All Islam Directory
1

ತ್ವಾ ಹಾ .

2

ಖುರ್‍ಆನನ್ನು ನಿಮ್ಮ ಮೇಲೆ ನಾವು ಅವತೀರ್ಣ ಗೊಳಿಸಿರುವುದು ನಿಮ್ಮನ್ನು ಕಷ್ಟಪಡಿಸಲಿಕ್ಕಲ್ಲ.

3

ದೇವನನ್ನು ಭಯಪಡುವ ಪ್ರತಿಯೊಬ್ಬನಿಗೆ ಬೋಧಿಸಿ ನೆನಪಿಸಲು ಮಾತ್ರ .

4

ಭೂಮಿಯನ್ನೂ ಉನ್ನತ ಆಕಾಶಗಳನ್ನೂ ಸೃಷಿಸಿದವನ ಕಡೆಯಿಂದ ಇದು ಅವತೀರ್ಣ ಗೊಂಡಿದೆ.

5

ದಯಾಮಯನಾದ ಅಲ್ಲಾಹನು ತನಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು.

6

ಅವನು, ಆಕಾಶಗಳಲ್ಲೂ ಭೂಮಿಯಲ್ಲೂ ಅವೆರಡರ ನಡುವೆಯೂ ಹಾಗೂ ಮಣ್ಣಿನಡಿಯಲ್ಲಿಯೂ ಇರುವ ಸಕಲ ವಸ್ತುಗಳ ಒಡೆಯನು.

7

ನೀವು ನಿಮ್ಮ ಮಾತನ್ನು ಉಚ್ಚ ಸ್ವರದಲ್ಲೇ ಹೇಳಿದರೂ ಅವನು ರಹಸ್ಯವನ್ನೂ ಅತ್ಯಂತ ಸುಪ್ತವಾದುದನ್ನೂ ಅರಿಯುತ್ತಾನೆ .

8

ಅಲ್ಲಾಹು, ಅವನ ಹೊರತು ಅನ್ಯದೇವನಿಲ್ಲ. ಅವನಿಗೆ ಅತ್ಯುತ್ತಮ ನಾಮಗಳಿವೆ.

9

ನಿಮಗೆ ಮೂಸಾರ ವೃತ್ತಾಂತ ತಲುಪಿದೆಯೇ?

10

ಅವರು ಒಂದು ಬೆಂಕಿಯನ್ನು ಕಂಡಾಗ ತನ್ನ ಪತ್ನಿಯೊಡನೆ; “ನೀವಿಲ್ಲಿ ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ಅದರಿಂದ ನಿಮಗೆ ನಾನು ಕೆಂಡವೊಂದನ್ನು ತರಬಲ್ಲೆ. ಅಥವಾ ಆ ಬೆಂಕಿಯ ಬಳಿ ಮಾರ್ಗದರ್ಶನವನ್ನು ಪಡೆಯ ಬಲ್ಲೆ” ಎಂದು ಹೇಳಿದ ಸಂದರ್ಭ.

11

ಅಲ್ಲಿಗೆ ತಲಪಿದಾಗ ಹೀಗೆ ಕರೆಯಲಾಯಿತು. - ‘ಓ ಮೂಸಾ,

12

ನಾನು ನಿಮ್ಮ ಪ್ರಭು. ಆದ್ದರಿಂದ ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ನೀವು ಪವಿತ್ರ `ಥುವಾ’ ಕಣಿವೆಯಲ್ಲಿದ್ದೀರಿ.

13

ನಾನು ನಿಮ್ಮನ್ನು (ಪ್ರವಾದಿತ್ವಕ್ಕಾಗಿ) ಆರಿಸಿ ಕೊಂಡಿದ್ದೇನೆ. ಆದ್ದರಿಂದ ನಿಮಗೆ ಕೊಡಲಾಗುವ ದಿವ್ಯ ಸಂದೇಶವನ್ನು ಚೆನ್ನಾಗಿ ಆಲಿಸಿರಿ.

14

ನಿಶ್ಚಯ ನಾನೇ ಅಲ್ಲಾಹು, ನನ್ನ ಹೊರತು ಬೇರೆ ದೇವನಿಲ್ಲ. ಆದುದರಿಂದ ನೀವು ನನಗೆ ಆರಾಧಿಸಿರಿ. ನನ್ನ ಸ್ಮರಣೆಗಾಗಿ ನಮಾಝನ್ನು ಕ್ರಮಪ್ರಕಾರ ನೆಲೆಗೊಳಿಸಿರಿ.

15

ಅಂತಿಮ ಘಳಿಗೆಯು ಖಂಡಿತ ಬರಲಿದೆ. ಪ್ರತಿಯೊಬ್ಬ ಜೀವಿಯೂ ತನ್ನ ದುಡಿಮೆಗೆ ತಕ್ಕ ಪ್ರತಿಫಲ ಪಡೆಯಲಿಕ್ಕಾಗಿ ನಾನು ಅದರ ಸಮಯವನ್ನು ರಹಸ್ಯವಾಗಿಡಬಯಸಿದ್ದೇನೆ

16

ಆದುದರಿಂದ ಆ ಕೊನೆ ತಾಸಿನ ಮೇಲೆ ವಿಶ್ವಾಸವಿರಿಸದವನು ಮತ್ತು ತನ್ನ ಸ್ವೇಚ್ಛೆಗಳ ಬೆನ್ನು ಹತ್ತಿದವನು ನಿಮ್ಮನ್ನು ಆ ಘಳಿಗೆಯ ವಿಶ್ವಾಸದಿಂದ ತಡೆಯದಿರಲಿ. ಅನ್ಯಥಾ ನೀವು ವಿನಾಶದಲ್ಲಿ ಬೀಳುವಿರಿ.

17

ಓ ಮೂಸಾ, ನಿಮ್ಮ ಬಲಗೈಯಲ್ಲಿರುವುದೇನು?”

18

ಮೂಸಾ ಹೀಗೆ ಉತ್ತರಿಸಿದರು - “ಇದು ನನ್ನ ದಂಡ, ನಾನು ಇದನ್ನು ಊರಿಕೊಂಡು ನಡೆಯುತ್ತೇನೆ. ಇದರಿಂದ ಆಡುಗಳಿಗೆ ಮರದ ಎಲೆಗಳನ್ನು ಹೊಡೆದು ಬೀಳಿಸುತ್ತೇನೆ. ಇದರಿಂದ ನಾನು ಬೇರೆ ಅನೇಕ ಪ್ರಯೋಜನಗಳನ್ನು ಪಡೆಯುತ್ತೇನೆ.”

19

ಆಗ ಅಲ್ಲಾಹನು, “ಓ ಮೂಸಾ, ಅದನ್ನು ಕೆಳಗೆ ಹಾಕಿರಿ” ಎಂದನು.

20

ಆಗ ಅವರು ಕೆಳಗೆ ಹಾಕಿದರು - ಹಠಾತ್ತನೆ ಅದೊಂದು ವೇಗವಾಗಿ ಓಡುತ್ತಿರುವ ಹಾವಾಗಿ ಮಾರ್ಪಟ್ಟಿತು .

21

ಅಲ್ಲಾಹು ಹೇಳಿದ; “ಅದನ್ನು ಹಿಡಿದುಕೊಳ್ಳಿ. ಹೆದರಬೇಡ. ನಾವು ಅದನ್ನು ಪೂರ್ವಸ್ಥಿತಿಗೇ ತರುತ್ತೇವೆ.

22

ನಿಮ್ಮ ಕೈಯನ್ನು ನಿಮ್ಮ ಪಕ್ಕಕ್ಕೆ ಸೇರಿಸಿಡಿ. ಆಗದು ಯಾವುದೇ ಕೇಡಿಲ್ಲದೆ ಹೊಳೆಯುತ್ತಾ ಹೊರ ಬರುವುದು. ಇದು ಎರಡನೆಯ ನಿದರ್ಶನ.

23

ಏಕೆಂದರೆ ನಾವು ನಿಮಗೆ ನಮ್ಮ ದೊಡ್ಡ ನಿದರ್ಶನಗಳನ್ನು ತೋರಿಸಲಿದ್ದೇವೆ.

24

ಇನ್ನು ನೀವು ಫಿರ್‍ಔನನ ಬಳಿಗೆ ಹೋಗಿರಿ. ಅವನು ಅತಿಕ್ರಮಿಯಾಗಿದ್ದಾನೆ”.

25

ಮೂಸಾ ಹೀಗೆ ಹೇಳಿದರು; “ಓ ನನ್ನ ಪ್ರಭೂ, ನನ್ನ ಹೃದಯವನ್ನು ವಿಶಾಲಗೊಳಿಸು.

