ಇದೊಂದು ಮಹತ್ತರ ಅಧ್ಯಾಯ, ಇದನ್ನು ನಾವು ಅವತೀರ್ಣಗೊಳಿಸಿದ್ದೇವೆ, ಇದರ ವಿಧಿ ನಿಯಮಗಳನ್ನು ಕಡ್ಡಾಯಗೊಳಿಸಿದ್ದೇವೆ. ನೀವು ಯೋಚಿಸಲಿಕ್ಕಾಗಿ, ಇದರಲ್ಲಿ ನಾವು ಸುಸ್ಪಷ್ಟವಾದ ವಿವಿಧ ಆದೇಶಗಳನ್ನು ಅವತೀರ್ಣಗೊಳಿಸಿದ್ದೇವೆ.
ವ್ಯಭಿಚಾರಿ ಮತ್ತು ವ್ಯಭಿಚಾರಿಣಿ ಇವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ನೂರು ಛಡಿಯೇಟು ಕೊಡಿರಿ. ನೀವು ಅಲ್ಲಾಹು ಹಾಗೂ ಅಂತಿಮ ದಿವಸದಲ್ಲಿ ವಿಶ್ವಾಸವುಳ್ಳವರಾಗಿದ್ದರೆ ಅಲ್ಲಾಹನ ಕಾನೂನು ಕ್ರಮ ಕೈಗೊಳ್ಳುವ ವಿಷಯದಲ್ಲಿ ಅವರಿಬ್ಬರಲ್ಲಿ ಯಾವುದೇ ಕನಿಕರವು ನಿಮ್ಮನ್ನು ತಡೆಹಿಡಿಯದಿರಲಿ. ಅವರಿಗೆ ಶಿಕ್ಷೆ ಕೊಡುವಾಗ ಸತ್ಯವಿಶ್ವಾಸಿಗಳ ಒಂದು ಸಮೂಹ ಉಪಸ್ಥಿತವಿರಲಿ.
ವ್ಯಭಿಚಾರಿಯು ವ್ಯಭಿಚಾರಿಣಿಯನ್ನೋ ಅಥವಾ ಬಹುದೇವ ವಿಶ್ವಾಸಿನಿಯನ್ನೋ ಹೊರತು ವಿವಾಹವಾಗಲಾರನು. ವ್ಯಭಿಚಾರಿಣಿಯನ್ನು ವ್ಯಭಿಚಾರಿ ಅಥವಾ ಬಹುದೈವ ವಿಶ್ವಾಸಿಯ ಹೊರತು ವಿವಾಹವಾಗಲಾರನು. ಇದನ್ನು ಸತ್ಯ ವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ .
ಶೀಲವತಿಯರ ಮೇಲೆ ಹಾದರದ ಆರೋಪ ಹೊರಿಸಿ, ಆ ಬಳಿಕ ನಾಲ್ವರು ಸಾಕ್ಷಿದಾರರನ್ನು ತರದವರಿಗೆ ಎಂಬತ್ತು ಛಡಿಯೇಟು ಕೊಡಿರಿ. ಅವರ ಸಾಕ್ಷ್ಯವನ್ನು ಎಂದಿಗೂ ಸ್ವೀಕರಿಸಬೇಡಿರಿ. ಅವರೇ ಅಧರ್ಮಿಗಳು.
ಅದರ ಬಳಿಕ ಪಶ್ಚಾತ್ತಾಪಪಟ್ಟು ತಮ್ಮ ಬದುಕನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಪರಮ ದಯಾನಿಧಿಯೂ ಆಗಿರುತ್ತಾನೆ.
ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು, ತಮ್ಮ ಬಳಿ ಸ್ವಯಂ ತಾವಲ್ಲದೆ ಬೇರೆ ಯಾರೂ ಸಾಕ್ಷಿದಾರರಿಲ್ಲದಿದ್ದರೆ (ಶಿಕ್ಷೆಯಿಂದ ಪಾರಾಗಬೇಕಾದರೆ) ಅವರಲ್ಲಿ ಪ್ರತಿಯೊಬ್ಬನು ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ತಾನು ದೋಷಾ ರೋಪದಲ್ಲಿ ಸತ್ಯವಂತನೆಂದು ಸಾಕ್ಷ್ಯ ಹೇಳಬೇಕು.
ಐದನೇ ಬಾರಿ, `ತಾನು ಸುಳ್ಳಾರೋಪಿಯಾಗಿದ್ದರೆ ತನ್ನ ಮೇಲೆ ಅಲ್ಲಾಹನ ಶಾಪವಿರಲಿ’ ಎನ್ನಬೇಕು.
ಆಕೆ ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ಈತನು ಸುಳ್ಳಾರೋಪಿಯೆಂದು ಸಾಕ್ಷ್ಯ ಹೇಳಿದರೆ ವ್ಯಭಿಚಾರದ ಶಿಕ್ಷೆಯನ್ನು ಅದು ಆಕೆಯಿಂದ ಪಾರು ಗೊಳಿಸುವುದು.
ಐದನೇ ಬಾರಿ, `ಆತನು ಸತ್ಯವಂತನಾಗಿದ್ದರೆ ನನ್ನ ಮೇಲೆ ಅಲ್ಲಾಹನ ಕ್ರೋಧವೆರಗಲಿ’ ಎಂದು ಆಕೆ ಹೇಳಬೇಕು.
ಅಲ್ಲಾಹನ ಔದಾರ್ಯವೂ ಅವನ ಕೃಪೆಯೂ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ ಯುಕ್ತಿಪೂರ್ಣನೂ ಆಗಿರದಿರುತ್ತಿದ್ದರೆ (ಅವನು ನಿಜಸ್ಥಿತಿಯನ್ನು ಬಹಿರಂಗಗೊಳಿಸುತ್ತಿದ್ದನು ಮತ್ತು ತಪ್ಪಿತಸ್ಥರನ್ನು ತ್ವರಿತವಾಗಿ ಶಿಕ್ಷಿಸುತ್ತಿದ್ದನು.)
ಈ ಸುಳ್ಳಾರೋಪವನ್ನು ತಂದವರು ನಿಮ್ಮಿಂದಲೇ ಇರುವ ಒಂದು ಸಂಘದವರು. (ಆಯಿಶಾರ ಕುಟುಂಬವೇ!) ಇದು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸಬೇಡಿ. ಅಲ್ಲ, ಇದು ನಿಮಗೆ ಹಿತಕರವಾಗಿದೆ. ಅವರಲ್ಲಿ ಪ್ರತಿಯೊಬ್ಬನು ತಾನೆಸಗಿದ ತಪ್ಪಿಗೆ ಶಿಕ್ಷೆ ಅನುಭವಿಸುವನು. ಅವರಲ್ಲಿ ಇದರ ನಾಯಕತ್ವ ವಹಿಸಿಕೊಂಡವನಾರೋ, ಆತನಿಗೆ ಉಗ್ರ ಶಿಕ್ಷೆಯುಂಟು.
