ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು. ಎರಡೆರಡು, ಮೂರು ಮೂರು ಹಾಗೂ ನಾಲ್ಕು ನಾಲ್ಕು ರೆಕ್ಕೆಗಳಿರುವ ದೇವಚರರನ್ನು ದೂತರನ್ನಾಗಿ ನೇಮಿಸಿದವನು. ಅವನು ತನ್ನ ಸೃಷ್ಟಿಯಲ್ಲಿ ತಾನಿಚ್ಚಿಸಿದ್ದನ್ನು ಹೆಚ್ಚಿಸುತ್ತಾನೆ. ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.
ಅಲ್ಲಾಹನು ಜನರಿಗೆ ಯಾವ ಅನುಗ್ರಹವನ್ನು ತೆರೆದರೂ ಅದನ್ನು ತಡೆಯುವವನಿಲ್ಲ. ಅವನು ಯಾವುದನ್ನು ತಡೆಹಿಡಿದನೋ ಅದರ ನಂತರ ಅದನ್ನು ಬಿಟ್ಟು ಕೊಡುವವನಿಲ್ಲ. ಅವನು ಅತ್ಯಂತ ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
ಜನರೇ, ನಿಮ್ಮ ಮೇಲೆ ಮಾಡಿಕೊಟ್ಟ ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ಅಲ್ಲಾಹನ ಹೊರತು ಆಕಾಶ ಮತ್ತು ಭೂಮಿಯಿಂದ ನಿಮಗೆ ಆಹಾರ ನೀಡುವ ಬೇರೆ ಸೃಷ್ಟಿಕರ್ತನಿರುವನೇ? ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿದ್ದೂ ನೀವು (ಸತ್ಯದಿಂದ) ತಪ್ಪಿ ಬಿಡುವುದು ಹೇಗೆ?
(ಪೈಗಂಬರರೇ) ಇವರು ನಿಮ್ಮನ್ನು ಸುಳ್ಳಾಗಿಸುತ್ತಿದ್ದರೆ, ನಿಮಗಿಂತ ಮುಂಚೆಯೂ ಅನೇಕ ಸಂದೇಶವಾಹಕರು ಸುಳ್ಳಾಗಿಸಲ್ಪಟ್ಟಿದ್ದಾರೆ. (ಆದ್ದರಿಂದ ಅವರು ಕ್ಷಮಿಸಿದಂತೆ ನೀವು ಕ್ಷಮಿಸಿರಿ) ಕಾರ್ಯಗಳು ಅಲ್ಲಾಹನೆಡೆಗೇ ಮರಳಲಿವೆ.
ಜನರೇ, ಅಲ್ಲಾಹನ ವಾಗ್ದಾನವು ಖಂಡಿತ ಸತ್ಯ. ಆದುದರಿಂದ ಲೌಕಿಕ ಜೀವನವು ನಿಮ್ಮನ್ನು ವಂಚಿ ಸದಿರಲಿ. ಆ ಮಹಾಧೂರ್ತನು (ಶೈತಾನನು) ಅಲ್ಲಾಹನ ಬಗ್ಗೆ ನಿಮ್ಮನ್ನು ವಂಚಿಸದಿರಲಿ.
ಖಂಡಿತ ಶೈತಾನನು ನಿಮ್ಮ ಶತ್ರುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಶತ್ರುವನ್ನಾಗಿ ಮಾಡಿರಿ. ಅವನು ತನ್ನ ಪಕ್ಷದವರನ್ನು ಅವರು ನರಕವಾಸಿಗಳಲ್ಲಿ ಸೇರಲೆಂದೇ ಆಹ್ವಾನಿಸುತ್ತಿದ್ದಾನೆ .
ಸತ್ಯವನ್ನು ನಿಷೇಧಿಸುವವರಿಗೆ ಘೋರ ಯಾತನೆ ಕಾದಿದೆ. ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮ ವೆಸಗಿದವರಿಗೆ ಪಾಪ ಮುಕ್ತಿಯೂ ಮಹಾ ಸತ್ಫಲವೂ ಇದೆ.
