ಅಲಿಫ್ ಲಾಮ್ ಮೀಮ್
ಆ ಗ್ರಂಥ . ಅದರಲ್ಲಿ ಸಂಶಯವೇ ಇಲ್ಲ. ಭಕ್ತರಿಗೆ ಪಥದರ್ಶಕ.
ಪರೋಕ್ಷದಲ್ಲಿ ನಂಬುವ, ನಮಾಝನ್ನು ನೆಲೆಗೊಳಿಸುವ ಮತ್ತು ಅವರಿಗೆ ನಾವು ನೀಡಿದುದರಿಂದ ಖರ್ಚು ಮಾಡುವ (ಭಕ್ತರಿಗೆ).
ನಿಮಗೆ ಅವತೀರ್ಣಗೊಂಡದ್ದರಲ್ಲೂ ನಿಮಗಿಂತ ಮುಂಚೆ ಅವತೀರ್ಣಗೊಂಡದ್ದರಲ್ಲೂ ವಿಶ್ವಾಸವುಳ್ಳ ಭಕ್ತರವರು. ಪರಲೋಕದ ಕುರಿತು ಧೃಢ ವ್ರತರಾದವರು.
ಅಂಥವರು ತಮ್ಮ ಪ್ರಭುವಿನಿಂದ ಸತ್ಪಥದರ್ಶಿತರು. ಆ ಭಕ್ತರೇ ಜಯಶೀಲರು.
ನೀವು ಮುನ್ನೆಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸತ್ಯನಿಷೇಧಿಗಳಿಗೆ ಅದು ಸಮಾನ. ಅವರು ಖಂಡಿತ ವಿಶ್ವಾಸವಿಡಲಾರರು.
ಅವರ ಹೃದಯಗಳ ಮೇಲೆ ಮತ್ತು ಅವರ ಶ್ರವಣಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿರು ವನು. ಅವರ ಕಣ್ಣುಗಳ ಮೇಲೆ ಪೊರೆ ಬಾಧಿಸಿದೆ. ಅವರಿಗೆ ಘೋರ ಶಿಕ್ಷೆ ಕಾದಿದೆ.
‘ನಾವು ಅಲ್ಲಾಹ್ ಹಾಗೂ ಪಾರತ್ರಿಕ ದಿನವನ್ನು ನಂಬಿದ್ದೇವೆ’ ಎನ್ನುವ ಕೆಲವರಿದ್ದಾರೆ. ಅವರು ವಿಶ್ವಾಸಿಗಳಲ್ಲ .
ಅವರು, ಅಲ್ಲಾಹು ಮತ್ತು ಸತ್ಯವಿಶ್ವಾಸಿಗಳನ್ನು ವಂಚಿಸುತ್ತಾರೆ. ಸತ್ಯದಲ್ಲಿ ತಮ್ಮ ಶರೀರಗಳನ್ನೇ ಹೊರತು ಅವರು ವಂಚಿಸುವುದಿಲ್ಲ. ಮತ್ತು ಅವರದನ್ನು ತಿಳಿಯುತ್ತಿಲ್ಲ.
ಅವರ ಹೃದಯಗಳಲ್ಲಿ ರೋಗವಿದೆ. ನಂತರ ಅಲ್ಲಾಹನು ಆ ರೋಗವನ್ನು ಉಲ್ಬಣಗೊಳಿಸಿದನು . ಅವರು ಸುಳ್ಳು ಹೇಳುವವರಾಗಿದ್ದರಿಂದ ಅವರಿಗೆ ಯಾತನಾಮಯ ಶಿಕ್ಷೆ ಕಾದಿದೆ.
ಅವರಿಗೆ `ಭೂಮಿಯಲ್ಲಿ ನೀವು ಗೊಂದಲವೆಬ್ಬಿಸ ಬೇಡಿ’ ಎಂದು ಉಪದೇಶ ನೀಡಿದರೆ ಅವರು ‘ನಾವು ಸುಧಾರಕರು ಮಾತ್ರ, ಎನ್ನುತ್ತಾರೆ.
ತಿಳಿಯಿರಿ, ಅವರೇ ನಿಜದಲ್ಲಿ ಗೊಂದಲಕಾರರು. ಆದರೆ ಆ ಪ್ರಜ್ಞೆ ಅವರಿಗಿಲ್ಲ.
ಜನರು ಸತ್ಯವಿಶ್ವಾಸ ತಾಳಿದಂತೆ ನೀವೂ ಸತ್ಯ ವಿಶ್ವಾಸ ತಾಳಿರಿ’ ಎಂದು ಅವರಿಗೆ ಹೇಳಲಾದರೆ `ಮೂರ್ಖರು ನಂಬಿದಂತೆ ನಾವು ನಂಬಬೇಕೆ?’ ಎನ್ನುತ್ತಾರೆ. ತಿಳಿಯಿರಿ, ವಾಸ್ತವದಲ್ಲಿ ಅವರೇ ಮೂರ್ಖರು. ಆದರೆ ಅವರಿಗದು ಗೊತ್ತಿಲ್ಲ.
ವಿಶ್ವಾಸಿಗಳನ್ನು ಅವರು ಕಂಡರೆ, ‘ನಾವು ನಂಬಿದ್ದೇವೆ’ ಎನ್ನುತ್ತಾರೆ. ಅವರ ಪಿಶಾಚಿಗಳ ಬಳಿ ಪ್ರತ್ಯೇಕವಾಗಿರುವ ಸಂದರ್ಭದಲ್ಲಿ; ‘ನಾವು ನಿಮ್ಮ ಜೊತೆಯೇ ಇದ್ದೇವೆ, ಅವರನ್ನು ನಾವು ಕೇವಲ ಪರಿಹಾಸ ಮಾಡುತ್ತಿದ್ದೇವೆ.’ ಎನ್ನುತ್ತಾರೆ.
ನಿಜದಲ್ಲಿ ಅಲ್ಲಾಹನು ಅವರ ಪರಿಹಾಸ್ಯಕ್ಕೆ ಸಜೆ ನೀಡುವನು . ತಮ್ಮ ದುರಾಚಾರದಲ್ಲಿ ಅಂಡಲೆಯುವಂತೆ ಅಲ್ಲಾಹನು ಅವರನ್ನು ಸಡಿಲು ಬಿಡುವನು.
ಅವರು ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಖರೀದಿಸಿಕೊಂಡವರು. ಆದ್ದರಿಂದ ಅವರ ವ್ಯವಹಾರ ಲಾಭಕರವಾಗಿಲ್ಲ. ಅವರು ಸನ್ಮಾರ್ಗ ಪ್ರಾಪ್ತರೂ ಆಗಿಲ್ಲ.
ಅವರ ಉದಾಹರಣೆ ಕಿಚ್ಚು ಹಚ್ಚಿದವನ ಉದಾ ಹರಣೆಯಂತಿದೆ. ತನ್ನ ಸುತ್ತಮುತ್ತಲಿನ ಕಿಚ್ಚು ಬೆಳಗಿದಾಗ ಅಲ್ಲಾಹನು ಅವರ ಬೆಳಕನ್ನು ಕೊಂಡು ಹೋದನು. ಅವರು ದೃಷ್ಟಿ ಕಳಕೊಂಡು ಕಾರಿರುಳಲ್ಲಿ ದಾರಿ ಕಾಣದವರಂತೆ ಅವರನ್ನು ಬಿಟ್ಟುಬಿಟ್ಟನು
ಕಿವುಡರು, ಮೂಗರು, ಕುರುಡರು ಅವರು. ಆದ್ದರಿಂದ ಅವರು ಮರಳಿ ಬರಲಾರರು.
ಅಥವಾ ಅವರ ಉಪಮೆ, ಆಕಾಶದಿಂದ ಸುರಿಯುವ ಜಡಿಮಳೆಯಂತಿದೆ. ಅದರಲ್ಲಿ ದಟ್ಟ ಕಾರಿರುಳು, ಗುಡುಗು ಮಿಂಚುಗಳೂ ಇವೆ. ಸಿಡಿಲೆರಗಿಸುವ ಮೃತ್ಯು ಭಯದಿಂದ ಅವರು ತಮ್ಮ ಕಿವಿಗಳಲ್ಲಿ ತಮ್ಮ ಬೆರಳುಗಳನ್ನು ತೂರಿಸಿಕೊಳ್ಳುತ್ತಾರೆ. ಅಲ್ಲಾಹನು ಸತ್ಯನಿಷೇಧಿಗಳನ್ನು (ಜ್ಞಾನ ಮತ್ತು ಸಾಮಥ್ರ್ಯಗಳಿಂದ) ಆವರಿಸಿಕೊಂಡಿರುತ್ತಾನೆ.
ಮಿಂಚು ಅವರ ಕಣ್ಣುಗಳನ್ನು ಕೋರೈಸುವಂತಿದೆ. ಮಿಂಚು ಪಳ್ಳನೆ ಬೆಳಗಿದಾಗ ಆ ಬೆಳಕಿನಲ್ಲಿ ಅವರು ನಡೆಯುತ್ತಾರೆ. ಮಿಂಚು ನಿಂತು ಇರುಳಾವರಿಸಿದಾಗ ನಿಂತು ಬಿಡುತ್ತಾರೆ. ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರ ದೃಕ್‍ಶ್ರವಣಗಳನ್ನು ಹಿಂತೆಗೆದು ಕೊಳ್ಳುತ್ತಿದ್ದನು. ಖಂಡಿತಾ ಅವನು ಎಲ್ಲ ವಸ್ತುವಿನ ಮೇಲೆ ಸರ್ವ ಸಮರ್ಥನು.
ಮನುಷ್ಯರೇ, ನಿಮ್ಮನ್ನು ಹಾಗೂ ನಿಮ್ಮ ಪೂರ್ವಜರನ್ನು ಸೃಷ್ಟಿಸಿದ ನಿಮ್ಮ ಪ್ರಭುವಿಗೆ ಆರಾಧಿಸಿರಿ. ನೀವು ಜಾಗೃತಿಯುಳ್ಳವರಾಗುವಿರಿ.
ನಿಮಗೆ ಇಳೆಯನ್ನು ಹಾಸಿಗೆ , ನಭವನ್ನು ಛಾವಣಿ ಮಾಡಿಕೊಟ್ಟವನು; ಅವನು ನಭದಿಂದ ಮಳೆಯನ್ನು ಇಳಿಸಿದನು. ಆ ಮೂಲಕ ನಿಮಗೆ ಉಪಭೋಗಕ್ಕೆ ಫಲಗಳನ್ನು ಹೊರಡಿಸಿದನು. ನೀವು ಇದೆಲ್ಲ ತಿಳಿದವರಾಗಿರುತ್ತ ಅವನಿಗೆ ಸಮಾನರನ್ನು ಕಲ್ಪಿಸದಿರಿ .
ನಮ್ಮ ದಾಸನಿಗೆ ನಾವಿಳಿಸಿದ ಈ ಗ್ರಂಥದ ಬಗ್ಗೆ ನೀವು ಶಂಕಿತರಾಗಿದ್ದರೆ , ತತ್ಸಮಾನ ಅಧ್ಯಾಯವೊಂದನ್ನು ರಚಿಸಿ ತನ್ನಿರಿ. ನೀವು ಸತ್ಯವಂತರಾಗಿದ್ದರೆ, ಅಲ್ಲಾಹನ ಹೊರತು ನಿಮ್ಮ ಸಾಕ್ಷಿದಾರರನ್ನೂ ನೆರವಿಗೆ ಕರೆದುಕೊಳ್ಳಿರಿ .
ನೀವು ಅದನ್ನು ಮಾಡದಿದ್ದರೆ, ಖಂಡಿತ ನೀವು ಮಾಡಲಾರಿರಿ . ಮನುಷ್ಯರನ್ನೂ ಕಲ್ಲುಗಳನ್ನೂ ಇಂಧನವಾಗಿ ಉರಿಸಲ್ಪಡುವ ನರಕದ ಬಗ್ಗೆ ಜಾಗ್ರತೆಯಿರಲಿ! ಅದನ್ನು ನಿಷೇಧಿಗಳಿಗೆ ಕಾದಿರಿಸಲಾಗಿದೆ.
ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಂಡವರಿಗೆ, ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಉದ್ಯಾನ ಗಳ ಸುವಾರ್ತೆಯನ್ನು ನೀಡಿರಿ. ಅವರಿಗಲ್ಲಿ ಆಹಾರವಾಗಿ ಹಣ್ಣುಗಳು ದೊರೆತಾಗ, ಈ ಮೊದಲು ಸಿಕ್ಕಿದ ಹಣ್ಣು ಇದೇ ತಾನೇ? ಎನ್ನುವರು. ಅವರಿಗೆ ಸಾದೃಶ್ಯವಾದ ಹಣ್ಣುಗಳನ್ನು ನೀಡಲಾ ಗುವುದು. ಅಲ್ಲಿ ಸಂಶುದ್ಧೆಯರಾದ ನಲ್ಲೆಯರೂ ಅವರಿಗಿರುವರು. ಅವರಲ್ಲಿ ನಿತ್ಯನಿವಾಸಿಗಳು.
ತೃಣ ಸೊಳ್ಳೆಯ ಯಾ ಅದಕ್ಕಿಂತ ಮೇಲಿನ ವಸ್ತುಗಳ ಉಪಮೆ ನೀಡಲು ಅಲ್ಲಾಹನಿಗೆ ಸಂಕೋಚವಿಲ್ಲ, ಅದು ಪ್ರಭುವಿನ ಕಡೆಯ ಸತ್ಯವೆಂಬುದನ್ನು ಸತ್ಯನಂಬಿಗರು ಬಲ್ಲರು. ಇಂತಹ ಉಪಮೆಗಳಿಂದ ಅಲ್ಲಾಹನ ಉದ್ದೇಶವಾದರೂ ಏನು ಎಂದು ನಿಷೇಧಿಗಳು ಕುಚೋದ್ಯ ಮಾಡುತ್ತಾರೆ . ಇಂಥ ಉಪಮೆಗಳಿಂದ ಅಲ್ಲಾಹನು ಅನೇಕರಿಗೆ ಸತ್ಯದರ್ಶನವನ್ನು ಮಾಡುತ್ತಾನೆ. ಅನೇಕರಿಗೆ ಪಥ ವಿಮುಖತೆಯನ್ನು ಕೊಡುತ್ತಾನೆ. ಈ ಮೂಲಕ ಅಲ್ಲಾಹನು ಪಥಭ್ರಷ್ಟಗೊಳಿಸುವುದಿಲ್ಲ. ಅಧರ್ಮಿಗಳನ್ನು ಹೊರತು .
ಆ ಅಧರ್ಮಿಗಳು ಯಾರೆಂದರೆ ಅಲ್ಲಾಹನ ಒಪ್ಪಂದವನ್ನು ದೃಢಪಡಿಸಿದ ಬಳಿಕ ಅದನ್ನು ಭಂಜಿಸುವ, ಅಲ್ಲಾಹನು ಬೆಸೆಯುವಂತೆ ಆಜ್ಞಾಪಿ ಸಿದ್ದನ್ನು ಬೇರ್ಪಡಿಸುವ ಹಾಗೂ ಭೂಮಿಯಲ್ಲಿ ಕ್ಷೋಭೆ ಹರಡುವವರು. ಅವರೇ ಹತಭಾಗ್ಯರು.
ಅಲ್ಲಾಹನನ್ನು ನೀವು ಹೇಗೆ ಧಿಕ್ಕರಿಸುತ್ತಿರುವಿರಿ? ನೀವು ನಿರ್ಜೀವಿಗಳಾಗಿದ್ದಿರಿ. ಆಮೇಲೆ ಅವನು ನಿಮ್ಮನ್ನು ಜೀವಂತಗೊಳಿಸಿದನು. ಮುಂದೆ ನಿಮ್ಮನ್ನು ಅವನು ಮೃತ್ಯುಗೊಳಿಸುವನು. ಮತ್ತೆ ನಿಮಗೆ ಜೀವಕೊಡುವನು. ನಂತರ ಆತನ ಕಡೆಗೇ ನಿಮ್ಮನ್ನು ಮರಳಿಸಲಾಗುತ್ತದೆ.
ಆತನು ಭೂಮಿಯಲ್ಲಿರುವುದನ್ನೆಲ್ಲ ನಿಮಗಾಗಿ ಸೃಷ್ಟಿಸಿದವನು . ತದನಂತರ ಊಧ್ರ್ವಲೋಕಕ್ಕೆ ಚಿತ್ತವಿರಿಸಿ ಸಪ್ತಗಗನಗಳನ್ನಾಗಿ ಸರಿಪಡಿಸಿದನು. ಅವನು ಸರ್ವಜ್ಞನಾಗಿರುವನು.
ಪೃಥ್ವಿಯಲ್ಲಿ ನಾನು ಓರ್ವ ಪ್ರತಿನಿಧಿಯನ್ನು ನೇಮಿಸಲಿದ್ದೇನೆಂದು ನಿಮ್ಮ ಪ್ರಭು ಮಲಕ್ ಗಳೊಂದಿಗೆ ಹೇಳಿದಾಗ, ‘ಅಲ್ಲಿ ಪಿತೂರಿ, ರಕ್ತಪಾತ ನಡೆಸುವವರನ್ನು ನೇಮಿಸುವೆಯಾ? ನಿನಗೆ ಸ್ತುತಿ ಕೀರ್ತನೆ ಮಾಡಲು ಹಾಗೂ ನಿನ್ನ ಪರಿಶುದ್ಧತೆಯ ವಾಚನಕ್ಕೆ ನಾವಿದ್ದೇವಲ್ಲಾ?’ ಎಂದು ಮಲಕ್‍ಗಳು ಕೇಳಿದರು . ಅದಕ್ಕೆ ಅಲ್ಲಾಹನು; “ನೀವರಿಯದ್ದನ್ನು ನಾನರಿಯುತ್ತಿದ್ದೇನೆ” ಎಂದು ಹೇಳಿದನು.
ಆದಮರಿಗೆ ಸರ್ವವಸ್ತುಗಳ ಹೆಸರುಗಳನ್ನು ಅಲ್ಲಾಹನು ಕಲಿಸಿದನು. ಅವೆಲ್ಲವನ್ನೂ ಮಲಕ್‍ಗಳೆದುರು ಪ್ರದರ್ಶಿಸುತ್ತಾ, ನಿಮ್ಮ ವಾದವು ದಿಟವಾಗಿದ್ದರೆ ಇವುಗಳ ಹೆಸರುಗಳನ್ನು ಹೇಳಿರಿ ಎಂದನು.
ಮಲಕ್‍ಗಳು ‘ನೀನು ಪರಮ ಪರಿಶುದ್ಧನು. ನೀನು ನಮಗೆ ಕಲಿಸಿಕೊಡದ ಜ್ಞಾನ ನಮಗಿಲ್ಲ, ಪರಮ ಜ್ಞಾನಿಯೂ ಪರಮತಂತ್ರಜ್ಞನೂ ನೀನೇ!’ ಎಂದರು
ಆಗ ಅಲ್ಲಾಹನು ಆದಮರನ್ನು ಕರೆದು, ‘ಇವುಗಳ ಹೆಸರುಗಳನ್ನು ಇವರಿಗೆ ಹೇಳಿಕೊಡು’ ಎಂದನು. ಆದಮರು ಅವುಗಳ ನಾಮಗಳನ್ನು ಅವರಿಗೆ ಹೇಳಿಕೊಟ್ಟರು. ಆಗ ಮಲಕ್‍ಗಳಲ್ಲಿ ಅಲ್ಲಾಹನೆಂದನು, ಭುವಿ - ನಭಗಳ ಸರ್ವ ರಹಸ್ಯ ಗಳನ್ನೂ , ನೀವು ಬಹಿರಂಗಗೊಳಿಸುವುದನ್ನೂ ಮರೆಮಾಚುತ್ತಿದ್ದುದನ್ನೂ ಬಲ್ಲವನು ನಾನು ಎಂದು ನಿಮಗೆ ನಾನು ಹೇಳಿಲ್ಲವೇ?
ನಂತರ ‘ಆದಮರಿಗೆ ಪ್ರಣಾಮ ಸಲ್ಲಿಸಿರಿ’ ಎಂದು ನಾವು ಮಲಕ್‍ಗಳಿಗೆ ಆಜ್ಞಾಪಿಸಿದಾಗ, ಸರ್ವ ಮಲಕ್‍ಗಳೂ ಆದಮರಿಗೆ ಪ್ರಣಾಮ ಮಾಡಿದರು. ಇಬ್‍ಲೀಸನ ಹೊರತು. ಅವನು ನಿರಾಕರಿಸಿದನು. ಗರ್ವಿಷ್ಠನಾದನು. ಆತ ಸತ್ಯ ನಿಷೇಧಿಗಳ ಕೂಟದಲ್ಲಾಗಿದ್ದನು.
ಆ ಬಳಿಕ ನಾವು ಆದಮರೊಡನೆ, ಸ್ವರ್ಗದಲ್ಲಿ ಸಪತ್ನೀಕನಾಗಿ ನೆಲೆಸು. ನೀವಿಬ್ಬರೂ ಎಲ್ಲಿಂದಲೂ ಮನ ಬಂದಂತೆ ಭುಜಿಸಿರಿ, ಈ ಮರದ ಬಳಿ ಮಾತ್ರ ಸುಳಿಯದಿರಿ, ಅನ್ಯಥಾ ನೀವಿಬ್ಬರು ಅತಿಕ್ರಮಿಗಳ ಕೂಟಕ್ಕೆ ಸೇರುವಿರಿ. ಎಂದೆವು.
ಆದರೆ ಸೈತಾನನು ಅವರನ್ನು ಅದರಿಂದ ತಪ್ಪಿಸಿದನು. ಅವರಿಬ್ಬರೂ ಅನುಭವಿಸುತ್ತಿದ್ದ ಸುಖ ಸ್ಥಿತಿಯಿಂದ ಇಬ್ಬರನ್ನೂ ಹೊರಹಾಕಿಸಿದನು, ಆಗ, ‘ಇಳಿದು ಹೋಗಿರಿ, ನೀವಿನ್ನು ಪರಸ್ಪರ ವೈರಿಗಳು. ಭೂಮಿಯಲ್ಲಿ ಒಂದು ನಿರ್ಧಿಷ್ಠಾವಧಿ ವಾಸ್ತವ್ಯ ಮತ್ತು ಜೀವನಾನುಕೂಲ ನಿಮಗಿರುವುದು’ ಎಂದು ನಾವು ಆಜ್ಞಾಪಿಸಿದೆವು.
ತರುವಾಯ ಆದಮರು ತನ್ನ ಪ್ರಭುವಿನಿಂದ ಕೆಲವು ವಚನಗಳನ್ನು ಗ್ರಹಿಸಿಕೊಂಡರು. ಆಗ ಪ್ರಭು ಅವರಿಗೆ ಮನ್ನಿಸಿದನು. ಅವನು ದಯಾನಿಧಿಯೂ ಕ್ಷಮಾಶೀಲನೂ ಆಗಿರುತ್ತಾನೆ.
ನಾವು ಹೇಳಿದೆವು; ನೀವೆಲ್ಲರೂ ಇಲ್ಲಿಂದ ಇಳಿದು ಹೋಗಿರಿ. ನನ್ನ ಕಡೆಯಿಂದ ಮಾರ್ಗದರ್ಶನವು ನಿಮಗೆ ಬಂದರೆ, ಯಾರು ನನ್ನ ಮಾರ್ಗ ದರ್ಶನವನ್ನು ಅನುಸರಿ ಸುತ್ತಾರೆ, ಅವರಿಗೆ ಯಾವುದೇ ಭಯ, ವ್ಯಸನಗಳಿಲ್ಲ.
ಸತ್ಯವನ್ನು ಧಿಕ್ಕರಿಸಿ ನಮ್ಮ ಕುರುಹುಗಳನ್ನು ಹುಸಿಗೊಳಿಸಿದವರು ನರಕದವರಾಗುವರು. ಅವರದರಲ್ಲಿ ನಿತ್ಯ ನಿವಾಸಿಗಳು.
ಇಸ್ರಾಈಲ್ ಸಂತತಿಗಳೇ! ನಿಮಗೆ ನಾನಿತ್ತ ಅನುಗ್ರಹವನ್ನು ಜ್ಞಾಪಿಸಿಕೊಳ್ಳಿರಿ. ನನ್ನಲ್ಲಿ ನೀವಿತ್ತ ಕರಾರನ್ನೂ ಪೂರೈಸಿರಿ. ನಾನು ನಿಮಗಿತ್ತ ಕರಾರನ್ನೂ ಪೂರೈಸುವೆನು. ನನ್ನನ್ನು ಮಾತ್ರ ಭಯಪಡಿರಿ.
ನಿಮ್ಮ ಬಳಿಯಲ್ಲಿರುವ ದಿವ್ಯ ಗ್ರಂಥವನ್ನು ಸೃಷ್ಟೀಕರಿಸುವ ನಾನಿತ್ತ ಈ ವೇದ ಗ್ರಂಥದಲ್ಲಿ ವಿಶ್ವಾಸವಿಡಿರಿ. ಇದನ್ನು ಧಿಕ್ಕರಿಸಿದ ಮೊದಲಿಗರು ನೀವಾಗದಿರಿ. ನನ್ನ ವಚನಗಳನ್ನು ತುಚ್ಛ ಬೆಲೆಗೆ ಮಾರಬೇಡಿರಿ . ನನ್ನನ್ನು ಮಾತ್ರ ಭಯಪಡಿರಿ.
ಸತ್ಯವನ್ನು ಮಿಥ್ಯಕ್ಕೆ ಕಲಬೆರಕೆ ಮಾಡಬೇಡಿರಿ. ನೀವು ತಿಳಿದವರಾಗಿದ್ದುಕೊಂಡೇ ಸತ್ಯವನ್ನು ಮುಚ್ಚಿಡದಿರಿ.
ನಮಾಝ್ ನೆಲೆಗೊಳಿಸಿರಿ, ಝಕಾತ್ ನೀಡಿರಿ. ಶಿರವಂದನೆ ಮಾಡುವವರ ಜೊತೆಗೆ ನೀವೂ ಶಿರವಂದನೆ ಮಾಡಿರಿ.
ಜನರಿಗೆ ಹಿತೋಪದೇಶ ನೀಡುತ್ತಾ ಸ್ವತಃ ನಿಮ್ಮನ್ನು ಮರೆತು ಬಿಡುತ್ತೀರಾ? ನೀವು ಗ್ರಂಥವನ್ನು ಓದುತ್ತಲಿರುವಿರಿ. ನಿಮಗೆ ಯೋಚಿಸಬಾರದೆ?
ಸಹನೆ ಮತ್ತು ನಮಾಝ್‍ನಿಂದ ನೆರವು ಬೇಡಿರಿ . ಭಯಚಿತ್ತರಲ್ಲದವರಿಗೆ ನಮಾಝ್ ಬಹಳ ಭಾರವೇರಿದ್ದಾಗಿದೆ.
ಪ್ರಭುವಿನ ಭೇಟಿಯ ಪ್ರಜ್ಞೆ ಇರುವ ಮತ್ತು ಆತನ ಕಡೆಗೇ ನಮ್ಮ ವಾಪಸಾತಿಯೆಂದು ನಂಬಿರುವ ಭಕ್ತರವರು.
ಇಸ್ರಾಈಲ ಸಂತತಿಗಳೇ, ನಿಮಗೆ ನಾನಿತ್ತ ಕೊಡುಗೆಗಳನ್ನೂ ನಿಮ್ಮನ್ನು ನಾನು ವಿಶ್ವದಲ್ಲೇ ಶ್ರೇಷ್ಠರಾಗಿ ಮಾಡಿದ್ದನ್ನೂ ನೆನಪಿಸಿಕೊಳ್ಳಿರಿ
ಒಬ್ಬನಿಂದ ಮತ್ತೊಬ್ಬನಿಗೆ ಉಪಕಾರ ಸಿಗದ, ಯಾವನಿಂದಲೂ ಶಿಫಾರಸು ಸ್ವೀಕೃತವಾಗದ, ಯಾರಿಂದಲೂ ಬದಲಿ ಪರಿಹಾರ ಸ್ವೀಕರಿಸದ, ಯಾರಿಗೂ ಸಹಾಯ ದೊರಕದ ಒಂದು ದಿನದ ಬಗ್ಗೆ ನಿಮಗೆ ಎಚ್ಚರವಿರಲಿ.
ಫಿರ್‍ಔನನ ಕೂಟದವರು ನಿಮಗೆಸಗುತ್ತಿದ್ದ ಕ್ರೂರ ಹಿಂಸೆಗಳಿಂದ ನಿಮ್ಮನ್ನು ನಾವು ಪಾರು ಮಾಡಿದ್ದನ್ನು ನೆನಪಿಸಿಕೊಳ್ಳಿರಿ. ಅವರು ನಿಮ್ಮ ಗಂಡು ಮಕ್ಕಳನ್ನು ಕೊಲ್ಲುತ್ತಿದ್ದರು. ಹೆಣ್ಣು ಮಕ್ಕಳನ್ನು ಬಿಟ್ಟು ಬಿಡುತ್ತಿದ್ದರು. ಆ ಹಿಂಸಾಚಾರವು ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ಘೋರ ಸತ್ವಪರೀಕ್ಷೆಯಾಗಿತ್ತು.
ನಾವು ಕಡಲನ್ನು ಒಡೆದು ನಿಮ್ಮನ್ನು ರಕ್ಷಿಸಿದ ಹಾಗೂ ನಿಮ್ಮ ಕಣ್ಣೆದುರೇ ಫಿರ್‍ಔನನ ತಂಡವನ್ನು ಜಲ ಸಮಾಧಿ ಮಾಡಿದ ಘಟನೆಯನ್ನು ಸ್ಮರಿಸಿರಿ.
ನಾವು ಮೂಸಾರಿಗೆ ನಲ್ವತ್ತು ರಾತ್ರಿಗಳ ಅವಧಿ ನಿಗದಿಪಡಿಸಿದಾಗ ಅವರ ಅಭಾವದಲ್ಲಿ ನೀವು ಕರುವಿಗೆ ಆರಾಧಿಸಿದಿರಿ. ನೀವು ಅಕ್ರಮಿಗಳಾದಿರಿ.
ಆದರೂ ಅದರ ಬಳಿಕ ನೀವು ಕೃತಜ್ಞರಾಗುವಿರೆಂದು ನಿಮಗೆ ನಾವು ಕ್ಷಮಿಸಿದ್ದೇವೆ.
ನಿಮ್ಮ ಸನ್ಮಾರ್ಗ ಪ್ರಾಪ್ತಿಗೆಂದು ಮೂಸಾರಿಗೆ ವೇದಗ್ರಂಥವನ್ನೂ, ವಿವೇಚಕ ಜ್ಞಾನವನ್ನೂ ದಯಪಾಲಿಸಿದ ಸಂದರ್ಭವನ್ನು ಸ್ಮರಿಸಿರಿ.
