ತ್ವಾ ಸೀನ್. ಇವು ಖುರ್‍ಆನ್ ಮತ್ತು ಸುವ್ಯಕ್ತ ಗ್ರಂಥದ ಸೂಕ್ತಗಳು .
ಇದು ನಮಾಝನ್ನು ಸಂಸ್ಥಾಪಿಸುವ ಹಾಗೂ ಝಕಾತ್ ಕೊಡುವ ಮತ್ತು ಪರಲೋಕದಲ್ಲಿ ದೃಢವಾಗಿ ವಿಶ್ವಾಸವನ್ನಿರಿಸಿದ ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶನ ಹಾಗೂ ಸುವಾರ್ತೆಯಾಗಿದೆ.
ಪರಲೋಕದ ಮೇಲೆ ವಿಶ್ವಾಸವಿಲ್ಲದವರಿಗೆ ಅವರ ಕರ್ಮಗಳನ್ನು ನಾವು ಮನೋಹರಗೊಳಿಸಿದ್ದೇವೆ. ಆದುದರಿಂದ ಅವರು ದಾರಿ ತಪ್ಪಿ ಅಲೆದಾಡುತ್ತಾರೆ.
ಅವರೇ ಕಠಿಣ ಶಿಕ್ಷೆಯುಳ್ಳವರು. ಮತ್ತು ಅವರೇ ಪರಲೋಕದಲ್ಲಿ ಅತ್ಯಧಿಕ ನಷ್ಟಕ್ಕೆ ಒಳಗಾಗುವರು.
(ಪೈಗಂಬರರೇ) ನಿಶ್ಚಯವಾಗಿಯೂ ಓರ್ವ ಮಹಾ ತಂತ್ರಶಾಲಿಯೂ ಸರ್ವಜ್ಞನೂ ಆಗಿರುವ ಅಲ್ಲಾಹನ ಕಡೆಯಿಂದ ನಿಮಗೆ ಖುರ್‍ಆನನ್ನು ನೀಡಲಾ ಗುತ್ತಿದೆ.
ಮೂಸಾರು ತಮ್ಮ ಕುಟುಂಬದೊಡನೆ ಹೀಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ‘ನಾನು ಒಂದು ಬೆಂಕಿಯನ್ನು ಕಂಡಿದ್ದೇನೆ. ನಾನು ಅಲ್ಲಿಂದೇನಾದರೂ ಸುದ್ದಿ ತರುತ್ತೇನೆ. ಇಲ್ಲವೇ ಅದರಿಂದ ಒಂದು ಬೆಂಕಿಯ ಕೆಂಡವನ್ನಾದರೂ ಹೆಕ್ಕಿ ತರುತ್ತೇನೆ. ನಿಮಗೆ ಚಳಿ ಕಾಯಿಸಬಹುದು’.
ಅವರು ಅಲ್ಲಿ ತಲಪಿದಾಗ ಹೀಗೆ ಕರೆ ಕೇಳಿಸಿತು. ಬೆಂಕಿಯ ಸ್ಥಾನದಲ್ಲಿರುವವರು ಮತ್ತು ಇದರ ಪರಿಸರದಲ್ಲಿರುವವರು ಅನುಗ್ರಹೀತರು. ಸರ್ವಲೋಕಗಳ ಪಾಲಕ ಪ್ರಭುವಾಗಿರುವ ಅಲ್ಲಾಹನು ಪರಮ ಪಾವನನು.
ಓ ಮೂಸಾ, ಪರಮಯುಕ್ತಿವಂತನೂ ಪ್ರತಾಪಿಯೂ ಆಗಿರುವ ಅಲ್ಲಾಹನೇ ನಾನು.
ನಿಮ್ಮ ದಂಡವನ್ನು ಕೆಳಗೆ ಹಾಕಿರಿ. ಆಗ ದಂಡವು ಸಣ್ಣ ಹಾವಿನಂತೆ ತೆವಳುತ್ತಿರುವುದನ್ನು ಕಂಡಾಗ ಮೂಸಾ ಬೆನ್ನು ತಿರುಗಿಸಿ ಓಟಕಿತ್ತರು. ತಿರುಗಿ ಬರಲೂ ಇಲ್ಲ. ಆಗ ಅಲ್ಲಾಹು ಹೇಳಿದನು, “ಮೂಸಾ, ಹೆದರಬೇಡ! ದೇವದೂತರು ನನ್ನ ಸನ್ನಿಧಿಯಲ್ಲಿ ಹೆದರಬೇಕಿಲ್ಲ’’.
ಆದರೆ ಯಾರಾದರೂ ಅಕ್ರಮವೆಸಗಿ, ನಂತರ ಅವನು ಕೆಡುಕಿನ ಬಳಿಕ ಒಳಿತನ್ನು ಬದಲಿಯಾಗಿ ತಂದರೆ ನಾನು ಮಹಾ ಕ್ಷಮಾಶೀಲನೂ ಪರಮದಯಾಳುವೂ ಆಗಿರುವೆನು.
ನಿಮ್ಮ ಕೈಯನ್ನು ನಿಮ್ಮ ಜೇಬಿನೊಳಕ್ಕೆ ಹಾಕಿರಿ. ಅದು ಬೆಳ್ಳಗೆ ಬೆಳಗುತ್ತ ಹೊರಬರುವುದು. ರೋಗದ ಬಿಳುಪಲ್ಲ. ಫಿರ್‍ಔನ್ ಮತ್ತು ಅವನ ಜನಾಂಗದ ಕಡೆಗಿರುವ ಒಂಭತ್ತು ನಿದರ್ಶನಗಳಲ್ಲಿ ಇವು ಸೇರಿವೆ. ಅವರು ಮಹಾ ದುಷ್ಕರ್ಮಿಗಳಾದ ಜನಾಂಗವಾಗಿರುವರು.
ಹಾಗೆ ಆ ದುಷ್ಕರ್ಮಿಗಳ ಕಡೆಗೆ ನಮ್ಮ ದೃಷ್ಟಾಂತಗಳು ಅತ್ಯಂತ ಪ್ರತ್ಯಕ್ಷವಾದ ನೆಲೆಯಲ್ಲಿ ಬಂದಾಗ ಅವರು ‘ಇದು ಸ್ಪಷ್ಟವಾದ ಜಾಲವಿದ್ಯೆ’ ಎಂದು ಹೇಳಿದರು.
ಅವುಗಳ ಬಗ್ಗೆ ಅವರ ಮನಸ್ಸುಗಳಿಗೆ ದೃಢವಾದ ಪ್ರಜ್ಞೆ ಬಂದಿದ್ದರೂ ಅಕ್ರಮ ಹಾಗೂ ಅಹಂಕಾರದಿಂದ ಅವರದನ್ನು ನಿಷೇಧಿಸಿದರು. ಆಗ ಆ ಗೊಂದಲಕಾರಿಗಳ ಪರಿಣಾಮ ಹೇಗಿತ್ತೆಂದು ನೋಡಿರಿ.
