ಆಲ್ ಇಸ್ಲಾಂ ಲೈಬ್ರರಿ
1

ಅಲಿಫ್ ಲಾಮ್ ರಾ, ಇವು ಸತ್ವಪೂರ್ಣ ಗ್ರಂಥದ ಸೂಕ್ತಗಳು.

2

ಜನರಿಗೆ ಎಚ್ಚರಿಕೆ ನೀಡಲಿಕ್ಕೂ ಸತ್ಯವಿಶ್ವಾಸಿಗಳಿಗೆ ಅವರ ಪ್ರಭುವಿನ ಬಳಿ ಸತ್ಯದ ಸ್ಥಾನವಿದೆ ಎಂಬ ಸುವಾರ್ತೆ ನೀಡಲಿಕ್ಕೂ ಅವರೊಳಗಿಂದಲೇ ಓರ್ವ ಮನುಷ್ಯನ ಕಡೆಗೆ ನಾವು ಸಂದೇಶ ಕಳುಹಿಸಿರುವುದು ಜನರಿಗೆ ಆಶ್ಚರ್ಯವಾಯಿತೇ? ಸತ್ಯನಿಷೇಧಿಗಳು ಹೇಳಿದರು - `ಇವನೊಬ್ಬ ಪ್ರತ್ಯಕ್ಷವಾದ ಮಾಟಗಾರನೇ ಹೌದು’ .

3

ಆಕಾಶಗಳನ್ನೂ ಭೂಮಿಯನ್ನೂ ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪ್ರಭು. ನಂತರ ಅವನಿಗೆ ಸಂಗತವಾಗುವ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿ ಕಾರ್ಯಗಳನ್ನು ನಿಯಂತ್ರಿಸುತ್ತಿರುವನು. ಅವನ ಅನುಮತಿಯ ಹೊರತಾಗಿ ಶಿಫಾರಸು ಮಾಡುವವನು ಯಾವನೂ ಇಲ್ಲ. ಅವನೇ ನಿಮ್ಮ ಪ್ರಭುವಾದ ಅಲ್ಲಾಹು. ಆದುದರಿಂದ ನೀವು ಅವನನ್ನು ಆರಾಧಿಸಿರಿ. ನೀವು ಯೋಚಿಸಿ ಅರ್ಥ ಮಾಡಿಕೊಳ್ಳುವುದಿಲ್ಲವೇ?

4

ಅವನೆಡೆಗೇ ನಿಮ್ಮೆಲ್ಲರ ನಿರ್ಗಮನ. ಇದು ಅಲ್ಲಾಹನ ಸತ್ಯ ವಾಗ್ದಾನ. ನಿಶ್ಚಯವಾಗಿಯೂ ಸೃಷ್ಟಿಯ ಆರಂಭವನ್ನು ಅವನೇ ಮಾಡುತ್ತಾನೆ. ಅನಂತರ ಅವನೇ ಇನ್ನೊಮ್ಮೆ ಸೃಷ್ಟಿಸುವನು. ಸತ್ಯ ವಿಶ್ವಾಸವಿರಿಸಿ ಸತ್ಕರ್ಮವೆಸಗುವವರಿಗೆ ನ್ಯಾಯೋ ಚಿತ ಪ್ರತಿಫಲ ನೀಡುವುದಕ್ಕಾಗಿ. ಸತ್ಯ ನಿಷೇಧಿಗಳಿಗೆ ಕುದಿಯುವ ಪಾನೀಯ ಹಾಗೂ ವೇದನಾ ಯುಕ್ತ ಶಿಕ್ಷೆಯನ್ನು ಅವರ ಸತ್ಯನಿಷೇಧಕ್ಕೆ ಪ್ರತಿಫಲವಾಗಿ ನೀಡಲಾಗುತ್ತದೆ.