26

ನನ್ನ ಕಾರ್ಯವನ್ನು ನನಗೆ ಸುಲಭಗೊಳಿಸು.

27

ನನ್ನ ನಾಲಗೆಯ ತೊಡಕನ್ನು ನೀಗಿಸು .

28

ಜನರು ನನ್ನ ಮಾತನ್ನು ಗ್ರಹಿಸಲು.

29

ನನಗಾಗಿ ನನ್ನದೇ ಕುಟುಂಬದಿಂದ ಒಬ್ಬ ಸಹಾಯಕನನ್ನು ನೇಮಿಸು.

30

ನನ್ನ ಸಹೋದರರಾಗಿರುವ ಹಾರೂನರನ್ನು.

31

ಅವರ ಮೂಲಕ ನನ್ನ ಕೈ ಬಲಪಡಿಸು .

32

ಅವರನ್ನು ನನ್ನ ಕರ್ತವ್ಯದಲ್ಲಿ ಸಹಭಾಗಿಯಾಗಿ ಮಾಡು.

33

ನಿನ್ನ ಪಾವಿತ್ರ್ಯವನ್ನು ನಮಗೆ ಬಹಳವಾಗಿ ಕೊಂಡಾಡಲು,

34

ಹಾಗೂ ಬಹಳವಾಗಿ ನಿನ್ನನ್ನು ಸ್ಮರಿಸಲು.

35

ನೀನು ಸದಾ ನಮ್ಮ ಸ್ಥಿತಿಯನ್ನು ಚೆನ್ನಾಗಿ ಕಾಣುತ್ತಿರುವಿ

36

ಅಲ್ಲಾಹು ಹೇಳಿದನು ``ಓ ಮೂಸಾ, ನೀವು ಕೇಳಿ ಕೊಂಡದ್ದನ್ನು ನಿಮಗೆ ಕೊಡಲಾಗಿದೆ.

37

ಇನ್ನೊಂದು ಬಾರಿ ಕೂಡ ನಿಮ್ಮ ಮೇಲೆ ನಾವು ಅನುಗ್ರಹ ತೋರಿದ್ದುಂಟು.

38

ಸೂಚಿಸಬೇಕಾದ ಸಂಗತಿಯನ್ನು ನಾವು ನಿಮ್ಮ ತಾಯಿಗೆ ಸೂಚಿಸಿದ ಸಂದರ್ಭವನ್ನೂ ಸ್ಮರಿಸಿರಿ.

39

“ಅಂದರೆ ನೀನು ಈ ಮಗುವನ್ನು ಪೆಟ್ಟಿಗೆ ಯೊಳಗೆ ಇರಿಸು. ಪೆಟ್ಟಿಗೆಯನ್ನು ನದಿಯಲ್ಲಿ ತೇಲಿ ಬಿಡು. ನದಿಯು ಅದನ್ನು ದಡಕ್ಕೆ ಎಸೆಯುವುದು. ಅದನ್ನು ನನ್ನ ಶತ್ರು ಹಾಗೂ ಈ ಮಗುವಿನ ಶತ್ರುವಾದ ಒಬ್ಬನು ಎತ್ತಿಕೊಳ್ಳುವನು” ಎಂಬುದಾಗಿ. ನಾನು ನನ್ನ ಕಡೆಯಿಂದ ನಿಮ್ಮ ಮೇಲೆ ಪ್ರೀತಿಯನ್ನು ಹಾಕಿದೆನು ಮತ್ತು ನನ್ನ ಸಂರಕ್ಷಣೆಯಲ್ಲೇಂ ನಿಮ್ಮ ಆರೈಕೆಯ ವ್ಯವಸ್ಥೆ ಮಾಡಿದೆನು.

40

ನಿಮ್ಮ ಸಹೋದರಿ ನಡೆದು ಹೋಗಿ, “ಈ ಶಿಶುವನ್ನು ಅತ್ಯುತ್ತಮ ರೀತಿಯಿಂದ ಆರೈಕೆ ಮಾಡಬಲ್ಲವಳನ್ನು ನಿಮಗೆ ತೋರಿಸಿ ಕೊಡಲೇ?” ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ. ಹೀಗೆ ನಿಮ್ಮ ತಾಯಿಯ ಕಣ್ತಣಿಯಲು ಹಾಗೂ ಅವಳು ದುಃಖಿಸದಿರಲು ನಾವು ನಿಮ್ಮನ್ನು ಪುನಃ ನಿಮ್ಮ ತಾಯಿಯ ಬಳಿಗೆ ತಲುಪಿಸಿದ್ದೇವೆ. ಇನ್ನೊಂದು ಸಂದರ್ಭದಲ್ಲಿ ನೀವು ಒಬ್ಬನನ್ನು ವಧಿಸಿ ಬಿಟ್ಟಿದ್ದೀರಿ. ನಾವು ನಿಮ್ಮನ್ನು ಆ ದುಃಖದಿಂದ ಪಾರುಗೊಳಿಸಿದ್ದೇವೆ. ನಿಮ್ಮನ್ನು ವಿವಿಧ ಪರೀಕ್ಷಣಗಳಿಗೆ ವಿಧೇಯಗೊಳಿಸಿದ್ದೇವೆ. ನೀವು ಮದ್ಯನದವರ ಜೊತೆ ಅನೇಕ ವರುಷ ನೆಲೆಸಿದಿರಿ. ಅನಂತರ, ಓ ಮೂಸಾ! ನೀವು ನಿಶ್ಚಿತ ಸ್ಥಾನಕ್ಕೆ ತಲುಪಿರುವಿರಿ.

41

ನಾನು ನಿಮ್ಮನ್ನು ನನ್ನ ಕಾರ್ಯಕ್ಕಾಗಿ ಆಯ್ದು ಕೊಂಡಿರುತ್ತೇನೆ.

42

ನೀವು ಮತ್ತು ನಿಮ್ಮ ಸಹೋದರ ನನ್ನ ನಿದರ್ಶನಗಳೊಂದಿಗೆ ಹೋಗಿರಿ. ನೀವು ನನ್ನ ಸ್ಮರಣೆಯಲ್ಲಿ ಲೋಪ ಮಾಡಬೇಡಿರಿ .

43

ನೀವಿಬ್ಬರೂ ಫಿರ್‍ಔನನ ಬಳಿಗೆ ಹೋಗಿರಿ, ಅವನು ಅತಿಕ್ರಮಿಯಾಗಿದ್ದಾನೆ.

44

ಅವನಲ್ಲಿ ನೀವಿಬ್ಬರು ನಯವಾಗಿ ಮಾತನಾಡಿರಿ. ಬಹುಶಃ ಅವನು ಉಪದೇಶ ಸ್ವೀಕರಿಸಿಯಾನು ಅಥವಾ ಭಯಪಟ್ಟಾನು.

45

ಆಗ ಇಬ್ಬರೂ - “ಓ ನಮ್ಮ ಪ್ರಭೂ, ಅವನು ನಮ್ಮ ಮೇಲೆ ಅತಿರೇಕವೆಸಗುವ ಅಥವಾ ನಮ್ಮ ಮೇಲೆ ಮುಗಿಬೀಳುವ ಆತಂಕ ನಮಗಿದೆ” ಎಂದರು.

46

ಆಗ, ಅಲ್ಲಾಹನು ಹೇಳಿದನು; “ಹೆದರಬೇಡಿರಿ, ನಾನು ನಿಮ್ಮ ಸಂಗಡವಿದ್ದೇನೆ, ಎಲ್ಲವನ್ನೂ ಆಲಿಸುತ್ತಿದ್ದೇನೆ ಮತ್ತು ವೀಕ್ಷಿಸುತ್ತಿದ್ದೇನೆ.

47

ಅವನ ಬಳಿಗೆ ಹೋಗಿರಿ. ಹೀಗೆ ಹೇಳಿರಿ, `ನಾವಿ ಬ್ಬರೂ ನಿನ್ನ ಪ್ರಭುವಿನ ಕಡೆಯಿಂದ ಕಳುಹಿ ಸಲ್ಪಟ್ಟ ದೂತರು. ಆದ್ದರಿಂದ ಇಸ್‍ರಾಈಲ ಮಕ್ಕ ಳನ್ನು ನಮ್ಮ ಜೊತೆ ಕಳುಹಿಸಿ ಕೊಡಬೇಕು. ಅವರಿಗೆ ಕಿರುಕುಳ ಕೊಡಬಾರದು, ನಿನ್ನ ಬಳಿಗೆ ನಿನ್ನ ಪ್ರಭುವಿನ ನಿದರ್ಶನವನ್ನು ನಾವು ತಂದಿರುತ್ತೇವೆ. ಸನ್ಮಾರ್ಗವನ್ನು ಅನುಸರಿಸಿ ನಡೆದವನಿಗೆ ಶಾಂತಿ ಸಂರಕ್ಷಣೆಯಿದೆ.

