ಹಾ ಮೀಮ್.
ಸುವ್ಯಕ್ತವಾದ ಈ ಗ್ರಂಥದಾಣೆ!
ನಿಶ್ಚಯವಾಗಿಯೂ ನಾವು ಇದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ. ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ.
ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತ ವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುತ್ತದೆ . ನಾವು ಸಂದೇಶವಾಹಕರನ್ನು ಕಳುಹಿಸುತ್ತಿರುವವರಾಗಿರುವೆವು.
ನಿನ್ನ ಪ್ರಭುವಿನ ಕಾರುಣ್ಯವಾಗಿ. ನಿಶ್ಚಯವಾಗಿಯೂ ಅವನೇ ಸರ್ವವನ್ನೂ ಆಲಿಸುವವನು ಮತ್ತು ಸರ್ವವನ್ನೂ ಅರಿಯುವವನು.
ಆಕಾಶಗಳ ಹಾಗೂ ಭೂಮಿಯ ಮತ್ತು ಅವುಗಳ ನಡುವೆ ಇರುವ ಪ್ರತಿಯೊಂದು ವಸ್ತುವಿನ ಪ್ರಭು(ವಿನ ಕಾರುಣ್ಯವಾಗಿ). ನೀವು ದೃಢನಂಬಿಕೆಯುಳ್ಳವರಾಗಿದ್ದರೆ.
ಅವನ ಹೊರತು ಬೇರೆ ಆರಾಧ್ಯರಿಲ್ಲ. ಅವನು ಜೀವಂತಗೊಳಿಸುತ್ತಾನೆ ಮತ್ತು ಮರಣ ಗೊಳಿಸುತ್ತಾನೆ. ಅವನು ನಿಮ್ಮ ಮತ್ತು ನಿಮಗಿಂತ ಮುಂಚೆ ಗತಿಸಿದ ಪೂರ್ವಜರ ಪ್ರಭು.
ಆದರೆ ಅವರು ಸಂಶಯದಲ್ಲಿ ವಿನೋದವಾಡುತ್ತಿದ್ದಾರೆ.
ಹೀಗಾಗಿ ಆಕಾಶವು ಸ್ಪಷ್ಟವಾದ ಹೊಗೆಯೊಂದಿಗೆ ಬರುವ ದಿನವನ್ನು ನಿರೀಕ್ಷಿಸಿರಿ.
ಅದು ಜನರನ್ನು ಆವರಿಸಿಕೊಳ್ಳುತ್ತದೆ. ಇದು ಒಂದು ಯಾತನಾಮಯ ಶಿಕ್ಷೆಯಾಗಿದೆ.
(ಅವರು ಹೇಳುವರು) “ನಮ್ಮ ಪ್ರಭು! ನಮ್ಮಿಂದ ಈ ಶಿಕ್ಷೆಯನ್ನು ತೊಲಗಿಸು. ನಾವು ಖಂಡಿತ ಸತ್ಯವಿಶ್ವಾಸಿಗಳಾಗುತ್ತೇವೆ”.
ಅವರಿಗೆ ಹೇಗೆ ಬೋಧೋದಯ ಸಂಭವಿಸಿತು? ಅವರ ಬಳಿಗೆ (ಕಾರ್ಯಗಳನ್ನು) ವ್ಯಕ್ತಗೊಳಿ ಸುವ ಒಬ್ಬ ದೂತರು ಬಂದಿದ್ದರು.
ಆದರೂ ಇವರು ಅವರಿಂದ ವಿಮುಖರಾದರು. `ಇವನೊಬ್ಬ ಕಲಿಸಲ್ಪಟ್ಟವನೂ ಹುಚ್ಚನೂ ಆಗಿರುವನು’ ಎಂದರು.
ನಾವು ಶಿಕ್ಷೆಯನ್ನು ಸ್ವಲ್ಪ ಕಾಲ ತೊಲಗಿಸಿ ಬಿಡುತ್ತೇವೆ. ಆದರೆ (ಸತ್ಯನಿಷೇಧಿಗಳೇ!) ನೀವು (ಹಳೆಯ ಅವಸ್ಥೆಗೆ) ಮರಳಿ ಹೋಗುವಿರಿ.