5

ಅವನೇ ಸೂರ್ಯನನ್ನು ಪ್ರಕಾಶಮಾನವನ್ನಾಗಿ ಮಾಡಿದವನು. ಚಂದ್ರನಿಗೆ ಹೊಳಪನ್ನು ಕೊಟ್ಟವನು. ನೀವು ವರ್ಷಗಳ ಎಣಿಕೆಗಳನ್ನೂ ತಾರೀಕುಗಳ ಗಣನೆಯನ್ನೂ ತಿಳಿದುಕೊಳ್ಳಲಿಕ್ಕಾಗಿ ಅದಕ್ಕೆ (ವೃದ್ಧಿ ಕ್ಷಯಗಳ) ಘಟ್ಟಗಳನ್ನೂ ಸರಿಯಾಗಿ ನಿರ್ಣಯಿಸಿಕೊಟ್ಟವನು. ಒಂದು ನಿಜವಾದ ಗುರಿಯಿಲ್ಲದೆ ಅಲ್ಲಾಹು ಏನನ್ನೂ ಸೃಷ್ಟಿಸಲಿಲ್ಲ. ಅವನು ಅರಿವುಳ್ಳವರಿಗೆ ತನ್ನ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತಾನೆ.

6

ಖಂಡಿತವಾಗಿಯೂ ರಾತ್ರಿಹಗಲುಗಳ ವ್ಯತ್ಯಾಸದಲ್ಲೂ ಅಲ್ಲಾಹನು ಭೂಮಿ-ಆಕಾಶಗಳಲ್ಲಿ ಸೃಷ್ಟಿಸಿರುವ ಪ್ರತಿಯೊಂದು ವಸ್ತುವಿನಲ್ಲಿಯೂ ಸೂಕ್ಷತೆ ಪಾಲಿಸುವ ಜನರಿಗೆ ನಿದರ್ಶನಗಳಿವೆ.

7

ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದ, ಐಹಿಕ ಜೀವನದಿಂದ ತೃಪ್ತರಾಗಿರುವ ಹಾಗೂ ನಮ್ಮ ದೃಷ್ಟಾಂತಗಳಿಂದ ಯಾವ ಜನರು ಅಲಕ್ಷ್ಯರಾಗಿರುವರೋ

8

ಅವರ ಅಂತಿಮ ವಾಸಸ್ಥಾನವು ಘೋರ ನರಕವಾಗಿರುವುದು. ಇದು ಅವರು ಎಸಗಿದ ಕೆಡುಕುಗಳಫಲವಾಗಿದೆ.

9

ಖಂಡಿತವಾಗಿಯೂ ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಮಾಡುತ್ತಿದ್ದವರನ್ನು ಅವರ ಪ್ರಭು ಅವರ ಸತ್ಯವಿಶ್ವಾಸದ ನಿಮಿತ್ತವಾಗಿ ಸನ್ಮಾರ್ಗದಲ್ಲಿ ನಡೆಸುವನು; ಅನುಗ್ರಹಭರಿತ ಸ್ವರ್ಗೋದ್ಯಾನಗಳಲ್ಲಿ ಅವರಿಗೆ ವಾಸಸ್ಥಾನವಿರುವುದು. ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು.

10

ಅಲ್ಲಿ ಅವರ ಪ್ರಾರ್ಥನೆಯು `ಓ ಅಲ್ಲಾಹ್, ನೀನುಪರಿಶುದ್ಧನು, ನಾವು ನಿನ್ನ ಸಂಕೀರ್ತನೆ ಮಾಡುವೆವು’ ಎಂದಾಗಿರುತ್ತದೆ. ಅವರ ಪರಸ್ಪರ ಅಭಿವಾದನ ‘ಸಲಾಮ್’ ಎಂದಾಗಿರುವುದು. ಅವರ ಪ್ರಾರ್ಥನೆಯ ಮಾತಿನ ಕೊನೆಯ ನುಡಿಯು; ಸರ್ವಸ್ತುತಿ ಸ್ತೋತ್ರಗಳೂ ಸಕಲ ಲೋಕಗಳ ಪ್ರಭುವಾದ ಅಲ್ಲಾಹನಿಗೆ ಎಂದೇ ಆಗಿರುವುದು .