48

ಸುಳ್ಳಾಗಿಸುವವನಿಗೂ ವಿಮುಖನಾದನಿಗೂ ಶಿಕ್ಷೆ ಇದೆಯೆಂದು ನಮಗೆ ದಿವ್ಯವಾಣಿಯ ಮೂಲಕ ತಿಳಿಸಿಕೊಡಲಾಗಿದೆ”.

49

ಆಗ ಫಿರ್‍ಔನ್ ಹೀಗೆ ಹೇಳಿದನು, “ಸರಿ, ಹಾಗಾದರೆ ನಿಮ್ಮಿಬ್ಬರ ಪ್ರಭು ಯಾರು, ಮೂಸಾ?”

50

ಮೂಸಾ ಹೇಳಿದರು, “ಪ್ರತಿಯೊಂದು ವಸ್ತುವಿಗೆ ಅದರದೇ ರೂಪ ಕೊಟ್ಟು ಆ ಬಳಿಕ ಅದಕ್ಕೆ ದಾರಿ ತೋರಿದವನೇ ನಮ್ಮ ಪ್ರಭು” .

51

ಫಿರ್‍ಔನ್ ಹೇಳಿದನು; “ಹಾಗಾದರೆ ಗತ ಪೀಳಿಗೆಗಳ ಸ್ಥಿತಿ ಏನಾಗಿತ್ತು ?”

52

ಮೂಸಾ ಹೇಳಿದರು, “ಅದರ ಜ್ಞಾನವು ನನ್ನ ಪ್ರಭುವಿನ ಬಳಿಯಿರುವ ಒಂದು ಗ್ರಂಥದಲ್ಲಿ ದಾಖಲಿಸಲಾಗಿದೆ. ನನ್ನ ಪ್ರಭು ತಪ್ಪಲಾರ. ಮತ್ತು ಮರೆಯಲಾರ”.

53

ನಿಮಗಾಗಿ ಭೂಮಿಯನ್ನು ತೊಟ್ಟಿಲಾಗಿ ಮಾಡಿ ದವನೂ ಅದರಲ್ಲಿ ನಿಮಗೆ ಸಂಚರಿಸಲು ಹಲವು ದಾರಿಗಳನ್ನು ತೆರೆದವನೂ ಆಕಾಶದಿಂದ ನೀರನ್ನು ಸುರಿಸಿದವನೂ ಅವನೇ. ಅನಂತರ ಅದರ ಮೂಲಕ ವಿವಿಧ ಸಸ್ಯಗಳಿಂದ ತರತರದ ಜೋಡಿಗಳನ್ನು ನಾವು ಹೊರತರುತ್ತೇವೆ.

54

ಅದರಿಂದ ನೀವೂ ತಿನ್ನಿರಿ. ನಿಮ್ಮ ಜಾನುವಾರು ಗಳನ್ನೂ ಮೇಯಿಸಿರಿ. ಬುದ್ಧಿವಂತರಿಗೆ ಖಂಡಿತ ಇದರಲ್ಲಿ ಅನೇಕ ನಿದರ್ಶನಗಳಿವೆ.

55

ಇದೇ ಮಣ್ಣಿನಿಂದ ನಾವು ನಿಮ್ಮನ್ನು ಸೃಷ್ಟಿಸಿದ್ದೇವೆ. ಇದರೊಳಕ್ಕೆ ನಿಮ್ಮನ್ನು ಮರಳಿ ಒಯ್ಯುತ್ತೇವೆ. ಇದರಿಂದಲೇ ನಾವು ನಿಮ್ಮನ್ನು ಪುನಃ ಹೊರತರುತ್ತೇವೆ .

56

ನಾವು ಫಿರ್‍ಔನನಿಗೆ ನಮ್ಮ ಎಲ್ಲ ನಿದರ್ಶನ ಗಳನ್ನೂ ತೋರಿಸಿದೆವು. ಆದರೆ ಅವನು ಸುಳ್ಳಾಗಿಸಿದನು ಮತ್ತು ನಿರಾಕರಿಸಿದನು.

57

ಅವನು ಹೀಗೆ ಕೇಳಿದನು; “ಓ ಮೂಸಾ, ನೀನು ನಿನ್ನ ಯಕ್ಷಿಣಿಯ ಬಲದಿಂದ ನಮ್ಮನ್ನು ನಮ್ಮ ದೇಶದಿಂದ ಹೊರದಬ್ಬಲು ಬಂದಿದ್ದೀಯಾ?

58

ಹಾಗಾದರೆ, ನಾವೂ ನಿನಗೆದುರು ಅಂತಹುದೇ ಮಾಟವನ್ನು ತರುತ್ತೇವೆ. ಆದ್ದರಿಂದ ನಮ್ಮ - ನಿನ್ನ ನಡುವೆ ಒಂದು ಅವಧಿಯನ್ನು ಗೊತ್ತು ಮಾಡು. ನಾವಾಗಲಿ ನೀನಾಗಲಿ ಈ ಕರಾರನ್ನು ಉಲ್ಲಂಘಿಸ ಬಾರದು. ಅದು ನಮಗೆಲ್ಲರಿಗೂ ಸಮಾನ ರೀತಿಯಲ್ಲಿ ಸೌಕರ್ಯವಿರುವ ಒಂದು ಸ್ಥಳದಲ್ಲಾಗಿರಲಿ”.

59

ಮೂಸಾ ಹೇಳಿದರು; “ಉತ್ಸವದ ದಿನವೇ ನಿಮಗೆ ನಿಗದಿತ ಅವಧಿ, ಆದ್ದರಿಂದ ಹೊತ್ತೇರಿದಾಗ ಜನರು ಒಟ್ಟು ಸೇರಲಿ” .

60

ಫಿರ್‍ಔನನು ಮರಳಿ ತನ್ನ ಎಲ್ಲ ಕುತಂತ್ರಗಳನ್ನು ಒಟ್ಟುಗೂಡಿಸಿದನು ಮತ್ತು ಸ್ಪರ್ಧೆಗೆ ಇಳಿದನು.

61

ಮೂಸಾ ರು ಅವರನ್ನು ತನ್ನ ಬಳಿ ಕರೆದು “ನಿಮಗೆ ಮಹಾನಾಶ!, ಅಲ್ಲಾಹನ ಮೇಲೆ ಸುಳ್ಳಾರೋಪಗಳನ್ನು ಹೊರಿಸಬೇಡಿರಿ. ಅನ್ಯಥಾ ಅವನು ಘೋರ ಶಿಕ್ಷೆಯ ಮೂಲಕ ನಿಮ್ಮನ್ನು ನಿರ್ವಂಶ ಮಾಡುವನು. ಮಿಥ್ಯಾರೋಪವನ್ನು ಹೊರಿಸಿದವನು, ಖಂಡಿತ ಭಗ್ನನಾದನು.

62

ಇದನ್ನು ಕೇಳಿದಾಗ ಅವರೊಳಗೆ ಭಿನ್ನಾಭಿಪ್ರಾಯ ತಲೆದೋರಿತು. ಅವರು ರಹಸ್ಯವಾಗಿ ಪರಸ್ಪರ ಸಮಾಲೋಚಿಸಿದರು.

63

ಕೊನೆಗೆ ಅವರು (ಹೀಗೆ)ಹೇಳಿದರು. “ಇವರಿ ಬ್ಬರೂ ಕೇವಲ ಯಕ್ಷಿಣಿಗಾರರು. ಇವರ ಉದ್ದೇಶವು ತಮ್ಮ ಯಕ್ಷಿಣಿಯ ಬಲದಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕುವುದು ಮತ್ತು ನಿಮ್ಮ ಅತಿ ಶ್ರೇಷ್ಟವಾದ ಮಾರ್ಗವನ್ನು ಕೊನೆಗಾಣಿಸುವುದು.