ನೀವು ಅದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತ್ರೀ- ಪುರುಷರು ತಮ್ಮ ಬಗ್ಗೆ ಪರಸ್ಪರ ಸದ್ಭಾವನೆಯ ನ್ನೇಕೆ ಇರಿಸಲಿಲ್ಲ ಮತ್ತು ಇದು ಅಪ್ಪಟ ಸುಳ್ಳಾರೋಪವೆಂದು ಏಕೆ ಹೇಳಲಿಲ್ಲ .
ಅವರು (ಆರೋಪ ಹೊರಿಸಿದವರು) ನಾಲ್ಕು ಸಾಕ್ಷಿ ದಾರರನ್ನೇಕೆ ತರಲಿಲ್ಲ? ಆದರೆ ಅವರು ಸಾಕ್ಷಿಗಳನ್ನು ತಾರದಿರುವುದರಿಂದ ಅಲ್ಲಾಹನ ಬಳಿ ಅವರೇ ಸುಳ್ಳುಗಾರರು.
ಇಹಲೋಕ ಮತ್ತು ಪರಲೋಕದಲ್ಲಿ ನಿಮ್ಮ ಮೇಲೆ ಅಲ್ಲಾಹನ ಔದಾರ್ಯವೂ ಕೃಪೆಯೂ ಇಲ್ಲದಿರುತ್ತಿ ದ್ದರೆ, ನೀವು ಹರಿಯಬಿಟ್ಟ ಸುಳ್ಳು ವದಂತಿಯ ಫಲವಾಗಿ ಭಯಂಕರ ಶಿಕ್ಷೆ ನಿಮಗೆ ತಟ್ಟುತ್ತಿತ್ತು.
ನೀವದನ್ನು ನಾಲಗೆಯಿಂದ ನಾಲಗೆಗೆ ಸಾಗಿ ಸುತ್ತ ನಿಮಗೆ ಯಾವುದೇ ಅರಿವಿಲ್ಲದ ವಿಷಯ ವನ್ನು ನಿಮ್ಮ ಬಾಯಿಯಿಂದ ಹೇಳುತ್ತಿದ್ದಾಗ (ಶಿಕ್ಷೆ ಎರಗುತ್ತಿತ್ತು). ಅದನ್ನು ಒಂದು ಕ್ಷುಲ್ಲಕ ವಿಷಯವೆಂದು ನೀವು ಭಾವಿಸುತ್ತಿದ್ದೀರಿ. ಆದರೆ ಅದು ಅಲ್ಲಾಹನ ಬಳಿ ಅತ್ಯಂತ ಗಂಭೀರ ವಿಷಯವಾಗಿತ್ತು.
ನೀವು ಅದನ್ನು ಕೇಳಿದಾಗ, “ನಾವು ಹೀಗೆ ಮಾತಾ ಡಿಕೊಳ್ಳುವುದು ನಮಗೆ ಭೂಷಣವಲ್ಲ. (ಓ ಅಲ್ಲಾಹ್) ನೀನು ಪರಮ ಪಾವನನು. ಇದೊಂದು ಗಂಭೀರ ಅಪವಾದವಾಗಿದೆ” ಎಂದೇಕೆ ಹೇಳಲಿಲ್ಲ?
ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇಂತಹ ಕೆಲಸ ಇನ್ನೆಂದೂ ಮಾಡಬೇಡಿರಿ ಎಂದು ಅಲ್ಲಾಹನು ನಿಮಗೆ ಉಪದೇಶ ಕೊಡುತ್ತಾನೆ.
ಅಲ್ಲಾಹು ನಿಮಗೆ ಆದೇಶಗಳನ್ನು ಸ್ಪಷ್ಟವಾಗಿ ವಿವರಿಸಿ ಕೊಡುತ್ತಾನೆ. ಅವನು ಸರ್ವಜ್ಞನೂ ಯುಕ್ತಿ ಪೂರ್ಣನು ಆಗಿರುತ್ತಾನೆ.
ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲತೆ ಹರಡು ವುದನ್ನು ಇಷ್ಟಪಡುವವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ವೇದನಾಯುಕ್ತ ಶಿಕ್ಷೆಯುಂಟ. ಅಲ್ಲಾಹು ಬಲ್ಲವನು; ನೀವು ಬಲ್ಲವರಲ್ಲ.
ಅಲ್ಲಾಹನ ಔದಾರ್ಯ ಮತ್ತು ಅವನ ಕೃಪೆ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹನು ಮಹಾವತ್ಸಲನೂ ದಯಾನಿಧಿಯೂ ಅಗಿಲ್ಲದಿರುತ್ತಿದ್ದರೆ (ಅವನು ನಿಮಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು.)
ಸತ್ಯವಿಶ್ವಾಸಿಗಳೇ, ಶೈತಾನನ ಹೆಜ್ಜೆ ಗುರುತು ಗಳನ್ನು ಅನುಸರಿಸಬೇಡಿರಿ. ಯಾರು ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾರೆ, ಅವನು ಆತನಿಗೆ ನೀಚ ವೃತ್ತಿ ಹಾಗೂ ದುರಾ ಚಾರದ ಆಜ್ಞೆಯನ್ನೇ ಕೊಡುವನು . ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ಕೃಪೆಯಿಲ್ಲದಿರುತ್ತಿದ್ದರೆ, ನಿಮ್ಮ ಪೈಕಿ ಒಬ್ಬನೂ ಯಾವತ್ತೂ ಪರಿಶುದ್ಧನಾಗಲಾರ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಪರಿಶುದ್ಧಗೊಳಿ ಸುತ್ತಾನೆ. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.
ನಿಮ್ಮಲ್ಲಿ ಶ್ರೇಷ್ಟರು ಮತ್ತು ಆರ್ಥಿಕ ಸಾಮಥ್ರ್ಯ ವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ (ಸ್ವದೇಶದಿಂದ) ಪಲಾಯನ ಮಾಡುವವರಿಗೂ ಧನಸಹಾಯ ಮಾಡುವುದಿಲ್ಲವೆಂದು (ಏನನ್ನೂ ಕೊಡಲಾರೆನೆಂದು) ಪ್ರತಿಜ್ಞೆ ಮಾಡಬಾರದು. ಅವರು ಮಾಫಿ ಕೊಡಲಿ, ರಿಯಾಯಿತಿ ತೋರಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹನು, ಅತ್ಯಂತ ಕ್ಷಮಾಶೀಲನೂ ಕೃಪಾ ನಿಧಿಯೂ ಆಗಿರುತ್ತಾನೆ.
