತೀರಿ,
ಮಲಅï ಅಅïಲಾ (ಸರ್ವೋನ್ನತ ದರಬಾರ) ದಲ್ಲಿ ಮಾತಿನ ಚಕಮಕಿ ನಡೆದಿದ್ದ ಸುದ್ದಿ ನನಗೆ ತಿಳಿದಿರಲೇ ಇಲ್ಲ.
ನಾನು ಸುಸ್ಪಷ್ಟ ಎಚ್ಚರಿಕೆ ಕೊಡುವವನಾಗಿರುವುದರಿಂದ ಮಾತ್ರ ನನಗೆ ಸಂದೇಶ ಕೊಡಲಾಗುತ್ತದೆ.
ನಿಮ್ಮ ಪ್ರಭು ದೇವಚರರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನಾನು ಆವೆಮಣ್ಣಿನಿಂದ ಒಬ್ಬ ಮಾನವನನ್ನು ಸೃಷ್ಟಿಸುವವನಿದ್ದೇನೆ.
ಹಾಗೆ ನಾನು ಅವನನ್ನು ಪೂರ್ಣವಾಗಿ ನಿರ್ಮಿಸಿದಾಗ ಮತ್ತು ಅವನೊಳಗೆ ನನ್ನ ಆತ್ಮದಿಂದ ಊದಿ ದಾಗ, ನೀವು ಅವನ ಮುಂದೆ ಸಾಷ್ಟಾಂಗ ವೆರಗಿರಿ”.
ಆಗ ದೇವಚರರೆಲ್ಲರೂ ಸಾಷ್ಟಾಂಗವೆರಗಿದರು.
ಇಬ್‍ಲೀಸನ ಹೊರತು. ಅವನು ಅಹಂಭಾವ ತೋರಿದನು. ಅವನು ಸತ್ಯನಿಷೇಧಿಗಳ ಕೂಟಕ್ಕೆ ಸೇರಿದ್ದನು.
ಆಗ ಅಲ್ಲಾಹನು ಹೇಳಿದನು; “ಇಬ್‍ಲೀಸ್! ನಾನು ನನ್ನೆರಡು ಕೈಗಳಿಂದ ನಿರ್ಮಿಸಿದ್ದಕ್ಕೆ ಸಾಷ್ಟಾಂಗವೆರಗುವುದರಿಂದ ನಿನ್ನನ್ನು ತಡೆದುದೇನು? ನೀನು ಅಹಂಭಾವ ತೋರಿಸುವೆಯಾ? ಅಥವಾ ನೀನೇ ಉನ್ನತ ಮಟ್ಟದವರಲ್ಲಾಗಿರುವೆಯಾ?”
ಅವನು ಹೀಗೆಂದನು; “ನಾನು ಇವನಿಗಿಂತ ಶ್ರೇಷ್ಟನು, ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿದೆ. ಮತ್ತು ಅವನನ್ನು ಆವೆಮಣ್ಣಿನಿಂದ ಸೃಷ್ಟಿಸಿದೆ”.
ಆಗ ಅಲ್ಲಾಹನು ಹೇಳಿದನು; ‘ಹಾಗಿದ್ದರೆ ಇಲ್ಲಿಂದ ತೊಲಗು. ನೀನು ಬಹಿಷ್ಕøತನು.
ನ್ಯಾಯ ವಿಧಿಯ ದಿನದವರೆಗೂ ನಿನ್ನ ಮೇಲೆ ನನ್ನ ಶಾಪವಿದೆ”.
ಆಗ ಅವನು, (ಇಬ್ಲೀಸ್) ಹೇಳಿದನು; “ಪ್ರಭೂ, ಹಾಗಿದ್ದರೆ ಅವರು ಪುನಃ ಎಬ್ಬಿಸಲ್ಪಡುವ ದಿನದ ವರೆಗೆ ನನಗೆ ಕಾಲಾವಕಾಶ ಕೊಟ್ಟು ಬಿಡು”.
ಆಗ ಅಲ್ಲಾಹನು, ಹೇಳಿದನು; ನೀನು ಸಮಯಾ ವಕಾಶವನ್ನು ನೀಡಲ್ಪಟ್ಟವರ ಗುಂಪಿಗೆ ಸೇರಿರುವಿ.
ನಿಶ್ಚಿತವಾದ ಆ ಸಮಯ ಬರುವ ದಿನದ ವರೆಗೆ
ಆಗ ಅವನು (ಇಬ್ಲೀಸ್) ಹೇಳಿದನು “ನಿನ್ನ ಪ್ರತಿಷ್ಟೆಯಾಣೆ, ಅವರೆಲ್ಲರನ್ನೂ ನಾನು ಖಂಡಿತ ದಾರಿಗೆಡಿಸಿ ಬಿಡುವೆನು
ಅವರ ಪೈಕಿ ನಿನ್ನ ನಿಷ್ಕಳಂಕ ದಾಸರ ಹೊರತು
ಆಗ ಅಲ್ಲಾಹನು ಹೇಳಿದನು, ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.
ನಾನು ನಿನ್ನನ್ನೂ ನಿನ್ನನ್ನು ಅನುಸರಿಸುವ ಸಕಲರನ್ನೂ ನರಕಕ್ಕೆ ಖಂಡಿತ ತುಂಬಿಸಿ ಬಿಡುವೆನು.
(ಸಂದೇಶವಾಹಕರೇ) ಹೇಳಿರಿ; ನಾನು ಇದರ ಹೆಸರಲ್ಲಿ ನಿಮ್ಮಿಂದ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ನಾನು ನಿರ್ಮಿಸಿ ಹೇಳುವವರ ಸಾಲಿಗೆ ಸೇರಿದವನೂ ಅಲ್ಲ.
ಇದು ಲೋಕದವರಿಗಾಗಿ ಒಂದು ಉದ್ಭೋದನೆ ಮಾತ್ರವಾಗಿದೆ.
ಒಂದು ಕಾಲಾವಧಿಯ ನಂತರ ಇದರ ವೃತ್ತಾಂತ ನಿಮಗೆ ಖಂಡಿತ ತಿಳಿಯುವುದು.