64

ಆದುದರಿಂದ ನಿಮ್ಮ ಸಕಲ ತಂತ್ರಗಳನ್ನೂ ಇಂದು ಒಟ್ಟುಗೂಡಿಸಿರಿ. ಒಂದೇ ಅಣಿಯಾಗಿ ರಂಗಕ್ಕೆ ಇಳಿಯಿರಿ. ಎದುರು ಪಕ್ಷದವರನ್ನು ಯಾರು ಸೋಲಿಸಿ ಬಿಡುತ್ತಾರೆ, ಅವರಿಂದು ಖಂಡಿತ ಗೆಲುವು ಸಾಧಿಸುತ್ತಾರೆ.

65

ಅವರು ಹೇಳಿದರು; “ಓ ಮೂಸಾ, ಒಂದೋ ನೀವು ಮೊದಲು ಎಸೆಯಿರಿ ಅಥವಾ ಮೊದಲು ನಾವು ಎಸೆಯುತ್ತೇವೆ”.

66

ಆಗ ಮೂಸಾ “ಇಲ್ಲ, ನೀವೇ ಎಸೆಯಿರಿ” ಎಂದರು . ಅಷ್ಟರಲ್ಲಿ ಅವರ ಹಗ್ಗಗಳೂ ಅವರ ದಂಡಗಳೂ ಚಲಿಸುತ್ತಿರುವಂತೆ ಅವರ ಇಂದ್ರ ಜಾಲದ ಬಲದಿಂದ ಮೂಸಾರಿಗೆ ಭಾಸವಾಯಿತು .

67

ಅಷ್ಟರಲ್ಲಿ ಮೂಸಾ ತನ್ನ ಮನದೊಳಗೇ ತಣ್ಣನೆ ಹೆದರಿದರು.

68

ಆಗ ನಾವು ಹೇಳಿದೆವು; “ಹೆದರಬೇಡಿರಿ, ನೀವೇ ಗೆಲ್ಲುವಿರಿ.

69

ನಿಮ್ಮ ಬಲ ಕೈಯಲ್ಲಿರುವ ದಂಡವನ್ನು ಕೆಳಗೆ ಹಾಕಿರಿ. ಅದು ಅವರ ಕಣ್ಣು ಕಟ್ಟಿದ ವಸ್ತುಗಳನ್ನು ನುಂಗಿ ಹಾಕುವುದು. ಅವರು ಮಾಡಿದ್ದೆಲ್ಲ ಕೇವಲ ಜಾದೂಗಾರನ ಕುತಂತ್ರವಾಗಿದ್ದು ಜಾದೂಗಾರನು ಎಲ್ಲೇ ಬರಲಿ, ಅವನೆಂದೂ ಯಶಸ್ವಿಯಾಗಲಾರ”.

70

ಕೊನೆಗೆ ಎಲ್ಲ ಜಾದೂಗಾರರೂ ಸಾಷ್ಟಾಂಗವೆರ ಗುತ್ತ ನೆಲಕ್ಕೆ ಬಿದ್ದರು. ಅವರು ಸಾರಿದರು; “ನಾವು ಮೂಸಾ ಮತ್ತು ಹಾರೂನರ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ’’.

71

ಫಿರ್‍ಔನ್ (ಹೀಗೆ) ಹೇಳಿದನು; “ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆಯೇ ನೀವು ಅವನ ಮೇಲೆ ವಿಶ್ವಾಸವಿಟ್ಟಿರಾ ? ಇವನು ನಿಮಗೆ ಯಕ್ಷಿಣಿ ವಿದ್ಯೆಯನ್ನು ಕಲಿಸಿದ್ದ ಗುರು ಎಂದು ತಿಳಿಯಿತು. ಆದ್ದರಿಂದ ನಾನು ನಿಮ್ಮ ಕೈಕಾಲು ಗಳನ್ನು ವಿರುದ್ಧ ದಿಕ್ಕುಗಳಿಂದ ಕತ್ತರಿಸಿ ಹಾಕು ತ್ತೇನೆ. ಖರ್ಜೂರ ವೃಕ್ಷದ ಕಾಂಡಗಳ ಮೇಲೆ ನಿಮ್ಮನ್ನು ಶಿಲುಬೆಗೇರಿಸುತ್ತೇನೆ. ಆಗ ನಮ್ಮಿಬ್ಬರ ಪೈಕಿ ಯಾರ ಶಿಕ್ಷೆ ಕಠಿಣ ಹಾಗೂ ದೀರ್ಘವಾದುದೆಂದು ನಿಮಗೆ ಚೆನ್ನಾಗಿ ತಿಳಿಯುವುದು” .

72

ಜಾದೂಗಾರರು ಹೀಗೆ ಉತ್ತರಕೊಟ್ಟರು, “ನಮಗೆ ಬಂದು ಸಿಕ್ಕಿದ ಪ್ರತ್ಯಕ್ಷ ಪ್ರಮಾಣಗಳು ಹಾಗೂ ನಮ್ಮನ್ನು ಸೃಷ್ಟಿಸಿದ ಅಲ್ಲಾಹನಿಗಿಂತ ಹೆಚ್ಚು ಪ್ರಾಶ ಸ್ತ್ಯವನ್ನು ನಿನಗೆ ಖಂಡಿತ ಕೊಡಲಾರೆವು. ಆದ್ದ ರಿಂದ ನೀನೇನು ವಿಧಿಸುತ್ತೀಯೋ ಅದನ್ನು ವಿಧಿಸು. ನೀನು ಇಹಲೋಕ ಜೀವನದ ತೀರ್ಮಾನ ಮಾತ್ರ ಮಾಡಬಲ್ಲೆ.

73

ನಮ್ಮ ಅಪರಾಧಗಳನ್ನೂ ನೀನು ನಮ್ಮ ಮೇಲೆ ಬಲವಂತದಿಂದ ಮಾಡಿಸಿದ ಇಂದ್ರಜಾಲವನ್ನೂ ಕ್ಷಮಿಸಲಿಕ್ಕಾಗಿ ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಅಲ್ಲಾಹನೇ ಉತ್ತಮನು ಮತ್ತು ಅವನೇ ಚಿರಂತನನೂ ಆಗಿರುತ್ತಾನೆ” .

74

ತನ್ನ ಪ್ರಭುವಿನ ಸನ್ನಿಧಿಗೆ ಯಾರು ಅಪರಾಧಿಯಾಗಿ ಹಾಜರಾಗುತ್ತಾನೋ ಅವನಿಗೆ ಖಂಡಿತ ನರಕವಿದೆ. ಅದರಲ್ಲಿ ಅವನು ಸಾಯಲಿಕ್ಕೂ ಇಲ್ಲ, ಬದುಕಲಿಕ್ಕೂ ಇಲ್ಲ.

75

ಯಾರು ತನ್ನ ಪ್ರಭುವಿನ ಸನ್ನಿಧಿಯಲ್ಲಿ ಸತ್ಕರ್ಮ ವೆಸಗಿದ ಸತ್ಯ ವಿಶ್ವಾಸಿಯ ನೆಲೆಯಲ್ಲಿ ಹಾಜ ರಾಗುತ್ತಾನೋ ಅಂಥವರಿಗೆ ಉನ್ನತ ಸ್ಥಾನ ಮಹಿಮೆಗಳಿವೆ.

76

ಅಂದರೆ, ಚಿರವಾಸದ ಉದ್ಯಾನಗಳು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿವೆ. ಅವರು ಅವುಗಳಲ್ಲಿ ಸದಾಕಾಲ ನೆಲೆಸುವರು. ಪರಿಶುದ್ಧತೆಯನ್ನು ಪಡೆದವರ ಪ್ರತಿಫಲವಿದು.

77

ನಾವು ಮೂಸಾರಿಗೆ ಹೀಗೆ ಸಂದೇಶ ನೀಡಿದೆವು. “ನೀವು ರಾತ್ರೋರಾತ್ರಿ ನನ್ನ ದಾಸ ರನ್ನು ಕರೆದು ಕೊಂಡು ಹೋಗಿರಿ. ಅವರಿಗೆ ಸಮುದ್ರದಲ್ಲಿ ಶುಷ್ಕ ದಾರಿಯನ್ನು ಮಾಡಿರಿ . ಯಾರಾದರೂ ಬೆನ್ನಟ್ಟಿ ಹಿಡಿಯುವರೆಂಬ ಭಯವಾಗಲಿ ಮುಳುಗಿ ಹೋದೀತೆಂಬ ಆತಂಕವಾಗಲಿ ನಿಮಗೆ ಬೇಡ”.

78

ಫಿರ್‍ಔನನು ತನ್ನ ಸೇನೆಯ ಸಹಿತ ಬೆನ್ನಟ್ಟಿ ಬಂದನು. ತರುವಾಯ ಸಮುದ್ರವು ಅವರನ್ನು ಆವರಿಸಬೇಕಾಗಿದ್ದ ರೀತಿಯಲ್ಲಿ ಸಂಪೂರ್ಣವಾಗಿ ಆವರಿಸಿತು.