ಮೂಸಾರವರು ತನ್ನ ಜನಾಂಗದೊಡನೆ ಹೇಳಿದರು. “ನನ್ನ ಜನರೇ! ಕರುವಿಗೆ ಆರಾಧಿಸುವ ಮೂಲಕ ನಿಮಗೆ ನೀವೇ ಅನ್ಯಾಯವೆಸಗಿದ್ದೀರಿ. ಅಲ್ಲಾಹ ನೆಡೆಗೆ ಪಶ್ಚಾತ್ತಾಪಪಡಿರಿ. ನಿಮ್ಮನ್ನು ನೀವೇ ಕೊಲ್ಲಿರಿ. (ಮರಣದಂಡನೆಗೆ ಸಿದ್ಧರಾಗಿರಿ.) ಅದು ನಿಮ್ಮ ಪ್ರಭುವಿನ ಬಳಿ ನಿಮಗೆ ಶ್ರೇಯಸ್ಕರ”. ಹಾಗೆ ಅಲ್ಲಾಹನು ನಿಮ್ಮ ತೌಬಾ ಸ್ವೀಕರಿಸಿದನು. ಅವನು ಪಶ್ಚಾತ್ತಾಪವನ್ನು ಬಹುವಾಗಿ ಸ್ವೀಕರಿಸುವವನೂ ಕರುಣಾವಾರಿಧಿಯೂ ಆಗಿರುವನು.
ಓ ಮೂಸಾ! ಅಲ್ಲಾಹನನ್ನು ಕಣ್ಣಾರೆ ಕಾಣದೆ ನಾವು ನಿನ್ನಲ್ಲಿ ವಿಶ್ವಾಸವಿಡೆವು ಎಂದು ನೀವು ಹೇಳಿದಿರಿ. ಆಗ ನೀವು ನೋಡು ನೋಡುತ್ತಿದ್ದಂತೆಯೇ ನಿಮ್ಮ ಮೇಲೆ ಸಿಡಿಲೆರಗಿತು.
ಹಾಗೆ ಸತ್ತ ನಿಮಗೆ ನಾವು ಮರುಜೀವಕೊಟ್ಟೆವು. ನೀವು ಋಣಭಾವವುಳ್ಳವರಾಗುವಿರೆಂದು.
ನಿಮ್ಮ ಮೇಲೆ ನಾವು ಮೋಡಗಳಿಂದ ನೆರಳನ್ನು ನೀಡಿದೆವು. ಮಧು (ಮನ್ನ್) ಮತ್ತು ಕಾಡಪಕ್ಷಿ (ಸಲ್ವಾ) ಎಂಬೆರಡು ಬಗೆಯ ಆಹಾರವನ್ನು ನೀಡಿದೆವು. ನಾವು ನಿಮಗೆ ನೀಡಿರುವ ಉತ್ತಮ ಆಹಾರವನ್ನು ಭುಜಿಸಿರಿ ಎಂದೆವು. ಆದರೆ ಅವರೆಸಗಿದ ಅನ್ಯಾಯದ ಫಲ ನಮಗೆ ಬಾಧಿಸಲಿಲ್ಲ. ಪರಂತು, ಅವರಿಗೆ ಅವರೇ ಅನ್ಯಾಯ ಮಾಡಿಕೊಂಡರು.
ನಾವು ನಿಮ್ಮೊಡನೆ “ಈ ನಗರಕ್ಕೆ ಪ್ರವೇಶಿಸಿರಿ, ನಿರಾಳವಾಗಿ ತಿಂದುಂಡು ಬದುಕಿರಿ, ನಗರಕ್ಕೆ ಪ್ರವೇಶಿಸುವಾಗ ಶಿರವಂದನೆ ಮಾಡಿರಿ. ಪ್ರವೇಶ ದ್ವಾರದಲ್ಲಿ ನಿಂತುಕೊಂಡು ಪಶ್ಚಾತ್ತಾಪದ ವಚನವನ್ನು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುತ್ತೇವೆ. ಸಚ್ಚರಿತರಿಗೆ ನಾವು ಇನ್ನಷ್ಟು ವರ್ಧಿಸುತ್ತೇವೆ” ಎಂದ ಸಂದರ್ಭ(ವನ್ನು ಸ್ಮರಿಸಿರಿ).
ಆದರೆ ಆ ಧಿಕ್ಕಾರಿಗಳು ಅವರಿಗೆ ಹೇಳಲಾದ ಆದೇಶ ವನ್ನು ಅದಲು ಬದಲು ಮಾಡಿಕೊಂಡರು. ಆದ್ದರಿಂದ ನಾವು ಅಕ್ರಮಿಗಳ ಮೇಲೆ ಅವರ ಅಪರಾಧದ ಫಲವಾಗಿ ಬಾನಿಂದ ವಿಪತ್ತನ್ನು ಇಳಿಸಿದೆವು.
ಮೂಸಾರವರು ತನ್ನ ಜನರಿಗಾಗಿ ಅಲ್ಲಾಹನಲ್ಲಿ ನೀರಿಗೆ ಕೋರಿಕೆ ಸಲ್ಲಿಸಿದರು. ಆಗ ನಾವು “ಆ ಬಂಡೆಗೆ ದಂಡದಿಂದ ಬಡಿಯಿರಿ” ಎಂದು ಮೂಸಾರಿಗೆ ಹೇಳಿದೆವು. ಅವರು ಬಡಿದಾಗ ಬಂಡೆಯಿಂದ ಹನ್ನೆರಡು ಒರತೆಗಳು ಚಿಮ್ಮಿದುವು. ಪ್ರತಿಯೊಂದು ಗೋತ್ರದವರು ಜಲ ಪಡೆಯುವ ಸ್ಥಳವನ್ನು ನಿರ್ಣಯಿಸಿಕೊಂಡರು. ಅಲ್ಲಾಹನ ಆಹಾರದಿಂದ (ಉದಾರತೆಯಿಂದ ದೊರೆತುದನ್ನು) ತಿನ್ನಿರಿ, ಕುಡಿಯಿರಿ, ಭೂಮಿ ಮೇಲೆ ಕ್ಷೋಭೆ ಹರಡದಿರಿ ಎಂದವರಿಗೆ ಹೇಳಿದೆವು.
ಮೂಸಾರವರೇ, ‘ಒಂದೇ ವಿಧ ಆಹಾರವನ್ನು ನಾವು ಸಹಿಸಲಾರೆವು, ಆದ್ದರಿಂದ ನೆಲದಲ್ಲಿ ಬೆಳೆ ಯುವ ಹರಿವೆ, ಸೌತೆ, ಗೋಧಿ, ಹೆಸರುಕಾಳು, ನೀರುಳ್ಳಿಗಳನ್ನು ಒದಗಿಸುವಂತೆ ನಿಮ್ಮ ಪ್ರಭುವಿನಲ್ಲಿ ಅಪೇಕ್ಷಿಸಿರಿ ಎಂದು ನೀವು ಮೂಸಾರಲ್ಲಿ ಹೇಳಿದಾಗ ಅವರು, ಮೇಲ್ಮಟ್ಟದ ಬದಲಿಗೆ ಕೆಳಮಟ್ಟದ್ದನ್ನು ಬಯಸುತ್ತಿದ್ದೀರಾ?’ ಹಾಗಾದರೆ ‘ನೀವು ನಗರಕ್ಕೆ ಹೋಗಿರಿ. ನೀವು ಬಯಸಿದ್ದು ಅಲ್ಲಿ ಇದೆ’ ಎಂದರು. ಹಾಗೆ ಅವರಿಗೆ ಅಪಮಾನ ಮತ್ತು ದಾರಿದ್ರ್ಯದ ಮುದ್ರೆಯೊತ್ತಲಾಗಿದೆ. ಅವರು ಅಲ್ಲಾಹನ ಕ್ರೋಧಕ್ಕೆ ತುತ್ತಾದರು. ಇದೆಲ್ಲವೂ ಅವರು ಅಲ್ಲಾಹನ ಪ್ರಮಾಣಗಳನ್ನು ಸುಳ್ಳಾಗಿಸಿದ ಹಾಗೂ ಅನ್ಯಾಯ ವಾಗಿ ಪ್ರವಾದಿಗಳನ್ನು ವಧಿಸಿದ ಹಾಗೂ ಪಾಪವೆ ಸಗಿದ ಮತ್ತು ಹದ್ದು ಮೀರಿದುದರ ಫಲವಾಗಿರುತ್ತದೆ.
ಸತ್ಯವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು, ಸಬಯನರು ಯಾರೇ ಆಗಲಿ ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆಯಿಟ್ಟು ಸುಕೃತಗಳನ್ನು ಮಾಡಿದರೆ ಪ್ರಭುವಿನ ಬಳಿ ಪುಣ್ಯವಿದೆ. ಅವರಿಗೆ ಭಯ, ವ್ಯಸನಗಳಿಲ್ಲ.
ನಿಮ್ಮ ಮೇಲೆ ‘ಥೂರ್’ಂ ಬೆಟ್ಟವನ್ನು ಎತ್ತಿ ಹಿಡಿದು, ನಾವಿತ್ತ ಆದೇಶಗಳನ್ನು ಪರಿಶ್ರಮಪೂರ್ವಕ ಅನುಸರಿಸಿರಿ, ಅದರ ಸಾರವನ್ನು ಸ್ಮರಿಸಿಕೊಳ್ಳಿರಿ. ನೀವು ಧರ್ಮಾತ್ಮರಾಗುವಿರಿ’ ಎಂದು ನಿಮ್ಮಿಂದ ಧೃಢಪ್ರತಿಜ್ಞೆ ಪಡಕೊಂಡ ಸಂದರ್ಭ(ವನ್ನು ಸ್ಮರಿಸಿರಿ).
ತರುವಾಯ ನೀವು ಪ್ರತಿಜ್ಞೆಯಿಂದ ವಿಮುಖರಾದಿರಿ. ನಿಮಗೆ ಅಲ್ಲಾಹನ ಔದಾರ್ಯ ಹಾಗೂ ಕೃಪೆ ಇರದಿದ್ದಲ್ಲಿ ನಾಶ ನಷ್ಟಕ್ಕೆ ಗುರಿಯಾಗುತ್ತಿದ್ದಿರಿ.
ಶನಿವಾರದ ನಿಯಮವನ್ನು ಉಲ್ಲಂಘಿಸಿದ ನಿಮ್ಮ ಪೈಕಿಯವರ ಬಗ್ಗೆ ನಿಮಗೆ ಗೊತ್ತು. ‘ನಿಂದ್ಯರಾದ ಕಪಿಗಳಾಗಿರಿ’ ಎಂದು ನಾವವರಿಗೆ ವಿಧಿ ಕೊಟ್ಟೆವು.
ಆ ಘಟನೆಯನ್ನು ನಾವು ಭಾವೀ, ವರ್ತಮಾನಗಳ ಜನರಿಗೆ ಒಂದು ಪಾಠವೂ ಧರ್ಮಾತ್ಮರಿಗೊಂದು ಉಪದೇಶವೂ ಆಗಿ ಮಾಡಿದೆವು.
ಮೂಸಾರವರು ತನ್ನ ಜನರಲ್ಲಿ ‘ನೀವೊಂದು ಹಸುವನ್ನು ಬಲಿ ಕೊಡಬೇಕೆಂದು ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ’ ಎಂದಾಗ ‘ನಮ್ಮನ್ನು ಗೇಲಿ ಮಾಡುತ್ತಿರುವಿರಾ?’ ಎಂದವರು ಕೇಳಿದರು. ಆಗ ಮೂಸಾ, ಅಲ್ಲಾಹನಿಗೆ ಶರಣು. ನಾನು ಗೇಲಿ ಮಾಡುವಂತಹ ಮೂಢನಲ್ಲ.’ ಎಂದರು.
ಯಾವ ತರದ ಹಸುವೆಂದು ನಿಮ್ಮ ಪ್ರಭು ತಿಳಿಸುವಂತೆ ಹೇಳಿ ಎಂದವರು ಹೇಳಿದರು. ಆಗ ಮೂಸಾ ತೀರಾ ಎಳೆಯದೂ ಮುದಿಯೂ ಅಲ್ಲ. ನಡುಪ್ರಾಯದ್ದೆಂದು ಅವನು ಹೇಳುತ್ತಾನೆ. ಆ ಪ್ರಕಾರ ನೀವು ಕಾರ್ಯಶೀಲರಾಗಿರಿ ಎಂದರು.
ನಿಮ್ಮ ಪ್ರಭುವಿನಲ್ಲಿ ನಮಗಾಗಿ ಕೇಳಿ, ಅವನು ಅದರ ಬಣ್ಣವನ್ನು ವ್ಯಕ್ತಗೊಳಿಸಲಿ ಎಂದವರು ಹೇಳಿದರು. ಆಗ ಮೂಸಾ, ‘ನೋಡುಗರಿಗೆ ಕೌತುಕ ಹುಟ್ಟಿಸುವಂತಹ ಬಂಗಾರದ ಬಣ್ಣದ ಹಸುವೆಂದು ಅವನು ಹೇಳುತ್ತಿದ್ದಾನೆ’ ಎಂದರು.
ಯಾವ ತರದ ಹಸುವೆಂದು ಇನ್ನಷ್ಟು ಸ್ಪಷ್ಟಗೊಳಿಸಲಿ, ಒಂದಕ್ಕೊಂದು ಹೋಲುವ ಗೋವುಗಳಿಂದ ನಾವು ಪೇಚಿಗೀಡಾಗಿದ್ದೇವೆ, ಅಲ್ಲಾಹು ಇಚ್ಚಿಸಿದರೆ ನಮಗೆ ನೇರ ದಾರಿ ಸಿಗುತ್ತದೆ’ ಎಂದವರು ಹೇಳಿದರು.
ಆಗ ಮೂಸಾರವರು ‘ಹೊಲ ಉಳಲೋ ಕೃಷಿಗೆ ನೀರೆತ್ತಲೋ ಬಳಸದ, ಸರ್ವಾಂಗಪೂರ್ಣವೂ, ಕಲೆರಹಿತವೂ ಆದ ಹಸು ಎಂದು ಅಲ್ಲಾಹು ಹೇಳುತ್ತಿದ್ದಾನೆ.’ ಎಂದರು. ಆಗ ಅವರೆಂದರು; ಇದೀಗ ಸರಿಯಾದ ಮಾಹಿತಿ ಕೊಟ್ಟಿರಿ. ಅಂತೂ ಅವರು ಆ ದನವನ್ನು ಬಲಿ ಕೊಟ್ಟರು. ಅವರಿಗದು ಅಸಾಧ್ಯಕ್ಕೆ ಸನಿಹವಾಗಿತ್ತು.
ನೀವು ಒಬ್ಬನ ಕೊಲೆ ಮಾಡಿ ಪರಸ್ಪರ ಆರೋಪ ಹೊರಿಸಿ ನುಣುಚಿಕೊಳ್ಳುತ್ತಿದ್ದ ಸಂದರ್ಭ. ನಿಮ್ಮ ರಹಸ್ಯವನ್ನು ಅಲ್ಲಾಹನು ಬಯಲಿಗೆಳೆಯ ಲಿಚ್ಛಿಸಿದ್ದನು
ಆದ್ದರಿಂದ ನಾವು ಹೇಳಿದೆವು. ದನದ ಒಂದು ಅಂಗದಿಂದ ಮೃತನ ದೇಹಕ್ಕೆ ಹೊಡೆಯಿರಿ. ಈ ರೀತಿ ಅಲ್ಲಾಹನು ಮೃತರಿಗೆ ಮರುಜೀವ ಕೊಡುತ್ತಾನೆ. ನೀವು ವಿವೇಚಿಸುವ ಸಲುವಾಗಿ ಆತನು ತನ್ನ ದೃಷ್ಟಾಂತಗಳನ್ನು ತೋರಿಸಿ ಕೊಡುತ್ತಾನೆ.
ಆಮೇಲೂ ನಿಮ್ಮ ಮನಸ್ಸು ಕಠಿಣವಾಯಿತು. ಬಂಡೆಯಂತೆ ಅಥವಾ ಅದಕ್ಕಿಂತಲೂ ಕಠೋರ. ಯಾಕೆಂದರೆ ಕೆಲವು ಬಂಡೆಗಳಿಂದ ನೀರೊರತೆಗಳು ಚಿಮ್ಮುತ್ತವೆ. ಕೆಲವು ಬಂಡೆಗಳು ಒಡೆದು ಅದರೊಳಗಿಂದ ಜಲ ಹೊರಬರುತ್ತದೆ. ಕೆಲವು ಕಲ್ಲುಗಳು ದೇವಭಯದಿಂದ ಕೆಳಗುರುಳಿ ಬೀಳುತ್ತವೆ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಅಶ್ರದ್ಧನಲ್ಲ.
ಇಂತಹ ಜನರು ನಿಮ್ಮ ಕರೆಗೆ ಸ್ಪಂದಿಸಿ ಸತ್ಯವಿಶ್ವಾಸ ತಾಳುವರೆಂದು ನೀವು ಆಶಿಸುತ್ತೀರಾ? ಅವರ ಪೈಕಿ ಒಂದು ವಿಭಾಗದವರು ಅಲ್ಲಾಹನ ವಚನವನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕ ಕೂಡಾ ತಿಳಿದುಕೊಂಡೇ ತಿದ್ದುಪಡಿ ಮಾಡಿದರು .
ಅವರು ವಿಶ್ವಾಸಿಗಳನ್ನು ಭೇಟಿಯಾದರೆ ‘ನಾವೂ ವಿಶ್ವಾಸಿಗಳು’ ಎನ್ನುತ್ತಾರೆ. ಆದರೆ ಅವರು ಪರಸ್ಪರ ಏಕಾಂತದಲ್ಲಿ ಕೂತಾಗ, “ಅಲ್ಲಾಹು ನಿಮಗೆ ವ್ಯಕ್ತಗೊಳಿಸಿದ ವಿಚಾರಗಳನ್ನು ಮುಸ್ಲಿಮರಿಗೆ ಹೇಳುತ್ತಿದ್ದೀರಾ? ಅವರದನ್ನು ಪ್ರಭುವಿನ ಬಳಿ ನಮಗೆ ಪ್ರತಿಕೂಲ ಸಾಕ್ಷಿ ಮಾಡಿಯಾರು, ನೀವು ಯೋಚಿಸುತ್ತಿಲ್ಲವೇ? ಎಂದು ಎಚ್ಚರಿಸುತ್ತಾರೆ.
ಅವರು ಹೊರಗಡೆ ಹೇಳುತ್ತಿರುವುದನ್ನೂ ಒಳಗಡೆ ಮುಚ್ಚಿಡುವುದನ್ನೂ ಅಲ್ಲಾಹನು ತಿಳಿಯುತ್ತಾನೆ ಎಂಬುದು ಅವರಿಗೆ ಗೊತ್ತಿಲ್ಲವೇ?
ಅವರಲ್ಲಿ ನಿರಕ್ಷರಿಗಳಿದ್ದಾರೆ. ಅವರಿಗೆ ವೇದಗ್ರಂಥ ತಿಳಿಯದು. ಅವರು ಕೇವಲ ಊಹೆಯನ್ನಷ್ಟೇ ಅವಲಂಬಿಸಿದ್ದಾರೆ.
ಸ್ವಹಸ್ತಗಳಿಂದ ಗ್ರಂಥ ಬರೆದು ತುಚ್ಛ ಬೆಲೆಯನ್ನು ಪಡೆಯುವ ಸಲುವಾಗಿ ‘ಇದು ಅಲ್ಲಾಹನ ಕಡೆಯಿಂದ ಬಂದಿದೆ’ ಎನ್ನುವವರಿಗೆ ವಿನಾಶ ಕಾದಿದೆ. ಅವರ ಹಸ್ತ ಲಿಖಿತಗಳಿಂದ ಅವರಿಗೆ ವಿನಾಶವಿದೆ. ಮತ್ತು ಅವರ ಸಂಪಾದನೆಗಳ ಕಾರಣದಿಂದಲೂ ಅವರಿಗೆ ವಿನಾಶವಿದೆ.
“ಅವರು, ಕೆಲವೇ ಕೆಲವು ದಿನಗಳ ಹೊರತು ನಮಗೆ ನರಕಾಗ್ನಿ ತಟ್ಟುವುದಿಲ್ಲ” ಎನ್ನುತ್ತಾರೆ. ಕೇಳಿರಿ, ನೀವು ಅಂತಹ ಭರವಸೆಯನ್ನು ಅಲ್ಲಾಹನಿಂದ ಪಡೆದಿದ್ದೀರೋ, ಹಾಗೆ ಪಡೆದಿದ್ದರೆ ಅವನು ಮಾತು ತಪ್ಪಲಾರ ಅಥವಾ ನಿಮಗೆ ಗೊತ್ತಿಲ್ಲದ್ದನ್ನು ಅಲ್ಲಾಹನ ಮೇಲೆ ಹೊರಿಸಿ ಹೇಳುತ್ತೀರೋ?
ಹಾಗಲ್ಲ, ಯಾರು ಪಾಪವೆಸಗುತ್ತಾರೆ, ಮತ್ತು ಪಾಪಗಳು ಯಾರನ್ನು ಸುತ್ತಿಕೊಂಡಿರುತ್ತವೆ, ಅವರೇ ನರಕದವರು. ಅವರದರಲ್ಲಿ ಚಿರನಿವಾಸಿಗಳು.
ಸತ್ಯವಿಶ್ವಾಸವಿಟ್ಟು ಸುಕೃತ ಕೈಗೊಂಡವರು ಸ್ವರ್ಗದವರು. ಅವರದರಲ್ಲಿ ಚಿರವಾಸಿಗಳು.
“ಅಲ್ಲಾಹನಿಗಲ್ಲದೆ ಅನ್ಯರಿಗೆ ಆರಾಧಿಸದಿರಿ, ಹೆತ್ತವರೊಡನೆ ಉದಾರಿಗಳಾಗಿರಿ, ಬಂಧುಗಳು, ತಬ್ಬಲಿಗಳು ಹಾಗೂ ಬಡವರಿಗೆ ಉಪಕಾರ ಮಾಡಿರಿ, ಜನರೊಡನೆ ಹಿತವಾಗಿ ನುಡಿಯಿರಿ, ನಮಾಝ್ ಸ್ಥಿರಗೊಳಿಸಿರಿ, ಝಕಾತ್ ಪಾವತಿಸಿರಿ” ಎಂದು ನಾವು ಇಸ್ರಾಈಲ್ ಸಂತತಿಗಳಿಂದ ಪ್ರತಿಜ್ಞೆ ಪಡೆದ ಸಂದರ್ಭ(ವನ್ನು ಸ್ಮರಿಸಿರಿ). ಆದರೆ ನಿಮ್ಮ ಪೈಕಿ ಕೆಲವರ ಹೊರತು ನೀವೆಲ್ಲರೂ ನಿರ್ಲಕ್ಷ್ಯ ವಹಿಸುತ್ತಾ ವಿಮುಖರಾದಿರಿ.
ನೀವು ಪರಸ್ಪರ ರಕ್ತ ಹರಿಸಬಾರದು, ಸ್ವಜನರನ್ನು ಅವರ ಮನೆಗಳಿಂದ ಹೊರಹಾಕಬಾರದು ಎಂದು ನಿಮ್ಮೊಡನೆ ವಚನ ತೆಗೆದುಕೊಂಡ ಸಂದರ್ಭವನ್ನು ಸ್ಮರಿಸಿರಿ, ನೀವದಕ್ಕೆ ಒಪ್ಪಿಕೊಂಡಿರಿ ಹಾಗೂ ನೀವೇ ಅದಕ್ಕೆ ಸಾಕ್ಷಿಗಳು.
ತರುವಾಯ ನೀವೀಗ ಪರಸ್ಪರ ಕೊಲೆ ನಡೆಸು ತ್ತಿದ್ದೀರಿ. ನಿಮ್ಮದೇ ಒಂದು ವಿಭಾಗದವರ ಮೇಲೆ ಅನ್ಯಾಯ, ವೈರದ ವಿಷಯದಲ್ಲಿ ಪರಸ್ಪರ ಸಹಕಾರ ನೀಡುತ್ತಾ ಜನರನ್ನು ನಿವಾಸಗಳಿಂದ ಹೊರದ ಬ್ಬುತ್ತಿದ್ದೀರಿ. ಅವರು ಯುದ್ಧ ಕೈದಿಗಳಾದಾಗ ಮುಕ್ತಿ ಶುಲ್ಕ ತೆತ್ತು ನೀವೇ ಅವರನ್ನು ಬಂಧಮುಕ್ತಗೊ ಳಿಸುತ್ತಿರುವಿರಿ. ವಾಸ್ತವದಲ್ಲಿ ಅವರನ್ನು ಹೊರ ದಬ್ಬುವುದೇ ನಿಮಗೆ ನಿಷಿದ್ಧವಾಗಿತ್ತು. ನೀವೇನು ವೇದದ ಕೆಲವಲ್ಲಿ ವಿಶ್ವಾಸ ತಾಳಿ ಕೆಲವು ಅಂಶಗಳನ್ನು ಧಿಕ್ಕರಿಸುತ್ತೀರಾ? ನಿಮ್ಮಲ್ಲಿ ಹಾಗೆ ಮಾಡುವವರಿಗೆ ಇಹದಲ್ಲಿ ದೊರೆಯುವ ಫಲವು ಅಪಮಾನವಲ್ಲದೆ ಮತ್ತೇನೂ ಅಲ್ಲ. ಪರದಲ್ಲಂತೂ ಕಠಿಣತಮ ಶಿಕ್ಷೆಗೆ ಅವರು ಗುರಿಯಾಗುವರು. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಅಶ್ರದ್ಧನಲ್ಲ
ಅವರೇ ಪರಲೋಕದ ಬದಲಿಗೆ ಇಹದ ಬಾಳನ್ನು ಕೊಂಡುಕೊಂಡವರು. ಅವರಿಗೆ ಶಿಕ್ಷೆ ಸಡಿಲ ವಾಗದು. ಯಾವ ನೆರವೂ ಅವರಿಗೆ ದೊರೆಯದು.
ಮೂಸಾರವರಿಗೆ ನಾವು ವೇದಗ್ರಂಥವನ್ನು ನೀಡಿದೆವು. ಅವರ ಅನಂತರ ನಿರಂತರವಾಗಿ ಪ್ರವಾದಿಗಳನ್ನು ಕಳುಹಿಸಿದೆವು. ಮರ್ಯಮಳ ಪುತ್ರ ಈಸಾರವರಿಗೆ ಸುವ್ಯಕ್ತ ಪ್ರಮಾಣಗಳನ್ನು ನೀಡಿದೆವು. ಪರಿಶುದ್ಧಾತ್ಮರ ಮೂಲಕ ಅವರಿಗೆ ಬಲವೃದ್ಧಿ ನೀಡಿದೆವು. ನೀವಾದರೋ ನಿಮ್ಮ ತನ್ನಿಚ್ಛೆಗೆ ವಿರೋಧ ವಾದ ಆದರ್ಶಗಳೊಂದಿಗೆ ಪ್ರವಾದಿಗಳು ಬಂದಾಗ ಲೆಲ್ಲಾ ಅಹಂಭಾವ ತೋರಿದಿರಿ. ಕೆಲವರನ್ನು ಸುಳ್ಳು ಮಾಡಿದಿರಿ. ಇನ್ನು ಕೆಲವರನ್ನು ನೀವು ಹತ್ಯೆಗೈದಿರಿ.
‘ನಮ್ಮ ಹೃದಯಗಳು ಮುಚ್ಚಲ್ಪಟ್ಟಿವೆ’ ಎಂದವರು ಹೇಳಿದರು. ವಾಸ್ತವ ಅದಲ್ಲ. ಅವರ ಸತ್ಯನಿಷೇಧದ ಕಾರಣಕ್ಕೆ ಅವರಿಗೆ ಅಲ್ಲಾಹನ ಶಾಪ ತಟ್ಟಿದೆ. ಆದ್ದರಿಂದ ಅವರ ಪೈಕಿ ಕೆಲವರು ಮಾತ್ರ ವಿಶ್ವಾಸಿಗಳಾಗುತ್ತಾರೆ.
ಅವರ ಕೈವಶವಿದ್ದ ವೇದಗ್ರಂಥವನ್ನು ದೃಢೀಕರಿಸುವ ಒಂದು ಗ್ರಂಥ (ಖುರ್‍ಆನ್) ಅಲ್ಲಾಹನ ಕಡೆಯಿಂದ ಅವರಿಗೆ ಬಂದಾಗ (ಅವರದನ್ನು ತಳ್ಳಿ ಹಾಕಿದರು). ಆದರೆ ಇದಕ್ಕೂ ಮುನ್ನ ಅವರು ಸತ್ಯನಿಷೇಧಿಗಳ ವಿರುದ್ಧ ಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಅವರಿಗೆ ಮೊದಲೇ ಗೊತ್ತಿದ್ದ ವೇದಗ್ರಂಥ ಬಂದಾಗ ನಿಷೇಧಿಸಿಬಿಟ್ಟರು. ಸತ್ಯನಿಷೇಧಿಗಳಿಗೆ ಅಲ್ಲಾಹನ ಶಾಪವಿದೆ.
ಅಲ್ಲಾಹನು ಅವತೀರ್ಣಗೊಳಿಸಿದ ವೇದಗ್ರಂಥದ ನಿಷೇಧಕ್ಕೆ ತಮ್ಮನ್ನೇ ಮಾರಿಕೊಂಡ ಅವರ ಈ ವ್ಯವಹಾರ ಅದೆಷ್ಟು ನಿಕೃಷ್ಟ! ಅಲ್ಲಾಹನು ತಾನಿಚ್ಛಿಸಿದವರಿಗೆ ಅನುಗ್ರಹಿಸುವುದರಲ್ಲಿ ಅವರಿಗಿರುವ ಮತ್ಸರವೇ ಇದಕ್ಕೆ ಕಾರಣ . ಆದ್ದರಿಂದ ಅವರು ದುಪ್ಪಟ್ಟು ಕ್ರೋಧಕ್ಕೆ ತುತ್ತಾದರು. ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆ ಕಾದಿದೆ .
‘ಅಲ್ಲಾಹು ಅವತೀರ್ಣಗೊಳಿಸಿದ ವಿಚಾರವನ್ನು ನಂಬಿರಿ’ ಎಂದು ಅವರಿಗೆ ಹೇಳಿದರೆ, “ನಮ್ಮ ಮೇಲೆ ಅವತೀರ್ಣಗೊಂಡದ್ದನ್ನು ಮಾತ್ರ ನಾವು ನಂಬುತ್ತಿದ್ದೇವೆ” ಎನ್ನುತ್ತಾರೆ. ಅದರ ಹೊರತಾದುದನ್ನು ನಿಷೇಧಿಸುತ್ತಾರೆ. ನಿಜದಲ್ಲಿ ಈ ದೇವವಾಣಿಯು ಅವರ ಬಳಿಯಿರುವ ಗ್ರಂಥವನ್ನು ಪುಷ್ಠೀಕರಿಸುವ ಸತ್ಯವಾಗಿದೆ. (ಪ್ರವಾದಿಯರೇ) ಕೇಳಿರಿ, ನೀವು (ನಿಮ್ಮ ವೇದವನ್ನು ಮಾತ್ರ) ನಂಬಿದವರಾಗಿದ್ದರೆ, ಇದಕ್ಕಿಂತ ಮುಂಚೆ ಅಲ್ಲಾಹನ ಪ್ರವಾದಿಗಳನ್ನು ವಧಿಸಿದ್ದೇಕೆ?
