All Islam Directory
1

ಅಲಿಫ್ ಲಾಮ್ ಮೀಮ್

2

ಅಲ್ಲಾಹನಲ್ಲದೆ ಬೇರೆ ದೇವನಿಲ್ಲ. ಅವನು ಚಿರಂಜೀವಿ. ಸ್ಥಿರನಿತ್ಯ ನಿಯಂತ್ರಕ.

3

(ಓ ಪ್ರವಾದಿಯರೇ) ಅವನು ಈ ಗ್ರಂಥವನ್ನು ಸತ್ಯಸಂಧ ವಾಗಿ, ಹಿಂದಿನ ವೇದಗ್ರಂಥಗಳ ದೃಢೀಕರಣವಾಗಿ ನಿಮಗೆ ಅವತೀರ್ಣಗೊಳಿಸಿದನು. ಇದಕ್ಕೂ ಮುನ್ನ ಜನರಿಗೆ ಮಾರ್ಗ ದರ್ಶನಕ್ಕಾಗಿ ತೌರಾತ್ ಹಾಗೂ ಇಂಜೀಲನ್ನು ಅವನು ಅವತೀರ್ಣ ಗೊಳಿಸಿದ್ದನು.

4

ಮತ್ತು ವಿವೇಚಕ ಗ್ರಂಥವನ್ನೂ ಅವನು ಅವತೀರ್ಣಗೊಳಿಸಿದನು. ಯಾರು ಅಲ್ಲಾಹನ ಪುರಾವೆಗಳನ್ನು ನಿಷೇಧಿಸುತ್ತಾರೆ, ಅವರಿಗೆ ಕಠೋರ ಶಿಕ್ಷೆಯಿದೆ. ಅಲ್ಲಾಹನು ಪ್ರತಾಪಶಾಲಿಯೂ ದಂಡಕನೂ ಆಗಿರುವನು.

5

ಭೂಮಿ, ಆಕಾಶದಲ್ಲಿರುವ ಯಾವುದೇ ವಸ್ತು ಅಲ್ಲಾಹನಿಗೆ ಮರೆಯಾಗಿಲ್ಲ.

6

ಅವನು ತಾನಿಚ್ಛಿಸಿದಂತೆ ಗರ್ಭಕೋಶಗಳಲ್ಲಿ ನಿಮ್ಮನ್ನು ರೂಪಿಸುತ್ತಾನೆ. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಅವನು ಪರಮ ಪ್ರತಾಪಿಯು, ಯುಕ್ತಿಪೂರ್ಣನು.

7

ಅವನು ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿ ದನು. ಇದರಲ್ಲಿ ಪ್ರಮಾಣ ಸ್ಪಷ್ಟ ಶ್ಲೋಕಗಳಿವೆ. ಅವೇ ಗ್ರಂಥದ ಮೂಲ. ಇದರಲ್ಲಿ ಅವ್ಯಕ್ತವಾದ ಕೆಲವು ಶ್ಲೋಕ ಗಳೂ ಇವೆ . ಕೆಲವು ವಿಕೃತ ಮನಸ್ಕರು ಪಿತೂರಿ ಎಬ್ಬಿಸಲು ಮತ್ತು ಸ್ವಂತ ವ್ಯಾಖ್ಯಾನ ನೀಡಲಿಚ್ಛಿಸಿ ಅಂಥವುಗಳ ಹಿಂದೆ ಬೀಳುತ್ತಾರೆ. ಆದರೆ ಅದರ ನಿಜಾರ್ಥ ಅಲ್ಲಾಹನ ಹೊರತು ಇನ್ನಾರಿಗೂ ತಿಳಿಯದು. ಆಳ ಜ್ಞಾನವುಳ್ಳವರು ``ಎಲ್ಲವೂ ನಮ್ಮ ಪ್ರಭುವಿನ ಕಡೆಯಿಂದಲೇ ಬಂದಿದ್ದು, ನಾವು ಅವುಗಳನ್ನು ಸರಿಯಾಗಿ ನಂಬಿದ್ದೇವೆ’’ ಎನ್ನುತ್ತಾರೆ. ಬುದ್ಧಿವಂತರು ಮಾತ್ರ ಯೋಚಿಸಿ ಗ್ರಹಿಸಬಲ್ಲರು.

8

“ಓ ನಮ್ಮ ಪಾಲಕ ಪ್ರಭು! ನೀನು ನಮ್ಮನ್ನು ನೇರ ದಾರಿಗೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ತಪ್ಪಿಸದಿರು. ನಿನ್ನ ಕಡೆಯಿಂದ ನಮಗೆ ಅನುಗ್ರಹವನ್ನು ದಯಪಾಲಿಸು. ನೀನು ಪರಮದಾನಿಯೆಂಬುದು ದಿಟ.

9

ಓ ನಮ್ಮ ಪಾಲಕ ಪ್ರಭು! ನೀನು ಮನುಷ್ಯರನ್ನು ಒಂದು ಗೂಡಿಸಲಿರುವ ದಿನದ ಬಗ್ಗೆ ನಮಗೆ ಯಾವ ಸಂಶಯವೂ ಉಳಿದಿಲ್ಲ. ಅಲ್ಲಾಹನು ಖಂಡಿತ ವಚನಭಂಗ ಮಾಡಲಾರನು”.

10

ಸತ್ಯನಿಷೇಧಿಗಳಿಗೆ ತಮ್ಮ ಸಂಪತ್ತುಗಳಾಗಲಿ ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡಲು ಸ್ವಲ್ಪವೂ ಫಲಕಾರಿಯಾಗದು. ಅವರೇ ನರಕದ ಉರುವಲುಗಳು.

11

ಇವರ ಅವಸ್ಥೆ ನಮ್ಮ ಪುರಾವೆಗಳನ್ನು ಸುಳ್ಳಾಗಿಸಿದ ಫಿರ್‍ಔನನ ಜನಾಂಗ ಹಾಗೂ ಅವರ ಪೂರ್ವಜರ ಅವಸ್ಥೆಯಂತಿದೆ. ಅವರ ಪಾಪಗಳ ಕಾರಣದಿಂದ ಅಲ್ಲಾಹನು ಅವರನ್ನು ಶಿಕ್ಷಿಸಿದನು. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನು.

12

ಸತ್ಯನಿಷೇಧಕರಿಗೆ ಹೇಳಿರಿ, ನೀವು ಸೋಲುವಿರಿ. ಬಹಳ ನಿಕೃಷ್ಟ ತಾಣವಾದ ನರಕಕ್ಕೆ ನೀವು ಅಟ್ಟಲ್ಪಡುವಿರಿ.

13

ಪರಸ್ಪರ ಎದುರುಗೊಂಡ ಎರಡು ತಂಡಗಳಲ್ಲಿ ನಿಮಗೆ ಪಾಠವಿದೆ. ಒಂದು ತಂಡವು ಅಲ್ಲಾಹನ ಮಾರ್ಗದಲ್ಲಿ ಹೋರಾಡಿತು. ಇನ್ನೊಂದು ತಂಡ ಸತ್ಯನಿಷೇಧಿಗಳಾಗಿದ್ದು ಇವರು ಅವರಿಗೆ ಇಮ್ಮಡಿಯಾಗಿ ಗೋಚರಿಸಿದರು. ಅಲ್ಲಾಹನು ತಾನಿಚ್ಛಿಸಿದವರನ್ನು ಸಹಾಯ ಮಾಡಿ ಬಲಿಷ್ಠ ಗೊಳಿಸುತ್ತಾನೆ. ಕಣ್ಣುಳ್ಳವರಿಗೆ ಇದರಲ್ಲಿ ಮಹತ್ತರ ಪಾಠವುಂಟು .

14

ಸ್ತ್ರೀಯರು, ಪುತ್ರರು, ರಾಶಿ ಹಾಕಲಾದ ಬೆಳ್ಳಿ ಬಂಗಾರಗಳು, ಉತ್ತಮ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿ ಜಮೀನುಗಳು ಇವೇ ಮುಂತಾದ ಕಾಮ್ಯ ವಸ್ತುಗಳ ಪ್ರೀತಿಯನ್ನು ಮನುಷ್ಯರಿಗೆ ಅಲಂಕಾರವಾಗಿ ಕಾಣಿಸಲಾಗಿದೆ. (ಆದರೆ) ಇವೆಲ್ಲವೂ ಕೇವಲ ಐಹಿಕ ಜೀವನದ ಸಾಮಗ್ರಿಗಳು ಮಾತ್ರ. ಅತ್ಯುತ್ತಮವಾದ ಅಂತ್ಯ ಫಲವು ಅಲ್ಲಾಹನ ಬಳಿಯಾಗಿರುತ್ತದೆ.

15

(ಪ್ರವಾದಿಯವರೇ!) ಹೇಳಿರಿ, ಇವುಗಳಿಗಿಂತ ಉತ್ತಮವಾದವುಗಳನ್ನು ನಾನು ನಿಮಗೆ ಹೇಳಿ ಕೊಡಲೇ? ಧರ್ಮನಿಷ್ಠ ಭಕ್ತರಿಗೆ ಅವರ ಪ್ರಭುವಿನ ಬಳಿ ಕೆಲವು ಉದ್ಯಾನಗಳಿವೆ. ಅವುಗಳ ತಳ ಭಾಗದಲ್ಲಿ ನೀರ್ಝರಿಗಳು ಹರಿಯುತ್ತಿವೆ. ಅವರು ಅದರಲ್ಲಿ ಶಾಶ್ವತರು. ಅಲ್ಲಿ ಅವರಿಗೆ ನಿರ್ಮಲರಾದ ಮಡದಿಯರಿರುವರು. ಅಲ್ಲಾಹನ ಒಲುಮೆಯೂ ಅವರಿಗೆ ಇದೆ. ಅಲ್ಲಾಹನು ತನ್ನ ದಾಸರನ್ನು ಚೆನ್ನಾಗಿ ಕಾಣುವವನಾಗಿರುವನು.

16

ಅವರು ಪ್ರಾರ್ಥಿಸುತ್ತಾರೆ; ನಮ್ಮ ಪ್ರಭು! ಖಂಡಿತ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು.

17

ಅವರು ಸಹನಾಶೀಲರು, ಸತ್ಯನಿಷ್ಠರು, ವಿನಯಾನು ಸರಣೆಯುಳ್ಳವರು, (ಉತ್ತಮ ಮಾರ್ಗದಲ್ಲಿ) ವೆಚ್ಚ ಮಾಡುವವರು, ರಾತ್ರಿಯ ಅಂತಿಮ ಯಾಮದಲ್ಲಿ ಪಾಪವಿಮೋಚನೆಗಾಗಿ ಪ್ರಾರ್ಥಿಸುವವರು.

18

ತಾನಲ್ಲದೆ ಬೇರೆ ಆರಾಧ್ಯನಿಲ್ಲವೆನ್ನುವುದಕ್ಕೆ ಅಲ್ಲಾಹನು ಸಾಕ್ಷ್ಯವಹಿಸಿದ್ದಾನೆ (ಸ್ಪಷ್ಟ ಪುರಾವೆಗಳ ಮೂಲಕ) ಮಲಕ್‍ಗಳೂ ಜ್ಞಾನವಂತರೂ ಅದಕ್ಕೆ ಸಾಕ್ಷ್ಯ ವಹಿಸಿರುತ್ತಾರೆ . ಅವನು ನೀತಿ ಪಾಲಿಸುವವನು. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಆತನು ಅಜೇಯನು, ಯುಕ್ತಿಪೂರ್ಣನು.

19

ಖಂಡಿತವಾಗಿಯೂ ಅಲ್ಲಾಹನ ಬಳಿ ಸ್ವೀಕೃತವಾಗುವ ಧರ್ಮ ಇಸ್ಲಾಮ್ ಮಾತ್ರ. ವೇದಗ್ರಂಥ ನೀಡಲ್ಪಟ್ಟವರು ಅವರಿಗೆ (ಧರ್ಮ) ಜ್ಞಾನ ನೀಡಲ್ಪಟ್ಟ ನಂತರವಲ್ಲದೆ ಭಿನ್ನಾಭಿಪ್ರಾಯ ಹೊಂದಲಿಲ್ಲ. ಂ ಅದು ಅವರ ನಡುವಿನ ಹಗೆ-ಮತ್ಸರ ನಿಮಿತ್ತವಾ ಗಿತ್ತು. ಅಲ್ಲಾಹನ ವಚನಗಳನ್ನು ಯಾರು ನಿಷೇಧಿ ಸುತ್ತಾರೆ, ಖಂಡಿತ ಅಲ್ಲಾಹನು ವಿಚಾರಣೆಯಲ್ಲಿ ಅತಿ ಶೀಘ್ರನು.

20

ಇನ್ನೂ ಅವರು ನಿಮ್ಮೊಡನೆ ವಾಗ್ವಾದ ಮಾಡಿದರೆ ನೀವು ಹೇಳಿರಿ - ‘ನಾನು ನನ್ನನ್ನೇ ಅಲ್ಲಾಹನಿಗೆ ಸಂಪೂರ್ಣವಾಗಿ ಅರ್ಪಿಸಿದ್ದೇನೆ. ನನ್ನನ್ನು ಹಿಂಬಾಲಿಸಿದವರೂ. (ಹಾಗೆಯೇ) ಗ್ರಂಥದವ ರೊಂದಿಗೆ ಹಾಗೂ ನಿರಕ್ಷರಿಗಳೊಂದಿಗೆ (ಅರಬ ರೊಂದಿಗೆ) ಕೇಳಿರಿ, ‘ನೀವು ಅಲ್ಲಾಹನಿಗೆ ಶರಣಾಗಿದ್ದೀರಾ?’ ಹಾಗೆ ಅವರು ಶರಣಾದರೆ, ಅವರು ಖಂಡಿತ ಸತ್ಪಥ ಪಡೆದರು. ಇನ್ನು ಅವರು ಹಿಂಜರಿದರೆ ನಿಮ್ಮ ಬಾಧ್ಯತೆ (ದಿವ್ಯ ಸಂದೇಶ ವನ್ನು) ತಲುಪಿಸಿ ಕೊಡುವುದು ಮಾತ್ರ. ಅಲ್ಲಾಹನು ತನ್ನ ದಾಸರನ್ನು ಚೆನ್ನಾಗಿ ವೀಕ್ಷಿಸುತ್ತಿರುವನು.

21

ನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವ, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವ, ಜನರಿಗೆ ನೀತಿ ನ್ಯಾಯದ ಉಪದೇಶ ಕೊಡುವ ಜನರನ್ನು ವಧಿಸುವವರು ಯಾರೋ, ಅವರಿಗೆ ಭಾರೀ ಯಾತನಾಮಯ ಶಿಕ್ಷೆ ಕಾದಿದೆ ಎಂಬ ‘ಸುವಾರ್ತೆ’ಯನ್ನು ಕೊಡಿರಿ .

22

ಅವರು ಇಹದಲ್ಲೂ ಪರದಲ್ಲೂ ತಮ್ಮ ಕರ್ಮಗಳು ವಿಫಲಗೊಂಡವರು. ಅವರಿಗೆ ಯಾರೂ ಸಹಾಯಕರಿಲ್ಲ.

23

ವೇದಗ್ರಂಥದ ಭಾಗ್ಯವನ್ನು ನೀಡಲ್ಪಟ್ಟ ಕೆಲವರನ್ನು ನೀವು ಕಂಡಿಲ್ಲವೇ? ಅವರ ನಡುವೆ ತೀರ್ಪು ನೀಡಲು ಅಲ್ಲಾಹನ ಗ್ರಂಥದ ಕಡೆಗೆ ಅವರನ್ನು ಆಹ್ವಾನಿಸಲಾಗುತ್ತದೆ. ಆದರೂ ಕೂಡಾ ಅವರಲ್ಲಿ ಒಂದು ವಿಭಾಗವು ಅವಗಣನೆಯಿಂದ ಹಿಂಜರಿಯುತ್ತಿದೆ .

24

‘ಕೆಲವೇ ದಿವಸಗಳ ಹೊರತು ನರಕಾಗ್ನಿ ನಮ್ಮನ್ನು ಸ್ಪರ್ಶಿಸದು’ ಎಂದು ಅವರು ಹೇಳಿದುದರ ಕಾರಣವಿದು. ತಮ್ಮ ಮತದಲ್ಲಿ ತಾವೇ ಸೃಷ್ಟಿಸಿಕೊಂಡಿರುವ ವಾದಗಳು (ಅವರ ಧರ್ಮ ಕಾರ್ಯದಲ್ಲಿ) ಅವರನ್ನು ವಂಚಿಸಿ ಬಿಟ್ಟಿವೆ.

25

ಆದರೆ ಒಂದು ದಿವಸ ನಾವು ಅವರನ್ನು ಒಂದು ಗೂಡಿಸುವಾಗ ಅವರ ಅವಸ್ಥೆ ಏನಾದೀತು ? ಆ ದಿನದ ಆಗಮನದ ಬಗ್ಗೆ ಯಾವ ಸಂಶಯವೂ ಇಲ್ಲ. ಅಂದು ಪ್ರತಿಯೊಂದು ಆತ್ಮಕ್ಕೂ ಅದರ ದುಡಿಮೆಯ ಪ್ರತಿಫಲವನ್ನು ಪೂರ್ಣವಾಗಿ ಕೊಡಲಾಗುವುದು. ಅವರಿಗೆ ಏನೂ ಅನ್ಯಾಯವಾಗುವುದಿಲ್ಲ.

26

ಹೇಳಿರಿ; ರಾಜತ್ವದ ಒಡೆಯನಾದ ಅಲ್ಲಾಹನೇ! ನೀನು ಇಚ್ಛಿಸಿದವರಿಗೆ ನೀನು ರಾಜತ್ವ ಕೊಡುತ್ತೀಯೆ, ನೀನಿಚ್ಛಿಸಿದವರಿಂದ ರಾಜತ್ವವನ್ನು ತೆಗೆದು ಹಾಕುತ್ತೀಯೆ. ನೀನು ಉದ್ದೇಶಿಸಿದವರಿಗೆ ನೀನು ಪ್ರತಿಷ್ಠೆ ಕೊಡುತ್ತೀಯೆ. ನೀನುದ್ದೇಶಿಸಿ ದವರನ್ನು ನಿಕೃಷ್ಟಗೊಳಿಸುತ್ತೀಯೆ. ಒಳಿತು ನಿನ್ನ ಅಧೀನದಲ್ಲಿದೆ. ಖಂಡಿತವಾಗಿಯೂ ನೀನು ಸರ್ವ ಸಮರ್ಥನಾಗಿರುವೆ.

27

(ಹೇಳಿರಿ) : ‘ನೀನು ರಾತ್ರಿಯನ್ನು ಹಗಲೊಳಗೆ ನುಸುಳಿಸುತ್ತೀಯೆ. ಹಗಲನ್ನು ರಾತ್ರಿಯೊಳಗೂ ನುಸುಳಿಸುತ್ತೀಯೆ . ನಿರ್ಜೀವಿಯಿಂದ ಜೀವಿಯನ್ನು ನೀನು ಹೊರಡಿಸುತ್ತೀಯೆ. ಜೀವಿಯಿಂದ ನಿರ್ಜೀವಿಯನ್ನು ನೀನು ಹೊರಡಿಸುತ್ತೀಯೆ. ನೀನು ಇಚ್ಛಿಸಿದವರಿಗೆ ಜೀವನಾಧಾರವನ್ನು ಲೆಕ್ಕವಿಲ್ಲದೆ ಕೊಡುತ್ತೀಂi

28

ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳ ಹೊರತು ಸತ್ಯನಿಷೇಧಿಗಳನ್ನು ಆತ್ಮೀಯ ಮಿತ್ರರನ್ನಾಗಿ ಮಾಡಬಾರದು. ಯಾರಾದರೂ ಅದನ್ನು ಮಾಡಿದರೆ ಅವನಿಗೆ ಅಲ್ಲಾಹನ ಜೊತೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ ನೀವು ಅವರನ್ನು ಜಾಗ್ರತೆ ಮಾಡುವ ವಿಧದಲ್ಲಿ ಜಾಗ್ರತೆ ಮಾಡಿದರೆ ಹೊರತು . ಅಲ್ಲಾಹನು ತನ್ನ (ಶಿಕ್ಷೆಯ) ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತಿದ್ದಾನೆ. ನಿಮ್ಮ ಮರಳುವಿಕೆ ಅಲ್ಲಾಹನ ಕಡೆಗೆ ಇದೆ.