ಯಾರಿಗೆ ಅವನ ದುಷ್ಕರ್ಮವು ಚಂದಗೊಂಡು ಕೊನೆಗೆ ಅದು ಉತ್ತಮವಾಗಿ ಕಂಡಿತೋ ಅವನು ಸನ್ಮಾರ್ಗ ಪ್ರಾಪ್ತನಂತೆ ಆಗುವನೇ? ಅಲ್ಲಾಹು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ. ತಾನಿಚ್ಛಿಸಿದವರನ್ನು ನೇರ ದಾರಿಗೆ ತರುತ್ತಾನೆ. ಆದುದರಿಂದ ಇವರ ಮೇಲಿನ ವ್ಯಥೆಯಿಂದ ನಿಮ್ಮ ಪ್ರಾಣ ಹೋಗದಿರಲಿ. ಅಲ್ಲಾಹನು ಇವರು ಮಾಡುತ್ತಿರುವುದನ್ನು ಚೆನ್ನಾಗಿ ಅರಿಯುತ್ತಾನೆ.
ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅನಂತರ ಅವುಗಳು ಮೋಡಗಳನ್ನು ಎಬ್ಬಿಸುತ್ತವೆ. ತರುವಾಯ ನಾವು ಅದನ್ನು ಒಂದು ನಿರ್ಜೀವ ಪ್ರದೇಶದ ಕಡೆಗೆ ಒಯ್ಯುತ್ತೇವೆ. ಆಮೇಲೆ ಅದರ ಮೂಲಕ ಆ ಭೂಮಿಯನ್ನು ಅದರ ಸಾವಿನ ಬಳಿಕ ಜೀವಂತಗೊಳಿಸುತ್ತೇವೆ. ಪುನರುಜ್ಜೀವನವೂ ಹೀಗೆಯೇ ಆಗುವುದು.
ಯಾರು ಪ್ರತಾಪವನ್ನು ಇಚ್ಚಿಸುತ್ತಾನೆ (ಅವನು ಅಲ್ಲಾಹನ ಅನುಸರಣೆ ಮಾಡಲಿ. ಏಕೆಂದರೆ) ಪ್ರತಾಪವು ಸರ್ವ ಸಂಪೂರ್ಣವಾಗಿ ಅಲ್ಲಾಹನದ್ದು. ಪರಿಶುದ್ಧ ವಚನವು ಏರಿ ಹೋಗುವುದು ಅವನ ಕಡೆಗಾಗಿದೆ. ಸತ್ಕರ್ಮವು ಅವನ ಕಡೆಗೇ ಏರಿ ಹೋಗುತ್ತದೆ. ಕೆಟ್ಟ ತಂತ್ರಗಳನ್ನು ಹೂಡುವ ವರಿಗೆ ಕಠಿಣ ಶಿಕ್ಷೆ ಇದೆ. ಅವರ ಕುತಂತ್ರವು ನಾಶವಾಗಿ ಹೋಗಲಿದೆ.
ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದನು. ತರುವಾಯ ವೀರ್ಯದಿಂದ. ಅನಂತರ ನಿಮ್ಮ ನ್ನು (ಗಂಡು-ಹೆಣ್ಣು) ಜೋಡಿಗಳಾಗಿ ಮಾಡಿದನು. ಅಲ್ಲಾಹನಿಗೆ ಅರಿವಿಲ್ಲದೆ ಯಾವ ಸ್ತ್ರೀಯೂ ಗರ್ಭ ಧರಿಸುವುದಿಲ್ಲ. ಹೆರುವುದೂ ಇಲ್ಲ. ಯಾವನೇ ಆಯುಷಿಗೆ ಆಯುಷ್ಯ ಕೊಡುವುದಾಗಲಿ, ಆಯುಷ್ಯದಿಂದ ಕಡಿತ ಮಾಡುವುದಾಗಲೀ ಒಂದು ಗ್ರಂಥದಲ್ಲಿ ಲಿಖಿತವಾಗಿರದೆ ಸಂಭವಿಸುವುದಿಲ್ಲ. ಇದು ಅಲ್ಲಾಹನಿಗೆ ಬಲು ಸುಲಭ.
