ಆಲ್ ಇಸ್ಲಾಂ ಲೈಬ್ರರಿ
1

ತ್ವಾ ಸೀನ್ ಮೀಮ್.

2

ಮಹತ್ತರವಾದ ಈ ಅಧ್ಯಾಯದ ವಾಕ್ಯಗಳು ಸುಸ್ಪಷ್ಟವಾದ ಖುರ್‍ಆನ್ ಗ್ರಂಥದ ಸೂಕ್ತಗ ಳಾಗಿವೆ.

3

(ಸಂದೇಶವಾಹಕರೇ,) ಇವರು ಸತ್ಯವಿಶ್ವಾಸವನ್ನು ಸ್ವೀಕರಿಸುವುದಿಲ್ಲವೆಂಬ ಕಾರಣಕ್ಕೆ ನೀವು ನಿಮ್ಮ ಜೀವವನ್ನೇ ಅಪಾಯಕ್ಕೆ ಎಳೆಯಬೇಡಿರಿ.

4

ನಾವಿಚ್ಛಿಸಿದರೆ ಇವರ ಮೇಲೆ ಆಕಾಶದಿಂದ ದೃಷ್ಟಾಂತವನ್ನು ಇಳಿಸಿ, ಅದಕ್ಕೆ ಇವರ ಕೊರಳು ಗಳು ಮಣಿಯುವಂತೆ ಮಾಡುತ್ತಿದ್ದೆವು.

5

ಇವರ ಬಳಿಗೆ ದಯಾನಿಧಿಯಾದ ಅಲ್ಲಾಹನ ಕಡೆ ಯಿಂದ ಹೊಸತಾಗಿ ಯಾವ ಉಪದೇಶ ಬಂದರೂ ಇವರು ಅದರಿಂದ ವಿಮುಖರಾಗುತ್ತಾರೆ.

6

ಕೊನೆಗೆ ಇವರು ಸುಳ್ಳಾಗಿಸಿ ಬಿಟ್ಟರು. ಆದ್ದರಿಂದ ಇವರು ಯಾವುದನ್ನು ಪರಿಹಾಸ್ಯ ಮಾಡುತ್ತಿರು ವರೋ ಅದರ ವೃತ್ತಾಂತವು ಇವರಿಗೆ ಸದ್ಯವೇ ತಿಳಿದು ಬರಲಿದೆ.

7

ಎಲ್ಲ ವಿಧದ ಅತ್ಯುತ್ತಮ ಸಸ್ಯಗಳನ್ನು ನಾವು ಇಲ್ಲಿ ಎಷ್ಟೆಲ್ಲ ಬೆಳೆಸಿದ್ದೇವೆ ಎಂದು ಇವರು ಭೂಮಿಯ ಕಡೆಗೆ ನೋಡುವುದಿಲ್ಲವೇ?

8

ಇದರಲ್ಲಿ ಖಂಡಿತ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿರಿಸುವವರಲ್ಲ.

9

ಖಂಡಿತ ನಿಮ್ಮ ಪ್ರಭು ಪ್ರಬಲನೂ ಕರುಣಾನಿಧಿ ಯೂ ಆಗಿರುವನು.

10

ನಿನ್ನ ಪ್ರಭು ಮೂಸಾರನ್ನು ಕರೆದು “ನೀವು ಅಕ್ರಮಿ ಜನಾಂಗದ ಅಂದರೆ ಫಿರ್‍ಔನನ ಜನಾಂಗದ ಕಡೆಗೆ ಹೋಗಿರಿ” ಹೇಳಿದ ಸಂದರ್ಭವನ್ನು ನೆನಪಿಸಿರಿ.

11

ಅಂದರೆ ಫಿರ್‍ಔನನ ಜನಾಂಗದ ಕಡೆಗೆ. ‘ಅವರು ಅಲ್ಲಾಹನನ್ನು ಭಯ ಪಡುವುದಿಲ್ಲವೇ?’ ಎಂದು ಕೇಳಿರಿ”.

12

ಆಗ ಅವರು ಹೇಳಿದರು, `ನನ್ನ ಪ್ರಭೂ, ಅವರು ನನ್ನನ್ನು ಸುಳ್ಳಾಗಿಸುವರೆಂಬ ಭಯ ನನಗಿದೆ.

13

ನನ್ನ ಎದೆ ಮುದುಡುತ್ತಿದೆ. ನನ್ನ ನಾಲಿಗೆ ಚಲಿಸು ವುದಿಲ್ಲ. ಆದ್ದರಿಂದ ಹಾರೂನರಿಗೂ ಸಂದೇಶ ಕಳುಹಿಸು.

14

ಮಾತ್ರವಲ್ಲ ಅವರಿಗೆ ನನ್ನ ಮೇಲೆ ಒಂದು ಅಪ ರಾಧದ ಆರೋಪವಿದೆ. ಆದುದರಿಂದ ಅವರು ನನ್ನನ್ನು ಕೊಂದು ಬಿಡುವರೆಂದು ನಾನು ಹೆದರುತ್ತೇನೆ’’.

15

ಆಗ ಅಲ್ಲಾಹನು ಹೇಳಿದನು; `ಖಂಡಿತ ಅದೇನೂ ನಡೆಯದು. ನೀವಿಬ್ಬರೂ ನಮ್ಮ ನಿದರ್ಶನಗಳನ್ನು ತೆಗೆದುಕೊಂಡು ಹೋಗಿರಿ. ನಾವು ನಿಮ್ಮೊಂದಿಗೇ ಇದ್ದೇವೆ. ಎಲ್ಲವನ್ನೂ ಆಲಿಸುತ್ತಿದ್ದೇವೆ.

16

ಫಿರ್‍ಔನನ ಬಳಿಗೆ ಹೋಗಿರಿ. ಆಮೇಲೆ ಹೀಗೆ ಹೇಳಿರಿ; ಸರ್ವ ಜಗತ್ತಿನ ಪ್ರಭು ಅಲ್ಲಾಹನ ದೂತರು ನಾವು.

17

ನೀನು ಇಸ್ರಾಈಲ ಜನಾಂಗವನ್ನು ನಮ್ಮ ಜೊತೆ ಕಳುಹಿಸಿಕೊಡು.

18

ಫಿರ್‍ಔನನು ಹೇಳಿದನು; “ನೀನು ಮಗುವಾಗಿ ದ್ದಾಗ ನಮ್ಮ ಜೊತೆಗೆ ನೆಲೆಗೊಟ್ಟು ನಾವು ನಿನ್ನನ್ನು ಸಾಕಿರಲಿಲ್ಲವೇ? ನಿನ್ನ ಜೀವಮಾನದ ಅನೇಕ ವರ್ಷಗಳನ್ನು ನೀನು ನಮ್ಮಲ್ಲಿ ಕಳೆದಿರುವೆ.

19

ಅನಂತರ ನೀನು ಮಾಡುವುದೆಲ್ಲವನ್ನೂ ಮಾಡಿದೆ. ನೀನು ಮಹಾಕೃತಘ್ನನಾಗಿರುವೆ’’.

20

ಆಗ ಮೂಸಾ ಹೇಳಿದರು; “ನಾನು ಆಗ ಆ ಕೃತ್ಯವನ್ನು ಮಾಡಿದ್ದು ನಿಜ. ಆದರೆ ಅಂದು ನಾನು ಅಜ್ಞರಲ್ಲಿ ಸೇರಿದ್ದೆ.