ನೀಚ ವೃತ್ತಿಗಳಿಂದ ಅಶೃದ್ಧರಾದ ಪತಿವ್ರತ ಸತ್ಯ ವಿಶ್ವಾಸಿನಿಯರ ಮೇಲೆ ಹಾದರದ ಆರೋಪ ಹೊರಿಸುವವರನ್ನು ಈ ಲೋಕದಲ್ಲೂ ಪರಲೋಕದಲ್ಲೂ ಶಪಿಸಲಾಗಿದೆ. ಖಂಡಿತ ಅವರಿಗಾಗಿ ಭಯಂಕರ ಶಿಕ್ಷೆ ಇದೆ .
ಅವರು ತಮ್ಮ ಕೃತ್ಯಗಳ ಬಗ್ಗೆ ತಮ್ಮ ನಾಲಗೆಗಳೂ ಕೈಕಾಲುಗಳೂ ಸಾಕ್ಷ್ಯ ಹೇಳಲಿರುವ ದಿನವದು.
ಅಂದು ಅಲ್ಲಾಹನು, ಅವರಿಗೆ ನ್ಯಾಯಯುಕ್ತ ಪ್ರತಿಫಲವನ್ನು ಸಂಪೂರ್ಣವಾಗಿ ಕೊಡುವನು. ಅಲ್ಲಾಹನೇ ಸ್ಪಷ್ಟವಾದ ಪರಮಸತ್ಯನು (ನೀತಿ ಪಾಲಕನು) ಎಂಬುದು ಅವರಿಗೆ ತಿಳಿಯುವುದು.
ನಡತೆಗೆಟ್ಟ ಸ್ತ್ರೀಯರು ನಡತೆಗೆಟ್ಟ ಪುರುಷರಿಗೂ, ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತ್ರೀಯರಿಗೂ ಅನುಯೋಜ್ಯರು. ಗುಣವಂತೆ ಸ್ತ್ರೀಯರು ಗುಣವಂತ ಪುರುಷರಿಗೂ, ಗುಣವಂತ ಪುರುಷರು ಗುಣವಂತೆ ಸ್ತ್ರೀಯರಿಗೂ ಅನುಯೋಜ್ಯರು. ಇವರು ಆಡುತ್ತಿರುವ ಮಾತುಗಳಿಂದ ಅವರು ಮುಕ್ತರು. ಅವರಿಗೆ ಪಾಪ ಮುಕ್ತಿಯೂ ಸನ್ಮಾನ್ಯ ಜೀವನಾಧಾರವೂ ಇದೆ.
ಸತ್ಯವಿಶ್ವಾಸಿಗಳೇ, ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಇದೇ ನಿಮಗೆ ಉತ್ತಮ. ನಿಮಗೆ ನೆನಪಿಸಲಿಕ್ಕಾಗಿ ಇದನ್ನು ಅವತೀರ್ಣಗೊಳಿಸಲಾಗಿದೆ.
ಇನ್ನು (ಒಪ್ಪಿಗೆ ನೀಡಲು) ಅಲ್ಲಿ ಯಾರೂ ಕಾಣಿ ಸದಿದ್ದರೆ ನಿಮಗೆ ಅನುಮತಿ ಸಿಗುವವರೆಗೂ ಅದರೊಳಗೆ ಪ್ರವೇಶಿಸಬೇಡಿರಿ. ಮರಳಿ ಹೋಗಿರೆಂದು ನಿಮ್ಮೊಡನೆ ಹೇಳಲಾದರೆ ಮರಳಿರಿ. ಇದು ನಿಮ್ಮ ಪಾಲಿಗೆ ಹೆಚ್ಚು ಪರಿಶುದ್ಧವಾದ ಕ್ರಮ. ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ತಿಳಿದಿರುತ್ತಾನೆ.
ನಿಮಗೆ (ವಿಶ್ರಾಂತಿಯಂಥ ಏನಾದರೂ) ಉಪಯೋಗಕ್ಕಾಗಿ ಜನವಾಸವಿಲ್ಲದ ಮನೆಗಳಿಗೆ ಪ್ರವೇಶಿಸುವುದರಲ್ಲಿ ಅಡ್ಡಿಯಿಲ್ಲ. ನೀವು ಪ್ರಕಟಗೊಳಿಸುವುದನ್ನೂ ಬಚ್ಚಿಡುವುದನ್ನೂ ಅಲ್ಲಾಹು ಅರಿಯುವನು.
(ಪೈಗಂಬರರೇ,) ಸತ್ಯವಿಶ್ವಾಸಿಗಳಿಗೆ ಹೇಳಿರಿ; ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ. ಇದು ಅವರಿಗೆ ಹೆಚ್ಚು ಪರಿಶುದ್ಧವಾದ ಕ್ರಮ! ಅಲ್ಲಾಹನು ಅವರು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮ ಜ್ಞಾನಿಯು.
(ಪೈಗಂಬರರೇ,) ಸತ್ಯವಿಶ್ವಾಸಿನಿಯರಿಗೆ ಹೇಳಿರಿ. ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ. ತಮ್ಮ ಸೌಂದರ್ಯದಿಂದ ಪ್ರಕಟವಾಗುವ ಭಾಗ ವನ್ನು ಹೊರತುಪಡಿಸಿ ತೋರಿಸದಿರಲಿ. ತಮ್ಮ ಎದೆಯ ಮೇಲೆ ತಮ್ಮ ಮುಖ ಪರದೆಯನ್ನು ಎಳೆದು ಹಾಕಲಿ . ಪತಿಯರು, ತಂದೆಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, ತಮ್ಮ ದಾಸಿಯರು, ಯಾವುದೇ ಲೈಂಗಿಕ ಮೋಹ ವಿಲ್ಲದ ಅಧೀನ ಸೇವಕರು ಮತ್ತು ಇನ್ನೂ ಸ್ತ್ರೀಯರ ಗೋಪ್ಯತೆಯ ಬಗ್ಗೆ ಅರಿಯುವ ಪ್ರಾಯ ವಾಗದ ಮಕ್ಕಳು, ಇವಿಷ್ಟು ಜನರನ್ನು ಹೊರತು ಪಡಿಸಿ ಇನ್ನಾರಿಗೂ ತಮ್ಮ ಸೌಂದರ್ಯವನ್ನು ತೋರ್ಪಡಿಸದಿರಲಿ. ಅವರು, ತಾವು ಮುಚ್ಚಿಟ್ಟ ಅಲಂಕಾರವನ್ನು ತಿಳಿಯುವಂತೆ ತಮ್ಮ ಪಾದಗಳನ್ನು ಬಡಿದು ನಡೆಯದಿರಲಿ. ಸತ್ಯ ವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ನಿಮಗೆ ಯಶಸ್ಸು ಪ್ರಾಪ್ತವಾದೀತು.