ಎರಡು ಸಮುದ್ರಗಳು ಸಮಾನವಲ್ಲ, ಇದು ಕುಡಿಯಲು ಹಿತವಾದ, ಸ್ವಾದಿಷ್ಠ ಸಿಹಿನೀರು. ಇನ್ನೊಂದು ತೀವ್ರ ಉಪ್ಪು! ಎರಡು ನೀರಿಂದಲೂ ನೀವು ತಾಜಾ ಮಾಂಸವನ್ನು ತಿನ್ನುತ್ತೀರಿ. ನೀವು ಧರಿಸುವ ಆಭರಣಗಳನ್ನು ಹೊರ ತೆಗೆಯುತ್ತೀರಿ. ಸಮುದ್ರದಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇದು ಅಲ್ಲಾಹನ ಅನುಗ್ರಹದಿಂದ ನೀವು ಹುಡುಕಿ ತೆಗೆಯಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ.
ಅವನು ರಾತ್ರಿಯನ್ನು ಹಗಲಿಗೂ ಹಗಲನ್ನು ರಾತ್ರಿಗೂ ದಾಟಿಸುತ್ತಾನೆ. ಸೂರ್ಯ ಚಂದ್ರರನ್ನು ಅವನು ನಿಯಂತ್ರಿಸಿದನು. ಎಲ್ಲ ಒಂದು ನಿಶ್ಚಿತ ಅವಧಿಗೆ ನಡೆಯುತ್ತ ಸಾಗುತ್ತಿದೆ. ಈ ಅಲ್ಲಾಹ ನೇ ನಿಮ್ಮ ಪ್ರಭು. ಪ್ರಭುತ್ವವು ಅವನದ್ದು. ಅವ ನನ್ನು ಬಿಟ್ಟು ನೀವು ಆರಾಧಿಸುವವರು ಒಂದು ಈತ ಬೀಜದ ಸಿಪ್ಪೆಯ ಒಡೆಯರೂ ಅಲ್ಲ.
ನೀವು ಅವರನ್ನು ಕರೆದರೆ ಅವರು ನಿಮ್ಮ ಕರೆಯನ್ನು ಕೇಳಲಾರರು. ಕೇಳಿದರೆಂದು ಸಂಕಲ್ಪಿಸಿದರೂ ಅವರು ಉತ್ತರವನ್ನು ನಿಮಗೆ ಕೊಡಲಾರರು. ಪುನರುತ್ಥಾನ ದಿನ ನಿಮ್ಮ ಪಾಲುಗಾರಿಕೆಯನ್ನು ಅವರು ನಿರಾಕರಿಸುವರು. (ಓ ಮಾನವ) ಸೂಕ್ಷ್ಮವಾಗಿ ತಿಳಿಯುವ ಅಲ್ಲಾಹ ನಂತೆ ಬೇರೊಬ್ಬನು ನಿಮಗೆ ತಿಳಿಸಿಕೊಡಲಿಕ್ಕಿಲ್ಲ.
ಓ ಜನರೇ, ನೀವು ಅಲ್ಲಾಹನೆಡೆಗೆ ಅವಲಂಬಿತರು. ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.
ಅವನಿಚ್ಛಿಸಿದರೆ ನಿಮ್ಮನ್ನು ನಾಶ ಮಾಡಿ ಹೊಸ ಸೃಷ್ಟಿಯನ್ನು ತರಬಲ್ಲನು.
ಅಲ್ಲಾಹನಿಗೆ ಅದೇನೂ ಕಷ್ಟವಲ್ಲ.