ಸ್ಪಷ್ಟ ಪುರಾವೆಗಳೊಂದಿಗೆ ನಿಮ್ಮ ಬಳಿಗೆ ಮೂಸಾ ಬಂದರು. ಆದರೂ ಅವರ ಉಪಸ್ಥಿತಿಯಲ್ಲಿ ನೀವು ಅನ್ಯಾಯವಾಗಿ ಕರುವಿಗೆ ಪೂಜಿಸಿದಿರಿ.
ನಿಮ್ಮ ಮೇಲೆ ನಾವು ತೂರ್ ಬೆಟ್ಟವನ್ನು ಎತ್ತಿ ಹಿಡಿದು ನಿಮ್ಮಿಂದ ಧೃಢ ಪ್ರತಿಜ್ಞೆ ಮಾಡಿಸಲಾದ ಸಂದರ್ಭ (ವನ್ನು ನೆನೆಸಿರಿ). ‘ನಿಮಗೆ ನಾವಿತ್ತುದನ್ನು ಬಲವಾಗಿ ಅವಲಂಬಿಸಿರಿ. ನನ್ನ ಆದೇಶಗಳನ್ನು ಆಲಿಸಿರಿ’ ಎಂದು ನಾವು ಹೇಳಿದಾಗ ಅವರು, ‘ನಾವು ಆಲಿಸಿದೆವು, ಆದರೆ ತಿರಸ್ಕರಿಸಿದೆವು’ ಎಂದರು. ಸತ್ಯನಿಷೇಧದ ಫಲವಾಗಿ ಅವರ ಮನದಲ್ಲಿ ಕರು ನೆಲೆಯೂರಿತ್ತು . ಹೇಳಿರಿ; ನೀವು ವಿಶ್ವಾಸಿಗಳಾಗಿದ್ದರೆ ನಿಮ್ಮ ವಿಶ್ವಾಸವು ನಿಮಗೆ ಅದೆಷ್ಟು ನೀಚವಾದುದನ್ನು ಆಜ್ಞಾಪಿಸುತ್ತದೆ.
ಪರಲೋಕವು ಇತರರಿಗಲ್ಲ, ನಿಮಗೆ ಮಾತ್ರ ಎಂಬ ನಿಮ್ಮ ವಾದವು ನಿಜವಾಗಿದ್ದರೆ ನೀವು ಮರಣಕ್ಕಾಗಿ ಹಾತೊರೆಯಿರಿ ಎಂದವರಲ್ಲಿ ಹೇಳಿರಿ.
ಆದರೆ ಅವರ ಕೈಗಳು ಎಸಗಿದ ಪಾಪಗಳ ಪರಿಣಾಮವಾಗಿ ಅವರು ಎಂದಿಗೂ ಮರಣವನ್ನು ಖಂಡಿತ ಆಶಿಸಲಾರರು. ಅಲ್ಲಾಹನು ಅಕ್ರಮಿಗಳ ಕುರಿತು ಚೆನ್ನಾಗಿ ಬಲ್ಲವನು.
ನಿಜದಲ್ಲಿ ಅವರು ಜನರ ಪೈಕಿ ಬಹು ದೇವಾರಾಧ ಕರಿಗಿಂತಲೂ ಹೆಚ್ಚು ಜೀವನದಲ್ಲಿ ಆಶೆ ಬುರು ಕರಾಗಿರುವುದನ್ನು ನೀವು ಕಾಣುವಿರಿ. ಸಾವಿರ ವರ್ಷ ಬದುಕಬೇಕೆಂದು ಅವರಲ್ಲಿ ಪ್ರತಿಯೊಬ್ಬರೂ ಆಶಿಸುತ್ತಾರೆ. ಆದರೆ ದೀರ್ಘಾಯುಷ್ಯವು ಅವರನ್ನು ಶಿಕ್ಷೆಯಿಂದ ಪಾರು ಮಾಡದು. ಅವರ ಕೃತ್ಯಗಳನ್ನೆಲ್ಲ ಅಲ್ಲಾಹನು ಸೂಕ್ಷ್ಮವಾಗಿ ಕಾಣುತ್ತಿರುತ್ತಾನೆ.
ಹೇಳಿರಿ, ಯಾರು ಜಿಬ್ರೀಲರ ಶತ್ರುವಾಗಿರುವರೋ, ಅಂಥವರು ತಿಳಿದಿರಲಿ, ಪೂರ್ವವೇದಗಳನ್ನು ದೃಢೀಕರಿಸುವ, ಸತ್ಯವಿಶ್ವಾಸಿಗಳಿಗೆ ಸರಿದಾರಿ ಸೂಚಕ ಹಾಗೂ ಸುವಾರ್ತೆಯಾಗಿರುವ ಈ ಸಂದೇಶವನ್ನು ಅಲ್ಲಾಹನ ಅಪ್ಪಣೆ ಮೇರೆಗೆ ನಿಮ್ಮ ಮನದಾಳಕ್ಕೆ ಅವಾಹನೆ ಮಾಡಿದವರು ಜಿಬ್ರೀಲರು ಎಂದು .
ಯಾರಾದರೂ ಅಲ್ಲಾಹು, ಅವನ ಮಲಾಇಕತ್, ಆತನ ಪ್ರವಾದಿಗಳು, ಜಿಬ್‍ರೀಲ್ ಹಾಗೂ ವಿೂಖಾಈಲರ ಶತ್ರುವಾಗಿದ್ದರೆ, ತಿಳಿದಿರಲಿ. ಅಲ್ಲಾಹನು ಸತ್ಯನಿಷೇಧಿಗಳ ವೈರಿಯಾಗಿರುವನು.
ಸುಸ್ಪಷ್ಟ ಪ್ರಮಾಣಗಳನ್ನು ನಿಮಗೆ ನಾವು ಅವತೀರ್ಣಗೊಳಿಸಿದ್ದೇವೆ. ಇವುಗಳನ್ನು ನಿಷೇಧಿಸುವವರು ದುಷ್ಕರ್ಮಿಗಳು ಮಾತ್ರ.
ಅವರು ಒಪ್ಪಂದ ಮಾಡಿಕೊಂಡಾಗಲೆಲ್ಲ ಅವರಲ್ಲೊಂದು ವಿಭಾಗ ಅದನ್ನು ಮುರಿದಿದ್ದಾರೆ. ಹೌದು, ಅವರ ಪೈಕಿ ಹೆಚ್ಚಿನವರು ವಿಶ್ವಾಸಿಗಳಲ್ಲ.
ಅವರ ಬಳಿಯಿರುವ ಸತ್ಯಗಳನ್ನು ಪುಷ್ಠೀಕರಿಸುತ್ತಾ ಅಲ್ಲಾಹನ ಕಡೆಯಿಂದ ಪ್ರವಾದಿಯೊಬ್ಬರ ಆಗಮನವಾದಾಗ (ಅಲ್ಲಾಹನಿಂದ) ವೇದ ಪ್ರಾಪ್ತರಾದವರಿಂದಲೇ ಒಂದು ಪಂಗಡದವರು ಏನೋ ಗೊತ್ತಿಲ್ಲದ ಭಾವದಲ್ಲಿ ಅಲ್ಲಾಹನ ಗ್ರಂಥವನ್ನು ಬೆನ್ನ ಹಿಂದೆ ಎಸೆದರು.
ಸುಲೈಮಾನರ ರಾಜತ್ವದ ಹೆಸರಲ್ಲಿ ಶೈತಾನರು ವಾಚಿಸುತ್ತಿದ್ದುದನ್ನು ಇವರು ಅನುಗಮಿಸಿದರು. ಸುಲೈಮಾನರು ‘ಕುಫ್ರ್’ (ದೇವನಿಷೇಧ) ಮಾಡಿಲ್ಲ. ಕುಫ್ರ್ ಮಾಡಿದ್ದು ಜನರಿಗೆ ವಾಮಾಚಾರ ಕಲಿಸುತ್ತಿದ್ದ ಶೈತಾನರು. ಬಾಬಿಲೋನಿಯಾದಲ್ಲಿ ಹಾರೂತ್, ಮಾರೂತ್ ಎಂಬೆರಡು ಮಲಕ್‍ಗಳಿಗೆ ಅವಾಹಿಸಲಾಗಿದ್ದುದರ ಬೆನ್ನ ಹಿಂದೆ ಇವರು ಬಿದ್ದರು. ‘ನಾವೊಂದು ಸತ್ವಪರೀಕ್ಷೆ, ನೀನು ಭ್ರಷ್ಟನಾಗದಿರು’ ಎಂದು ಹೇಳದೆ ಆ ಮಲಕ್‍ಗಳು ಯಾವೊಬ್ಬನಿಗೂ ಮಾಟ ಕಲಿಸಲಿಲ್ಲ . ಹಾಗೆ ಅವರಿಬ್ಬರಿಂದ ಸತಿ-ಪತಿಯರಲ್ಲಿ ಒಡಕು ಹುಟ್ಟಿಸುವಂತಹದ್ದನ್ನು ಅವರು ಕಲಿಯುವರು. ಆದರೆ ಅದರಿಂದ ಅಲ್ಲಾಹನ ಅನುಮತಿಯ ವಿನಾ ಯಾವೊಬ್ಬನನ್ನೂ ಪೀಡಿ ಸಲು ಅವರಿಂದಾಗದು. ಅವರಿಗೆ ಸ್ವತಃ ಗುಣ ವಲ್ಲದ ಹಾಗೂ ಅವಗುಣವಾಗುವುದನ್ನು ಅವರು ಕಲಿಯುತ್ತಿದ್ದರು. ಅದನ್ನು ಕೊಂಡು ಕೊಂಡವನಿಗೆ ಪರಲೋಕದಲ್ಲಿ ಯಾವುದೇ ಭಾಗ್ಯವಿಲ್ಲ ವೆಂಬುದೂ ಅವರಿಗೆ ಗೊತ್ತು. ಅವರು ತಮ್ಮ ಸ್ವಹಿತದ ಬದಲಿಗೆ ಕೊಂಡುಕೊಂಡುದು ಅದೆಷ್ಟು ನಿಕೃಷ್ಟ ! ಅವರಿಗಿದು ಮನದಟ್ಟಾಗಿದ್ದರೆ!
(ಇದಕ್ಕಿಂತ) ಅವರು ಸತ್ಯವಿಶ್ವಾಸ ಮತ್ತು ಧರ್ಮ ಶ್ರದ್ಧೆಯನ್ನು ಪಾಲಿಸುತ್ತಿದ್ದರೆ, ಅಲ್ಲಾಹನ ಬಳಿಯಿಂದ ಅವರಿಗೊದಗುತ್ತಿದ್ದ ಸತ್ಫಲ ಎಷ್ಟು ಶ್ರೇಷ್ಠವಿತ್ತು. ಅವರಿಗದು ಗ್ರಾಹ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು.
ಓ ಸತ್ಯವಿಶ್ವಾಸಿಗಳೇ! ನೀವು ರಾಇನಾ ಎನ್ನಬೇಡಿ. ಉನ್‍ಳುರ್ನಾ ಅನ್ನಿರಿ. ಗಮನವಿಟ್ಟು ಆಲಿಸಿರಿ. ನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯಿದೆ
ವೇದದವರೂ ಬಹುದೇವೋಪಾಸಕರೂ ನಿಮಗೆ ಪ್ರಭುವಿನಿಂದ ಯಾವುದೇ ಗುಣಾವರೋಹಣವನ್ನು ಇಷ್ಟಪಡುವುದಿಲ್ಲ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ವರದಾನಕ್ಕೆ ಆರಿಸಿಕೊಳ್ಳುತ್ತಾನೆ. ಅಲ್ಲಾಹನು ಘನವೆತ್ತ ಉದಾರಿಯು.
ನಾವು ಯಾವುದೇ ವಚನವನ್ನು ರದ್ದುಪಡಿಸಿದರೆ ಅಥವಾ ವಿಸ್ಮರಣೆ ಮಾಡಿಸಿದ್ದರೆ ಅದಕ್ಕಿಂತ ಶ್ರೇಷ್ಟವಾದುದನ್ನು ಇಲ್ಲವೇ ಸಮಾನವಾದುದನ್ನು ತರುತ್ತೇವೆ. ಅಲ್ಲಾಹನು ಸರ್ವಸಮರ್ಥನೆಂಬುದು ನಿಮಗೆ ಗೊತ್ತಿಲ್ಲವೇ?
ಭೂಮ್ಯಾಕಾಶಗಳ ಒಡೆತನ ಅಲ್ಲಾಹನದ್ದಾಗಿದ್ದು ಅವನ ಹೊರತು ನಿಮಗೆ ರಕ್ಷಕನೂ ಸಹಾಯಕನೂ ಯಾರು ಇಲ್ಲವೆಂಬುದು ನಿಮಗೆ ತಿಳಿದಿಲ್ಲವೇ?
ಹಿಂದೆ ಮೂಸಾರಲ್ಲಿ ಪ್ರಶ್ನಿಸಲ್ಪಟ್ಟಂತೆ ನೀವೂ ನಿಮ್ಮ ಪ್ರವಾದಿಯೊಂದಿಗೆ ಪ್ರಶ್ನಿಸಲಿಚ್ಛಿಸುತ್ತಿದ್ದೀರಾ? ಸತ್ಯವಿಶ್ವಾಸದ ಬದಲಿಯಾಗಿ ಅವಿಶ್ವಾಸವನ್ನು ಕೈಗೆತ್ತಿಕೊಂಡವನು ಖಂಡಿತವಾಗಿಯೂ ಸರಿದಾರಿ ಯಿಂದ ದೂರ ಸರಿದನು .
ನೀವು ಸತ್ಯವಿಶ್ವಾಸ ಸ್ವೀಕರಿಸಿದ ನಂತರ ನಿಮ್ಮನ್ನು ಸತ್ಯನಿಷೇಧಕ್ಕೆ ಮರಳಿಸಬೇಕೆಂದು ವೇದದವರಲ್ಲಿ ಹೆಚ್ಚಿನವರು ಇಚ್ಛಿಸುತ್ತಿದ್ದಾರೆ. ಸತ್ಯ ಗೊತ್ತಿದ್ದೂ ಕೂಡಾ ಅವರು ಹೀಗೆ ಮಾಡುತ್ತಿರುವುದು ಅವರ ಸ್ವಂತದ ಮತ್ಸರದಿಂದಾಗಿದೆ. ಅಲ್ಲಾಹನು ಕ್ರಮ (ಆದೇಶ) ಕೈಗೊಳ್ಳುವವರೆಗೆ ಕ್ಷಮಿಸಿರಿ, ಮನ್ನಿಸಿರಿ. ಖಂಡಿತ ಅಲ್ಲಾಹನು ಸರ್ವಸಮರ್ಥನಿರುವನು.
ನಮಾಝನ್ನು ಖಾಯಂಗೊಳಿಸಿರಿ. ಝಕಾತ್ ಪಾವತಿಸಿರಿ. ನಿಮಗಾಗಿ ನೀವು ಮುಂಗಡವಾಗಿ ಮಾಡಿಡುವ ಪುಣ್ಯಗಳನ್ನು ಅಲ್ಲಾಹನ ಬಳಿ ಪಡೆಯಲಿರುವಿರಿ. ನಿಮ್ಮ ಪ್ರವರ್ತಿಗಳನ್ನು ಅಲ್ಲಾಹನು ಚೆನ್ನಾಗಿ ಕಾಣುತ್ತಿರುತ್ತಾನೆ.
ಯಹೂದನೋ ಕ್ರೈಸ್ತನೋ ಆಗದೆ ಸ್ವರ್ಗಪ್ರವೇಶ ಅಸಾಧ್ಯವೆಂದು ಅವರು ಹೇಳುತ್ತಾರೆ. ಅದು ಅವರ ವ್ಯಾಮೋಹ. ‘ನೀವು ಸತ್ಯವಂತರಾಗಿದ್ದರೆ ನಿಮ್ಮ ಪ್ರಮಾಣಗಳನ್ನು ತನ್ನಿರಿ’ ಎಂದು ಹೇಳಿರಿ.
ಹಾಗಲ್ಲ. ಯಾವನು ಧರ್ಮಪರಾಯಣನಾಗಿ ಅಲ್ಲಾಹನತ್ತ ಶರಣೋನ್ಮುಖನಾಗುತ್ತಾನೋ, ಅವನಿಗೆ ತನ್ನೊಡೆಯನ ಬಳಿ ಪ್ರತಿಫಲವಿದೆ. ಅವರಿಗೆ ಭಯ, ವ್ಯಸನಗಳಿಲ್ಲ.
ಕ್ರೈಸ್ತರಿಗೆ ಯಾವುದೇ ನೆಲೆಗಟ್ಟಿಲ್ಲವೆಂದು ಯಹೂದ್ಯರು ಹೇಳುತ್ತಾರೆ. ಯಹೂದ್ಯರಿಗೆ ಯಾವುದೇ ನೆಲೆಗಟ್ಟಿಲ್ಲವೆಂದು ಕ್ರೈಸ್ತರು ಹೇಳುತ್ತಾರೆ. ವಸ್ತುತಃ ಉಭಯತ್ರರೂ ವೇದ ಓದುತ್ತಲೂ ಇದ್ದಾರೆ. ಗ್ರಂಥಜ್ಞಾನ ಇಲ್ಲದವರೂ ಕೂಡಾ ಇವರಂತೆಯೇ ಹೇಳಿದ್ದಾರೆ. ಇವರು ಹೊಂದಿರುವ ಭಿನ್ನಾಭಿಪ್ರಾಯ ವಿವಾದಗಳಿಗೆ ಪರಲೋಕದಲ್ಲಿ ಅಲ್ಲಾಹನು ತೀರ್ಪು ನೀಡುವನು.
ಅಲ್ಲಾಹನ ಮಸೀದಿಗಳಲ್ಲಿ ಆತನ ನಾಮ ಸ್ಮರಣೆಯನ್ನು ತಡೆಯುವ ಹಾಗೂ ಅವುಗಳ ಅವನತಿಗೆ ಪ್ರಯತ್ನಿಸಿದವರಿಗಿಂತ ದೊಡ್ಡ ಅಕ್ರಮಿಗಳು ಬೇರಿಲ್ಲ. ಅವರು ನಿಜದಲ್ಲಿ ಭಯಚಿತ್ತರಾಗದೆ ಮಸೀದಿಯೊಳಗೆ ಪ್ರವೇಶಿಸ ಬಾರದವರು. ಅವರಿಗೆ ಇಹದಲ್ಲಿ ನಿಂದ್ಯತೆಯೂ, ಪರದಲ್ಲಿ ಘೋರ ಶಿಕ್ಷೆಯೂ ಕಾದಿದೆ.
ಪೂರ್ವಪಶ್ಚಿಮಗಳು ಅಲ್ಲಾಹನವು. ನೀವು ಯಾವ ಕಡೆ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಅನುಗ್ರಹ ಸಾನಿಧ್ಯವಿದೆ. ಅಲ್ಲಾಹನು ಪರಮವಿಶಾಲನು. ಪರಮತಜ್ಞನು.
ಅಲ್ಲಾಹನು ಪುತ್ರರಿಗೆ ಜನ್ಮಕೊಟ್ಟಿರುತ್ತಾನೆ ಎಂದರವರು. ಅಲ್ಲಾಹನು ಪರಿಶುದ್ಧನು. ಭುವಿ- ಗಗನಗಳ ಅಧಿಪತಿ ಆತ. ಎಲ್ಲವೂ ಆತನಿಗೆ ವಿಧೇಯ.
ಅವನು ಆಗಸಗಳು ಮತ್ತು ಭೂಮಿಯ ಮೂಲ ನಿರ್ಮಾತೃ. ತಾನೊಂದನ್ನು ನಿರ್ಧರಿಸಿದರೆ ‘ಆಗು’ ಎನ್ನುವನು. ಆಗ ಅದು ಸೃಷ್ಟಿಯಾಗುವುದು.
ಅಲ್ಲಾಹು ನಮ್ಮೊಡನೆ ಯಾಕೆ ಮಾತಾಡುವುದಿಲ್ಲ ಅಥವಾ ಏನಾದರೊಂದು ಪುರಾವೆಯನ್ನು ಯಾಕೆ ನೀಡುವುದಿಲ್ಲ? ಎಂದು ಅಜ್ಞಾನಿಗಳು ಕೇಳುತ್ತಾರೆ. ಇದೇ ಮಾತನ್ನು ಇವರ ಹಿಂದಿನವರೂ ಹೇಳಿದ್ದರು. ಇವರೆಲ್ಲರ ಅಂತರಂಗವು ಒಂದೇ ತೆರನಾಗಿ ಬಿಟ್ಟಿದೆ. ವಿಶ್ವಾಸ ದೃಢತೆಯಿರುವವರಿಗೆ ನಾವು ದೃಷ್ಟಾಂತಗಳನ್ನು ಸ್ಪಷ್ಟಪಡಿಸಿರುತ್ತೇವೆ.
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸತ್ಯ ದೊಂದಿಗೆ ಸುವಾರ್ತೆಗಾರನಾಗಿ, ಮುನ್ನೆಚ್ಚರಿಕೆದಾ ರನಾಗಿ ಕಳುಹಿಸಿರುತ್ತೇವೆ. ನರಕದವರ ಕುರಿತು ನಿಮ್ಮನ್ನು ಪ್ರಶ್ನಿಸಲಾಗುವುದಿಲ್ಲ.
ಯಹೂದ್ಯರು ಮತ್ತು ಕ್ರೈಸ್ತರು, ಅವರ ಧರ್ಮವನ್ನು ನೀವು ಅನುಸರಿಸುವವರೆಗೂ ನಿಮ್ಮ ಬಗ್ಗೆ ತೃಪ್ತರಾಗರು. ಅಲ್ಲಾಹನ ದಾರಿಯೇ ನಿಜವಾದ ದಾರಿ ಎಂದವರಿಗೆ ಹೇಳಿರಿ. ನಿಮಗೆ ದಿವ್ಯಜ್ಞಾನ ದೊರೆತ ನಂತರವೂ ನೀವು ಅವರ ಇಚ್ಚೆಗಳನ್ನು ಅನುಸರಿಸಿದಲ್ಲಿ ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡುವ ರಕ್ಷಕನಾಗಲಿ, ಸಹಾಯಕನಾಗಲಿ ನಿಮಗಿಲ್ಲ.
ನಾವು ದಯಪಾಲಿಸಿದ ಗ್ರಂಥವನ್ನು ಓದುವ ಕ್ರಮದಂತೆ ಓದಿದವರು ಅದರಲ್ಲಿ ವಿಶ್ವಾಸ ಹೊಂದುತ್ತಾರೆ . ಅದರಲ್ಲಿ ಯಾರು ಅವಿಶ್ವಾಸ ವಿಡುತ್ತಾರೋ ಅವರೇ ಪರಾಜಿತರು.
ಓ ಇಸ್ರಾಈಲ್ ಸಂತತಿಗಳೇ! ನಿಮಗೆ ನಾನಿತ್ತ ನೇಮತ್ತನ್ನು ಜ್ಞಾಪಿಸಿಕೊಳ್ಳಿರಿ. (ನಿಮ್ಮ ಕಾಲದ) ಜಗತ್ತಿನ ಎಲ್ಲ ಜನಾಂಗಗಳ ಪೈಕಿ ನಿಮಗೆ ನಾನು ಶ್ರೇಷ್ಠತೆ ದಯಪಾಲಿಸಿದ್ದೇನೆ.
ಯಾವನಿಂದಲೂ ಯಾವನಿಗೂ ಫಲ ದೊರೆಯದ, ಯಾರಿಂದಲೂ ಏನೇ ಪರಿಹಾರವನ್ನು ಸ್ವೀಕರಿಸದ, ಯಾರ ಶಿಫಾರಸ್ಸೂ ಪ್ರಯೋಜನ ವಾಗದ ಮತ್ತು ಯಾರಿಗೂ ನೆರವು ಸಿಗದಂತಹ ಒಂದು ದಿನದ ಬಗ್ಗೆ ಜಾಗ್ರತೆಯಿರಲಿ.
ಇಬ್ರಾಹೀಮರನ್ನು ತನ್ನ ಪ್ರಭು ಕೆಲವು ಆದೇಶ ವಾಕ್ಯಗಳ ಮೂಲಕ ಪರೀಕ್ಷಿಸಿದ ಸಂದರ್ಭ. ಅವರು ಅದರಲ್ಲಿ ತೇರ್ಗಡೆಯಾದರು. ಅಲ್ಲಾಹು ಹೇಳಿದನು; ನಾನು ನಿಮ್ಮನ್ನು ಜನರಿಗೆ ನಾಯಕನಾಗಿ ಮಾಡುತ್ತೇನೆ. ಅವರು ವಿನಂತಿಸಿಕೊಂಡರು. ‘ನನ್ನ ಸಂತತಿಗಳಿಗೂ ನೀಡಬೇಕು.’ ಅಲ್ಲಾಹು ಹೇಳಿದನು. ‘ನನ್ನ ವಾಗ್ದಾನವು ದುಷ್ಕರ್ಮಿಗಳಿಗೆ ದೊರೆಯದು’ .
ಕಅಬಾ ಭವನವನ್ನು ಜನರ ಶ್ರದ್ಧಾಕೇಂದ್ರ ಮತ್ತು ಶಾಂತಿನಿಕೇತನವಾಗಿ ನಾವು ನಿಶ್ಚಯಿಸಿದ ಸಂದರ್ಭ. ‘ಇಬ್ರಾಹೀಮರು ನಿಂತ ಜಾಗವನ್ನು ನಮಾಝ್‍ನ ತಾಣವಾಗಿ ಮಾಡಿರಿ’ ಎಂದು ನಾವು ಆದೇಶ ಕೊಟ್ಟೆವು. ನನ್ನ ಮಂದಿರವನ್ನು ಪ್ರದಕ್ಷಿಣೆಗಾರರು, ಧ್ಯಾನಾಸೀನರು, ಶಿರವಂದಕರು ಹಾಗೂ ಸಾಷ್ಟಾಂಗವೆರಗುವವರ ಸಲುವಾಗಿ ಸಂಶುದ್ಧ ಗೊಳಿಸಿರಿ ಎಂದು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ವಚನಾದೇಶ ನೀಡಿದೆವು.
ಪ್ರಭೂ! ಈ ಪ್ರದೇಶವನ್ನು ಅಭಯ ನಗರವಾಗಿ ಮಾಡು. ಇಲ್ಲಿನ ನಿವಾಸಿಗಳ ಪೈಕಿ ಅಲ್ಲಾಹು ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿಡುವವರಿಗೆ ಫಲಕಾಯಿಗಳನ್ನು ಆಹಾರವಾಗಿ ನೀಡು’ ಎಂದು ಇಬ್ರಾಹೀಮರು ಪ್ರಾರ್ಥಿಸಿದ ಸಂದರ್ಭ. ಆಗ ಅಲ್ಲಾಹನು ‘ಅವಿಶ್ವಾಸಿಗಳಿಗೂ ತಾತ್ಕಾಲಿಕ ಜೀವನಾಧಾರ ಕೊಡುವೆನು. ಆಮೇಲೆ ಅವನನ್ನು ನರಕ ಶಿಕ್ಷೆಗೆ ತಳ್ಳಿ ಬಿಡುವೆನು, ಬಹಳ ನಿಕೃಷ್ಟ ನೆಲೆಯದು’ ಎಂದನು.
ಇಬ್ರಾಹೀಮ್ ಮತ್ತು ಇಸ್ಮಾಈಲರು ಕಅಬಾದ ಅಸ್ಥಿವಾರವನ್ನು ಏರಿಸುತ್ತಿದ್ದ ಸಂದರ್ಭದಲ್ಲಿ ‘ನಮ್ಮ ಪ್ರಭುವೇ! ಈ ಸೇವೆಯನ್ನು ನಮ್ಮಿಂದ ಸ್ವೀಕರಿಸು, ನೀನು ಪರಮಶ್ರೇಷ್ಠನೂ, ಪರಮ ಜ್ಞಾನಿಯೂ ಆಗಿರುವೆ’ ಎಂದು ಪ್ರಾರ್ಥಿಸಿದರು.
ನಮ್ಮ ಪ್ರಭೂ! ನಮ್ಮಿಬ್ಬರನ್ನು ನಿನ್ನ ಆಜ್ಞಾನು ವರ್ತಿಗಳಾಗಿ ಸ್ವೀಕರಿಸು, ನಮ್ಮ ಸಂತತಿ ಗಳಿಂದಲೇ ನಿನ್ನ ಆಜ್ಞಾನು ಸಾರಿಗಳಾದ ಒಂದು ಸಮುದಾಯವನ್ನು ರೂಪಿಸು. ನಮಗೆ ನಮ್ಮ ಉಪಾಸನಾ ಕ್ರಮಗಳನ್ನು ಕಾಣಿಸಿಕೊಡು. ನಮ್ಮ ಮರುಗುವಿಕೆಯನ್ನು ಸ್ವೀಕರಿಸು. ನೀನು ಪರಮ ಪಾಪನಾಶಕನೂ ದಯಾವಾರಿಧಿಯೂ ಆಗಿರುವೆ
ನಮ್ಮ ಪ್ರಭೂ! ಇವರಿಗೆ ಇವರಿಂದಲೇ ಓರ್ವ ಪ್ರವಾದಿಯನ್ನು ನೇಮಿಸು. ಆ ಪ್ರವಾದಿಯು ಜನರಿಗೆ ನಿನ್ನ ವಚನಾಮೃತಗಳನ್ನು ಓದಿ ಹೇಳಲಿ. ವೇದವನ್ನೂ ಸುಜ್ಞಾನವನ್ನೂ ಅವರಿಗೆ ಕಲಿಸಲಿ. ಅವರನ್ನು ಸಂಸ್ಕರಿಸಲಿ. ನಿಜವಾಗಿಯೂ ನೀನು ಅಜೇಯ. ಪರಮಾಂತಜ್ರ್ಞಾನಿ.
ತನ್ನನ್ನು ತಾನೇ ಮೂಢನಾಗಿ ಮಾಡಿಕೊಂಡವನ ಹೊರತು ಇನ್ಯಾರೂ ಇಬ್ರಾಹೀಮರ ಪಥದಿಂದ ವಿಮುಖನಾಗಲಾರ. ಇಬ್ರಾಹೀಮರನ್ನು ಇಹದಲ್ಲಿ ನಾವು ಸವಿಶೇಷ ಚುನಾಯಿತರನ್ನಾಗಿ ಮಾಡಿದ್ದೆವು. ಪರದಲ್ಲಿ ಅವರು ಸಾತ್ವಿಕರಲ್ಲೊಬ್ಬರು.