21

ತರುವಾಯ ನಾನು ನಿಮಗೆ ಹೆದರಿ ಓಡಿಹೋದೆ. ಆ ಬಳಿಕ ನನ್ನ ಪ್ರಭು ನನಗೆ ವಿಜ್ಞಾನವನ್ನು ದಯಪಾಲಿಸಿದನು. ನನ್ನನ್ನು ಸಂದೇಶವಾಹಕ ರಲ್ಲಿ ಸೇರಿಸಿದನು.

22

ನೀನು ಇಸ್ರಾಈಲ ಜನಾಂಗವನ್ನು ಗುಲಾಮರನ್ನಾಗಿ ಮಾಡಿಕೊಂಡದ್ದೇ ನೀನು ನನಗೆ ಮಾಡಿದ ಉಪಕಾರ” .

23

ಫಿರ್‍ಔನನು ‘ಸರ್ವ ಜಗತ್ತಿನ ಪ್ರಭು ಎಂದ ರೇನು?’ ಎಂದು ಕೇಳಿದನು.

24

ಮೂಸಾ `ಭೂಮಿ-ಆಕಾಶಗಳ ಪ್ರಭು ಮತ್ತು ಅವುಗಳ ನಡುವೆ ಇರುವ ಸಕಲದರ ಪ್ರಭು. ನೀವು ದೃಢವಿಶ್ವಾಸವಿರಿಸುವವರಾಗಿದ್ದರೆ’, ಎಂದು ಹೇಳಿದರು.

25

ಫಿರ್‍ಔನನು ತನ್ನ ಸುತ್ತಮುತ್ತಲಿದ್ದ ಜನರೊಡನೆ `ಇವನು ಹೇಳುತ್ತಿರುವುದನ್ನು ನೀವು ಸರಿಯಾಗಿ ಕೇಳಿದಿರಾ?’ ಎಂದನು.

26

ಆಗ ಮೂಸಾ `ನಿಮ್ಮ ಪ್ರಭುವೂ ಗತಿಸಿ ಹೋಗಿರುವ ನಿಮ್ಮ ಪೂರ್ವಿಕರ ಪ್ರಭುವೂ’ ಎಂದರು.

27

ಫಿರ್‍ಔನನು ``ನಿಮ್ಮ ಕಡೆಗೆ ಕಳುಹಿಸಲ್ಪಟ್ಟಿರುವ ನಿಮ್ಮ ದೂತರು ಖಂಡಿತ ಹುಚ್ಚರು’’ ಎಂದನು.

28

ಆಗ ಮೂಸಾ `ಪೂರ್ವ, ಪಶ್ಚಿಮ ಮತ್ತು ಅವೆರಡರ ನಡುವೆ ಇರುವುದರ ಪ್ರಭು. ನೀವು ಯೋಚಿಸ ಬಲ್ಲವರಾಗಿದ್ದರೆ’ ಎಂದರು.

29

ಆಗ ಫಿರ್‍ಔನನು, “ನನ್ನ ಹೊರತು ಬೇರೆ ದೇವನನ್ನುಂ ನೀನು ಸ್ವೀಕರಿಸಿದರೆ ಬಂಧಿಸಲ್ಪಟ್ಟ ಕೈದಿಗಳೊಂದಿಗೆ ನಿನ್ನನ್ನು ಜೈಲಿಗೆ ತಳ್ಳುವೆನು’’ ಎಂದು ಹೇಳಿದನು.

30

ಆಗ ಮೂಸಾ ‘ನಾನು ಒಂದು ಸುಸ್ಪಷ್ಟವಾದ ದೃಷ್ಟಾಂತವನ್ನು ನಿನಗೆ ತಂದರೂ ನೀನು ಒಪ್ಪುವುದಿಲ್ಲವೇ?’ ಎಂದು ಕೇಳಿದರು.

31

ಆಗ ಫಿರ್‍ಔನನು, `ನೀನು ಸತ್ಯವಾದಿಯಾಗಿದ್ದರೆ ಅದನ್ನು ತಂದು ತೋರಿಸು’ ಎಂದನು.

32

ಮೂಸಾ ತಮ್ಮ ದಂಡವನ್ನು ನೆಲಕ್ಕೆಸೆದರು. ಅದು ಹಠಾತ್ತನೆ ಒಂದು ಪ್ರತ್ಯಕ್ಷ ಹೆಬ್ಬಾವಾಗಿ ಮಾರ್ಪಟ್ಟಿತು.

33

ತರುವಾಯ ಅವರು ತಮ್ಮ ಹಸ್ತವನ್ನು ಬಗಲಿನಿಂದ ಹೊರಕ್ಕೆಳೆದರು. ಆಗ ಅದು ಪ್ರೇಕ್ಷಕರ ಮುಂದೆ ಬೆಳ್ಳಗಾಗಿ ತೋರುತ್ತಿತ್ತು.

34

ಫಿರ್‍ಔನನು ತನ್ನ ಸುತ್ತಲಿನ ಸರದಾರರೊಡನೆ ಹೇಳಿದನು; ‘ಈತನು ಒಬ್ಬ ಪರಿಣತ ಮಾಂತ್ರಿ ಕನೇ ಹೌದು!

35

ತನ್ನ ಮಂತ್ರ ವಶೀಕರಣದಿಂದ ನಿಮ್ಮನ್ನು ನಿಮ್ಮ ಭೂಮಿಯಿಂದ ಹೊರಗಟ್ಟ ಬಯಸುತ್ತಾನೆ. ಆದ್ದರಿಂದ ಅವನ ಕಾರ್ಯದಲ್ಲಿ ನೀವೇನು ಅಪ್ಪಣೆ ಕೊಡುವಿರಿ?’

36

ಆಗ ಅವರು ಹೇಳಿದರು; ‘ಇವನಿಗೂ ಇವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಜನರನ್ನು ಒಟ್ಟು ಸೇರಿಸಲಿಕ್ಕಾಗಿ ತಾವು ನಗರಗಳಿಗೆ ದೂತರನ್ನು ಹೇಳಿ ಕಳುಹಿಸಿ.

37

ಸಕಲ ನುರಿತ ಮಾಂತ್ರಿಕರನ್ನು ಅವರು ತಮ್ಮ ಬಳಿಗೆ ಕರೆತರಲಿ.

38

ಒಂದು ದಿನದ ನಿಶ್ಚಿತ ಸಮಯಕ್ಕೆ ಜಾದುಗಾ ರರನ್ನು ಒಟ್ಟುಗೂಡಿಸಲಾಯಿತು.

39

ಜನರೊಡನೆ ಕೇಳಲಾಯಿತು; ‘ನೀವು ಒಟ್ಟು ಸೇರುತ್ತೀರಲ್ಲವೇ?

40

ಮಾಂತ್ರಿಕರು ವಿಜಯಿಗಳಾದರೆ ನಮಗೆ ಅವರ ನ್ನೇ ಹಿಂಬಾಲಿಸಬಹುದಲ್ಲ?’

41

ಮಾಂತ್ರಿಕರು ಬಂದಾಗ ಅವರು ಫಿರ್‍ಔನನೊಡನೆ, ‘ನಾವು ವಿಜಯಿಗಳಾದರೆ ನಮಗೆ ಪ್ರತಿಫಲ ವಿದೆಯೇ?’ ಎಂದು ಕೇಳಿದರು.