ತಪ್ಪಿನ ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. (ಅಪರಾಧದಿಂದ) ಹೊರೆ ಹೊತ್ತ ವ್ಯಕ್ತಿಯು ತನ್ನ ಹೊರೆಯನ್ನು ಹೊರಲು ಇನ್ನೊಬ್ಬನನ್ನು ಕೂಗಿದರೆ, ಅವನ ಆಪ್ತ ಬಂಧುವೇ ಆಗಿದ್ದರೂ ಅವನ ಹೊರೆಯಿಂದ ಒಂದಿಷ್ಟನ್ನೂ ಹೊರಲಾರನು. ಪರೋಕ್ಷವಾಗಿ ತಮ್ಮ ಪ್ರಭುವನ್ನು ಭಯಪಡುವವರಿಗೆ ಮತ್ತು ನಮಾಝ್ ಸಂಸ್ಥಾಪಿಸುವವರಿಗೆ ಮಾತ್ರ ನೀವು ಎಚ್ಚರಿಕೆ ಕೊಡಬಲ್ಲಿರಿ. ಯಾವನು ಶುದ್ಧಿಯಾಗುತ್ತಾನೆ, ಅವನು ತನಗಾಗಿಯೇ ಶುದ್ಧಿಯಾಗು ತ್ತಾನೆ. ನಿರ್ಗಮನ ಅಲ್ಲಾಹನ ಕಡೆಗೇ ಇದೆ.
ಕುರುಡನೂ ದೃಷ್ಟಿಯುಳ್ಳವನೂ ಸಮಾನರಲ್ಲ.
ಇರುಳುಗಳೂ, ಪ್ರಕಾಶವೂ ಅಲ್ಲ.
ನೆರಳೂ ಬಿಸಿಲೂ ಸಮಾನವಲ್ಲ.
ಜೀವಂತರೂ ಮೃತರೂ ಸಮಾನರಲ್ಲ.ಅಲ್ಲಾಹು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ. ಆದರೆ ಸಮಾಧಿ ಗಳಲ್ಲಿರುವವರಿಗೆ ನೀವು ಕೇಳಿಸಲಾರಿರಿ .
ನೀವು ಕೇವಲ ಓರ್ವ ಎಚ್ಚರಿಕೆ ಕೊಡುವವರು ಮಾತ್ರ.
ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ನಿಮ್ಮನ್ನು ನಾವು ಸತ್ಯಸಹಿತ ಕಳುಹಿಸಿರುತ್ತೇವೆ. ಎಚ್ಚರಿಕೆ ಕೊಡುವ ವ್ಯಕ್ತಿಯೊಬ್ಬರು ಬಂದಿರದೆ ಯಾವುದೇ ಸಮುದಾಯ ಗತಿಸಿ ಹೋಗಿಲ್ಲ.
ಇವರು ನಿಮ್ಮನ್ನು ಸುಳ್ಳಾಗಿಸುತ್ತಾರಾದರೆ ಇವರಿಗಿಂತ ಮುಂಚೆ ಗತಿಸಿದವರೂ ಸುಳ್ಳಾಗಿಸಿದ್ದರು. ಅವರ ಸಂದೇಶವಾಹಕರು ಅವರ ಬಳಿಗೆ ಸುಸ್ಪಷ್ಟ ದೃಷ್ಟಾಂತಗಳನ್ನೂ ಕಿರು ಹೊತ್ತಗೆಗಳನ್ನೂ ಹಾಗೂ ಬೆಳಕು ನೀಡುವ ವೇದಗ್ರಂಥವನ್ನೂ ತಂದಿದ್ದರು.
ಅನಂತರ ಸತ್ಯನಿಷೇಧಕರನ್ನು ನಾನು ಹಿಡಿದು ಶಿಕ್ಷಿಸಿದೆನು. ಆಗ ನನ್ನ ಶಿಕ್ಷೆ ಎಷ್ಟು ಕಠಿಣವಾಗಿತ್ತು!
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸುವುದನ್ನೂ ಆ ಬಳಿಕ ಅದರ ಮೂಲಕ ನಾವು (ಅಲ್ಲಾಹು) ವಿಭಿನ್ನ ಬಣ್ಣಗಳಿರುವ ತರತರದ ಫಲಗಳನ್ನು ಹೊರ ತರುವುದನ್ನೂ ನೀವು ನೋಡುವುದಿಲ್ಲವೇ? ಪರ್ವತಗಳಲ್ಲೂ ಬಿಳಿ, ಕೆಂಪು (ಕಡು ಹಾಗೂ ನಸು) ವೈವಿಧ್ಯಮಯ ಬಣ್ಣಗಳ ಮಾರ್ಗರೇಖೆಗಳಿವೆ.ಮತ್ತು ಕಡು ಕಪ್ಪು ಬಂಡೆಗಳೂ ಇವೆ.