ನಿಮ್ಮಲ್ಲಿ ಎಣೆಗಳಿಲ್ಲದ ಒಂಟಿಯಾಗಿರುವ ಸ್ತ್ರೀ- ಪುರುಷರಿಗೂ ಮತ್ತು ನಿಮ್ಮ ದಾಸ-ದಾಸಿ ಯರಲ್ಲಿ ಸಜ್ಜನರಾಗಿರುವವರಿಗೂ ವಿವಾಹ ಮಾಡಿಕೊಡಿರಿ. ಅವರು ಬಡವರಾಗಿದ್ದರೆ ಅಲ್ಲಾ ಹನು ತನ್ನ ಔದಾರ್ಯದಿಂದ ಅವರನ್ನು ಶ್ರೀಮಂತ ಗೊಳಿಸುವನು. ಅಲ್ಲಾಹನು ಅತಿ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.
ವಿವಾಹಾನುಕೂಲತೆ ಒದಗದವರು ಅಲ್ಲಾಹನು ತನ್ನ ಔದಾರ್ಯದಿಂದ ಅವರನ್ನು ಶ್ರೀಮಂತ ಗೊಳಿಸುವವರೆಗೂ ಚಾರಿತ್ರ್ಯವನ್ನು ಕಾಯ್ದು ಕೊಳ್ಳಲಿ. ನಿಮ್ಮ ಗುಲಾಮರ ಪೈಕಿ ಮುಕ್ತಿ ಕರಾರಿಗಾಗಿ ನಿವೇದಿಸಿ ಕೊಳ್ಳುವವರಿಗೆ, ಅವರಲ್ಲಿ ಒಳಿತಿದೆ ಎಂದು ನಿಮಗೆ ತಿಳಿದು ಬಂದರೆ ಮುಕ್ತಿ ಕರಾರು ಬರೆದುಕೊಡಿರಿ. ಅಲ್ಲಾಹನು ನಿಮಗೆ ಕೊಟ್ಟಿರುವ ಸಂಪತ್ತಿನಿಂದ ಅವರಿಗೆ ಕೊಡಿರಿ. ನಿಮ್ಮ ದಾಸಿಯರು ಸ್ವತಃ ಚಾರಿತ್ರ್ಯ ಶುದ್ಧಿಯನ್ನು ಬಯಸುವಾಗ ಲೌಕಿಕ ಲಾಭವನ್ನು ಗಳಿಸಲಿಕ್ಕಾಗಿ ಅವರನ್ನು ವೇಶ್ಯಾವೃತ್ತಿಗೆ ಬಲಾತ್ಕರಿಸ ಬೇಡಿರಿ. ಅವರನ್ನು ಯಾರಾದರೂ ಬಲಾತ್ಕರಿಸಿದರೆ ಈ ಬಲಾತ್ಕಾರದ ನಂತರ ಖಂಡಿತ ಅಲ್ಲಾಹನು, ಕ್ಷಮಾದಾನಿಯೂ ದಯಾನಿಧಿಯೂ ಆಗಿರುತ್ತಾನೆ.
ಸುಸ್ಪಷ್ಟವಾದ ಸೂಕ್ತಗಳನ್ನೂ ನಿಮಗಿಂತ ಮುಂಚೆ ಗತಿಸಿದ ಜನಾಂಗಗಳ ಕೆಲವು ಅದ್ಭುತ ದೃಷ್ಟಾಂತಗಳನ್ನೂ ದೇವ ಭಯವಿರಿಸಿಕೊಳ್ಳು ವವರಿಗೆ ಉಪದೇಶವನ್ನೂ ನಾವು ನಿಮಗೆ ಇಳಿಸಿ ಕೊಟ್ಟಿದ್ದೇವೆ.
ಅಲ್ಲಾಹನು ಭೂಮಿ-ಆಕಾಶಗಳ ಪ್ರಕಾಶದಾತ ನಾಗಿರುವನು. (ಸತ್ಯವಿಶ್ವಾಸಿಗಳ ಹೃದಯದಲ್ಲಿ) ಅವನು ಹಚ್ಚಿದ ಪ್ರಕಾಶದ ಉಪಮೆ ಒಂದು ಗೋಡೆ ಗೂಡಿನಂತಿದೆ. ಅದರಲ್ಲಿ ಒಂದು ದೀಪ ವಿದೆ. ದೀಪವು ಒಂದು ಗಾಜಿನೊಳಗಿದೆ. ಗಾಜು ಮುತ್ತಿನಂತೆ ಹೊಳೆಯುವ ತಾರೆಯಂತಿದೆ. ಪೂರ್ವದಲ್ಲಾಗಲಿ ಪಶ್ಚಿಮದಲ್ಲಾಗಲಿ ಬೆಳೆಯದ (ಹೆಚ್ಚು ಉಷ್ಣವೋ ತಂಪೋ ತಾಗದ ಮದ್ಯಮ ವಾತಾವರಣದ ಪ್ರದೇಶದಲ್ಲಿರುವ) ಅನುಗ್ರಹೀತ ಇಪ್ಪೆಯ ಒಂದು ಮರದ ಎಣ್ಣೆಯಿಂದ ಅದನ್ನು ಬೆಳಗಿಸಲಾಗುತ್ತದೆ. ಅದರ ಎಣ್ಣೆಗೆ ಬೆಂಕಿ ತಾಗದಿದ್ದರೂ ಅದು ತಾನಾಗಿಯೇ ಪ್ರಜ್ವಲಿಸುತ್ತದೆ. ಹೀಗೆ ಪ್ರಕಾಶದ ಮೇಲೆ ಪ್ರಕಾಶ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ (ಸತ್ಯದೆಡೆಗೆ) ಒಯ್ಯುತ್ತಾನೆ. ಅವನು ಜನರಿಗೆ ಉಪಮೆಗಳನ್ನು ವಿವರಿಸಿ ಕೊಡುತ್ತಾನೆ. ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲವನು.