11

ಜನರು ಹಿತಕ್ಕೆ ತವಕಪಡುವಂತೆ ಅವರಿಗೆ ಕೇಡುಂಟುಮಾಡಲು ಅಲ್ಲಾಹನು ತವಕಪಡುತ್ತಿದ್ದರೆ, ಅವರ ಜೀವನಾವಧಿಯನ್ನು ಮುಗಿಸಿ ಬಿಡಲಾ ಗುತ್ತಿತ್ತು. ಆದುದರಿಂದ ನಮ್ಮ ಭೇಟಿಯನ್ನು ನಿರೀಕ್ಷಿಸದವರನ್ನು ನಾವು ಅವರ ಧಿಕ್ಕಾರದಲ್ಲಿ ಅಲೆದಾಡುತ್ತಿರಲು ಬಿಟ್ಟುಬಿಡುತ್ತೇವೆ.

12

ಮನುಷ್ಯನು ನಿಂತೂ ಕುಳಿತೂ ಮಲಗಿಯೂ ನಮ್ಮೊಡನೆ ಮೊರೆಯಿಡುತ್ತಾನೆ. ಆದರೆ ನಾವು ಅವನ ಕಷ್ಟವನ್ನು ದೂರ ಮಾಡಿದರೆ, ಅವನಿಗೆ ತಟ್ಟಿದ ಸಂಕಷ್ಟದ ವಿಷಯದಲ್ಲಿ ನಮ್ಮೊಡನೆ ಅವನು ಮೊರೆಯಿಡಲೇ ಇಲ್ಲವೋ ಎಂಬಂತೆ ನಡೆದು ಬಿಡುತ್ತಾನೆ. ಹೀಗೆ ಅತಿಕ್ರಮಿಸಿ ನಡೆಯುವವರಿಗೆ ಅವರ ಕೃತ್ಯಗಳನ್ನು ಮನೋಹರಗೊಳಿಸಲಾಗಿದೆ.

13

(ಓ ಜನರೇ;) ನಿಮಗಿಂತ ಮುಂಚಿನ ಜನಾಂ ಗಗಳನ್ನು ಅವರು ಅಕ್ರಮವೆಸಗಿದಾಗ ನಾವು ನಾಶ ಮಾಡಿದ್ದೇವೆ. ಅವರ ಸಂದೇಶವಾಹಕರು ಸುವ್ಯಕ್ತ ಪ್ರಮಾಣಗಳನ್ನು ಅವರ ಬಳಿಗೆ ತಂದರು. ಆದರೂ ಅವರು ವಿಶ್ವಾಸವಿಡಲಿಲ್ಲ. ನಾವು ಅಪರಾಧಿಗಳಿಗೆ ಪ್ರತಿಫಲವನ್ನು ಇದೇ ರೀತಿಯಲ್ಲಿ ಕೊಡುತ್ತೇವೆ.

14

ನೀವು ಹೇಗೆ ವರ್ತಿಸುತ್ತೀರೆಂದು ನೋಡಲಿಕ್ಕಾಗಿ ನಾವು ಅವರ ತರುವಾಯ ನಿಮ್ಮನ್ನು ಭೂಮಿ ಯಲ್ಲಿ ಪ್ರತಿನಿಧಿಯನ್ನಾಗಿ ಮಾಡಿದೆವು.