ಇದೇ ರೀತಿಯಲ್ಲಿ ಮನುಷ್ಯರಲ್ಲೂ, ಪ್ರಾಣಿಗಳಲ್ಲೂ ಜಾನುವಾರುಗಳಲ್ಲೂ ವಿಭಿನ್ನ ಬಣ್ಣಗಳುಂಟು . ಅಲ್ಲಾಹನ ದಾಸರಲ್ಲಿ ಜ್ಞಾನವುಳ್ಳವರು ಮಾತ್ರ ಅವನನ್ನು ಭಯಪಡುತ್ತಾರೆ . ನಿಶ್ಚಯವಾಗಿಯೂ ಅಲ್ಲಾಹನು ಪ್ರತಾಪಶಾಲಿಯೂ ಕ್ಷಮಾ ಶೀಲನೂ ಆಗಿರುತ್ತಾನೆ.
ಅಲ್ಲಾಹನ ಗ್ರಂಥವನ್ನು ಪಠಿಸುವ, ನಮಾಝ ನ್ನು ನೆಲೆಗೊಳಿಸುವ ಮತ್ತು ನಾವು ಅವರಿಗೆ ಕೊಟ್ಟಿರುವ ಸಂಪತ್ತಿನಿಂದ ರಹಸ್ಯವಾಗಿಯೂ ಪರಸ್ಯವಾಗಿಯೂ ಖರ್ಚು ಮಾಡುವ ಜನರು ನಾಶವಿಲ್ಲದ ಒಂದು ವ್ಯಾಪಾರದ ಆಗ್ರಹದಲ್ಲಿರುವರು.
ಇದರ ಪರಿಣಾಮವು ಅಲ್ಲಾಹು ಅವರ ಸತ್ಫಲವನ್ನು ಸಂಪೂರ್ಣವಾಗಿ ನೀಡುವುದು ಮತ್ತು ಅವನ ಔದಾರ್ಯದಿಂದ ಅವರಿಗೆ ಇನ್ನಷ್ಟು ಹೆಚ್ಚಿಸಿ ಕೊಡುವುದೂ ಆಗಿದೆ. ನಿಶ್ಚಯವಾಗಿಯೂ ಅಲ್ಲಾಹು ಮಹಾಕ್ಷಮಾಶೀಲನೂ ಉದಾರನೂ ಆಗಿರುತ್ತಾನೆ.
ನಾವು ನಿಮ್ಮ ಕಡೆಗೆ ಸಂದೇಶ ಕಳುಹಿಸಿದ ಗ್ರಂಥವೇ ಸತ್ಯವಾಗಿದ್ದು ಅದು ಈ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅಲ್ಲಾಹು ತನ್ನ ದಾಸರ ಬಗ್ಗೆ ಸೂಕ್ಷ್ಮ ಜ್ಞಾನಿಯೂ, ಸೂಕ್ಷ್ಮದರ್ಶಿಯೂ ಆಗಿರುತ್ತಾನೆ.
ಅನಂತರ ನಮ್ಮ ದಾಸರಲ್ಲಿ (ಶ್ರೇಷ್ಟರಾಗಿ) ಆಯ್ದುಕೊಂಡವರಿಗೆ ಈ ಗ್ರಂಥವನ್ನು ನಾವು ಉತ್ತರಾಧಿಕಾರವಾಗಿ ಕೊಟ್ಟೆವು. ಆದರೆ ಅವರಲ್ಲಿ ಕೆಲವರು ತನ್ನ ಮೇಲೆ ತಾನೇ ಅಕ್ರಮವೆಸಗಿದವರು. ಕೆಲವರು ಮಿತತ್ವವನ್ನು ಪಾಲಿಸುವವರು. ಇನ್ನು ಕೆಲವರು ಅಲ್ಲಾಹನ ಇಚ್ಛೆಯಂತೆ ಪುಣ್ಯ ಕಾರ್ಯಗಳಲ್ಲಿ ಮುಂದೆ ದಾಟಿ ಹೋದವರು. ಇದುವೇ ಮಹಾ ಅನುಗ್ರಹ.