ಅವರಲ್ಲಿ ಅವರ ಪ್ರಭುವು ‘ಸರ್ವಾತ್ಮನಾ ವಿಧೇಯನಾಗು’ ಎಂದು ಹೇಳಿದಾಗ ನಾನಿದೋ ವಿಶ್ವಗಳೊಡೆಯನಿಗೆ ಸಂಪೂರ್ಣ ವಿಧೇಯನಾದೆ ಎಂದರು .
ಇದೇ ಪ್ರತಿಜ್ಞೆಯನ್ನು ಇಬ್ರಾಹೀಮರು ತನ್ನ ಸಂತತಿಗಳಿಗೆ ಉಪದೇಶಿಸಿದರು. ಯಅï ಖೂಬರು ಇದನ್ನೇ ಹೇಳುತ್ತಾ, ‘ನನ್ನ ಮಕ್ಕಳೇ, ಅಲ್ಲಾಹನು ನಿಮಗೆ ಈ ಧರ್ಮವನ್ನು ಆಯ್ಕೆಮಾಡಿರುತ್ತಾನೆ. ಆದ್ದರಿಂದ ನೀವು ಮುಸ್ಲಿಮರಾಗದೆ ಮರಣ ಹೊಂದುವಂ ತಾಗಬಾರದು’ ಎಂದರು.
ಯಅïಖೂಬರ ಮರಣಾಸನ್ನ ವೇಳೆ ನೀವಲ್ಲಿ ಹಾಜರಿದ್ದಿರೇನು? ಅವರು ತನ್ನ ಮಕ್ಕಳಲ್ಲಿ, ‘ನನ್ನ ನಂತರ ನೀವು ಯಾರಿಗೆ ಆರಾಧಿಸುವಿರಿ?’ ಎಂದು ಕೇಳಿದಾಗ ‘ನಿಮ್ಮ ಹಾಗೂ ನಿಮ್ಮ ಪಿತೃರಾದ ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಖ್‍ರವರ ದೇವನಾದ ಏಕದೇವನಿಗೇ ಆರಾಧಿಸುವೆವು. ನಾವು ಅವನಿಗೇ ಶರಣಾಗತ ರಾದವರು’ ಎಂದು ಮಕ್ಕಳು ಉತ್ತರಿಸಿದ್ದರು.
ಆ ಸಮುದಾಯದವರು ಗತಿಸಿ ಹೋದರು. ಅವರ ಸಾಧನೆಗೆ ಅವರಿಗೆ ಪುಣ್ಯವಿದೆ. ನಿಮ್ಮ ಸಾಧನೆಗೆ ನಿಮಗೆ ಪುಣ್ಯಂ. ಅವರು ಏನು ಮಾಡುತ್ತಿದ್ದರೆಂದು ನಿಮ್ಮಲ್ಲಿ ಪ್ರಶ್ನಿಸಲಾಗುವುದಿಲ್ಲ.
‘ನೀವು ಯಹೂದ್ಯರೋ ಕ್ರೈಸ್ತರೋ ಆಗಿರಿ. ಹಾಗಾದರೆ ನೀವು ಸನ್ಮಾರ್ಗ ಪ್ರಾಪ್ತರಾಗುವಿರಿ’ ಎಂದವರು ಹೇಳಿದರು. ಹೇಳಿರಿ; ‘ಅಲ್ಲ, ಏಕದೇವ ವ್ರತರಾದ ಇಬ್ರಾಹೀಮರ ಪಥವನ್ನು ಅನುಸರಿಸ ಬೇಕು. ಅವರು ಬಹುದೇವಾರಾಧಕರಾಗಿರಲಿಲ್ಲ’.
ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದುದರಲ್ಲಿ, ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಖ್, ಯಅïಖೂಬ್ ಹಾಗೂ ಅವರ ವಂಶ ಪರಂಪರೆಯವರಿಗೆ ಅವತೀರ್ಣವಾದುದರಲ್ಲಿ, ಮೂಸಾ, ಈಸಾರವರಿಗೂ ಮತ್ತಿತರ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತಿರುವ ಆದರ್ಶಗಳಲ್ಲಿ ನಾವು ವಿಶ್ವಾಸವಿಟ್ಟಿರುವೆವು, ಪ್ರವಾದಿಗಳ ಪೈಕಿ ಯಾರೊಬ್ಬರಿಗೂ ನಾವು ಭೇದ ಬಗೆಯುವುದಿಲ್ಲ. ನಾವು ಅಲ್ಲಾಹನ ಆದೇಶಕ್ಕೆ ಬದ್ಧರಾಗಿದ್ದೇವೆ’ ಎಂದು ಘೋಷಿಸಿರಿ.
ನೀವು ವಿಶ್ವಾಸವಿಟ್ಟಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಖಂಡಿತ ಸತ್ಫಥ ಪ್ರಾಪ್ತರು. ಅವರು ವಿಮುಖರಾದರೆ, ಅವರೇ ಒಡಕಿನವರು. ಆದ್ದರಿಂದ ಅವರಿಂದ ನಿಮ್ಮನ್ನು ಪಾರುಮಾಡಲು ಅಲ್ಲಾಹು ಸಾಕು. ಆತನು ಪರಮ ಶ್ರೋತೃನು. ಪರಮ ತಜ್ಞನು.
ಅಲ್ಲಾಹನ ಧರ್ಮದ ನಿಜ ಬಣ್ಣವನ್ನು ನಮಗವನು ನೀಡಿರುತ್ತಾನೆ. ಅಲ್ಲಾಹನಿಗಿಂತ ಶ್ರೇಷ್ಟ ವರ್ಣದಾತರು ಯಾರಿದ್ದಾರೆ? ನಾವು ಆತನಿಗೆ ಮಾತ್ರ ಆರಾಧಿಸುವೆವು (ಎಂದು ಹೇಳಿರಿ).
ಅಲ್ಲಾಹನ ವಿಷಯದಲ್ಲಿ ನಮ್ಮೊಂದಿಗೆ ವಾದ ಮಾಡುತ್ತಿರುವಿರಾ? ಆತನು ನಮ್ಮ - ನಿಮ್ಮ ಪ್ರಭು. ನಮಗೆ ನಮ್ಮ ಕರ್ಮಗಳು, ನಿಮಗೆ ನಿಮ್ಮ ಕರ್ಮಗಳು. ಆದರೆ, ಆತನಿಗೆ ಅಕಳಂಕ ನಿಷ್ಠರಾಗುವವರು ನಾವು’ ಎಂದು ಹೇಳಿರಿ.
ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಖ್, ಯಅಖೂಬ್ ಹಾಗೂ ಸಂತತಿಗಳು ಜೂದರು ಅಥವಾ ಕ್ರೈಸ್ತರಾಗಿದ್ದಾರೆಂದು ನೀವು ಹೇಳುತ್ತೀರಾ? “ಹೆಚ್ಚು ತಿಳಿದವರು ನೀವೋ, ಅಲ್ಲಾಹನೋ?” ಎಂದು ಪ್ರಶ್ನಿಸಿರಿ. ತನ್ನಲ್ಲಿರುವ ದೇವದತ್ತ ಸಾಕ್ಷ್ಯವನ್ನು ಅಡಗಿಸಿಟ್ಟವನಿಗಿಂತ ದೊಡ್ಡ ದುಷ್ಕರ್ಮಿ ಯಾರು? ನಿಮ್ಮ ಪ್ರವರ್ತಿಗಳ ಬಗ್ಗೆ ಅಲ್ಲಾಹನು ನಿರ್ಲಕ್ಷ್ಯನಲ್ಲ.
ಗತಿಸಿದ ಸಮುದಾಯವದು. ಅವರು ಮಾಡಿದ್ದು ಅವರಿಗೆ. ನೀವು ಮಾಡಿದ್ದು ನಿಮಗೆ. ಅವರು ಮಾಡಿದುದರ ಬಗ್ಗೆ ನಿಮ್ಮನ್ನು ಪ್ರಶ್ನಿಸಲಾಗುವುದಿಲ್ಲ.
ಇವರು ಮೊದಲ ‘ಖಿಬ್‍ಲಾ’ವನ್ನು ಬದಲಾಯಿ ಸಿದ್ದು ಯಾಕೆ? ಎಂದು ಮೂಢ ಜನರು ಕೇಳುವರು. ಹೇಳಿರಿ; ‘ಪೂರ್ವ-ಪಶ್ಚಿಮ ಅಲ್ಲಾಹನದ್ದೇ. ತಾನಿಚ್ಛಿಸಿದವರಿಗೆ ಸರಿದಾರಿ ತೋರುತ್ತಾನೆ’ .
ಅದೇ ರೀತಿ ನೀವು ಜನರಿಗೆ ಸಾಕ್ಷಿಗಳಾಗಲಿಕ್ಕೂ ರಸೂಲರು ನಿಮ್ಮ ಮೇಲೆ ಸಾಕ್ಷಿಯಾಗಲಿಕ್ಕೂ ನಿಮ್ಮನ್ನೊಂದು ನೀತಿನಿಷ್ಠ ಸಮುದಾಯವಾಗಿ ಮಾಡಿರುತ್ತೇವೆ . ಮೊದಲು ನೀವು ಮುಖ ಮಾಡು ತ್ತಿದ್ದ ಖಿಬ್ಲಾವನ್ನು ನಾನು ನಿಶ್ಚೈಸಿದ್ದುದು ಪ್ರವಾದಿ ಯಿಂದ ವಿಮುಖರಾಗಿ ಹಿಂದೆ ಸರಿಯುವವರಿಂದ ಪ್ರವಾದಿಯನ್ನು ಅನುಸರಿಸುವವರನ್ನು ಬೇರ್ಪಟ್ಟು ತಿಳಿಯಲು ಮಾತ್ರವಾಗಿತ್ತು. ಸನ್ಮಾರ್ಗದರ್ಶಿತ ರಲ್ಲದವರಿಗೆ ಖಿಬ್ಲಾ ಬದಲಾವಣೆ ಒಂದು ಗಂಭೀರ ವಿಚಾರವಾಗಿತ್ತು. ಆ ಅವಧಿಯ ನಿಮ್ಮ ವಿಶ್ವಾಸ ವನ್ನು (ನಮಾಝನ್ನು)ಂ ಅಲ್ಲಾಹನು ವ್ಯರ್ಥ ಗೊಳಿಸುವುದಿಲ್ಲ. ನಿಜವಾಗಿಯೂ ಅಲ್ಲಾಹನು ಜನರ ಮೇಲೆ ಅತ್ಯುದಾರಿ, ಪರಮ ದಯಾಳು
ನಿಮ್ಮ ಮುಖವು ಆಕಾಶದತ್ತ ದೃಷ್ಟಿ ನೆಟ್ಟಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನೀವು ಇಷ್ಟಪಡುವ ‘ಖಿಬ್‍ಲಾ’ದತ್ತ ನಿಮ್ಮನ್ನು ತಿರುಗಿಸುತ್ತಿದ್ದೇವೆ . ಹಾಗಾಗಿ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮಿನ ಕಡೆಗೆ ತಿರುಗಿಸಿರಿ. ನೀವು ಎಲ್ಲಿದ್ದರೂ ಅದರ ಕಡೆಗೆ ಮುಖ ಮಾಡಿರಿ. ಈ ಕ್ರಮವು ನಿಮ್ಮ ಪ್ರಭುವಿನ ಕಡೆಯ ಸತ್ಯವೆಂಬುದನ್ನು ವೇದಗ್ರಂಥ ದೊರೆತವರು ಚೆನ್ನಾಗಿ ಬಲ್ಲರು. ಅವರ ಕೃತ್ಯಗಳ ಬಗ್ಗೆ ಅಲ್ಲಾಹನು ಅಶ್ರದ್ಧನಲ್ಲ.
ಗ್ರಂಥದವರಿಗೆ ನೀವು ಸಕಲ ಪ್ರಮಾಣಗಳನ್ನು ಒದಗಿಸಿದರೂ ಕೂಡಾ ಅವರು ನಿಮ್ಮ ‘ಖಿಬ್‍ಲಾ’ ವನ್ನು ಅನುಸರಿಸುವವರಲ್ಲ. ನೀವೂ ಅವರ ‘ಖಿಬ್‍ಲಾ’ವನ್ನು ಅನುಸರಿಸುವವರಾಗಲಾರಿರಿ. ಅವರು ಕೂಡಾ ಪರಸ್ಪರ ಒಂದು ವಿಭಾಗದವರ ‘ಖಿಬಾ’್ಲವನ್ನು ಮತ್ತೊಂದು ವಿಭಾಗ ಅನುಸರಿಸುವವರಲ್ಲ. ನಿಮಗೆ ಜ್ಞಾನ ದೊರೆತ ನಂತರವೂ ಅವರ ಸ್ವೇಚ್ಛೆಗಳನ್ನು ಅನುಸರಿಸಿದರೆ ಅಕ್ರಮಿಗಳ ಕೂಟಕ್ಕೆ ಸೇರುವಿರಿ.
ವೇದದವರು ಮುಹಮ್ಮದರನ್ನು ತಮ್ಮ ಮಕ್ಕಳನ್ನು ಅರಿಯುವಂತೆ ಸ್ಪಷ್ಟವಾಗಿ ಅರಿತವರು . ಅವರಲ್ಲೊಂದು ವಿಭಾಗವು ತಿಳಿದುಕೊಂಡೇ ಸತ್ಯವನ್ನು ಮುಚ್ಚಿಡುತ್ತಾರೆ.
ನಿಮ್ಮ ಪ್ರಭುವಿನಿಂದ ಬಂದ ಸತ್ಯವಿದು. ಆದ್ದರಿಂದ ನೀವು ಸಂಶಯಾತ್ಮರ ಕೂಟಕ್ಕೆ ಸೇರದಿರಿ.
ಪ್ರತಿಯೊಬ್ಬರಿಗೂ ಒಂದಿಲ್ಲೊಂದು ದಿಶೆ ಇದ್ದು ಅದಕ್ಕೆ ಅಭಿಮುಖನಾಗುತ್ತಾನೆ. ನೀವು ಸುಕೃತಗಳತ್ತ ತತ್ಪರತೆಯಿಂದ ಮುನ್ನಡೆಯಿರಿ. ನೀವೆಲ್ಲಿದ್ದರೂ ನಿಮ್ಮೆಲ್ಲರನ್ನೂ ಅಲ್ಲಾಹನು ಹಾಜರುಪಡಿಸುವನು. ಖಂಡಿತ ಅಲ್ಲಾಹನು ಸರ್ವಸಮರ್ಥನಿರುವನು.
ನೀವು ಎತ್ತ ಹೊರಟಿದ್ದರೂ ಮಸ್ಜಿದುಲ್ ಹರಾಮಿನತ್ತ ಅಭಿಮುಖರಾಗಿರಿ. ನಿಜವಾಗಿಯೂ ಇದು ನಿಮ್ಮ ಪ್ರಭುವಿನ ಕಡೆಯ ಪರಮ ಸತ್ಯ. ನಿಮ್ಮ ಕೃತ್ಯಗಳ ಕುರಿತು ಅಲ್ಲಾಹನು ಅಪ್ರಜ್ಞನಲ್ಲ.
ನೀವು ಎತ್ತ ಹೊರಟಿದ್ದರೂ ಮಸ್ಜಿದುಲ್ ಹರಾಮಿನ ಕಡೆಗೆ ಅಭಿಮುಖರಾಗಿರಿ. (ಸತ್ಯವಿಶ್ವಾಸಿಗಳೇ) ನೀವು ಎಲ್ಲಿರುವಿರಾದರೂ ಆ ದಿಕ್ಕಿಗೆ ನಿಮ್ಮ ಮುಖ ತಿರುಗಿಸಿರಿ. ಇದು ಅವರ ಪೈಕಿ ಕೆಲವು ಮಂದಿ (ತರ್ಕಕ್ಕೆ ನಿಲ್ಲುವ) ದುರಾತ್ಮರ ಹೊರತು, ಉಳಿದ ಜನರಿಗೆ ನಿಮ್ಮ ವಿರುದ್ಧ ಯಾವುದೇ ಪುರಾವೆ (ಸಾಕ್ಷಿ) ದೊರೆಯದಿರಲು. ನೀವು ಅವರಿಗೆ ಭಯಪಡಬೇಡಿರಿ. ಪ್ರತಿಯಾಗಿ ನನಗೆ ಭಯಪಡಿರಿ. ಇದು ನನ್ನ ವರದಾನವನ್ನು ನಿಮಗೆ ನಾನು ಪೂರ್ಣಗೊಳಿಸಲು ಹಾಗೂ ನೀವು ಸತ್ಪಥಿಕರಾಗಲು.
ನನ್ನ ವರದಾನವನ್ನು ನಾನು ಪೂರ್ಣಗೊಳಿಸುವುದು ನಿಮ್ಮಿಂದಲೇ ಓರ್ವ ರಸೂಲರನ್ನು ನಿಮಗಾಗಿ ಕಳುಹಿಸಿ ಪೂರ್ಣಗೊಳಿಸಿದ ರೀತಿಯಲ್ಲಾಗಿದೆ. ಆ ರಸೂಲರು ನಮ್ಮ ಸದ್ವಚನಗಳನ್ನು ನಿಮಗೆ ಓದಿ ಕೊಡುತ್ತಾರೆ. ನಿಮ್ಮನ್ನು ಶುಚಿಗೊಳಿಸುತ್ತಾರೆ. ನಿಮಗೆ ದಿವ್ಯಗ್ರಂಥವನ್ನೂ ತತ್ವಜ್ಞಾನವನ್ನೂ ಕಲಿಸುತ್ತಾರೆ. ನಿಮಗೆ ತಿಳಿಯದ ವಿಚಾರಗಳನ್ನು ತಿಳಿಯಪಡಿಸುತ್ತಾರೆ.
ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ. ನಿಮ್ಮನ್ನು ನಾನೂ ಸ್ಮರಿಸುವೆನು. ನನಗೆ ಕೃತಜ್ಞರಾಗಿರಿ. ಕೃತಘ್ನರಾಗದಿರಿ.
ಓ ಸತ್ಯವಿಶ್ವಾಸಿಗಳೇ! ಸಹನೆ ಮತ್ತು ನಮಾಜ್‍ನ ಮೂಲಕ ಸಹಾಯಪೇಕ್ಷೆ ಮಾಡಿಕೊಳ್ಳಿರಿ. ನಿಜವಾಗಿ ಅಲ್ಲಾಹನಿರುವುದು ಸಹನಶೀಲರೊಡನೆ.
ಅಲ್ಲಾಹನ ಮಾರ್ಗದಲ್ಲಿ ಹತರಾದವರನ್ನು ಮೃತರೆನ್ನಬೇಡಿರಿ. ಅವರು ಸಜೀವರು . ಆ ಕುರಿತು ನೀವು ಪ್ರಜ್ಞಾಶೂನ್ಯರು ಂ.
ಏನಾದರೊಂದು ಭಯ, ಹಸಿವು, ಧನಹಾನಿ, ಪ್ರಾಣಹಾನಿ, ಫಲೋತ್ಪನ್ನಗಳ ಕೊರತೆಗಳ ಮೂಲಕ ನಾವು ನಿಮ್ಮನ್ನು ಖಂಡಿತ ಪರೀಕ್ಷಿಸು ತ್ತಿರುತ್ತೇವೆ. ಸಹನಶೀಲರಿಗೆ ಶುಭವಾರ್ತೆ ನೀಡಿರಿ.
ಅಂಥವರಿಗೆ ವಿಪತ್ತೇನಾದರೂ ಬಾಧಿಸಿದರೆ, (ಆಪತ್ಕಾಲದಲ್ಲಿ) ಅವರು ‘ನಿಜವಾಗಿಯೂ ನಾವು ಅಲ್ಲಾಹನಿಗೆ ಇರುವವರು, ಅವನೆಡೆಗೆ ನಿರ್ಗಮಿಸುವವರು’ ಅನ್ನುವರು .
ಅಂತಹವರಿಗೆ ತಮ್ಮ ಪ್ರಭುವಿನಿಂದ ವರದಾನ ಗಳೂ ಕೃಪೆಯೂ ಪ್ರಾಪ್ತ. ಅವರೇ ಸತ್ಪಥಿüಕರು.
ಖಂಡಿತವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಕುರುಹುಗಳಲ್ಲಿ ಸೇರಿವೆ. ಆದುದರಿಂದ ಕಅಬಾದಲ್ಲಿ ಹಜ್-ಉಮ್ರಾ ನಿರ್ವಹಿಸುವವರು ಅವುಗಳ ನಡುವೆ ಪಥಸಂಚಲನೆ (ಸಅïಯ್) ಗೈಯುವುದು ತಪ್ಪಲ್ಲ . ಯಾರಾದರೂ ಸ್ವಪ್ರೇರಿತನಾಗಿ ಸುಕೃತ ಮಾಡಿದರೆ, (ಅದು ವ್ಯರ್ಥವಲ್ಲ. ಏಕೆಂದರೆ) ಖಂಡಿತ ಅಲ್ಲಾಹನು ಕೃತಜ್ಞನೂ ಅಭಿಜ್ಞನೂ ಆಗಿರುವನು.
ನಾವು ಅವತೀರ್ಣಗೊಳಿಸಿದ ಸುವ್ಯಕ್ತ ದೃಷ್ಟಾಂತಗಳು ಮತ್ತು ಸತ್ಯದರ್ಶನವನ್ನು ಜನರಿಗೋಸ್ಕರ ನಾವು ಗ್ರಂಥದಲ್ಲಿ ವಿವರಿಸಿದ ನಂತರವೂ ಮರೆ ಮಾಚುವವರನ್ನು ಅಲ್ಲಾಹನು ಶಪಿಸುವನು. ಶಪಿಸುವ ಇತರರೂ ಶಪಿಸುವರು.
ಆದರೆ ತಪ್ಪಿಗೆ ಮರುಗುವ, (ಕರ್ಮವನ್ನು) ಸುಧಾರಿಸಿಕೊಳ್ಳುವ ಮತ್ತು ಮುಚ್ಚಿಟ್ಟದ್ದನ್ನು ಹೊರಗೆಡಹುವವರಿಗೆ ನಾನು ಕ್ಷಮಿಸುತ್ತೇನೆ. ನಾನು ಪರಮ ಕ್ಷಮಾದಾನಿ, ಕರುಣಾವಾರಿಧಿ.
ಸತ್ಯವನ್ನು ನಿಷೇಧಿಸಿದ ಮತ್ತು ಅವಿಶ್ವಾಸಿ ಗಳಾಗಿಯೇ ಮರಣ ಹೊಂದಿದವರಿಗೆ ಅಲ್ಲಾಹು, ಮಲಾಇಕತ್ ಹಾಗೂ ಸರ್ವ ಜನರ ಶಾಪವಿದೆ .
ಅವರು ಶಿಕ್ಷೆಯಲ್ಲಿ ಶಾಶ್ವತರು. ಅವರಿಗೆ ಶಿಕ್ಷೆಯನ್ನು ಸರಳಗೊಳಿಸಲಾಗುವುದಿಲ್ಲ, ಬಿಡುವನ್ನೂ ನೀಡಲಾಗುವುದಿಲ್ಲ.
ನಿಮ್ಮ ಆರಾಧ್ಯನು ಏಕೈಕ ದೇವನು . ಆತನ ವಿನಾ ಅನ್ಯ ಆರಾಧ್ಯನಿಲ್ಲ. ಅವನು ಇಹದಲ್ಲಿ ಎಲ್ಲರಿಗೂ ದಯಾಳು. ಪರದಲ್ಲಿ ನಿಷ್ಠರಿಗೆ ಮಾತ್ರ ಕೃಪಾಳು.
ಧರೆ-ಗಗನಗಳ ಸೃಷ್ಟಿ, ಹಗಲಿರುಳುಗಳ ಭೇದ, ಜನೋಪಯೋಗಿ ಸರಕು ಹೇರಿಕೊಂಡು ಕಡಲಲ್ಲಿ ತೇಲುವ ಹಡಗು, ಮೇಲಿಂದ ಅಲ್ಲಾಹನಿಳಿಸುವ ಜಲದಿಂದ ನಿರ್ಜೀವಗೊಂಡಿದ್ದ ಇಳೆ ಸಜೀವಗೊಳ್ಳುವ ಪರಿ, ಧರೆಯಲ್ಲಿ ಹರಡಿದ ಚರಜೀವಿಗಳು, ಗಾಳಿಗಳ ಗತಿ-ವಿಗತಿ ಹಾಗೂ ನಭ-ಭುವಿಗಳ ನಡುವಣ ನಿಯಂತ್ರಿತ ಮೇಘ ರಾಶಿಗಳಲ್ಲಿ ಚಿಂತಿಸುವ ಜನರಿಗೆ ದೃಷ್ಟಾಂತಗಳಿವೆ
ಕೆಲವರು ಅಲ್ಲಾಹನನ್ನು ಬಿಟ್ಟು ಸಹದೇವರು ಗಳನ್ನು ನಿಶ್ಚೈಸಿರುತ್ತಾರೆ. ಅಲ್ಲಾಹನನ್ನು ಪ್ರೀತಿಸುವಂತೆ ಅವುಗಳನ್ನು ಪ್ರೀತಿಸುತ್ತಾರೆ. ವಸ್ತುತಃ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ಅತ್ಯಧಿಕ ಪ್ರೀತಿಸುತ್ತಾರೆ . ಅಕ್ರಮಿಗಳು ಶಿಕ್ಷೆಯನ್ನು ಕಾಣುವ ಸಂದರ್ಭದಲ್ಲಿ ಸರ್ವಶಕ್ತಿಯೂ ಅಲ್ಲಾಹನದ್ದು ಮತ್ತು ಅವನು ಕಠಿಣವಾಗಿ ಶಿಕ್ಷಿಸುವವನೆಂದು ಅವರು ಕಂಡರಿಯುತ್ತಿದ್ದರೆ !
ಮುಂದಾಳುಗಳು ಅನುಯಾಯಿಗಳನ್ನು ಕೈಬಿಡುವ ಹಾಗೂ ಅವರು ಶಿಕ್ಷೆಯನ್ನು ಕಾಣುವ ಮತ್ತು ಪರಸ್ಪರ ಸಂಬಂಧ ಕಡಿದು ಬೀಳುವ ಸಂದರ್ಭ. (ಅದು)
ಇಹಲೋಕಕ್ಕೆ ಮರಳುವ ಅವಕಾಶ ನಮಗಿದ್ದಿದ್ದರೆ ಇವರೀಗ ಕೈಬಿಟ್ಟಂತೆ ನಾವೂ ಅವರನ್ನು ಕೈ ಬಿಡುತ್ತಿದ್ದೆವು ಎಂದು ಅನುಯಾಯಿಗಳು ಹೇಳುವರು. ಹಾಗೆ ಅವರ ಕೃತ್ಯಗಳನ್ನು ಅವರಿಗೆ ಶೋಕಗಳನ್ನಾಗಿ ಅಲ್ಲಾಹನು ಕಾಣಿಸಿ ಕೊಡುತ್ತಾನೆ. ಅವರು ನರಕದಿಂದ ಎಂದೂ ಹೊರ ಹೋಗುವವರಲ್ಲ.
ಜನರೇ ! ಭೂಮಿಯಲ್ಲಿರುವ ಧರ್ಮಸಮ್ಮತ ಹಾಗೂ ಶುದ್ಧವಾದವುಗಳನ್ನು ಭಕ್ಷಿಸಿರಿ. ಶೈತಾನನ ಹೆಜ್ಜೆಗಳನ್ನು ಅನುಸರಿಸದಿರಿ. ಅವನು ನಿಮ್ಮ ಬದ್ಧ ವೈರಿ.
ಕೇಡು, ಹೀನವೃತ್ತಿ ಹಾಗೂ ಅಲ್ಲಾಹನ ಕುರಿತು ನಿಮಗೆ ಅರಿವಿಲ್ಲದ್ದನ್ನು ಹೇಳುವುದಕ್ಕೆ ಅವನು ನಿಮಗೆ ಪ್ರಚೋದಿಸುತ್ತಾನೆ.
ಅಲ್ಲಾಹನು ಅವತೀರ್ಣಗೊಳಿಸಿದ ಆದರ್ಶಗಳನ್ನು ಅನುಸರಿಸಿರಿ ಎಂದು ಅವರಿಗೆ ಹೇಳಿದರೆ “ನಾವು ನಮ್ಮ ಪೂರ್ವಿಕರನ್ನು ಯಾವ ನಡವಳಿಕೆಯಲ್ಲಿ ಕಂಡಿದ್ದೆವೋ ಅದನ್ನೇ ಅನುಸರಿಸುತ್ತೇವೆ” ಎನ್ನುತ್ತಾರೆ. ಅವರ ಪೂರ್ವಿಕರು ವಿಚಾರ ಶೂನ್ಯರೂ ದಾರಿ ತಪ್ಪಿದವರೂ ಆಗಿದ್ದರೂ ಕೂಡಾ ಇವರು ಅವರನ್ನು ಅನುಸರಿ ಸುತ್ತಾರೇನು ?
ಸತ್ಯ ನಿಷೇಧಿಗಳ ಉಪಮೆಯು ಕಿರಿಚಾಟ ಬೊಬ್ಬೆಗಳ ಹೊರತು ಇನ್ನೇನೂ ಕೇಳಿಸದಂಥ ಪ್ರಾಣಿಯನ್ನು ಕೂಗುವ ಕುರುಬನಂತಿದೆ . ಅವರು ಕಿವುಡರು, ಮೂಗರು, ಕುರುಡರು. ಅವರು ಚಿಂತಿಸರು.
ಓ ಸತ್ಯವಿಶ್ವಾಸಿಗಳೇ ! ನಿಮಗೆ ನಾವಿತ್ತ ಶುದ್ಧ ವಸ್ತುಗಳಿಂದ ಭುಜಿಸಿರಿ. ನೀವು ಅಲ್ಲಾಹನಿಗೆ ಮಾತ್ರ ಆರಾಧಿಸುವವರಾಗಿದ್ದರೆ ಆತನಿಗೆ ಋಣಭಾವವುಳ್ಳವರಾಗಿರಿ .
ಅಲ್ಲಾಹನು ನಿಮಗೆ ನಿಷೇಧಿಸಿದ್ದು ಸತ್ತ ಪ್ರಾಣಿಗಳು, ರಕ್ತ, ಹಂದಿ ಮಾಂಸ ಹಾಗೂ ಅಲ್ಲಾಹೇತರರ ನಾಮವನ್ನುಚ್ಚರಿಸಿ ಕಡಿದ ಪ್ರಾಣಿಯ ಮಾಂಸವನ್ನಾಗಿದೆ. ಆದರೆ ಯಾವನಾದರೂ ಆಗ್ರಹವಿಲ್ಲದೆ, ಮಿತಿ ಮೀರದೆ ನಿರ್ಬಂಧಿತನಾದರೆ ಅವನಿಗೆ ಪಾಪವಿಲ್ಲ. ಖಂಡಿತ ಅಲ್ಲಾಹನು ಪರಮ ಕ್ಷಮಾದಾನಿ. ಪರಮ ದಯಾಳು.