29

ಓ ಪ್ರವಾದಿಯರೇ, ಹೇಳಿರಿ: ‘ನಿಮ್ಮ ಹೃದಯ ಗಳಲ್ಲಿರುವುದನ್ನು ನೀವು ಮರೆಮಾಚಿದರೂ ಅಥವಾ ಬಹಿರಂಗಗೊಳಿಸಿದರೂ ಅಲ್ಲಾಹನು ಅದನ್ನು ಅರಿಯುವನು. ಆಕಾಶಗಳಲ್ಲಿ ಮತ್ತು ಭೂಮಿ ಯಲ್ಲಿರುವುದನ್ನು ಅವನು ತಿಳಿಯುವನು. ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.

30

ಪ್ರತಿಯೊಬ್ಬ ವ್ಯಕ್ತಿಯೂ ತಾನು ಒಳಿತಾಗಿ ಮಾಡಿರುವ ಕರ್ಮಫಲವನ್ನು ತನ್ನ ಮುಂದೆ ಪ್ರತ್ಯಕ್ಷವಾಗಿ ಕಾಣುವ ದಿವಸ. ಕೆಡುಕು ಮಾಡಿದ ವ್ಯಕ್ತಿಯು; “ಇದರ (ದುಷ್ಕಾರ್ಯದ) ಮತ್ತು ನನ್ನ ನಡುವೆ ಖಂಡಿತವಾಗಿಯೂ ಬಹಳ ದೂರದ ಅಂತರ ಇದ್ದಿದ್ದರೆ” ಎಂದು ಆಸೆಪಡುವನು. ಅಲ್ಲಾಹನು ತನ್ನ ಶಿಕ್ಷೆಯ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಾಹನು ತನ್ನ ದಾಸರಲ್ಲಿ ಬಹಳ ದಯೆ ಯುಳ್ಳವನಾಗಿದ್ದಾನೆ.

31

(ನಬಿಯೇ) ಹೇಳಿರಿ; ನೀವು ಅಲ್ಲಾಹನನ್ನು ಪ್ರೀತಿಸುವಿರಾದರೆ, ನನ್ನನ್ನು ಅನುಗಮಿಸಿರಿ. ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು. ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹನು ಮಹಾ ಪಾಪ ಪರಿಹಾರಿಯೂ, ಕರುಣಾಮಯಿಯೂ ಆಗಿರುವನು.

32

ಹೇಳಿರಿ; ನೀವು ಅಲ್ಲಾಹು ಹಾಗೂ ದೇವದೂತರನ್ನು ಅನುಸರಿಸಿರಿ. ಇನ್ನು ಅವರು ವಿಮುಖರಾದರೆ ಅಲ್ಲಾಹು ಸತ್ಯನಿಷೇಧಿಗಳನ್ನು ಮೆಚ್ಚುವುದಿಲ್ಲ; ಖಂಡಿತ.

33

ಖಂಡಿತವಾಗಿಯೂ ಆದಮ್, ನೂಹ್, ಇಬ್ರಾಹೀಮರ ಕುಟುಂಬ ಮತ್ತು ಇಮ್ರಾನ್ ಕುಟುಂಬವನ್ನು ಉತ್ಕøಷ್ಟರಾಗಿ ಅಲ್ಲಾಹು ಆಯ್ಕೆ ಮಾಡಿರುವನು .

34

ಕೆಲವರು ಕೆಲವರ ಸಂತತಿಗಳಾಗಿದ್ದುಕೊಂಡು. ಅಲ್ಲಾಹು ಸರ್ವಶ್ರುತನೂ, ಸರ್ವಜ್ಞನೂ ಆಗಿರುತ್ತಾನೆ.

35

ಇಮ್ರಾನರ ಪತ್ನಿ ಹೇಳಿದ ಸಂದರ್ಭ.(ವನ್ನು ನೆನೆಸಿರಿ). ನನ್ನ ರಕ್ಷಕನೇ ! ನನ್ನ ಹೊಟ್ಟೆಯಲ್ಲಿರುವ ಶಿಶುವನ್ನು ನಾನು ನಿನಗೆ ಮೀಸಲಾಗಿ ಹರಕೆ ಇಟ್ಟಿದ್ದೇನೆ ಂ. ನನ್ನಿಂದ ನೀನು ಸ್ವೀಕರಿಸು. ಖಂಡಿತವಾಗಿಯೂ ನೀನು ಸರ್ವಶ್ರುತನೂ, ಸರ್ವಜ್ಞನೂ ಆಗಿರುವೆ.

36

ಆದರೆ ಅವಳು ಹೆತ್ತಾಗ ಹೇಳಿದಳು, ರಕ್ಷಕನೇ! ನಾನು ಹೆತ್ತದ್ದು ಒಂದು ಹೆಣ್ಣು ಮಗುವನ್ನು! ಅವಳು ಹೆತ್ತಿರುವುದೇನೆಂದು ಅಲ್ಲಾಹನು ಹೆಚ್ಚು ಬಲ್ಲವನೇ ಆಗಿರುತ್ತಾನೆ. ಗಂಡು ಮಗು ಹೆಣ್ಣು ಮಗುವಿನಂತಲ್ಲ. ತಾನವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ. ಅವಳನ್ನೂ ಅವಳ ಸಂತತಿಯನ್ನೂ ಬಹಿಷ್ಕøತ ಶೈತಾನನ ಕೇಡಿನಿಂದ ರಕ್ಷಿಸುವ ಸಲುವಾಗಿ ನಿನ್ನಲ್ಲಿ ನಾನು ಅಭಯ ಬೇಡುತ್ತಿದ್ದೇನೆ .

37

ಕೊನೆಗೆ ಆ ಮಗುವನ್ನು ಅವಳ ಪ್ರಭು ಬಹಳ ಚೆನ್ನಾಗಿ ಸ್ವೀಕರಿಸಿದನು. ಉತ್ಕøಷ್ಟ ರೀತಿಯಲ್ಲಿ ಅವಳನ್ನು ಬೆಳೆಸಿದನು, ಅವಳ ಪರಿಪಾಲನೆಯನ್ನು ‘ಝಕರಿಯ್ಯಾ’ರಿಗೆ ವಹಿಸಿಕೊಟ್ಟನು. ಝಕರಿಯ್ಯಾರವರು ಮಿಹ್‍ರಾಬ್‍ನಲ್ಲಿ ಆಕೆಯ ಬಳಿ ಪ್ರವೇಶಿಸಿದಾಗಲೆಲ್ಲ ಏನಾದರೊಂದು ಭಕ್ಷ್ಯವನ್ನು ಅವಳ ಬಳಿ ಕಾಣುತ್ತಿದ್ದರು. ಅವರು ಕೇಳಿದರು, ‘ಮರ್ಯಮಳೇ! ಇದು ನಿನಗೆ ಎಲ್ಲಿಂದ ಸಿಗುತ್ತದೆ’. ಅವಳು ಹೇಳಿದಳು; ‘ಇದು ಅಲ್ಲಾಹನ ಕಡೆಯಿಂದ ಸಿಕ್ಕಿದೆ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಆಹಾರವನ್ನು ಯಾವುದೇ ಲೆಕ್ಕವಿಲ್ಲದೆ ನೀಡುವನು’ .

38

ಅಲ್ಲಿ ಝಕರಿಯ್ಯಾರವರು ತನ್ನ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾ ಹೇಳಿದರು; ನನ್ನ ಪ್ರಭೂ! ನಿನ್ನ ವತಿಯಿಂದ ನನಗೆ ಉತ್ತಮವಾದ ಸಂತಾನವನ್ನು ಪ್ರದಾನ ಮಾಡು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವಿ.

39

ತನ್ನಿಮಿತ್ತ ಅವರು ಮಿಹ್‍ರಾಬ್(ಮಸೀದಿ)ನಲ್ಲಿ ನಮಾಝ್ ಮಾಡುತ್ತಾ ನಿಂತಿರುವಾಗ ಮಲಕ್‍ಗಳು ಅವರನ್ನು ಕರೆದು ಹೇಳಿದರು; ಖಂಡಿತವಾಗಿಯೂ ಅಲ್ಲಾಹನು ನಿಮಗೆ ‘ಯಹ್ಯಾ’ (ಎಂಬ ಮಗುವನ್ನು ಪ್ರದಾನ ಮಾಡುವ) ಬಗ್ಗೆ ಶುಭ ವಾರ್ತೆ ಕೊಡುತ್ತಿದ್ದಾನೆ ಂ. ಅವನು (ಆ ಮಗುವು) ಅಲ್ಲಾಹ ನಿಂದಿರುವ ಒಂದು ವಚನವನ್ನು ಸತ್ಯಗೊಳಿಸು ವವನೂ ನೇತಾರನೂ ಸ್ತ್ರೀ ಮೋಹ ಮುಕ್ತನೂ ಸಜ್ಜನರಲ್ಲಿ ಸೇರಿದ ಪ್ರವಾದಿಯೂ ಆಗುವನು.

40

ಅವರು (ಝಕರಿಯ್ಯಾ ) ಕೇಳಿದರು: ನನ್ನ ರಕ್ಷಕನೇ! ನನಗೆ ಒಬ್ಬ ಪುತ್ರ ಉಂಟಾಗುವುದು ಹೇಗೆ ? ನನಗೆ ವೃದ್ಧಾಪ್ಯ ತಲಪಿದೆ. ನನ್ನ ಮಡದಿ ಬಂಜೆಯಾಗಿದ್ದಾಳೆ ! ಆಗ ಅಲ್ಲಾಹು ಹೇಳಿದನು ; ಸಂಗತಿ ಹಾಗೆಯೇ ಆಗುತ್ತದೆ. ಅಲ್ಲಾಹನು ತಾನುದ್ದೇಶಿಸಿದ್ದನ್ನು ಮಾಡುತ್ತಾನೆ.

41

ಅವರು (ಝಕರಿಯಾ ) ಹೇಳಿದರು; ನನ್ನ ಪಾಲಕನೇ ! ನನಗೆ ನೀನೊಂದು ಸಂಕೇತವನ್ನು ಕೊಡು. (ಆಗ ಅಲ್ಲಾಹನು) ಹೇಳಿದನು; ``ಮೂರು ದಿವಸಗಳ ಕಾಲ ಜನರೊಡನೆ ನೀವು ಸಂಜ್ಞೆ ಮೂಲಕವಲ್ಲದೆ ಮಾತಾಡದಿರುವುದೇ ನಿಮಗೆ ನಾನು ಒದಗಿಸುವ ಸಂಕೇತ. ನೀವು ನಿಮ್ಮ ಪ್ರಭುವನ್ನು ಹೆಚ್ಚು ಹೆಚ್ಚಾಗಿ ಸ್ಮರಿಸಿರಿ. ಸಂಜೆ-ಮುಂಜಾನೆಗಳಲ್ಲಿ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ''.

42

ಮಲಕ್‍ಗಳು ಹೇಳಿದ ಸಂದರ್ಭ. ಓ ಮರ್ಯಮ್! ಖಂಡಿತವಾಗಿಯೂ ಅಲ್ಲಾಹನು ನಿಮ್ಮನ್ನು ವಿಶಿಷ್ಟವಾಗಿ ಆರಿಸಿರುವನು. ಶುದ್ಧಿಗೊಳಿಸಿರುವನು. ಹಾಗೂ ಲೋಕದ ಸ್ತ್ರೀಯರಲ್ಲಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಚುನಾಯಿಸಿರುವನು .

43

ಓ ಮರ್ಯಮ್ ! ನಿಮ್ಮ ಪ್ರಭುವಿಗೆ ಭಕ್ತಿಯೊಂದಿಗೆ ಶರಣಾಗಿರಿ. ಅವನಿಗೆ ಸಾಷ್ಟಾಂಗವೆರಗಿರಿ. ತಲೆ ಬಾಗುವವರ ಜೊತೆ ತಲೆ ಬಾಗಿರಿ .

44

(ಓ ಪ್ರವಾದಿಯವರೇ!) ಇವೆಲ್ಲವೂ ನಾವು ನಿಮಗೆ ಬೋಧನೆ ನೀಡುತ್ತಿರುವ ಅಗೋಚರ ವಾರ್ತೆಗಳು. ಮರ್ಯಮ್‍ರ ಪಾಲನೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೆಕ್ಕಣಿಗಳನ್ನು (ನದಿಗೆ) ಹಾಕಿದಾಗ ನೀವು ಅಲ್ಲಿ ಇರಲಿಲ್ಲ. ಅವರು ಪರಸ್ಪರ ತರ್ಕ ಮಾಡಿ ದಾಗಲೂ ನೀವು ಅವರ ನಡುವೆ ಇರಲಿಲ್ಲ .

45

ಮಲಕ್‍ಗಳು ಹೇಳಿದ (ಇನ್ನೊಂದು) ಸಂದರ್ಭ (ವನ್ನು ಸ್ಮರಿಸಿರಿ.) ಓ ಮರ್ಯಮ್ ! ಅಲ್ಲಾಹನು ತನ್ನ ಕಡೆಯಿಂದ ಒಂದು ವಚನದ (ಕಾರಣದಿಂದುಂಟಾಗುವ ಮಗುವಿನ ಜನನದ) ಕುರಿತು ನಿಮಗೆ ಶುಭವಾರ್ತೆ ಕೊಡುತ್ತಿದ್ದಾನೆ. ಆ ಮಗುವಿನ ಹೆಸರು `ಮರ್ಯಮಳ ಪುತ್ರ ಈಸಾ ಮಸೀಹ್' ಎಂದಾಗಿರುವುದು. ಅವನು ಇಹಪರಗಳಲ್ಲಿ ಗಣ್ಯನೂ ಅಲ್ಲಾಹನ ನಿಕಟರಲ್ಲಿ ಸೇರಿದವನೂ ಆಗಿರುವನು.

46

ಅವನು ತೊಟ್ಟಿಲಲ್ಲಿರುವಾಗಲೂ ನಡು ವಯಸ್ಕನಾಗಿರುವಾಗಲೂ ಜನರಲ್ಲಿ (ತತ್ವೋಪ ದೇಶವನ್ನು) ಮಾತನಾಡುವನು. ಅವನು ಸಜ್ಜನರ ಕೂಟದವನಾಗಿರುವನು.

47

ಅವಳು ಕೇಳಿದಳು; `ಪ್ರಭೂ! ನನಗೆ ಮಗು ವುಂಟಾಗುವುದು ಹೇಗೆ? ನನ್ನನ್ನು ಯಾವನೇ ಪುರುಷ ಸ್ಪರ್ಶಿಸಿಲ್ಲವಲ್ಲ?' ಅಲ್ಲಾಹು ಹೇಳಿದನು; `ಅದು ಹಾಗೆಯೇ ಸಂಭವಿಸುವುದು.' ಅಲ್ಲಾಹು ತಾನುದ್ದೇಶಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಒಂದು ಕಾರ್ಯವನ್ನು ಉದ್ದೇಶಿಸಿದರೆ ಅದರೊಂದಿಗೆ `ಆಗು' ಎಂದಷ್ಟೇ ಹೇಳುತ್ತಾನೆ. ಆಗ ಅದು ಉಂಟಾಗುತ್ತದೆ.

48

ಆ ಪುತ್ರನಿಗೆ (ಈಸಾರವರಿಗೆ) ಅಲ್ಲಾಹು ಗ್ರಂಥ ಹಾಗೂ ತತ್ವ ಜ್ಞಾನವನ್ನೂ ತೌರಾತ್ ಮತ್ತು ಇಂಜೀಲನ್ನೂ ಕಲಿಸುವನು.

49

ಇಸ್ರಾಈಲ ಸಂತತಿಗಳಿಗೆ ಓರ್ವ ಪ್ರವಾದಿಯನ್ನಾಗಿ ಯೂ ಮಾಡುವನು. (ಅವರು ಇಸ್ರಾಈಲರೊಂದಿಗೆ ಹೀಗೆ ಹೇಳುವರು:) `ನಿಮ್ಮ ಪ್ರಭುವಿನ ಕಡೆಯಿಂದ ಒಂದು ದೃಷ್ಟಾಂತದೊಂದಿಗೆ ನಿಮ್ಮ ಬಳಿ ನಾನು ಬಂದಿದ್ದೇನೆ.' (ದೃಷ್ಟಾಂತವೆಂದರೆ) ನಿಮಗೆ ನಾನು ಕಲಸು ಮಣ್ಣಿಂದ ಪಕ್ಷಿಯನ್ನು ರೂಪುಗೊಳಿಸಿ, ಆಮೇಲೆ ನಾನದಕ್ಕೆ ಊದುತ್ತೇನೆ. ಆಗ ಅದು ಅಲ್ಲಾ ಹನ ಆಜ್ಞೆಯಿಂದ ಜೀವಂತ ಪಕ್ಷಿಯಾಗುವುದು . ನಾನು ಅಲ್ಲಾಹನ ಅನುಮತಿಯಿಂದ ಜನ್ಮತಃ ಕುರುಡರನ್ನೂ ಪಾಂಡು ರೋಗಿಗಳನ್ನೂ ಗುಣಪಡಿಸುತ್ತೇನೆ. ಹಾಗೂ ಮೃತರನ್ನು ಜೀವಂತಗೊಳಿಸುತ್ತೇನೆ. ನೀವು ತಿನ್ನುವುದನ್ನೂ ನಿಮ್ಮ ಮನೆಗಳಲ್ಲಿ ನೀವು ಸಂಗ್ರಹಿಸಿಟ್ಟಿರುವುದನ್ನೂ ನಿಮಗೆ ನಾನು ತಿಳಿಸಿಕೊಡುತ್ತೇನೆ. ಇದರಲ್ಲಿ ನಿಮಗೆ ಖಂಡಿತ ವಾಗಿಯೂ ದೃಷ್ಟಾಂತವಿದೆ. ನೀವು ವಿಶ್ವಾಸವಿರಿ ಸುವಿರಾದರೆ.

50

ನನಗಿಂತ ಮುಂಚಿನದಾಗಿರುವ ತೌರಾತನ್ನು ದೃಢಗೊಳಿಸುವವನಾಗಿಯೂ ಮತ್ತು ನಿಮಗೆ ನಿಷೇಧಿಸಲಾಗಿದ್ದ ಕೆಲವನ್ನು ಸಮ್ಮತಾರ್ಹ ಗೊಳಿಸಲಿಕ್ಕಾಗಿಯೂ (ನಾನು ಬಂದಿರುತ್ತೇನೆ.) ನಿಮ್ಮ ಪ್ರಭುವಿನ ಒಂದು ದೃಷ್ಟಾಂತವನ್ನು ನಿಮ್ಮಲ್ಲಿಗೆ ನಾನು ತಂದಿರುತ್ತೇನೆ. ಆದ್ದರಿಂದ ಅಲ್ಲಾಹನಿಗೆ ಭಯಪಡಿರಿ. ನನ್ನನ್ನು ಅನುಸರಿಸಿರಿ.