42

ಅದಕ್ಕೆ ಅವನು, ‘ಹೌದು, ಮಾತ್ರವಲ್ಲ, ಆಗ ನೀವು ನಮ್ಮ ಆಪ್ತರಲ್ಲಿ ಸೇರಿ ಬಿಡುವಿರಿ’ ಎಂದನು.

43

ಆಗ ಮೂಸಾ ಅವರೊಡನೆ, ‘ನೀವು ಎಸೆಯ ಬೇಕಾದುದನ್ನು ಎಸೆಯಿರಿ’ ಎಂದರು

44

ಕೂಡಲೇ ಅವರು ತಮ್ಮ ಹಗ್ಗಗಳನ್ನೂ, ದಂಡ ಗಳನ್ನೂ ಕೆಳಗೆ ಎಸೆದರು ಮತ್ತು ‘ಫಿರ್‍ಔನನ ಪ್ರತಾಪದ ಆಣೆ, ನಾವೇ ವಿಜೇತರು’ ಎಂದು ಘೋಷಿಸಿದರು.

45

ಆಮೇಲೆ ಮೂಸಾ ತಮ್ಮ ದಂಡವನ್ನು ಎಸೆದರು. ತಕ್ಷಣ ಅದು ಅವರು ಕಣ್ಣು ಕಟ್ಟಿ ಕಾಣಿಸಿದ್ದನ್ನು ನುಂಗುತ್ತಾ ಸಾಗಿತು.

46

ಕೂಡಲೇ ಎಲ್ಲ ಮಾಂತ್ರಿಕರು ತಾವಾಗಿಯೇ ಸಾಷ್ಟಾಂಗವೆರಗುತ್ತ ನೆಲಕ್ಕೆ ಬಿದ್ದರು.

47

ಮತ್ತು ಹೀಗೆ ಹೇಳಿದರು ‘ಸರ್ವಲೋಕಗಳ ಪಾಲಕ ಪ್ರಭುವಿನಲ್ಲಿ- ನಾವಿದೋ ವಿಶ್ವಾಸವಿರಿಸಿದ್ದೇವೆ.

48

ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ’ .

49

ಆಗ ಫಿರ್‍ಔನನು, ‘ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆ ನೀವು ಮೂಸಾನನ್ನು ನಂಬಿದಿರಾ? ಖಂಡಿತ ಇವನು ನಿಮಗೆ ವಾಮಾ ಚಾರವನ್ನು ಕಲಿಸಿದ ನಿಮ್ಮ ಗುರುವಾಗಿದ್ದಾನೆ. ಆದ್ದರಿಂದ ನಿಮಗೆ ಇದರ ಫಲ ಈಗಲೇ ತಿಳಿಯಲಿದೆ. ನಾನು ನಿಮ್ಮ ಕೈಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಸುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆ ಗೇರಿಸುವೆನು’ ಎಂದನು.

50

ಅವರು ಹೇಳಿದರು ‘ಪರವಾಗಿಲ್ಲ, ನಾವು ನಮ್ಮ ಪ್ರಭುವಿನ ಸನ್ನಿಧಿಗೆ ಮರಳಿ ಹೋಗುವ ವರಾಗಿರುತ್ತೇವೆ.

51

ನಾವೀಗ ಪ್ರಥಮ ವಿಶ್ವಾಸಿಗಳಾಗುವ ಮೂಲಕ ನಮ್ಮ ಪ್ರಭು ಪಾಪಗಳನ್ನು ಕ್ಷಮಿಸಿ ಬಿಡುವ ನೆಂದು ನಾವು ಆಶಿಸಿದ್ದೇವೆ.

52

ನನ್ನ ದಾಸರನ್ನು ರಾತೋರಾತ್ರಿ ಕರಕೊಂಡು ಹೋಗಿರಿ. ನಿಮ್ಮನ್ನು (ಫಿರ್‍ಔನ್ ಹಾಗೂ ಸಂಘವು) ಬೆನ್ನಟ್ಟಲಿದ್ದಾರೆ ಎಂದು ನಾವು ಮೂಸಾ ರಿಗೆ ಸಂದೇಶ ಕಳುಹಿಸಿದೆವು.

53

ಆಗ ಅವರು ಹೋದ ವಿವರವನ್ನು ತಿಳಿದು ಫಿರ್ ಔನನು ಸೇನೆಗಳನ್ನು ಸಜ್ಜುಗೊಳಿಸುವ ರಾಜ ಘೋಷಕರನ್ನು ನಗರಗಳಿಗೆ ಹೀಗೆ ಹೇಳಿ ಕಳುಹಿಸಿದನು.

54

`ಇವರು (ಇಸ್ರಾಈಲರು) ಕೇವಲ ಬೆರಳೆಣಿಕೆಯ ಜನರು.

55

ಮತ್ತು ನಮ್ಮನ್ನು ಬಹಳ ರೇಗಿಸಿದವರು.

56

ನಾವು ಸುಸಜ್ಜಿತ ಸಮೂಹವಾಗಿದ್ದೇವೆ’ .

57

ಹೀಗೆ ನಾವು ಅವರನ್ನು ಅವರ ಉದ್ಯಾನಗಳಿಂ ದಲೂ ಚಿಲುಮೆಗಳಿಂದಲೂ

58

ಖಜಾನೆಗಳಿಂದಲೂ ಗೌರವದ ನಿವಾಸಗಳಿಂ ದಲೂ ಹೊರ ಹಾಕಿದೆವು.

59

ಹಾಗಿದೆ ನಮ್ಮ ಪ್ರವೃತಿ. ಆಮೇಲೆ ಇಸ್‍ರಾಈಲ ಜನಾಂಗಕ್ಕೆ ಅವುಗಳನ್ನು ನಾವು ಉತ್ತರಾಧಿಕಾರ ಹಕ್ಕನ್ನಾಗಿ ಮಾಡಿದೆವು.

60

ಫಿರ್‍ಔನ್ ಹಾಗೂ ಸೇನೆಯು ಸೂರ್ಯೋದಯ ಸಮಯದಲ್ಲಿ ಇಸ್ರಾಈಲರ ಬಳಿಗೆ ತಲುಪಿದರು.

61

ಹಾಗೆ ಎರಡು ಗುಂಪು ಪರಸ್ಪರ ಕಂಡಾಗ ಮೂಸಾರ ಸಂಗಾತಿಗಳು `ನಾವು ಹಿಡಿಯಲ್ಪಡುತ್ತೇವೆ’ ಎಂದರು.

62

ಆಗ ಮೂಸಾ, ‘ಖಂಡಿತ ಇಲ್ಲ. ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರುವನು’ ಎಂದರು .

63

ನಾವು ಮೂಸಾರಿಗೆ ಹೀಗೆ ಸಂದೇಶವಿತ್ತೆವು; `ನಿಮ್ಮ ದಂಡವನ್ನು ಸಮುದ್ರಕ್ಕೆ ಹೊಡೆಯಿರಿ’ (ಅವರು ಹೊಡೆದರು). ತಕ್ಷಣ ಸಮುದ್ರ ಸೀಳಿತು. ಅದರ ಪ್ರತಿಯೊಂದು ಸೀಳು ದೊಡ್ಡ ಬೆಟ್ಟದಂತೆ ಆಯಿತು.

64

ಇತರರನ್ನು ನಾವು ಅಲ್ಲಿಗೆ ಹತ್ತಿರಗೊಳಿಸಿದೆವು.

65

ಮೂಸಾ ಮತ್ತು ಅವರ ಜೊತೆಗಿದ್ದವರೆಲ್ಲರನ್ನೂ ನಾವು ರಕ್ಷಿಸಿದೆವು.