ದಾವೂದ್ ಮತ್ತು ಸುಲೈಮಾನರಿಗೆ ನಾವು ಸುಜ್ಞಾನವನ್ನು ದಯಪಾಲಿಸಿದೆವು. ‘ತನ್ನ ಅನೇಕ ಸತ್ಯವಿಶ್ವಾಸಿ ದಾಸರಿಗಿಂತ ನಮಗೆ ಶ್ರೇಷ್ಟತೆಯನ್ನು ಕರುಣಿಸಿದ ಅಲ್ಲಾಹನಿಗೆ ಸರ್ವಸ್ತುತಿ’ ಎಂದು ಅವರಿಬ್ಬರೂ ಹೇಳಿದರು.
ಸುಲೈಮಾನರು ದಾವೂದರ ಉತ್ತರಾಧಿಕಾರಿ ಯಾದರು. ಅವರು, ‘ಜನರೇ! ಪಕ್ಷಿಗಳ ಭಾಷೆಯನ್ನು ನಮಗೆ ಕಲಿಸಿಕೊಡಲಾಗಿದೆ . (ಅಗತ್ಯ ವಿರುವ) ಎಲ್ಲ ವಸ್ತುಗಳಿಂದ (ಬೇಕಾದುದನ್ನು) ನಮಗೆ ಕೊಡಲಾಗಿದೆ . ನಿಶ್ಚಯವಾಗಿಯೂ ಇದುವೇ ಪ್ರತ್ಯಕ್ಷವಾದ ಅನುಗ್ರಹ’ ಎಂದರು.
ಸುಲೈಮಾನರಿಗಾಗಿ ಜಿನ್ನ್, ಮಾನವ ಮತ್ತು ಪಕ್ಷಿಗಳ ಸೇನೆಗಳನ್ನು ಜಮಾಯಿಸಲಾಗಿತ್ತು. ಅವುಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಲಾಗಿತ್ತು.
ಹಾಗೆ ಅವರು ಇರುವೆಗಳ ಕಣಿವೆಗೆ ತಲುಪಿದಾಗ ಒಂದು ಇರುವೆಯು, ‘ಓ, ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ನುಗ್ಗಿಕೊಳ್ಳಿರಿ. ಸುಲೈಮಾನರೂ ಅವರ ಸೇನೆಗಳೂ ಅರಿಯದೇ ನಿಮ್ಮನ್ನು ತುಳಿದು ಬಿಡದಿರಲಿ’ ಎಂದಿತು.
ಸುಲೈಮಾನರು ಅದರ ಈ ಮಾತಿಗೆ ಮಂದಹಾ ಸದ ನಗು ಬೀರಿದರು, ನಂತರ ಹೀಗೆ ಹೇಳಿದರು; “ನನ್ನ ಪ್ರಭೂ, ನನ್ನ ಮೇಲೂ ನನ್ನ ಮಾತಾಪಿತರ ಮೇಲೂ ನೀನು ಮಾಡಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ತೋರಲಿಕ್ಕೂ ನೀನು ಮೆಚ್ಚು ವಂತಹ ಸತ್ಕರ್ಮವೆಸಗಲಿಕ್ಕೂ ನನಗೆ ಸ್ಪೂರ್ತಿ ನೀಡು, ನಿನ್ನ ಸಜ್ಜನದಾಸರಲ್ಲಿ ನಿನ್ನ ದಯೆಯಿಂದ ನನ್ನನ್ನು ಸೇರಿಸು .
ಒಮ್ಮೆ ಸುಲೈಮಾನರು ಪಕ್ಷಿಗಳ ಪರಿಶೀಲನೆ ನಡೆಸಿದರು. ಆಮೇಲೆ ಹೀಗೆ ಹೇಳಿದರು, ಏನಾಯಿತು? ಮರಕುಟಿಕವನ್ನು ಕಾಣುವುದಿಲ್ಲ ವೇಕೆ? ಅಥವಾ ಅದು ಕಣ್ಮರೆಯಾದವರಲ್ಲಿ ಸೇರಿದೆಯೇ?
ನಾನು ಅದಕ್ಕೆ ಕಠಿಣ ಶಿಕ್ಷೆ ಕೊಡುವೆನು ಇಲ್ಲವೇ ಅದನ್ನು ಕೊಯ್ದು ಬಿಡುವೆನು. ಅನ್ಯಥಾ ಅದು ನನಗೆ ಸ್ಪಷ್ಟವಾದ ಆಧಾರವನ್ನು ಕೊಡಬೇಕಾದೀತು.
ಹಾಗೆ ಅದು ಅಲ್ಲಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಮೇಲೆ ಅದು ಹೇಳಿತು, ‘ತಾವು ಸೂಕ್ಷ್ಮವಾಗಿ ತಿಳಿಯದಿರುವಂತಹ ಒಂದು ವಿಷಯವನ್ನು ನಾನು ಸೂಕ್ಷ್ಮವಾಗಿ ತಿಳಿದುಕೊಂಡಿದ್ದೇನೆ. ನಾನು ಖಾತರಿಯಾದ ಸುದ್ದಿಯೊಂದನ್ನು ‘ಸಬಅ’ದಿಂದ ನಿಮ್ಮಲ್ಲಿಗೆ ತಂದಿರುತ್ತೇನೆ.
ಓರ್ವ ಸ್ತ್ರೀ ಅವರನ್ನು ಆಳುತ್ತಿರುವುದನ್ನು ನಾನು ಕಂಡೆನು. ಅವಳಿಗೆ ಎಲ್ಲ ವಸ್ತುಗಳಿಂದ (ಅಗತ್ಯವಾದುದನ್ನು) ನೀಡಲಾಗಿದೆ. ಆಕೆಗೆ ಒಂದು ದೊಡ್ಡ ಸಿಂಹಾಸನವು ಇದೆ .
ಅವಳೂ ಅವಳ ಜನಾಂಗವೂ ಅಲ್ಲಾಹನ ಬದಲು ಸೂರ್ಯನಿಗೆ ಸಾಷ್ಟಾಂಗವೆರಗುವುದನ್ನು ನಾನು ಕಂಡೆನು. ಶೈತಾನನು ಅವರಿಗೆ ಅವರ ಕರ್ಮ ಗಳನ್ನು ಸೊಗಸಾಗಿ ತೋರಿಸಿದನು. ಹಾಗೆ ಅವರನ್ನು ನೇರ ಮಾರ್ಗದಿಂದ ತಡೆದನು. ಆದುದರಿಂದ ಅವರು ನೇರ ಮಾರ್ಗಕ್ಕೆ ಬರುವುದಿಲ್ಲ.