ಅಲ್ಲಾಹನು ಅವತೀರ್ಣಗೊಳಿಸಿದ ಗ್ರಂಥವನ್ನು ಮರೆಮಾಚಿ ಅದರ ಬದಲಿಗೆ ತುಚ್ಛ ಸಂಪಾದನೆ ಮಾಡುತ್ತಿರುವವರು ತಮ್ಮ ಉದರಕ್ಕೆ ಅಗ್ನಿಯನ್ನೇ ತುಂಬುತ್ತಿದ್ದಾರೆ . ಪರಲೋಕದಲ್ಲಿ ಅಲ್ಲಾಹನು ಅವರೊಂದಿಗೆ ಮಾತಾಡಲಾರ. ಅವರನ್ನು ಪಾಪಗಳಿಂದ ನಿರ್ಮಲಗೊಳಿಸಲಾರ. ಅವರಿಗೆ ಯಾತನಾಮಯ ಸಜೆ ಕಾದಿದೆ.
ಅವರು ಸನ್ಮಾರ್ಗಕ್ಕೆ ಪ್ರತಿಯಾಗಿ ದುರ್ಮಾರ್ಗ ವನ್ನೂ ಕ್ಷಮೆಗೆ ಪ್ರತಿಯಾಗಿ ಸಜೆಯನ್ನೂ ಕೊಂಡು ಕೊಂಡಿದ್ದಾರೆ. ನರಕಾಗ್ನಿಯ ಮೇಲೆ ಅವರ ಸೈರಣೆ ಆಶ್ಚರ್ಯವೇ ಸರಿ !
ಹೀಗೆ ಯಾಕೆಂದರೆ ಅಲ್ಲಾಹನು ದಿವ್ಯಗ್ರಂಥವನ್ನು ಸತ್ಯದೊಂದಿಗೆ ರವಾನಿಸಿರುತ್ತಾನೆ. ದಿವ್ಯಗ್ರಂಥದ ಬಗ್ಗೆ ಭಿನ್ನರಾದವರು ಸತ್ಯದಿಂದ ದೂರವಾದ ಭಿನ್ನಾಭಿಪ್ರಾಯದಲ್ಲಿದ್ದಾರೆ.
ಹಿತವಿರುವುದು ಪೂರ್ವ-ಪಶ್ಚಿಮೋನ್ಮುಖತೆಯಲ್ಲಲ್ಲ. ಅಲ್ಲಾಹು, ಪರಲೋಕ, ಮಲಕ್, ದೇವಗ್ರಂಥ ಹಾಗೂ ಪ್ರವಾದಿಗಳಲ್ಲಿ ವಿಶ್ವಾಸ ಹಾಗೂ ತಾನು ಪ್ರೀತಿಸುವ ಧನವನ್ನು ಬಂಧುಗಳು, ತಬ್ಬಲಿಗಳು, ಬಡವರು, ಸಂಚಾರಿಗಳು, ಅಪೇಕ್ಷಕರು ಹಾಗೂ ಜೀತಮುಕ್ತಿಗಾಗಿ ವ್ಯಯ ಮತ್ತು ನಿಯತ ನಮಾಜ್ ನಿರ್ವಹಣೆ, ಝಕಾತ್ ಪಾವತಿ, ಕೊಟ್ಟ ವಚನದ ಪಾಲನೆ, ದಟ್ಟ ದಾರಿದ್ರ್ಯ, ರೋಗ ಹಾಗೂ ಧರ್ಮಸಮರಗಳಲ್ಲಿ ಸಂಯಮದಲ್ಲಾಗಿದೆ ಹಿತ. ಇವರೇ ಸತ್ಯವ್ರತರು. ಇವರೇ ಧರ್ಮಾತ್ಮರು.
ಓ ಸತ್ಯವಿಶ್ವಾಸಿಗಳೇ! ಕೊಲೆಯಾದವರ ಪರ ಪ್ರತೀಕಾರವನ್ನು ನಿಮಗೆ ನಿಯಮ ಬದ್ಧಗೊಳಿಸಲಾಗಿದೆ. ಸ್ವತಂತ್ರನ ಕೊಲೆಗೆ ಸ್ವತಂತ್ರ, ಗುಲಾಮನ ಕೊಲೆಗೆ ಗುಲಾಮ, ಹೆಣ್ಣಿನ ಕೊಲೆಗೆ ಹೆಣ್ಣು ಕೊಲೆಯಾಗಬೇಕು. ಆದರೆ ಹಂತಕನಿಗೆ ತನ್ನ ಸಹೋದರನಿಂದ ಏನಾದರೂ ಕ್ಷಮೆ ದೊರೆತರೆ ಉತ್ತಮ ವಿಧಾನವನ್ನು ಅನುಸರಿಸಬೇಕು. ಕೊಲೆಗಾರನೂ ಉತ್ತಮ ರೀತಿಯಲ್ಲಿ ದಂಡ ತೆರಬೇಕು . ಇದು ನಿಮ್ಮ ಪ್ರಭುವಿನ ಕಡೆಯಿಂದ ದೊರಕುವ ಸೌಲಭ್ಯ ಹಾಗೂ ದಯೆ. ಇಷ್ಟಾದ ಮೇಲೂ ವಿೂರಿ ನಡೆದವನಿಗೆ ವೇದನಾಯುಕ್ತ ಶಿಕ್ಷೆಯಿದೆ.
ಓ ಬುದ್ಧಿಯುಳ್ಳವರೇ ! ನಿಮಗೆ ಪ್ರತೀಕಾರದಲ್ಲಿ ಜೀವನವಿದೆ . ನೀವು ಕೊಲೆಪಾತಕದಿಂದ ದೂರ ನಿಲ್ಲುವ ಸಲುವಾಗಿ. (ಈ ಶಾಸನ)
ನೀವು ಪ್ರತಿಯೊಬ್ಬರೂ ಮರಣಾಸನ್ನರಾದಾಗ ಅವನು ಸೊತ್ತು ಬಿಟ್ಟು ಹೋಗುತ್ತಿದ್ದರೆ ತಾಯಿತಂದೆ ಹಾಗೂ ನಿಕಟ ಬಂಧುಗಳಿಗೆ ನೀತಿ ಪ್ರಕಾರ ಉಯಿಲು ಮಾಡುವುದು ನಿಮ್ಮ ಮೇಲೆ ಕಡ್ಡಾಯ. ಶ್ರದ್ಧಾಳುಗಳ ಕರ್ತವ್ಯವಿದು
ಯಾರಾದರೂ ಉಯಿಲನ್ನು ಆಲಿಸಿದ ಬಳಿಕ ಅದನ್ನು ಬದಲಾಯಿಸಿದರೆ ಅದರ ಪಾಪವು ಬದಲಾಯಿಸಿದವರ ಮೇಲೆ. ಅಲ್ಲಾಹನು ಎಲ್ಲ ಆಲಿಸುವವನು. ಎಲ್ಲ ಬಲ್ಲವನು.
ಆದರೆ ಉಯಿಲು ಮಾಡಿದವನು ಅದರಲ್ಲಿ ಪಕ್ಷಪಾತ ಅಥವಾ ದೋಷವೆಸಗುವ ಭೀತಿಯಿಂದ ಸಂಬಂಧಿಕರ ನಡುವೆ ಸಂಧಾನ ನಡೆಸಿದರೆ ಅವನ ಮೇಲೆ ಪಾಪವಿಲ್ಲ. ಅಲ್ಲಾಹನು ಯಥೇಚ್ಛ ಮನ್ನಿಸುವವನು. ಪರಮದಯಾಳು.
ಓ ಸತ್ಯವಿಶ್ವಾಸಿಗಳೇ! ನಿಮ್ಮ ಪೂರ್ವಜರಿಗೆ ಕಡ್ಡಾಯ ಗೊಳಿಸಲಾದಂತೆಯೇ ನಿಮಗೂ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ನೀವು ಭಕ್ತರಾಗಲೆಂದು.
ನಿರ್ಧಿಷ್ಟ ದಿನಗಳ ವ್ರತ. ನಿಮ್ಮಲ್ಲಾರಾದರೂ ರೋಗಿ ಅಥವಾ ಯಾತ್ರಿಕನಾಗಿದ್ದರೆ ಬೇರೆ ದಿವಸಗಳಲ್ಲಿ ಸಂಖ್ಯೆ ಭರ್ತಿ ಮಾಡಬೇಕು. ಉಪವಾಸಕ್ಕೆ ಸಾಧ್ಯವಾಗದವರು ಓರ್ವ ಬಡವನಿಗೆ ಆಹಾರ ದಾನ ತೆರಬೇಕು. ಸ್ವಪ್ರೇರಣೆಯಿಂದ ಹೆಚ್ಚಿಗೆ ನೀಡಿದರೆ ಅದವರಿಗೆ ಉತ್ತಮ. ಆದರೆ ವ್ರತಾಚರಣೆಯೇ ನಿಮಗೆ ಹೆಚ್ಚು ಸಂಗತ. ನೀವು ತಿಳಿವುಳ್ಳವರಾಗಿದ್ದರೆ.
ಜನರಿಗೆ ದಾರಿದೀಪವಾದ, ಸತ್ಯದರ್ಶನದ ವ್ಯಕ್ತ ಮಾಹಿತಿಗಳು ಹಾಗೂ ಸತ್ಯಾಸತ್ಯ ವಿವೇಚನೆಯುಳ್ಳ ಖುರ್‍ಆನ್ ಅವತೀರ್ಣವಾದ ಮಾಸವೇ ರಮಳಾನ್ . ಆದ್ದರಿಂದ ಆ ತಿಂಗಳಲ್ಲಿ ಹಾಜರಿದ್ದವರು ವ್ರತಾಚರಿ ಸಬೇಕು . ಯಾವನಾದರೂ ರೋಗಿಯಾಗಿದ್ದರೆ ಇಲ್ಲವೇ ಪ್ರಯಾಣದಲ್ಲಿದ್ದರೆ ಆತನು ಬೇರೆ ದಿನಗಳಲ್ಲಿ ಸಂಖ್ಯೆ ಭರ್ತಿ ಮಾಡಲಿ. ಅಲ್ಲಾಹನು ನಿಮಗೆ ಸರಳತೆಯನ್ನು ಬಯಸುತ್ತಾನೆ. ಕ್ಲಿಷ್ಟತೆ ಬಯಸುವುದಿಲ್ಲ. ಇದು ನೀವು ಸಂಖ್ಯೆ ಭರ್ತಿಗೊಳಿಸುವ ಮತ್ತು ನಿಮಗೆ ಸತ್ಯದರ್ಶನ ನೀಡಿದ್ದಕ್ಕೆ ಅಲ್ಲಾಹನ ಪರಮೋನ್ನತಿಯನ್ನು ಕೊಂಡಾಡುವ ಸಲುವಾಗಿ. ಮತ್ತು ನೀವು ಕೃತಜ್ಞರಾಗುವಿರೆಂದು .
ನನ್ನ ದಾಸರು ನನ್ನ ಕುರಿತು ನಿಮ್ಮಲ್ಲಿ ಕೇಳಿದರೆ, ನಾನಿದೋ ಪಕ್ಕದಲ್ಲೇ ಇದ್ದೇನೆ. ಪ್ರಾರ್ಥಿಸುವವನು ನನ್ನಲ್ಲಿ ಪಾರ್ಥಿಸಿದರೆ ಅವನ ಪ್ರಾರ್ಥನೆಗೆ ಉತ್ತರಿಸುವೆನು. ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ. ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗಿಗಳಾಗಬಹುದು .
ವ್ರತಮಾಸದ ನಿಶೆಯಲ್ಲಿ ನಿಮಗೆ ಸತಿ ಸಂಪರ್ಕ ಸಮ್ಮತ. ಅವರು ನಿಮ್ಮ ಉಡುಗೆ. ನೀವು ಅವರ ಉಡುಗೆ. ನೀವು ಸ್ವವಂಚನೆ ಯೆಸಗುತ್ತಿದ್ದುದು ಅಲ್ಲಾಹನಿಗೆ ಗೊತ್ತು. ಆತನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದ್ದಾನೆ. ನಿಮಗೆ ಕ್ಷಮಿಸಿದ್ದಾನೆ. ಇನ್ನು ಮುಂದೆ ಅವರೊಂದಿಗೆ ಸಂಪರ್ಕ ಬೆಳೆಸಿರಿ. ಅಲ್ಲಾಹು ನಿಮಗೆ ದಾಖಲಿಸಿ ರುವುದನ್ನು ಬಯಸಿಕೊಳ್ಳಿರಿ. ಪ್ರಭಾತದ ಬಿಳಿನೂಲು ಕರಿನೂಲಿಂದ ನಿಮಗೆ ಬೇರ್ಪಟ್ಟು ಕಾಣುವವರೆಗೆ ತಿನ್ನಿರಿ ಮತ್ತು ಕುಡಿಯಿರಿ. ಆಮೇಲೆ ರಾತ್ರಿಯವರೆಗೂ ವ್ರತವನ್ನು ಪೂರ್ಣ ಗೊಳಿಸಿರಿ. ಆದರೆ ನೀವು ಮಸೀದಿಯಲ್ಲಿ ಧ್ಯಾನಾ ಸೀನರಾಗಿರುವಾಗ ಸ್ತ್ರೀ ಸಂಪರ್ಕ ಸಲ್ಲದು. ಇವು ಅಲ್ಲಾಹನ ಮೇರೆಗಳು. ಅವುಗಳ ಬಳಿ ತಲು ಪದಿರಿ. ಈ ಪ್ರಕಾರ ಅಲ್ಲಾಹು ತನ್ನ ನಿಯಮಗಳನ್ನು ಜನರಿಗೆ ವಿವರಿಸಿ ಕೊಡುತ್ತಾನೆ. ಅವರು ಭಕ್ತರಾಗಬೇಕೆಂದು.
ನೀವು ಪರಸ್ಪರ ಅನ್ಯಾಯವಾಗಿ ಧನಾಪಹರಣ ಮಾಡದಿರಿ. ಜನರ ಧನದಿಂದ ತಿಳಿದೂ ತಿಳಿದೂ ವಂಚಿಸಿ ತಿನ್ನುವುದಕ್ಕಾಗಿ ಅಧಿಕಾರಿಗಳನ್ನು ಸಮೀಪಿಸಬೇಡಿರಿ.
(ಓ ಪೈಗಂಬರರೇ,) ಚಂದ್ರನ ಬಗ್ಗೆ ಅವರು ನಿಮ್ಮೊಡನೆ ಕೇಳುತ್ತಿದ್ದಾರೆ. ಅದು ಜನರಿಗೆ ಕಾಲಗಣನೆ ಹಾಗೂ ಹಜ್ಜ್‍ಗಾಗಿ ಇದೆ. ಮನೆಗಳ ಮೇಲ್ಗಡೆಯಿಂದ ಪ್ರವೇಶಿಸುವುದರಲ್ಲಿ ಹಿತವಿಲ್ಲ. (ನೀವು ನಿಮ್ಮ ಮನೆಗಳಿಗೆ ಅವುಗಳ ಹಿಂಬದಿಗಳಿಂದ ಪ್ರವೇಶಿಸುವುದು ಪುಣ್ಯವಲ್ಲ) ದೇವಭಯದಲ್ಲೇ ಹಿತ. ದೇವಭಯವಿರಿಸಿ ಕೊಳ್ಳುವವನೇ ಪುಣ್ಯವಂತ. ಮನೆಗಳಿಗೆ ಅವುಗಳ ಬಾಗಿಲುಗಳಿಂದಲೇ ಪ್ರವೇಶಿಸಿರಿ . ಅಲ್ಲಾಹನ ಭಯವಿರಿಸಿಕೊಳ್ಳಿ. ನೀವು ಜಯಪ್ರಾಪ್ತರಾಗುವಿರಿ.
ನಿಮ್ಮೊಡನೆ ಯುದ್ಧ ಮಾಡುವವರೆದುರು ಅಲ್ಲಾಹನ ಮಾರ್ಗದಲ್ಲಿ ನೀವೂ ಯುದ್ಧ ಮಾಡಿರಿ . ಆದರೆ ಮೇರೆ ವಿೂರದಿರಿ. ಅತಿಕ್ರಮಿಗಳನ್ನು ಅಲ್ಲಾಹನು ಇಷ್ಟಪಡುವುದಿಲ್ಲ.
ಅವರನ್ನು ಕಂಡಲ್ಲಿ ವಧಿಸಿರಿ. ನಿಮ್ಮನ್ನವರು ಹೊರ ಹಾಕಿದ್ದಲ್ಲಿಂದ ನೀವೂ ಅವರನ್ನು ಹೊರಹಾಕಿರಿ. ಕ್ಷೋಭೆ ಹತ್ಯೆಗಿಂತಲೂ ಕಠಿಣ. ಮಸ್ಜಿದುಲ್ ಹರಾಮಿನ ಬಳಿ ಅವರು ನಿಮ್ಮೊಂದಿಗೆ ಯುದ್ಧ ಕ್ಕಿಳಿಯುವವರೆಗೂ ನೀವು ಯುದ್ಧಕ್ಕಿಳಿಯಬೇಡಿರಿ. ಅವರು ಯುದ್ಧಕ್ಕಿಳಿದರೆ ಅವರನ್ನು ವಧಿಸಿರಿ. ಅದುವೇ ಸತ್ಯನಿಷೇಧಿಗಳಿಗೆ ಪ್ರತಿಫಲ.
ಇನ್ನವರು ಯುದ್ಧ ವಿರಾಮ ಮಾಡುವುದಾದರೆ ತಿಳಿಯಿರಿ, ನಿಜವಾಗಿಯೂ ಅಲ್ಲಾಹನು ಪರಮ ಕ್ಷಮಾದಾನಿ. ಪರಮ ದಯಾಳು.
ಅಧರ್ಮ ನಶಿಸಿ ದೇವಧರ್ಮ ಸಂಸ್ಥಾಪನೆ ಯಾಗುವವರೆಗೂ ನೀವವರ ವಿರುದ್ಧ ಯುದ್ಧ ಮಾಡಿರಿ. ಆದರೆ ಅವರು ವಿರಮಿಸಿದರೆ ಅತಿಕ್ರಮಣವಿಲ್ಲ. ಅಕ್ರಮಿಗಳ ಮೇಲೆ ಹೊರತು.
ಸಮರ ನಿಷೇಧಿತ ಮಾಸಕ್ಕೆ ಪ್ರತಿಯಾಗಿ ಸಮರ ನಿಷೇಧಿತ ಮಾಸ . ಪಾವಿತ್ರ್ಯಾಭಂಗಕ್ಕೆ ಪಾವಿತ್ರ್ಯಾ ಭಂಗದ ಮುಯ್ಯಿ. ನಿಮ್ಮ ಮೇಲೆ ಅವರು ಎಲ್ಲೆ ಮೀರಿದಂತೆ ನೀವು ಅವರ ಮೇಲೆ ಎಲ್ಲೆ ಮೀರಿರಿ. ಅಲ್ಲಾಹನ ಬಗ್ಗೆ ಜಾಗೃತಿಯಿರಲಿ. ಅಲ್ಲಾಹನು ಧರ್ಮಾತ್ಮರ ಸಂಗಡವಿರುವನು ಎಂಬುದು ನಿಮಗೆ ತಿಳಿದಿರಲಿ.
ಅಲ್ಲಾಹನ ಮಾರ್ಗದಲ್ಲಿ ಧನ ವ್ಯಯಿಸಿರಿ. ನಿಮಗೆ ನೀವೇ ಅನಾಹುತ ತಂದುಕೊಳ್ಳಬೇಡಿರಿ. ಸಂಭಾವಿತರಾಗಿರಿ. ಸಂಭಾವಿತರನ್ನು ಅಲ್ಲಾಹನು ಪ್ರೀತಿಸುತ್ತಾನೆ.
ಅಲ್ಲಾಹನಿಗಾಗಿ ಹಜ್-ಉಮ್ರಃ ಪೂರ್ತಿಗೊಳಿಸಿರಿ. ನೀವು ತಡೆಯಲ್ಪಟ್ಟರೆ ಸಾಧ್ಯವಿರುವ ಬಲಿದಾನದಿಂದ ಪರಿಹಾರ ಮಾಡಿರಿ. ಬಲಿಮೃಗ ಗಮ್ಯ ಸೇರುವವರೆಗೂ ಕೇಶಮುಂಡನ ಮಾಡದಿರಿ. ಆದರೆ ರೋಗ ಅಥವಾ ಶಿರ ಬಾಧೆಯಿಂದ ಅನಿವಾರ್ಯ ಮುಂಡನ ನಡೆಸಿದರೆ ವ್ರತ ಅಥವಾ ಬಲಿದಾನದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಿರಿ. ನೀವು ಶತ್ರು ಭಯದಿಂದ ಮುಕ್ತರಾಗಿರುವ ಸ್ಥಿತಿಯಲ್ಲಿ ಉಮ್ರಾ ಮಾಡಿ ಹಜ್ಜ್‍ವರೆಗೆ ಇಹ್ರಾಮ್ ಮುಕ್ತತೆಯ ಅನುಕೂಲವನ್ನು ಬಳಸಿಕೊಂಡಲ್ಲಿ ಸಾಧ್ಯವಿರುವ ಬಲಿದಾನ ಕಡ್ಡಾಯ. ಬಲಿದಾನಕ್ಕೆ ಅನನುಕೂಲ ವಾದಲ್ಲಿ ಹಜ್ಜ್‍ನಲ್ಲಿರುವಾಗ ಮೂರು ವ್ರತ, ಸ್ವನಿವಾಸಕ್ಕೆ ಮರಳಿದ ಬಳಿಕ ಏಳು ವ್ರತದಂತೆ ಒಟ್ಟು ಪೂರ್ಣ ಹತ್ತು ದಿವಸಗಳ ವ್ರತಾಚರಣೆ ಕಡ್ಡಾಯ. ಮಸ್ಜಿದುಲ್ ಹರಾಮಿನ ಪ್ರಜೆಗಳಿಗೆ ಈ ನಿಯಮ ಭಾಧಕವಲ್ಲ. ಅಲ್ಲಾಹನಲ್ಲಿ ಶ್ರದ್ಧೆಯಿರಲಿ. ಅಲ್ಲಾಹನು ಶಿಕ್ಷೆಯಲ್ಲಿ ಉಗ್ರನೆಂಬುದು ತಿಳಿದಿರಲಿ.
ಹಜ್ಜ್ ನಿರ್ವಹಣೆಯ ಸಮಯವು ಗೊತ್ತಿರುವ ಕೆಲವು ಮಾಸಗಳು. ಆ ತಿಂಗಳುಗಳಲ್ಲಿ ಹಜ್ಜ್‍ನಲ್ಲಿ ತೊಡಗಿಸಿಕೊಂಡವನಿಗೆ ಮೈಥುನ ಹಾಗೂ ದುರ್ನಡತೆ ವಜ್ರ್ಯ. ಹಜ್ಜ್ ವೇಳೆ ವಾಗ್ವಾದ ಸಲ್ಲ. ನಿಮ್ಮ ಯಾವುದೇ ಪುಣ್ಯ ಕಾರ್ಯವಿರಲಿ ಅದು ಅಲ್ಲಾಹನ ಗಮನದಲ್ಲಿರುತ್ತದೆ. ಯಾತ್ರಾ ವೆಚ್ಚವನ್ನು ಜೊತೆ ಗಿಟ್ಟುಕೊಳ್ಳಿ. ಅತ್ಯಂತ ಶ್ರೇಷ್ಟವಾದ ಯಾತ್ರಾವೆಚ್ಚವು ದೇವನಿಷ್ಠೆಯೇ ಆಗಿರುತ್ತದೆ. ಜಾಣಮತಿಗಳೇ ! ನನ್ನನ್ನು ಭಯಪಡಿರಿ.
ಹಜ್ಜ್‍ಯಾತ್ರೆಯಲ್ಲಿ ನಿಮ್ಮ ಪ್ರಭುವಿನ ಅನುಗ್ರಹ (ಲೌಕಿಕ ಸಂಪಾದನೆ)ವನ್ನು ಬಯಸುವುದರಲ್ಲಿ ತಪ್ಪಿಲ್ಲ. ನೀವು ಅರಫಾದಿಂದ ನಿರ್ಗಮಿಸಿದರೆ ಮಶ್‍ಅರುಲ್ ಹರಾಮ್‍ನ ಬಳಿ ಅಲ್ಲಾಹನ ಸ್ಮರಣೆ ಮಾಡಿರಿ . ನಿಮಗೆ ಆತನು ನೀಡಿದ ಪಥ ದರ್ಶನಕ್ಕಾಗಿ ಆತನನ್ನು ಸ್ಮರಿಸಿರಿ. ಈ ಮೊದಲು ನೀವು ಖಂಡಿತ ದಾರಿಸಿಗದ ವರಾಗಿದ್ದಿರಿ.
ಆ ಮೇಲೆ ಜನರು ನಿರ್ಗಮಿಸುವಲ್ಲಿಂದ ನೀವೂ ನಿರ್ಗಮಿಸಿರಿ . ಅಲ್ಲಾಹನಲ್ಲಿ ಪಾಪಮುಕ್ತಿ ಬೇಡಿರಿ. ನಿಜವಾಗಿಯೂ ಅಲ್ಲಾಹನು ಪಾಪ ನಿವಾರಕನು. ಮಹಾಕೃಪಾಳು.
ಹಾಗೆ ನೀವು ಹಜ್ಜ್ ನಿರ್ವಹಿಸಿದ ನಂತರ ಹಿಂದೆ ನಿಮ್ಮ ಪೂರ್ವಜರ ಗುಣಗಾನ ಮಾಡುತ್ತಿದ್ದಂತೆ ಮಾತ್ರವಲ್ಲ, ಅದಕ್ಕೂ ಹೆಚ್ಚಾಗಿ ಅಲ್ಲಾಹನನ್ನು ಸ್ಮರಿಸಿರಿ. ‘ನಮ್ಮ ಪ್ರಭು, ನಮಗೆ ಇಹದಲ್ಲಿ ಕೊಡು’ ಎಂದು ಮಾತ್ರ ಪಾರ್ಥಿಸುವ ಕೆಲವು ಜನರಿದ್ದಾರೆ. ಅಂಥವರಿಗೆ ಪರಲೋಕದಲ್ಲಿ ಯಾವುದೇ ಭಾಗ್ಯವಿಲ್ಲ.
‘ನಮ್ಮ ಪ್ರಭೂ, ನಮಗೆ ಇಹದಲ್ಲೂ ಹಿತ ನೀಡು, ಪರದಲ್ಲೂ ಹಿತ ನೀಡು, ನರಕದಿಂದ ನಮ್ಮನ್ನು ಪಾರು ಮಾಡು’ ಎಂದು ಪ್ರಾರ್ಥಿಸುವವರಿದ್ದಾರೆ.
ಅಂಥವರಿಗೆ ಅವರ ಸಾಧನೆಯ ಸೌಭಾಗ್ಯ ಪ್ರಾಪ್ತವಿದೆ. ಅಲ್ಲಾಹನು ಶೀಘ್ರ ತಪಾಸಣೆಗಾರನು.
ಎಣಿಸಲ್ಪಟ್ಟ ದಿನಗಳಲ್ಲಿ ಅಲ್ಲಾಹನ ಸ್ಮರಣೆ ಮಾಡಿರಿ. ಯಾರಾದರೂ ಎರಡೇ ದಿನಗಳಲ್ಲಿ ತ್ವರೆ ಮಾಡಿದರೂ ಪರವಾಗಿಲ್ಲ. ತಡಮಾಡುವು ದಕ್ಕೂ ಅಭ್ಯಂತರವಿಲ್ಲ. ಇದು ತತ್ವ ನಿಷ್ಠೆಯುಳ್ಳವರಿಗೆ. ನೀವು ಅಲ್ಲಾಹನಿಗೆ ಹೆದರಿರಿ. ನೀವು ಆತನ ಬಳಿ ಜಮಾಯಿಸಲಿದ್ದೀರಿ ಎಂಬುದು ತಿಳಿದಿರಲಿ.
ಜನರ ಪೈಕಿ ಒಬ್ಬನ ಮಾತು ಇಹದ ಬಾಳಲ್ಲಿ ನಿಮಗೆ ಆಕರ್ಷಕವೆನಿಸುತ್ತದೆ. ತಾನು ಪ್ರಾಮಾ ಣಿಕನೆಂದು ಆತ ಅಲ್ಲಾಹನ ಆಣೆ ಹಾಕುತ್ತಾನೆ. ವಾಸ್ತವದಲ್ಲಿ ಆತ ವೈರಿಗಳಲ್ಲಿ ಅತ್ಯಂತ ನಿಷ್ಠುರನು.
(ನಿಮ್ಮ ಬಳಿಯಿಂದ) ಅವನು ಹೊರಟು ಹೋದರೆ ಭೂಮಿ ಮೇಲೆ ಕೇಡು ಹರಡಲೂ, ಕೃಷಿ ನಾಶ, ವಂಶನಾಶಕ್ಕೂ ಶತ ಪ್ರಯತ್ನ ಮಾಡುತ್ತಾನೆ. ವಾಸ್ತವ ದಲ್ಲಿ ಅಲ್ಲಾಹನು ಕೇಡನ್ನು ಇಷ್ಟಪಡುವುದಿಲ್ಲ .
ಆತನಲ್ಲಿ ‘ಅಲ್ಲಾಹನನ್ನು ಭಯಪಡು’ ಅಂದರೆ ಅವನಿಗೆ ತನ್ನ ದುರಭಿಮಾನವು ಪಾಪಕ್ಕೆ ತಳ್ಳುತ್ತದೆ. ಅವನಿಗೆ ನರಕವು ಸಾಕು. ಅದೆಂತಹ ನೀಚವಾದ ಶಯನಗೃಹ !
ಅಲ್ಲಾಹನ ಒಲವಿಗಾಗಿ ಆತ್ಮಾರ್ಪಣೆ ಮಾಡುವ ಮನುಷ್ಯರೂ ಇದ್ದಾರೆ. ಅಲ್ಲಾಹನು ದಾಸರಲ್ಲಿ ಬಹಳ ದಯೆಯುಳ್ಳವನು.
ಓ ಸತ್ಯವಿಶ್ವಾಸಿಗಳೇ! ಇಸ್ಲಾಮಿನಲ್ಲಿ ಪೂರ್ಣವಾಗಿ ಪ್ರವೇಶಿಸಿರಿ. ಶೈತಾನನ ಹೆಜ್ಜೆಗಳನ್ನು ಅನುಸರಿಸದಿರಿ. ಖಂಡಿತ ಅವನು ನಿಮ್ಮ ಬದ್ಧ ವೈರಿ .
ಸ್ಪಷ್ಟ ರುಜುವಾತುಗಳು ನಿಮ್ಮ ಕೈ ಸೇರಿದ ಬಳಿಕವೂ ನೀವು ತಪ್ಪಿ ನಡೆದರೆ ಅಲ್ಲಾಹನು ಪರಮ ಪ್ರತಾಪಿ, ಯುಕ್ತಿಪೂರ್ಣ ಎಂಬುದು ನಿಮಗೆ ತಿಳಿದಿರಲಿ.