ನಾವು ಭಾರೀ ಹಿಡಿತವನ್ನು ಹಿಡಿಯುವ ದಿನವೇ ನಾವು ನಿಮ್ಮ ಮೇಲೆ ಸೇಡು ತೀರಿಸಲಿದ್ದೇವೆ.
ಇವರಿಗಿಂತ ಮುಂಚೆ ಫಿರ್‍ಔನನ ಜನಾಂಗವನ್ನೂ ನಾವು ಪರೀಕ್ಷಿಸಿದ್ದೆವು. ಅವರ ಬಳಿಗೆ ಓರ್ವ ಸನ್ಮಾನ್ಯ ದೂತರು ಬಂದಿದ್ದರು.
(ದೂತರು ಹೇಳಿದರು) `ಅಲ್ಲಾಹನ ದಾಸರನ್ನು ನನ್ನ ವಶಕ್ಕೆ ಒಪ್ಪಿಸಿ ಬಿಡಿರಿ. ನಾನು ನಿಮ್ಮ ಕಡೆಗಿರುವ ಓರ್ವ ಪ್ರಾಮಾಣಿಕ ದೂತನಾಗಿದ್ದೇನೆ.
ಅಲ್ಲಾಹನ ವಿರುದ್ಧ ನೀವು ದರ್ಪ ತೋರದಿರಿ. ನಾನು ಸುಸ್ಪಷ್ಟ ಪುರಾವೆಯೊಂದಿಗೆ ನಿಮ್ಮನ್ನು ಸಮೀಪಿಸಿದ್ದೇನೆ.
ನೀವು ನನ್ನನ್ನು ಕಲ್ಲೆಸೆಯದಿರಲು ನಾನು ನನ್ನ ಮತ್ತು ನಿಮ್ಮ ಪ್ರಭುವಿನ ಅಭಯ ಪಡೆದಿರುತ್ತೇನೆ.
ನೀವು ನನ್ನಲ್ಲಿ ವಿಶ್ವಾಸ ಹೊಂದದಿದ್ದಲ್ಲಿ ನನ್ನನ್ನು ಬಿಟ್ಟು ನೀವು ದೂರ ಸರಿಯಿರಿ.
ಕೊನೆಗೆ ಅವರು ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸಿದರು; `ಇವರೊಂದು ಅಪರಾಧಿ ಜನಾಂಗದ ವರಾಗಿದ್ದಾರೆ’ (ಅವರ ಮೇಲೆ ಆವಶ್ಯ ಕ್ರಮ ಕೈಗೊಳ್ಳು).
(ಆಗ ಅಲ್ಲಾಹು ಆದೇಶಿಸಿದನು) `ಹಾಗಿದ್ದರೆ ನನ್ನ ದಾಸರನ್ನು (ಇಸ್ರಾಈಲ್‍ರನ್ನು) ಕರೆದುಕೊಂಡು ನೀವು ರಾತ್ರಿಯಲ್ಲಿ ಪ್ರಯಾಣ ಬೆಳೆಸಿರಿ. ನಿಮ್ಮನ್ನು (ಶತ್ರುಗಳಿಂದ) ಬೆನ್ನಟ್ಟಲಾಗುವುದು.
ಸಮುದ್ರವನ್ನು ಶಾಂತವಾಗಿ ಇರಲು ಬಿಡಿರಿ. ಅವರು ಮುಳುಗಿ ನಾಶವಾಗುವ ಒಂದು ಸೈನ್ಯವೇ ಆಗಿದ್ದಾರೆ .
ಅದೆಷ್ಟೋ ಉದ್ಯಾನಗಳನ್ನೂ ಚಿಲುಮೆ ಗಳನ್ನೂ ಹೊಲಗಳನ್ನೂ ಭವ್ಯ ನಿವಾಸಗಳನ್ನೂ ಅವರು ಬಿಟ್ಟು ಹೋದರು.
ಅವರು ಆಹ್ಲಾದಪೂರ್ವಕ ಸುಖಿಸುತ್ತಿದ್ದ ಎಷ್ಟೋ ಭೋಗ ಸಾಮಗ್ರಿಗಳು!
