ಆ ಘಟನೆ (ಅಂತ್ಯ ದಿನ) ಸಂಭವಿಸಿದಾಗ.
ಅದರ ಸಂಭಾವ್ಯತೆಯನ್ನು ಸುಳ್ಳಾಗಿಸುವ ಯಾವನೂ ಇರಲಾರನು.
ಪತನ, ಉಚ್ಛ್ರಾಯದ ಘಟನೆ .
ಅಂದರೆ ಭೂಮಿ ಬಲವಾಗಿ ನಡುಗಿಸಲ್ಪಟ್ಟಾಗ.
ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ.
ಹಾಗೆ ಅವು ಚದುರಿ ಹರಡಿದ ಧೂಳೀಪಟ ಗಳಾಗುವುವು.
ಆಗ ನೀವು ಮೂರು ಗುಂಪುಗಳಾಗಿ ವಿಂಗಡಿಸಲ್ಪಡುವಿರಿ.
ಆಗ ಒಂದು ವಿಭಾಗ ಬಲ ವಿಭಾಗದವರು! ಬಲ ವಿಭಾಗದವರದ್ದು ಏನವಸ್ಥೆ !
ಎಡ ವಿಭಾಗದವರು! ಎಡ ವಿಭಾಗದವರ ಪರಿಸ್ಥಿತಿಯೇನು?
(ಸತ್ಯವಿಶ್ವಾಸ ಹಾಗೂ ಸತ್ಕರ್ಮದಲ್ಲಿ) ಮುನ್ನಡೆ ಸಾಧಿಸಿದವರು (ಪರಲೋಕದಲ್ಲೂ) ಮುನ್ನಡೆದವರು.
ಅವರು ಅಲ್ಲಾಹನ ಸಾಮೀಪ್ಯ ಪಡೆದವರಾಗಿರುವರು.
ಸಂಪತ್ಸಮೃದ್ಧ ಸ್ವರ್ಗೋದ್ಯಾನಗಳಲ್ಲಿ (ಅವರು ವಾಸಿಸುವರು.)
ಪೂರ್ವಿಕರಲ್ಲಿ ಒಂದು ಕೂಟ.
ಮುಂದಿನವರಲ್ಲಿ ಸ್ವಲ್ಪ ಜನರು.
ರತ್ನಗಳ ದಪ್ಪ ನಾರುಗಳಿಂದ ಹೊಸೆಯಲಾದ ಮಂಚಗಳಲ್ಲಿರುವರು.
ಅವರದರಲ್ಲಿ ಎದುರುಬದುರಾಗಿ ಸುಖಾಸೀನರಾಗಿರುವರು.
ಚಿರ ಬಾಲಕರು (ಸೇವೆಗಾಗಿ) ಅವರ ನಡುವೆ ಸುತ್ತುತ್ತಿರುವರು.
ಉದಕದಿಂದ ಸುರೆ ತುಂಬಿಸಿಕೊಂಡ ಪಾತ್ರೆಗಳನ್ನು, ಹೂಜಿಗಳನ್ನು ಮತ್ತು ಪಾನ ಲೋಟಗಳನ್ನು ಹಿಡಿದುಕೊಂಡು (ಓಡಾಡುತ್ತಿರುವರು.)
ಅದನ್ನು ಕುಡಿದಾಗ ಅವರ ತಲೆ ತಿರುಗಲಾರದು ಮತ್ತು ಅವರಿಗೆ ಅಮಲೇರಲಾರದು.
ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವಂತಹ ತರತರದ ಹಣ್ಣುಹಂಪಲುಗಳನ್ನು (ಆ ಬಾಲ ಕರು) ತಂದಿರಿಸುವರು.
ಅವರು ಆಶೆಪಡುವ ಪಕ್ಷಿಗಳ ಮಾಂಸದೊಂದಿಗೆ (ಆ ಬಾಲಕರು ಓಡಾಡುವರು)
ಅವರಿಗಾಗಿ ಸುರಸುಂದರ ಬೊಗಸೆ ಕಂಗಳ ಅಪ್ಸರೆಯರಿರುವರು.