51

ಖಂಡಿತವಾಗಿಯೂ ಅಲ್ಲಾಹನು ನನ್ನ ಮತ್ತು ನಿಮ್ಮ ಪ್ರಭುವಾಗಿರುವನು. ಆದ್ದರಿಂದ ಅವನನ್ನು ನೀವು ಆರಾಧಿಸಿರಿ. ಇದುವೇ ನೇರ ಮಾರ್ಗ .

52

ಕೊನೆಗೆ ಈಸಾ ರವರು ಜನರಿಂದ ಸತ್ಯ ನಿಷೇಧವನ್ನು ಕಂಡರಿತಾಗ ಅವರು ಹೇಳಿದರು; ಅಲ್ಲಾಹನ ಮಾರ್ಗದಲ್ಲಿ ನನಗೆ ನೆರವಾಗುವವರು ಯಾರಿದ್ದಾರೆ? ಆಗ ಹವಾರಿಗಳು ಹೇಳಿದರು ; ‘ನಾವು ಅಲ್ಲಾಹನ ಸಹಾಯಕರು. ನಾವು ಅಲ್ಲಾಹನಲ್ಲಿ ದೃಢ ನಂಬಿಕೆ ಇಟ್ಟಿದ್ದೇವೆ. ನಾವು ಅಲ್ಲಾಹನಿಗೆ ಪೂರ್ಣವಿಧೇಯರಾದವರೆಂದು ತಾವು ಸಾಕ್ಷ್ಯ ವಹಿಸಿರಿ.

53

ನಮ್ಮ ಪ್ರಭೂ ! ನೀನು ಅವತೀರ್ಣಗೊಳಿಸಿದುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ನಿನ್ನ ಈ ದೂತರನ್ನು ಅನುಸರಿಸಿದ್ದೇವೆ. ನಮ್ಮನ್ನು ನೀನು (ಸತ್ಯಕ್ಕೆ) ಸಾಕ್ಷಿಗಳಾದವರ ಕೂಟಕ್ಕೆ ಸೇರಿಸು’ .

54

ಅವರು (ಇಸ್ರೇಲಿ ಜನಾಂಗದ ಅವಿಶ್ವಾಸಿಗಳು) ಗೂಢತಂತ್ರ ಪ್ರಯೋಗಿಸಿದರು. ಅಲ್ಲಾಹನು (ಅವರ ಗೂಢತಂತ್ರಕ್ಕೆ) ಪ್ರತಿಕ್ರಮ ಹೂಡಿದನು. ಪ್ರತಿಕ್ರಮಿಗಳಲ್ಲಿ ಅಲ್ಲಾಹನು ಪರಮ ನಿಪುಣನು .

55

ಅಲ್ಲಾಹನು ಹೇಳಿದ ಸಂದರ್ಭ(ವನ್ನು ನೆನೆಸಿರಿ). ಓ ಈಸಾ ! ನಿಶ್ಚಯವಾಗಿಯೂ ನಿನ್ನನ್ನು ನಾನು ಹಿಡಿಯುವೆನು . ನನ್ನಲ್ಲಿಗೆ ಎತ್ತುವೆನು . ಸತ್ಯ ನಿಷೇಧಿಗಳಿಂದ ನಿನ್ನನ್ನು ದೂರಗೊಳಿಸುವೆನು. ನಿನ್ನ ಅನುಯಾಯಿಗಳನ್ನು ಪುನರುತ್ಥಾನದ ದಿನದ ವರೆಗೂ ಸತ್ಯನಿಷೇಧಿಗಳಿಗಿಂತ ಉನ್ನತರನ್ನಾಗಿ ಮಾಡುವೆನು. ಮುಂದೆ ನಿಮ್ಮ ವಾಪಾಸಾತಿ ನನ್ನೆಡೆಗೇ ಇರುವುದು. ಆಗ ನಾನು ನೀವು ಇಲ್ಲಿ ಪರಸ್ಪರ ಬೇಧ ತಳೆದ ವಿಷಯದಲ್ಲಿ ತೀರ್ಪು ಕೊಡುವೆನು.

56

ಸತ್ಯನಿಷೇಧಿಗಳನ್ನು ನಾನು ಇಹದಲ್ಲೂ ಪರದಲ್ಲೂ ಉಗ್ರ ಶಿಕ್ಷೆಗೊಳಪಡಿಸುವೆನು. ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.

57

ಸತ್ಯ ನಂಬಿಕೆ ತಾಳಿ, ಪುಣ್ಯ ಕಾರ್ಯಗಳನ್ನು ಯಾರು ಮಾಡುತ್ತಾರೋ ಅವರ ಪ್ರತಿಫಲವನ್ನು ಅವನು ಅವರಿಗೆ ಪೂರ್ತಿ ಮಾಡಿಕೊಡುವನು. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.

58

ಇದು ತಮಗೆ ನಾವು ಓದಿ ಹೇಳುತ್ತಿರುವ ಪುರಾವೆ ಗಳು ಹಾಗೂ ಸತ್ವ ಸಂಪೂರ್ಣವಾದ ಬೋಧನೆಗಳು.

59

ನಿಶ್ಚಯವಾಗಿಯೂ ಅಲ್ಲಾಹನ ಬಳಿ ಈಸಾರವರ ಅವಸ್ಥೆ ಆದಮರ ಅವಸ್ಥೆಯಂತೆ. ಅವರನ್ನು ಅವನು ಮಣ್ಣಿನಿಂದ ಸೃಷ್ಟಿಸಿದನು. ಆಮೇಲೆ ಮನುಷ್ಯನಾಗು ಎಂದು ಅವರೊಂದಿಗೆ ಹೇಳಿದನು. ಆಗ ಅವರು ಉಂಟಾದರು ಂ.

60

(ಇದು) ತಮ್ಮ ಪ್ರಭುವಿನ ಕಡೆಯ ಸತ್ಯ. ಆದ್ದರಿಂದ ತಾವು ಸಂಶಯ ಪಡುವವರ ಕೂಟಕ್ಕೆ ಸೇರಿ ಹೋಗದಿರಿ.

61

ಇನ್ನು ನಿಮಗೆ ಈ ಜ್ಞಾನ ಬಂದ ಬಳಿಕವೂ ಯಾರಾದರೂ (ಈಸಾ ನಬಿ(ಅ)ಯವರ) ವಿಷಯದಲ್ಲಿ ನಿಮ್ಮಲ್ಲಿ ತರ್ಕಕ್ಕಿಳಿದರೆ ನೀವು ಹೇಳಿರಿ; `ನೀವು ಬನ್ನಿರಿ. ನಮ್ಮ ಮಕ್ಕಳನ್ನೂ ನಿಮ್ಮ ಮಕ್ಕಳನ್ನೂ ನಮ್ಮ ಸ್ತ್ರೀಯರನ್ನೂ, ನಿಮ್ಮ ಸ್ತ್ರೀಯರನ್ನೂ ಕರೆಯೋಣ. ನಾವು ಹಾಜರಾಗೋಣ. ಆಮೇಲೆ ನಮ್ಮಲ್ಲಿ ಯಾರು ಅಸತ್ಯವಾದಿಗಳೋ ಅವರಿಗೆ ಅಲ್ಲಾಹುವಿನ ಶಾಪ ತಟ್ಟಲಿ ಎಂದು ಪ್ರಾರ್ಥಿಸೋಣ'

62

ಖಂಡಿತ ಇದು ಯಥಾರ್ಥ ವಾರ್ತೆ. ಅಲ್ಲಾಹನಲ್ಲದೆ ಬೇರೆ ಯಾವುದೇ ಆರಾಧ್ಯನಿಲ್ಲ. ಅವನು ಅಜೇಯನೂ ಮಹಾ ತಂತ್ರಜ್ಞಾನಿಯೂ ಆಗಿರುವನು.

63

ಇನ್ನು ಅವರು (ಸತ್ಯವಿಶ್ವಾಸದಿಂದ ) ವಿಮುಖರಾದರೆ ಖಂಡಿತ! ಅಲ್ಲಾಹನು ಗೊಂದಲಕಾರಿಗಳನ್ನು ಚೆನ್ನಾಗಿ ಬಲ್ಲವನೇ ಆಗಿರುತ್ತಾನೆ.

64

ಹೇಳಿರಿ ; `ಓ ವೇದದವರೇ! ನಮ್ಮ-ನಿಮ್ಮೆಡೆಯಲ್ಲಿ ಸಮನಾದ ಒಂದು ವಚನ ತತ್ವದ ಕಡೆಗೆ ನೀವು ಬನ್ನಿರಿ. (ಅದೇನೆಂದರೆ) ಅಲ್ಲಾಹನ ಹೊರತು ನಾವು ಬೇರೆ ಯಾರಿಗೂ ಆರಾಧಿಸಬಾರದು. ಅವನೊಂದಿಗೆ ಬೇರೆ ಯಾವುದನ್ನೂ ಭಾಗಿಯಾಗಿಸದಿರೋಣ. ಅಲ್ಲಾಹನ ಹೊರತು ನಮ್ಮಲ್ಲಿ ಕೆಲವರು ಕೆಲವರನ್ನು ಪ್ರಭುಗಳನ್ನಾಗಿ ಮಾಡದಿರೋಣ' . (ಎಂಬ ತತ್ವದ ಕಡೆಗೆ). ಇನ್ನೂ ಅವರು ವಿಮುಖರಾದರೆ ಹೇಳಿರಿ; `ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಪೂರ್ಣ ಶರಣಾಗಿದ್ದೇವೆ ಎನ್ನುವುದಕ್ಕೆ ನೀವು ಸಾಕ್ಷಿಗಳಾಗಿರಿ’.

65

ಓ ವೇದದವರೇ! ಇಬ್ರಾಹೀಮರ ವಿಷಯದಲ್ಲಿ ನೀವು ಯಾಕೆ ತರ್ಕಿಸುತ್ತಿದ್ದೀರಿ? ತೌರಾತ್ ಮತ್ತು ಇಂಜೀಲ್ ಅವತೀರ್ಣವಾದುದೇ ಅವರ ನಂತರ ತಾನೇ ? ನೀವು ಚಿಂತಿಸುವುದಿಲ್ಲವೇ?

66

ಓ ಜನರೇ! ನಿಮಗೆ ಅಲ್ಪ ಸ್ವಲ್ಪ ಗೊತ್ತೇ ಇರುವ ವಿಷಯದಲ್ಲಿ ನೀವು ತರ್ಕ ಮಾಡಿದ್ದೀರಿ. ಹಾಗಿರುವಾಗ ನೀವು ಯಾವುದೇ ಅರಿವು ಇಲ್ಲದ ವಿಷಯದಲ್ಲಿ ಏಕೆ ತರ್ಕಿಸುತ್ತಿದ್ದೀರಿ ? ಅಲ್ಲಾಹನಿಗೆ ಗೊತ್ತಿದೆ. ನಿಮಗೆ ಗೊತ್ತಿಲ್ಲ.

67

ಇಬ್‍ರಾಹೀಮರು ಯಹೂದರೋ, ಕ್ರೈಸ್ತರೋ ಆಗಿರಲಿಲ್ಲ. ಆದರೆ ಅವರು ವಕ್ರ ಮಾರ್ಗಗಳನ್ನು ತ್ಯಜಿಸಿ ಸತ್ಯಮಾರ್ಗವನ್ನು ಅನುಸರಿಸಿದ ನಿರ್ಮಲಚಿತ್ತದ ಮುಸ್ಲಿಮರಾಗಿದ್ದರು. ಅವರು ಬಹುದೇವಾರಾಧಕರಲ್ಲೂ ಸೇರಿದವರಾಗಿರಲಿಲ್ಲ.

68

ನಿಶ್ಚಯವಾಗಿಯೂ ಜನರಲ್ಲಿ ಇಬ್ರಾಹೀಮರೊಂದಿಗೆ ಹೆಚ್ಚು ಸಂಬಂಧವುಳ್ಳವರು ಯಾರೆಂದರೆ ಅವರನ್ನು ಅನುಸರಿಸಿದವರು ಹಾಗೂ ಈ ಪ್ರವಾದಿ ಮತ್ತು ಸತ್ಯವಿಶ್ವಾಸಿಗಳು. ಅಲ್ಲಾಹನು ಸತ್ಯವಿಶ್ವಾಸಿಗಳ ರಕ್ಷಾಧಿಕಾರಿಯಾಗಿರುವನು.

69

ವೇದದವರಲ್ಲಿ ಒಂದು ಪಂಗಡವು ನಿಮ್ಮನ್ನು ದಾರಿ ತಪ್ಪಿಸಲು ಆಶಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವರು ತಮಗೆ ತಾವೇ ದಾರಿತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನು ಅವರು ಗ್ರಹಿಸಿಕೊಳ್ಳುವುದಿಲ್ಲ ಅಷ್ಟೆ!

70

ಓ ವೇದದವರೇ! ಸತ್ಯಕ್ಕೆ ದೃಕ್ಸಾಕ್ಷಿಗಳಾಗಿಯೂ ಕೂಡಾ ನೀವು ಯಾಕೆ ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದೀರಿ?

71

ಓ ಗ್ರಂಥದವರೇ! ನೀವು ತಿಳಿದೂ ತಿಳಿದೂ ಸತ್ಯ ವನ್ನು ಅಸತ್ಯದೊಂದಿಗೆ ಯಾಕೆ ಬೆರೆಸುತ್ತಿದ್ದೀರಿ? ಸತ್ಯವನ್ನು ಯಾಕೆ ಮುಚ್ಚಿಡುತ್ತಿದ್ದೀರಿ?

72

ವೇದದವರಲ್ಲಿ ಒಂದು ವಿಭಾಗದವರು (ಸ್ವಂತ ಅನುಯಾಯಿಗಳೊಂದಿಗೆ) ಹೇಳಿದರು; ಈ ವಿಶ್ವಾಸಿಗಳಿಗೆ ಅವತೀರ್ಣವಾದುದನ್ನು ನೀವು ಹಗಲಿನ ಆರಂಭದಲ್ಲಿ ವಿಶ್ವಾಸವಿಡಿರಿ. ದಿನದ ಕೊನೆಯಲ್ಲಿ ಅದನ್ನು ನಿಷೇಧಿಸಿರಿ. ಹಾಗಾದರೆ ಅವರು ಮರಳಿ ಬರಬಹುದು.

73

ನಿಮ್ಮ ಧರ್ಮವನ್ನು ಅನುಸರಿಸುವವರನ್ನು ಹೊರತು ಬೇರೆ ಯಾರನ್ನೂ ನಂಬಬೇಡಿರಿ (ಎಂದೂ ಅವರು ಹೇಳಿದರು) ಖಂಡಿತವಾಗಿಯೂ ಮಾರ್ಗದರ್ಶನವು ಅಲ್ಲಾಹನದ್ದು ಮಾತ್ರ ಎಂದು ಹೇಳಿರಿ. (ವೇದದವರು ತಮ್ಮ ಅನುಯಾಯಿಗಳಿಗೆ ತಮ್ಮ ಹೇಳಿಕೆಯನ್ನು ಹೀಗೆ ಮುಂದುವರಿಸಿದರು ನಿಮ್ಮ ಯಹೂದೀ ಧರ್ಮವನ್ನು ಅನುಸರಿಸಿದವರಿಗೆ ಸಿಕ್ಕಂತಹ ಮಾನ್ಯತೆ ಬೇರೆ ಯಾರಿಗೂ ಸಿಗ ಬಹುದೆಂದು ಭಾವಿಸಬೇಡಿರಿ. ಅವರು (ಮುಸ್ಲಿಮರು) ನಿಮ್ಮ ವಿರುದ್ಧ ನಿಮ್ಮ ಪ್ರಭುವಿನ ಬಳಿ ಜಯಗಳಿಸುವರೆಂದೂ ಭಾವಿಸಬೇಡಿರಿ. (ಪ್ರವಾದಿಯವರೇ !) ಹೇಳಿರಿ; ನಿಶ್ಚಯವಾಗಿಯೂ ಔದಾರ್ಯವಿರುವುದು ಅಲ್ಲಾಹನ ವಶದಲ್ಲಿ. ತಾನಿಚ್ಛಿಸಿದವರಿಗೆ ಅದನ್ನವನು ಕೊಡುತ್ತಾನೆ. ಅಲ್ಲಾಹನು ಪರಮ ವಿಶಾಲನೂ ಪರಮ ತಜ್ಞನೂ ಆಗಿರುತ್ತಾನೆ.

74

ತಾನಿಚ್ಛಿಸಿದವರಿಗೆ ತನ್ನ ಅನುಗ್ರಹದಿಂದ ಪ್ರತ್ಯೇಕವಾಗಿ ಕೊಡುತ್ತಾನೆ. ಅಲ್ಲಾಹನು ಮಹಾ ಔದಾರ್ಯ ವಂತನಾಗಿರುವನು.

75

ನೀವು ಒಂದು (ಚಿನ್ನ ಬೆಳ್ಳಿಯ) ರಾಶಿಯನ್ನೇ ಅವರ ಬಳಿ ವಿಶ್ವಾಸವಿಟ್ಟು ಕೊಟ್ಟಿದ್ದರೆ ಅದನ್ನು ವಾಪಾಸು ಕೊಡುವಂತಹ ವ್ಯಕ್ತಿಗಳೂ ವೇದದವರ ಕೂಟದಲ್ಲಿದ್ದಾರೆ. ಆದರೆ ಅವರಲ್ಲಿ ಮತ್ತೆ ಕೆಲವರಿದ್ದಾರೆ. ನೀವು ಅವರ ಬಳಿ ಒಂದು ಬೆಳ್ಳಿ ನಾಣ್ಯವನ್ನು ನಂಬಿ ಇಟ್ಟರೂ ನೀವು ಅವರ ಬಳಿ ಹಠ ಹಿಡಿದು ನಿಂತರೆ ಹೊರತು ನಿಮಗೆ ವಾಪಾಸು ಕೊಡಲಾರರು. ಅದು ಯಾಕೆಂದರೆ ಈ ನಿರಕ್ಷರಿಗಳ (ಅರಬರ) ವಿಷಯದಲ್ಲಿ ನಮಗೆ ಶಿಕ್ಷೆ ದೊರಕಲು ಯಾವ ಮಾರ್ಗವೂ ಇಲ್ಲವೆಂದು ಅವರು ಹೇಳಿದ್ದಾರೆ. ಅವರು ಅರಿತು ಕೊಂಡೇ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ.

76

ನಿಜ ಸಂಗತಿ ಹಾಗಲ್ಲ. ಯಾರು ತನ್ನ ಕರಾರನ್ನು ಪೂರ್ತಿಗೊಳಿಸುತ್ತಾರೋ ಹಾಗೂ ದೇವಭಕ್ತಿ ಇರಿಸುತ್ತಾರೋ ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಟರನ್ನು ಪ್ರೀತಿಸುತ್ತಾನೆ.

77

ಅಲ್ಲಾಹನೊಂದಿಗೆ ಮಾಡಿಕೊಂಡ ಕರಾರು ಮತ್ತು (ಅಲ್ಲಾಹನ ಹೆಸರಲ್ಲಿ) ಸ್ವತಃ ಹಾಕಿದ ಆಣೆಗಳನ್ನು ತುಚ್ಛ ಬೆಲೆಗೆ ಮಾರುವವರಿಗೆ ಪರಲೋಕದಲ್ಲಿ ಯಾವುದೇ ಭಾಗ್ಯ (ಪಾಲು) ಖಂಡಿತ ಇಲ್ಲ. ಪರಲೋಕದಲ್ಲಿ ಅಲ್ಲಾಹನು ಅವರೊಂದಿಗೆ ಮಾತನ್ನೇ ಆಡಲಾರನು. ಅವರತ್ತ ಕರುಣೆಯಿಂದ ನೋಡುವುದೂ ಇಲ್ಲ. ಅವರನ್ನು (ಪಾಪ ಮಾಲಿನ್ಯಗಳಿಂದ) ಶುದ್ಧಿಗೊಳಿಸುವುದೂ ಇಲ್ಲ . ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.