66

ನಂತರ ಇತರರನ್ನು ನಾವು ನೀರಿನಲ್ಲಿ ಮುಳುಗಿಸಿ ನಾಶ ಮಾಡಿದೆವು.

67

ಈ ಘಟನೆಯಲ್ಲಿ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

68

ನಿಮ್ಮ ಪ್ರಭು ಖಂಡಿತ ಮಹಾಪ್ರಬಲನೂ ದಯಾನಿಧಿಯೂ ಆಗಿರುತ್ತಾನೆ.

69

ಇಬ್‍ರಾಹೀಮರ ವೃತ್ತಾಂತವನ್ನು ಇವರಿಗೆ ತಾವು ಓದಿ ಕೇಳಿಸಿರಿ.

70

ಅವರು ತಮ್ಮ ತಂದೆ ಮತ್ತು ಜನಾಂಗದೊಡನೆ ‘ನೀವು ಏನನ್ನು ಪೂಜಿಸುತ್ತಿರುವಿರಿ’ ಎಂದು ಕೇಳಿದಾಗ

71

ಅವರು, ‘ನಾವು ಕೆಲವು ವಿಗ್ರಹಗಳನ್ನು ಪೂಜಿಸುತ್ತೇವೆ ಮತ್ತು ಇವುಗಳ ಮುಂದೆ ಸದಾ ಜಪ ಕೂರುತ್ತೇವೆ’ ಎಂದರು.

72

ಆಗ ಇವರು ಕೇಳಿದರು `ನೀವು ಕರೆಯುವಾಗ ಇವು ನಿಮ್ಮನ್ನಾಲಿಸಿ ಕೇಳುತ್ತವೆಯೇನು?

73

ಅಥವಾ ಇವು ನಿಮಗೆ ಉಪಕಾರ ಮಾಡುವುದೇ? ಅಥವಾ ಉಪದ್ರವಿಸುವುದೇ?

74

ಅದಕ್ಕೆ ಅವರು, “ಇಲ್ಲ, ಆದರೆ ನಮ್ಮ ಪಿತಾಮ ಹರು ಹೀಗೆಯೇ ಮಾಡುತ್ತಿರುವುದನ್ನು ನಾವು ಕಂಡಿದ್ದೇವೆ ಅಷ್ಟೆ. (ಅವರನ್ನು ನಾವು ಅನುಸರಿಸಿದ್ದೇವೆ)” ಎಂದರು.

75

ಆಗ ಇಬ್ರಾಹೀಮರು ಹೇಳಿದರು, `ನೀವು ಏನನ್ನು ಆರಾಧಿಸುತ್ತಿದ್ದರೆಂದು ನೀವು ಯೋಚಿಸಿದ್ದೀರಾ?

76

ನೀವು ಮತ್ತು ನಿಮ್ಮ ಪೂರ್ವ ಪಿತಾಮಹರು.

77

ಅವರು ನನ್ನ ಶತ್ರುಗಳು, ಸರ್ವಲೋಕಗಳ ಪಾಲಕ ಪ್ರಭುವನ್ನೇ ಹೊರತು. (ನಾನು ಆರಾಧಿಸಲಾರೆ).

78

ನನ್ನನ್ನು ಸೃಷ್ಟಿಸಿದವನು. ಅವನೇ ನನ್ನನ್ನು ಸತ್ಪಥಕ್ಕೆ ಸೇರಿಸುವನು.

79

ನನಗೆ ಉಣಿಸುವವನೂ ಕುಡಿಸುವವನೂ ಅವನೇ.

80

ನಾನು ಕಾಯಿಲೆ ಬಿದ್ದಾಗ ವಾಸಿ ಮಾಡುವವನೂ ಅವನೇ.

81

ನನ್ನನ್ನು ಸಾಯಿಸುವವನೂ, ಬದುಕಿಸುವವನೂ ಅವನೇ.

82

ಪ್ರತಿಫಲ ನೀಡಲಾಗುವ ದಿನ ಅವನು ನನ್ನ ಪಾಪ ಗಳನ್ನು ಕ್ಷಮಿಸುವನೆಂದೂ ನಾನು ಆಶಿಸುತ್ತೇನೆ.

83

ಓ ನನ್ನ ಪ್ರಭೂ, ನನಗೆ ಸುಜ್ಞಾನ ನೀಡು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು.

84

ಮುಂದಿನ ಪೀಳಿಗೆಗಳಲ್ಲಿ ನನಗೆ ಸತ್ಕೀರ್ತಿಯನ್ನು ದಯಪಾಲಿಸು .

85

ಅನುಗ್ರಹೀತ ಸ್ವರ್ಗದ ಉತ್ತರಾಧಿಕಾರಿಗಳಲ್ಲಿ ನನ್ನನ್ನು ಸೇರಿಸು.

86

ನನ್ನ ತಂದೆಗೆ ಕ್ಷಮೆ ನೀಡು, ನಿಜಕ್ಕೂ ಅವರು ಪಥಭ್ರಷ್ಟರಲ್ಲಿ ಸೇರಿ ಹೋಗಿದ್ದಾರೆ .

87

ಜನರನ್ನು ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನ ನನ್ನನ್ನು ಅವಮಾನಿಸದಿರು.

88

ಸೊತ್ತಾಗಲಿ ಸಂತತಿಗಳಾಗಲಿ ಯಾವುದೇ ಪ್ರಯೋಜನಕ್ಕೆ ಬಾರದ ದಿನ.

89

ಸುರಕ್ಷಿತ ಹೃದಯದೊಂದಿಗೆ ಅಲ್ಲಾಹನ ಸನ್ನಿಧಿಗೆ ಬಂದವನ ಹೊರತು.

90

ಸ್ವರ್ಗವನ್ನು ಧರ್ಮನಿಷ್ಟರಿಗೆ ನಿಕಟ ಗೊಳಿಸಲಾಗಿದೆ.

91

ನರಕವನ್ನು ಪಥಭ್ರಷ್ಟರಿಗೆ ಪ್ರದರ್ಶಿಸಲಾಗಿದೆ.

92

ನೀವು ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿದ್ದ ವಸ್ತುಗಳೆಲ್ಲಿ? ಎಂದು ಅವರನ್ನು ಕೇಳಲಾಗುವುದು.

93

ಅಲ್ಲಾಹನನ್ನು ಬಿಟ್ಟು ಅವರು ನಿಮಗೆ ಸಹಾಯ ಮಾಡುವರೇ? ಅಥವಾ ಅವರೇ ಸಹಾಯವನ್ನು ಬೇಡುತ್ತಿರುವರೇ?

94

ನಂತರ ಆ ಆರಾಧ್ಯ ವಸ್ತುಗಳೂ ಅವುಗಳನ್ನು ಆರಾಧಿಸಿದ ಪಥಭ್ರಷ್ಟ ಜನರನ್ನೂ ನರಕದಲ್ಲಿ ಅಧೋ ಮುಖರಾಗಿ ತಳ್ಳಲ್ಪಡಲಾಗುವುದು.

95

ಇಬ್‍ಲೀಸನ ಸೇನೆಯೂ ಎಲ್ಲರೂ.

96

ಅಲ್ಲಿ ಪರಸ್ಪರ ಜಗಳಾಡುತ್ತ ಅವರು ತಮ್ಮ ಆರಾಧ್ಯರೊಡನೆ ಹೀಗೆ ಹೇಳುವರು.