ಅವರು ಶಾಶ್ವತವಾದ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವರು. ಅಲ್ಲಿ ಅವರನ್ನು ಬಂಗಾರದ ಕಂಕಣಗಳಿಂದಲೂ ಮುತ್ತುಗಳಿಂದಲೂ ಅಲಂಕರಿಸಲಾಗುವುದು. ಅಲ್ಲಿ ಅವರ ಉಡುಪು ರೇಶ್ಮೆಯ ದ್ದಾಗಿರುವುದು.
ಅವರು, “ನಮ್ಮಿಂದ ದುಃಖವನ್ನು ದೂರೀಕರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಖಂಡಿತ ನಮ್ಮ ಪ್ರಭು ಮಹಾಕ್ಷಮಾದಾನಿಯೂ ಕೃತಜ್ಞತೆಯನ್ನು ಸ್ವೀಕರಿಸುವವನೂ ಆಗಿರುತ್ತಾನೆ.
ಅಂದರೆ ಅವನು ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತ ನಿವಾಸದಲ್ಲಿ ತಂದಿರಿಸಿದನು. ಇಲ್ಲಿ ನಮಗೆ ಯಾವುದೇ ಕಷ್ಟ ಉಂಟಾಗದು. ಒಂದಿಷ್ಟು ಆಯಾಸವೂ ಬಾಧಿಸದು” ಎನ್ನುವರು.
ಸತ್ಯನಿಷೇಧಿಗಳಿಗೆ ನರಕಾಗ್ನಿ ಇದೆ. ಅವರಿಗೆ ಮರಣವನ್ನು ವಿಧಿಸಲಾಗುವುದಿಲ್ಲ. ಹಾಗಿದ್ದರೆ ಸತ್ತು ಹೋಗುತ್ತಿದ್ದರು. ನರಕ ಶಿಕ್ಷೆಯಿಂದ ಅವರಿಗೆ ಕಡಿತ ಮಾಡಲಾಗುವುದೂ ಇಲ್ಲ. ನಾವು ಎಲ್ಲ ಸತ್ಯನಿಷೇಧಿಗೂ ಇದೇ ರೀತಿ ಪ್ರತಿಫಲ ಕೊಡುತ್ತೇವೆ.
ಅಲ್ಲಿ ಅವರು ಚೀರಾಡುವರು. “ನಮ್ಮ ಪ್ರಭೂ, ನೀನು ನಮ್ಮನ್ನು ಒಮ್ಮೆ ಹೊರಹಾಕು. ಆಗ ನಾವು ಹಿಂದೆ ಮಾಡುತ್ತಿದ್ದಂತಹ ಕರ್ಮಗಳಿಗಿಂತ ಭಿನ್ನವಾದ ಸತ್ಕರ್ಮವನ್ನು ಮಾಡುತ್ತೇವೆ”. “ಯೋಚಿಸುವವರಿಗೆ ಅರ್ಥಮಾಡಿಕೊಳ್ಳಲು ಸಾಕಾಗುವಷ್ಟು ಆಯುಷ್ಯವನ್ನು ನಾವು ನಿಮಗೆ ಕೊಟ್ಟಿರಲಿಲ್ಲವೇ? ನಿಮ್ಮ ಬಳಿಗೆ ಎಚ್ಚರಿಕೆ ಕೊಡು ವವರೂ ಬಂದಿದ್ದರಲ್ಲವೇ? ಆದ್ದರಿಂದ ಈಗ ಸವಿಯಿರಿ, ಇನ್ನು ಅಕ್ರಮಿಗಳಿಗೆ ಯಾರೂ ಸಹಾಯ ಕನಿಲ್ಲ” (ಎಂದು ಅವರಿಗೆ ಉತ್ತರಿಸಲಾಗುವುದು.)