ಅಲ್ಲಾಹನ ಶಿಕ್ಷೆಯು ದಟ್ಟ ಕರಿಮೋಡಗಳ ನಡುವೆ ಮಲಾಇಕತ್‍ಗಳೊಂದಿಗೆ ಎರಗಿ ತೀರ್ಪು ಜಾರಿಯಾಗುವುದನ್ನು ಅವರು ನಿರೀಕ್ಷಿಸುತ್ತಿರುವರೇನು? ಸರ್ವ ಸಂಗತಿಗಳ ನಿರ್ಗಮನವು ಅಲ್ಲಾಹನ ಕಡೆಗೇ .
ಇಸ್ರಾಈಲ್ ಸಂತತಿಗಳೊಂದಿಗೆ ಕೇಳಿರಿ. ನಾವು ಅವರಿಗೆ ಎಷ್ಟು ಸ್ಪಷ್ಟ ಪುರಾವೆಗಳನ್ನು ಕೊಟ್ಟೆವು. ಅಲ್ಲಾಹನ ಅನುಗ್ರಹ ಒದಗಿಬಂದ ಬಳಿಕ ಅದನ್ನು (ಸತ್ಯನಿಷೇಧಕ್ಕೆ) ಬದಲಾಯಿಸಿಕೊಳ್ಳುವುದಾದರೆ; ಖಂಡಿತವಾಗಿಯೂ ಅಲ್ಲಾಹನು ಘನಘೋರ ದಂಡನೆಗಾರನಾಗಿರುವನು.
ಅವಿಶ್ವಾಸಿಗಳಿಗೆ ಲೌಕಿಕ ಜೀವನವನ್ನು ಚಂದ ಣಿಸಿಕೊಡಲಾಗಿದೆ. ವಿಶ್ವಾಸಿಗಳನ್ನು ಅವ ಪರಿಹಾಸ್ಯ ಮಾಡುತ್ತಾರೆ. ಆದರೆ ಪರಲೋಕದಲ್ಲಿ ವಿಶ್ವಾಸಿಗಳು ಈ ಅವಿಶ್ವಾಸಿಗಳಿಗಿಂತ ತಾನಿಚ್ಛಿಸಿದವರಿಗೆ ಲೆಕ್ಕವಿಲ್ಲದೆ ಕೊಡುತ್ತಾನೆ. ಉನ್ನತ ರಾಗಿರುವರು. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕವಿಲ್ಲದೆ ಕೊಡುತ್ತಾನೆ. ಂ
ಜನರು ಏಕಸಮಾಜವಾಗಿದ್ದರು. ಅವರಲ್ಲಿ ಛಿದ್ರತೆಯುಂಟಾದಾಗ ಸುವಾರ್ತೆ ಮತ್ತು ಮುನ್ನೆಚ್ಚರಿಕೆ ನೀಡುವ ಪ್ರವಾದಿಗಳನ್ನು ಅಲ್ಲಾಹನು ಕಳುಹಿಸಿದನು. ಜನರ ವಿವಾದಗಳಿಗೆ ತೀರ್ಪು ನೀಡಲು ಸತ್ಯಸಂಧ ಗ್ರಂಥವನ್ನು ಅವರೊಂದಿಗೆ ರವಾನಿಸಿದನು. ಆದರೆ ಆ ಜನರು ಆ ಗ್ರಂಥ ಕೈಸೇರಿ ಸ್ಪಷ್ಟ ದಾಖಲೆಗಳು ಲಭ್ಯವಾದ ನಂತರ ಕೂಡಾ ಪರಸ್ಪರ ಮಾತ್ಸರ್ಯದ ದೆಸೆಯಿಂದ ಭಿನ್ನಾಭಿಪ್ರಾಯ ಹೊಂದಿದರು. ಹಾಗೆ ಅವರು ಭಿನ್ನಮತ ಹೊಂದಿದ್ದ ಸರಿಯಾದ ಆದರ್ಶಕ್ಕೆ ಸತ್ಯ ವಿಶ್ವಾಸಿಗಳನ್ನು ಅಲ್ಲಾಹನು ತನ್ನ ಅನುಮತಿ ಪ್ರಕಾರ ಹಚ್ಚಿದನು. ಅಲ್ಲಾಹನು ತಾನಿಚ್ಛಿಸಿದವರಿಗೆ ಸರಿದಾರಿ ತೋರುವನು.
ನಿಮ್ಮ ಪೂರ್ವಿಕರ ಕಟು ಅನುಭವ ನಿಮಗೂ ಬಾರದೆ ಸ್ವರ್ಗಪ್ರವೇಶ ಸಾಧ್ಯವೆಂದು ಭಾವಿಸುತ್ತಿದ್ದೀರಾ? ಅವರಿಗೆ ಕಡುದಾರಿದ್ರ್ಯಗಳೂ ಕಠಿಣ ರೋಗಗಳೂ ಬಾಧಿಸಿದ್ದುವು. ಪ್ರವಾದಿಗಳೂ ವಿಶ್ವಾಸಿಗಳೂ ‘ಅಲ್ಲಾಹನ ನೆರವು ಯಾವಾಗ ?’ ಎಂದು ಕೇಳುವಷ್ಟು ಕಷ್ಟಕೋಟಲೆಗಳಿಂದ ಕಂಪಿಸಲ್ಪಟ್ಟಿದ್ದರು. ಅಲ್ಲಾಹನ ಸಹಾಯ ಸನ್ನಿಹಿತವಾಗಿದೆ. (ಎಂದವರಿಗೆ ಸಾಂತ್ವನ ನೀಡಲಾಗಿತ್ತು).
(ನಬಿಯೇ) ಅವರು ಏನನ್ನು, ಯಾರಿಗೆ ದಾನ ಮಾಡಬೇಕೆಂದು ನಿಮ್ಮಲ್ಲಿ ಕೇಳುತ್ತಿದ್ದಾರೆ. ಹೇಳಿರಿ; ಯಾವ ಮೌಲ್ಯವನ್ನು ನೀಡಿದರೂ ಫಲವಿದೆ. ಹೆತ್ತವರು, ಬಂಧುಗಳು, ಅನಾಥರು, ನಿರ್ಗತಿಕರು ಹಾಗೂ ಸಂಚಾರಿಗಳಿಗೆ ನೀಡಬಹುದು. (ದಾನವಾಗಲಿ ಮತ್ತೇನಾಗಲಿ) ಯಾವ ಒಳಿತನ್ನು ನೀವು ಮಾಡುವುದಾದರೂ ಅಲ್ಲಾಹನು ಅದನ್ನು ಖಂಡಿತ ಬಲ್ಲನು.
ಧರ್ಮಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ ನಿಮಗದನ್ನು ಶಾಸನಗೊಳಿಸಲಾಗಿದೆ. ಏನಾದರೊಂದು ನಿಮಗೆ ಅಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಗುಣಕರವಾಗಿರಬಹುದು. ಯಾವುದಾದರೊಂದು ನಿಮಗೆ ಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಕೇಡಾಗಿರ ಬಹುದು. ಅಲ್ಲಾಹನು ಬಲ್ಲವನು. ನೀವಲ್ಲ ಬಲ್ಲವರು .
ಪವಿತ್ರ ಮಾಸದಲ್ಲಿ ಸಮರಕ್ಕಿಳಿಯುವ ಕುರಿತು ಅವರು ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹೇಳಿರಿ; ಆ ಮಾಸದಲ್ಲಿ ಸಮರವು ಮಹಾಪರಾಧ ನಿಜ. ಆದರೆ ಅಲ್ಲಾಹನ ಮಾರ್ಗಕ್ಕೆ ಅಡ್ಡಿಪಡಿಸುವುದು, ಅವನಿಗೆ ದ್ರೋಹ ವೆಸಗುವುದು, ಮಸ್ಜಿದುಲ್ ಹರಾಮ್‍ನಿಂದ ತಡೆಯುವುದು, ಅಲ್ಲಿನ ನಿವಾಸಿಗಳನ್ನು ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಘೋರ ಅಪರಾಧವಾಗಿದೆ . ಅರಾಜಕತೆಯು ಕೊಲೆಗಿಂತ ಗಂಭೀರ. ಅವರಿಗೆ ಸಾಧ್ಯವಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ನಿಮ್ಮೆದುರು ಯುದ್ಧ ಮಾಡುತ್ತಲೇ ಇರುವರು. ನಿಮ್ಮಿಂದ ಯಾವನು ಸ್ವಧರ್ಮದಿಂದ ಮರಳಿ ಅಧರ್ಮಿಯಾಗಿ ಸಾಯು ತ್ತಾನೋ ಅಂತಹವನ ಸುಕಾರ್ಯಗಳು ಇಹ - ಪರದಲ್ಲೂ ಫಲಹೀನವಾಗುವುವು. ಅವರು ನರಕದವರು. ಅದರಲ್ಲಿ ಅವರು ಚಿರವಾಸಿಗಳು.
ಸತ್ಯವಿಶ್ವಾಸವಿಟ್ಟವರು, ಧರ್ಮದ ಅನಿವಾ ರ್ಯತೆಗಾಗಿ ದೇಶತ್ಯಾಗ ಮಾಡಿದವರು ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧ ಮಾಡಿದವರೇ ಅಲ್ಲಾಹನ ಕೃಪಾಕಾಂಕ್ಷಿಗಳು . ಅಲ್ಲಾಹನು ತುಂಬ ಕ್ಷಮಾಶೀಲನು. ಪರಮ ದಯಾನಿಧಿ.
(ನಬಿಯೇ) ಮದ್ಯಪಾನ ಮತ್ತು ಜೂಜಾಟದ ಕುರಿತು ಅವರು ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹೇಳಿರಿ; ಅವೆರಡರಲ್ಲೂ ಗಂಭೀರ ದೋಷವಿದೆ. ಅವೆರಡರಲ್ಲಿ ಜನರಿಗೆ ಕೆಲವು ಪ್ರಯೋಜನ ಗಳಿದ್ದರೂ ಅವುಗಳ ದೋಷವು ಪ್ರಯೋಜನಕ್ಕಿಂತ ಆಪತ್ಕಾರಿ. ದಾನ ಎಷ್ಟು ಮಾಡ ಬೇಕೆಂದು ಅವರು ನಿಮ್ಮಲ್ಲಿ ಕೇಳುತ್ತಿದ್ದಾರೆ. ‘ಅವಶ್ಯಕ್ಕೆ ಮೀರಿದ್ದನ್ನು’ ಅಂತ ಹೇಳಿರಿ ಂ. ಈ ರೀತಿ ಅಲ್ಲಾಹನು ಸ್ಪಷ್ಟ ಮಾತುಗಳನ್ನು ವಿವರಿಸುತ್ತಾನೆ. ನೀವು ಇಹ-ಪರ ವಿಚಾರಗಳಲ್ಲಿ ಚಿಂತನಾಶೀಲರಾಗಿರಬೇಕೆಂದು.
ತಬ್ಬಲಿಗಳ ಬಗ್ಗೆ ಅವರು ನಿಮ್ಮಲ್ಲಿ ಕೇಳುತ್ತಿದ್ದಾರೆ. ಹೇಳಿರಿ; ಅವರ ಸೊತ್ತುಗಳ ಅಭಿವೃದ್ಧಿ ಮಾಡುವುದು ಶ್ರೇಯಸ್ಕರ. ಅವರ ವೆಚ್ಚವನ್ನು ನಿಮ್ಮ ವೆಚ್ಚದೊಂದಿಗೆ ಬೆರೆಸಿ ಸಹಬಾಳ್ವೆ ನಡೆಸುವುದಾದರೆ ಅವರು ನಿಮ್ಮ ಸೋದರರೇ ತಾನೆ? ದುರುದ್ದೇಶದವನನ್ನು ಸದುದ್ದೇಶದವನಿಂದ ಬೇರ್ಪಡಿಸಿ ತಿಳಿಯ ಬಲ್ಲವನಾಗಿದ್ದಾನೆ ಅಲ್ಲಾಹು. ಅಲ್ಲಾಹನು ಇಚ್ಛಿಸಿದ್ದರೆ ನಿಮಗೆ ಪ್ರಯಾಸ ಕೊಡುತ್ತಿದ್ದನು. ಅಲ್ಲಾಹನು ಪ್ರತಾಪಿಯು, ಯುಕ್ತಿಪೂರ್ಣನು.
ಬಹುದೇವ ವಿಶ್ವಾಸಿನಿಯರನ್ನು ಅವರು ಸತ್ಯ ವಿಶ್ವಾಸಿನಿಯಾಗುವ ತನಕ ನೀವು ಲಗ್ನವಾಗದಿರಿ. ಸತ್ಯವಿಶ್ವಾಸಿನಿ ದಾಸಿಯು ಬಹುದೇವ ವಿಶ್ವಾಸಿನಿಯಾದ ಸ್ವತಂತ್ರ ಹೆಣ್ಣಿಗಿಂತ ಉತ್ತಮಳು. ಅವಳು ನಿಮಗೆ ಕೌತುಕ ಹುಟ್ಟಿಸಿದರೂ ಸರಿ. ಬಹುದೇವ ವಿಶ್ವಾಸಿಗಳಿಗೆ ಅವರು ಸತ್ಯವಿಶ್ವಾಸಿಯಾಗುವವರೆಗೂ ನಿಮ್ಮ ಸ್ತ್ರೀಯರನ್ನು ಲಗ್ನ ಮಾಡಿಕೊಡಬೇಡಿ. ಸತ್ಯವಿಶ್ವಾಸಿ ಗುಲಾಮನು ಬಹುದೇವ ವಿಶ್ವಾಸಿಯಾದ ಸ್ವತಂತ್ರ ಪುರುಷನಿಗಿಂತ ಶ್ರೇಷ್ಟ. ಅವನು ನಿಮಗೆ ಕೌತುಕವನ್ನುಂಟು ಮಾಡಿದರೂ ಸರಿ. ಅವರು ನರಕಕ್ಕೆ ಕರೆಯುತ್ತಾರೆ. ಅಲ್ಲಾಹನು ತನ್ನ ಇರಾದೆಯಂತೆ ಸ್ವರ್ಗಕ್ಕೂ ದೋಷಮುಕ್ತಿಗೂ ಕರೆಯುತ್ತಾನೆ. ಆತನು ಜನರಿಗೆ ತನ್ನ ನೀತಿಗಳನ್ನು ವಿಶದಪಡಿಸುತ್ತಿದ್ದಾನೆ. ಅವರು ಪ್ರಜ್ಞಾವಂತರಾಗಲು.
ಆರ್ತವದ ಕುರಿತು ಅವರು ನಿಮ್ಮಲ್ಲಿ ಕೇಳು ತ್ತಿದ್ದಾರೆ. ಹೇಳಿರಿ; ಅದೊಂದು ಮಾಲಿನ್ಯ. ಆರ್ತವ ದೆಸೆಯಲ್ಲಿ ಸ್ತ್ರೀಯರಿಂದ ದೂರವಿರಿ. ಅವರು ಶುಚಿಯಾಗುವವರೆಗೂ ಮೈಥುನಕ್ಕೆ ಸಮೀಪಿ ಸದಿರಿ. ಅವರು ಶುಚಿಯಾದರೆ ಅಲ್ಲಾಹನ ನಿಯಮ ನಿಷ್ಠೆಯೊಂದಿಗೆ ಅವರನ್ನು ಸಮೀಪಿಸಿರಿ. ಅಲ್ಲಾಹನು ಪಶ್ಚಾತಾಪಿಗಳನ್ನು ಇಷ್ಟಪಡುತ್ತಾನೆ. ನಿರ್ಮಲರನ್ನೂ ಇಷ್ಟ ಪಡುತ್ತಾನೆ.
ನಿಮ್ಮ ಮಹಿಳೆಯರು ನಿಮ್ಮ ಹೊಲ. ನಿಮ್ಮ ಹೊಲಕ್ಕೆ ನಿಮ್ಮಿಚ್ಛೆಯಂತೆ ಹೋಗಿ. ಸ್ವಹಿತಕ್ಕಾಗಿ ಧಾರ್ಮಿಕ ಪೂರ್ವವಿಧಿಗಳನ್ನು ಪಾಲಿಸಿರಿ. ಅಲ್ಲಾಹನ ವಿಧಿ-ನಿಷೇಧಗಳಿಗೆ ಬದ್ಧರಾಗಿರಿ . ಆತನನ್ನು ನೀವು ಭೇಟಿಯಾಗಲಿದ್ದೀರೆಂಬುದು ತಿಳಿದಿರಲಿ. (ಓ ಪ್ರವಾದಿಯವರೇ) ಸತ್ಯವಿಶ್ವಾಸಿಗಳಿಗೆ ಸುವಾರ್ತೆ ಕೊಡಿರಿ.
ಹಿತಕಾರ್ಯ, ದೇವಭಕ್ತಿ, ಜನರೆಡೆಯಲ್ಲಿ ರಾಜಿ ಕಾರ್ಯಗಳಿಗೆ ನೀವು ಅಲ್ಲಾಹನ ಮೇಲೆ ಹಾಕಿದ ಆಣೆ ಅಡ್ಡಿಯಾಗದಿರಲಿ. ಅಲ್ಲಾಹನು ಎಲ್ಲ ಆಲಿಸುವವನು. ಎಲ್ಲ ಬಲ್ಲವನು.
ಅನುದ್ದಿಷ್ಠ ಆಣೆಗಳಿಗೆ ಅಲ್ಲಾಹ್ ನಿಮ್ಮನ್ನು ದಂಡಿಸುವುದಿಲ್ಲ. ಆದರೆ ಅವನು ಉದ್ದೇಶಪೂರ್ವಕ ಆಣೆಗಳಿಗೆ ನಿಮ್ಮನ್ನು ದಂಡಿಸುವನು. ಅಲ್ಲಾಹನು ಕ್ಷಮಾಶೀಲನು, ಸಂಯಮಿಯು.
ಮಡದಿಯೊಂದಿಗೆ ದೇಹಸಂಪರ್ಕ ಮಾಡೆನೆಂದು ಆಣೆ ಹಾಕಿದವರಿಗೆ ನಾಲ್ಕು ಮಾಸಗಳ ವಾಯಿದೆಯಿದೆ . ಆ ಅವಧಿಯೊಳಗೆ ಹಿಂತೆಗೆದು ಕೊಂಡರೆ ಖಂಡಿತ ಅಲ್ಲಾಹನು ಪಾಪನಾಶಕ, ಮಹಾಕರುಣಿ.
ಇನ್ನು ಅವರು ತಲಾಖ್‍ಗೇ ನಿರ್ಧರಿಸಿದಲ್ಲಿ ಖಂಡಿತ ಅಲ್ಲಾಹನು ಎಲ್ಲ ಆಲಿಸುವವನು. ಎಲ್ಲ ಬಲ್ಲವನು.
ವಿವಾಹ ವಿಚ್ಛೇದಿತೆಯರಿಗೆ ಮೂರು ಆರ್ತವದ ವರೆಗೆ ನಿರೀಕ್ಷಣಾ ಅವಧಿಯಾಗಿರುತ್ತದೆ . ಅವರಿಗೆ ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆಯಿದ್ದಲ್ಲಿ ತಮ್ಮ ಗರ್ಭಾಶಯದಲ್ಲಿರುವ ಅಲ್ಲಾಹನ ಸೃಷ್ಟಿಯನ್ನು ಬಚ್ಚಿಡುವುದು ಸಮ್ಮತವಲ್ಲ. ಸಂಬಂಧ ಸುಧಾರಿಸುವ ಇರಾದೆ ಇದ್ದಲ್ಲಿ ಈ ಕಾಲಾವಧಿಯೊಳಗೆ ಮರಳಿ ಸ್ವೀಕರಿಸುವ ಅರ್ಹತೆ ಪತಿಯಂದಿರಿಗಿದೆ. ಸ್ತ್ರೀಯರಿಗೆ ಭಾಧ್ಯತೆಗ ಳಿರುವಂತೆಯೇ ನ್ಯಾಯೋಚಿತ ಹಕ್ಕುಗಳೂ ಇವೆ. ಆದರೆ ಪುರುಷರಿಗೆ ಅವರಿಗಿಂತ ಒಂದು ಪದವಿ ಮೇಲಿದೆ. ಅಲ್ಲಾಹನು ಪ್ರತಾಪಿಯು. ಯುಕ್ತಿಯುಕ್ತನು.
ಹಿಂತೆಗೆದುಕೊಳ್ಳಲು ಅವಕಾಶವಿರುವ ತಲಾಖ್ ಎರಡು ಬಾರಿ . ಆದ್ದರಿಂದ ನ್ಯಾಯೋಚಿತ ವಾಗಿ ಸಂಬಂಧ ಉಳಿಸಿಕೊಳ್ಳುವುದು ಅಥವಾ ಹಿತಕರ ರೀತಿಯಲ್ಲಿ ಬಿಡುಗಡೆ ಮಾಡುವುದು . ಪತಿಯಂದಿರು ಮಡದಿಗೆ ಹಿಂದೆ ನೀಡಿದ್ದ ಯಾವೊಂದನ್ನೂ ಮರು ಸ್ವಾಧೀನಪಡಿಸಿ ಕೊಳ್ಳುವುದು ಸಮ್ಮತವಲ್ಲ. ಇದು ಅವರಿಬ್ಬರೂ ಅಲ್ಲಾಹನ ವಿಧಿಯ ಹದ್ದನ್ನು ಮೀರುವ ಭೀತಿ ಇಲ್ಲದಿದ್ದರೆ ಮಾತ್ರ. ಅಲ್ಲಾಹನ ವಿಧಿಯ ಮೇರೆಗಳನ್ನು ದಂಪತಿಗಳು ಮೀರುವರೆಂದು ಭಯಾಶಂಕೆ ನಿಮಗಿದ್ದಲ್ಲಿ ಅವಳು ಪರಿಹಾರ ನೀಡಿ ಮುಕ್ತಳಾಗುವುದರಲ್ಲಿ ಈರ್ವರಿಗೂ ತಪ್ಪಿಲ್ಲ. ಇವು ಅಲ್ಲಾಹನ ನಿಯಮಗಳು. ಇವನ್ನು ಮೀರದಿರಿ. ಅಲ್ಲಾಹನ ಎಲ್ಲೆಗಳನ್ನು ಯಾರು ಮೀರುತ್ತಾರೋ ಅವರೇ ಅಕ್ರಮಿಗಳು.
ಇನ್ನು (ಮೂರನೆಯ) ತಲಾಖನ್ನು ಹೇಳಿದರೆ ಅನಂತರ ಅವಳು ಇನ್ನೊಬ್ಬ ಪತಿಗೆ ಲಗ್ನವಾಗದೆ ಅವಳು ಇವನಿಗೆ ಧರ್ಮಸಮ್ಮತವಾಗಲಾರಳು. ಎರಡನೆ ಪತಿ ಅವಳಿಗೆ ವಿಚ್ಛೇಧನೆ ಕೊಟ್ಟರೆ ಹಾಗೂ ಅಲ್ಲಾಹನ ಮೇರೆಗಳನ್ನು ಈರ್ವರೂ ಪಾಲಿಸುವರೆಂಬ ಯೋಚನೆ ಅವರಿಗಿದ್ದಲ್ಲಿ ಮೊದಲನೆ ವಿವಾಹ ಸಂಬಂಧವನ್ನು ಮರುಸ್ಥಾಪನೆ ಮಾಡಬಹುದಾಗಿದೆ . ಮನನ ಮಾಡಿಕೊಳ್ಳುವ ಜನರಿಗೆ ಅಲ್ಲಾಹನು ವಿಶದಪಡಿಸುತ್ತಿರುವ ಆತನ ಮೇರೆಗಳಿವು.
ನೀವು ವಿಚ್ಛೇಧನೆ ನೀಡಿ ಅವರ ನಿರೀಕ್ಷಣಾ ಕಾಲಾವಧಿ ಮುಕ್ತಾಯದ ಹಂತದಲ್ಲಾದರೆ ನ್ಯಾಯೋಚಿತವಾಗಿ ವಿಚ್ಛೇಧನೆ ರದ್ದುಪಡಿಸಿ ಜೊತೆಯಾಗಿರಿ. ಅಥವಾ ನ್ಯಾಯೋಚಿತ ರೀತಿಯಲ್ಲಿ ಬಿಡುಗಡೆ ಮಾಡಿರಿ. ಪೀಡಿಸುವ ಸಲುವಾಗಿ ಹಿಡಿದಿಟ್ಟುಕೊಳ್ಳುವ ದ್ರೋಹವನ್ನು ಮಾಡದಿರಿ. ಹಾಗೆ ಮಾಡುವವನು ತನಗೆ ತಾನೇ ಅನ್ಯಾಯವೆಸಗುತ್ತಾನೆ. ಅಲ್ಲಾಹನ ಕಾಯ್ದೆಗಳನ್ನು ವ್ಯಂಗ್ಯ ಮಾಡದಿರಿ. ನಿಮಗಿತ್ತ ಅಲ್ಲಾಹನ ಅನುಗ್ರಹಗಳು ಹಾಗೂ ನಿಮಗೆ ರವಾನಿಸಿದ ದೇವ ಗ್ರಂಥ, ಮತ್ತು ಉಪದೇಶಾ ತ್ಮಕ ತತ್ವಜ್ಞಾನಗಳನ್ನು ನೆನಪಿಸಿಕೊಳ್ಳಿರಿ. ಅಲ್ಲಾಹನ ಬಗ್ಗೆ ಎಚ್ಚರವಿರಲಿ. ಅವನು ಎಲ್ಲ ಬಲ್ಲವನೆಂಬುದು ನಿಮಗೆ ತಿಳಿದಿರಲಿ.
ನೀವು ಸ್ತ್ರೀಯರಿಗೆ ವಿಚ್ಛೇಧನೆ ಕೊಟ್ಟ ಬಳಿಕ ಅವರ (ವಿಚ್ಛೇಧಿತೆಯರ) ಕಾಲಾವಧಿ ತಲುಪಿದರೆ ಅವರಿಬ್ಬರೂ ಧರ್ಮಬದ್ಧವಾಗಿ ತೃಪ್ತರಾಗಿ ಸಂಬಂಧ ಮರುಸ್ಥಾಪಿಸುವುದಕ್ಕೆ ನೀವು ಅಡ್ಡಿಪಡಿಸದಿರಿ. ನಿಮ್ಮ ಪೈಕಿ ಅಲ್ಲಾಹ್ ಮತ್ತು ಪರಲೋಕದಲ್ಲಿ ನಂಬಿಕೆಯುಳ್ಳವರಿಗೆ ನೀಡುತ್ತಿರುವ ಉಪದೇಶವಿದು. ಇದು ನಿಮಗೆ ಬಹಳ ಶುದ್ಧ ಹಾಗೂ ಅಕಳಂಕಿತ ಮಾರ್ಗ. ಅಲ್ಲಾಹನಿಗೆ ಗೊತ್ತು. ನಿಮಗೆ ಗೊತ್ತಿಲ್ಲ.
ಅಮ್ಮಂದಿರು ತಮ್ಮ ಶಿಶುಗಳಿಗೆ ಪೂರ್ಣವಾದ ಎರಡು ವರ್ಷ ಎದೆ ಹಾಲುಣಿಸಬೇಕು. ಇದು ಪೂರ್ಣಾವಧಿ ಹಾಲುಣಿಸಬೇಕೆಂಬ ಇರಾದೆಯುಳ್ಳ ಸತಿ ಅಥವಾ ಪತಿಯ ಪರವಾಗಿ ನೀಡಬೇಕಾದ ತೀರ್ಪು. ಆ ಕಾಲಾವಧಿಯಲ್ಲಿ ಅವಳು ವಿಚ್ಛೇಧಿತೆಯಾಗಿದ್ದರೆ ಅವಳಿಗೆ ನ್ಯಾಯೋಚಿತ ಅನ್ನ-ವಸ್ತ್ರಗಳ ಪೂರೈಕೆಯು ಮಗುವಿನ ತಂದೆಯ ಬಾಧ್ಯತೆ. ಅಸಾಧ್ಯ ಹೊಣೆಗಾರಿಕೆಯನ್ನು ಯಾರಿಗೂ ವಿಧಿಸ ಲಾಗುವುದಿಲ್ಲ. ತನ್ನ ಮಗುವಿನ ದೆಸೆಯಿಂದ ಯಾವ ತಾಯಿಯೂ ತೊಂದರೆ ಗೊಳಗಾಗ ಬಾರದು. ಯಾವ ತಂದೆಯೂ ತನ್ನ ಮಗುವಿನ ಕಾರಣದಿಂದ ತೊಂದರೆಗೊಳ ಗಾಗಬಾರದು. ವಾರೀಸುದಾರನಿಗೂ ಇದೇ ಬಾಧ್ಯತೆಯುಂಟು. ಇನ್ನು ತಾಯಿ ತಂದೆ ಪರಸ್ಪರ ತೃಪ್ತಿ ಹಾಗೂ ಸಮಾಲೋಚಿತ ಒಮ್ಮತದಿಂದ ಅವಧಿ ಪೂರ್ವದಲ್ಲೇ ಹಾಲು ಬಿಡಿಸುವುದಕ್ಕೆ ಅಭ್ಯಂತರ ವಿಲ್ಲ. ಇನ್ನು ಬೇರೆ ಸ್ತ್ರೀಗೆ ನ್ಯಾಯೋಚಿತ ವೇತನ ನೀಡಿ ಹಾಲುಣಿಸುವ ಉದ್ದೇಶ ಪತಿಗಿದ್ದರೆ ಅಭ್ಯಂತರವಿಲ್ಲ, ಅಲ್ಲಾಹ ನನ್ನು ಭಯಪಟ್ಟುಕೊಳ್ಳಿರಿ. ನಿಮ್ಮ ಕೃತ್ಯಗಳ ಮೇಲೆ ಅಲ್ಲಾಹನ ದೃಷ್ಟಿಯಿರುವುದು ತಿಳಿದಿರಿ.
ನಿಮ್ಮ ಪೈಕಿ ತೀರಿಕೊಂಡವರ ಅಗಲಿತ ಪತ್ನಿಯರು ನಾಲ್ಕು ಮಾಸ, ಹತ್ತು ದಿವಸಗಳ ಇದ್ದತ್ ಅನುಸರಿಸಬೇಕು. ಈ ಕಾಲಾವಧಿ ಮುಗಿದರೆ ಅವರಿಗೆ ಸ್ವಂತ ವಿಷಯದಲ್ಲಿ ಯಥಾಸ್ಥಿತಿಯಂತೆ ನಡೆದುಕೊಳ್ಳಲು ನೀವು ಅವಕಾಶ ಮಾಡಿಕೊಡುವುದರಲ್ಲಿ ತಪ್ಪಿಲ್ಲ. ನಿಮ್ಮ ನಡವಳಿಕೆಯ ಬಗ್ಗೆ ಅಲ್ಲಾಹನು ನಿಗಾ ಇಟ್ಟಿರುತ್ತಾನೆ.