97

“ಅಲ್ಲಾಹನಾಣೆ! ನಾವು ಪ್ರತ್ಯಕ್ಷವಾದ ದುರ್ಮಾರ್ಗದಲ್ಲಿದ್ದೆವು.

98

ಸರ್ವಲೋಕಗಳ ಪಾಲಕ ಪ್ರಭುವಿಗೆ ನಿಮ್ಮನ್ನು ನಾವು ಸಮಾನಗೊಳಿಸಿದಾಗ.

99

ಅಪರಾಧಿಗಳೇ ಹೊರತು ನಮ್ಮನ್ನು ದಾರಿ ತಪ್ಪಿಸಿಲ್ಲ.

100

ಹೀಗಾಗಿ ನಮಗೆ ಯಾರೂ ಶಿಫಾರಸ್ಸುದಾರರಿಲ್ಲ.

101

ಅನುಕಂಪವಿರುವ ಆಪ್ತ ಸ್ನೇಹಿತನೂ ಇಲ್ಲ.

102

ಇನ್ನು (ಭೂಲೋಕಕ್ಕೆ) ಮರಳುವ ಒಂದವಕಾಶ ನಮಗಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರುತ್ತಿದ್ದೆವು.

103

ಇದರಲ್ಲಿ ಖಂಡಿತ ದೃಷ್ಟಾಂತವಿದೆ. ಆದರೆ ಇವರಲ್ಲಿ ಹೆಚ್ಚಿನವರು ವಿಶ್ವಾಸವಿಡುವವರಲ್ಲ.

104

ನಿಜಕ್ಕೂ ನಿಮ್ಮ ಪ್ರಭು ಮಹಾ ಪ್ರಬಲನೂ ದಯಾನಿಧಿಯೂ ಆಗಿರುತ್ತಾನೆ.

105

ನೂಹರ ಜನಾಂಗವು ದೇವದೂತರನ್ನು ಸುಳ್ಳಾಗಿಸಿತು.

106

ಅವರ ಸಹೋದರ ನೂಹರು, ಅವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯ ಪಡುವುದಿಲ್ಲವೇ?

107

ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ದೇವ ದೂತನಾಗಿದ್ದೇನೆ.

108

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

109

ಇದಕ್ಕಾಗಿ ನಾನು ಯಾವ ಪ್ರತಿಫಲವನ್ನೂ ನಿಮ್ಮಲ್ಲಿ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ.

110

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

111

ಅವರು ಹೇಳಿದರು, ‘ನಿನ್ನನ್ನು ಅನುಸರಿಸಿದ್ದು ಅತ್ಯಂತ ಕೀಳು ಜನರಾಗಿರುವಾಗ ನಾವು ನಿನ್ನನ್ನು ನಂಬುವುದೇ?’

112

ನೂಹರು ಹೇಳಿದರು, `ಅವರೆಸಗುತ್ತಿದ್ದ ಕರ್ಮಗಳ ಬಗ್ಗೆ ನನ್ನ ಅರಿವೇನು?

113

ಅವರ ವಿಚಾರಣೆ ಕೇವಲ ನನ್ನ ಪ್ರಭುವಿನ ಮೇಲಿದೆ. ನೀವು ಕಾರ್ಯ ಪ್ರಜ್ಞೆಯುಳ್ಳವರಾಗಿದ್ದರೆ !

114

ಸತ್ಯವಿಶ್ವಾಸ ಸ್ವೀಕರಿಸಿದವರನ್ನು ನಾನು ಅಟ್ಟಿ ಓಡಿಸುವವನಲ್ಲ.

115

ನಾನೊಬ್ಬ ಸುಸ್ಪಷ್ಟ ಎಚ್ಚರಿಕೆ ಕೊಡುವವನು ಮಾತ್ರ’

116

ಆಗ ಅವರು, ‘ನೀನು ಇದನ್ನು ತೊರೆಯದಿದ್ದರೆ ಓ ನೂಹ್, ಖಂಡಿತ ಕಲ್ಲೆಸೆದು ಕೊಲ್ಲಲ್ಪಡುವವರಲ್ಲಿ ನೀನು ಸೇರುವೆ’ ಎಂದರು.

117

ನೂಹರು ಪ್ರಾರ್ಥಿಸಿದರು `ನನ್ನ ಪ್ರಭೂ, ನನ್ನ ಜನಾಂಗವು ನನ್ನನ್ನು ಸುಳ್ಳಾಗಿಸಿದೆ.

118

ಇನ್ನು ನನ್ನ ಮತ್ತು ಅವರ ನಡುವೆ ಒಂದು ಪರಿಹಾರವನ್ನು ನೀಡು. ನನ್ನನ್ನೂ ನನ್ನೊಂದಿಗಿರುವ ಸತ್ಯವಿಶ್ವಾಸಿಗಳನ್ನೂ ರಕ್ಷಿಸು’.

119

ಕೊನೆಗೆ ನಾವು ಅವರನ್ನೂ ಅವರ ಜೊತೆಗಾರರನ್ನೂ ಒಂದು ತುಂಬಿದ ನಾವೆಯಲ್ಲಿ ರಕ್ಷಿಸಿದೆವು.

120

ಅವರನ್ನು ರಕ್ಷಿಸಿದ ನಂತರ ಉಳಿದವರನ್ನು ನೀರಿನಲ್ಲಿ ಮುಳುಗಿಸಿ ನಾಶ ಮಾಡಿದೆವು.

121

ಇದರಲ್ಲಿ ಖಂಡಿತ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

122

ಖಂಡಿತ ನಿಮ್ಮ ಪ್ರಭು ಮಹಾಪ್ರಬಲನೂ ವಿಶಿಷ್ಟ ಕೃಪಾ ನಿಧಿಯೂ ಆಗಿರುತ್ತಾನೆ.

123

ಆದ್ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು.

124

ಅವರ ಸಹೋದರ ಹೂದರು ಅವರಿಗೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ: ‘ಅಲ್ಲಾಹನನ್ನು ನೀವು ಭಯ ಪಡುವುದಿಲ್ಲವೇ?

125

ಖಂಡಿತ ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾ ಣಿಕ ದೇವದೂತನಾಗಿರುತ್ತೇನೆ.

126

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

127

ಇದಕ್ಕಾಗಿ ನಾನು ಯಾವ ಪ್ರತಿಫಲವನ್ನೂ ನಿಮ್ಮಲ್ಲಿ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ.

128

ನೀವು ಸುಮ್ಮಸುಮ್ಮನೆ ಪ್ರತಿಯೊಂದು ಏರು ಜಾಗಗಳಲ್ಲಿ ಸ್ಮಾರಕ ಕಟ್ಟಡವನ್ನು ಕಟ್ಟುತ್ತೀರಲ್ಲವೇ?

129

ನೀವು ಶಾಶ್ವತರಾಗಿ ಬದುಕುಳಿಯುತ್ತೀರೇನೋ ಎಂಬಂತೆ ಕೋಟೆ ಕೊತ್ತಳಗಳನ್ನು ನಿರ್ಮಿಸುತ್ತೀರಿ.

130

ನೀವು ಯಾರನ್ನಾದರೂ ಶಿಕ್ಷಿಸುವಾಗ ನಿಷ್ಟುರವಾಗಿ ಶಿಕ್ಷಿಸುತ್ತೀರಿ .