ಅವರು ಚಿಪ್ಪಿಯೊಳಗೆ ಬಚ್ಚಿಡಲಾದ ಮುತ್ತುಗಳಂತಿರುವರು.
ಇವೆಲ್ಲ ಅವರು ಭೂಲೋಕದಲ್ಲಿ ಮಾಡುತ್ತಿದ್ದ ಸತ್ಕರ್ಮಗಳ ಪ್ರತಿಫಲಗಳು.
ಅಲ್ಲಿ ಅವರು ಯಾವುದೇ ಅಸಭ್ಯ ಅಥವಾ ಪಾಪಕರ ಮಾತನ್ನು ಕೇಳಲಾರರು.
ಸಲಾಂ-ಸಲಾಂ ಎಂಬ ಮಾತಿನ ಹೊರತು.
ಇನ್ನು ಬಲಗಡೆಯವರು, ಬಲಗಡೆಯವರದ್ದು ಏನವಸ್ಥೆ!
ಅವರು ಮುಳ್ಳಿಲ್ಲದ ಬೊಗರಿ ವೃಕ್ಷಗಳು,
ಅಡಿಯಿಂದ ಮುಡಿ ತನಕ ಹಣ್ಣುಗಳು ದಟ್ಟೈಸಿದ ಬಾಳೆ ಗಿಡಗಳು,
ಬಹು ದೂರ ಹಬ್ಬಿರುವ ನೆರಳು,
ಸದಾ ಹರಿಯುತ್ತಲೇ ಇರುವ ಜಲ,
ಮತ್ತು ಎಂದೂ ಮುಗಿಯದ ಹಾಗೂ ಅಡೆತಡೆಯಿಲ್ಲದೆ ಧಾರಾಳವಾಗಿ ಸಿಗುತ್ತಲಿರುವ ಹಣ್ಣು ಹಂಪಲುಗಳು
ಹಾಗೂ ಎತ್ತರದ ಮೆತ್ತೆಗಳಲ್ಲಿ ಸುಖಾನು ಭವದಲ್ಲಿರುವರು.
ನಾವು ಆ ತರುಣಿಯರನ್ನು ವಿಶಿಷ್ಟ ರೀತಿಯಲ್ಲಿ ಉತ್ಪಾದಿಸಿರುವೆವು.
ನಾವು ಅವರನ್ನು ಚಿರ ಕನ್ನಿಕೆಯರನ್ನಾಗಿ ಮಾಡಿರುವೆವು.
ಅವರು ಪ್ರಿಯತಮೆಯರು ಮತ್ತು ಸಮ ಪ್ರಾಯದವರು.
ಇವೆಲ್ಲ ಬಲಗಡೆಯವರಿಗಾಗಿ ಇರುವುದಾಗಿದೆ.
ಅವರು ಪೂರ್ವಿಕರ ಪೈಕಿ ಒಂದು ವಿಭಾಗವೂ
ಮುಂದಿನವರ ಪೈಕಿ ಒಂದು ವಿಭಾಗವೂ ಆಗಿರುವರು.
ಇನ್ನು ಎಡಗಡೆಯವರು. ಎಡಗಡೆಯವರ ಅವಸ್ಥೆಯೇನು!
ಅವರು ಸುಡುಗಾಳಿಯ ಉರಿಯಲ್ಲೂ ಕುದಿಯುತ್ತಿರುವ ನೀರಲ್ಲೂ ತಂಪಾಗಲಿ, ರಮ್ಯತೆ ಯಾಗಲಿ ಇಲ್ಲದ ಕರಿಹೊಗೆಯ ನೆರಳಲ್ಲೂ ನೆಲೆಸುವರು.
ಅವರು ಅದಕ್ಕೆ ಮುನ್ನ (ಇಹಲೋಕದಲ್ಲಿ) ಸುಖಲೋಲುಪರಾಗಿದ್ದರು.
ಮತ್ತು ಗಂಭೀರ ಪಾಪದಲ್ಲಿ ನೆಲೆಗೊಂಡಿದ್ದರು.