15

ನಮ್ಮ ಸುವ್ಯಕ್ತ ಪುರಾವೆಗಳನ್ನು ಅವರಿಗೆ ಓದಿ ಕೇಳಿಸುವಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯನ್ನಿರಿಸದವರು, ಇದರ ಬದಲಿಗೆ ಇನ್ನೊಂದು ಖುರ್‍ಆನನ್ನು ತನ್ನಿರಿ, ಇಲ್ಲವೆ ಇದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿರಿ ಎಂದು ಹೇಳುತ್ತಾರೆ . (ಓ ಪೈಗಂಬರರೇ,) ಹೇಳಿರಿ ನನ್ನ ಕಡೆಯಿಂದ ಅದನ್ನು ಮಾರ್ಪಾಟು ಮಾಡುವುದು ನನಗೆ ಸಲ್ಲದು. ನನಗೆ ಕಳುಹಿಸಲ್ಪಡುವ ಸಂದೇಶಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನು ನನ್ನ ಪ್ರಭುವಿಗೆ ಧಿಕ್ಕಾರ ತೋರಿದರೆ ಒಂದು ಭಯಾನಕ ದಿನದ ಶಿಕ್ಷೆಯನ್ನು ನಾನು ಭಯಪಡುತ್ತೇನೆ.

16

ಹೇಳಿರಿ - ಅಲ್ಲಾಹನು (ಇದನ್ನು ಅವತೀರ್ಣ ಗೊಳಿಸದಿರಲು) ಬಯಸಿದ್ದರೆ, ನಾನು ನಿಮಗೆ ಈ ಖುರ್‍ಆನನ್ನು ಓದಿ ಕೇಳಿಸುತ್ತಿರಲಿಲ್ಲ. ಮತ್ತು ಅವನು ನಿಮಗೆ ಇದನ್ನು ತಿಳಿಸುತ್ತಲೂ ಇರಲಿಲ್ಲ. ನಾನು ಇದಕ್ಕೆ ಮುಂಚೆ ನಿಮ್ಮ ನಡುವೆ ಕೆಲವು ಕಾಲ ಕಳೆದಿರುವೆನಲ್ಲ? ನೀವೇನು ಯೋಚಿಸುವುದಿಲ್ಲವೇ?

17

ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೊರಿಸುವವನಿಗಿಂತ ಅಥವಾ ವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾರೆ? ನಿಶ್ಚಯವಾಗಿಯೂ ಅಪರಾಧಿಗಳು ಎಂದೂ ವಿಜಯಹೊಂದಲಾರರು.

18

ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಉಪದ್ರವವನ್ನಾಗಲಿ ಉಪಕಾರವನ್ನಾಗಲಿ ಉಂಟು ಮಾಡ ದವುಗಳನ್ನು ಆರಾಧಿಸುತ್ತಾರೆ. ‘ಆ ಆರಾಧ್ಯರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರು’ ಎಂದು ಅವರು ಹೇಳುತ್ತಾರೆ. (ಓ ಪೈಗಂಬ ರರೇ,) ಹೇಳಿರಿ, ‘ಅಲ್ಲಾಹನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ತಿಳಿಯದಂತಹ ಸುದ್ದಿಯನ್ನು ನೀವು ಅವನಿಗೆ ತಿಳಿಸುತ್ತೀರಾ?’ ಇವರು ಸಹಭಾಗಿಗಳನ್ನಾಗಿ ಮಾಡುತ್ತಿರುವವುಗಳಿಂದ ಅವನು ಅತಿ ಪಾವನನೂ ಉನ್ನತನೂ ಆಗಿರುತ್ತಾನೆ.

19

ಮಾನವರು ಒಂದೇ ಸಮುದಾಯವಾಗಿದ್ದರು. ಅನಂತರ ಅವರು ಭಿನ್ನಾಭಿಪ್ರಾಯ ತಾಳಿದರು . ನಿಮ್ಮ ಪ್ರಭುವಿನ ಕಡೆಯಿಂದ ಒಂದು ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರು ಪರಸ್ಪರ ಭಿನ್ನಾಭಿಪ್ರಾಯ ವಿರಿಸುತ್ತಿರುವ ವಿಷಯದಲ್ಲಿ ಅವರ ನಡುವೆ (ಈಗಾಗಲೇ) ತೀರ್ಮಾನ ಮಾಡಿ ಬಿಡಲಾಗುತ್ತಿತ್ತು.