131

ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

132

ನಿಮಗೆ ತಿಳಿದಿರುವ ಅನುಗ್ರಹಗಳ ಮೂಲಕ ನಿಮಗೆ ಸಹಾಯ ಮಾಡಿದ ಅಲ್ಲಾಹನನ್ನು ಭಯಪಡಿರಿ.

133

ಅವನು ನಿಮಗೆ ಪ್ರಾಣಿಗಳನ್ನೂ, ಸಂತತಿಯನ್ನೂ ಕೊಟ್ಟು ಸಹಾಯ ಮಾಡಿದನು.

134

ತೋಟಗಳನ್ನೂ ಚಿಲುಮೆಗಳನ್ನೂ ಕೊಟ್ಟೂ.

135

ನಿಮ್ಮ ಮೇಲೆ ಒಂದು ಮಹಾದಿನದ ಯಾತನೆಯನ್ನು ನಾನು ಭಯಪಡುತ್ತೇನೆ.

136

ಆಗ ಅವರು ಹೇಳಿದರು; “ನೀನು ಉಪದೇಶ ಮಾಡಿದರೂ ಮಾಡದಿದ್ದರೂ ನಮ್ಮ ಮಟ್ಟಿಗೆ ಸಮಾನ.

137

ಇದು ಕೇವಲ ಹಿಂದಿನವರ ರೂಢಿ ಸಂಪ್ರದಾಯ ಮಾತ್ರ.

138

ನಾವು (ಮರಣಾನಂತರ) ಶಿಕ್ಷೆಗೊಳಗಾಗು ವವರಲ್ಲ”.

139

ಹೀಗೆ ಅವರು ಹೂದರನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ನಾಶಗೊಳಿಸಿದೆವು. ಖಂಡಿತ ಇದರಲ್ಲಿ ದೊಡ್ಡ ನಿದರ್ಶನವಿದೆ. ಆದರೆ, ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

140

ಖಂಡಿತ, ನಿಮ್ಮ ಪ್ರಭು ಮಹಾ ಪ್ರಬಲನೂ ದಯಾಮಯನೂ ಆಗಿರುತ್ತಾನೆ.

141

ಸಮೂದ್ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು.

142

ಅವರ ಸಹೋದರ ಸಾಲಿಹರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

143

ಖಂಡಿತ ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ದೇವದೂತನಾಗಿರುತ್ತೇನೆ.

144

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

145

ಇದಕ್ಕಾಗಿ ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನ ಮೇಲೆ ಇದೆ.

146

ನೀವು ಇಲ್ಲಿರುವ ಭೌತಿಕ ಸುಖಗಳಲ್ಲಿ ನಿಶ್ಚಿಂತರಾಗಿ ಮೈಮರೆತ ಸ್ಥಿತಿಯಲ್ಲಿ ನಿಮ್ಮನ್ನು ತೊರೆ ದು ಬಿಡಲಾಗುವುದೇ?

147

ಅಂದರೆ ಉದ್ಯಾನಗಳಲ್ಲೂ ಕಾಲುವೆಗಳಲ್ಲೂ.

148

ಹೊಲಗಳಲ್ಲೂ ಹಣ್ಣುಗಳ ಭಾರದಿಂದ ಗೊನೆ ಇಳಿದು ನಿಂತ ಖರ್ಜೂರದ ತೋಟಗಳಲ್ಲೂ ?

149

ನೀವು ಅಮಿತ ಆಹ್ಲಾದ ಭರಿತರಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ.

150

ಆದ್ದರಿಂದ ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

151

ಅತಿಕ್ರಮಿಗಳ ಆದೇಶವನ್ನು ನೀವು ಪಾಲಿಸಬೇಡಿರಿ.

152

ಭೂಮಿಯಲ್ಲಿ ಗೊಂದಲವನ್ನುಂಟು ಮಾಡುವ ಮತ್ತು ಯಾವ ಒಳಿತಿನ ಕಾರ್ಯವನ್ನೂ ಮಾಡದ.

153

ಆಗ ಅವರು ಹೇಳಿದರು, ನೀನು ಕೇವಲ ಒಬ್ಬ ಮಾಟ ಬಾಧಿತ ವ್ಯಕ್ತಿ.

154

ನೀನು ನಮ್ಮಂಥ ಒಬ್ಬ ಮನುಷ್ಯನಲ್ಲದೆ ಅಲ್ಲ. ನೀನು ಸತ್ಯವಾದಿಯಾಗಿದ್ದರೆ ಒಂದು ದೃಷ್ಟಾಂತವನ್ನು ತೆಗೆದುಕೊಂಡು ಬಾ.

155

ಆಗ ಸಾಲಿಹ್ ಹೇಳಿದರು “ಇದೊಂದು ಒಂಟೆ. ಒಂದು ನಿಗದಿತ ದಿನ ನೀರು ಕುಡಿಯುವ ಹಕ್ಕು ಇದಕ್ಕೂ ಇನ್ನೊಂದು ನಿಗದಿತ ದಿನ ನೀರು ಪಡೆಯುವ ಹಕ್ಕು ನಿಮಗೂ ಇದೆ.

156

ಯಾವುದೇ ರೀತಿಯ ಕೆಡುಕಿನಿಂದ ನೀವದನ್ನು ಮುಟ್ಟಬೇಡಿರಿ. ಇಲ್ಲವೇ ಒಂದು ಮಹಾ ದಿನದ ಶಿಕ್ಷೆಯು ನಿಮ್ಮನ್ನು ಬಾಧಿಸುವುದು”.

157

ಆದರೆ ಅವರು ಅದನ್ನು ಕೊಯ್ದು ಬಿಟ್ಟರು. ಕೊನೆಗೆ ಪಶ್ಚಾತ್ತಾಪಪಟ್ಟರು .

158

ಆಗ ಶಿಕ್ಷೆಯು ಅವರನ್ನು ಬಾಧಿಸಿತು. ಖಂಡಿತ ಇದರಲ್ಲಿ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

159

ಖಂಡಿತ ನಿಮ್ಮ ಪ್ರಭು ಪ್ರತಾಪಶಾಲಿಯೂ, ಕೃಪಾನಿಧಿಯೂ ಆಗಿರುತ್ತಾನೆ.

160

ಲೂಥರ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು.

161

ಅವರ ಸಹೋದರ ಲೂಥರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?

162

ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ದೇವದೂತನಾಗಿರುತ್ತೇನೆ.

163

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

164

ಇದಕ್ಕಾಗಿ ನಾನು ಯಾವುದೇ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ.

165

ನೀವು ಜಗತ್ತಿನವರ ಪೈಕಿ (ಕಾಮ ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಾ?

166

ನಿಮ್ಮ ಪ್ರಭು ನಿಮಗಾಗಿ ಸೃಷ್ಟಿಸಿರುವ ಪತ್ನಿ ಯರನ್ನು ತೊರೆದು ಬಿಡುತ್ತೀರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ .

167

ಆಗ ಅವರು, “ಲೂಥ್, ನೀನು ಇದರಿಂದ ವಿರಮಿಸದಿದ್ದರೆ ಹೊರಕ್ಕೆ ಅಟ್ಟಲ್ಪಟ್ಟವರ ಸಾಲಿಗೆ ನೀನೂ ಸೇರುವೆ” ಎಂದರು.

168

ಆಗ ಅವರು ಹೇಳಿದರು, ‘ನಿಮ್ಮ ದುಷ್ಕøತ್ಯಕ್ಕೆ ಮರುಗುವವರಲ್ಲಿ ನಾನು ಸೇರಿದ್ದೇನೆ.