“ನಾವು ಸತ್ತು ಮಣ್ಣಾಗಿ ಮೂಳೆಗಳಾದ ನಂತರ ಮರು ಜೀವಗೊಳಿಸಲ್ಪಡುವುದುಂಟೆ? ನಮ್ಮ ಪೂರ್ವಿಕರೂ ಮರಳಿ ಜೀವ ತಾಳಲಿಕ್ಕಿದೆಯೇ?” ಎಂದು ಅವರು ಕುಚೋದ್ಯವಾಡುತ್ತಿದ್ದರು.
(ಸಂದೇಶವಾಹಕರೇ,) ಹೇಳಿರಿ - ನಿಶ್ಚ ಯವಾಗಿಯೂ ಹಿಂದಿನವರೂ ಮುಂದಿನವರೂ ಎಲ್ಲರೂ ಒಂದು ನಿಶ್ಚಿತ ದಿನದ ಕ್ಲಪ್ತ ಸಮಯಕ್ಕೆ ಖಂಡಿತ ಒಟ್ಟುಗೂಡಿಸಲ್ಪಡುವರು.
ಓ ಸುಳ್ಳುಗಾರರಾದ ಪಥಭ್ರಷ್ಟರೇ, ನಂತರ ಖಂಡಿತಾ ನೀವು
`ಝಖ್ಖೂಮ್’ ಎಂಬ ವೃಕ್ಷದ ಆಹಾರವನ್ನು ತಿನ್ನಲಿರುವಿರಿ.
ಅದರಿಂದಲೇ ನೀವು ಹೊಟ್ಟೆ ತುಂಬುವಿರಿ.
ಮತ್ತು ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.
ಬಾಯಾರಿದ ಒಂಟೆ ಕುಡಿಯುವಂತೆ ನೀವು ಧಾವಂತದಿಂದ ಕುಡಿಯುವಿರಿ.
ಇದುವೇ ಪ್ರತಿಫಲದ ದಿನ ಅವರಿಗೆ ಕಾದಿರಿಸಲಾದ ಆತಿಥ್ಯ.
ನಿಮ್ಮನ್ನು ಸೃಷ್ಟಿಸಿದ್ದು ನಾವು. ಆದರೂ ನೀವು (ಮರುಸೃಷ್ಟಿಯ ನನ್ನ ಸಾಮಥ್ರ್ಯವನ್ನು) ಅಂಗೀಕರಿಸಿಲ್ಲವೇಕೆ?
(ಸ್ತ್ರೀಯರ ಗರ್ಭಾಶಯಕ್ಕೆ) ನೀವು ಸುರಿಸುವ ವೀರ್ಯದ ಕುರಿತು ವಿವೇಚಿಸಿರುವಿರಾ?
ಅದನ್ನು ಸೃಷ್ಟಿ ಮಾಡುವವರು ನೀವೋ ಅಥವಾ ಅದನ್ನು ಸೃಷ್ಟಿ ಮಾಡಿದವರು ನಾವೋ?
ನಿಮ್ಮೊಳಗೆ ಮರಣವನ್ನು ನಿಶ್ಚಯಿಸಿದ್ದು ನಾವೇ ಆಗಿದ್ದೇವೆ. ನಿಮಗೆ ಬದಲು ನಿಮ್ಮಂತಹ ವರನ್ನು ತರುವಲ್ಲಿ ಮತ್ತು ನಿಮಗೆ ತಿಳಿದಿರದ ಯಾವುದಾದರೂ ರೂಪದಲ್ಲಿ ನಿಮ್ಮನ್ನು ಪುನಃ ಸೃಷ್ಟಿಸುವಲ್ಲಿ ನಾವೆಂದೂ ಪರಾಜಿತರಲ್ಲ.
ಮೊದಲ ಉತ್ಪತ್ತಿಯ ಕುರಿತಂತೆ ನೀವು ತಿಳಿದಿರುವಿರಿ. ಮತ್ತೇಕೆ ನೀವು ಚಿಂತಿಸಿ ಪಾಠ ಕಲಿಯುವುದಿಲ್ಲ?