78

ಖಂಡಿತವಾಗಿಯೂ ವೇದದವರಲ್ಲಿ ಕೆಲವರಿದ್ದಾರೆ. ವೇದವನ್ನು ಅವರು ನಾಲಿಗೆ ಕೊಂಕಿಸಿ ಓದುತ್ತಾರೆ ! ಅದು ಕೂಡ ಗ್ರಂಥದಲ್ಲಿದ್ದುದೆಂದು ನೀವು ಭಾವಿಸಲಿಕ್ಕಾಗಿ. ವಾಸ್ತವದಲ್ಲಿ ಅದು ಗ್ರಂಥದಲ್ಲಿರುವುದಿಲ್ಲ. ‘ಇದು ಅಲ್ಲಾಹನ ಕಡೆಯದ್ದು’ ಎಂದು ಅವರು ಹೇಳುತ್ತಾರೆ. ನಿಜದಲ್ಲಿ ಅದು ಅಲ್ಲಾಹನ ಕಡೆಯದ್ದಾಗಿರುವುದಿಲ್ಲ. ತಿಳಿದುಕೊಂಡೇ ಅವರು ಅಲ್ಲಾಹನ ಮೇಲೆ ಸುಳ್ಳು ಹೇಳುತ್ತಾರೆ.

79

ಅಲ್ಲಾಹನು ವೇದ ಗ್ರಂಥವನ್ನೂ ಸುಜ್ಞಾನವನ್ನೂ ಪ್ರವಾದಿತ್ವವನ್ನೂ ಕೊಟ್ಟಂತಹ ಒಬ್ಬ ಮನುಷ್ಯನು ‘ನೀವು ಅಲ್ಲಾಹನನ್ನು ಬಿಟ್ಟು (ನನಗೆ ಆರಾಧಿಸುವ) ನನ್ನ ದಾಸರಾಗಿರಿ'. ಎಂದು ಜನರಲ್ಲಿ ಹೇಳುವನೆನ್ನುವುದು ತಕ್ಕುದಲ್ಲ. ಪರಂತು; `ನೀವು ವೇದಗ್ರಂಥವನ್ನು ಓದುವವರೂ ಕಲಿಸುವವರೂ ಆಗಿರುವುದರಿಂದ ನೀವು ಸುಜ್ಞಾನಿಗಳಾಗಿರಿ' ಎಂದಷ್ಟೇ ಅವನು ಹೇಳುವನು.

80

ದೇವಚರರನ್ನೂ ಪ್ರವಾದಿಗಳನ್ನೂ ಆರಾಧ್ಯರನ್ನಾಗಿ ಮಾಡಲು ಆ ಪ್ರವಾದಿ ನಿಮಗೆ ಆಜ್ಞಾಪಿಸ ಲಾರರು. ನೀವು ಪರಿಪೂರ್ಣವಾಗಿ ಅಲ್ಲಾಹನಿಗೆ ಅನುಸರಿಸುವವರಾದ ಬಳಿಕ ಸತ್ಯ ನಿಷೇಧವನ್ನು ಅವರು ನಿಮಗೆ ಆದೇಶಿಸುವರೇ?

81

ಅಲ್ಲಾಹನು ಪ್ರವಾದಿಗಳಿಂದ ಕರಾರು ತೆಗೆದುಕೊಂಡ ಸಂದರ್ಭ(ವನ್ನು ನೆನೆಸಿರಿ). `ನಿಮಗೆ ನಾನು ಗ್ರಂಥ ಮತ್ತು ಸುಜ್ಞಾನವನ್ನು ಕೊಟ್ಟ ಬಳಿಕ ನಿಮ್ಮಲ್ಲಿರುವುದನ್ನು ದೃಢಪಡಿಸುತ್ತಾ ಓರ್ವ ದೂತರು ನಿಮ್ಮ ಬಳಿಗೆ ಬಂದರೆ ಅಗತ್ಯವಾಗಿ ನೀವು ಅವರಲ್ಲಿ ವಿಶ್ವಾಸ ತಾಳಬೇಕು ಹಾಗೂ ಅವರಿಗೆ ಸಹಾಯ ಮಾಡಬೇಕು. (ಎಂದು ಹೇಳಿದ ಬಳಿಕ) ಅವನು (ಅಲ್ಲಾಹು) ಕೇಳಿದನು ; `ನೀವು ಇದನ್ನು ಒಪ್ಪಿಕೊಂಡಿರಾ? ನನ್ನ ಕರಾರನ್ನು ಪಾಲಿಸುವ ಹೊಣೆಯನ್ನು ವಹಿಸಿಕೊಂಡಿರಾ ?’ ಅವರು ಹೇಳಿದರು; ‘ನಾವು ಒಪ್ಪಿ ಕೊಂಡೆವು’. (ಆಗ ಅಲ್ಲಾಹು ಹೇಳಿದನು) ‘ಹಾಗಾದರೆ ನೀವು ಸಾಕ್ಷ್ಯ ವಹಿಸಿರಿ. ನಾನೂ ಕೂಡಾ ನಿಮ್ಮ ಜೊತೆ ಸಾಕ್ಷಿ’

82

ಇನ್ನು ಇದರ ನಂತರ ಯಾರು ವಿಮುಖರಾಗು ತ್ತಾರೋ ಅವರೇ ಧರ್ಮಭ್ರಷ್ಟರು.

83

ಅವರು ಅಲ್ಲಾಹನ ಧರ್ಮವನ್ನು ಹೊರತು ಬೇರೆ ಯಾವುದನ್ನಾದರೂ ಬಯಸುತ್ತಿರುವರೇ? ವಾಸ್ತವದಲ್ಲಿ ಆಕಾಶಗಳಲ್ಲಿರುವವರೂ ಭೂಮಿ ಯಲ್ಲಿರುವವರೂ ಮನಃಪೂರ್ವಕವಾಗಿ ಅಥವಾ ಅನಿವಾರ್ಯವಾಗಿ ಅವನಿಗೆ ಶರಣಾಗಿದ್ದಾರೆ. ಅವರೆಲ್ಲರೂ ಅವನ ಬಳಿಗೇ ಮರಳುವವರು.

84

ಹೇಳಿರಿ. ಅಲ್ಲಾಹನಲ್ಲಿ ನಾವು ವಿಶ್ವಾಸವಿಟ್ಟೆವು. ನಮಗೆ ಅವತೀರ್ಣವಾದುದರಲ್ಲಿಯೂ ಇಬ್‍ರಾಹೀಮ್, ಇಸ್ಮಾಈಲ್, ಇಸ್ಹಾಖ್, ಯಅïಖೂಬ್ ಹಾಗೂ ಅವರ ಸಂತತಿಗಳಿಗೆ ಅವತೀರ್ಣವಾದುದರಲ್ಲಿಯೂ ಮೂಸಾ, ಈಸಾ ಹಾಗೂ ಇತರೆಲ್ಲ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತುದರಲ್ಲಿಯೂ ನಾವು ವಿಶ್ವಾಸವಿಟ್ಟೆವು. ಅವರಲ್ಲಿ ಯಾರ ಬಗ್ಗೆಯೂ ನಾವು ತಾರತಮ್ಯ ಕಲ್ಪಿಸುವುದಿಲ್ಲ. ನಾವು ಅವನಿಗೆ ಸಂಪೂರ್ಣ ಶರಣಾಗತರು.

85

ಇಸ್ಲಾಮ್ ಅಲ್ಲದೆ ಬೇರೆ ಯಾವುದೇ ಮತವನ್ನು ಯಾರಾದರೂ ಬಯಸಿದರೆ ಅವನಿಂದ ಅದನ್ನು ಖಂಡಿತ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟವಂತರ ಸಾಲಿಗೆ ಸೇರುವನು.

86

ಸತ್ಯವಿಶ್ವಾಸ (ಈಮಾನ್)ವನ್ನು ಅವಲಂಬಿಸಿದ ಬಳಿಕವೂ ಅಲ್ಲಾಹನ ದೂತರು ಸತ್ಯವಂತರೆಂದು ಸಾಕ್ಷ್ಯ ವಹಿಸಿದ ಬಳಿಕವೂ ಸುವ್ಯಕ್ತ ಪುರಾವೆಗಳು ಅವರಿಗೆ ಬಂದ ಬಳಿಕವೂ ಸತ್ಯವನ್ನು ನಿಷೇಧಿಸಿದ ಒಂದು ಜನತೆಯನ್ನು ಅಲ್ಲಾಹನು ಸತ್ಯದ ಹಾದಿಗೆ ತರುವುದಾದರೂ ಹೇಗೆ? ಅಕ್ರಮಿಗಳಾದ ಜನತೆಯನ್ನು ಅಲ್ಲಾಹನು ನೇರಮಾರ್ಗಕ್ಕೆ ತರುವುದಿಲ್ಲ.

87

ಇವರ ಮೇಲೆ ಅಲ್ಲಾಹು, ಮಲಕ್‍ಗಳು ಹಾಗೂ ಎಲ್ಲ ಜನರ ಶಾಪವಿದೆ ಎನ್ನುವುದೇ ಇಂತಹವರಿಗೆ ಪ್ರತಿಫಲವಾಗಿದೆ .

88

ಅದರಲ್ಲವರು ಶಾಶ್ವತರಾಗಿರುವರು. ಅವರಿಗೆ ಶಿಕ್ಷೆ ಹಗುರಗೊಳಿಸಲಾಗುವುದಿಲ್ಲ. ಅವರಿಗೆ ಅವಧಿಯನ್ನೂ ಕೊಡಲಾಗುವುದಿಲ್ಲ.

89

ಆದರೆ ಆಮೇಲೆ ಪಶ್ಚಾತ್ತಾಪ ಪಟ್ಟು ತಮ್ಮನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಬಹಳ ಹೆಚ್ಚು ಕ್ಷಮಿಸುವವನೂ ಪರಮ ದಯಾಪರನೂ ಆಗಿರುತ್ತಾನೆ.

90

ಖಂಡಿತವಾಗಿಯೂ ಸತ್ಯವಿಶ್ವಾಸ ತಾಳಿದ ಬಳಿಕ ಕಾಫಿರಾದವರು ಹಾಗೂ ಅವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಂಡವರ ಪಶ್ಚಾತ್ತಾಪವು ಖಂಡಿತ ಸ್ವೀಕೃತವಲ್ಲ. ಅವರೇ ದಾರಿ ತಪ್ಪಿದವರು.

91

ನಿಶ್ಚಯವಾಗಿಯೂ ಸತ್ಯವನ್ನು ನಿಷೇಧಿಸುತ್ತಾ ಸತ್ಯನಿಷೇಧಿಗಳಾಗಿಯೇ ಸತ್ತವರು ಭೂಮಿ ತುಂಬ ಚಿನ್ನವನ್ನು ದಂಡವಾಗಿ ಕೊಟ್ಟರೂ ಕೂಡಾ ಅವರಲ್ಲೊಬ್ಬ ನಿಂದಲೂ ಅದನ್ನು ಖಂಡಿತವಾಗಿಯೂ ಸ್ವೀಕರಿಸಲಾಗದು. ಅವರಿಗೆ ತೀವ್ರ ಯಾತನೆಯ ಸಜೆ ಕಾದಿದೆ. ಅವರಿಗೆ ಯಾವುದೇ ಸಹಾಯಕರು ಇರಲಾರರು.

92

ನಿಮಗೆ ಪ್ರಿಯವಾದ ವಸ್ತುಗಳಿಂದ ನೀವು ವೆಚ್ಚ ಮಾಡುವವರೆಗೂ ನೀವು ಪುಣ್ಯ ಪಡೆಯಲಾರಿರಿ. ನೀವು ಏನೇ ವೆಚ್ಚ ಮಾಡಿದರೂ ಅಲ್ಲಾಹನು ಅದರ ಬಗ್ಗೆ ಖಂಡಿತವಾಗಿಯೂ ಚೆನ್ನಾಗಿ ಬಲ್ಲವನಾಗಿರುತ್ತಾನೆ.

93

ಭಕ್ಷ್ಯ ವಸ್ತುಗಳೆಲ್ಲವೂ ಬನೂ ಇಸ್ರಾಯೀಲರಿಗೆ ಗ್ರಾಹ್ಯವಾಗಿದ್ದವು. ತೌರಾತ್ ಇಳಿಸಲ್ಪಡುವ ಮುನ್ನ ಇಸ್ರಾಈಲ್ (ಯಅïಖೂಬ್ ನಬಿ) ತನಗೆ ನಿಷಿದ್ಧಗೊಳಿಸಿದ್ದು ಹೊರತು. (ಪ್ರವಾದಿಯರೇ !) ನೀವು ಹೇಳಿರಿ; ನೀವು ತೌರಾತನ್ನು ತಂದು ಅದನ್ನೊಮ್ಮೆ ಓದಿರಿ. ನೀವು ಸತ್ಯವಾದಿಗಳಾಗಿದ್ದರೆ!

94

ಇದರ ನಂತರವೂ ಯಾರಾದರೂ ಅಲ್ಲಾಹನ ಮೇಲೆ ಕಟ್ಟುಕತೆ ಹೊರಿಸಿದರೆ ಅವರೇ ಅಕ್ರಮಿಗಳು.

95

ನೀವು ಹೇಳಿರಿ; ಅಲ್ಲಾಹು ಹೇಳಿದುದು ಸತ್ಯ. ಆದ್ದರಿಂದ ಮಿಥ್ಯ ದಾರಿಗಳನ್ನು ತ್ಯಜಿಸಿ ಸತ್ಯ ದಾರಿಯಲ್ಲಿ ಚಲಿಸುತ್ತಿರುವ ಇಬ್ರಾಹೀಮರ ಮಾರ್ಗ ವನ್ನು ಅನುಸರಿಸಿರಿ. ಅವರು ಬಹು ದೇವಾರಾಧಕರ ಕೂಟಕ್ಕೆ ಸೇರಿದವರಾಗಿರಲಿಲ್ಲ.

96

(ಅಲ್ಲಾಹನಿಗೆ ಆರಾಧಿಸಲೆಂದು) ಖಂಡಿತವಾಗಿ ಯೂ ಮನುಷ್ಯರಿಗಾಗಿ ಸ್ಥಾಪಿತವಾದ ಮೊಟ್ಟ ಮೊದಲ ಭವನವು ಬಕ್ಕಃ(ಮಕ್ಕಾ)ದಲ್ಲಿರುವುದೇ ಆಗಿರುತ್ತದೆ. ಅದು ಅನುಗ್ರಹೀತವೂ ಲೋಕದ ವರಿಗೆ ಮಾರ್ಗದರ್ಶಕವೂ ಆಗಿರುತ್ತದೆ.

97

ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. ಇಬ್ರಾಹೀಮ್ ಮಖಾಮ್ (ಅದರಲ್ಲೊಂದು). ಈ ಮಸ್ಜಿದ್‍ಗೆ ಪ್ರವೇಶಿಸಿದವರು ನಿರ್ಭಯರಾಗುತ್ತಾರೆ. ಅಲ್ಲಿಗೆ ತಲಪುವ ತಾಕತ್ತು ಉಳ್ಳ ಮನುಷ್ಯರಿಗೆ ಆ ಗೃಹದಲ್ಲಿ ಹಜ್ಜ್ ಮಾಡುವುದು ಅಲ್ಲಾಹನೊಂ ದಿಗಿನ ಬಾಧ್ಯತೆಯಾಗಿದೆ. ಇನ್ನು ಯಾರಾದರೂ ನಿಷೇಧಿಸಿದರೆ ಅಲ್ಲಾಹನು ಖಂಡಿತವಾಗಿಯೂ ಲೋಕದವರಿಂದ ಆಶ್ರಯ ನಿರಪೇಕ್ಷನಾಗಿ ರುವನು.

98

ಓ ಗ್ರಂಥದವರೇ! ಅಲ್ಲಾಹನ ವಚನಗಳನ್ನು ನೀವು ಯಾಕೆ ನಿಷೇಧಿಸುತ್ತಿದ್ದೀರಿ. ನೀವು ಮಾಡುತ್ತಿರುವ ಕರ್ಮಗಳ ಮೇಲೆ ಅಲ್ಲಾಹನು ಸಾಕ್ಷಿಯಾಗಿರುತ್ತಾನೆ ಎಂದು ಹೇಳಿರಿ (ಪ್ರವಾದಿಯರೇ!)

99

ಹೇಳಿರಿ; ಓ ಗ್ರಂಥದವರೇ, ನೀವು ತಿಳಿದವ ರಾಗಿದ್ದೂ ಕೂಡಾ ವಕ್ರ ಮಾರ್ಗವನ್ನು ಬಯಸುತ್ತಾ ಅಲ್ಲಾಹನ ಮಾರ್ಗದಿಂದ ವಿಶ್ವಾಸಿಗಳನ್ನು ಯಾಕೆ ತಡೆಯುತ್ತಿದ್ದೀರಿ? ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಖಂಡಿತ ಅಶ್ರದ್ಧನಲ್ಲ.

100

ಓ ಸತ್ಯವಿಶ್ವಾಸಿಗಳೇ! ಗ್ರಂಥ ನೀಡಲ್ಪಟ್ಟವರಲ್ಲಿ ಒಂದು ಪಂಗಡವನ್ನು ನೀವು ಅನುಸರಿಸುವು ದಾದರೆ ನಿಮ್ಮನ್ನು ಅವರು ನಿಮ್ಮ ಸತ್ಯವಿಶ್ವಾಸದ ನಂತರ ಅವಿಶ್ವಾಸಿಗಳನ್ನಾಗಿ ತಿರುಗಿಸಿಬಿಡುವರು.

101

ನೀವು ಹೇಗೆ ಅವಿಶ್ವಾಸಿಗಳಾಗುತ್ತೀರಿ? ನಿಮಗೆ ಅಲ್ಲಾಹನ ವಚನಗಳನ್ನು ಓದಿ ಹೇಳಲಾಗುತ್ತಿದೆ. ಅವನ ರಸೂಲರು ನಿಮ್ಮೊಂದಿಗೇ ಇದ್ದಾರೆ. ಯಾರು ಅಲ್ಲಾಹನ ಮಾರ್ಗದರ್ಶನವನ್ನು ಭದ್ರವಾಗಿ ಹಿಡಿದುಕೊಳ್ಳುವರೋ ಖಂಡಿತವಾಗಿಯೂ ಅವರು ಋುಜುಮಾರ್ಗದಲ್ಲಿ ಸೇರಿಸಲ್ಪಟ್ಟವರಾಗುವರು.

102

ಸತ್ಯವಿಶ್ವಾಸಿಗಳೇ! ದೇವಭಕ್ತಿ (ತಖ್‍ವ) ಇರಿಸಿಕೊಳ್ಳ ಬೇಕಾದ ಕ್ರಮ ಪ್ರಕಾರ ನೀವು ಅಲ್ಲಾಹನಲ್ಲಿ ಭಕ್ತಿ ಇರಿಸಿಕೊಳ್ಳಿರಿ. ಮುಸ್ಲಿಮರಾ ಗಿಯಲ್ಲದೆ ನೀವು ಖಂಡಿತ ಮರಣ ಹೊಂದ ಬಾರದು .