20

ಈ ಪ್ರವಾದಿಯ ಮೇಲೆ ಇವನ ಪ್ರಭುವಿನ ಕಡೆಯಿಂದ ಒಂದು ದೃಷ್ಟಾಂತವೇಕೆ ಇಳಿಸಿಕೊಡಲಾ ಗಿಲ್ಲವೆಂದು ಇವರು ಕೇಳುತ್ತಾರೆ. ಅವರೊಡನೆ, ಹೇಳಿರಿ, ಅದೃಶ್ಯ ಜ್ಞಾನ ಅಲ್ಲಾಹನಿಗೆ ಮಾತ್ರವಿದೆ. ಆದ್ದರಿಂದ ನೀವು ಕಾಯುತ್ತಿರಿ, ನಾನೂ ನಿಮ್ಮೊಂದಿಗೆ ಕಾದುಕೊಂಡಿರುತ್ತೇನೆ ಎಂದು.

21

ಜನರಿಗೆ ಕಷ್ಟತಟ್ಟಿದ ಬಳಿಕ ಕಾರುಣ್ಯದ ಸವಿ ಯನ್ನುಣಿಸಿದಾಗ ಆ ಕೂಡಲೆ ಅವರು ನಮ್ಮ ನಿದರ್ಶನಗಳ ಬಗ್ಗೆ ಕುತಂತ್ರಗಳನ್ನು ಆರಂಭಿಸಿ ಬಿಡುತ್ತಾರೆ. ಹೇಳಿರಿ; ಅಲ್ಲಾಹು ತಂತ್ರಗಾರಿ ಕೆಯಲ್ಲಿ ಅತಿ ಶೀಘ್ರನು. ನಮ್ಮ ದೂತರು ನಿಮ್ಮ ಎಲ್ಲ ಕುತಂತ್ರಗಳನ್ನೂ ಬರೆದಿಡುತ್ತಿದ್ದಾರೆ ಎಂದು.

22

ನಿಮ್ಮನ್ನು ನೆಲ-ಜಲಗಳಲ್ಲಿ ಚಲಾಯಿಸುವವನೇ ಅವನು. ನೀವು ನಾವೆಗಳಲ್ಲಿರುತ್ತ ಅನುಕೂಲಕರ ಮಾರುತವು ಯಾತ್ರಿಕರನ್ನು ಕೊಂಡೊಯ್ಯುತ್ತ ಆನಂದ ತುಂದಿಲರಾಗಿರುವಾಗ ಹಠಾತ್ತನೆ ಸುಂಟರ ಗಾಳಿಯು ಅವರಿಗೆ ಬಲವಾಗಿ ಬೀಸಿ ಎಲ್ಲ ಕಡೆ ಗಳಿಂದಲೂ ತೆರೆಗಳು ಅಪ್ಪಳಿಸುತ್ತಿರುವಾಗ ಮತ್ತು ಅಪಾಯ ಆವರಿಸಿದೆ ಎಂದವರು ಭಾವಿಸುತ್ತಿರುವಾಗ ಎಲ್ಲರೂ ತಮ್ಮ ಪ್ರಾರ್ಥನೆಯನ್ನು ಅಲ್ಲಾಹನಿಗೆ ಮಾತ್ರ ನಿಷ್ಕಳಂಕ ವಾಗಿರಿಸಿಕೊಂಡು ಅವನೊಡನೆ, ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ನಾವು ಕೃತಜ್ಞರಲ್ಲಾಗುವೆವು ಎಂದು ಪ್ರಾರ್ಥಿಸುತ್ತಾರೆ.