ನೀವು ಬಿತ್ತನೆ ಮಾಡುವ ಕುರಿತು ನೀವೆಂದಾದರೂ ವಿವೇಚಿಸಿ ನೋಡಿರುವಿರಾ?
ಅದನ್ನು ಬೆಳೆಸುವವರು ನೀವೋ ಅಥವಾ ಅದನ್ನು ಬೆಳೆಸುವವರು ನಾವೋ?
ನಾವಿಚ್ಛಿಸಿದರೆ ಅದನ್ನು (ಕೃಷಿಗಳನ್ನು) ಹೊಟ್ಟನ್ನಾಗಿ ಮಾಡಿಬಿಡಬಲ್ಲೆವು. ಆಗ ನೀವು ಸಖೇದಾಶ್ಚರ್ಯದೊಂದಿಗೆ; ``ನಾವು ನಷ್ಟ ಹೊಂದಿ ದೆವು, ಮಾತ್ರವಲ್ಲ, ನಮಗೆ ಜೀವನಾಧಾರವೇ ತಡೆಯಲ್ಪಟ್ಟಿತು’’ ಎನ್ನುವಿರಿ.
ನೀವು ಕುಡಿಯುವ ನೀರಿನ ಬಗ್ಗೆ ಯೋಚಿಸಿದ್ದೀರಾ?
ಅದನ್ನು ಮೋಡಗಳಿಂದ ಸುರಿಸಿದ್ದು ನೀವೋ ಅಥವಾ ಅದನ್ನು ಸುರಿಸಿದ್ದು ನಾವೋ?
ನಾವಿಚ್ಛಿಸಿದರೆ ಅದನ್ನು ಕಡು ಉಪ್ಪನ್ನಾಗಿ ಮಾಡಿ ಬಿಡಬಲ್ಲೆವು. ಹೀಗಿರುತ್ತ ನೀವೇಕೆ ಕೃತಜ್ಞರಾಗುವುದಿಲ್ಲ ?
ನೀವು ಉರಿಸುತ್ತಿರುವ ಬೆಂಕಿಯ ಕುರಿತು ನೀವು ಚಿಂತನೆ ನಡೆಸಿದ್ದುಂಟೇ?
ಅದರ ಮರವನ್ನು ಉಂಟುಮಾಡಿದ್ದು ನೀವೋ ಅಥವಾ ಅದನ್ನುಂಟುಮಾಡಿದ್ದು ನಾವೋ?
ಅದನ್ನು ನಾವು ಒಂದು ಚಿಂತನಾ ವಿಷಯವಾಗಿಯೂ ಮರುಭೂಮಿಯ ಸಂಚಾರಿಗಳಿಗೆ ಒಂದು ಅನುಕೂಲವಾಗಿಯೂ ಮಾಡಿರುತ್ತೇವೆ.
ಆದುದರಿಂದ (ಸಂದೇಶವಾಹಕರೇ), ಅತ್ಯಂತ ಮಹಾನನಾದ ತಮ್ಮ ಪ್ರಭುವಿನ ನಾಮವನ್ನು ಪ್ರಕೀರ್ತಿಸಿರಿ.
ಖಂಡಿತ ನಾನು ನಕ್ಷತ್ರಗಳ ಅಸ್ತಮಯ ಸ್ಥಾನಗಳ ಆಣೆಯಿಡುತ್ತೇನೆ.
ನೀವು ಅರಿಯುವುದಾದರೆ, ಅದೊಂದು ಉನ್ನತ ಮಟ್ಟದ ಆಣೆಯಾಗಿದೆ.
ಇದು ಆದರಣೀಯವಾದ ಖುರ್‍ಆನ್ ಆಗಿದೆ.
ಭದ್ರವಾಗಿ ಕಾಯ್ದಿಡಲಾದ ಒಂದು ಗ್ರಂಥದಲ್ಲಿ ಮುದ್ರಿತವಿದೆ.