103

ನೀವೆಲ್ಲರೂ ಒಗ್ಗಟ್ಟಾಗಿ ಅಲ್ಲಾಹನ ಪಾಶ (ಧರ್ಮ) ವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ನೀವು ಭಿನ್ನರಾಗದಿರಿ. ನಿಮಗೆ ಅಲ್ಲಾಹನು ನೀಡಿದ ಅನುಗ್ರಹವನ್ನು ಜ್ಞಾಪಿಸಿಕೊಳ್ಳಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಆತನು ನಿಮ್ಮ ಮನಸ್ಸುಗಳನ್ನು ಜೋಡಿಸಿದನು. ಹಾಗಾಗಿ ನೀವು ಆತನ ಅನುಗ್ರಹದಿಂದ ಸೋದರರಾದಿರಿ. ನೀವು ಅಗ್ನಿ ಪ್ರಪಾತದ ಅಂಚಿನಲ್ಲಿದ್ದಿರಿ. ಅದರಿಂದ ನಿಮ್ಮನ್ನು ಆತನು ರಕ್ಷಿಸಿದನು. ಈ ರೀತಿ ಅಲ್ಲಾಹನು ಆತನ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತಾನೆ. ನೀವು ಸತ್ಯ ಮಾರ್ಗ ಹೊಂದಲೆಂದು.

104

ಒಳಿತಿನ ಕಡೆಗೆ ಕರೆಯುವ, ಒಳ್ಳೆಯ ಕಾರ್ಯ ಗಳಿಗೆ ಉಪದೇಶ ಕೊಡುವ, ಕೆಟ್ಟದ್ದನ್ನು ವಿರೋಧಿ ಸುವ ಒಂದು ವಿಭಾಗ ಜನರು ನಿಮ್ಮಲ್ಲಿ ಅಗತ್ಯ ವಾಗಿ ಇರಬೇಕು. ನಿಜವಾಗಿಯೂ ಅವರೇ ಜಯ ಶಾಲಿಗಳು.

105

ಸ್ಪಷ್ಟವಾದ ಪುರಾವೆಗಳು ತಮಗೆ ಬಂದ ಬಳಿಕವೂ (ಧರ್ಮದಲ್ಲಿ) ಪರಸ್ಪರ ಭಿನ್ನರಾಗಿ ವಿವಿಧ ಪಕ್ಷಗಳಾದವರಂತೆ ನೀವಾಗಬಾರದು. ಅವರಿಗೆ ಖಂಡಿತವಾಗಿಯೂ ಭಾರೀ ಶಿಕ್ಷೆಯು ಕಾದಿದೆ.

106

ಕೆಲವು ಮುಖಗಳು ಬಿಳಿಯಾಗುವ ಮತ್ತು ಕೆಲವು ಮುಖಗಳು ಕಪ್ಪಾಗುವ ದಿನ (ಆ ಶಿಕ್ಷೆ ಅನುಭವಕ್ಕೆ ಬರುವುದು). ಮುಖವು ಕಪ್ಪಾ ದವರಲ್ಲಿ (ಹೀಗೆಂದು ಹೇಳಲಾಗುವುದು;) ನೀವು ಸತ್ಯವಿಶ್ವಾಸ ತಾಳಿದ ನಂತರ ನೀವು ಸತ್ಯ ನಿಷೇಧಿಗಳಾಗಲಿಲ್ಲವೇ? ಆದ್ದರಿಂದ ನೀವು ಅವಿಶ್ವಾಸಿಯಾದುದರ ಫಲವಾಗಿ ಶಿಕ್ಷೆಯನ್ನು ಅನುಭವಿಸಿರಿ.

107

ಮುಖಗಳು ಬಿಳಿಯಾದವರಾರೋ ಅವರು ಅಲ್ಲಾಹನ ಕೃಪೆಯಲ್ಲಿರುತ್ತಾರೆ. ಅವರು ಅದರಲ್ಲಿ ಶಾಶ್ವತರಾಗಿರುವರು.

108

ಇದೆಲ್ಲವೂ ಅಲ್ಲಾಹನ ಪುರಾವೆಗಳು. ಇದನ್ನು ನಾವು ನಿಮಗೆ ಸತ್ಯಸಮೇತ ಓದಿ ಕೇಳಿಸುತ್ತಿದ್ದೇವೆ. ಅಲ್ಲಾಹನು ಲೋಕದವರನ್ನು ಅಕ್ರಮಿಸಲು ಉದ್ದೇಶಿಸುವುದಿಲ್ಲ.

109

ಆಕಾಶಗಳಲ್ಲಿರುವುದೂ ಭೂಮಿಯಲ್ಲಿರುವುದೂ ಎಲ್ಲವೂ ಅಲ್ಲಾಹನಿಗೆ ಸೇರಿದ್ದು. ಎಲ್ಲ ಕಾರ್ಯ ಗಳೂ (ಕಟ್ಟಕಡೆಗೆ) ಅಲ್ಲಾಹನ ಕಡೆಗೇ ಮರಳು ವುದು.

110

ಮಾನವರ ಒಳಿತಿಗಾಗಿ ನೇಮಿಸಲ್ಪಟ್ಟ ಸಮುದಾ ಯಗಳ ಪೈಕಿ ನೀವು ಅತ್ಯುತ್ತಮ ರಾಗಿರುವಿರಿ. ನೀವು ಒಳಿತನ್ನು ಆಜ್ಞಾಪಿಸುತ್ತೀರಿ. ಕೆಡುಕನ್ನು ವಿರೋಧಿಸುತ್ತೀರಿ. ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ವೇದದವರು ವಿಶ್ವಾಸ ತಾಳಿದ್ದರೆ ಅದು ಅವರಿಗೆ ಒಳ್ಳೆಯದಿತ್ತು. ಅವರ ಕೂಟದಲ್ಲೂ ಸತ್ಯವಿಶ್ವಾಸ ತಾಳಿದವರೂ ಇದ್ದಾರೆ. ಆದರೆ ಅವರಲ್ಲಿ ಬಹು ಮಂದಿ ಧರ್ಮದ್ರೋಹಿಗಳಾಗಿರುವರು.

111

ನಿಮಗೆ ಅವರು ಸ್ವಲ್ಪ ಕಿರುಕುಳ ಕೊಡಬಹುದೇ ಹೊರತು ನಿಮಗೆ ಏನೊಂದು ಹಾನಿ ಮಾಡಲೂ ಅವರಿಂದಾಗದು. ನಿಮ್ಮೊಂದಿಗೆ ಅವರು ಯುದ್ಧ ಮಾಡಿದರೆ ಹಿಂಜರಿದು ಓಡುವರು. ಆಮೇಲೆ (ನಿಮ್ಮ ವಿರುದ್ಧ) ಅವರಿಗೆ ಸಹಾಯ ದೊರೆಯದು

112

ಅವರು ಎಲ್ಲಿದ್ದರೂ ಅವರಲ್ಲಿ ಹೀನತ್ವವು ಮುದ್ರಿತವಾಗಿರುವುದು. ಅಲ್ಲಾಹನಿಂದ ಮತ್ತು ಜನರಿಂದ ಒಂದು ಆಶ್ರಯದ ಹೊರತು (ಅವರಿಗೆ ರಕ್ಷೆಯಿಲ್ಲ). ಅವರು ಅಲ್ಲಾಹನ ಸಿಟ್ಟಿಗೆ ಪಾತ್ರರಾಗಿದ್ದಾರೆ. ದಾರಿದ್ರ್ಯವೂ ಅವರಲ್ಲಿ ಮುದ್ರಿತವಾಗಿದೆ. ಅವರು ಅಲ್ಲಾಹುವಿನ ವಚನಗಳನ್ನು ಧಿಕ್ಕರಿಸುತ್ತಲೂ ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಲೂ ಬಂದುದರಿಂದ (ಈ ದುರವಸ್ಥೆ ಅವರಿಗೆ ಒದಗಿದೆ.) ಇದು ಅವರು ಆಜ್ಞೋಲ್ಲಂಘನೆ ಮಾಡಿದ ಹಾಗೂ ಮೇರೆ ಮೀರಿದುದರ ಫಲವಾಗಿದೆ.

113

ಅವರು (ವೇದದವರು) ಎಲ್ಲರೂ ಸಮಾನರಲ್ಲ. ವೇದದವರ ಪೈಕಿ ಸತ್ಯದಲ್ಲಿ ನೆಲೆಗೊಂಡವರೂ ಇದ್ದಾರೆ. ಅವರು ರಾತ್ರಿಯ ತಾಸುಗಳಲ್ಲಿ ಸಾಷ್ಟಾಂಗವೆರಗುತ್ತಾ ಅಲ್ಲಾಹನ ವಚನಗಳನ್ನು ಓದುತ್ತಾರೆ.

114

ಅಲ್ಲಾಹು ಹಾಗೂ ಅಂತ್ಯ ದಿನದಲ್ಲಿ ಅವರು ನಂಬುತ್ತಾರೆ. ಒಳಿತನ್ನು ಆಜ್ಞಾಪಿಸುತ್ತಾರೆ. ಕೆಡುಕಿನಿಂದ ತಡೆಯುತ್ತಾರೆ. ಒಳಿತುಗಳಲ್ಲಿ ಮುನ್ನುಗ್ಗಿ ಧಾವಿಸುತ್ತಾರೆ. ಅಂಥವರು ಸಜ್ಜನರಲ್ಲಿ ಸೇರಿದವರು.

115

ಅವರು ಮಾಡುವ ಯಾವುದೇ ಒಳಿತನ್ನೂ ನಿಷೇಧಿಸಲಾಗುವುದಿಲ್ಲ. ಅಲ್ಲಾಹನು ಧರ್ಮನಿಷ್ಠರ ಬಗ್ಗೆ ಸರ್ವ ಜ್ಞಾನಿಯು.

116

ಸತ್ಯನಿಷೇಧಿಗಳನ್ನು ತಮ್ಮ ಸೊತ್ತಾಗಲಿ, ಸಂತಾನವಾಗಲಿ ಅಲ್ಲಾಹನ ಶಿಕ್ಷೆಯಿಂದ ಕಿಂಚಿತ್ತೂ ರಕ್ಷಿಸಲಾರವು. ಅಂಥವರು ನರಕದವರು. ಅವರು ಅದರಲ್ಲಿ ಶಾಶ್ವತರು.

117

ಅವರು ಈ ಲೌಕಿಕ ಜೀವನದಲ್ಲಿ ಖರ್ಚು ಮಾಡು ವುದರ ಉಪಮೆ ಒಂದು ಗಾಳಿಯಂತೆ. ಆ ಗಾಳಿಯಲ್ಲಿ ಭೀಕರ ಶೀತವಿದೆ. ಸ್ವಯಂ ದೇಹಗಳನ್ನು ದ್ರೋಹಿಸಿಕೊಂಡ ಒಂದು ಜನಾಂಗದ ಕೃಷಿಯನ್ನು ಅದು ಬಾಧಿಸಿ ಅದನ್ನು ಸರ್ವನಾಶ ಮಾಡಿತು. ಅಲ್ಲಾಹು ಅವರನ್ನು ಅಕ್ರಮಿಸಲಿಲ್ಲ. ಆದರೆ ಅವರೇ ತಮ್ಮ ದೇಹಗಳನ್ನು ಅಕ್ರಮಿಸಿ ಕೊಂಡರು.

118

ಓ ಸತ್ಯವಿಶ್ವಾಸಿಗಳೇ! ನಿಮ್ಮವರಲ್ಲದವರನ್ನು ನಿಮ್ಮ ರಹಸ್ಯಗಳಿಗೆ ತಾಣವನ್ನಾಗಿ ಮಾಡಬೇಡಿರಿ. ಅವರು ನಿಮಗೆ ಕೇಡು ಬಗೆಯುವುದಕ್ಕೆ ಹೇಸಲಾರರು. ನೀವು ತಾಪತ್ರಯಕ್ಕೀಡಾಗುವು ದನ್ನು ಅವರು ಇಷ್ಟಪಡುತ್ತಾರೆ. ನಿಮ್ಮ ಮೇಲಿನ ಅವರ ತೀವ್ರ ಕ್ರೋಧವು ಅವರ ಬಾಯಿಂದ ಪ್ರಕಟವಾಗಿದೆ. ಅದಕ್ಕಿಂತ ಹೆಚ್ಚಿನ ವೈರವನ್ನು ಮನಸ್ಸಲ್ಲಿ ಅಡಗಿಸಿಟ್ಟು ಕೊಂಡಿದ್ದಾರೆ. ನಿಮಗೆ ನಾವು ಮಾಹಿತಿಗಳನ್ನು ವಿವರಿಸಿ ಕೊಟ್ಟಿರುತ್ತೇವೆ. ನೀವು ಆಲೋಚಿಸುವುದಾದರೆ!

119

ನೋಡಿ! ನೀವು ಅವರನ್ನು ಪ್ರೀತಿಸುವಿರಾದರೂ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲ ವೇದ ಗ್ರಂಥಗಳಲ್ಲಿ ನಂಬಿಕೆ ಇರಿಸುತ್ತೀರಿ. (ಆದರೆ ಅವರು ನಿಮ್ಮ ವೇದದಲ್ಲಿ ನಂಬಿಕೆ ಹೊಂದುವುದಿಲ್ಲ.) ಅವರು ನಿಮ್ಮನ್ನು ಕಾಣ ಸಿಕ್ಕಾಗ ‘ನಾವು ಕೂಡಾ ವಿಶ್ವಾಸವಿಟ್ಟಿದ್ದೇವೆ’ ಎನ್ನುತ್ತಾರೆ. ನಿಮ್ಮಿಂದ ಬೇರ್ಪಟ್ಟಾಗ ನಿಮ್ಮ ಮೇಲಿನ ಕಠಿಣ ಸಿಟ್ಟಿನಿಂದ ಅವರ ಬೆರಳುಗಳನ್ನು ಕಚ್ಚಿಕೊಳ್ಳುತ್ತಾರೆ. “ನಿಮ್ಮ ಕೋಪದಿಂದಲೇ ನೀವು ಸಾಯಿರಿ” ಎಂದು ನೀವು ಹೇಳಿರಿ! ಖಂಡಿತ ಅಲ್ಲಾಹನು ಮನದೊಳಗಿರುವುದನ್ನು ಬಲ್ಲವನಾಗಿರುವನು.

120

ನಿಮಗೇನಾದರೂ ಹಿತ ಉಂಟಾದರೆ ಅದು ಅವರಿಗೆ ದುಃಖವನ್ನುಂಟು ಮಾಡುತ್ತದೆ. ನಿಮಗೇ ನಾದರೂ ಕೇಡು ತಟ್ಟಿದರೆ ಅದರಿಂದ ಅವರು ಆನಂದ ಪಡುತ್ತಾರೆ. ನೀವು ಸಹನೆ ಪಾಲಿಸಿದರೆ ಮತ್ತು ಅಲ್ಲಾಹನಲ್ಲಿ ಭಯಭಕ್ತಿಯಿಂದಿದ್ದರೆ ಅವರ ಕುತಂತ್ರವು ನಿಮಗೆ ಯಾವುದೇ ಹಾನಿಯನ್ನು ಮಾಡಲಾರದು. ಅವರ ಕೃತ್ಯಗಳನ್ನೆಲ್ಲ ಅಲ್ಲಾಹು ಆವರಿಸಿ ತಿಳಿಯುತ್ತಿರುತ್ತಾನೆ.

121

(ಪ್ರವಾದಿಯವರೇ!) ತಮ್ಮ ಮನೆಯಿಂದ ತಾವು ನಸುಕಿನಲ್ಲಿ ಹೊರಟು ಯುದ್ಧಕ್ಕಾಗಿ ಸತ್ಯವಿಶ್ವಾಸಿ ಗಳನ್ನು ಮರ್ಮಸ್ಥಾನಗಳಲ್ಲಿ ಅಣಿಗೊಳಿಸಿದ ಸಂದರ್ಭ . ಅಲ್ಲಾಹನು ಚೆನ್ನಾಗಿ ಆಲಿಸುವವನೂ ಚೆನ್ನಾಗಿ ತಿಳಿಯುವವನೂ ಆಗಿರುತ್ತಾನೆ.

122

ನಿಮ್ಮಲ್ಲಿದ್ದ ಎರಡು ಸಂಘಗಳು ಹೆದರಿ ಹಿಂಜರಿಯ ಲೆತ್ನಿಸಿದ ಸಂದರ್ಭ . ಆದರೆ ಅಲ್ಲಾಹನು ಎರಡು ಸಂಘಗಳ ರಕ್ಷಕನಾಗಿದ್ದಾನೆ. ಸತ್ಯ ವಿಶ್ವಾಸಿಗಳು ಅಲ್ಲಾಹನಲ್ಲಿ ಭಾರವನ್ನರ್ಪಿಸಲಿ.

123

ನೀವು ದುರ್ಬಲರಾಗಿದ್ದಾಗ ಅಲ್ಲಾಹನು ನಿಮಗೆ ಬದ್‍ರ್‍ನಲ್ಲಿ ಖಂಡಿತ ಸಹಾಯ ಮಾಡಿದನು. ಆದ್ದರಿಂದ ನೀವು ಅಲ್ಲಾಹನಲ್ಲಿ ಭಕ್ತಿಯಿರಿಸಿರಿ. ನೀವು ಕೃತಜ್ಞತೆ ತೋರಿದವರಾಗಲು.

124

`ನಿಮ್ಮ ಪ್ರಭುವು ಮೂರು ಸಾವಿರ ಮಲಕ್‍ಗಳನ್ನು ಇಳಿಸಿ ಸಹಾಯ ಮಾಡಿದರೆ ನಿಮಗದು ಸಾಲದೇ? ಎಂದು ನೀವು (ಪ್ರವಾದಿಯವರು) ಸತ್ಯವಿಶ್ವಾಸಿಗಳಲ್ಲಿ ಹೇಳುತ್ತಿದ್ದ ಸಂದರ್ಭ.

125

ಹೌದು. ಅದು ಸಾಕು. (ಆದರೆ ಅಷ್ಟೇ ಅಲ್ಲ;) ನೀವು ಸಹನೆ ತಾಳುವುದಾದರೆ ಮತ್ತು ಅಲ್ಲಾಹನಲ್ಲಿ ಭಕ್ತಿಯಿರಿಸುವುದಾದರೆ ಅವರು (ವೈರಿಗಳು) ಈ ಕ್ಷಣದಲ್ಲೇ ನಿಮ್ಮ ಮೇಲೆ ಆಕ್ರಮಿಸಲು ಬಂದರೂ ಯುದ್ಧದ ವಿಶೇಷ ಚಿಹ್ನೆಗಳಿರುವ ಐದು ಸಾವಿರ ಮಲಕ್‍ಗಳ ಮೂಲಕ ನಿಮ್ಮ ಪ್ರಭುವು ನಿಮಗೆ ಸಹಾಯ ಮಾಡುವನು.

126

ಅಲ್ಲಾಹನು ಹೀಗೆ ಮಾಡಿದ್ದು ನಿಮಗೊಂದು ಶುಭವಾರ್ತೆಯಾಗಿಯೂ ಅದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗಲೆಂದೂ ಆಗಿದೆ. (ವಾಸ್ತವದಲ್ಲಿ) ಸಹಾಯವು ಪ್ರತಾಪಿಯೂ ಪರಮ ಯುಕ್ತಿವಂತನೂ ಆದ ಅಲ್ಲಾಹನಿಂದ ಮಾತ್ರವಾಗಿರುತ್ತದೆ.

127

ಇದು ಸತ್ಯನಿಷೇಧಿಗಳ ಒಂದು ವಿಭಾಗವನ್ನು ನಾಶಪಡಿಸಲು ಅಥವಾ ಅವರು ಸೋತು ನಿರಾಶೆಯಿಂದ ಹಿಮ್ಮೆಟ್ಟಿ ನಿಂದ್ಯಗೊಳಿಸಲಿಕ್ಕಾಗಿ.