ನಿಜವಾಗಿಯೂ ಅಲ್ಲಾಹು ಆಕಾಶಗಳ ಮತ್ತು ಭೂಮಿಯ ಅದೃಶ್ಯ ಜ್ಞಾನಿ. ಅವನು ಹೃದಯಂತರಾಳವನ್ನು ಬಲ್ಲ ಸೂಕ್ಷ್ಮಜ್ಞಾನಿ.
ಅವನು ನಿಮ್ಮನ್ನು ಭೂಮಿಯಲ್ಲಿ (ಗತಜನಾಂ ಗದ) ಪ್ರತಿನಿಧಿಗಳಾಗಿ ಮಾಡಿದವನು. ಆದ್ದರಿಂದ ಯಾರು ಸತ್ಯವನ್ನು ನಿಷೇಧಿಸುತ್ತಾರೆ, ಅವನ ನಿಷೇಧದ ಫಲ ಅವನ ಮೇಲೆಯೇ ಇದೆ. ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ಅವರ ಪ್ರಭುವಿನ ಬಳಿ ಉಗ್ರ ಕ್ರೋಧವನ್ನಲ್ಲದೆ ಹೆಚ್ಚಿಸುವುದಿಲ್ಲ. ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇ ಧವು ಭಾರೀ ನಷ್ಟವನ್ನೇ ಹೊರತು ಬೇರೇನನ್ನೂ ಹೆಚ್ಚಿಸುವುದಿಲ್ಲ.
(ಪೈಗಂಬರರೇ) ಹೇಳಿರಿ : ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿರುವ ನಿಮ್ಮ ಸಹಭಾಗಿಗ ಳನ್ನು ಕಂಡಿದ್ದೀರಾ? (ಇವರ ಬಗ್ಗೆ ನೀವೇನೆನ್ನುವಿರಿ?) ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿದ್ದಾರೆ? ಅಥವಾ ಆಕಾಶಗಳಲ್ಲಿ ಅವರ ಪಾಲು ಏನೆಂದು ನನಗೆ ತೋರಿಸಿರಿ. ಇಲ್ಲವೇ ಇವರಿಗೆ ನಾವು ಯಾವುದೇ ವೇದಗ್ರಂಥವನ್ನು (ಪ್ರತ್ಯೇಕವಾಗಿ) ಕೊಟ್ಟಿದ್ದೇವೆಯೇ? ಆಮೇಲೆ ಅದರಿಂದ ಯಾವುದೇ ಆಧಾರದ ಮೇಲೆ ಅವರು ನೆಲೆ ಗೊಂಡಿದ್ದಾರೆಯೇ? ಇಲ್ಲ. ಅಕ್ರಮಿಗಳು ಪರಸ್ಪರ ಮೋಸದ ಭರವಸೆಗಳನ್ನು ಮಾತ್ರ ನೀಡಬಲ್ಲರು.
ನಿಶ್ಚಯವಾಗಿಯೂ ಭೂಮಿ-ಆಕಾಶಗಳು (ಅವುಗಳ ಸ್ಥಾನದಿಂದ) ಸರಿದು ಹೋಗದಂತೆ ಅಲ್ಲಾಹನು ಹಿಡಿದಿಟ್ಟಿರುವನು. ಅವು ಸರಿದು ಹೋದರೆ, ಅಲ್ಲಾಹನೇ ಹೊರತು ಅವುಗಳನ್ನು ನಿಯಂತ್ರಿಸಿ ನಿಲ್ಲಿಸಲು ಬೇರಾರಿಗೂ ಸಾಧ್ಯವಿಲ್ಲ. ಅಲ್ಲಾಹು ಅತ್ಯಂತ ಸಹನಶೀಲನೂ ಕ್ಷಮಾಶೀಲನೂ ಆಗಿರುತ್ತಾನೆ.