169

ಪ್ರಭೂ, ನನ್ನನ್ನೂ ನನ್ನ ಕುಟುಂಬವನ್ನೂ ಇವರು ಮಾಡುತ್ತಿರುವ ದುಷ್ಕøತ್ಯಗಳಿಂದ ರಕ್ಷಿಸು’.

170

ಆಗ ಅವರನ್ನೂ ಅವರ ಎಲ್ಲ ಕುಟುಂಬದವರನ್ನೂ ನಾವು ರಕ್ಷಿಸಿದೆವು.

171

ಕೊನೆಗೆ ಹಿಂದೆ ಉಳಿದವರಲ್ಲಾಗಿದ್ದ ಓರ್ವ ವೃದ್ಧೆಯ ಹೊರತು.

172

ಅನಂತರ ಉಳಿದವರನ್ನು ಸಮೂಲ ನಾಶ ಮಾಡಿದೆವು.

173

ಅವರ ಮೇಲೆ ಒಂದು ವಿಶೇಷ ಮಳೆಯನ್ನು ಮಳೆಗೆರೆದೆವು. ಎಚ್ಚರಿಕೆ ಕೊಡಲ್ಪಟ್ಟವರ ಅತ್ಯಂತ ಕೆಟ್ಟ ಮಳೆ.

174

ಇದರಲ್ಲಿ ಖಂಡಿತ ನಿದರ್ಶನವಿದೆ . ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

175

ನಿಮ್ಮ ಪ್ರಭು ಮಹಾಪ್ರತಾಪಶಾಲಿಯೂ, ದಯಾನಿಧಿಯೂ ಆಗಿರುತ್ತಾನೆ.

176

ಐಕಃದವರು ದೇವದೂತರುಗಳನ್ನು ಸುಳ್ಳಾಗಿಸಿದರು.

177

ಶುಐಬರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ, “ನೀವು ಅಲ್ಲಾಹನನ್ನು ಭಯ ಪಡುವುದಿಲ್ಲವೇ?

178

ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ದೇವದೂತನಾಗಿರುತ್ತೇನೆ.

179

ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

180

ಇದಕ್ಕಾಗಿ ನಾನು ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಿನ ಮೇಲೆ ಮಾತ್ರವಿದೆ.

181

ಅಳತೆ ಪಾತ್ರೆಯನ್ನು ಪೂರ್ತಿಯಾಗಿ ತುಂಬಿರಿ ಮತ್ತು ಕಡಿತ ಮಾಡಿಕೊಡುವವರಲ್ಲಿ ನೀವಾ ಗದಿರಿ.

182

ಸರಿಯಾದ ತಕ್ಕಡಿಯಿಂದ ತೂಗಿರಿ.

183

ಜನರಿಗೆ ಅವರ ವಸ್ತುಗಳನ್ನು ನಷ್ಟಗೊಳಿಸಬೇಡಿರಿ ಮತ್ತು ಭೂಮಿಯಲ್ಲಿ ನಾಶವನ್ನು ಹರಡಬೇಡಿರಿ.

184

ನಿಮ್ಮನ್ನೂ ಗತಪೀಳಿಗೆಗಳನ್ನೂ ಸೃಷ್ಟಿಸಿದ ಅಲ್ಲಾಹನನ್ನು ಭಯಪಡಿರಿ”.

185

ಆಗ ಅವರು ಹೇಳಿದರು `ನೀನೊಬ್ಬ ಮಾಟ ಬಾಧಿತನಾಗಿರುವೆ.

186

ನೀನು ಕೇವಲ ನಮ್ಮಂಥ ಓರ್ವ ಮಾನವ. ನಿನ್ನನ್ನು ಬರಿಯ ಸುಳ್ಳುಗಾರನೆಂದು ನಾವು ಭಾವಿಸುತ್ತೇವೆ.

187

ಆದ್ದರಿಂದ ನೀನು ಸತ್ಯವಾದಿಯಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಉದುರಿಸು.

188

ಶುಐಬರು “ನೀವು ಮಾಡುತ್ತಿರುವುದನ್ನು ನನ್ನ ಪ್ರಭು ಚೆನ್ನಾಗಿ ತಿಳಿದಿರುವನು. (ಅವನು ಯುಕ್ತವಾದುದನ್ನು ಮಾಡುವನು). ಎಂದರು.

189

ಅವರು, ಶುಐಬರನ್ನು ಸುಳ್ಳಾಗಿಸಿದರು, ಕೊನೆಗೆ ಮೋಡದ ನೆರಳಿನ ದಿನದ ಶಿಕ್ಷೆ ಅವರ ನ್ನು ಹಿಡಿಯಿತು. ಅದು ನಿಜಕ್ಕೂ ಅತಿ ಭಯಾನಕ ದಿನದ ಶಿಕ್ಷೆಯಾಗಿತ್ತು.

190

ಇದರಲ್ಲಿ ಖಂಡಿತ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.

191

ನಿಮ್ಮ ಪ್ರಭು ಮಹಾ ಪ್ರತಾಪಶಾಲಿಯೂ, ದಯಾನಿಧಿಯೂ ಆಗಿರುತ್ತಾನೆ.

192

ಇದು ಸರ್ವಲೋಕಗಳ ಪಾಲಕನ ಅವತೀರ್ಣವೇ ಹೌದು.

193

ಪ್ರಾಮಾಣಿಕ ಆತ್ಮವು (ದೇವಚರ ಜಿಬ್ರೀಲರು) ಇದರ ಜೊತೆ ಇಳಿದಿದೆ.

194

ನಿಮ್ಮ ಹೃದಯಕ್ಕೆ ಇಳಿದಿದೆ. ಇದು ನೀವು ಎಚ್ಚರಿಕೆ ನೀಡುವವರಲ್ಲಿ ಸೇರಲಿಕ್ಕಾಗಿ.

195

ಸುಸ್ಪಷ್ಟವಾದ ಅರಬೀ ಭಾಷೆಯಲ್ಲಿ .

196

ಅದು ಗತಜನಾಂಗಗಳ ಗ್ರಂಥಗಳಲ್ಲೂ ಇದೆ.

197

ಇಸ್‍ರಾಈಲ ಸಂತತಿಯ ವಿದ್ವಾಂಸರು ಅದನ್ನು ತಿಳಿದಿರುವುದು ಇವರಿಗೆ (ಸತ್ಯನಿಷೇಧಿ ಗಳಿಗೆ) ಒಂದು ನಿದರ್ಶನವಲ್ಲವೇ?

198

ನಾವು ಇದನ್ನು ಓರ್ವ ಅರಬೇತರನ ಮೇಲೆ ಅವತೀರ್ಣಗೊಳಿಸುತ್ತಿದ್ದರೆ,

199

ಆಮೇಲೆ ಅವನು ಇದನ್ನು ಅವರಿಗೆ ಓದಿ ಹೇಳುತ್ತಿದ್ದರೆ ಇವರು ಅದನ್ನು ನಂಬುತ್ತಿರಲಿಲ್ಲ.

200

ಹಾಗೆಯೇ ಅದನ್ನು (ಸತ್ಯನಿಷೇಧವನ್ನು) ಅಪ ರಾಧಿಗಳ ಹೃದಯಗಳಲ್ಲಿ ನಾವು ಹಾಯಿಸಿ ದ್ದೇವೆ.