ಆಕಾಶಗಳಲ್ಲೂ ಭೂಮಿಯಲ್ಲೂ ಅಡಗಿರುವ ವಸ್ತುಗಳನ್ನು ಹೊರತರುವ ಮತ್ತು ನೀವು ಬಚ್ಚಿಡುವುದನ್ನೂ ಬಹಿರಂಗಪಡಿಸುವುದನ್ನೂ ಅರಿಯುವ ಅಲ್ಲಾಹನಿಗೆ ಅವರು ಸಾಷ್ಟಾಂಗ ವೆರಗುವ ಸತ್ಯದ ದಾರಿಗೆ ಅವರು ಬಾರದಿರಲೆಂದು. (ಶೈತಾನನು ಅವರ ಕುಕೃತ್ಯಗಳನ್ನು ಚಂದಗಾಣಿಸಿ ಕೊಟ್ಟಿದ್ದಾನೆ)
ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯನಿಲ್ಲ, ಘನವೆತ್ತ ಅರ್ಶ್‍ನ ಒಡೆಯನು.
ಆಗ ಸುಲೈಮಾನರು ಹೀಗೆ ಹೇಳಿದರು; ‘ನೀನು ನಿಜ ಹೇಳಿದೆಯೋ ಅಥವಾ ಸುಳ್ಳಾಡುವವರಲ್ಲಿ ಸೇರಿರುವೆಯೋ ಎಂದು ನಾವು ನೋಡಲಿದ್ದೇವೆ!
ನನ್ನ ಈ ಪತ್ರವನ್ನು ಕೊಂಡು ಹೋಗು, ಆಮೇಲೆ ಅವರ ಮುಂದೆ ಹಾಕಿ ಬಿಡು. ಅನಂತರ ಅವರಿಂದ ಸರಿದು ನಿಂತು ಅವರು ಅದಕ್ಕೆ ಹೇಗೆ ಪ್ರತಿಕ್ರಯಿಸುತ್ತಾರೆಂದು ನೋಡು’ ಎಂದರು.
ರಾಣಿಯು ಹೀಗೆ ಹೇಳಿದಳು - ‘ಓ, ಆಸ್ಥಾನದ ವರೇ, ನನ್ನ ಕಡೆಗೆ ಒಂದು ಮಹತ್ವಪೂರ್ಣ ಪತ್ರವನ್ನು ಹಾಕಲಾಗಿದೆ.
ಅದು ಸುಲೈಮಾನರ ಕಡೆಯಿಂದ ಬಂದಿದೆ. ಅದು ಹೀಗಿದೆ;’ ಪರಮದಯಾನಿಧಿಯೂ ಕಾರು ಣ್ಯವಂತನೂ ಆದ ಅಲ್ಲಾಹನ ನಾಮದಿಂದ.
ನನ್ನಲ್ಲಿ ನೀವು ಅಹಂಕಾರ ತೋರಬೇಡಿ, ಮತ್ತು ಶರಣಾಗತರಾಗಿ ನನ್ನ ಬಳಿ ಬನ್ನಿರಿ”.
ರಾಣಿಯು, ‘ಪ್ರಮುಖರೇ, ನನ್ನ ಈ ವಿಷಯದ ಬಗ್ಗೆ (ನಾನು ಏನು ಮಾಡಬೇಕೆಂದು) ನನಗೆ ಸಲಹೆ ಕೊಡಿರಿ. ನೀವು ನನ್ನ ಬಳಿ ಹಾಜರಾಗಿ ಸಮಾಲೋಚಿಸದೆ ಯಾವುದೇ ಕಾರ್ಯದಲ್ಲಿ ನಾನು ದೃಢ ನಿರ್ಧಾರ ಕೈಗೊಳ್ಳುವವಳಲ್ಲ ಎಂದು ಹೇಳಿದಳು.
ಆಗ ಅವರು, ಹೇಳಿದರು; “ನಾವು ಬಲಶಾಲಿ ಗಳೂ ರಣಶೂರರೂ ಆಗಿರುತ್ತೇವೆ. ಆಜ್ಞಾಧಿಕಾರ ನಿಮ್ಮ ಕಡೆಯಲ್ಲಿದೆ. ಏನಪ್ಪಣೆ ಕೊಡಬೇಕೆಂದು ನೀವೇ ಯೋಚಿಸಿ ನೋಡಿರಿ’’.
ಆಗ ರಾಣಿ ಹೇಳಿದಳು; ‘ಅರಸರು ಒಂದು ನಾಡಿ ನೊಳಗೆ ಪ್ರವೇಶಿಸಿದರೆ ಅದನ್ನು ಅವರು ಹಾಳು ಗೆಡಹುತ್ತಾರೆ ಮತ್ತು ಅದರಲ್ಲಿರುವ ಮರ್ಯಾ ದಸ್ಥರನ್ನು ಅವಮಾನಗೊಳಿಸುತ್ತಾರೆ. ಇವರು ಕೂಡಾ ಹೀಗೆಯೇ ಮಾಡುತ್ತಾರೆ.
ಆದ್ದರಿಂದ ನಾನು ಅವರಿಗೆ ಒಂದು ಉಡುಗೊರೆಯನ್ನು ಕಳುಹಿಸುತ್ತೇನೆ. ತರುವಾಯ ನನ್ನ ರಾಯಭಾರಿಗಳು ಯಾವ ಉತ್ತರದೊಂದಿಗೆ ಮರಳುತ್ತಾರೆಂದು ನೋಡುತ್ತೇನೆ’.
ರಾಣಿಯ ದೂತನು (ಉಡುಗೊರೆಯೊಂದಿಗೆ) ಸುಲೈಮಾನರ ಬಳಿಗೆ ಬಂದಾಗ ಅವರು ಹೇಳಿದರು; ‘ನೀವು ನನಗೆ ಧನದ ಮೂಲಕ ಸಹಾಯ ಮಾಡುವಿರಾ? ಆದರೆ ನನಗೆ ಅಲ್ಲಾಹು ನೀಡಿರುವುದು ನಿಮಗೆ ಕೊಟ್ಟಿರುವುದಕ್ಕಿಂತ ಉತ್ತಮವಾಗಿದೆ. ನಿಮ್ಮ ಉಡುಗೊರೆಯಿಂದ ನೀವು ಹರ್ಷರಾಗಿದ್ದೀರಿ.