128

(ಪ್ರವಾದಿಯರೇ) ಕಾರ್ಯಗಳಲ್ಲಿ ತಮಗೆ ಯಾವುದೇ ಅಧಿಕಾರವಿರುವುದಿಲ್ಲ. ಒಂದೋ ಅವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ನಿಜವಾಗಿಯೂ ಅವರು ಅಕ್ರಮಿಗಳು .

129

ಆಕಾಶಗಳು ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದು. ಆತನು ಉದ್ದೇಶಿಸಿದವರಿಗೆ ಕ್ಷಮೆ ನೀಡುವನು. ತಾನುದ್ದೇಶಿಸಿದವರಿಗೆ ಶಿಕ್ಷೆ ನೀಡುವನು. ಅಲ್ಲಾಹನು ಪರಮ ಕ್ಷಮಾಶೀಲನೂ ದಯಾಳುವೂ ಆಗಿರುವನು.

130

ಸತ್ಯವಿಶ್ವಾಸಿಗಳೇ ! ನೀವು ಇಮ್ಮಡಿ-ಗಿಮ್ಮಡಿ ಬಡ್ಡಿ ತಿನ್ನದಿರಿ. ಅಲ್ಲಾಹನಲ್ಲಿ ಭಯಭಕ್ತಿಯಿರಿಸಿಕೊಳ್ಳಿರಿ. ನೀವು ವಿಜಯ ಹೊಂದಬಹುದು.

131

ಸತ್ಯನಿಷೇಧಿಗಳಿಗಾಗಿ ಕಾದಿರಿಸಲಾದಂತಹ ನರಕದ ಬಗ್ಗೆ ನೀವು ಎಚ್ಚರಿಕೆ ವಹಿಸಿಕೊಳ್ಳಿರಿ.

132

ನೀವು ಅಲ್ಲಾಹು ಮತ್ತು ರಸೂಲರನ್ನು ಅನುಸರಿಸಿರಿ. ಹಾಗಾದರೆ ನೀವು ಅನುಗ್ರಹೀತ ರಾಗುವಿರಿ.

133

ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ ಮತ್ತು ಆಕಾಶಗಳಷ್ಟು ವಿಶಾಲವಾದ ಸ್ವರ್ಗದ ಕಡೆಗೆ ಧಾವಿಸಿ ಮುನ್ನುಗ್ಗಿರಿ. ಸ್ವರ್ಗವನ್ನು ಧರ್ಮನಿಷ್ಟ ರಿಗಾಗಿ ಕಾದಿರಿಸಲಾಗಿದೆ.

134

ಅವರು ಸಂತೋಷದ ಸಮಯದಲ್ಲೂ ಕಷ್ಟದ ಸಮಯದಲ್ಲೂ ದಾನ-ಧರ್ಮ ಮಾಡುವವರು. ಕೋಪವನ್ನು ನುಂಗುವವರು ಮತ್ತು ಜನರಿಗೆ ಕ್ಷಮೆ ತೋರುವವರು ಆಗಿರುತ್ತಾರೆ. ಸತ್ಕರ್ಮಿಗಳನ್ನು ಅಲ್ಲಾಹು ಇಷ್ಟಪಡುತ್ತಾನೆ.

135

ಅವರು ಅಶ್ಲೀಲ ಕೃತ್ಯವನ್ನು ಮಾಡಿದರೆ ಅಥವಾ (ಪಾಪಗಳ ಮೂಲಕ) ತಮಗೆ ತಾವೇ ದ್ರೋಹ ಮಾಡಿಕೊಂಡರೆ ಅಲ್ಲಾಹನನ್ನು ನೆನೆಸುತ್ತಾರೆ, ಕೂಡಲೇ ತಮ್ಮ ಪಾಪಗಳಿಗೆ ಕ್ಷಮೆ ಬೇಡುತ್ತಾರೆ. ಪಾಪಗಳನ್ನು ಕ್ಷಮಿಸುವವನು ಅಲ್ಲಾಹನಲ್ಲದೆ ಬೇರೆ ಯಾರಿದ್ದಾರೆ ? ಅವರು ತಿಳಿದೂ ತಮ್ಮ ಪಾಪ ಕೃತ್ಯಗಳ ಮೇಲೆ ಸ್ಥಿರವಾಗಿರುವವರಲ್ಲ .

136

ಅವರ ಪ್ರತಿಫಲವಾದರೋ ಅವರ ಪ್ರಭುವಿನಿಂದ ಕ್ಷಮಾದಾನವೂ ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗಗಳೂ ಆಗಿವೆ. ಅದರಲ್ಲಿ ಅವರು ಶಾಶ್ವತರು. ಆ ಸತ್ಕರ್ಮಿಗಳ ಪ್ರತಿಫಲ ಅದೆಷ್ಟು ಚೆನ್ನಾಗಿದೆ!

137

ನಿಮಗೂ ಹಿಂದೆ ಅನೇಕ (ದೈವಿಕ) ಕಾರ್ಯಾಚರಣೆಗಳು ನಡೆದಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿರಿ ಹಾಗೂ ಸತ್ಯವನ್ನು ಸುಳ್ಳಾಗಿಸಿದವರ ಪರ್ಯವಸಾನ ಏನಾಯಿತೆನ್ನುವುದನ್ನು ನೋಡಿರಿ.

138

ಇದು (ಖುರ್‍ಆನ್) ಎಲ್ಲ ಜನರಿಗೆ ಇರುವ ವಿವರಣೆಯೂ ಸೂಕ್ಷ್ಮಮತಿಗಳಿಗೆ ಮಾರ್ಗದರ್ಶನ ಹಾಗೂ ಸದುಪದೇಶವಾಗಿದೆ .

139

ನೀವು ದುರ್ಬಲರೋ ದುಃಖಿತರೋ ಆಗದಿರಿ. ನೀವು ನಿಜವಾದ ವಿಶ್ವಾಸಿಗಳಾಗಿದ್ದರೆ ನೀವೇ ಉನ್ನತರು.

140

ಇಂದು ನಿಮಗೊಂದು ಗಾಯ ತಟ್ಟಿದ್ದರೆ ಅದೇ ತರದ ಗಾಯ ಅವರಿಗೂ ಖಂಡಿತ ತಟ್ಟಿತ್ತು. ಆ (ಜಯಾಪಜಯಗಳ) ದಿವಸಗಳನ್ನು ನಾವು ಜನರೆಡೆಯಲ್ಲಿ ಬದಲಿಸುತ್ತಿರುತ್ತೇವೆ . ಇದು (ಕಪಟಿಗಳಿಂದ) ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಬೇರ್ಪಡಿಸಿ ಗುರುತಿಸಲು ಹಾಗೂ ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕೂ ಆಗಿದೆ. ಅಲ್ಲಾಹನು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.

141

ಮತ್ತು ಸತ್ಯವಿಶ್ವಾಸಿಗಳನ್ನು ಅಲ್ಲಾಹನು ಶುದ್ಧೀಕರಿಸಲಿಕ್ಕೂ ಸತ್ಯನಿಷೇಧಿಗಳನ್ನು ನಾಶಪಡಿಸಲಿಕ್ಕೂ ಆಗಿದೆ.

142

ಅದಲ್ಲ; ನಿಮ್ಮ ಪೈಕಿ ಯುದ್ಧ ಮಾಡಿದವರು ಹಾಗೂ (ರಣಾಂಗಣದಲ್ಲಿ) ಸಹನೆ ಪಾಲಿಸಿದವರನ್ನು ಅಲ್ಲಾಹನು ಪರೀಕ್ಷಿಸದೆ ಸ್ವರ್ಗಕ್ಕೆ ನೀವು ಹೋಗುವಿರೆಂದು ಭಾವಿಸಿದ್ದೀರಾ?

143

ನೀವು ಮರಣವನ್ನು ಎದುರುಗೊಳ್ಳುವ ಮುನ್ನ (ಅಲ್ಲಾಹನ ಮಾರ್ಗದಲ್ಲಿ) ಮರಣವನ್ನು ಬಯಸುವವರಾಗಿದ್ದಿರಿ. ಇದೀಗ ನೀವು ನೋಡುತ್ತಿರುವಂತೆಯೇ ಅದನ್ನು ನೀವು ಕಂಡಿರಿ. (ಆದರೂ ನೀವು ಯಾಕೆ ಓಡಿ ಹೋದಿರಿ ?)

144

ಮುಹಮ್ಮದರು ಅಲ್ಲಾಹನ ಓರ್ವ ದೂತರು ಮಾತ್ರ. ಅವರಿಗೆ ಮೊದಲೂ ಕೆಲವು ದೂತರು ಆಗಿ ಹೋಗಿದ್ದಾರೆ. ಆದರೆ ಅವರು ಮೃತರಾದರೆ ಅಥವಾ ಹತರಾದರೆ ನೀವು ಹಿಂಜರಿದು ಓಡುವಿರೇನು? ಯಾರಾದರೂ ಹಿಂಜರಿದು ಓಡುವುದಾದರೆ ಅದರಿಂದ ಅಲ್ಲಾಹನಿಗೆ ಯಾವ ದೋಷವೂ ಇರುವುದಿಲ್ಲ. ಕೃತಜ್ಞತೆಯುಳ್ಳವರಿಗೆ ಅಲ್ಲಾಹು ತಕ್ಕ ಪ್ರತಿಫಲವನ್ನು ಕೊಡಲಿದ್ದಾನೆ.

145

ಅಲ್ಲಾಹನ ವಿಧಿಯ ಹೊರತು ಯಾವನಿಗೂ ಮರಣ ಸಂಭವಿಸದು. ಅದು ನಿರ್ಧರಿತ ಅವಧಿಯಾಗಿದೆ. ಯಾವನು ಇಹದ ಫಲವನ್ನು ಬಯಸುತ್ತಾನೋ ಅವನಿಗೆ ಅದನ್ನು ನಾವು ಕೊಡುತ್ತೇವೆ. ಯಾವನು ಪರದ ಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದ ಕೊಡುತ್ತೇವೆ. ಕೃತಜ್ಞತೆ ಯುಳ್ಳವರಿಗೆ ತಕ್ಕುದಾದ ಫಲವನ್ನು ನಾವು ಕೊಡಲಿದ್ದೇವೆ.

146

ಎಷ್ಟೆಷ್ಟು ಪ್ರವಾದಿಗಳ ಜೊತೆಯಲ್ಲಿ ಅನೇಕ ಕೂಟಗಳು ಯುದ್ಧ ಮಾಡಿವೆ! ಹಾಗೆಯೇ ಅವರಿಗೆ ಅಲ್ಲಾಹನ ಮಾರ್ಗದಲ್ಲಿ ಬಾಧಿಸಿದ ಕಷ್ಟಗಳಿಂದ ಅವರೇನೂ ಅಂಜಿರಲಿಲ್ಲ. ದುರ್ಬಲರೂ ಆಗಿರಲಿಲ್ಲ. (ವೈರಿಗಳಿಗೆ) ಶರಣಾಗಲಿಲ್ಲ. ಅಲ್ಲಾಹನು ಸಹನಶೀಲರನ್ನು ಪ್ರೀತಿಸುತ್ತಿದ್ದಾನೆ.

147

`ನಮ್ಮ ಪ್ರಭೂ ! ನಮ್ಮ ಪಾಪಗಳನ್ನೂ ನಮ್ಮ ಕಾರ್ಯಗಳಲ್ಲಿ ಬಂದ ಅತಿರೇಕಗಳನ್ನೂ ಕ್ಷಮಿಸು ! (ಯುದ್ಧದಲ್ಲಿ) ನಮ್ಮ ಪಾದಗಳನ್ನು ನೆಲೆಯೂರಿಸು. ಅವಿಶ್ವಾಸಿಗಳ ವಿರುದ್ಧ ನಮಗೆ ಸಹಾಯ ಮಾಡು' ಎಂಬ ಮಾತಲ್ಲದೆ ಬೇರೆ ಮಾತು ಅವರಿಂದ ಬಂದಿರಲಿಲ್ಲ.

148

ಆದ್ದರಿಂದ ಅವರಿಗೆ ಐಹಿಕ ಪ್ರತಿಫಲವನ್ನೂ ಶ್ರೇಷ್ಠವಾದ ಪಾರತ್ರಿಕ ಫಲವನ್ನೂ ಅಲ್ಲಾಹನು ಕೊಟ್ಟನು. ಅಲ್ಲಾಹನು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ.

149

ಸತ್ಯವಿಶ್ವಾಸಿಗಳೇ! ನೀವು ಅವಿಶ್ವಾಸಿಗಳಿಗೆ ಅನುಸರಿಸಿದರೆ ಅವರು ನಿಮ್ಮನ್ನು ಪೂರ್ವ ಸ್ಥಿತಿಗೆ ಮರಳಿಸುವರು. ಆಗ ನೀವು ನಷ್ಟ ಹೊಂದಿದವರಾಗಿ ಹಿಂತಿರುಗುವಿರಿ.

150

ಆದರೆ ಅಲ್ಲಾಹನು ನಿಮ್ಮ ರಕ್ಷಾಧಿಪತಿಯಾಗಿರು ವನು. ಅವನು ಸಹಾಯಕರಲ್ಲಿ ಉತ್ತಮ ನಾಗಿರುವನು.

151

ಸತ್ಯನಿಷೇಧಿಗಳ ಹೃದಯದಲ್ಲಿ ಸದ್ಯದಲ್ಲೇ ನಾವು ಭೀತಿಯನ್ನು ಹುಟ್ಟಿಸುವೆವು. ಅಲ್ಲಾಹು ತನ್ನ (ಸಹಭಾಗಿಗಳೆಂದು) ಯಾವುದೇ ಆಧಾರವನ್ನು ಅವತೀರ್ಣಗೊಳಿಸಿರದಂತಹ ವಸ್ತುಗಳನ್ನು ಅವರು ಸಹಭಾಗಿಗಳಾಗಿ ಮಾಡಿದುದರ ಫಲವಿದು. ಅವರ ವಾಸಸ್ಥಳ ನರಕವಾಗಿದೆ. ಅಕ್ರಮಿಗಳ ನಿವಾಸ ಅದೆಷ್ಟು ನೀಚ!

152

ಅಲ್ಲಾಹನ ಅನುಮತಿ ಪ್ರಕಾರ ಅವರೊಂದಿಗೆ ನೀವು ಹೋರಾಡುತ್ತಿರುವಾಗ ಆತನು ತನ್ನ ಸಹಾಯದ ವಾಗ್ದಾನವನ್ನು ಚೆನ್ನಾಗಿ ಪಾಲಿಸಿದನು. ಹಾಗಿದ್ದೂ ನಿಮಗೆ ಇಷ್ಟವಾದುದನ್ನು ಅಲ್ಲಾಹನು ನಿಮಗೆ ತೋರಿಸಿಕೊಟ್ಟ ನಂತರವೂ ನೀವು ಭೀರುತ್ವ ತೋರಿದಿರಿ. (ಪ್ರವಾದಿಯವರ) ಆದೇಶದ ವಿಷಯದಲ್ಲಿ ಭಿನ್ನರಾದಿರಿ ಹಾಗೂ ಆದೇಶಕ್ಕೆ ವಿರೋಧವಾಗಿ ವರ್ತಿಸಿದಿರಿ. (ಆದ್ದರಿಂದ ಅವನು ತನ್ನ ಸಹಾಯವನ್ನು ಹಿಂತೆಗೆದುಕೊಂಡನು.) ನಿಮ್ಮ ಕೂಟದಲ್ಲಿ ಇಹಲೋಕವನ್ನು ಬಯಸುವವರೂ ಪರಲೋಕವನ್ನು ಬಯಸುವವರೂ ಇದ್ದಾರೆ. ತರುವಾಯ ನಿಮ್ಮನ್ನು ಪರೀಕ್ಷಿ ಸಲೋಸುಗ ನಿಮ್ಮನ್ನು ಅವನು ಶತ್ರುಗಳಿಂದ ಹಿಂಜರಿಸಿದನು. ಖಂಡಿತ ವಾಗಿಯೂ ಅಲ್ಲಾಹನು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹನು ಸತ್ಯ ವಿಶ್ವಾಸಿಗಳ ಮೇಲೆ ಬಹಳ ಔದಾರ್ಯವುಳ್ಳವನಾಗಿರುವನು.

153

ಯಾರತ್ತಲೂ ತಿರುಗಿ ನೋಡದೆ ನೀವು ಓಡಿ ಹೋದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹನ ದೂತರು ನಿಮ್ಮನ್ನು ಹಿಂದಿನಿಂದ ಕರೆಯುತ್ತಿದ್ದರು. ಆದ್ದರಿಂದ ಮೇಲಿಂದ ಮೇಲೆ ದುಃಖವನ್ನು ನಿಮಗವನು ಪ್ರತಿಫಲವಾಗಿ ಕೊಟ್ಟನು . (ಆದರೆ) ವಿಪತ್ತು ಸಂಭವಿಸಿದುದಕ್ಕೂ ವಸ್ತುಗಳು ನಷ್ಟವಾದುದಕ್ಕೂ ನೀವು ದುಃಖಿತರಾಗದಿರಲೆಂದು (ಅವನು ನಿಮಗೆ ಕ್ಷಮಿಸಿದನು). ಅಲ್ಲಾಹನು ನೀವು ಮಾಡುತ್ತಿದ್ದುದನ್ನು ಸೂಕ್ಷ್ಮವಾಗಿ ಅರಿಯುವವನಾಗಿರುತ್ತಾನೆ.

154

ದುಃಖದ ನಂತರ ನಿಮ್ಮ ಮೇಲೆ ಅವನೊಂದು ಶಾಂತಿಯನ್ನು ಅಂದರೆ ಒಂದು ನಿದ್ದೆಯ ಮಂಪರನ್ನು ಇಳಿಸಿದನು. ಅದು ನಿಮ್ಮ ಪೈಕಿ ಒಂದು ವಿಭಾಗದವರನ್ನು ಆವರಿಸಿತ್ತು. ಆದರೆ ಇನ್ನೊಂದು ವಿಭಾಗದವರ ಸ್ವಂತ ಆತ್ಮಗಳು ಅವರನ್ನು ಚಿಂತೆಗೀಡುಮಾಡಿದ್ದುವು. ಅಲ್ಲಾಹನ ಬಗ್ಗೆ ಅಸತ್ಯವಾದ ಅಜ್ಞಾನಜನ್ಯ ಯೋಚನೆ ಗಳನ್ನು ಅವರು ಮಾಡಿಬಿಟ್ಟರು. ನಮಗೆ ನೆರವಿನ ಕಾರ್ಯದಲ್ಲಿ ಏನಾದರೂ ಇದೆಯೇ ಎಂದು ಅವರು ಕೇಳುತ್ತಿದ್ದರು. ತಾವು ಹೇಳಿರಿ; `ಖಂಡಿತವಾಗಿಯೂ ಕಾರ್ಯಗಳೆಲ್ಲವೂ ಅಲ್ಲಾಹನಿಗೇ ಇವೆ. “ತಮಗೆ ಎದುರಿಗೆ ತೋರಿಸದಂತಹ ಕೆಲವು ವಿಷಯಗಳನ್ನು ಅವರು ಒಳಗೆ ಅವಿತಿರಿ ಸಿಕೊಂಡಿರುತ್ತಾರೆ. ‘ನಮಗೆ ಸ್ವಾತಂತ್ರ್ಯವಿದ್ದಿದ್ದರೆ ಇಲ್ಲಿ ನಾವು ವಧಿಸಲ್ಪಡುತ್ತಿರಲಿಲ್ಲ’ ಎಂದವರು ಹೇಳುತ್ತಿದ್ದರು. ತಾವು, ಹೇಳಿರಿ; `ನೀವು ನಿಮ್ಮ ಮನೆಗಳಲ್ಲಿ ಕೂತಿದ್ದರೂ ಯಾರ ಮೇಲೆ ಸಾವಿನ ವಿಧಿ ಬಂದಿದೆಯೋ ಅವರು ಸಾಯುವ ಜಾಗಕ್ಕೆ ತಲುಪಿಯೇ ತೀರುತ್ತಿದ್ದರು. ಇದು ಅಲ್ಲಾಹನು ನಿಮ್ಮ ಹೃದಯಗಳಲ್ಲಿರುವುದನ್ನು ಪರೀಕ್ಷಿಸಲು ಮತ್ತು ನಿಮ್ಮ ಹೃದಯದ ಮಾಲಿನ್ಯವನ್ನು ಶುದ್ದೀಕರಿಸಲು ಆಗಿದೆ. ಹೃದಯಗಳಲ್ಲಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲವನಾಗಿರುತ್ತಾನೆ.