201

ವೇದನಾತ್ಮಕ ಶಿಕ್ಷೆಯನ್ನು ಕಂಡುಕೊಳ್ಳುವವ ರೆಗೂ ಅವರು ಇದರಲ್ಲಿ (ಖುರ್‍ಆನಿನಲ್ಲಿ) ವಿಶ್ವಾ ಸವಿರಿಸಲಾರರು.

202

ಅವರಿಗೆ ಯಾವುದೇ ಪರಿವೆಯಿಲ್ಲದಂತೆ ಹಠಾ ತ್ತನೆ ಅದು ಅವರ ಮೇಲೆ ಬಂದೆರಗುವುದು.

203

‘ನಮಗೆ (ಸ್ವಲ್ಪ) ಕಾಲಾವಕಾಶ ಸಿಗಬಹುದೇ?’ ಎಂದು ಆಗ ಅವರು ಕೇಳುವರು.

204

ಅಂದರೆ ನಮ್ಮ ಶಿಕ್ಷೆಗಾಗಿ ಅವರು ತವಕಪಡು ತ್ತಿರುವರೇ?

205

ತಾವು ಆಲೋಚಿಸಿ ನೋಡಿದ್ದೀರಾ? ಇವರಿಗೆ ನಾವು ವರ್ಷಗಟ್ಟಲೆ ಸುಖ ಸೌಕರ್ಯವನ್ನು ಕೊಟ್ಟರೆ,

206

ಅನಂತರ ಇವರಿಗೆ ಎಚ್ಚರಿಕೆ ಕೊಡಲಾಗುತ್ತಿ ರುವ ಶಿಕ್ಷೆ ಇವರಿಗೆ ಬಂದು ಬಿಟ್ಟರೆ,

207

ಇವರಿಗೆ ನೀಡಲಾದ ಆ ಸುಖ ಸವಲತ್ತುಗಳು ಅವರಿಗೆ ಯಾವುದೇ ಪ್ರಯೋಜನ ಕೊಡು ತ್ತಿರಲಿಲ್ಲ.

208

ಯಾವ ನಾಡನ್ನೂ ನಾವು ನಾಶ ಮಾಡಿಲ್ಲ; ಅದಕ್ಕೆ ತಾಕೀತುಗಾರರಿಲ್ಲದೆ.

209

ನೆನಪಿಸಲಿಕ್ಕಾಗಿ ಅದು. ನಾವು ಅಕ್ರಮಿಗಳಾಗಿರಲಿಲ್ಲ.

210

ಇದನ್ನು (ಖುರ್‍ಆನ್ ಗ್ರಂಥವನ್ನು) ಶೈತಾನರು ತಂದಿಳಿಸಲಿಲ್ಲ.

211

ಅದು ಅವರಿಗೆ ಉಚಿತವೂ ಅಲ್ಲ. ಅದಕ್ಕೆ ಅವರು ಸಮರ್ಥರೂ ಅಲ್ಲ.

212

ಖಂಡಿತ ಅವರು (ದಿವ್ಯ ಸಂದೇಶವನ್ನು) ಆಲಿಸುವುದರಿಂದ ದೂರವಿರಿಸಲ್ಪಟ್ಟವರು.

213

ಆದುದರಿಂದ (ಸಂದೇಶವಾಹಕರೇ,) ಅಲ್ಲಾಹನೊಂದಿಗೆ ಬೇರೆ ಆರಾಧ್ಯನನ್ನು ಆರಾಧಿಸ ಬೇಡಿರಿ. ಅನ್ಯಥಾ ನೀವು ಶಿಕ್ಷಿಸಲ್ಪಡುವವರ ಸಾಲಿಗೆ ಸೇರುವಿರಿ.

214

ನಿಮ್ಮ ಅತ್ಯಂತ ನಿಕಟ ಸಂಬಂಧಿಕರಿಗೆ ಎಚ್ಚರಿಕೆ ನೀಡಿರಿ.

215

ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗೆ ನಿಮ್ಮ (ವಿನಯದ) ರೆಕ್ಕೆಯನ್ನು ತಗ್ಗಿಸಿರಿ.

216

ಇನ್ನು ಅವರು ನಿಮಗೆ ಎದುರಾದರೆ, ನೀವು ಮಾಡುವ ಕಾರ್ಯಗಳಿಂದ ನಾನು ಮುಕ್ತನು ಎಂದು ಹೇಳಿರಿ.

217

ಪ್ರತಾಪಿಯೂ, ಕರುಣಾನಿಧಿಯೂ ಆಗಿರುವ ಅಲ್ಲಾಹನ ಮೇಲೆ ಭರವಸೆ ತಾಳಿರಿ.

218

ನೀವು (ನಮಾಝ್‍ಗೆ) ನಿಂತಾಗ ನಿಮ್ಮನ್ನು ನೋಡಬಲ್ಲವನು ಅವನು.

219

ಸಾಷ್ಟಾಂಗವೆರಗುವವರ ಮಧ್ಯೆ ನಿಮ್ಮ ಚಲನ ವಲನವನ್ನು (ನೋಡಬಲ್ಲವನು).

220

ನಿಜಕ್ಕೂ ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

221

ಜನರೇ, ಶೈತಾನರು ಯಾರ ಮೇಲೆ ಇಳಿಯು ತ್ತಾರೆಂದು ನಾನು ನಿಮಗೆ ತಿಳಿಸಿಕೊಡಲೇ?

222

ಧಾರಾಳ ಸುಳ್ಳು ಹೇಳುವ ಹಾಗೂ ಸಾಕಷ್ಟು ಪಾಪ ಮಾಡುತ್ತಿರುವ ಎಲ್ಲ ಜನರ ಮೇಲೆ ಅವರು (ಶೈತಾನರು) ಇಳಿಯುತ್ತಾರೆ.

223

ಅವರು ಕಿವಿ ಕೊಟ್ಟು ಕೇಳುತ್ತಾರೆ. ಅವರಲ್ಲಿ ಹೆಚ್ಚಿನವರು ಸುಳ್ಳುಗಾರರು.

224

ಕವಿಗಳನ್ನು ದಾರಿಗೆಟ್ಟವರು ಹಿಂಬಾಲಿಸುತ್ತಾರೆ.

225

ಅವರು ಎಲ್ಲ ತಪ್ಪಲಲ್ಲೂ ಅಲೆದಾಡುವುದನ್ನು ನೀವು ಕಾಣುತ್ತಿಲ್ಲವೇ?

226

ಅವರು ತಾವು ಮಾಡದ್ದನ್ನು ಆಡುತ್ತಾರೆ ಎಂಬುದನ್ನೂ ,

227

ಸತ್ಯವಿಶ್ವಾಸವನ್ನು ಸ್ವೀಕರಿಸಿದ, ಸತ್ಕರ್ಮಗಳನ್ನು ಮಾಡಿದ, ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿದ ಮತ್ತು ತಾವು ಅಕ್ರಮಕ್ಕೊಳಗಾದ ನಂತರ ಆತ್ಮ ರಕ್ಷಣೆಗೆ ಕ್ರಮ ಕೈಗೊಳ್ಳುವವರು ಇದಕ್ಕೆ ಹೊರತಾಗಿದ್ದಾರೆ. ಅಕ್ರಮವೆಸಗಿದವರು, ಅವರು ಯಾವ ಕಡೆಗೆ ತಿರುಗಿ ಹೋಗಲಿದ್ದಾ ರೆಂದು ಸದ್ಯದಲ್ಲೇ ತಿಳಿಯುವರು.