ಉನ್ನತಗೊಳಿಸಲು ಹಾಗೂ ಅವುಗಳಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಅನುಮತಿ ನೀಡಿರುವಂತಹ ಕೆಲವು ಭವನಗಳಲ್ಲಿ (ಮಸೀದಿಗಳಲ್ಲಿ) ಬೆಳಗು ಬೈಗುಗಳಲ್ಲಿ ಕೆಲವು ಪುರುಷರು ಅವನ ಪವಿತ್ರ ಕೀರ್ತನೆ ಮಾಡುತ್ತಿರುವರು . ವ್ಯಾಪಾರ ಮತ್ತು ಕ್ರಯ ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝಿನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅವರನ್ನು ತಡೆಯುವುದಿಲ್ಲ. ಹೃದಯಗಳು ಮತ್ತು ದೃಷ್ಟಿಗಳು ಪಲ್ಲಟಗೊಳ್ಳುವ ಆ ಒಂದು ದಿನವನ್ನು ಅವರು ಭಯಪಡುತ್ತಿರುವರು.
ಅಲ್ಲಾಹನು ಅವರ ಉತ್ತಮ ಕರ್ಮದ ಫಲಗಳನ್ನು ಅವರಿಗೆ ಕೊಡಲಿಕ್ಕಾಗಿ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚಿಸಲಿಕ್ಕಾಗಿ ಅವರು ಹೀಗೆ ಮಾಡುತ್ತಾರೆ. ಅಲ್ಲಾಹು ತಾನಿಚ್ಚಿಸಿದವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ .
ಸತ್ಯನಿಷೇಧವನ್ನು ಕೈಗೊಂಡವರ ಕರ್ಮಗಳು ನಿರ್ಜಲ ಮರುಭೂಮಿಯಲ್ಲಿರುವ ಮರೀಚಿಕೆ ಯಂತಿದೆ. ಅದನ್ನು ಬಾಯಾರಿದವನು ನೀರೆಂದು ಭ್ರಮಿಸುವನು. ಆದರೆ ಅಲ್ಲಿಗೆ ತಲುಪಿದಾಗ ಅಲ್ಲೇನನ್ನೂ ಕಾಣುವುದಿಲ್ಲ. ಸತ್ಯನಿಷೇಧಿಯು ತನ್ನ ಕರ್ಮಗಳ ಬಳಿ ಅಲ್ಲಾಹನನ್ನು ಕಂಡನು. ಆಗ ಅಲ್ಲಾಹನು ಅದರ ಲೆಕ್ಕವನ್ನು ಸಂಪೂರ್ಣ ವಾಗಿ (ಇಹದಲ್ಲೇ) ತೀರಿಸಿದನು. ಅಲ್ಲಾಹನು, ಅತಿ ಶೀಘ್ರ ಲೆಕ್ಕಿಗನು.
ಅಥವಾ ಅವರ ಕರ್ಮಗಳು ಒಂದು ಆಳವಾದ ಸಾಗರದಲ್ಲಿ ಅಂಧಕಾರದಂತಿದೆ. ಮೇಲೊಂದು ತೆರೆ ಆವರಿಸಿದೆ. ಅದರ ಮೇಲೆ ಇನ್ನೊಂದು ತೆರೆಯಿದ್ದು ಅದರ ಮೇಲೆ ಮೋಡ ಆವರಿಸಿಕೊಂಡಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಮನುಷ್ಯನು ತನ್ನ ಕೈಯನ್ನು ಹೊರ ಚಾಚಿದರೆ ಅದೂ ಅವನಿಗೆ ಕಾಣಿಸದು. ಅಲ್ಲಾಹನು ಯಾರಿಗೆ ಪ್ರಕಾಶವನ್ನು ಸ್ಥಾಪಿಸಲಿಲ್ಲವೋ ಅವನಿಗೆ ಬೇರಾವ ಪ್ರಕಾಶವೂ ಇಲ್ಲ.
ಭೂಮಿ-ಆಕಾಶಗಳಲ್ಲಿ ಇರುವವರು, ವಾಯು ಮಂಡಲದಲ್ಲಿ ರೆಕ್ಕೆಬಿಚ್ಚಿ ಹಾರುತ್ತಿರುವ ಹಕ್ಕಿಗಳೂ ಅಲ್ಲಾಹನ ಪ್ರಕೀರ್ತನೆ ಮಾಡುತ್ತಿರುವುದನ್ನು ನೀವು ನೋಡುತ್ತಿಲ್ಲವೇ? ಎಲ್ಲವೂ ತನ್ನ ಪ್ರಾರ್ಥನೆ ಮತ್ತು ಕೀರ್ತನೆಯನ್ನು ಅರಿತಿದೆ. ಅವರು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲವನು.
ಭೂಮಿ-ಆಕಾಶಗಳ ಆದಿಪತ್ಯವು ಅಲ್ಲಾಹನದ್ದು. ಅವನ ಕಡೆಗೆ ನಿರ್ಗಮನವಿದೆ.
ಅಲ್ಲಾಹನು ಮೋಡವನ್ನು ಮೆಲ್ಲ ಮೆಲ್ಲನೆ ಚಲಾ ಯಿಸುವುದನ್ನೂ ಅನಂತರ ಅದರ ತುಂಡು ಗಳನ್ನು ಪರಸ್ಪರ ಜೋಡಿಸುವುದನ್ನೂ ತರು ವಾಯ ಅದನ್ನು ಒತ್ತೊತ್ತಾಗಿ ರಾಶಿ ಹಾಕುವು ದನ್ನೂ ನೀವು ನೋಡುತ್ತಿಲ್ಲವೇ? ಆ ಬಳಿಕ ಅದರ ಎಡೆಯಿಂದ ಮಳೆಯು ಹನಿಯಾಗಿ ಬೀಳುತ್ತಿರು ವುದನ್ನು ನೀವು ನೋಡುತ್ತೀರಿ. ಅವನು ಆಕಾಶ ದಿಂದ ಅಂದರೆ ಅದರಲ್ಲಿರುವ ಮೇಘ ಪರ್ವತ ಗಳಿಂದ ಆಲಿಕಲ್ಲುಗಳನ್ನು ಬೀಳಿಸುತ್ತಾನೆ. ಅದರಿಂದ ತಾನಿಚ್ಚಿಸುವವರಿಗೆ ಮುಟ್ಟಿಸುತ್ತಾನೆ. ಮತ್ತು ತಾನಿಚ್ಚಿಸುವವರಿಂದ ಅದನ್ನು ತಪ್ಪಿಸು ತ್ತಾನೆ. ಅದರ ಮಿಂಚಿನ ಹೊಳಪು ಕಣ್ಣುಗಳನ್ನು ಕೋರೈಸಿ ಬಿಡುತ್ತದೆ.