(ಅವರ ಅಂತ್ಯ) ಹಾಗೆ ಸಂಭವಿಸಿತು. ನಾವು ಬೇರೊಂದು ಜನತೆಯನ್ನು ಈ ವಸ್ತುಗಳ ವಾರಿಸುದಾರರಾಗಿ ಮಾಡಿದೆವು.
ಆಗ ಆಕಾಶವಾಗಲಿ-ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ. ಒಂದಿಷ್ಟು ಕಾಲಾವಕಾಶವೂ ಅವರಿಗೆ ಲಭಿಸಲಿಲ್ಲ.
ಇಸ್ರಾಈಲ್ ಸಂತತಿಗಳನ್ನು ನಿಂದನೀಯ ಶಿಕ್ಷೆಯಿಂದ ಅಂದರೆ ಫಿರ್‍ಔನ್‍ನಿಂದ ನಾವು ರಕ್ಷಿಸಿದೆವು. ಅವನು ನಿಜಕ್ಕೂ ಅತಿಕ್ರಮಿಗಳಲ್ಲಿ ಒಳಪಟ್ಟ ಅಹಂಕಾರಿಯಾಗಿದ್ದನು.
(ಇಸ್ರಾಈಲ್ ಜನಾಂಗದ ಅವಸ್ಥೆಯನ್ನು) ತಿಳಿದುಕೊಂಡೇ ನಾವು ಅವರನ್ನು ಜಗತ್ತಿನ ಇತರ ಜನತೆಗಿಂತ ಉತ್ಕøಷ್ಟರಾಗಿ ಆಯ್ಕೆ ಮಾಡಿದೆವು.
ಸುಸ್ಪಷ್ಟ ಪರೀಕ್ಷೆಯಿದ್ದ ಕೆಲವು ನಿದರ್ಶನಗಳನ್ನೂ ನಾವು ಅವರಿಗೆ (ತೋರಿಸಿ)ಕೊಟ್ಟೆವು.
ಅವರು ಹೇಳುತ್ತಾರೆ; ‘ನಮ್ಮ ಪ್ರಥಮ ಬಾರಿ ಯ ಮೃತ್ಯುವಿನ ಹೊರತು ಬೇರೇನೂ ಇಲ್ಲ. ನಾವು ಪುನಃ ಎಬ್ಬಿಸಲ್ಪಡುವವರೂ ಅಲ್ಲ’.
ನೀವು ಸತ್ಯವಾದಿಯಾಗಿದ್ದರೆ ನಮ್ಮ ಪೂರ್ವಜರನ್ನು ಎಬ್ಬಿಸಿ ತನ್ನಿರಿ’.
ಇವರೋ ಉತ್ತಮರು? ಅಥವಾ ತುಬ್ಬಅï ಜನಾಂಗ ಮತ್ತು ಅದಕ್ಕಿಂತ ಹಿಂದಿನವರು ಉತ್ತಮರೋ? ಏಕೆಂದರೆ ನಾವು ಅವರನ್ನು ನಾಶಗೊಳಿಸಿದೆವು. ಅವರು ಅಪರಾಧಿಗಳಾಗಿದ್ದರು.
ಆಕಾಶಗಳನ್ನೂ-ಭೂಮಿಯನ್ನೂ ಅವುಗಳ ನಡುವೆ ಇರುವ ವಸ್ತುಗಳನ್ನೂ ನಾವು ವಿನೋದವಾಗಿ ಸೃಷ್ಟಿಸಿದ್ದಲ್ಲ.
ನಾವು ಅವೆರಡನ್ನು ಸತ್ಯಪೂರ್ಣವಾಗಿ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
ಅವರೆಲ್ಲರ ನಿಶ್ಚಿತ ಸಮಯವು ಆ ನಿರ್ಣಾಯಕ ತೀರ್ಪಿನ ದಿನವಾಗಿದೆ.
ಯಾವನೇ ಬಂಧು ತನ್ನ ಇನ್ನೊಬ್ಬ ಬಂಧುವಿಗೆ ಸ್ವಲ್ಪವೂ ಪ್ರಯೋಜನ ಕೊಡದ ಮತ್ತು ಅವರಿಗೆ ಯಾವ ಸಹಾಯವೂ ಲಭಿಸದ ದಿನ.