ಪರಿಶುದ್ಧರಲ್ಲದೆ ಬೇರಾರೂ ಇದನ್ನು ಸ್ಪರ್ಶಿಸಲಾರರು .
ಇದು ಲೋಕಪಾಲಕನಿಂದ ಅವತೀರ್ಣಗೊಂಡಿದೆ.
ಹೀಗಿರುತ್ತ ನೀವು ಈ ವೃತ್ತಾಂತದ ಕುರಿತು ನಿರ್ಲಕ್ಷ್ಯ ತೋರುವಿರಾ?
ಮತ್ತು ಸತ್ಯನಿಷೇಧವನ್ನೇ ನಿಮ್ಮ ಉಪಜೀವನ ಮಾರ್ಗವನ್ನಾಗಿ ಮಾಡಿಕೊಂಡಿರುವಿರಾ?
ಹಾಗಾದರೆ, ಅದು (ಆತ್ಮ) ಗಂಟಲಿಗೆ ತಲುಪಿದಾಗ (ಅದನ್ನು ಯಾಕೆ ನಿಮಗೆ ತಡೆಯಲಾಗುವುದಿಲ್ಲ?)
ನೀವಾದರೋ ಆ ಸಂದರ್ಭದಲ್ಲಿ (ಮರಣವನ್ನು) ಕಣ್ಣಾರೆ ನೋಡಿ ನಿಂತಿರುತ್ತೀರಿ.
ನಾವು ಅವನೊಂದಿಗೆ (ಆ ಮರಣಾಸನ್ನನೊಂದಿಗೆ) ನಿಮಗಿಂತ ನಿಕಟವಾಗಿರುವೆವು. ಆದರೆ ಅದನ್ನು ನೀವು ಕಾಣುತ್ತಲಿಲ್ಲ.
ನೀವು ಪರಾಧೀನರಲ್ಲದಿರುತ್ತಿದ್ದರೆ ಮತ್ತು ನೀವು ಸತ್ಯವಾದಿಗಳಾಗಿರುತ್ತಿದ್ದರೆ (ಪ್ರಾಣವನ್ನು ರಕ್ಷಿಸಿಕೊಳ್ಳಲು ಯಾಕಾಗುತ್ತಿಲ್ಲ?)
ಇನ್ನು ಆ ಮರಣ ಹೊಂದುವವನು ಅಲ್ಲಾಹನ ನಿಕಟವರ್ತಿಗಳಲ್ಲಿ ಒಬ್ಬನಾಗಿದ್ದರೆ
ಅವನಿಗೆ ಸುಖ ಸಂತೋಷ, ಸುಗಂಧಪೂರಿತ ಜೀವನಾಧಾರ ಮತ್ತು ಅನುಗ್ರಹ ತುಂಬಿದ ಸ್ವರ್ಗೋದ್ಯಾನವಿದೆ.
ಇನ್ನು ಅವನು ಬಲಗಡೆಯವನಾಗಿದ್ದರೆ
ನೀನು ಬಲಗಡೆಯವನಾದುದರಿಂದ ನಿನಗೆ ಶಾಂತಿ ಇರಲಿ ಎಂದು ಅವನಲ್ಲಿ ಹೇಳಲಾಗುವುದು.
ಇನ್ನು ಅವನು ಸುಳ್ಳಾಗಿಸುವ ಪಥಭ್ರಷ್ಟ ರಲ್ಲೊಬ್ಬನಾಗಿದ್ದರೆ
ಅವನಿಗೆ ಕುದಿಯುವ ನೀರಿನ ಸತ್ಕಾರವೂ,
ಜ್ವಲಿಸುವ ನರಕ ಪ್ರವೇಶದ ಶಿಕ್ಷೆಯೂ (ಲಭಿಸಲಿದೆ)
ಇದುವೇ ಖಚಿತವಾದ ಸತ್ಯ.
ಆದುದರಿಂದ (ಸಂದೇಶವಾಹಕರೇ), ತಮ್ಮ ಮಹೋನ್ನತ ಪ್ರಭುವಿನ ನಾಮವನ್ನು ಪ್ರಕೀರ್ತಿಸಿರಿ.