(ರಾಯಭಾರಿಯೇ, ನೀನು ತಂದ ಉಡುಗೊರೆ ಯೊಂದಿಗೆ) ಅವರ ಕಡೆಗೇ ಮರಳಿ ಹೋಗು. ಅವರಿಗೆ ಎದುರಿಸಲಾಗದ ಸೇನೆಯನ್ನು ನಾವು ಅವರ ಬಳಿಗೆ ತರುವೆವು ಮತ್ತು ಅವರು ನಿಂದ್ಯರೂ ಅಪಮಾನಿತರೂ ಆದ ಸ್ಥಿತಿಯಲ್ಲಿ ಅವರನ್ನು ನಾವು ಅಲ್ಲಿಂದ ಹೊರಕ್ಕಟ್ಟುವೆವು’ .
ಅವರು (ಸುಲೈಮಾನರು) ‘ಸರದಾರರೇ, ಅವರು ಶರಣಾಗತರಾಗಿ (ಮುಸ್ಲಿಮರಾಗಿ) ನನ್ನ ಮುಂದೆ ಹಾಜರಾಗುವುದಕ್ಕಿಂತ ಮುಂಚೆಯೇ ಅವಳ ಸಿಂಹಾಸನವನ್ನು ನನ್ನ ಬಳಿಗೆ ತಂದು ಕೊಡಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ ?’ ಎಂದು ಕೇಳಿದರು.
ಜಿನ್ನ್‍ಗಳ ಪೈಕಿ ಓರ್ವ ಮಲ್ಲನು, ‘ತಾವು ತಮ್ಮ (ತೀರ್ಪು ವಿಧಿಸುವ) ಈ ಸ್ಥಾನದಿಂದ ಏಳುವುದಕ್ಕೆ ಮುಂಚೆಯೇ ನಿಮಗೆ ನಾನು ಅದನ್ನು ತಂದು ಕೊಡುವೆನು. ನಾನು ಅದಕ್ಕೆ ಶಕ್ತನೂ ಪ್ರಾಮಾಣಿಕನೂ ಆಗಿದ್ದೇನೆ’ ಎಂದನು.
ಗ್ರಂಥದಿಂದ ಜ್ಞಾನ ಪಡೆದ ವ್ಯಕ್ತಿಯೊಬ್ಬರು, ‘ತಾವು ರೆಪ್ಪೆ ಬಡಿಯುವುದಕ್ಕೆ ಮುಂಚೆ ನಾನು ಅದನ್ನು ತರುತ್ತೇನೆ’ ಎಂದರು. ಆಗಲೇ ಆ ಸಿಂಹಾಸನವು ತನ್ನ ಮುಂದೆ ಇಡಲ್ಪಟ್ಟಿರುವುದನ್ನು ಕಂಡಾಗ, ಸುಲೈಮಾನರು ಹೀಗೆ ಹೇಳಿದರು, “ನಾನು ಕೃತಜ್ಞತೆ ತೋರುವೆನೋ, ಅಥವಾ ಕೃತಘ್ನತೆ ತೋರುವೆನೋ ಎಂದು ನನ್ನನ್ನು ಪರೀಕ್ಷಿಸಲಿಕ್ಕಾಗಿ ಇದು ನನ್ನ ಪ್ರಭುವಿನ ಅನು ಗ್ರಹವಾಗಿರುತ್ತದೆ. ಯಾರು ಕೃತಜ್ಞತೆ ತೋರುತ್ತಾನೆ, ಆತನು ತನಗಾಗಿಯೇ ಕೃತಜ್ಞತೆ ತೋರುತ್ತಾನೆ. ಯಾರು ಕೃತಘ್ನತೆ ತೋರುತ್ತಾರೆ, ನನ್ನ ಪ್ರಭು ನಿರಪೇಕ್ಷನೂ ಉತ್ಕøಷ್ಟನೂ ಆಗಿರುತ್ತಾನೆ”.
ಅವರು (ಸುಲೈಮಾನರು) ‘ನೀವು ಅವಳಿಗೆ ಅವಳ ಸಿಂಹಾಸನವನ್ನು ಗುರುತು ಸಿಗದಂತೆ ರೂಪ ವ್ಯತ್ಯಾಸ ಮಾಡಿರಿ. ಅವಳು ಗುರುತು ಹಿಡಿಯುತ್ತಾಳೋ ಅಥವಾ ಗುರುತು ಹಿಡಿಯದವರ ಸಾಲಿಗೆ ಸೇರುತ್ತಾಳೋ ಎಂದು ನಾವು ನೋಡೋಣ’ ಎಂದರು .
ರಾಣಿಯು ಹಾಜರಾದಾಗ (ಅವಳೊಡನೆ) ‘ನಿನ್ನ ಸಿಂಹಾಸನ ಹೀಗೆಯೇ ಇದೆಯೇ?’ ಎಂದು ಕೇಳಲಾಯಿತು. ಆಗ ಅವಳು ಹೇಳಿದಳು; ಇದು ಅದುವೇ ಎಂಬಂತಿದೆ. (ಆಗ ಸುಲೈಮಾನರು ಹೇಳಿದರು) ‘ಅವಳಿಗೆ ಮೊದಲೇ ನಮಗೆ ಅರಿವು ಸಿಕ್ಕಿದೆ. ಮತ್ತು ನಾವು ಮುಸ್ಲಿಮರಾಗಿದ್ದೇವೆ .
ಅವಳು ಆರಾಧಿಸುತ್ತಿದ್ದ ಅಲ್ಲಾಹೇತರ ಆರಾಧ್ಯ ವಸ್ತುವು ಅವಳನ್ನು ತಡೆದಿರಿಸಿತ್ತು. ನಿಜಕ್ಕೂ ಅವಳು ಸತ್ಯನಿಷೇಧಿ ಜನಾಂಗದವಳಾಗಿದ್ದಳು.
ಅರಮನೆಯೊಳಗೆ ಪ್ರವೇಶಿಸು’ ಎಂದು ಅವ ಳೊಡನೆ ಹೇಳಲಾಯಿತು. ಆಗ ಅವಳು ಅದನ್ನು ಕಂಡಾಗ ಅದೊಂದು ಜಲಾಶಯವೆಂದು ಭಾವಿಸಿ ಇಳಿಯಲಿಕ್ಕಾಗಿ ಕಾಲುಗಳಿಂದ ಇಜಾರನ್ನು ಮೇಲೇರಿಸಿ ಕೊಂಡಳು. ಆಗ ಸುಲೈಮಾನರು ‘ಇದು ಸ್ಪಟಿಕ ನಿರ್ಮಿತ ನುಣುಪಾದ ಅರಮನೆ’ ಎಂದರು. ಆಗ ಅವಳು, ‘ಓ ನನ್ನ ಪ್ರಭೂ, ನಾನು ನನ್ನ ಮೇಲೆಯೇ ಅಕ್ರಮವೆಸಗಿದೆ. ನಾನು ಸುಲೈಮಾನರೊಂದಿಗೆ, ಸರ್ವ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೆ ಶರಣಾಗಿದ್ದೇನೆ’ ಎಂದಳು .