ಇದ್ದತ್‍ನಲ್ಲಿರುವವಳನ್ನು ಕಾಲಾವಧಿ ಮುಗಿದ ನಂತರ ಮದುವೆಯಾಗುವ ಇಚ್ಛೆಯುಳ್ಳವರು ಆ ಬಗ್ಗೆ ಅವಳಿಗೆ ಸೂಚ್ಯವಾಗಿ ತಿಳಿಸುವುದಾಗಲಿ, ಮನದಲ್ಲೇ ಇಂಗಿತವನ್ನಿಟ್ಟುಕೊಳ್ಳುವುದಾಗಲಿ ನಿಮಗೆ ನಿಷೇಧಿಸಿಲ್ಲ. ಮುಂದೆ ಅವಳೊಂದಿಗೆ ಆ ಪ್ರಸ್ತಾಪ ನೀವು ಮಾಡಿಯೇ ಮಾಡುತ್ತೀರೆಂದು ಅಲ್ಲಾಹನಿಗೆ ಗೊತ್ತು. ಆದರೆ ಇಂತಹ ಧರ್ಮ ಸಮ್ಮತ ವಿಧಾನ ಅನುಸರಿಸಬಹುದೇ ಹೊರತು ಸ್ಪಷ್ಟವಾಗಿ ವಿವಾಹದ ವಾಗ್ದಾನ ನೀಡಬಾರದು. ಲಿಖಿತ ಕಾನೂನು ರೀತ್ಯಾ ನಿಶ್ಚಿತವಾದ ಈ ಇದ್ದತ್‍ನ ಕಾಲಾವಧಿ ಮುಗಿಯುವವರೆಗೂ ವಿವಾಹ ಬಂಧನದ ನಿರ್ಧಾರ ಮಾಡಬಾರದು. ನಿಮ್ಮ ಅಂತರಂಗವನ್ನು ಅಲ್ಲಾಹನು ಬಲ್ಲವನೆಂದು ತಿಳಿದಿರಲಿ, ಅವನನ್ನು ಭಯಪಡಿರಿ. ಅಲ್ಲಾಹನು ಅತ್ಯಧಿಕ ಕ್ಷಮಾಶೀಲನೂ ಪರಮಸಂಯಮಿಯೂ ಆಗಿದ್ದಾನೆ ಎಂಬುದು ನಿಮಗೆ ತಿಳಿದಿರಲಿ.
ಸ್ತ್ರೀಯ ದೇಹಸ್ಪರ್ಶ ಅಥವಾ ಮಹ್ರ್ ನಿಶ್ಚಯಕ್ಕೆ ಮುನ್ನ ನೀವು ತಲಾಖ್ ಕೊಟ್ಟರೆ ಮಹ್ರ್ ಪಾವತಿ ನಿಮ್ಮ ಹೊಣೆಯಲ್ಲ. ಆದರೂ ಸ್ಥಿತಿವಂತ ತನ್ನ ಬಲದಂತೆ, ಬಡವ ತನ್ನ ಯೋಗ್ಯತೆಯಂತೆ ಅವಳಿಗೆ ಉಡುಗೊರೆ ಕೊಡಬೇಕು. ಧಾರ್ಮಿಕ ವಾಡಿಕೆಯಂತೆ ಈ ಉಡುಗೊರೆ ದಾನವು ಸಂಭಾವಿತರ ಬಾಧ್ಯತೆಯಾಗಿದೆ.
ಅವರಿಗೆ ನೀವು ಒಂದು ಮೊತ್ತವನ್ನು ಮಹ್ರ್ ನಿಶ್ಚೈಸಿದ್ದು ಅವರ ದೇಹಸ್ಪರ್ಶಕ್ಕೆ ಮುನ್ನ ನೀವು ಅವರಿಗೆ ತಲಾಖ್ ನೀಡಿದರೆ ನಿಶ್ಚಿತ ಮೊತ್ತದ ಅರ್ಧಾಂಶವನ್ನು ಅವರಿಗೆ ಪಾವತಿಸ ತಕ್ಕದ್ದು. ಪತ್ನಿಯಂದಿರು ರಿಯಾಯಿತಿ ತೋರಿ ಇಡೀ ಮೊತ್ತವನ್ನು ಬಿಟ್ಟುಕೊಟ್ಟರೆ ಅಥವಾ ವಿವಾಹ ಸಂಬಂಧವನ್ನು ಕೈಯಲ್ಲಿರಿಸಿಕೊಂಡವ (ಗಂಡ)ನು ಮನ್ನಾ ಮಾಡಿದರೆ ಹೊರತು. ಆದರೆ ನೀವು ಉದಾರತೆ ತೋರುವುದು ಧರ್ಮ ನಿಷ್ಟೆಗೆ ನಿಕಟವಾದ ಅಂಶ. ನೀವು ಪರಸ್ಪರ ಉದಾರಿ ಗಳಾಗುವುದನ್ನು ಮರೆಯದಿರಿ. ನಿಮ್ಮ ಪ್ರವರ್ತಿಗಳನ್ನು ಅಲ್ಲಾಹನು ಕಾಣುತ್ತಿರುತ್ತಾನೆ.
ಐದು ಹೊತ್ತಿನ ನಮಾಝ್, ವಿಶೇಷತಃ ಅವುಗಳ ಪೈಕಿ `ಅಲ್‍ವುಸ್ತಾ’ ನಮಾಝನ್ನು ಕ್ಲಪ್ತ ಸಮಯಕ್ಕೆ ತಪ್ಪದೆ ನಿರ್ವಹಿಸಿರಿ. ನಮಾಝ್‍ನಲ್ಲಿ ಅಲ್ಲಾಹನಿಗೆ ವಿಧೇಯರಾಗಿ ನಿಂತುಕೊಳ್ಳಿರಿ.
ನೀವು ಭಯಗ್ರಸ್ಥರಾಗಿದ್ದರೆ ನಡೆದುಕೊಂಡಾಗಲಿ, ಸವಾರರಾಗಿದ್ದುಕೊಂಡಾಗಲಿ ನಿರ್ವಹಿಸಿರಿ. ಮುಂದೆ ನೀವು ನಿರ್ಭೀತರಾದರೆ ನಿಮಗೆ ತಿಳಿಯದಿದ್ದಾಗ ಅಲ್ಲಾಹು ಹೇಗೆ ಕಲಿಸಿಕೊಟ್ಟಿ ರುವನೋ ಅದೇ ಪ್ರಕಾರ ಯಥಾವತ್ತಾಗಿ ನಮಾಝ್ ನಿರ್ವಹಿಸಿರಿ.
ನಿಮ್ಮಲ್ಲಿ ಪತ್ನಿಯರನ್ನು ಅಗಲಿ ಮೃತರಾಗುವವರು ತಮ್ಮ ಪತ್ನಿಯರಿಗೆ ಒಂದು ವರ್ಷದವರೆಗೆ ಜೀವನಾಂಶಕ್ಕೆ ಹಾಗೂ ತನ್ನ ಮನೆಯಲ್ಲಿ ಸೂತಕ ವಾಸದ ಅನುಕೂಲ ಒದಗಿಸುವಂತೆ ಮರಣ ಶಾಸನ ಮಾಡಿಡತಕ್ಕದ್ದು . ಅವರು ಸ್ವಯಂ ಹೊರಗೆ ಹೋದಲ್ಲಿ ಅವರು ಮಾಡುವ ನ್ಯಾಯಯುತ ಕಾರ್ಯಗಳ ಹೊಣೆ ನಿಮ್ಮ ಮೇಲಿರುವುದಿಲ್ಲ. ಅಲ್ಲಾಹನು ಪ್ರತಾಪಶಾಲಿಯೂ ತಂತ್ರಜ್ಞನೂ ಆಗಿರುವನು.
ವಿಚ್ಛೇಧಿತೆಯರಿಗೆ ಸಾಧ್ಯವಿರುವ ಉಡುಗೊರೆ ಕೊಡುವುದು ದೇವಭಕ್ತರ ಬಾಧ್ಯತೆಯಾಗಿದೆ.
ಈ ರೀತಿ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೆ ವಿವರಿಸಿ ಕೊಡುತ್ತಾನೆ. ನೀವು ಚಿಂತಿಸುವವರಾಗಲೆಂದು.
ಸಾವಿರಗಟ್ಟಲೆ ಜನರಿದ್ದೂ ಸಾವಿನ ಭೀತಿಯಿಂದ ತಮ್ಮ ನಿವಾಸಗಳಿಂದ ಹೊರಹೋದವರನ್ನು ನೀವು ಕಂಡಿಲ್ಲವೇ ? ಆಗ ಅಲ್ಲಾಹನು ‘ನೀವು ಸಾಯಿರಿ’ ಎಂದು ಅವರಿಗೆ ಹೇಳಿದನು. ನಂತರ ಅವರಿಗೆ ಜೀವ ನೀಡಿದನು. ನಿಜವಾಗಿಯೂ ಅಲ್ಲಾಹನು ಮನುಷ್ಯರ ಮೇಲೆ ತುಂಬ ಉದಾರಿ. ಆದರೆ ಬಹುಸಂಖ್ಯಾತ ಜನರು ಕೃತಘ್ನರು.
ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಅಲ್ಲಾಹನು ಎಲ್ಲ ಕೇಳುಗನೂ ಎಲ್ಲ ಬಲ್ಲವನೂ ಎಂಬುದು ನಿಮಗೆ ತಿಳಿದಿರಲಿ.
ಅಲ್ಲಾಹನಿಗೆ ಉತ್ತಮ ಸಾಲ ನೀಡುವವನು ಯಾರಿದ್ದಾನೆ ? ಹಾಗಾದರೆ ಅದನ್ನು ಅಲ್ಲಾಹನು ಧಾರಾಳ ಪಟ್ಟು ವರ್ಧನೆಗೊಳಿಸುತ್ತಾನೆ. ಅಲ್ಲಾಹನು ಕುಗ್ಗಿಸುತ್ತಾನೆ, ಹಿಗ್ಗಿಸುತ್ತಾನೆ. ನಿಮ್ಮ ನಿರ್ಗಮನವು ಆತನ ಕಡೆಗೇ ಇದೆ.
ಮೂಸಾರ ನಂತರ ಇಸ್ರಾಈಲ್ ಸಂತತಿಗಳ ಒಂದು ವಿಭಾಗದ ಕಡೆಗೆ ನೀವು ನೋಡಿಲ್ಲವೇ ? ತಮ್ಮೊಬ್ಬರು ಪ್ರವಾದಿಯೊಂದಿಗೆ ‘ನಮಗೊಬ್ಬ ರಾಜನನ್ನು ನಿಯೋಗಿಸಿರಿ. ನಾವು ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತೇವೆ’ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಪ್ರವಾದಿಯು ‘ಯುದ್ದ ಘೋಷಣೆಯಾದ ನಂತರ ನೀವು ಯುದ್ಧ ಮಾಡದೆ ಇರುವ ಸಾಧ್ಯತೆ ಇದೆಯಲ್ಲ?’ ಎಂದು ಕೇಳಿದರು. ಅದಕ್ಕವರು `ನಮ್ಮನ್ನು ಹೊರಹಾಕಿ. ನಮ್ಮ ಮನೆ-ಮಕ್ಕಳಿಂದ ದೂರ ಮಾಡಲಾಗಿ ರುವಾಗ ನಾವು ಯುದ್ಧ ಮಾಡದೆ ಇರುತ್ತೇವೆಯೇ? ಎಂದು ಉತ್ತರಿಸಿದರು. ಆದರೆ ಅವರಿಗೆ ಯುದ್ಧಕ್ಕೆ ವಿಧಿಸಲ್ಪಟ್ಟಾಗ ಕೆಲವರನ್ನು ಮಾತ್ರ ಹೊರತುಪಡಿಸಿ ಉಳಿದವರೆಲ್ಲ ವಿಮುಖ ರಾದರು. ದುಷ್ಕರ್ಮಿ ಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
ಅವರಿಗೆ ಅವರ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ‘ಥಾಲೂತ’ರನ್ನು ರಾಜನಾಗಿ ನೇಮಿಸಿರುತ್ತಾನೆ. ‘ಆಗ ಅವರು ಹೇಳಿದರು; ‘ನಮ್ಮನ್ನಾಳಲು ಅವನಿಗೇನು ಯೋಗ್ಯತೆಯಿದೆ? ಅವನಿಗಿಂತ ನಾವೇ ಆಳಲು ಯೋಗ್ಯರು. ಅವನಿಗೆ ಧನ ಸಂಪತ್ತು ಕೂಡಾ ಇಲ್ಲ!’ ಆಗ ಪ್ರವಾದಿ ಹೇಳಿದರು; ‘ಅಲ್ಲಾಹನು ನಿಮಗೆ ಬದಲಾಗಿ ಅವನನ್ನು ಆಯ್ಕೆ ಮಾಡಿರುತ್ತಾನೆ. ಥಾಲೂತರಿಗೆ ಜ್ಞಾನ ಸಂಪತ್ತು ಮತ್ತು ಶಾರೀರಿಕ ಸಾಮಥ್ರ್ಯವನ್ನು ಹೆಚ್ಚಿಗೆ ನೀಡಿರುತ್ತಾನೆ. ತಾನುದ್ದೇಶಿಸಿದವರಿಗೆ ಅಲ್ಲಾಹನು ಅಧಿಕಾರ ಕೊಡುತ್ತಾನೆ. ಅಲ್ಲಾಹನು ಅತಿ ವಿಶಾಲನು, ಎಲ್ಲ ಬಲ್ಲವನು .
ಅವರ ಪ್ರವಾದಿಯು ಪುನಃ ಹೇಳಿದರು; ‘ಥಾಲೂತರ ಅಧಿಕಾರ ಗ್ರಹಣದ ರುಜುವಾತಾಗಿ ಮಲಕ್‍ಗಳು ಪೆಟ್ಟಿಗೆಯನ್ನು ವಹಿಸಿಕೊಂಡು ಬರುವರು. ಅದರಲ್ಲಿ ನಿಮ್ಮ ಪಾಲಕಪ್ರಭುವಿನ ಕಡೆಯಿಂದ ಶಾಂತಿಯಿದೆ. ಅದರೊಳಗೆ ಮೂಸಾರವರ ಮನೆತನಗಳವರ ಹಾಗೂ ಹಾರೂನರ ಮನೆತನಗಳವರ ಅವಶೇಷಗಳಿವೆ . ನೀವು ವಿಶ್ವಾಸಿಗಳಾಗಿದ್ದರೆ ಇದರಲ್ಲಿ ನಿಮಗೆ ಮಹತ್ವದ ಪುರಾವೆಯಿದೆ’.
ಥಾಲೂತರು ಸೈನ್ಯಸಮೇತ ಹೊರಟಾಗ ಹೇಳಿದರು, ‘ಅಲ್ಲಾಹನು ನಿಮ್ಮನ್ನು ಒಂದು ನದಿಯ ಮೂಲಕ ಪರೀಕ್ಷಿಸುವನು. ಅದರ ನೀರಿನಿಂದ ಯಾರು ಕುಡಿಯುತ್ತಾರೆ, ಅವನು ನನ್ನವನಲ್ಲ. ಅದರ ರುಚಿ ನೋಡದವನು ಮಾತ್ರ ನನ್ನವನು. ಆದರೆ ತನ್ನ ಕೈಯಿಂದ ಒಂದು ಬೊಗಸೆ ನೀರನ್ನು ಮಾತ್ರ ಎತ್ತಿಕೊಂಡವನ ಹೊರತು. (ಅಂಗೈ ತುಂಬ ನೀರಿಗಿಂತ ಹೆಚ್ಚಿಗೆ ಕುಡಿಯದವನು ನನ್ನವನು) ಆದರೆ ನದಿ ತಲುಪಿದಾಗ ಸ್ವಲ್ಪ ಜನರ ಹೊರತು ಉಳಿದವರೆಲ್ಲರೂ ಧಾರಾಳ ಕುಡಿದುಬಿಟ್ಟರು. ಹಾಗೆ ಥಾಲೂತ್ ಮತ್ತು ಅವರ ಜೊತೆಗಿರುವ (ಒಂದು ಅಂಗೈ ಮಾತ್ರ ಕುಡಿದ) ವಿಶ್ವಾಸಿಗಳು ನದಿದಾಟಿ ಹೋದಾಗ, (ನಿಯಮೋಲ್ಲಂಘನೆ ಮಾಡಿ ನದಿ ದಾಟಲಾಗದೆ ಅಲ್ಲೇ) ಉಳಿದವರು ‘ನಮಗೆ ಇಂದು ಜಾಲೂತ್ ಮತ್ತು ಆತನ ಸೈನ್ಯದ ಎದುರು ಯುದ್ದ ಮಾಡಲು ಶಕ್ತಿಯಿಲ್ಲ’ ಎಂದು ಹೇಳಿಬಿಟ್ಟರು. ಆದರೆ ಅಲ್ಲಾಹುವನ್ನು ಸಂಧಿಸಲಿರುವ ಬಗ್ಗೆ ದೃಢವಿಶ್ವಾಸವುಳ್ಳವರು (ನಿಯಮಾನುಸಾರ ನದಿ ದಾಟಿದವರು) ಹೇಳಿದರು; ಅಲ್ಲಾಹನ ಕೃಪೆಯಿಂದ ಅದೆಷ್ಟು ಚಿಕ್ಕ ತಂಡಗಳು ದೊಡ್ಡ ತಂಡಗಳನ್ನು ಸೋಲಿಸಿವೆ. ಅಲ್ಲಾಹನಿರುವುದು ಸಂಯಮಿಗಳ ಜೊತೆಗೆ’.
ಹಾಗೆ ಜಾಲೂತ್ ಮತ್ತು ಆತನ ಸೈನ್ಯವನ್ನು ಅವರು ಎದುರುಗೊಂಡಾಗ, ‘ನಮ್ಮ ಪ್ರಭು ! ನಮಗೆ ತಾಳ್ಮೆಯನ್ನು ನೀಡು. ನಮ್ಮ ಪಾದಗಳನ್ನು ಅಚಲಗೊಳಿಸು. ಸತ್ಯನಿಷೇಧಿಗಳೆದುರು ನಮಗೆ ನೆರವಾಗು’ ಎಂದು ಪ್ರಾರ್ಥಿಸಿದರು.
ಹಾಗೆ ಅವರು ಅಲ್ಲಾಹನ ಕೃಪೆಯಿಂದ ವೈರಿಗಳನ್ನು ಹಿಮ್ಮೆಟ್ಟಿಸಿದರು. ದಾವೂದರು ಜಾಲೂತನನ್ನು ವಧಿಸಿದರು. ಅವರಿಗೆ ಅಲ್ಲಾಹನು ರಾಜತ್ವ, ತತ್ವಜ್ಞಾನಗಳನ್ನು ದಯಪಾಲಿಸಿದನು. ಅಲ್ಲದೆ ತಾನಿಚ್ಛಿಸಿದ ಬೇರೆ ಅನೇಕ ಜ್ಞಾನಗಳನ್ನು ನೀಡಿದನು. ಕೆಲವರನ್ನು ಕೆಲವರ ಮುಖೇನ ಅಲ್ಲಾಹನು ತಡೆಯದಿರುತ್ತಿದರೆ ಭೂಮಿ ನಾಶವಾಗುತ್ತಿತ್ತು. ಆದರೆ ಆತನು ಲೋಕದ ಜನರ ಮೇಲೆ ಉದಾರಿಯಾಗಿರುವನು.
ಅಲ್ಲಾಹನ ದೃಷ್ಟಾಂತಗಳಿವು, ನಾವು ಇವುಗಳನ್ನು ನಿಮಗೆ ಸಸತ್ಯ ಬೋಧಿಸುತ್ತಿದ್ದೇವೆ. ನಿಸ್ಸಂದೇಹ ನೀವು ಸಂದೇಶವಾಹಕರಲ್ಲೊಬ್ಬರು.
ಆ ಸಂದೇಶವಾಹಕರಲ್ಲಿ ಕೆಲವರಿಗೆ ಕೆಲವರಿಗಿಂತ ಶ್ರೇಷ್ಠತೆಯನ್ನು ದಯಪಾಲಿಸಿರುತ್ತೇವೆ. ಅಲ್ಲಾಹನು ಖುದ್ದು ಮಾತನಾಡಿದವರೂ ಅವರಲ್ಲಿದ್ದಾರೆ. ಕೆಲವರನ್ನು ಉನ್ನತ ಪದವಿಗೇರಿಸಿದ್ದಾನೆ. ಮರ್ಯಮರ ಪುತ್ರ ಈಸಾರವರಿಗೆ ಸ್ಪಷ್ಟ ದೃಷ್ಟಾಂತಗಳನ್ನು ನೀಡಿದ್ದೇವೆ ಮತ್ತು ಪವಿತ್ರಾತ್ಮದ ಮೂಲಕ ಅವರಿಗೆ ಬಲ ನೀಡಿದ್ದೇವೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಆ ಪ್ರವಾದಿಗಳ ಅನಂತರ ಸ್ಪಷ್ಟ ರುಜುವಾತುಗಳಿದ್ದೂ ಕೂಡಾ ಜನರು ಪರಸ್ಪರ ಕಾದಾಡುತ್ತಿರಲಿಲ್ಲ. ಆದರೆ ಅವರು ಭಿನ್ನ ವಿಭಿನ್ನರಾದರು. ಕೆಲವರು ಸಧರ್ಮಿಗಳಾದರು. ಕೆಲವರು ಅಧರ್ಮಿಗಳಾದರು. ಅಲ್ಲಾಹನಿಚ್ಛಿಸಿದರೆ ಅವರು ಪರಸ್ಪರ ಹೊಡೆದಾಡುತ್ತಿರಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
ಓ ಸತ್ಯವಿಶ್ವಾಸಿಗಳೇ! ವ್ಯಾಪಾರ, ಗೆಳೆತನ, ಶಿಫಾರಸ್ಸು ಯಾವುದೂ ಇಲ್ಲದ ಒಂದು ದಿನ ಬರುವ ಮುನ್ನವೇ ಈಗ ನಿಮಗೆ ನಾವಿತ್ತುದರಿಂದ ಧರ್ಮಕಾರ್ಯಕ್ಕೆ ವೆಚ್ಚ ಮಾಡಿರಿ. ಸತ್ಯ ನಿಷೇಧಿಗಳು, ಅವರೇ ಅಕ್ರಮಿಗಳು.
ಅಲ್ಲಾಹನ ಹೊರತು ಅನ್ಯದೇವನಿಲ್ಲ. ಆತನು ಚಿರಂಜೀವಿ. ಸಮಸ್ತ ವಿಶ್ವದ ಸಮರ್ಥ ನಿಯಂತ್ರಕ. ಆತನಿಗೆ ತೂಕಡಿಕೆಯಿಲ್ಲ, ನಿದ್ದೆಯೂ ಇಲ್ಲ. ಭೂಮ್ಯಾಕಾಶಗಳಲ್ಲಿರುವ ಸರ್ವದರ ಸರ್ವಾಧಿಪತಿ, ಆತನ ಅಪ್ಪಣೆ ವಿನಹ ಆತನಲ್ಲಿ ಶಿಫಾರಸು ಮಾಡುವ ಸಮರ್ಥ ಯಾರೂ ಇಲ್ಲ . ಸೃಷ್ಟಿಗಳ ಪ್ರತ್ಯಕ್ಷ - ಪರೋಕ್ಷಗಳನ್ನೆಲ್ಲ ಬಲ್ಲವನು. ಆತನ ಜ್ಞಾನದ ಪ್ರತಿಯೊಂದು ಅಂಶವೂ ಸೃಷ್ಟಿಗಳಿಗೆ ನಿಗೂಡ, ಆತನು ತಿಳಿಸಿಕೊಡ ಲಿಚ್ಚಿಸಿದ್ದು ಹೊರತು. ಆತನ ಕುರ್ಸೀ ಭೂಮ್ಯಾಕಾಶಗಳ ವ್ಯಾಪ್ತಿಯನ್ನು ಮೀರಿಸಿದೆ. ಆಕಾಶ ಭೂಮಿಗಳ ರಕ್ಷಣೆ ಆತನಿಗೆ ಭಾರವಲ್ಲ, ಅವನು ಪರಮೋನ್ನತನು, ಪರಮ ಗಣ್ಯನು.
ಧರ್ಮ ಸ್ವೀಕೃತಿಗೆ ಬಲಾತ್ಕಾರವಿಲ್ಲ . ಸತ್ಯವು ಮಿಥ್ಯೆಯಿಂದ ವ್ಯಕ್ತಗೊಂಡಿದೆ. ಂiÀi ತಾಗೂತನ್ನುಂ ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸ ವಿರಿಸುತ್ತಾನೋ ಆತನು ಕಡಿದುಕೊಳ್ಳದ ಸುಭದ್ರ
ಅಲ್ಲಾಹನು ವಿಶ್ವಾಸಿಗಳ ಸಹಾಯಕ. ಅವರನ್ನವನು ಇರುಳುಗಳಿಂದ ಬೆಳಕಿನತ್ತ ಸಾಗಿಸುತ್ತಾನೆ . ಸತ್ಯನಿಷೇಧಿಗಳ ಸಹಾಯಕರು ತಾಗೂತ್‍ಗಳು. ಅವು ಅವರನ್ನು ಬೆಳಕಿನಿಂದ ಇರುಳುಗಳತ್ತ ಸಾಗಿಸುತ್ತವೆ. ಅವರು ನರಕವಾಸಿಗಳು. ಅವರದರಲ್ಲಿ ಚಿರವಾಸಿಗಳು.
ಇಬ್ರಾಹೀಮರೊಂದಿಗೆ ತನ್ನ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸಿದವನ ಕಡೆಗೆ ನೀವು ಗಮನಹರಿಸಿಲ್ಲವೇ? ಆತನಿಗೆ ಅಲ್ಲಾಹನು ಕೊಟ್ಟ ಅರಸೊತ್ತಿಗೆಯು ಅದಕ್ಕೆ ಪ್ರಚೋದನೆಯೊ ದಗಿಸಿತ್ತು. ‘ನನ್ನ ಪ್ರಭುವು ಜೀವನ್ಮರಣಗಳ ದಾಯಕ’ ಎಂದರು ಇಬ್ರಾಹೀಮರು. ಆಗ ‘ನಾನು ಜೀವ ನೀಡುತ್ತೇನೆ, ಸಂಹಾರ ಮಾಡುತ್ತೇನೆ’ ಎಂದನಾತ. ಆಗ ಇಬ್ರಾಹೀಮರು, ನನ್ನ ಪ್ರಭುವು ಸೂರ್ಯನನ್ನು ಪೂರ್ವದಿಂದ ತರುತ್ತಾನೆ, ನೀನದನ್ನು ಪಶ್ಚಿಮದಿಂದ ತಾ’ ಎಂದರು. ಆಗ ಆ ಸತ್ಯನಿಷೇಧಿ ಸೋತು ಹೈರಾಣಾದ. ದುಷ್ಕರ್ಮಿಗಳಾದ ಜನತೆಗೆ ಅಲ್ಲಾಹನು ಸತ್ಯದರ್ಶನ ನೀಡುವುದಿಲ್ಲ.
ಅಥವಾ ಕೃಷಿ, ಫಲೋತ್ಪನ್ನಗಳ ಚಪ್ಪರಗಳೆಲ್ಲ ಕುಸಿದುಬಿದ್ದು ಸರ್ವನಾಶ ಹೊಂದಿದ್ದ ಒಂದು ಗ್ರಾಮದ ಮೂಲಕ ಓರ್ವನು ಸಂಚಾರಗೈದ ವೃತ್ತಾಂತದತ್ತ ಗಮನ ಹರಿಸಿಲ್ಲವೇ ? ಈ ರೀತಿ ಸರ್ವನಾಶ ಹೊಂದಿದ ಗ್ರಾಮವನ್ನು ಇನ್ನು ಅಲ್ಲಾಹನು ಸಜೀವಗೊಳಿಸುವುದಾದರೂ ಹೇಗೆ? ಎಂದು ಆ ವ್ಯಕ್ತಿ ಉದ್ಗರಿಸಿದನು. ಆ ವ್ಯಕ್ತಿಯನ್ನು ಕೂಡಲೇ ಅಲ್ಲಾಹನು ಮೃತ್ಯುವಶಗೊಳಿಸಿ ನೂರು ವರ್ಷಗಳ ಕಾಲ ಹಾಗೇ ಬಿಟ್ಟು ಬಿಟ್ಟು ಅನಂತರ ಜೀವ ಕೊಟ್ಟನು. ಇಲ್ಲಿ ನೀನು ಎಷ್ಟು ಕಾಲ ನೆಲೆಸಿದ್ದೆ ? ಎಂದು ಕೇಳಿದನು ಅಲ್ಲಾಹು. ಒಂದು ಇಡೀ ದಿನ ಅಥವಾ ಭಾಗಶಃ ದಿನ ಎಂದನಾತ. ಆಗ ಅಲ್ಲಾಹನೆಂದನು, `ಅಲ್ಲ, ನೀನು ನೂರು ವರ್ಷ ನೆಲೆಸಿರುವೆ. ನೀನು ಅಂದು ಜೊತೆಗೆ ಇಟ್ಟು ಕೊಂಡಿದ್ದ ಅನ್ನ-ಪಾನೀಯಗಳನ್ನು ನೋಡು, ಅದು ಹಾಳಾಗಿಲ್ಲ. ನಿನ್ನ ಕತ್ತೆಯನ್ನು ನೋಡು, ಅಲ್ಲಾಹನ ಪುನರ್ ಸೃಷ್ಟಿಯ ಸಾಮಥ್ರ್ಯಕ್ಕೆ ನಿನ್ನನ್ನು ನಾನು ರುಜುವಾತನ್ನಾಗಿ ಮಾಡುತ್ತೇನೆ. ಸತ್ತು ದ್ರವಿಸಿದ ನಿನ್ನ ಕತ್ತೆಯ ಎಲುಬು ಚೂರುಗಳನ್ನು ನೋಡು, ಹೇಗೆ ಎಬ್ಬಿಸುತ್ತಿದ್ದೇವೆ, ಹೇಗೆ ಅದಕ್ಕೆ ಮಾಂಸವನ್ನು ಧಾರಣೆ ಮಾಡುತ್ತೇವೆ ಎಂಬುದನ್ನು. ಇದೆಲ್ಲವನ್ನು ದೃಕ್ ಸಾಕ್ಷಿಯಾಗಿ ಕಂಡಾಗ ಆತನು ಉದ್ಗರಿಸಿದನು. ‘ನಿಜವಾಗಿಯೂ ಅಲ್ಲಾಹನು ಸರ್ವ ಸಮರ್ಥನೆಂಬುದನ್ನು ನಾನು ಕಂಡರಿತೆ!’