79

ಫಿರ್‍ಔನ್ ತನ್ನ ಜನಾಂಗವನ್ನು ದಾರಿಗೆಡಿಸಿ ದನು. ಸರಿಯಾದ ದಾರಿಯನ್ನು ತೋರಿಸಲೂ ಇಲ್ಲ.

80

ಓ ಇಸ್ರಾಈಲ ಮಕ್ಕಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದ್ದೇವೆ. ಥೂರ್‍ಸೀನಾ ಪರ್ವತದ ಬಲಗಡೆಯನ್ನು ನಿಮಗೆ ನಾವು ವಾಗ್ದಾನ ಮಾಡಿದ್ದೇವೆ. ನಿಮ್ಮ ಮೇಲೆ ಮನ್ನ ಮತ್ತು ಸಲ್ವವನ್ನು ಇಳಿಸಿದ್ದೇವೆ.

81

ನಾವು ನೀಡಿದ ಶುದ್ಧ ಆಹಾರವನ್ನು ಉಣ್ಣಿರಿ. ಅದರಲ್ಲಿ ಅತಿಕ್ರಮಿಸಬೇಡಿರಿ. ಅನ್ಯಥಾ ನಿಮ್ಮ ಮೇಲೆ ನನ್ನ ಕೋಪವೆರಗುವುದು. ಯಾರ ಮೇಲೆ ನನ್ನ ಕೋಪವೆರಗಿತೋ ಅವನು (ನರಕಕ್ಕೆ) ಪತನಗೊಂಡನು.

82

ಆದರೆ ಪಶ್ಚಾತ್ತಾಪ ಪಟ್ಟು ವಿಶ್ವಾಸವಿರಿಸಿ, ಸತ್ಕರ್ಮ ಮಾಡಿ, ಆ ಬಳಿಕ ನೇರ ಮಾರ್ಗದಲ್ಲೇ ನಡೆಯು ತ್ತಿರುವವನನ್ನು ನಾನು ಅತಿಯಾಗಿ ಕ್ಷಮಿಸು ತ್ತೇನೆ.

83

“ಓ ಮೂಸಾ ನೀವು ನಿಮ್ಮ ಜನಾಂಗವನ್ನು ಬಿಟ್ಟು ಇಷ್ಟು ಅವಸರದಲ್ಲಿ ಏಕೆ ಬಂದಿರಿ ?”

84

ಅವರು ಇಂತೆಂದರು; “ಅವರು ನನ್ನ ಬೆನ್ನ ಹಿಂದೆಯೇ ಬರುತ್ತಿದ್ದಾರೆ. ಪ್ರಭೂ, ನಿನ್ನ ಒಲವನ್ನು ಬಯಸಿ ನಿನ್ನ ಹತ್ತಿರಕ್ಕೆ ಅವಸರದಲ್ಲಿ ಬಂದಿದ್ದೇವೆ”.

85

ಆಗ ಅಲ್ಲಾಹು ಹೇಳಿದನು, “ಹಾಗಿದ್ದರೆ ನೀವು ಬಂದ ನಂತರ ನಾವು ನಿಮ್ಮ ಜನಾಂಗವನ್ನು ಪರೀಕ್ಷೆಗೆ ಗುರಿಪಡಿಸಿದ್ದೇವೆ. ಸಾಮಿರೀ ಅವರನ್ನು ತಪ್ಪು ದಾರಿಗೆಳೆದಿದ್ದಾನೆ” .

86

ಮೂಸಾ ಅತ್ಯಂತ ಕುಪಿತ ಹಾಗೂ ವ್ಯಾಕುಲ ಚಿತ್ತರಾಗಿ ತನ್ನ ಜನಾಂಗದ ಕಡೆಗೆ ಮರಳಿ ಹೋಗಿ ಹೀಗೆ ಕೇಳಿದರು; “ಓ ನನ್ನ ಜನಾಂಗವೇ, ನಿಮ್ಮ ಪ್ರಭು ನಿಮಗೆ ಉತ್ತಮ ವಾಗ್ದಾನ ಗಳನ್ನು ಮಾಡಿರಲಿಲ್ಲವೇ? ನಂತರ ನಿಮಗೆ ಹೆಚ್ಚು ಕಾಲ ತಗುಲಿತೇ? ಅಥವಾ ನೀವು ನಿಮ್ಮ ಪ್ರಭುವಿನ ಕ್ರೋಧವೇ ನಿಮ್ಮ ಮೇಲೆರ ಗುವುದನ್ನು ಉದ್ದೇಶವಿಟ್ಟಿರುವಿರಾ? ಹಾಗೆಂದು ನೀವು ನನಗೆ ಕೊಟ್ಟಿದ್ದ ವಚನವನ್ನು ಭಂಗ ಗೊಳಿಸಿದಿರಾ?”

87

ಅವರು ಹೀಗೆಂದರು - “ನಾವು ನಿಮಗೆ ಕೊಟ್ಟಿದ್ದ ವಚನವನ್ನು ನಮ್ಮ ಸ್ವಂತ ಅಣತಿಯಿಂದ ಭಂಗ ಗೊಳಿಸಲಿಲ್ಲ. ನಾವು ಜನರ ಆಭರಣಗಳ ಹೊರೆಯಿಂದ ಹೇರಲ್ಪಟ್ಟಿದ್ದೆವು. ಹಾಗೆ ನಾವು ಅವು ಗಳನ್ನು ಬೆಂಕಿಗೆ ಎಸೆದೆವು. ಅದೇ ರೀತಿಯಲ್ಲಿ ಸಾಮಿರಿಯೂ ತನ್ನ ಬಳಿಯಿರುವುದನ್ನು ಬೆಂಕಿಗೆ ಹಾಕಿದನು.

88

ಆಮೇಲೆ ಅವನು ಅವರಿಗಾಗಿ ಒಂದು ಕರುವಿನ ರೂಪವನ್ನು ಮಾಡಿ ಹೊರತಂದನು. ಅದರಿಂದ ಎತ್ತಿನಂತಹ ಧ್ವನಿ ಹೊರಡುತ್ತಿತ್ತು. ಆಗ ಜನರು, “ಇದುವೇ ನಿಮ್ಮ ದೇವರು ಮತ್ತು ಮೂಸಾರ ದೇವರು. ಮೂಸಾ ಇದನ್ನು ಮರೆತುಬಿಟ್ಟಿದ್ದಾರೆ” ಎಂದು ಕೊಂಡರು.

89

ಆದರೆ ಆ ಕರುವು ಮಾತಿಗೆ ಉತ್ತರಿಸುವುದಿಲ್ಲ ಎಂದಾಗಲಿ ಅವರಿಗೆ ಗುಣ-ದೋಷಗಳನ್ನು ಕೊಡುವ ಯಾವ ಅಧಿಕಾರವನ್ನೂ ಪಡೆದಿಲ್ಲ ಎಂದಾಗಲಿ ಅವರು ಯೋಚಿಸದಾದರು .

90

ಹಾರೂನರು (ಮೂಸಾ)ರು ಬರುವುದಕ್ಕಿಂತ) ಮೊದಲೇ ಅವರೊಡನೆ ಸಾರಿ ಹೇಳಿದ್ದರು; “ಓ ಜನರೇ, ನೀವು ಇದರ ಕಾರಣದಿಂದ ಕ್ಷೋಭೆಗೆ ಗುರಿಯಾಗಿದ್ದೀರಿ. ಪರಮ ದಯಾಳು ವಾದ ಅಲ್ಲಾಹನೇ ನಿಮ್ಮ ಪ್ರಭು, ಆದುದರಿಂದ ನೀವು ನನ್ನನ್ನು ಅನುಸರಿಸಿರಿ. ನನ್ನ ಆಜ್ಞೆಯನ್ನು ಪಾಲಿಸಿರಿ.”

91

ಆದರೆ ಜನರು - “ಮೂಸಾ ನಮ್ಮ ಬಳಿಗೆ ಮರಳಿ ಬರುವವರೆಗೂ ನಾವು ಇದರ ಪೂಜೆಯನ್ನೇ ಮಾಡುತ್ತೇವೆ” ಎಂದು ಹೇಳಿದರು.