‘ನೀವು ಅಲ್ಲಾಹನನ್ನು ಆರಾಧಿಸಿರಿ’ ಎಂಬ ಸಂದೇಶದೊಂದಿಗೆ ಸಮೂದ್ ಗೋತ್ರದೆಡೆಗೆ ಅವರ ಸಹೋದರ ಸಾಲಿಹರನ್ನು ನಾವು ಕಳುಹಿಸಿದೆವು. ಆಗ ಅವರು ಪರಸ್ಪರ ಜಗಳಾಡುವ ಎರಡು ತಂಡಗಳಾಗಿ ಬಿಟ್ಟರು.
ಅವರು (ಸಾಲಿಹರು) ಹೇಳಿದರು, ‘ನನ್ನ ಜನಾಂಗದವರೇ, ನೀವೇಕೆ ಒಳಿತಿಗಿಂತ ಮೊದಲು ಕೆಡುಕಿಗಾಗಿ ತ್ವರೆ ಮಾಡುವಿರಿ? ನಿಮ್ಮ ಮೇಲೆ ಕೃಪೆ ತೋರುವಂತಾಗಲು ನೀವು ಅಲ್ಲಾಹನೊಡನೆ ಕ್ಷಮಾಯಾಚನೆ ಮಾಡಬಾರದೇ?’
ಆಗ ಅವರು, ‘ನಾವು ನಿನ್ನ ಹಾಗೂ ನಿನ್ನ ಜೊತೆ ಗಾರರಿಂದ ಅಪಶಕುನದಲ್ಲಿ ಬಿದ್ದಿದ್ದೇವೆ’ ಎಂದ ರು. ಅದಕ್ಕೆ ಸಾಲಿಹರು ‘ನಿಮ್ಮ ಶಕುನವು ಅಲ್ಲಾ ಹನ ಬಳಿ ಇದೆ. ಆದರೆ ನೀವು ಪರೀಕ್ಷಿಸಲ್ಪಡುತ್ತಿರುವ ಒಂದು ಜನಾಂಗವಾಗಿದ್ದೀರಿ’ ಎಂದು ಉತ್ತರಿಸಿದರು.
ಆ ನಗರದಲ್ಲಿ ಒಂಭತ್ತು ಮಂದಿಯ ಗುಂಪೊಂದಿತ್ತು. ಅವರು ಭೂಮಿಯಲ್ಲಿ ಕೇಡು ಹರಡುತ್ತಿ ದ್ದರು. ಸುಧಾರಣೆ ಮಾಡುತ್ತಿರಲಿಲ್ಲ.
ಅವರು ಪರಸ್ಪರ ಹೀಗೆಂದರು; ನಾವು ಸಾಲಿಹ್ ಮತ್ತು ಅವನ ಜನರನ್ನು ರಾತ್ರಿ ಸಮಯದಲ್ಲಿ ಕೊಂದು ಹಾಕೋಣ, ಅನಂತರ ಅವನ ಹಕ್ಕುದಾರನೊಡನೆ ‘ನಿಮ್ಮ ಜನರ ನಾಶಕ್ಕೆ ನಾವು ಹಾಜರಾಗಿಲ್ಲ. ನಾವು ನಿಜವನ್ನೇ ಹೇಳುತ್ತೇವೆ’ ಎಂದು ಹೇಳೋಣ ಎಂದು ಅಲ್ಲಾಹನ ಹೆಸರಲ್ಲಿ ಆಣೆ ಹಾಕಿರಿ”.
ಅವರು ಒಂದು ತಂತ್ರವನ್ನು ಹೂಡಿದರು. ಅವರು ತಿಳಿಯದಂತೆ ಒಂದು ಪ್ರತಿತಂತ್ರವನ್ನು ನಾವೂ ಹೂಡಿದೆವು.
ನೋಡಿರಿ! ಅವರ ಕುತಂತ್ರದ ಪರಿಣಾಮ ಏನಾ ಯಿತು? ನಾವು ಅವರನ್ನೂ ಅವರ ಇಡೀ ಜನಾಂಗವನ್ನೂ ನಾಶಗೊಳಿಸಿದೆವು!
ಹೀಗೆ ಅವರು ಮಾಡುತ್ತಿದ್ದ ಅಕ್ರಮದ ಫಲವಾಗಿ ಅವರ ಮನೆಗಳು ಪಾಳುಬಿದ್ದಿವೆ. ತಿಳಿಯುವ ಜನಾಂಗಕ್ಕೆ ಖಂಡಿತ ಇದರಲ್ಲಿ ನಿದರ್ಶನವಿದೆ.
ಸತ್ಯವಿಶ್ವಾಸವಿರಿಸಿಕೊಂಡ ಹಾಗೂ ಜಾಗೃತೆ ಪಾಲಿಸಿದ ಜನರನ್ನು ನಾವು ರಕ್ಷಿಸಿದೆವು.
ಲೂಥರನ್ನು (ಸ್ಮರಿಸಿರಿ). ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ. ‘ನೀವು ಕಣ್ಣಾರೆ ಕಾಣುತ್ತ ಈ ನೀಚ ಕೆಲಸವನ್ನು ಮಾಡುತ್ತೀರಾ?
ನೀವು ಕಾಮ ತೀರಿಸಲಿಕ್ಕಾಗಿ ಸ್ತ್ರೀಯರನ್ನು ಬಿಟ್ಟು ಪುರುಷರ ಬಳಿಗೆ ಹೋಗುವುದೇ? ಮಾತ್ರವಲ್ಲ ನೀವು (ಇದರ ದುಷ್ಪರಿಣಾಮದ ಬಗ್ಗೆ) ಅರಿವಿಲ್ಲದ ಜನಾಂಗವಾಗಿದ್ದೀರಿ’.
ಆಗ `ಲೂಥರ ಪರಿವಾರವನ್ನು ನಿಮ್ಮ ನಾಡಿನಿಂದ ಹೊರ ಹಾಕಿರಿ. ಮಹಾಶುದ್ಧ ಜನರಿವರು’ ಎನ್ನುವುದೇ ಹೊರತು ಅವರ ಜನಾಂಗಕ್ಕೆ ಬೇರೆ ಉತ್ತರವಿರಲಿಲ್ಲ .
ಕೊನೆಗೆ ನಾವು ಅವರನ್ನೂ ಅವರ ಜನರನ್ನೂ ರಕ್ಷಿಸಿದೆವು. ಆದರೆ ಅವರ ಪತ್ನಿಯನ್ನು ನಾವು ರಕ್ಷಿಸಲಿಲ್ಲ. ಶಿಕ್ಷೆಯಲ್ಲಿ ಉಳಿದವರ ಸಾಲಿಗೆ ಅವಳನ್ನು ನಾವು ಸೇರಿಸಿ ಲೆಕ್ಕ ಮಾಡಿದ್ದೆವು.