ಅಲ್ಲಾಹು ರಾತ್ರಿ ಹಗಲುಗಳ ಪರಿವರ್ತನೆಯನ್ನು ಮಾಡುತ್ತಿರುತ್ತಾನೆ. ಇದರಲ್ಲಿ ಯೋಚಿಸುವವರಿಗೆ ಖಂಡಿತ ಪಾಠವಿದೆ.
ಅಲ್ಲಾಹನು ಪ್ರತಿಯೊಂದು ಜೀವಿಯನ್ನು ನೀರಿ ನಿಂದ ಸೃಷ್ಟಿಸಿದನು. ಆ ಪೈಕಿ ಕೆಲವು ಹೊಟ್ಟೆಯ ಮೇಲೆ ಎಳೆದು ನಡೆದರೆ, ಇನ್ನು ಕೆಲವು ಎರಡು ಕಾಲುಗಳ ಮೇಲೂ ಮತ್ತೆ ಕೆಲವು ನಾಲ್ಕು ಕಾಲುಗಳ ಮೇಲೂ ನಡೆಯುತ್ತವೆ. ಅವನು ತಾನಿಚ್ಚಿಸಿ ದ್ದನ್ನು ಸೃಷ್ಟಿಸುತ್ತಾನೆ. ನಿಜಕ್ಕೂ ಅಲ್ಲಾಹನು ಸರ್ವ ವಸ್ತುಗಳ ಮೇಲೆ ಸಾಮಥ್ರ್ಯವುಳ್ಳವನು .
ಸತ್ಯವನ್ನು ವ್ಯಕ್ತವಾಗಿ ತಿಳಿಸುವ ಸೂಕ್ತಗಳನ್ನು ನಾವು ಅವತೀರ್ಣಗೊಳಿಸಿದ್ದೇವೆ. ಅಲ್ಲಾಹನು ನೇರ ಮಾರ್ಗದ ಕಡೆಗೆ ತಾನಿಚ್ಛಿಸಿದವರನ್ನು ಸೇರಿಸುತ್ತಾನೆ.
‘ನಾವು ಅಲ್ಲಾಹು ಮತ್ತು ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದ್ದೇವೆ ಮತ್ತು ನಾವು ಅವರನ್ನು ಅನುಸರಿಸಿದ್ದೇವೆ’ ಎಂದು ಅವರು ಹೇಳುತ್ತಾರೆ. ಆದರೆ ಅನಂತರ ಅವರಲ್ಲೊಂದು ಪಂಗಡ ವಿಮುಖವಾಗಿ ಬಿಡುತ್ತದೆ. ಇಂಥವರು ಖಂಡಿತ ಸತ್ಯ ವಿಶ್ವಾಸಿಗಳಲ್ಲ.
ಅವರ ನಡುವೆ ತೀರ್ಪು ಕಲ್ಪಿಸಲಿಕ್ಕಾಗಿ ಅವರನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಗೆ ಕರೆಯಲಾದರೆ ಅವರಲ್ಲೊಂದು ಪಂಗಡ ಹಿಂಜರಿಯುತ್ತದೆ.
ಆದರೆ ಸತ್ಯವು ಅವರ ಪರವಾಗಿದ್ದರೆ ಅತ್ಯಂತ ವಿಧೇಯರಾಗಿ ದೂತರ ಬಳಿಗೆ ಓಡಿ ಬರುತ್ತಾರೆ.
ಅವರ ಹೃದಯಗಳಲ್ಲಿ (ಅವಿಶ್ವಾಸದ) ರೋಗ ವಿದೆಯೇ? ಅಥವಾ ಅವರು (ಪ್ರವಾದಿತ್ವದಲ್ಲಿ) ಸಂಶಯಪಟ್ಟಿರುವರೇ? ಅಥವಾ ಅಲ್ಲಾಹು ಮತ್ತು ದೇವದೂತರು ಅವರ ಮೇಲೆ ಅನ್ಯಾಯ ವೆಸಗು ವರೆಂದು ಭಯಪಡುತ್ತಿರುವರೇ? ಅದೇನೂ ಅಲ್ಲ. ವಾಸ್ತವದಲ್ಲಿ ಅವರೇ ಅಕ್ರಮಿಗಳು.
ಅವರ ನಡುವೆ ತೀರ್ಪು ಕಲ್ಪಿಸಲು ಅವರನ್ನು ಅಲ್ಲಾಹು ಮತ್ತು ರಸೂಲರ ಕಡೆಗೆ ಕರೆಯಲಾದರೆ ಸತ್ಯವಿಶ್ವಾಸಿಗಳು ‘ನಾವು ಆಲಿಸಿದೆವು ಮತ್ತು ಅನುಸರಿಸಿದೆವು’ ಎಂದು ಹೇಳುವರು. ಅವರೇ ವಿಜಯಿಗಳು.
ಯಾರು, ಅಲ್ಲಾಹು ಮತ್ತು ಅವನ ದೂತರನ್ನು ಅನುಸರಿಸುತ್ತಾರೆ, ಅಲ್ಲಾಹನನ್ನು ಭಯಪಡು ತ್ತಾರೆ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರವಿರುತ್ತಾರೆ, ಅವರೇ ವಿಜಯಿಗಳು.
(ಪೈಗಂಬರರೇ,) ತಾವು ಏನಾದರೂ ಅವರಿಗೆ ಅಪ್ಪಣೆ ಕೊಟ್ಟರೆ ನಾವು ಅದಕ್ಕಾಗಿ ಹೊರಟು ಬರು ವೆವು ಎಂದು ಕಪಟ ವಿಶ್ವಾಸಿಗಳು ಬಲವಾದ ಭಾಷೆಯಲ್ಲಿ ಅಲ್ಲಾಹನನ್ನು ಮುಂದಿರಿಸಿ, ಆಣೆ ಹಾಕುತ್ತಾರೆ. ಹೀಗೆ ಹೇಳಿರಿ; “ಆಣೆ ಹಾಕ ಬೇಡಿರಿ. ನಿಮ್ಮ ವಿಧೇಯತೆಯು ಗೊತ್ತಾದ ವಿಷಯ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞನಾಗಿದ್ದಾನೆ”.