92

(ಆಗ ಧಾವಿಸಿ ಬಂದ) ಮೂಸಾ ಕೇಳಿದರು; “ಓ ಹಾರೂನ್, ಇವರು ದಾರಿ ತಪ್ಪುತ್ತಿರುವುದನ್ನು ನೀವು ಕಂಡಾಗ ನಿಮ್ಮನ್ನು ತಡೆದವರಾರು?

93

ಅವರು ನನ್ನ ಮಾರ್ಗದರ್ಶನವನ್ನು ಅನುಸರಿಸದಂತೆ ನೀವು ಮನಸ್ಸಾರೆ ನನ್ನ ಅಪ್ಪಣೆ ವಿರುದ್ಧ ನಡೆದಿರಾ?”

94

ಹಾರೂನರು,-‘ಓ ನನ್ನ ಮಾತೆಯ ಪುತ್ರನೇ! ನನ್ನ ಗಡ್ಡವನ್ನು ಹಿಡಿಯಬೇಡ. ನನ್ನ ತಲೆ ಕೂದ ಲನ್ನೂ ಎಳೆಯಬೇಡ. ‘ಇಸ್ರಾಈಲ್ ಜನಾಂಗದ ನಡುವೆ ನೀನು ಒಡಕುಂಟು ಮಾಡಿದೆ, ನನ್ನ ಮಾತ ನ್ನು ಕೇಳಲಿಲ್ಲ’ ಎಂದು ನೀನು ನನ್ನ ಬಗ್ಗೆ ಹೇಳುವಿ’ ಎಂದು ನಾನು ಭಯಪಟ್ಟೆ’ ಎಂದು ಉತ್ತರಿಸಿದರು.

95

ಆಗ ಮೂಸಾ, “ಓ ಸಾಮಿರೀ, ನಿನ್ನ ಸಂಗತಿ ಯೇನು? ಎಂದು ಕೇಳಿದರು.

96

ಅವನು, “ಇವರಿಗೆ ಕಾಣಿಸದಿದ್ದ ಕೆಲವು ವಿಚಾರ ವನ್ನು ನಾನು ಕಂಡೆನು. ಆದುದರಿಂದ ದೂತರ ಪಾದದಡಿಯಿಂದ ನಾನು ಮಣ್ಣಿನ ಹಿಡಿಯನ್ನು ತೆಗೆದು ಅದಕ್ಕೆ ಹಾಕಿದೆ. ನನ್ನ ಮನಸ್ಸು ನನಗೆ ಹೀಗೆಯೇ ಚಂದವಾಗಿ ಕಾಣಿಸಿತು” ಎಂದನು .

97

ಮೂಸಾ ಹೀಗೆ ಹೇಳಿದರು, “ಹಾಗಾದರೆ ಇಲ್ಲಿಂದ ಹೊರಟು ಹೋಗು. ನಿನ್ನ ಜೀವಮಾನವಿಡೀ “ನನ್ನನ್ನು ಮುಟ್ಟಬೇಡಿರಿ” ಎಂದು ಹೇಳುತ್ತಿರು. ನಿನಗೆ ನಿಗದಿ ಮಾಡಲಾದ ದಿನವೊಂದಿದೆ. ಅದು ನಿನಗೆ ಉಲ್ಲಂಘಿಸಲ್ಪಡಲಾರದು. ನೀನು ಪೂಜಿಸಿದ ಈ ಆರಾಧ್ಯ ವಸ್ತುವನ್ನು ನೋಡು, ನಾವಿನ್ನು ಇದನ್ನು ಸುಟ್ಟು ಹಾಕಿ, ಆಮೇಲೆ ಅದನ್ನು ಹುಡಿ ಮಾಡಿ ಸಮುದ್ರದಲ್ಲಿ ಹರಡಿ ಬಿಡುವೆವು.

98

ಜನರೇ, ನಿಮ್ಮ ದೇವನು ಏಕಮಾತ್ರ ಅಲ್ಲಾಹನಾಗಿದ್ದು ಅವನ ಹೊರತು ಅನ್ಯ ದೇವನಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನು ವ್ಯಾಪಿಸಿ ಕೊಂಡಿದೆ”.

99

ಓ ಪೈಗಂಬರರೇ, ಈ ರೀತಿ ನಾವು ನಿಮಗೆ ಕೆಲವು ಗತ ವೃತ್ತಾಂತವನ್ನು ತಿಳಿಸುತ್ತೇವೆ. ನಮ್ಮ ಕಡೆಯಿಂದ ನೀತಿ ಭೋಧೆಯನ್ನು (ಖುರ್‍ಆನ್) ನಿಮಗೆ ನಾವು ಕೊಟ್ಟಿದ್ದೇವೆ.

100

ಯಾರು ಇದರಿಂದ ವಿಮುಖನಾಗುತ್ತಾನೋ, ಅವನು ಪುನರುತ್ಥಾನದ ದಿನ ಕಠಿಣವಾದ ಪಾಪಗಳ ಹೊರೆ ಖಂಡಿತ ಹೊರುವನು.

101

ಅದರಲ್ಲಿ ಅವರು ಸದಾ ಕಾಲ ಇರುವರು. ಅಂತ್ಯ ದಿನ, ಅವರು ಹೊರಬೇಕಾದ ಹೊರೆಯು ಅವರಿಗೆ ಅತ್ಯಂತ ಅಸಹನೀಯವೆನಿಸುವುದು.

102

ಅಂದರೆ ಸೂರ್ ಕಹಳೆ ಊದಲಾಗುವ ದಿನ’ ನಾವು ಅಪರಾಧಿಗಳನ್ನು ನೀಲನೇತ್ರದವರನ್ನಾಗಿ ಒಟ್ಟುಗೂಡಿಸಲಿದ್ದೇವೆ.

103

ಅವರು ಪರಸ್ಪರ ಪಿಸು ಮಾತಿನಲ್ಲಿ, “ನೀವು ಭೂಲೋಕದಲ್ಲಿ ಬಹುಶಃ ಕೇವಲ ಹತ್ತು ದಿನಗಳನ್ನು ಮಾತ್ರ ಕಳೆದಿರುವಿರಿ’’ ಎನ್ನುವರು.

104

ಆಗ ಅವರಲ್ಲಿ ಅತ್ಯಧಿಕ ಅಂದಾಜು ಮಾಡು ವಾತನು “ನಿಮ್ಮ ಭೂಲೋಕದ ಜೀವನಾವಧಿಯು ಒಂದು ದಿನ ಮಾತ್ರವಿತ್ತು” ಎಂದು ಹೇಳುವುದನ್ನು ನಾವು ಚೆನ್ನಾಗಿ ಬಲ್ಲೆವು.

105

ಪರ್ವತಗಳ ಬಗ್ಗೆ ಇವರು ನಿಮ್ಮಲ್ಲಿ ಕೇಳುತ್ತಾರೆ. ಆಗ ಹೇಳಿರಿ, ನನ್ನ ಪ್ರಭು ಅವುಗಳನ್ನು ಧೂಳನ್ನಾಗಿ ಮಾಡಿ ಗಾಳಿಯಲ್ಲಿ ಹಾರಿಸಿ ಬಿಡುವನು.

106

ಆಮೇಲೆ ಅವುಗಳನ್ನು ಸಮತಟ್ಟಾದ ಬಟ್ಟ ಬಯಲನ್ನಾಗಿ ಮಾಡುವನು.

107

ಯಾವುದೇ ಏರು-ತಗ್ಗುಗಳನ್ನು ಅಲ್ಲಿ ನೀನು ಕಾಣಲಾರೆ.

108

ಅಂದು ಜನರು ಕೂಗಿ ಕರೆಯುವವನ ಹಿಂದೆ ಯಾವುದೇ ವಕ್ರತೆಯಿಲ್ಲದೆ ನೇರವಾಗಿ ಸಾಗಿ ಬರುವರು. ಸದ್ದು-ಗದ್ದಲಗಳು ಕರುಣಾನಿಧಿಯಾದ ಅಲ್ಲಾಹನ ಮುಂದೆ ಅಡಗಿ ಹೋಗಿವೆ. ಕಾಲ ಸಪ್ಪಳದ ಹೊರತು ಇನ್ನೇನನ್ನೂ ನೀವು ಕೇಳಲಾರಿರಿ.

109

ಅಂದು ಕರುಣಾನಿಧಿಯಾದ ಅಲ್ಲಾಹನು ಯಾರಿಗೆ ಅನುಮತಿ ನೀಡುವನೋ ಮತ್ತು ಯಾರ ಮಾತನ್ನು ಕೇಳಲು ತೃಪ್ತಿಪಡುವನೋ ಅವರ ಹೊರತು ಯಾರ ಶಿಫಾರಸ್ಸೂ ಫಲಕಾರಿಯಾಗದು.