ಅವರ ಮೇಲೆ ನಾವು ಒಂದು ಮಳೆ ಸುರಿಸಿದೆವು. ಎಚ್ಚರಿಕೆ ನೀಡಲ್ಪಟ್ಟವರ ಪಾಲಿಗೆ ಅದು ಅತ್ಯಂತ ಕೆಟ್ಟ ಮಳೆಯಾಗಿತ್ತು .
(ಪೈಗಂಬರರೇ) ಹೇಳಿರಿ; ಅಲ್ಲಾಹನಿಗೆ ಸರ್ವ ಸ್ತುತಿ. ಅವನು ಆಯ್ದು ಪುನೀತಗೊಳಿಸಿದ ಅವನ ದಾಸರ ಮೇಲೆ ಶಾಂತಿ ಇರಲಿ. ಅಲ್ಲಾಹು ಉತ್ತಮ ನೋ ಅಥವಾ ಇವರು ಅವನ ಸಹಭಾಗಿಗಳಾಗಿ ಮಾಡುವ ವಸ್ತುಗಳು ಉತ್ತಮವೋ?
ಅಥವಾ ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ ಹಾಗೂ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದ ಮತ್ತು ತನ್ಮೂಲಕ ನಿಮ್ಮಿಂದ ಬೆಳೆಸಲು ಸಾಧ್ಯವಿಲ್ಲದ ಮರಗಳಿರುವ ಸುಂದರ ತೋಟಗಳನ್ನು ಬೆಳೆಸಿದವನು ಉತ್ತಮನೋ, ಇತರರೋ? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಇಲ್ಲ! ವಾಸ್ತವದಲ್ಲಿ ಇವರು (ಅಲ್ಲಾಹನೊಂದಿಗೆ ಇತರ ವಸ್ತುಗಳನ್ನು) ಸಮಾನತೆ ಕಲ್ಪಿಸುವ ಒಂದು ಜನಾಂಗವಾಗಿರುವರು.
ಭೂಮಿಯನ್ನು ವಾಸ ಯೋಗ್ಯಗೊಳಿಸಿದ, ಅದರ ನಡುವೆ ನದಿಗಳನ್ನು ಹರಿಸಿದ, ಭೂಮಿಗೆ ಬಲ ಕೊಡುವ ಪರ್ವತಗಳನ್ನು ನಾಟಿದ ಮತ್ತು ಎರಡು ರೀತಿಯ ಜಲಾಶಯಗಳ ಮಧ್ಯೆ ತಡೆ ಯನ್ನಿರಿಸಿದವನೋ ಉತ್ತಮನು (ಅಥವಾ ಇತರರೋ?) ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಇಲ್ಲ; ಆದರೆ ಇವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
ಅಥವಾ ಕಷ್ಟಕ್ಕೊಳಗಾದವನು ಪ್ರಾರ್ಥಿಸಿದಾಗ ಅವನಿಗೆ ಉತ್ತರಿಸುವವನೂ ಸಂಕಷ್ಟವನ್ನು ನಿವಾರಿಸುವವನೂ ನಿಮ್ಮನ್ನು ಭೂಮಿಯಲ್ಲಿ ವಂಶ ಪರಂಪರೆಯಾಗಿ ನೆಲೆಗೊಳಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ನೀವು ಸ್ವಲ್ಪ ಮಾತ್ರವೇ ಯೋಚಿಸಿ ಅರ್ಥ ಮಾಡಿಕೊಳ್ಳುತ್ತೀರಿ.
ಅಥವಾ ನೆಲ ಹಾಗೂ ಸಾಗರದ ಅಂಧಕಾರಗಳಲ್ಲಿ ನಿಮಗೆ ದಾರಿ ತೋರಿಸುವವನೂ ತನ್ನ ಕೃಪೆಗಿಂತ ಮುಂಚಿತವಾಗಿ ಮಾರುತಗಳನ್ನು ಸುಮಾರ್ತೆಯಾಗಿ ಕಳುಹಿಸುವವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ ಇರುವರೇ? ಅಲ್ಲಾಹನು ಇವರು ಮಾಡುತ್ತಿರುವ ದೇವಸಹ ಭಾಗಿತ್ವದಿಂದ ಮುಕ್ತ ಮಹೋನ್ನತನು.
ಅಥವಾ ಸೃಷ್ಟಿಯನ್ನಾರಂಭಿಸಿ ಆ ಬಳಿಕ ಅದರ ಪುನಃ ಸೃಷ್ಟಿ ಮಾಡುವವನೂ ಯಾರು? ಆಕಾ ಶದಿಂದಲೂ, ಭೂಮಿಯಿಂದಲೂ ನಿಮಗೆ - ಜೀವನಾಧಾರ ಕೊಡುವವನಾರು? ಅಲ್ಲಾಹನ ಜೊತೆ ಇತರ ದೇವರೂ ಇರುವರೇ? ಹೇಳಿರಿ ನೀವು ಸತ್ಯವಾದಿಗಳಾಗಿದ್ದರೆ ಪುರಾವೆಗಳನ್ನು ತನ್ನಿರಿ.
ಹೇಳಿರಿ; ಭೂಮಿ-ಆಕಾಶಗಳಲ್ಲಿ, ಇರುವ ಯಾರೂ ಪರೋಕ್ಷವನ್ನು ತಿಳಿಯುವುದಿಲ್ಲ, ಅಲ್ಲಾಹನ ಹೊರತು. ಯಾವಾಗ ಪುನರ್ಜೀವ ತಾಳಿ ಎಬ್ಬಿಸಲ್ಪಡುವರೆಂಬುದು ಈ ಸತ್ಯ ನಿಷೇಧಿಗಳಿಗೆ ಪ್ರಜ್ಞೆ ಇಲ್ಲ.
ಪರಲೋಕದ ಬಗ್ಗೆ ಇವರಿಗೆ ಅರಿವಾದರೂ ಇದೆ ಯೇ? ಇಲ್ಲ! ಇವರು ಅದರ ಬಗ್ಗೆ ಸಂದೇಹದಲ್ಲಿದ್ದಾರೆ. ಅಲ್ಲ, ಅವರು ಅದರಿಂದ ಕುರುಡರಾಗಿದ್ದಾರೆ.