ಹೇಳಿರಿ, ಅಲ್ಲಾಹು ಮತ್ತು ದೂತರನ್ನು ಅನು ಸರಿಸಿರಿ. ಇನ್ನು ನೀವು ವಿಮುಖರಾದರೆ ದೂತ ರಿಗೆ ಹೊರಿಸಲಾದ ಕರ್ತವ್ಯಗಳಿಗೆ ಮಾತ್ರ ಅವರು ಜವಾಬ್ದಾರರು. ಆದರೆ ನಿಮ್ಮ ಮೇಲೆ ಹೊರಿಸಲಾದ ಕರ್ತವ್ಯಗಳಿಗೆ ನೀವೇ ಜವಾಬ್ದಾರರು. ನೀವು ದೂತರನ್ನು ಅನುಸರಿಸಿದರೆ ನೀವು ಸನ್ಮಾರ್ಗ ಹೊಂದುವಿರಿ. ಸುವ್ಯಕ್ತವಾಗಿ ಆದೇಶಗಳನ್ನು ತಲುಪಿಸಿಕೊಡುವುದೇ ದೂತರ ಹೊಣೆ.
ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ಜನರಿಗೆ ಅವರಿಗಿಂತ ಮುಂಚಿನವರಿಗೆ ಪ್ರಾತಿ ನಿಧ್ಯವನ್ನು ಕಲ್ಪಿಸಿದಂತೆಯೇ ಈ ಭೂಮಿಯಲ್ಲಿ ಅವರಿಗೂ ಪ್ರಾತಿನಿಧ್ಯ ಕಲ್ಪಿಸುತ್ತೇನೆಂದೂ ತಾನು ಅವರಿಗಾಗಿ ತೃಪ್ತಿಪಟ್ಟಿರುವ ಅವರ ಧರ್ಮವನ್ನು ಬಲಿಷ್ಟವಾಗಿ ಸ್ಥಾಪಿಸುತ್ತೇನೆಂದೂ ಅವರ ಭಯದ ನಂತರ ಶಾಂತಿಯನ್ನು ಮಾರ್ಪಡಿಸಿ ಬಿಡುತ್ತೇನೆಂದೂ ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನು ಮಾತ್ರ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ, ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದರೆ ಈ ಅನುಗ್ರಹ ಲಭಿಸಿದ ಬಳಿಕ ಯಾರು ಕೃತಘ್ನರಾಗುವರೋ ಅವರೇ ಧರ್ಮಭ್ರಷ್ಟರು.
ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ದೂತರನ್ನು ಅನುಸರಿಸಿರಿ. ನಿಮ್ಮ ಮೇಲೆ ದಯೆ ಇರುವುದು.
ಸತ್ಯನಿಷೇಧಿಗಳು ಭೂಮಿಯಲ್ಲಿ ಅಲ್ಲಾಹನನ್ನು ಪರಾಜಿತಗೊಳಿಸಬಲ್ಲರೆಂದು ತಪ್ಪು ತಿಳಿಯ ಬೇಡಿ. ನರಕವೇ ಅವರ ನೆಲೆ ಮತ್ತು ಅದು ಅತ್ಯಂತ ಕೆಟ್ಟ ನೆಲೆಯಾಗಿದೆ.
ಸತ್ಯವಿಶ್ವಾಸಿಗಳೇ, ನಿಮ್ಮ ಸ್ವಾಧೀನಕ್ಕೆ ಬಂದವರು (ದಾಸ-ದಾಸಿಯರು) ಮತ್ತು ಇನ್ನೂ ಪ್ರಬು ದ್ಧರಾಗದ ನಿಮ್ಮ ಮಕ್ಕಳು ಮೂರು ಹೊತ್ತುಗಳಲ್ಲಿ ನಿಮ್ಮ ಬಳಿಗೆ ಬರುವಾಗ ಅನುಮತಿ ಪಡೆದು ಬರಲಿ. ಫಜ್ರ್ ನಮಾಝಿಗಿಂತ ಮುಂಚೆ, ಮಧ್ಯಾಹ್ನ ವಿಶ್ರಾಂತಿಗಾಗಿ ನೀವು ಉಡುಪುಗ ಳನ್ನು ಕಳಚಿಡುವ ಸಮಯದಲ್ಲಿ ಮತ್ತು ಇಷಾ ನಮಾಝಿನ ಅನಂತರ. ಇವು ಮೂರು ನಿಮ್ಮ ಗೌಪ್ಯತೆಯ ಸಮಯವಾಗಿದೆ. ಇತರ ಸಮಯಗಳಲ್ಲಿ ಅವರು ಅನುಮತಿ ಪಡೆಯದೆ ಬಂದರೆ ನಿಮ್ಮ ಮೇಲಾಗಲಿ ಅವರ ಮೇಲಾಗಲಿ ಏನೂ ದೋಷವಿಲ್ಲ. ಅವರು ನಿಮ್ಮಲ್ಲಿ - ಅಂದರೆ ನಿಮ್ಮಲ್ಲಿ ಕೆಲವರು ಕೆಲವರಲ್ಲಿ - (ಶುಶ್ರೂಷೆ ಮತ್ತಿತರ ಅಗತ್ಯಗಳಿಗಾಗಿ) ಸುತ್ತುಗಟ್ಟಿ ನಿಲ್ಲು ವವರು ತಾನೆ? ಈ ರೀತಿ ಅಲ್ಲಾಹನು ತನ್ನ ಆದೇ ಶಗಳನ್ನು ನಿಮಗಾಗಿ ವಿವರಿಸುತ್ತಾನೆ. ಅವನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
ಇನ್ನು ನಿಮ್ಮ ಮಕ್ಕಳು ಪ್ರಬುದ್ಧರಾದಾಗ ಅವರ ಹಿರಿಯರು ಅನುಮತಿ ಪಡೆಯುವಂತೆಯೇ ಅವರೂ ಅನುಮತಿ ಪಡೆದು ಬರಲಿ. ಈ ರೀತಿಯಲ್ಲಿ ಅಲ್ಲಾಹನು ತನ್ನ ಪುರಾವೆಗಳನ್ನು ನಿಮಗೆ ವಿವರಿಸಿ ಹೇಳುತ್ತಾನೆ. ಅಲ್ಲಾಹನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
ವಿವಾಹವಾಗಲು ಬಯಸದೆ ವೃದ್ಧೆಯರಾದ ಸ್ತ್ರೀ ಯರು ತಮ್ಮ ಪರ್ದಾಚಾದರಗಳನ್ನು ತೆಗೆದಿರಿ ಸಿದರೆ ಅವರ ಮೇಲೇನೂ ದೋಷವಿಲ್ಲ. ಆದರೆ ಒಡವೆ ಅಲಂಕಾರವನ್ನು ಅವರು ಪ್ರದರ್ಶಿಸಬಾರದು. ಪರ್ದಾಚಾದರವನ್ನು ಕಳಚಿ ಇಡದಿರುವುದೇ ಅವರ ಮಟ್ಟಿಗೆ ಉತ್ತಮವಾಗಿದೆ. ಅಲ್ಲಾಹನು ಎಲ್ಲವನ್ನು ಆಲಿಸುತ್ತಾನೆ ಮತ್ತು ಅರಿಯುತ್ತಾನೆ .