110

ಅವನು ಜನರ ಮುಂದಿನ ಮತ್ತು ಹಿಂದಿನ ಎಲ್ಲ ಸ್ಥಿತಿಯನ್ನೂ ಅರಿಯುತ್ತಾನೆ. ಆದರೆ ಇತ ರರಿಗೆ ಅದರ ಬಗ್ಗೆ ಯಾವುದೇ ಜ್ಞಾನವಿಲ್ಲ .

111

ಚಿರಂತನನೂ ಸರ್ವ ನಿಯಾಮಕನೂ ಆದ ಅಲ್ಲಾಹನ ಮುಂದೆ ಮುಖಗಳು ಬಾಗಿವೆ. ಆಗ ಅಕ್ರಮದ ಪಾಪ ಭಾರ ಹೊತ್ತಿರುವವನು ನಿರಾಶನಾಗುವನು .

112

ಯಾರು, ಸತ್ಯ ವಿಶ್ವಾಸಿಯಾಗಿದ್ದುಕೊಂಡು, ಸತ್ಕರ್ಮಗಳನ್ನು ಮಾಡುತ್ತಾನೋ ಆತನಿಗೆ ಯಾವುದೇ ಅನ್ಯಾಯ ಮತ್ತು ಹಕ್ಕುಚ್ಯುತಿಯ ಭಯವಿಲ್ಲ.

113

(ಓ ಪೈಗಂಬರರೇ,) ಈ ರೀತಿ ನಾವು ಇದನ್ನು ಅರಬೀ ಭಾಷೆಯ ಖುರ್‍ಆನ್ ಆಗಿ ಅವತೀರ್ಣಗೊಳಿಸಿದ್ದೇವೆ. ಇದರಲ್ಲಿ ವಿವಿಧ ರೂಪದಲ್ಲಿ ಎಚ್ಚರಿಕೆಯನ್ನು ಆವರ್ತಿಸಿದ್ದೇವೆ. ಇವರು ದುರ್ಮಾರ್ಗದಿಂದ ದೂರವಿರಲಿಕ್ಕಾಗಿ ಅಥವಾ ಅದರ ಮೂಲಕ ಇವರಲ್ಲಿ ಪ್ರಜ್ಞೆ ಮೂಡಲಿಕ್ಕಾಗಿ.

114

ಅಲ್ಲಾಹನು ಮಹೋನ್ನತನು, ಯಥಾರ್ಥ ಸಾಮ್ರಾಟನು. ನಿಮ್ಮ ಮೇಲೆ ಖುರ್‍ಆನಿನ ಬೋಧ ನೆಯು ಸಂಪೂರ್ಣವಾಗಿ ಅವತೀರ್ಣಗೊಳ್ಳುವು ದಕ್ಕೆ ಮುಂಚೆ ಅದನ್ನು ಪಠಿಸುವುದ ರಲ್ಲಿ ದುಡು ಕಬೇಡಿರಿ. “ಓ ನನ್ನ ಪ್ರಭೂ ನನಗೆ ಇನ್ನಷ್ಟು ಜ್ಞಾನ ದಯಪಾಲಿಸು” ಎಂದು ಪ್ರಾರ್ಥಿಸಿರಿ.

115

ನಾವು ಇದಕ್ಕೆ ಮುಂಚೆ ಆದಮರಿಗೆ ಅಪ್ಪಣೆ ಕೊಟ್ಟಿದ್ದೆವು. ಆದರೆ ಅವರು ಮರೆತರು. ನಾವು ಅವರಲ್ಲಿ ಸ್ಥಿರಚಿತ್ತವನ್ನು ಕಾಣಲಿಲ್ಲ.

116

ದೇವಚರರೊಡನೆ ಆದಮರಿಗೆ ಸಾಷ್ಟಾಂಗವೆರಗಿರೆಂದು ನಾವು ಆಜ್ಞಾಪಿಸಿದ ಸಂದರ್ಭವನ್ನು ಸ್ಮರಿಸಿರಿ. ಆಗ ಅವರೆಲ್ಲರೂ ಸಾಷ್ಟಾಂಗವೆರಗಿದರು. ಆದರೆ ಇಬ್‍ಲೀಸನು ಮಾತ್ರ ನಿರಾ ಕರಿಸಿದನು.

117

ಆಗ ನಾವು ಆದಮರಿಗೆ, “ಇವನು ನಿಮ್ಮ ಮತ್ತು ನಿಮ್ಮ ಪತ್ನಿಯ ಶತ್ರು. ಆದ್ದರಿಂದ ಇವನು ನಿಮ್ಮಿಬ್ಬರನ್ನೂ ಸ್ವರ್ಗದಿಂದ ಹೊರಹಾಕಿಸದಿರಲಿ. ಹಾಗಾದರೆ ನೀವು ಕಷ್ಟಕ್ಕೀಡಾಗುವಿರಿ.

118

ನೀವಿಲ್ಲಿ ಹಸಿದಿರಬೇಕಾಗಿಲ್ಲ. ವಿವಸ್ತ್ರರಾಗ ಬೇಕಾಗಿಲ್ಲ.

119

ಬಾಯಾರಬೇಕಾಗಿಲ್ಲ. ಬಿಸಿಲು ತಟ್ಟಬೇಕಿಲ್ಲ” ಎಂದೆವು.

120

ಆದರೆ ಶೈತಾನನು ಅವರನ್ನು ಪುಸಲಾಯಿಸಿ ದನು. “ಓ ಆದಮ್, ನಾನು ನಿಮಗೆ ಅಮರಜೀವನವೂ ಅನಂತ ಸಾಮ್ರಾಜ್ಯವೂ ಸಿಗುವಂತಹ ವೃಕ್ಷವನ್ನು ತೋರಿಸಲೇ?” ಎಂದು ಕೇಳಿದನು.

121

ಕೊನೆಗೆ ಇಬ್ಬರೂ (ಆದಮ್ ಮತ್ತು ಹವ್ವಾ) ಆ ಮರದ ಫಲವನ್ನು ತಿಂದರು. ಆಗ ಅವರ ಗುಪ್ತಾಂಗಗಳು ಪರಸ್ಪರ ಗೋಚರವಾದುವು. ಕೂಡಲೇ ಇಬ್ಬರೂ ಸ್ವರ್ಗದ ಎಲೆಗಳಿಂದ ಮೈ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಆದಮರು ತಮ್ಮ ಪ್ರಭುವಿನ ಆಜ್ಞೋಲ್ಲಂಘನೆ ಮಾಡಿದರು ಮತ್ತು ನಿರಾಶೆಗೊಳಗಾದರು .

122

ಅನಂತರ ಅವರ ಪ್ರಭು ಅವರನ್ನು ಪುನೀತರಾಗಿ ಆಯ್ಕೆ ಮಾಡಿದನು. ಅವರ ಪಶ್ಚಾತ್ತಾಪ ಸ್ವೀಕರಿಸಿದನು. ಅವರಿಗೆ ಸನ್ಮಾರ್ಗದರ್ಶನ ಮಾಡಿದನು.

123

ಅಲ್ಲಾಹು ಹೇಳಿದನು, “ನೀವಿಬ್ಬರೂ (ನಿಮ್ಮ ಪರಿವಾರ ಸಮೇತ) ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಕೆಲವರಿಗೆ ಶತ್ರುಗ ಳಾಗಿರುವಿರಿ. ಮುಂದೆ ನನ್ನ ವತಿಯಿಂದ ಮಾರ್ಗದರ್ಶನ ತಲುಪಿದರೆ, ನನ್ನ ಆ ಮಾರ್ಗ ದರ್ಶನವನ್ನು ಅನುಸರಿಸಿದವನು ದಾರಿಗೆಡಲಾ ರನು. ಪರಲೋಕದಲ್ಲಿ ಸಂಕಷ್ಟಕ್ಕೆ ಒಳಗಾಗ ಲಾರನು” .

124

ಯಾರು ನನ್ನ ಉದ್ಬೋಧ (ಖುರ್‍ಆನ್)ದಿಂದ ವಿಮುಖನಾಗುತ್ತಾನೋ ಅವನ ಜೀವನವು ಭೂಲೋಕದಲ್ಲಿ ಸಂಕೀರ್ಣವಾಗುವುದು . ಪುನರುತ್ಥಾನದ ದಿನ ನಾವು ಅವನನ್ನು ಕುರು ಡನನ್ನಾಗಿ ಮಾಡಿ ಎಬ್ಬಿಸುತ್ತೇವೆ”.