155

ಎರಡು ಬಣಗಳು ಎದುರುಬದುರಾದ ಆ ದಿನದಂದು ನಿಮ್ಮ ಕೂಟದಿಂದ ಹಿಂಜರಿದು ಓಡಿದವರು, ಅವರು ಮಾಡಿದ ಕೆಲವು ದೋಷ ಕೃತ್ಯಗಳ ಕಾರಣದಿಂದ ನಿಜವಾಗಿಯೂ ಶೈತಾನನು ಅವರನ್ನು ದಾರಿ ತಪ್ಪಿಸಿದನು. ಆದರೆ ಖಂಡಿತವಾಗಿಯೂ ಅಲ್ಲಾಹನು ಅವರಿಗೆ ಮಾಫಿ ಕೊಟ್ಟಿರುವನು. ಅಲ್ಲಾಹನು ನಿಜವಾಗಿಯೂ ಬಹಳ ಕ್ಷಮಾದಾನಿಯೂ ಬಹಳ ಹೆಚ್ಚು ಸಹನೆಯುಳ್ಳವನೂ ಆಗಿರುತ್ತಾನೆ.

156

ಓ ಸತ್ಯ ವಿಶ್ವಾಸಿಗಳೇ! ನೀವು ಅವಿಶ್ವಾಸಿಗಳಂತೆ ಆಗಬಾರದು. ಅವರು ತಮ್ಮ ಸೋದರರ ಬಗ್ಗೆ ಅವರು ಭೂಮಿಯಲ್ಲಿ ಯಾತ್ರೆ ಹೋದಾಗ ಅಥವಾ ಯುದ್ದಕ್ಕೆ ಹೋಗಿದ್ದಾಗ (ಮರಣಗೊಂಡಿದ್ದರೆ) `ಅವರು ತಮ್ಮ ಬಳಿ ಇರುತ್ತಿದ್ದರೆ ಸಾಯುತ್ತಿರಲಿಲ್ಲ ಅಥವಾ ಕೊಲ್ಲಲ್ಪಡುತ್ತಿರಲಿಲ್ಲ' ಎಂದು ಹೇಳಿದರು. ಇದು ಅವರ ಹೃದಯದಲ್ಲಿ ಅಲ್ಲಾಹನು ಅದನ್ನೊಂದು ಖೇದವನ್ನಾಗಿ ಉಳಿಸಲಿಕ್ಕಾಗಿದೆ. ಅಲ್ಲಾಹನು ಜೀವಕೊಡುತ್ತಾನೆ ಮತ್ತು ಮರಣಗೊಳಿಸುತ್ತಾನೆ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮದರ್ಶಕನು.

157

ನೀವು ಅಲ್ಲಾಹನ ಮಾರ್ಗದಲ್ಲಿ ಕೊಲ್ಲಲ್ಪಟ್ಟರೂ ಅಥವಾ (ಬೇರೆ ವಿಧದಲ್ಲಿ) ನೀವು ತೀರಿದರೂ, ಖಂಡಿತವಾಗಿಯೂ ಅಲ್ಲಾಹನಿಂದ ದೊರೆಯುವ ಕ್ಷಮಾದಾನ ಮತ್ತು ಅನುಗ್ರಹವು ಅವರು ಶೇಖರಿಸುವುದಕ್ಕಿಂತ ಶ್ರೇಷ್ಠವಾಗಿದೆ.

158

ನೀವು (ಸಹಜವಾಗಿ) ಮರಣ ಹೊಂದಿದರೂ ಅಥವಾ ಕೊಲ್ಲಲ್ಪಟ್ಟರೂ ನೀವು ಒಂದುಗೂಡಿಸ ಲ್ಪಡುವುದು ಅಲ್ಲಾಹನೆಡೆಗೇ ಆಗಿರುತ್ತದೆ.

159

(ಪ್ರವಾದಿಯವರೇ!) ನೀವು ಅವರ ಜೊತೆ ಮೃದುವಾಗಿ ವರ್ತಿಸಿದ್ದು ಅಲ್ಲಾಹನ ಕಾರುಣ್ಯದಿಂದ ಮಾತ್ರವಾಗಿದೆ. ನೀವು ಒರಟರೂ, ಕಠಿಣ ಹೃದಯಿಯೂ ಆಗಿದ್ದರೆ ನಿಮ್ಮ ಸುತ್ತಲಿಂದ ಅವರು ಚದುರಿ ಹೋಗುತ್ತಿದ್ದರು. ಆದ್ದರಿಂದ ಅವರಿಗೆ ಮಾಫಿಕೊಡಿರಿ. ಅವರ ಪರವಾಗಿ ಪಾಪ ಮುಕ್ತಿ ಬೇಡಿರಿ. ಅವರ ಜೊತೆಗೆ (ಭಾವೀ) ಕಾರ್ಯಗಳಲ್ಲಿ ಸಮಾಲೋಚನೆ ನಡೆಸಿರಿ. ನೀವು ನಿರ್ಧಾರ ಮಾಡಿದ ಮೇಲೆ ಅಲ್ಲಾಹನ ಮೇಲೆ ಭಾರವರ್ಪಿಸಿರಿ. ಅಲ್ಲಾಹನು, ತನ್ನಲ್ಲಿ ಭಾರವರ್ಪಿಸುವವರನ್ನು ಖಂಡಿತ ಪ್ರೀತಿಸುತ್ತಾನೆ.

160

ಅಲ್ಲಾಹನು ನಿಮಗೆ ಸಹಾಯ ಮಾಡಿದರೆ ಮತ್ತೆ ನಿಮ್ಮ ಮೇಲೆ ಜಯ ಸಾಧಿಸುವವನಿಲ್ಲ. ಆತನು ನಿಮ್ಮನ್ನು ಕೈ ಬಿಟ್ಟರೆ ಆತನಲ್ಲದೆ ನಿಮಗೆ ಸಹಾಯಕರು ಯಾರಿದ್ದಾರೆ ? ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ಭಾರವನ್ನರ್ಪಿಸಿಕೊಳ್ಳಲಿ.

161

ಯಾವುದೇ ಒಬ್ಬ ಪ್ರವಾದಿ (ಯುದ್ಧಾಸ್ತಿಯಲ್ಲಿ) ವಂಚಿಸುವರೆನ್ನುವುದು ಸಂಭವನೀಯವಲ್ಲ. ಯಾವನಾದರೂ ವಂಚಿಸಿ ತೆಗೆದುಕೊಂಡರೆ ಅವನು ವಂಚಿಸಿ ತೆಗೆದುಕೊಂಡದ್ದನ್ನು ಪುನರುತ್ಥಾನ ದಿನದಂದು ತರುವನು. ಆಮೇಲೆ ಪ್ರತಿಯೊಬ್ಬರಿಗೂ ಅವರವರು ಮಾಡಿದುದರ ಫಲವನ್ನು ಪೂರ್ತಿಯಾಗಿ ಕೊಡಲಾಗುವುದು. ಅವರಿಗೆ ಅನ್ಯಾಯ ಮಾಡಲಾಗುವುದಿಲ್ಲ .

162

ಅಲ್ಲಾಹನ ಸಂತೃಪ್ತಿಯನ್ನು ಹಿಂಬಾಲಿಸಿದವನು ಅಲ್ಲಾಹನ ಕ್ರೋಧ ಪಡೆದು ವಾಪಾಸಾದವನಂತೆ ಆಗುವನೆ ? ಅವನ ನಿವಾಸವು ನರಕವಾಗಿರುವುದು. ಅದೆಷ್ಟು ನಿಕೃಷ್ಟ ವಾಸಸ್ಥಾನ !

163

ಅವರು (ಈ ಎರಡು ತರದವರು) ಅಲ್ಲಾಹನ ಬಳಿ ವಿಭಿನ್ನ ದರ್ಜೆಗಳಲ್ಲಿರುವವರು. ಅವರು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಕಾಣುವವನಾಗಿರುತ್ತಾನೆ.

164

ಸತ್ಯವಿಶ್ವಾಸಿಗಳಿಗೆ ಅವರಿಂದಲೇ ಒಬ್ಬ ದೂತರನ್ನು ನಿಯೋಗಿಸುವ ಮೂಲಕ ಅಲ್ಲಾಹನು ಖಂಡಿತವಾಗಿಯೂ ಬಲು ದೊಡ್ಡ ಉಪಕಾರವನ್ನು ಮಾಡಿದ್ದಾನೆ. ಆ ದೂತರು ಅವರಿಗೆ ಆತನ ವಚನಗಳನ್ನು ಓದಿ ಹೇಳುತ್ತಾರಲ್ಲದೆ ಅವರನ್ನು ಸಂಸ್ಕರಿಸುತ್ತಾರೆ. ಅವರಿಗೆ ಗ್ರಂಥವನ್ನೂ ತತ್ವಜ್ಞಾನವನ್ನೂ ಕಲಿಸುತ್ತಾರೆ. ಇದಕ್ಕೆ (ದೂತರ ಆಗಮನಕ್ಕೆ) ಮುನ್ನ ಅವರು ನಿಜವಾಗಿಯೂ ಸ್ಪಷ್ಟ ದಾರಿಗೇಡಿ ನಲ್ಲಿದ್ದರು.

165

ನಿಮಗೆ (ಉಹ್ದ್‍ನಲ್ಲಿ) ಒಂದು ವಿಪತ್ತು ಸಂಭವಿ ಸಿದ್ದರೂ ನೀವು ಅದರ ಇಮ್ಮಡಿಯಾಗಿ ಅವರಿಗೆ (ಬದ್ರ್‍ನಲ್ಲಿ) ಕೊಟ್ಟಿದ್ದೀರಿ. (ಹಾಗಿದ್ದೂ) ಇದು ಹೇಗೆ ಸಂಭವಿಸಿತೆಂದು ಕೇಳುತ್ತಿದ್ದೀರಾ? ಹೇಳಿರಿ; ಇದು ನಿಮ್ಮಿಂದಲೇ ಬಂದಿದೆ. ಅಲ್ಲಾಹನು ಸರ್ವ ಸಮರ್ಥ ನಾಗಿರುವನು.

166

ಎರಡು ತಂಡಗಳು ಎದುರುಗೊಂಡ ದಿನದಂದು (ಉಹ್ದ್‍ನಲ್ಲಿ) ನಿಮಗೆ ಸಂಭವಿಸಿದ್ದು ಅಲ್ಲಾಹನ ವಿಧಿ ಪ್ರಕಾರವಾಗಿದ್ದು ಸತ್ಯವಿಶ್ವಾಸಿಗಳನ್ನು (ಬೇರ್ಪಡಿಸಿ) ತಿಳಿಯಲಿಕ್ಕಾಗಿದೆ.

167

ಮತ್ತು ಕಪಟಿಗಳನ್ನು ಅವನು (ವಿಂಗಡಿಸಿ) ಅರಿಯಲೂ ಆಗಿದೆ. ‘ಬನ್ನಿ! ಅಲ್ಲಾಹನ ಮಾರ್ಗ ದಲ್ಲಿ ಯುದ್ದ ಮಾಡಿರಿ. ಇಲ್ಲವೆ ಪ್ರತಿರೋಧಿಸಿರಿ' ಎಂದು ಅವರಲ್ಲಿ ಆದೇಶಿಸಿದಾಗ, ಯುದ್ಧವನ್ನು ನಾವು ಬಲ್ಲವರಾಗಿದ್ದರೆ ನಾವು ನಿಮ್ಮ ಹಿಂದೆ ಬರುತ್ತಿದ್ದೆವು ಎಂದವರು ಹೇಳಿದರು. ಅಂದು ಅವರು ಸತ್ಯವಿಶ್ವಾಸಕ್ಕಿಂತ ಹೆಚ್ಚಾಗಿ ಅವಿಶ್ವಾಸಕ್ಕೆ ನಿಕಟವಾಗಿದ್ದರು. ಅವರ ಮನಸ್ಸಲ್ಲಿ ಇಲ್ಲದಿದ್ದು ದನ್ನು ಅವರ ಬಾಯಿಂದ ಹೇಳುತ್ತಿದ್ದರು. ಅವರು ಮರೆಮಾಚುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುವವ ನಾಗಿರುತ್ತಾನೆ.

168

ಅವರು (ಕಪಟಿಗಳು) ಕುಳಿತು ಬಿಟ್ಟು (ಯುದ್ಧಕ್ಕೆ ಹೋದ) ತಮ್ಮ ಸಹೋದರರ ಬಗ್ಗೆ; `ನಮ್ಮ ಮಾತನ್ನು ಅವರು ಕೇಳಿದ್ದರೆ ಕೊಲೆಯಾಗುತ್ತಿರಲಿಲ್ಲ’ ಎಂದು ಹೇಳಿದವರು. ನೀವು ಹೇಳಿರಿ; `ನೀವು ಸತ್ಯವಾದಿಗಳಾಗಿದ್ದರೆ ನಿಮ್ಮ ಸ್ವಂತ ದೇಹಗ

169

ಅಲ್ಲಾಹನ ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ಮರಣ ಹೊಂದಿದವರೆಂದು ನೀವು ಖಂಡಿತ ಭಾವಿಸಬಾರದು. ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ದಾರೆ. ಅವರಿಗೆ ಆಹಾರ ಕೊಡಲಾಗುತ್ತಿದೆ .

170

ಅಲ್ಲಾಹನು ತನ್ನ ಔದಾರ್ಯದಿಂದ ಅವರಿಗೆ ಕೊಟ್ಟಿರುವುದರಲ್ಲಿ ಅವರು ಸಂತುಷ್ಟರಾಗಿರುವರು. ತಮ್ಮ ಹಿಂದಿನಿಂದ ಅವರತ್ತ ತಲುಪದಿರುವವರ ಬಗೆಗೆ ಅವರಿಗೇನೂ ಭಯಪಡಲಿಕ್ಕಾಗಲಿ, ದುಃಖಿಸಲಿಕ್ಕಾಗಲಿ ಇರುವುದಿಲ್ಲವೆಂದು ಅವರು ಸಂತೋಷಪಡುತ್ತಾರೆ.

171

ಅಲ್ಲಾಹನ ಕಡೆಯ ಅನುಗ್ರಹ ಮತ್ತು ಔದಾರ್ಯ ದಲ್ಲಿಯೂ ಅಲ್ಲಾಹನು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸಲಾರನು ಎನ್ನುವುದರಲ್ಲಿಯೂ ಅವರು ಆಹ್ಲಾದಗೊಳ್ಳುತ್ತಾರೆ.

172

ಇನ್ನು (ಉಹ್ದ್‍ನಲ್ಲಿ) ಗಾಯಗೊಂಡ ಬಳಿಕವೂ ಅಲ್ಲಾಹು ಮತ್ತು ರಸೂಲರ ಕರೆಗೆ ಓಗೊಟ್ಟವರು . ಅವರ ಪೈಕಿ ಸತ್ಕರ್ಮಿಗಳು ಹಾಗೂ ದೋಷ ಬಾಧೆಯ ಬಗ್ಗೆ ಎಚ್ಚರಿಕೆ ವಹಿಸಿದವರಿಗೆ ಮಹತ್ತಾದ ಪ್ರತಿಫಲವಿದೆ.

173

(ಮಕ್ಕಾದ ಶತ್ರುಗಳಾದ) `ಜನರು ನಿಮ್ಮ ವಿರುದ್ಧ ಒಗ್ಗಟ್ಟಾಗಿದ್ದಾರೆ. ಆದ್ದರಿಂದ ನೀವು ಅವರಿಗೆ ಭಯಪಡಿರಿ' ಎಂದು ಜನರು ಅವರಿಗೆ ಹೇಳಿದರು. ಅದು ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ‘ನಮಗೆ ಅಲ್ಲಾಹು ಸಾಕು, ಭರವಸೆ ಇಡಲು ಅವನು ಎಷ್ಟೊಂದು ಉತ್ತಮನು!’ ಎಂದು ಅವರು ಹೇಳಿದರು.

174

ಹಾಗೆ ಅವರು ಅಲ್ಲಾಹನ ಕಡೆಯಿಂದ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಅವರಿಗೆ ಯಾವ ಹಾನಿಯೂ ತಟ್ಟಲಿಲ್ಲ. ಅವರು ಅಲ್ಲಾಹನ ಸಂತೃಪ್ತಿಯನ್ನು ಅನುಸರಿಸಿದರು. ಅಲ್ಲಾಹನು ಭಾರೀ ಔದಾರ್ಯವುಳ್ಳವನಾಗಿರುವನು.

175

ಖಂಡಿತವಾಗಿಯೂ ಶೈತಾನನು, ತನ್ನ ಮಿತ್ರರ ಬಗ್ಗೆ ಭೀತಿ ಹುಟ್ಟಿಸುತ್ತಾನೆ. ಆದ್ದರಿಂದ ನೀವು ಅವರಿಗೆ ಹೆದರಬೇಡಿರಿ. ನೀವು ಸತ್ಯವಿಶ್ವಾಸಿಗಳಾ ಗಿದ್ದರೆ ನನಗೆ ಭಯಪಡಿರಿ.

176

ಅವಿಶ್ವಾಸಕ್ಕೆ ಧಾವಿಸಿ ಹೋಗುತ್ತಿರುವವರು ನಿಮಗೆ ದುಃಖವನ್ನುಂಟುಮಾಡದಿರಲಿ. ಅವರು ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರರು. ಅವರಿಗೆ ಪರಲೋಕದಲ್ಲಿ ಯಾವುದೇ ಪಾಲು ಕೊಡದಿರಲು ಅಲ್ಲಾಹು ಉದ್ದೇಶಿಸಿದ್ದಾನೆ. ಅವರಿಗೆ ಕಠೋರ ಶಿಕ್ಷೆ ಕಾದಿದೆ.

177

ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಕೊಂಡುಕೊಂಡವರು ಖಂಡಿತ ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರರು. ಅವರಿಗೆ ಯಾತನಾಮಯ ಶಿಕ್ಷೆಯು ಕಾದಿದೆ.

178

ಸತ್ಯನಿಷೇಧಿಗಳಿಗೆ ನಾವು ಸಡಿಲು ಬಿಟ್ಟು ಕೊಡುತ್ತಿರುವುದು ಅವರಿಗೆ ಹಿತವೆಂದು ಅವರು ಖಂಡಿತ ಭಾವಿಸಬಾರದು. ನಾವು ಅವರ ಪಾಪ ಹೆಚ್ಚಿಸಲೆಂದೇ ಅವರಿಗೆ ಕಾಲಾವಕಾಶ ಕೊಡುತ್ತಿದ್ದೇವೆ. ಅವರಿಗೆ ಅಪಮಾನಕರವಾದ ಶಿಕ್ಷೆ ಕಾದಿದೆ.