ನೀವು ನಿಮ್ಮ ಮನೆಗಳಲ್ಲಿ, ನಿಮ್ಮ ತಂದೆ - ತಾತಂದಿರ ಮನೆಗಳಲ್ಲಿ, ನಿಮ್ಮ ತಾಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಗಳಲ್ಲಿ ಅಥವಾ ನಿಮ್ಮ ಸೋದರತ್ತೆಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸೋದರ ಮಾವಂದಿರ ಮನೆಗಳಲ್ಲಿ ಅಥವಾ ನಿಮ್ಮ ಮಾತೃ ಸೋದರಿಯರ ಮನೆಗಳಲ್ಲಿ ಅಥವಾ ಬೀಗದ ಕೈಗಳು ನಿಮ್ಮ ವಶದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಮಿತ್ರರ ಮನೆಗಳಲ್ಲಿ ಉಣ್ಣುವುದರಲ್ಲಿ ಆಕ್ಷೇಪವಿಲ್ಲ. ಕುರುಡನ ಮೇಲೆ ತಪ್ಪಿಲ್ಲ. ಕುಂಟನ ಮೇಲೆ ತಪ್ಪಿಲ್ಲ. ರೋಗಿಯ ಮೇಲೆ ತಪ್ಪಿಲ್ಲ. ಸ್ವತಃ ನಿಮ್ಮ ಮೇಲೂ ತಪ್ಪಿಲ್ಲ. ನೀವು ಒಟ್ಟಿಗೆ ಕೂತು ಉಣ್ಣುವು ದಕ್ಕೂ ಬೇರೆ ಬೇರೆ ಕೂತು ಉಣ್ಣುವುದಕ್ಕೂ ವಿರೋಧವಿಲ್ಲ. ಆದರೆ ಮನೆಗಳೊಳಗೆ ಪ್ರವೇಶಿ ಸುವಾಗ ಅಲ್ಲಾಹನ ವತಿಯಿಂದ ಇರುವ ಅನು ಗ್ರಹೀತವೂ ಪರಿಪಾವನವೂ ಆದ ಅಭಿವಾದ್ಯ ವೆಂಬ ನೆಲೆಯಲ್ಲಿ ನಿಮ್ಮ ಸ್ವಂತದ ಮೇಲೆ ಸಲಾಮ್ ಹೇಳಿರಿ. ಹೀಗೆ ಅಲ್ಲಾಹನು, ನಿಮಗೆ ನಿದರ್ಶನಗಳನ್ನು ವಿವರಿಸುತ್ತಾನೆ. ನೀವು ಯೋಚಿಸಿ ಗ್ರಹಿಸಲಿಕ್ಕಾಗಿ.
ಅಲ್ಲಾಹು ಮತ್ತು ಅವನ ದೂತರನ್ನು ನಂಬು ವವರೇ ಸತ್ಯವಿಶ್ವಾಸಿಗಳು, ಯಾವುದೇ ಸಾಮೂ ಹಿಕ ಕಾರ್ಯದಲ್ಲಿ ಅವರು ದೇವದೂತರ ಜೊತೆಗೆ ಭಾಗವಹಿಸುತ್ತಿರುವಾಗ ಅವರಿಂದ ಅನುಮತಿ ಪಡೆಯದೆ ಹೊರ ಹೋಗಬಾರದು. (ಪೈಗಂಬರರೇ,) ನಿಮ್ಮೊಡನೆ ಅನುಮತಿ ಕೇಳುವವರೇ ಅಲ್ಲಾಹು ಮತ್ತು ದೂತರನ್ನು ನಂಬುವವರು. ಆದುದರಿಂದ ಅವರು ತಮ್ಮ ಯಾವುದೇ ಕಾರ್ಯ ಕ್ಕಾಗಿ ಹೊರ ಹೋಗಲು ಅನುಮತಿ ಕೇಳಿದರೆ ನೀವಿಚ್ಚಿಸುವವರಿಗೆ ಅನುಮತಿಕೊಡಿರಿ. ಮತ್ತು ಅವರ ಪಾಪ ಮುಕ್ತಿಗಾಗಿ ಅಲ್ಲಾಹನೊಡನೆ ಪ್ರಾರ್ಥಿಸಿರಿ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
ನಿಮ್ಮ ನಡುವೆ ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ದೂತರನ್ನು ನೀವು ಕರೆಯ ಬೇಡಿರಿ. ನಿಮ್ಮ ಪೈಕಿ ಜನರ ಮರೆಯಲ್ಲಿ ಮೆಲ್ಲನೆ ಕೊಸರಿಕೊಳ್ಳುವ ಮಂದಿಯನ್ನು ಅಲ್ಲಾಹು ಚೆನ್ನಾಗಿ ಅರಿಯುತ್ತಾನೆ. ದೂತರ ಆಜ್ಞೆಗೆ ವಿರುದ್ಧ ವರ್ತಿಸುವವರು ಯಾವುದೇ ಪರೀಕ್ಷೆ ಬಂದೆರಗುವ ಬಗ್ಗೆ ಅಥವಾ ತಮ್ಮ ಮೇಲೆ ವೇದನಾಯುಕ್ತ ಶಿಕ್ಷೆ ಬಂದೆರಗುವ ಬಗ್ಗೆ ಭಯಪಟ್ಟುಕೊಳ್ಳಲಿ.
ತಿಳಿಯಿರಿ, ಭೂಮಿ-ಆಕಾಶಗಳಲ್ಲಿರುವುದು ಅಲ್ಲಾಹನದು. ನೀವು ಯಾವ ಅವಸ್ಥೆಯಲ್ಲಿ ಇದ್ದೀರಿ ಎಂಬುದನ್ನು ಮತ್ತು ಅವರು (ಕಪಟಿ ಗಳು) ಆತನ ಕಡೆಗೆ ಮರಳಿಸಲ್ಪಡುವ ದಿನವನ್ನು ಅಲ್ಲಾಹು ಖಂಡಿತ ಅರಿಯುತ್ತಾನೆ. ಆಗ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಅಲ್ಲಿ ಅವನು ಅವರಿಗೆ ಕೊಡುವನು. ಅಲ್ಲಾಹು ಸಕಲ ವಿಷಯಗಳ ಜ್ಞಾನವುಳ್ಳವನು.