ಸತ್ಯನಿಷೇಧಿಗಳು ಹೇಳುತ್ತಾರೆ. ‘ನಾವೂ ನಮ್ಮ ಪೂರ್ವಿಕರೂ ಮಣ್ಣಾಗಿ ಹೋದರೆ ನಿಜಕ್ಕೂ ನಮ್ಮನ್ನು (ಸಮಾಧಿಗಳಿಂದ) ಹೊರತರಲಾಗು ವುದೇ?
ಇಂತಹ ವಾಗ್ದಾನಗಳು ನಮಗೆ ಮಾತ್ರವಲ್ಲ, ಹಿಂದೆ ನಮ್ಮ ಪೂರ್ವಿಕರಿಗೂ ಕೊಡಲಾಗಿತ್ತು. ಆದರೆ ಇವೆಲ್ಲ ಪೂರ್ವಿಕರ ಬರಿಯ ಕಟ್ಟುಕತೆಗಳೇ ಹೊರತು ಇನ್ನೇನಲ್ಲ’.
(ಓ ಪೈಗಂಬರರೇ, ಇವರಿಗೆ ಹೀಗೆ) ಹೇಳಿರಿ, ಭೂಮಿಯ ಮೇಲೆ ಸಂಚಾರ ಮಾಡಿ. ಅಪರಾಧಿಗಳ ಪರಿಣಾಮ ಏನಾಗಿತ್ತೆಂದು ನೋಡಿರಿ.
ಪೈಗಂಬರರೇ, ಇವರ ಮೇಲೆ ದುಃಖಿಸಬೇಡಿರಿ, ಇವರು ಹೂಡುತ್ತಿರುವ ಸಂಚುಗಳ ಬಗ್ಗೆ ವ್ಯಾಕುಲಗೊಳ್ಳಬೇಡಿರಿ.
ಅವರು (ಅವಿಶ್ವಾಸಿಗಳು ಪ್ರವಾದಿಯರಲ್ಲಿ) ಹೇಳಿದರು; ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಎಚ್ಚರಿಕೆ ಈಡೇರುವುದು ಯಾವಾಗ?
ಅವರಿಗೆ ಹೀಗೆ ಹೇಳಿರಿ. ನೀವು ತವಕ ಪಡುತ್ತಿ ರುವ ಕಾರ್ಯಗಳಲ್ಲಿ ಕೆಲವು ಬಹುಶಃ ನಿಮ್ಮ ಹತ್ತಿರ ವೇ ಬಂದು ಬಿಟ್ಟಿದೆ.
ಖಂಡಿತ ನಿಮ್ಮ ಪ್ರಭು ಜನರ ಮೇಲೆ ಔದಾರ್ಯ ವುಳ್ಳವನು. ಆದರೆ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.
ಅವರ ಹೃದಯಗಳು ಬಚ್ಚಿಟ್ಟುಕೊಂಡಿರುವುದನ್ನೂ ಅವರು ಪ್ರಕಟಗೊಳಿಸುತ್ತಿರುವುದನ್ನೂ ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.
ಆಕಾಶ ಭೂಮಿಯಲ್ಲಿ ಯಾವುದೇ ಗೌಪ್ಯ ವಸ್ತು ಒಂದು ಸುವ್ಯಕ್ತ ಗ್ರಂಥದಲ್ಲಿ ಬರೆಯಲ್ಪಡದೆ ಉಳಿದಿಲ್ಲ.
ಇಸ್ರಾಈಲ ಸಂತತಿಗಳು ಭಿನ್ನಾಭಿಪ್ರಾಯವಿರಿಸಿ ಕೊಂಡಿರುವ ಹೆಚ್ಚಿನ ವಿಷಯಗಳನ್ನು ಈ ಖುರ್‍ಆನ್ ಅವರಿಗೆ ವಿವರಿಸಿ ಕೊಡುತ್ತದೆ.
ಖಂಡಿತ ಇದು ಸತ್ಯವಿಶ್ವಾಸಿಗಳ ಪಾಲಿಗೆ ಮಾರ್ಗ ದರ್ಶನವೂ ಕೃಪೆಯೂ ಆಗಿದೆ.
ನಿಶ್ಚಯವಾಗಿಯೂ ನಿಮ್ಮ ಪ್ರಭು ತನ್ನ ಅಪ್ಪಣೆ ಮೂಲಕ ಇವರ ನಡುವೆ ತೀರ್ಮಾನ ಮಾಡು ವನು. ಅವನು ಮಹಾ ಪ್ರತಾಪಿಯೂ ಸರ್ವಜ್ಞನೂ ಆಗಿರುತ್ತಾನೆ.
ಆದುದರಿಂದ (ಪೈಗಂಬರರೇ,) ಅಲ್ಲಾಹನ ಮೇಲೆ ಭರವಸೆ ಇಡಿರಿ. ನಿಶ್ಚಯವಾಗಿಯೂ ನೀವು ಸುಸ್ಪಷ್ಟವಾದ ಸತ್ಯ ಮಾರ್ಗದಲ್ಲಿದ್ದೀರಿ.
ನೀವು ಮೃತರಿಗೆ ಖಂಡಿತ ಕೇಳಿಸಲಾರಿರಿ ಕಿವುಡರು ಬೆನ್ನು ತಿರುಗಿಸಿ ಓಡಿ ಹೋದರೆ ಅವರಿಗೂ ನಿಮ್ಮ ಕೂಗನ್ನು ಮುಟ್ಟಿಸಲಾರಿರಿ.
ಕುರುಡರನ್ನು ಅವರ ದುರ್ಮಾಗದಿಂದ ಸರಿದಾರಿಗೆ ಕೊಂಡೊಯ್ಯಲಾರಿರಿ. ನಮ್ಮ ದೃಷ್ಟಾಂತ ಗಳಲ್ಲಿ ವಿಶ್ವಾಸವಿರಿಸಿ ಆಮೇಲೆ ಶರಣಾಗತರಾದವರಿಗೆ ಮಾತ್ರ ನಿಮ್ಮ ಮಾತನ್ನು ಕೇಳಿಸಬಲ್ಲಿರಿ.
ಅವರ ಮೇಲೆ ವಚನವು ಪೂರ್ಣಗೊಳ್ಳುವ ಕಾಲ ಬಂದಾಗ ನಾವು ಅವರಿಗಾಗಿ ಒಂದು ಪ್ರಾಣಿ ಯನ್ನು ಭೂಮಿಯಿಂದ ಹೊರತರುವೆವು, ಜನರು ನಮ್ಮ ದೃಷ್ಟಾಂತಗಳಲ್ಲಿ ದೃಢವಿಶ್ವಾಸವಿಲ್ಲದವರಾಗಿದ್ದಾರೆ ಎಂದು ಅದು ಅವರೊಡನೆ ಮಾತಾಡುವುದು.