125

ಅವನು, “ಓ ನನ್ನ ಪ್ರಭೂ, ಹಿಂದೆ ನಾನು ದೃಷ್ಟಿ ಯುಳ್ಳವನಾಗಿದ್ದೆ. ನನ್ನನ್ನು ಇಲ್ಲೇಕೆ ಕುರು ಡನಾಗಿ ಎಬ್ಬಿಸಿದೆ?” ಎಂದು ಕೇಳುವನು.

126

ಆಗ ಅಲ್ಲಾಹು ಹೀಗೆ ಹೇಳುವನು. ``ಸಂಗತಿ ಹಾಗಿದೆ. ಆದರೆ ನಮ್ಮ ನಿದರ್ಶನಗಳು ನಿನ್ನ ಬಳಿಗೆ ಬಂದಾಗ ನೀನು ಮರೆತಿದ್ದೆ. ಹಾಗೆಯೇ (ನೀನು ಮರೆತಂತೆ) ಇಂದು ನೀನು ಮರೆಯಲ್ಪಡುತ್ತಿರುವೆ”.

127

ಹೀಗೆ ಧಿಕ್ಕಾರದಲ್ಲಿ ಮಿತಿ ಮೀರುವ ಹಾಗೂ ತನ್ನ ಪ್ರಭುವಿನ ನಿದರ್ಶನಗಳ ಮೇಲೆ ವಿಶ್ವಾಸ ವಿರಿಸದವನಿಗೆ (ಭೂಲೋಕದಲ್ಲಿ) ನಾವು ಪ್ರತಿ ಫಲ ಕೊಡುತ್ತೇವೆ. ಪರಲೋಕದ ಶಿಕ್ಷೆಯು ಅತಿ ಕಠೋರವೂ ಅತಿ ಶಾಶ್ವತವೂ ಆಗಿರುತ್ತದೆ.

128

ಇವರಿಗಿಂತ ಮುಂಚೆ ನಾವು ಅದೆಷ್ಟೋ ಜನಾಂ ಗಗಳನ್ನು ನಾಶಗೊಳಿಸಿದ್ದೇವೆ. ಅವರ ನಿವಾಸ ಗಳ ದಾರಿಯಾಗಿ ಇವರು ಸಂಚರಿಸುತ್ತಾರೆ. ಇದರಿಂದ ಇವರಿಗೆ ಮಾರ್ಗದರ್ಶನ ಸಿಗಲಿಲ್ಲವೇ? ಖಂಡಿತ ಬುದ್ಧಿಶಾಲಿಗಳಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

129

ನಿನ್ನ ಪ್ರಭುವಿನ ಕಡೆಯಿಂದ ಮೊದಲೇ ನಿರ್ಧರಿತವಾದ ಒಂದು ವಚನ ಹಾಗೂ ನಿಗದಿ ತ ಅವಧಿಯು ಇಲ್ಲದಿರುತ್ತಿದ್ದರೆ, ವಿನಾಶ ಕಾರ್ಯವು (ಇಹದಲ್ಲೆ) ಇವರಿಗೆ ಅನಿವಾರ್ಯವಾಗುತ್ತಿತ್ತು .

130

ಆದುದರಿಂದ (ಓ ಪೈಗಂಬರರೇ,) ಅವರ ಮಾತುಗಳ ಬಗ್ಗೆ ತಾಳ್ಮೆ ವಹಿಸಿರಿ. ಸೂರ್ಯೋ ದಯ ಹಾಗೂ ಸೂರ್ಯಾಸ್ತಮಾನಕ್ಕೆ ಮುಂಚೆ ನಿಮ್ಮ ಪ್ರಭುವಿನ ಸ್ತುತಿಸ್ತೋತ್ರದೊಂದಿಗೆ ಅವನ ಪಾವಿತ್ರ್ಯವನ್ನು ಕೊಂಡಾಡಿರಿ. ರಾತ್ರಿ ವೇಳೆಗಳಲ್ಲಿಯೂ ಹಗಲಿನ ಅಂಚುಗಳಲ್ಲಿಯೂ ಅವನ ಪಾವಿತ್ರ್ಯವನ್ನು ಸ್ತುತಿಸಿರಿ. ಇದರಿಂದ ನೀವು ಸಂತೃಪ್ತಿ ಪಡೆಯುವಿರಿ.

131

ಇವರ ಪೈಕಿ ಹಲವರಿಗೆ ನಾವು ಸುಖ ನೀಡಿದ ಐಹಿಕ ಬದುಕಿನ ವಿವಿಧ ಮೋಡಿಗಳತ್ತ ಕಣ್ಣೆತ್ತಿ ನೋಡದಿರಿ. ಏಕೆಂದರೆ ಅವುಗಳನ್ನು ಅವರಿಗೆ ನಾವು ಕೊಟ್ಟಿದ್ದೇವೆ. ನಿಮ್ಮ ಪ್ರಭು ನೀಡುವ ಪಾರತ್ರಿಕ ಜೀವನ ಸುಖವು ಶ್ರೇಷ್ಟವೂ ಶಾಶ್ವತವೂ ಆಗಿದೆ.

132

ನಿಮ್ಮ ಕುಟುಂಬದವರಿಗೆ ನಮಾಝಿನ ಅಪ್ಪಣೆ ಕೊಡಿರಿ. ಅದರಲ್ಲಿ ಬರುವ ಕಷ್ಟಗಳನ್ನು ಸಹಿಸಿರಿ. ನಾವು ನಿಮ್ಮಿಂದ ಆಹಾರವನ್ನು ಕೇಳುವುದಿಲ್ಲ. ನಾವೇ ನಿಮಗೆ ಆಹಾರ ಕೊಡುತ್ತಿದ್ದೇವೆ. ಉತ್ತಮ ಪರ್ಯವಸಾನ ಭಕ್ತರಿಗಾಗಿದೆ.

133

‘ಅವರೇಕೆ ತಮ್ಮ ರಕ್ಷಕನ ಕಡೆಯಿಂದ ಒಂದು ಅತಿಮಾನುಷ ದೃಷ್ಠಾಂತವನ್ನು ಕೊಂಡು ಬಂದಿಲ್ಲ?’ ಎಂದು ಅವರು ಪ್ರಶ್ನಿಸುತ್ತಾರೆ. ಪೂರ್ವವೇದ ಗ್ರಂಥಗಳಲ್ಲಿರುವುದನ್ನು ಪುಷ್ಟೀಕರಿಸುತ್ತಿರುವ ಖುರ್‍ಆನ್ ದೃಷ್ಟಾಂತವಾಗಿ ಅವರ ಬಳಿ ಬಂದಿದೆಯಲ್ಲ!

134

ಪ್ರವಾದಿಯವರ ಆಗಮನಕ್ಕೆ ಮುನ್ನ ನಾವು ಇವರನ್ನು ಶಿಕ್ಷೆಯಿಂದ ನಾಶಗೊಳಿಸುತ್ತಿದ್ದರೆ, “ಓ ನಮ್ಮ ಪ್ರಭೂ, ನೀನು ನಮ್ಮ ಬಳಿಗೆ ಓರ್ವ ಸಂದೇಶವಾಹಕನನ್ನೇಕೆ ಕಳುಹಿಸಲಿಲ್ಲ? ನಾವು ನಿಂದ್ಯರೂ ನೀಚರೂ ಆಗುವುದಕ್ಕೆ ಮುಂಚೆಯೇ ನಾವು ನಿನ್ನ ಪುರಾವೆಗಳ ಅನುಸರಣೆ ಮಾಡಿಕೊಳ್ಳುತ್ತಿದ್ದೆವಲ್ಲ!” ಎಂದು ಇವರು ಹೇಳುತ್ತಿದ್ದರು .

135

(ಓ ಪೈಗಂಬರರೇ,) ಹೇಳಿರಿ; ‘ಪ್ರತಿಯೊಬ್ಬನೂ ಕರ್ಮಫಲದ ನಿರೀಕ್ಷೆಯಲ್ಲೇ ಇದ್ದಾನೆ, ಆದ್ದರಿಂದ ನೀವು ನಿರೀಕ್ಷಿಸುತ್ತಲಿರಿ, ಯಾರು ನೇರವಾದ ಮಾರ್ಗದಲ್ಲಿ ನೆಲೆಗೊಂಡವರು, ಯಾರು ಸನ್ಮಾರ್ಗ ಪಡೆದವರು ಎಂದು ಸದ್ಯವೇ ನಿಮಗೆ ತಿಳಿದು ಬರುವುದು’