ಪ್ರಭು! ನೀನು ಮೃತರನ್ನು ಬದುಕಿಸುವುದು ಹೇಗೆಂದು ನನಗೆ ತೋರಿಸಿ ಕೊಡು! ಎಂದು ಇಬ್ರಾಹೀಮರು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಿಮಗೆ ನಂಬಿಕೆ ಬಂದಿಲ್ಲವೇ? ಎಂದು ಕೇಳಿದನು ಅಲ್ಲಾಹು. ನಂಬಿಕೆಯಿದೆ. ಆದರೆ ಕಣ್ಣಾರೆ ಕಂಡು ಮನದಣಿಯಲು ಕೇಳಿದೆ ಎಂದರು ಇಬ್ರಾಹೀಮರು. ಅಲ್ಲಾಹನೆಂದನು; ಹಾಗಾದರೆ ನಾಲ್ಕು ಪಕ್ಷಿಗಳನ್ನು ಹಿಡಿಯಿರಿ. ಆಮೇಲೆ ಅವುಗಳನ್ನು ನಿಮ್ಮತ್ತ ಚೆನ್ನಾಗಿ ಒಲಿಸಿ ತುಂಡರಿಸಿರಿ. ನಂತರ ಅವುಗಳನ್ನು ಹಿಡಿದು ಮಾಂಸ ಮಾಡಿ ಒಟ್ಟಾಗಿ ಬೆರೆಸಿ ನಾಲ್ಕು ಬೆಟ್ಟಗಳ ಮೇಲೆ ಪಾಲುಮಾಡಿರಿ. ನಂತರ ಕರೆದು ನೋಡಿರಿ. ಬಹಳ ವೇಗದಲ್ಲಿ ಅವು ನಿಮ್ಮ ಬಳಿ ಬರುತ್ತವೆ . ಅಲ್ಲಾಹನು ಮಹಾ ಪ್ರತಾಪಿ, ಪರಮ ತಂತ್ರಜ್ಞಾನಿ ಎಂಬುದು ತಿಳಿದಿರಲಿ.
ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಉಪಮೆ, ಒಂದು ಧಾನ್ಯ ಮೊಳೆತು ಅದರಿಂದ ಏಳು ಟಿಸಿಲೊಡೆದು ಪ್ರತಿಯೊಂದು ಟಿಸಿಲಲ್ಲಿ ತಲಾ ನೂರು ಧಾನ್ಯಗಳು ಬೆಳೆದಂತೆ. ಅಲ್ಲಾಹನು ತಾನಿಚ್ಛಿಸಿದವರಿಗೆ ದ್ವಿಗುಣಗೊಳಿಸುತ್ತಾನೆ. ಅಲ್ಲಾಹನು ವಿಶಾಲನು. ಪರಮ ತಜ್ಞನು.
ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ವ್ಯಯ ಮಾಡುವ ಮತ್ತು ವ್ಯಯ ಮಾಡಿದ್ದನ್ನು ಎತ್ತಿ ಹೇಳದ ಹಾಗೂ ಹೆಮ್ಮೆ, ಪೀಡನೆಗಳನ್ನು ಮುಂದುವರಿಸದವರಿಗೆ, ಅವರ ದೇವನ ಬಳಿ ಯೋಗ್ಯ ಪ್ರತಿಫಲವಿದೆ. ಅಂತಹವರಿಗೆ ಭಯವಿಲ್ಲ. ವ್ಯಸನವಿಲ್ಲ.
ನಲ್ನುಡಿ ಹಾಗೂ ಕ್ಷಮಾಪಣೆಯು ಕೊಟ್ಟ ನಂತರ ಕಿರುಕುಳ ನೀಡುವ ದಾನಕ್ಕಿಂತ ಲೇಸು. ಅಲ್ಲಾಹನು ನಿರಪೇಕ್ಷನು. ಸಮಾಧಾನಿಯು.
ಓ ಸತ್ಯವಿಶ್ವಾಸಿಗಳೇ! ನಿಮ್ಮ ದಾನದ ಫಲಗಳನ್ನು ಎತ್ತಿ ಹೇಳಿಕೆ ಹಾಗೂ ಕಿರುಕುಳದ ಮೂಲಕ ವ್ಯರ್ಥಗೊಳಿಸದಿರಿ. ಜನರೆದುರು ಮಿಥ್ಯತ್ವಕ್ಕಾಗಿ ಧನ ವ್ಯಯಿಸುವವನಂತೆ. ಆತನಿಗೆ ಅಲ್ಲಾಹು ಮತ್ತು ಪರಲೋಕದಲ್ಲಿ ವಿಶ್ವಾಸವಿಲ್ಲ. ಅವನ ಉದಾಹರಣೆ ಮೇಲ್ಮೈ ನುಣುಪಾದ ಬಂಡೆಗಲ್ಲಿನಂತೆ. ಅದರ ಮೇಲೆ ಮಣ್ಣು ಇದೆ. ಅದರ ಮೇಲೆ ಜಡಿಮಳೆ ಬಿದ್ದು ಸಂಪೂರ್ಣ ತೊಳೆದು ಹೋದಂತೆ ಅವರು ತಮ್ಮ ಕರ್ಮಫಲದಿಂದ ಯಾವುದನ್ನೂ ಪಡೆಯುವಲ್ಲಿ ಸಂಪೂರ್ಣ ವಿಫಲರು. ಅಲ್ಲಾಹನು ದ್ರೋಹಿಗಳಾದ ಜನರಿಗೆ ಸತ್ಯದರ್ಶನ ಮಾಡುವುದಿಲ್ಲ.
ಅಲ್ಲಾಹನ ತೃಪ್ತಿಯ ಬಯಕೆ ಹಾಗೂ ಆತ್ಮ ನಿಶ್ಚಯದಿಂದ ಧನವ್ಯಯ ಮಾಡುವವರ ಉಪಮೆಯು ಎತ್ತರದ ಸಮತಟ್ಟಿನಲ್ಲಿರುವ ಒಂದು ತೋಟದಂತೆ. ಅದಕ್ಕೆ ಸಮೃದ್ಧ ಮಳೆ ದೊರೆತು ಇಳುವರಿ ಇಮ್ಮಡಿಯಾಗುತ್ತದೆ. ಒಂದು ವೇಳೆ ಸಮೃದ್ಧ ಮಳೆ ಆಗದಿದ್ದರೆ ತುಂತುರು ಮಳೆಯೇ ಅದಕ್ಕೆ ಸಾಕಾಗುತ್ತದೆ. ನಿಮ್ಮ ಕೃತ್ಯಗಳ ಮೇಲೆ ಅಲ್ಲಾಹನ ನಿಗಾ ಇದ್ದೇ ಇದೆ.
ನಿಮ್ಮಲ್ಲಿ ಒಬ್ಬನಿಗೆ ಖರ್ಜೂರ ಮತ್ತು ದ್ರಾಕ್ಷೆಯ ಒಂದು ತೋಟವಿದೆ. ಅದರ ತಳಭಾಗದಲ್ಲಿ ಹೊಳೆಗಳು ಹರಿಯುತ್ತಿವೆ. ಎಲ್ಲ ವಿಧ ಫಲೋತ್ಪನ್ನ ಗಳು ಆ ತೋಟದಲ್ಲಿ ಬೆಳೆಯುತ್ತವೆ. ಆತನಿಗೆ ಪ್ರಾಯವೂ ಆಗಿದೆ. ದುರ್ಬಲರಾದ ಪುಟ್ಟ ಪುಟ್ಟ ಮಕ್ಕಳೂ ಇದ್ದಾರೆ. ಅಷ್ಟರಲ್ಲಿ ಬೆಂಕಿಯಿಂದ ಕೂಡಿದ ಭೀಕರ ಗಾಳಿಯೊಂದು ಬೀಸಿ ತೋಟವನ್ನು ಸುಟ್ಟು ಬಿಡುತ್ತದೆ. ಇಂತಹ ಅನುಭವ ನಿಮಗೆ ಬರಲು ನೀವು ಇಚ್ಛಿಸುವಿರಾ? ನೀವು ಯೋಚಿಸುವವರಾಗಲೆಂದು ಅಲ್ಲಾಹನು ಈ ರೀತಿ ನಿಮಗೆ ಪ್ರಮಾಣಗಳನ್ನು ವಿವರಿಸಿ ಕೊಡುತ್ತಾನೆ.
ಓ ಸತ್ಯವಿಶ್ವಾಸಿಗಳೇ! ನೀವು ಸಂಪಾದಿಸಿದ ಉತ್ತಮ ಸೊತ್ತುಗಳಿಂದಲೂ ಭೂಮಿಯಲ್ಲಿ ನಾವು ಹೊರಡಿಸಿದ (ಸ್ವಾಭಾವಿಕವಾದ) ಉತ್ತಮ ಬೆಳೆಗಳಿಂದಲೂ ಖರ್ಚು ಮಾಡಿರಿ. (ಝಕಾತ್ ನೀಡಿರಿ.) ಯಾರಾದರೂ ಕೆಳಮಟ್ಟದ ಮಾಲುಗಳನ್ನು ನಿಮಗೆ ಕೊಟ್ಟರೆ ಕಣ್ಣು ಮುಚ್ಚಿ ಪಡೆಯುವಿರೇ ಹೊರತು ತೃಪ್ತಿಯಿಂದ ಪಡಕೊಳ್ಳಲಾರಿರಿ. ಅಂತಹ ಗುಣಮಟ್ಟವಿಲ್ಲದ ಮಾಲುಗಳನ್ನು ನೀವೂ ಇತರರಿಗೆ ಪ್ರತ್ಯೇಕಿಸಿಡ ಬೇಡಿರಿ. (ಝಕಾತ್ ಕೊಡಬೇಡಿರಿ.) ಅಲ್ಲಾಹನು ಪರಮೈಶ್ವರ್ಯವಂತ ಹಾಗೂ ಪರಮ ಶ್ಲಾಘ್ಯ ಎಂಬುದು ನಿಮಗೆ ತಿಳಿದಿರಲಿ.
ಶೈತಾನನು ನಿಮಗೆ ದಾರಿದ್ರ್ಯದ ಭೀತಿ ಹುಟ್ಟಿ ಸುತ್ತಾನೆ. ಲೋಭಿತನಕ್ಕೆ ಪ್ರಚೋದನೆ ನೀಡುತ್ತಾನೆ. ಅಲ್ಲಾಹನಾದರೋ ತನ್ನ ವತಿಯಿಂದ ದೋಷ ಮುಕ್ತಿಯ ಹಾಗೂ ಔದಾರ್ಯದ ಭರವಸೆ ಕೊಡುತ್ತಿದ್ದಾನೆ. ಅಲ್ಲಾಹನು ವಿಶಾಲಚಿತ್ತನು, ಸರ್ವಜ್ಞನು.
ಅವನು ತಾನಿಚ್ಛಿಸಿದವರಿಗೆ ಫಲವತ್ತಾದ ಜ್ಞಾನ ನೀಡುತ್ತಾನೆ, ಯಾವನಿಗೆ ಫಲವತ್ತಾದ ಜ್ಞಾನ ಪ್ರಾಪ್ತವಾಯಿತೋ ಆತನಿಗೆ ಧಾರಾಳ ಸೌಭಾಗ್ಯ ಪ್ರಾಪ್ತವಾದಂತೆಯೇ ಸರಿ. ಬುದ್ಧಿವಂತರಿಗೆ ಮಾತ್ರವೇ ಸಾರೋಪದೇಶ ಫಲಿಸುತ್ತದೆ.
ನೀವು (ಝಕಾತ್ ಅಥವಾ ಐಚ್ಛಿಕ ದಾನದ ರೂಪದಲ್ಲಿ) ಯಾವುದನ್ನೇ ವ್ಯಯಿಸಿದರೂ ಅಥವಾ ಯಾವುದೇ ಹರಕೆ ಮಾಡಿ ಸಂದಾಯಿಸಿದ್ದರೂ ಅದನ್ನು ಅಲ್ಲಾಹನು ಖಂಡಿತ ತಿಳಿಯುತ್ತಾನೆ. ದುರಾಕ್ರಮಿಗಳಿಗೆ ಯಾವ ಸಹಾಯಕರೂ ಇರುವುದಿಲ್ಲ.
ನೀವು ಸ್ವಪ್ರೇರಿತ ದಾನವನ್ನು ಪ್ರತ್ಯಕ್ಷಗೊಳಿಸಿದರೆ ಅದು ಚೆನ್ನವೇ. ಇನ್ನದನ್ನು ಗುಪ್ತಗೊಳಿಸಿ ಬಡವರಿಗೆ ಕೊಡುವುದಾದರೆ ನಿಮಗದು ಅತ್ಯಂತ ಶ್ರೇಯಸ್ಕರ. ನಿಮ್ಮ ಪಾಪಗಳಿಂದ ಅಲ್ಲಾಹನು ಪರಿಹಾರ ಮಾಡುವನು. ಅಲ್ಲಾಹನು ನಿಮ್ಮ ಪ್ರವರ್ತಿಗಳ ಬಾಹ್ಯಾಂತರ್ಯಗಳನ್ನು ಬಲ್ಲವನಾಗಿರುವನು.
ಜನರನ್ನು ನೇರ ದಾರಿಗೆ ಹಚ್ಚುವುದು ನಿಮ್ಮ ಹೊಣೆಯಲ್ಲ. ತಾನಿಚ್ಛಿಸಿದವರನ್ನು ನೇರ ದಾರಿಗೆ ಹಚ್ಚುವುದು ಅಲ್ಲಾಹು. ನೀವು ನೀಡಿದ ದಾನ ನಿಮಗೇ ನೀಡಿಕೊಂಡ ದಾನ. ಅಲ್ಲಾಹನ ಒಲವನ್ನು ಮಾತ್ರ ಬಯಸಿ ದಾನ ನೀಡಿರಿ. ನಿಮ್ಮ ದಾನದ ಸಂಪೂರ್ಣ ಫಲ ನಿಮಗೆ ಲಭ್ಯ. ನೀವು ಅನೀತಿಗೊಳಗಾಗುವುದಿಲ್ಲ.
ಅಲ್ಲಾಹನ ಮಾರ್ಗದಲ್ಲಿ ಬಂಧಿತರಾದ ಬಡವರಿಗೆ ದಾನಗಳು ಸಂದಾಯವಾಗಲಿ. ಜೀವನಾಧಾರ ಕ್ಕಾಗಿ ಹೊರಗಿಳಿಯಲು ಅವರಿಗೆ ಸಾಧ್ಯವಾಗು ತ್ತಿಲ್ಲ. ಅವರ ಸ್ವಾಭಿಮಾನದಿಂದಾಗಿ ಅವರ ಸ್ಥಿತಿ ಗೊತ್ತಿಲ್ಲದವರು ಅವರನ್ನು ಸ್ಥಿತಿವಂತರೆಂದು ಭಾವಿಸುತ್ತಾರೆ. ಅವರು ಯಾರೆಂದು ಕುರು ಹುಗಳಿಂದ ನಿಮಗೆ ತಿಳಿಯ ಬಹುದಾಗಿದೆ. ಜನ ರಲ್ಲಿ ಅವರೆಂದಿಗೂ ಕಾಡಿ ಬೇಡುವವರಲ್ಲ. ನೀವಿತ್ತ ದಾನವನ್ನು ಖಂಡಿತ ಅಲ್ಲಾಹು ಅರಿತು ಕೊಳ್ಳುತ್ತಾನೆ.
ಇರುಳೂ ಹಗಲೂ ಗುಪ್ತವಾಗಿಯೂ ಜಾಹೀ ರಾಗಿಯೂ ತಮ್ಮ ಧನಗಳನ್ನು ದಾನ ನೀಡು ವವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ. ಅವರಿಗೆ ಯಾವ ಭಯವೂ ಇರದು. ಅವರು ದುಃಖಿಸಬೇಕಾಗಿಯೂ ಇಲ್ಲ.
ಬಡ್ಡಿ ಭಕ್ಷಕರು (ತಮ್ಮ ಸಮಾಧಿಗಳಿಂದ) ಶೈತಾನನ ಸೋಂಕಿನಿಂದ ಮತಿಹೀನರಾದವರಂತಲ್ಲದೆ ಎದ್ದೇಳಲಾರರು. ಇದು ಯಾಕೆಂದರೆ ಅವರು `ವ್ಯಾಪಾರವು ಬಡ್ಡಿಯಂತೆ’ ಎಂದಿದ್ದಾರೆ. ನಿಜದಲ್ಲಿ ಅಲ್ಲಾಹನು ವ್ಯಾಪಾರವನ್ನು ಧರ್ಮಬದ್ಧ ಗೊಳಿಸಿರುತ್ತಾನೆ. ಬಡ್ಡಿಯನ್ನು ನಿಷಿದ್ಧ ಗೊಳಿಸಿರುತ್ತಾನೆ. ತನ್ನ ಪ್ರಭುವಿನಿಂದ ಉಪದೇಶ ತಲುಪಿ ಬಡ್ಡಿ ಭಕ್ಷಣೆಯಿಂದ ದೂರ ಸರಿದವರಿಗೆ ಹಿಂದಿನ ಭಕ್ಷಣೆಯನ್ನು ಮನ್ನಾ ಮಾಡಲಾಗುವುದು. ಅವನ ವಿಚಾರವು ಅಲ್ಲಾಹನಿಗೆ ಸೇರಿದ್ದು. ಯಾವನಾದರೂ ಇನ್ನೂ ಆವರ್ತಿಸಿದರೆ ಅಂಥವರು ನರಕ ನಿವಾಸಿಗಳು. ಅದರಲ್ಲವರು ಶಾಶ್ವತರು .
ಅಲ್ಲಾಹನು ಬಡ್ಡಿಯನ್ನು ಅಳಿಸಿ ಹಾಕುತ್ತಾನೆ. ದಾನಗಳನ್ನು ಪೋಷಿಸುತ್ತಾನೆ. ಎಲ್ಲ ಧಿಕ್ಕಾರಿಗಳು ಹಾಗೂ ಮಹಾಪಾಪಿಗಳನ್ನು ಅಲ್ಲಾಹನು ಅನಿಷ್ಟಪಡುತ್ತಾನೆ.
ಸತ್ಯವಿಶ್ವಾಸ ಹೊಂದಿ ಪುಣ್ಯ ಕಾರ್ಯಗಳನ್ನು ನಿರ್ವಹಿಸಿದವರು, ನಮಾಝನ್ನು ಖಾಯಂ ಮಾಡಿಕೊಂಡವರು, ಝಕಾತ್ ಪಾವತಿಸುವವರು ಯಾರೋ ಅವರಿಗೆ ತಮ್ಮ ನಾಥನ ಬಳಿ ಪ್ರತಿಫಲವಿದೆ. ಅವರಿಗೆ ಯಾವ ಭಯವೂ ಇಲ್ಲ. ಅವರು ದುಃಖಿತರೂ ಅಲ್ಲ.
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ವಿಧಿ-ನಿಷೇಧ ಗಳಿಗೆ ಬದ್ಧರಾಗಿರಿ. ಬಾಕಿಯಿರುವ ಬಡ್ಡಿಯನ್ನು ತ್ಯಜಿಸಿರಿ. ನೀವು ಸತ್ಯ ವಿಶ್ವಾಸಿಗಳಾಗಿದ್ದರೆ.
ಹೀಗೆ ನೀವು ಮಾಡದಿದ್ದರೆ ನಿಮ್ಮೆದುರು ಅಲ್ಲಾಹು ಮತ್ತು ಅವರ ರಸೂಲರು ಯುದ್ಧ ಸಾರುವುದನ್ನು ಅರಿತುಕೊಳ್ಳಿರಿ. ನೀವು ಬಾಕಿ ಬಡ್ಡಿ ವಸೂಲಿ ಯಿಂದ ವಿಮುಖರಾದರೆ ಅಸಲು ವಸೂಲಾತಿಗೆ ನಿಮಗೆ ಅನುಮತಿಯಿದೆ. ನೀವು ಅನ್ಯಾಯ ವೆಸಗದವರೂ ಅನ್ಯಾಯಕ್ಕೊಳಗಾಗದವರೂ ಆಗಬೇಕು.
ಸಾಲಗಾರ ಸಾಲ ಪಾವತಿಗೆ ಪ್ರಯಾಸದಲ್ಲಿದ್ದರೆ ಅನುಕೂಲವಾಗುವವರೆಗೂ ಅವಧಿ ವಿಸ್ತರಿಸಿರಿ. ನೀವು ಅದನ್ನು ಮನ್ನಾ ಮಾಡುವುದಾದರೆ ನಿಮಗದು ಶ್ರೇಯಸ್ಸು. ನೀವು ತಿಳಿದವರಾಗಿದ್ದರೆ
ನಿಮ್ಮನ್ನು ಅಲ್ಲಾಹನ ಕಡೆಗೆ ವಾಪಾಸು ಕರೆಸಿಕೊಳ್ಳುವ ಒಂದು ದಿನದ ಬಗ್ಗೆ ಎಚ್ಚರದಲ್ಲಿರಿ. ಪ್ರತಿಯೊಬ್ಬರಿಗೂ ಮಾಡಿದ ಕರ್ಮದ ಫಲವನ್ನು ಅಲ್ಲಿ ನೀಡಲಾಗುವುದು. ಯಾರಿಗೂ ಅನೀತಿ ತೋರಲಾಗುವುದಿಲ್ಲ.
ಓ ಸತ್ಯವಿಶ್ವಾಸಿಗಳೇ! ನೀವು ನಿಗದಿತ ಅವಧಿಗೆ ಸಾಲದ ವ್ಯವಹಾರ ಮಾಡಿಕೊಂಡರೆ ಅದನ್ನು ಬರೆದಿಡಿರಿ. ನಿಮ್ಮ ನಡುವೆ ನೀತಿ ನಿಷ್ಠವಾಗಿ ಬರಹಗಾರನೊಬ್ಬ ಅದನ್ನು ದಾಖಲಿಸಿಕೊಳ್ಳಲಿ. ಅಲ್ಲಾಹನು ಕಲಿಸಿದ ಪ್ರಕಾರ ಬರಹಗಾರನು ಬರೆದುಕೊಡುವುದನ್ನು ನಿರಾಕರಿಸಬಾರದು. ಆತ ಬರೆಯಲಿ, ಸಾಲಗಾರನು ಹೇಳಿಕೊಡಲಿ. ಹೇಳಿಕೊಡುವಾಗ ಏನನ್ನೂ ಕಡಿಮೆಗೊಳಿಸದಿರಲಿ. ಆ ವಿಷಯದಲ್ಲಿ ತನ್ನ ಪ್ರಭುವಿನ ಭಯವಿರಲಿ. ಇನ್ನು ಸಾಲಗಾರನು ಮಂದಮತಿಯೋ, ದುರ್ಬಲ ನೋ, ಹೇಳಿಕೊಡಲು ಅಸಾಧ್ಯವಾದವನೋ ಆಗಿದ್ದಲ್ಲಿ ಆತನ ರಕ್ಷಕ ನೀತಿ ನಿಷ್ಟವಾಗಿ ಹೇಳಿಕೊಡಲಿ. ನಿಮ್ಮ ಪೈಕಿ ಇಬ್ಬರು ಪುರುಷರನ್ನು ಸಾಕ್ಷಿ ನಿಲ್ಲಿಸಿರಿ. ಇಬ್ಬರು ಪುರುಷರ ಅಭಾವವಿದ್ದರೆ ಸಾಕ್ಷಿಗೆ ನೀವು ತೃಪ್ತಿಪಡುವ ಓರ್ವ ಪುರುಷ ಹಾಗೂ ಇಬ್ಬರು ಸ್ತ್ರೀಯರು ಸಾಕ್ಷಿಗಳಾಗಲಿ. ಸ್ತ್ರೀಯರು ಇಬ್ಬರು ಯಾಕೆಂದರೆ ಒಬ್ಬಳು ಮರೆತರೆ ಮತ್ತೊ ಬ್ಬಳು ನೆನಪಿಸಲು ಅನುಕೂಲವಾಗುತ್ತದೆ. ಸಾಕ್ಷಿಗೆ ಕರೆದಾಗ ಸಾಕ್ಷಿಯಾಗಲು ನಿರಾಕರಿಸಬೇಡಿ. ಅವಧಿಯವರೆಗೆ ಬರೆಯಲು ಉದಾಸೀನ ತೋರ ಬೇಡಿ. ಮೊತ್ತ ಕಡಿಮೆಯಿರಲಿ, ಹೆಚ್ಚಿರಲಿ. ಇದು ಅಲ್ಲಾಹನ ಬಳಿ ಅತ್ಯಂತ ನೀತಿ ನಿಷ್ಠವಾದುದು ಹಾಗೂ ಸಾಕ್ಷಿಗೆ ಅತ್ಯಂತ ಉಪಕಾರಿಯಾದುದು. ಸಂದೇಹ ನಿವಾರಣೆಗೆ ಅತ್ಯಂತ ನಿಕಟವಾದುದು. ನಿಮ್ಮ ನಡುವೆ ರೊಕ್ಕ ವ್ಯಾಪಾರ ನಡೆಯುವಾಗ ಬರೆದಿಡಬೇಕಾಗಿಲ್ಲ. ಆದರೆ ವ್ಯಾಪಾರ ಕುದುರಿದರೆ ಬರೆದಿಡಬೇಕಾಗಿಲ್ಲ. ಆದರೆ ವ್ಯಾಪಾರ ಕುದುರಿದರೆ ಸಾಕ್ಷಿ ನಿಲ್ಲಿಸುವುದು ಶ್ರೇಯಸ್ಕರ. ಬರಹಗಾರನೋ, ಸಾಕ್ಷಿಯೋ ತೊಂದರೆಗೊಳಗಾಗಬಾರದು. ಈ ನಿಷೇಧಿತ ಕಾರ್ಯಗಳನ್ನು ನೀವು ಮಾಡಿದರೆ ನಿಜವಾಗಿಯೂ ಅದು ನಿಮಗೇ ಬಾಧಿಸುವ ಪಾಪ. ಅಲ್ಲಾಹನ ವಿಧಿ-ನಿಷೇಧಗಳಿಗೆ ಬದ್ಧರಾಗಿರಿ. ಅಲ್ಲಾಹನು ನಿಮಗೆ ಕಲಿಸಿ ಕೊಡುತ್ತಾನೆ. ಅಲ್ಲಾಹನು ಸರ್ವಜ್ಞನಾಗಿರುವನು.
ಇನ್ನು ನೀವು ಪ್ರಯಾಣದಲ್ಲಿದ್ದು ಬರಹಗಾರ ಸಿಗದೆ ಇದ್ದಲ್ಲಿ ಒತ್ತೆಯಿಟ್ಟುಕೊಳ್ಳಿ. ಹಾಗೆ ವಿಶ್ವಾಸದಿಂದ ಒತ್ತೆ ಇಟ್ಟರೆ ಅದನ್ನು ಪಡಕೊಂಡವನು ವಿಶ್ವಾಸ ನಿಷ್ಠೆ ತೋರಬೇಕು. ತನ್ನ ರಕ್ಷಕನಾದ ಅಲ್ಲಾಹನನ್ನು ಭಯಪಡಬೇಕು. ಸಾಕ್ಷ್ಯವನ್ನು ಮುಚ್ಚಿಡ ಬಾರದು. ಮುಚ್ಚಿಡುವವನ ಮನಸ್ಸು ಪಾಪ ಕಲುಷಿತ. ನಿಮ್ಮ ವರ್ತನೆಗಳನ್ನೆಲ್ಲ ಅಲ್ಲಾಹನು ಚೆನ್ನಾಗಿ ಬಲ್ಲವನು.
ಆಕಾಶಗಳು ಮತ್ತು ಭೂಮಿಯಲ್ಲಿರುವುದೆಲ್ಲ ಅಲ್ಲಾಹನದು. ನಿಮ್ಮ ಅಂತರಂಗದಲ್ಲಿರುವುದನ್ನು ನೀವು ಬಹಿರಂಗಗೊಳಿಸಿದರೂ ಗುಪ್ತವಾಗಿಟ್ಟರೂ ಅಲ್ಲಾಹನು ವಿಚಾರಣೆ ಮಾಡಿಯೇ ಮಾಡುತ್ತಾನೆ. ಅನಂತರ ಅವನು ತಾನಿಚ್ಛಿಸುವವರಿಗೆ ಕ್ಷಮಿಸುವನು. ತಾನಿಚ್ಛಿಸಿದವರನ್ನು ಶಿಕ್ಷಿಸುವನು. ಅಲ್ಲಾಹನು ಸರ್ವ ಸಮರ್ಥನು.
ರಸೂಲರು ತನ್ನ ಪ್ರಭುವಿನಿಂದ ತನಗೆ ಅವತೀರ್ಣ ಗೊಳಿಸಲ್ಪಟ್ಟುದರಲ್ಲಿ ವಿಶ್ವಾಸ ಹೊಂದಿರುತ್ತಾರೆ. ಸತ್ಯವಿಶ್ವಾಸಿಗಳೂ ಕೂಡಾ. ಅವರೆಲ್ಲರೂ ಅಲ್ಲಾಹ್, ಆತನ ಮಲಾಇಕತ್, ಆತನ ಗ್ರಂಥಗಳು ಹಾಗೂ ಆತನ ಪ್ರವಾದಿಗಳಲ್ಲಿ ವಿಶ್ವಾಸವಿರಿಸುತ್ತಾರೆ. “ಪ್ರವಾದಿಗಳ ಮಧ್ಯೆ ನಾವು ತಾರತಮ್ಯ ತೋರಲಾರೆವು. ನಾವು ಆಲಿಸಿದೆವು, ಅನುಸರಿಸಿದೆವು. ನಮ್ಮ ಒಡೆಯನೇ! ತಮಗೆ ದೋಷಮುಕ್ತಿ ನೀಡು. ನಮ್ಮ ನಿರ್ಗಮನ ನಿನ್ನ ಕಡೆಗೇ” ಎಂದೆನ್ನುತ್ತಾರೆ .
ಅಲ್ಲಾಹನು ಯಾರ ಮೇಲೂ ಅವನ ತಾಕತ್ತಿಗೆ ಮೀರಿದ ಹೊಣೆ ಒಪ್ಪಿಸುವುದಿಲ್ಲ. ಪ್ರತಿ ದೇಹಕ್ಕೂ ತಾನು ಮಾಡಿದ್ದಕ್ಕೆ ಸತ್ಫಲವಿದೆ. ಅದು ಎಸಗಿದ್ದಕ್ಕೆ ದುಷ್ಫಲವೂ ಇದೆ. ನಮ್ಮೊಡೆಯನೇ! ನಮ್ಮ ಮರೆವು ಅಥವಾ ಪ್ರಮಾದದಿಂದ ಸಂಭವಿಸುವ ತಪ್ಪುಗಳಿಗೆ ನಮ್ಮನ್ನು ಶಿಕ್ಷಿಸದಿರು. ನಮ್ಮ ನಾಥನೇ! ಪೂರ್ವಿಕರ ಮೇಲೆ ಹೊರಿಸಿದಂತಹ ಹೊರೆಯನ್ನು ನಮಗೆ ಹೊರಿಸದಿರು. ನಮ್ಮ ಯಜಮಾನನೇ, ನಮಗೆ ಅಸಾಧ್ಯವಾದುದನ್ನು ನಮಗೆ ಹೊರಿಸದಿರು. ನಮಗೆ ಮಾಫಿ ನೀಡು. ನಮಗೆ ಕ್ಷಮಿಸು! ನಮಗೆ ದಯೆ ತೋರು . ನೀನೇ ನಮ್ಮ ಯಜಮಾನ. ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ನೆರವಾಗು!