ಅಲ್ಲಾಹನು ಕೃಪೆ ತೋರಿದವರ ಹೊರತು. ಅವನು ಮಹಾ ಪ್ರತಾಪಿಯೂ, ದಯಾನಿಧಿಯೂ ಆಗಿರುತ್ತಾನೆ.
ಖಂಡಿತ ಝಖ್ಖೂಮ್ ವೃಕ್ಷವು (ನರಕದಲ್ಲಿ) ಪಾಪಿಗಳ ಆಹಾರ.
ಅದು ಉರಿಲೋಹದಂತೆ. ಅದು ಅವರ ಹೊಟ್ಟೆಯೊಳಗೆ ಕುದಿಯುತ್ತಿರುವುದು ಬಿಸಿ ನೀರು ಕುದಿಯುತ್ತಿರುವಂತೆ.
ಅವನನ್ನು ಹಿಡಿಯಿರಿ, ಆಮೇಲೆ ನರಕದ ಮಧ್ಯಕ್ಕೆ ಎಳೆದೊಯ್ಯಿರಿ.
ಅನಂತರ ಕುದಿಯುವ ಬಿಸಿ ನೀರಿನ ಶಿಕ್ಷೆಯನ್ನು ಅವನ ತಲೆಯ ಮೇಲೆ ಸುರಿದು ಬಿಡಿರಿ.
“ನೀನು ಇದರ ರುಚಿಯನ್ನು ಸವಿದುಕೋ, ಖಂಡಿತಾ ನೀನೊಬ್ಬ ಪ್ರತಾಪಿಯೂ, ಮರ್ಯಾದಸ್ಥನೂ ಆಗಿದ್ದೀಯಲ್ಲ?”
ನೀವೆಲ್ಲ ಸಂದೇಹಪಡುತ್ತಿದ್ದ ಶಿಕ್ಷೆ ಖಂಡಿತಾ ಇದುವೇ ಆಗಿದೆ.
ನಿಜವಾಗಿಯೂ ಭಕ್ತರು ಸುರಕ್ಷಿತ ತಾಣದಲ್ಲಿರುವರು.
ಕೆಲವು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ.
ತೆಳು ರೇಶ್ಮೆ ಹಾಗೂ ದೊರಗಿನ ರೇಶ್ಮೆ ಬಟ್ಟೆಗಳನ್ನು ಧರಿಸಿಕೊಂಡು ಎದುರು ಬದುರಾಗಿ (ಕುಳಿತಿರುವರು).
ಅವರ ಅವಸ್ಥೆ ಹಾಗಿರುವುದು. ಬಿಳಿ ಬಣ್ಣದ, ವಿಶಾಲ ನಯನಗಳುಳ್ಳ ತರುಣಿಯರನ್ನು ನಾವು ಅವರಿಗೆ ವಿವಾಹ ಮಾಡಿಸುವೆವು.
ಅಲ್ಲಿ ಅವರು ನಿಶ್ಚಿಂತರಾಗಿ ಎಲ್ಲ ತರದ ರುಚಿ ಕರವಾದ ಫಲ ವಸ್ತುಗಳನ್ನು ಅವಶ್ಯಪಡುವರು.
(ಭೂಲೋಕದಲ್ಲಿ) ಮೊದಲು ಬಂದ ಮರಣದ ಹೊರತು ಅಲ್ಲಿ ಮರಣದ ರುಚಿಯನ್ನು ಅವರು ಸವಿಯಲಾರರು. ಅಲ್ಲಾಹನು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸುವನು.
ತಮ್ಮ ಪ್ರಭುವಿನ ಮಹಾ ಔದಾರ್ಯದಿಂದ (ಇವೆಲ್ಲವೂ ಲಭಿಸುವುದು). ಅದುವೇ ಅತೀ ದೊಡ್ಡ ಯಶಸ್ಸು.
(ದೂತರೇ,) ಅವರು ಯೋಚಿಸಿ ಗ್ರಹಿಸಲೆಂದು ನಾವು ಇದನ್ನು (ಖುರ್‍ಆನನ್ನು) ತಮ್ಮ ಭಾಷೆಯಲ್ಲಿ ಸರಳಗೊಳಿಸಿದ್ದೇವೆ.
ಇನ್ನು ತಾವೂ ಕಾಯಿರಿ, ಅವರೂ ಕಾಯುತ್ತಿದ್ದಾರೆ.