179

ವಿಶುದ್ಧರಿಂದ ಅಶುದ್ಧರನ್ನು ಬೇರ್ಪಡಿಸದೆ ಸತ್ಯವಿಶ್ವಾಸಿಗಳನ್ನು ನಿಮ್ಮ ಇಂದಿನ ಸ್ಥಿತಿಯಲ್ಲಿ ಅಲ್ಲಾಹು ಉಳಿಸುವುದಿಲ್ಲ. ಅದೃಶ್ಯಕಾರ್ಯಗಳನ್ನು ಅಲ್ಲಾಹು ನಿಮಗೆ ಬಹಿರಂಗಗೊಳಿಸಿ ಕೊಡುವುದೂ ಇಲ್ಲ. ಆದರೆ ತನ್ನ ದೂತರಿಂದ ತಾನುದ್ದೇಶಿಸು ವವರನ್ನು ಅಲ್ಲಾಹು ಆರಿಸಿಕೊಳ್ಳುತ್ತಾನೆ. ಆದ್ದರಿಂದ ಅಲ್ಲಾಹು ಮತ್ತು ಅವನ ರಸೂಲರಲ್ಲಿ ವಿಶ್ವಾಸ ಇಡಿರಿ. ನೀವು ವಿಶ್ವಾಸವಿಟ್ಟರೆ, ದೇವ ಭಕ್ತಿ ಇರಿಸಿದರೆ ನಿಮಗೆ ಮಹತ್ತರವಾದ ಪ್ರತಿಫಲವಿದೆ.

180

ಅಲ್ಲಾಹನು ತನ್ನ ಔದಾರ್ಯದಿಂದ ಕೊಟ್ಟಂತಹ ಧನದಲ್ಲಿ ಜಿಪುಣತೆ ತೋರುವವರು ಈ ಜಿಪುಣತನವು ಅವರಿಗೆ ಒಳ್ಳೆಯದೆಂದು ಖಂಡಿತ ಭಾವಿಸಬಾರದು. ಪರಂತು, ಅದವರಿಗೆ ಬಹಳ ದೋಷಕರವಾಗಿದೆ. ಅವರು ಲೋಭ ತೋರಿಸಿದ ಧನವನ್ನು ಪುನರುತ್ಥಾನ ದಿನದಲ್ಲಿ ಅವರ ಕೊರಳಿಗೆ ಮಾಲೆ ಹಾಕಲಾಗುವುದು . ಆಕಾಶಗಳು ಮತ್ತು ಭೂಮಿಯ ಅಧಿಕಾರ ಅಲ್ಲಾಹನದ್ದು. ನಿಮ್ಮ ಪ್ರವೃತ್ತಿಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞಾನಿಯಾಗಿರುತ್ತಾನೆ.

181

`ಅಲ್ಲಾಹು ಬಡವನಾಗಿರುವನು. ನಾವು ಧನಿಕರಾಗಿದ್ದೇವೆ' ಎಂದು ಹೇಳುವವರ ಮಾತನ್ನು ಅಲ್ಲಾಹು ಖಂಡಿತ ಆಲಿಸಿರುತ್ತಾನೆ. ಅವರ ಈ ಹೇಳಿಕೆಯನ್ನೂ ಅನ್ಯಾಯವಾಗಿ ಅವರು ಪ್ರವಾದಿಗಳನ್ನು ವಧಿಸಿದ್ದನ್ನೂ ನಾವು ದಾಖಲೆಗೊಳಿಸಿಡುತ್ತೇವೆ. ‘ಕರಟಿಸುವ(ನರಕದ) ಶಿಕ್ಷೆಯ ರುಚಿ ನೋಡಿರಿ’ ಎಂದು ನಾವು ಅವರಲ್ಲಿ ಹೇಳಲಿದ್ದೇವೆ.

182

ಅದು (ಈ ಶಿಕ್ಷೆ) ನಿಮ್ಮ ಕೈಗಳು ಮಾಡಿದುದರ ಫಲ. ಅಲ್ಲಾಹು ತನ್ನ ದಾಸರಿಗೆ ಯಾವತ್ತೂ ಖಂಡಿತ ಅನ್ಯಾಯವೆಸಗುವವನಲ್ಲ.

183

‘ಬಲಿಯನ್ನು ನಮ್ಮ ಮುಂದಿರಿಸಿ ಆ ಬಲಿಯನ್ನು ಅಗ್ನಿ ತಿನ್ನುವವರೆಗೆ ಯವುದೇ ಪ್ರವಾದಿಯ ಮೇಲೆ ನಾವು ನಂಬಿಕೆ ಇರಿಸಬಾರದೆಂದು ಅಲ್ಲಾಹು ನಮ್ಮಲ್ಲಿ ಕರಾರು ಮಾಡಿರುತ್ತಾನೆ’ ಎಂದು ಹೇಳಿದವರೊಡನೆ ನೀವು ಹೇಳಿರಿ; ‘ನನಗೆ ಮೊದಲು ಅದೆಷ್ಟೋ ಪ್ರವಾದಿಗಳು ಸ್ಪಷ್ಟ ಪುರಾವೆಗಳನ್ನೂ ನೀವು ಹೇಳಿದ್ದನ್ನೂ ನಿಮ್ಮಲ್ಲಿಗೆ ತಂದಿದ್ದಾರೆ. ನೀವು ಸತ್ಯವಾದಿಗಳಾಗಿದ್ದರೆ ಯಾಕೆ ಅವರನ್ನು ಹತ್ಯೆ ಮಾಡಿದಿರಿ?’

184

ಅವರು ನಿಮ್ಮನ್ನು ನಿಷೇಧಿಸಿದರೆ (ನೀವು ದುಃಖಿಸ ಬೇಡಿರಿ; ಯಾಕೆಂದರೆ) ನಿಮ್ಮ ಮೊದಲು ವ್ಯಕ್ತ ಪುರಾವೆಗಳೊಂದಿಗೂ, ವೇದ ಪುಸ್ತಕಗಳು ಹಾಗೂ ಬೆಳಕು ಬೀರುತ್ತಿರುವ ಗ್ರಂಥದೊಂದಿಗೂ ಬಂದಿದ್ದ ಅನೇಕ ಪ್ರವಾದಿಗಳನ್ನು ಇವರು ನಿಷೇಧಿಸಿರುತ್ತಾರೆ.

185

ಎಲ್ಲ ದೇಹವೂ ಮರಣವನ್ನು ಸವಿಯುವುದು. ನಿಮ್ಮ ಪ್ರತಿಫಲಗಳನ್ನು ಪುನರುತ್ಥಾನ ದಿನದಂದು ನಿಮಗೆ ಪೂರ್ತಿಯಾಗಿ ಕೊಡಲಾಗುತ್ತದೆ. ಅಂದು ಯಾರನ್ನು ನರಕದಿಂದ ದೂರ ಮಾಡಲಾಗುವುದೋ ಹಾಗೂ ಯಾರಿಗೆ ಸ್ವರ್ಗಕ್ಕೆ ಪ್ರವೇಶಗೊಡಲಾಗುವುದೋ ಖಂಡಿತವಾಗಿಯೂ ಅವನು ಜಯಶಾಲಿಯಾದನು. ಐಹಿಕ ಜೀವನವು ಖಂಡಿತವಾಗಿಯೂ ವಂಚನೆಯ ಸರಕಾಗಿರುತ್ತದೆ.

186

ಖಂಡಿತವಾಗಿಯೂ ನೀವು ನಿಮ್ಮ ಧನ ಮತ್ತು ನಿಮ್ಮ ದೇಹಗಳಲ್ಲಿ ಪರೀಕ್ಷೆಗೊಳಗಾಗುವಿರಿ. ನಿಮಗೆ ಮೊದಲು ವೇದ ಕೊಡಲ್ಪಟ್ಟವರಿಂದಲೂ ಬಹುದೇವಾರಾಧಕರಿಂದಲೂ ಹೆಚ್ಚು ನೋಯಿಸುವ ಆಕ್ಷೇಪಗಳನ್ನು ನೀವು ಕೇಳಲಿರುವಿರಿ. (ಆಗ) ನೀವು ಸಹನೆ ತೋರಿದರೆ ಮತ್ತು ದೇವ ಭಕ್ತಿ ಅವಲಂಬಿಸಿದರೆ ಖಂಡಿತವಾಗಿಯೂ ಅದು ಕೃತ ನಿಶ್ಚಯದ ಕಾರ್ಯಗಳಿಗೆ ಸೇರಿದೆ.

187

ವೇದ ಕೊಡಲ್ಪಟ್ಟವರಿಂದ ಅಲ್ಲಾಹು ಕರಾರು ಮಾಡಿಕೊಂಡ ಸಂದರ್ಭ(ವನ್ನು ಜ್ಞಾಪಿಸಿಕೊಳ್ಳಿರಿ). ನೀವು ಈ ಗ್ರಂಥವನ್ನು ಜನರಿಗೆ ಖಂಡಿತ ವಿವರಿಸಿ ಕೊಡಬೇಕು ; ಅಡಗಿಸಿಡಬಾರದು (ಎಂದಾಗಿತ್ತು ಕರಾರು). ಆದರೆ ಅವರದನ್ನು ತಮ್ಮ ಬೆನ್ನ ಹಿಂದಕ್ಕೆ ಎಸೆದರಲ್ಲದೆ ಅದರ ಬದಲಿಗೆ ತುಚ್ಛ ಬೆಲೆಯನ್ನು ಪಡಕೊಂಡರು ! ಅವರು ಕೊಂಡುಕೊಳ್ಳುವುದು ಎಷ್ಟು ನಿಕೃಷ್ಟವಾದದ್ದು.

188

ತಾವು ಮಾಡಿದುದರಲ್ಲಿ ಹೆಮ್ಮೆಪಡುವ ಹಾಗೂ ತಾವು ಮಾಡದವುಗಳಲ್ಲಿ ಪ್ರಶಂಶಿಸಲ್ಪಡಲು ಬಯಸುವವರು ಶಿಕ್ಷೆಯಿಂದ ಸುರಕ್ಷಿತರೆಂದು ಖಂಡಿತ ನೀವು ಭಾವಿಸಬಾರದು. ಅವರಿಗೆ ವೇದನಾಜನಕ ಶಿಕ್ಷೆಯಿದೆ.

189

ಆಕಾಶಗಳು ಮತ್ತು ಭೂಮಿಯ ಅಧಿಪತ್ಯ ಅಲ್ಲಾಹನದ್ದೇ ಆಗಿದೆ. ಅಲ್ಲಾಹನು ಸರ್ವದರಲ್ಲೂ ಪರಮ ಸಮರ್ಥನಾಗಿರುವನು.

190

ನಿಶ್ಚಯವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿ ಹಾಗೂ ರಾತ್ರಿ-ಹಗಲುಗಳ ಬದಲಾವಣೆಯಲ್ಲಿ ಬುದ್ಧಿಯುಳ್ಳವರಿಗೆ ಧಾರಾಳ ದೃಷ್ಟಾಂತಗಳಿವೆ.

191

ಅವರು ನಿಂತುಕೊಂಡೂ ಕುಳಿತುಕೊಂಡೂ (ಎಲ್ಲ ಅವಸ್ಥೆಗಳಲ್ಲೂ) ಅಲ್ಲಾಹುವನ್ನು ಸ್ಮರಿಸುವವರಾಗಿದ್ದಾರೆ. ಅವರು ಆಕಾಶಗಳು ಮತ್ತು ಭೂಮಿಯ ಸೃಷ್ಟಿಯ ಬಗ್ಗೆ ಚಿಂತನೆ ಮಾಡುತ್ತಾರೆ. (ಅಲ್ಲದೆ ಅವರು ಹೇಳುತ್ತಾರೆ;) `ನಮ್ಮ ಪ್ರಭೂ ! ಇದೆಲ್ಲವನ್ನೂ ನೀನು ವೃಥಾ ಸೃಷ್ಟಿಸಲಿಲ್ಲ. ನೀನು ಪರಮ ಪರಿಶುದ್ಧನು. ಆದ್ದರಿಂದ ನಮ್ಮನ್ನು ನೀನು ನರಕ ಶಿಕ್ಷೆಯಿಂದ ಪಾರು ಮಾಡು .

192

ನಮ್ಮ ಪ್ರಭೂ! ಯಾವನನ್ನಾದರೂ ನೀನು ನರಕಕ್ಕೆ ಪ್ರವೇಶ ಮಾಡಿಸುವುದಾದರೆ ಖಂಡಿತವಾಗಿಯೂ ನೀನು ಅವನನ್ನು ತುಂಬ ನಿಂದ್ಯಗೊಳಿಸಿದೆ. ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರುವುದೇ ಇಲ್ಲ.

193

ನಮ್ಮ ಪ್ರಭೂ! ‘ನಿಮ್ಮ ಪ್ರಭುವಿನಲ್ಲಿ ವಿಶ್ವಾಸ ತಾಳಿರಿ’ ಎಂದು ಸತ್ಯವಿಶ್ವಾಸಕ್ಕೆ ಆಹ್ವಾನ ಕೊಡುವ ಓರ್ವರ ಕರೆಯನ್ನು ನಾವು ಖಂಡಿತವಾಗಿಯೂ ಕೇಳಿಸಿ ಕೊಂಡಿದ್ದೇವೆ. ಹಾಗೂ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಪ್ರಭುವೇ ! ನಮ್ಮ ಪಾಪಗಳನ್ನು ನಮಗೆ ಕ್ಷಮಿಸು. ನಮ್ಮ ಕೆಡುಕುಗಳನ್ನು ನಮ್ಮಿಂದ ಪರಿಹರಿಸು. ಪುಣ್ಯಾತ್ಮರ ಕೂಟದಲ್ಲಿ ನಮ್ಮನ್ನು ಮರಣಗೊಳಿಸು.

194

ನಮ್ಮ ಪ್ರಭೂ! ನಿನ್ನ ಸಂದೇಶವಾಹಕರುಗಳ ಮೂಲಕ ನೀನು ನಮಗೆ ವಾಗ್ದಾನವಿತ್ತುದನ್ನು ನಮಗೆ ದಯಪಾಲಿಸು. ಪುನರುತ್ಥಾನ ದಿನದಂದು ನಮ್ಮನ್ನು ನಿಂದನೆಗೀಡುಮಾಡದಿರು. ನಿಶ್ಚಯ ವಾಗಿಯೂ ನೀನು ವಾಗ್ದಾನವನ್ನು ಮೀರು ವವನಲ್ಲ’.

195

ಆಗ ಅವರ ಪ್ರಭುವು ಅವರಿಗೆ ಉತ್ತರವಿತ್ತನು; ನಿಮ್ಮ ಪೈಕಿ ಪುರುಷನಿರಲಿ, ಸ್ತ್ರೀ ಇರಲಿ ಯಾವನೇ ಒಬ್ಬ ಪ್ರವರ್ತಕನ ಪ್ರವೃತ್ತಿಯನ್ನು ನಾನು ನಿಷ್ಫಲ ಗೊಳಿಸುವುದಿಲ್ಲ. ನಿಮ್ಮಲ್ಲಿ ಕೆಲವರು ಮತ್ತೆ ಕೆಲವರಿಂದ ಜನಿಸಿದವರು . ಆದ್ದರಿಂದ (ನನಗಾಗಿ) ಸ್ವದೇಶವನ್ನು ತ್ಯಜಿಸಿದವರು, ಸ್ವಂತ ಮನೆ ಗಳಿಂದ ಹೊರದಬ್ಬಲ್ಪಟ್ಟವರು, ನನ್ನ ಮಾರ್ಗದಲ್ಲಿ ಮರ್ದನ ಕ್ಕೊಳಗಾದವರು, ಯುದ್ಧ ಮಾಡಿದವರು ಹಾಗೂ ಮಡಿದವರಿಗೆಲ್ಲ ಖಂಡಿತ ಅವರ ಪಾಪಗಳನ್ನು ನಾನು ಕ್ಷಮಿಸುವೆನು. ಅಲ್ಲದೆ; ತಳ ಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗ ಧಾಮಗಳಿಗೆ ಖಂಡಿತವಾಗಿಯೂ ನಾನು ಅವ ರನ್ನು ಪ್ರವೇಶಗೊಳಿಸುವೆನು. (ಇದು) ಅಲ್ಲಾಹನ ಕಡೆಯಿಂದ ಪ್ರತಿಫಲವಾಗಿದೆ. ಉತ್ಕøಷ್ಟ ಪ್ರತಿಫಲ ಇರುವುದು ಅಲ್ಲಾಹನ ಬಳಿ ಮಾತ್ರ.

196

ಸತ್ಯನಿಷೇಧಿಗಳು ನಾಡುಗಳಾದ್ಯಂತ ವಿಹರಿಸುತ್ತಿರುವುದು ಯಾವತ್ತೂ ತಮ್ಮನ್ನು ವಂಚನೆಗೀಡು ಮಾಡದಿರಲಿ.

197

(ಇದು) ಬಹಳ ತುಚ್ಛವಾದ ಒಂದು ಜೀವನ ಸುಖ ಮಾತ್ರ. ಆಮೇಲೆ ಅವರ ವಾಸಸ್ಥಾನ ನರಕವಾಗಿದೆ. ಅದು ಎಷ್ಟೊಂದು ನೀಚವಾದ ವಾಸಸ್ಥಾನ !

198

ಆದರೆ ತಮ್ಮ ಪ್ರಭುವಿನಲ್ಲಿ ಭಕ್ತಿಯಿರಿಸಿ ಕೊಂಡವರಾರೋ, ಅವರಿಗೆ ಕೆಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗಧಾಮಗಳಿವೆ. ಅದರಲ್ಲಿ ಅವರು ಶಾಶ್ವತರು. ಅದು (ಅವರಿಗೆ) ಅಲ್ಲಾಹನ ಕಡೆಯಿಂದ ಒಂದು ಅತಿಥಿ ಸತ್ಕಾರ. ಅವನ ಬಳಿಯ ಪ್ರತಿಫಲವೇ ಗುಣವಂತರಿಗೆ (ಐಹಿಕ ಸುಖಕ್ಕಿಂತ) ಎಷ್ಟೋ ಉತ್ತಮವಾಗಿದೆ.

199

ವೇದದವರ ಕೂಟದಲ್ಲಿ; ಅಲ್ಲಾಹು ಮತ್ತು ನಿಮಗೆ ಅವತೀರ್ಣವಾದುದರಲ್ಲಿ ಹಾಗೂ ಅವರಿಗೆ ಅವತೀರ್ಣವಾದುದರಲ್ಲಿ ನಂಬಿಕೆ ತಾಳುವವರಿದ್ದಾರೆ. ಅವರು ಅಲ್ಲಾಹನನ್ನು ಭಯ ಪಡುವವರಾಗಿದ್ದು ಅಲ್ಲಾಹನ ವಚನಗಳನ್ನು ತುಚ್ಛ ಬೆಲೆಗೆ ಮಾರುವುದಿಲ್ಲ. ಅವರಿಗೆ ಅವರ ಪ್ರಭುವಿನ ಬಳಿ ಅವರ ಪ್ರತಿಫಲವುಂಟು. ಖಂಡಿತವಾಗಿಯೂ ಅಲ್ಲಾಹನು ವಿಚಾರಣೆ ನಡೆಸುವುದರಲ್ಲಿ ಅತಿ ಶೀಘ್ರನು.

200

ಓ ಸತ್ಯವಿಶ್ವಾಸಿಗಳೇ! ನೀವು ಸಹನೆಯನ್ನು ಅವಲಂಬಿಸಿರಿ. ಸಹನೆಯಲ್ಲಿ ಇತರರನ್ನು ಮೀರಿಸಿರಿ. ಪ್ರತಿರೋಧಕ್ಕೆ ಸನ್ನದ್ಧರಾಗಿ ನಿಲ್ಲಿರಿ. ಅಲ್ಲಾಹನಲ್ಲಿ ಭಯವಿರಿಸಿಕೊಳ್ಳಿರಿ. ನೀವು ಜಯಶಾಲಿಗಳಾಗಲಿಕ್ಕಾಗಿ .