ಪ್ರತಿಯೊಂದು ಸಮುದಾಯದಿಂದ ನಮ್ಮ ಪುರಾವೆಗಳನ್ನು ಸುಳ್ಳಾಗಿಸುತ್ತಿದ್ದ ಒಂದೊಂದು ತಂಡವನ್ನು ನಾವು ಒಟ್ಟು ಸೇರಿಸುವ ದಿನವನ್ನು ಊಹಿಸಿರಿ. ತರುವಾಯ ಅವರನ್ನು ತಡೆದು ನಿಯಂತ್ರಿಸಲಾಗುವುದು.
ಹೀಗೆ ಅವರೆಲ್ಲರೂ (ವಿಚಾರಣಾ ಸ್ಥಳಕ್ಕೆ) ಬಂದಾಗ (ಅಲ್ಲಾಹು) ಅವರನ್ನು ಕೇಳುವನು. ‘ನನ್ನ ದೃಷ್ಟಾಂತಗಳ ಬಗ್ಗೆ ಕೂಲಂಕಶವಾಗಿ ತಿಳಿಯದೆ ನೀವು ಅವುಗಳನ್ನು ನಿಷೇಧಿಸಿಬಿಟ್ಟಿರಾ? ಅದಲ್ಲ ವಾದರೆ ನೀವು ಇನ್ನೇನು ಮಾಡುತ್ತಿದ್ದಿರಿ?’ ಎಂದು ಕೇಳುವನು.
ಅವರು ಮಾಡಿದ ಅಕ್ರಮದ ಕಾರಣದಿಂದ ಅವರ ಮೇಲೆ (ಯಾತನೆಯ) ವಚನವು ನಿಜಗೊಳ್ಳುವುದು. ಆಗ ಅವರು (ಏನನ್ನೂ) ಮಾತಾಡಲಾರರು.
ಅವರು ವಿಶ್ರಾಂತಿ ಪಡೆಯುವುದಕ್ಕಾಗಿ ರಾತ್ರಿ ಯನ್ನೂ ಕಣ್ಣು ಕಾಣಿಸುವ ನೆಲೆಯಲ್ಲಿ ಹಗಲನ್ನೂ ಅವರಿಗೆ ಸೃಷ್ಟಿಸಿದ್ದು ಅವರು ನೋಡುವುದಿಲ್ಲವೇ? ಸತ್ಯವಿಶ್ವಾಸವಿಟ್ಟ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.
ಸೂರ್ (ಕಹಳೆ) ಊದಲ್ಪಡುವ ದಿನ. ಆಗ ಅಲ್ಲಾ ಹನು ಇಚ್ಛಿಸಿದವರ ಹೊರತು ಆಕಾಶಗಳಲ್ಲೂ ಭೂಮಿಯಲ್ಲೂ ಇರುವವರೆಲ್ಲರೂ ದಿಗಿಲುಗೊಳ್ಳುವರು. ಎಲ್ಲರೂ ದೈನ್ಯರಾಗಿ ಅವನ ಸನ್ನಿ ಧಿಯಲ್ಲಿ ಹಾಜರಾಗುವರು.
ನೀವು ಪರ್ವತಗಳನ್ನು ಕಾಣುವಾಗ ಅವು ಚೆನ್ನಾಗಿ ನಾಟಿಕೊಂಡಿವೆಯೆಂದು ನೀವು ಭಾವಿಸುವಿರಿ. ಆದರೆ, ಅವು ಮೋಡಗಳು ಚಲಿಸುವಂತೆ ಚಲಿಸುವುವು. ಇದು ಸಕಲವನ್ನೂ ಸೂತ್ರಬದ್ಧ ವಾಗಿ ವ್ಯವಸ್ಥೆಗೊಳಿಸಿರುವ ಅಲ್ಲಾಹನ ಕಾರ್ಯವಾಗಿರುವುದು. ನೀವು ಮಾಡುತ್ತಿರುವುದರ ಬಗ್ಗೆ ಅವನು ಸೂಕ್ಷ್ಮವಾಗಿ ಅರಿತಿರುತ್ತಾನೆ.
ಯಾರು, ಒಂದು ಒಳಿತನ್ನು ತರುತ್ತಾನೆ, ಆತನಿಗೆ ಅದರ ಪ್ರತಿಫಲ ಸಿಗುವುದು. ಅವರು ಆ ದಿನದ ಭಯವಿಹ್ವಲತೆಯಿಂದ ನಿರ್ಭಯರಾಗಿರುವರು.
ಯಾರು ಕೆಡುಕನ್ನು ತರುತ್ತಾನೆ, ಅವರನ್ನು ಅಧೋಮುಖವಾಗಿ ನರಕಕ್ಕೆ ಎಸೆಯಲಾಗುವುದು. ನೀವೆಸಗುತ್ತಿದ್ದ ಕಾರ್ಯಕ್ಕಲ್ಲದೆ ನಿಮಗೆ ಪ್ರತಿಫಲ ಸಿಗುವುದೇ?
(ಪೈಗಂಬರರೇ ಹೇಳಿರಿ,) ಈ ನಾಡನ್ನು ಆದರಣೀಯಗೊಳಿಸಿದ ಇದರ ಪ್ರಭುವಿನ ಆರಾಧನೆ ಮಾಡಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ35. ಸಕಲ ವಸ್ತುವೂ ಅವನದ್ದು. ನಾನು ಮುಸ್ಲಿಮರ ಕೂಟಕ್ಕೆ ಸೇರಬೇಕೆಂದೂ ಖುರ್‍ಆನನ್ನು ಓದಿ ಹೇಳಬೇಕೆಂದೂ ಆಜ್ಞಾಪಿಸಲ್ಪಟ್ಟಿದ್ದೇನೆ. ಆದ್ದರಿಂದ ಯಾರು ಸನ್ಮಾರ್ಗವನ್ನು ಸ್ವೀಕರಿಸುತ್ತಾನೆ, ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗವನ್ನು ಸ್ವೀಕರಿಸುವನು. ಯಾರು ಪಥಭ್ರಷ್ಟನಾಗುವನೋ ಅವನೊಡನೆ, ‘ನಾನು ಎಚ್ಚರಿಕೆ ನೀಡುವವನು ಮಾತ್ರ’ ಎಂದು ಹೇಳಿರಿ.
ಹೇಳಿರಿ; ಸರ್ವಸ್ತುತಿ ಅಲ್ಲಾಹನಿಗೆ, ತನ್ನ ನಿದರ್ಶನಗಳನ್ನು ಅವನು ನಿಮಗೆ ತೋರಿಸಿ ಕೊಡುವನು. ಆಗ ನೀವು ಅವುಗಳನ್ನು ತಿಳಿದು ಕೊಳ್ಳುವಿರಿ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ನಿಮ್ಮ ಪ್ರಭು ಅಶೃದ್ಧನಲ್ಲ.