ನಿಶ್ಚಯವಾಗಿಯೂ ಭೂಮಿ-ಆಕಾಶಗಳು (ಅವುಗಳ ಸ್ಥಾನದಿಂದ) ಸರಿದು ಹೋಗದಂತೆ ಅಲ್ಲಾಹನು ಹಿಡಿದಿಟ್ಟಿರುವನು. ಅವು ಸರಿದು ಹೋದರೆ, ಅಲ್ಲಾಹನೇ ಹೊರತು ಅವುಗಳನ್ನು ನಿಯಂತ್ರಿಸಿ ನಿಲ್ಲಿಸಲು ಬೇರಾರಿಗೂ ಸಾಧ್ಯವಿಲ್ಲ. ಅಲ್ಲಾಹು ಅತ್ಯಂತ ಸಹನಶೀಲನೂ ಕ್ಷಮಾಶೀಲನೂ ಆಗಿರುತ್ತಾನೆ.
ಇವರು ಭೂಮಿಯಲ್ಲಿ ಗರ್ವ ತೋರಿದುದಕ್ಕಾಗಿ ಮತ್ತು ಕೀಳುಮಟ್ಟದ ಕುತಂತ್ರಗಳನ್ನು ಹೂಡಿದ್ದಕ್ಕಾಗಿ. ನಿಜದಲ್ಲಿ ಕೆಟ್ಟಕುತಂತ್ರಗಳ ಫಲ ಅದರ ಜನರನ್ನೇ ಅಧೋಗತಿಗೆ ಇಳಿಸಿ ಬಿಡುತ್ತವೆ. ಆಗ ಗತ ಜನಾಂಗದ ಮೇಲೆ ಅಲ್ಲಾಹನು ಕೈಗೊಂಡ ಕ್ರಮವನ್ನೇ ಹೊರತು ಬೇರೇನನ್ನು ಇವರು ನಿರೀಕ್ಷಿಸುತ್ತಿರುವರು? ಹಾಗಿದ್ದರೆ ನೀವು ಅಲ್ಲಾಹನ ಕಾರ್ಯಾ ಚರಣೆಗೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ. ಅಲ್ಲಾಹನ ಕಾರ್ಯಾಚರಣೆಗೆ ಯಾವುದೇ ಸ್ಥಾನಪಲ್ಲಟವನ್ನು ನೀವು ಕಾಣಲಾರಿರಿ.
ಇವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚೆ ಗತಿಸಿದವರ ಪರಿಣಾಮವೇನಾಯಿ ತೆಂದು ನೋಡಲಿಲ್ಲವೇ? ಅವರು ಇವರಿಗಿಂತ ಅಧಿಕ ಬಲಶಾಲಿಗಳಾಗಿದ್ದರು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಸೋಲಿಸಬಲ್ಲ ಯಾವ ಶಕ್ತಿಯೂ ಇಲ್ಲ. ಅವನು ಸರ್ವಜ್ಞನು ಮತ್ತು ಸರ್ವಶಕ್ತನು.
ಜನರು ಮಾಡಿದ ದುಷ್ಕರ್ಮಗಳಿಗಾಗಿ ಅಲ್ಲಾ ಹನು ಅವರನ್ನು (ತ್ವರಿತವಾಗಿ) ಹಿಡಿದು ಶಿಕ್ಷಿಸುತ್ತಿದ್ದರೆ, ಭೂಮಿಯ ಮೇಲೆ ಒಂದು ಜೀವಿಯನ್ನೂ ಜೀವಂತ ಬಿಡುತ್ತಿರಲಿಲ್ಲ. ಆದರೆ, ಅವನು ಅವರಿಗೆ ಒಂದು ನಿಶ್ಚಿತ ಸಮಯದವರೆಗೆ ಕಾಲಾವಕಾಶ ಕೊಡುವನು. ಅನಂತರ ಅವರ ನಿಶ್ಚಿತ ಕಾಲ ಬಂದಾಗ ಅಲ್ಲಾಹು ತನ್ನ ದಾಸರನ್ನು ನೋಡಿ ಕೊಳ್ಳುವನು. (ತಕ್ಕ ಪ್ರತಿಫಲ ಕೊಡುವನು).