23

ಆದರೆ, ಅವನು (ಅಲ್ಲಾಹು) ಅವರನ್ನು ರಕ್ಷಿಸಿದಾಗ ಅವರು ನ್ಯಾಯವಿಲ್ಲದೆ ಭೂಮಿಯಲ್ಲಿ ಬಂಡಾಯವೇಳುತ್ತಾರೆ. ಓ ಜನರೇ, ನಿಮ್ಮ ಈ ಬಂಡಾಯವು ನಿಮ್ಮ ವಿರುದ್ಧವೇ ಆಗಿದೆ. ಐಹಿಕ ಜೀವನದ ಸುಖಾನಂದ ಮಾತ್ರ ಇದರಿಂದ ಸಿಗುತ್ತದೆ. ಆದರೆ ಅನಂತರ ನಿಮಗೆ ನಮ್ಮ ಕಡೆಗೆ ಮರಳಿ ಬರಲಿಕ್ಕಿದೆ. ಆಗ ನೀವು ಮಾಡುತ್ತಿದ್ದುದನ್ನು ನಾವು ನಿಮಗೆ ತಿಳಿಸಲಿದ್ದೇವೆ.

24

ನಾವು ಆಕಾಶದಿಂದ ಮಳೆಗೆರೆದು, ಆ ಮೂಲಕ ಜನರೂ, ಜಾನುವಾರುಗಳೂ ತಿನ್ನುವ ಭೂಮಿ ಯ ಬೆಳೆಯು ಹುಲುಸಾಗಿ ಬೆಳೆಯಿತು. ಕೊನೆಗೆ ಭೂಮಿಯು ಅದರ ಅಲಂಕಾರ ಹೊದ್ದು ಮಿರುಗಿ ಬೆಳಗಿತು. ಹಾಗೂ ಅವುಗಳ ಮಾಲೀಕರು ನಾವೀಗ ಇದರಿಂದ ಫಲ ಹೊಂದಲು ಸಮರ್ಥರಾಗಿದ್ದೇವೆಂದು ಭಾವಿಸುತ್ತಿದ್ದಾಗ ಹಠಾತ್ತನೆ ರಾತ್ರೆ ಅಥವಾ ಹಗಲಲ್ಲಿ ನಮ್ಮ ಅಪ್ಪಣೆ ಬಂದು ಬಿಟ್ಟಿತು ಮತ್ತು ನಿನ್ನೆ ಅಲ್ಲೇನೂ ಇರಲೇ ಇಲ್ಲವೋ ಎಂಬಂತೆ ನಾವು ಅದನ್ನು ಅಳಿಸಿ ಬಿಟ್ಟೆವು. ಕೇವಲ ಹೀಗಿದೆ ಐಹಿಕ ಜೀವನದ ಉಪಮೆ. ವಿವೇಚಿಸುವ ಜನರಿಗೆ ನಾವು ಈ ರೀತಿಯಲ್ಲಿ ದೃಷ್ಟಾಂತಗಳನ್ನು ಸ್ಪಷ್ಟಪಡಿಸುತ್ತಿದ್ದೇವೆ.

25

ಅಲ್ಲಾಹು ನಿಮ್ಮನ್ನು ಶಾಂತಿ ಸದನಕ್ಕೆ ಕರೆಯುತ್ತಿದ್ದಾನೆ. ಅವನು ತಾನಿಚ್ಛಿಸಿದವರನ್ನು ಸನ್ಮಾರ್ಗಕ್ಕೆ ಸೇರಿಸುತ್ತಾನೆ.

26

ಸುಕೃತ ಮಾಡಿದವರಿಗೆ ಅತ್ಯಂತ ಉತ್ತಮ ಪ್ರತಿಫಲವೂ ಇನ್ನೂ ಹೆಚ್ಚಿನ ಅನುಗ್ರಹವೂ ಇದೆ. ಅವರಿಗೆ ಕಳಂಕವೋ, ನಿಂದೆಯೋ ಆವರಿಸಲಾರದು. ಅವರೇ ಸ್ವರ್ಗದವರು. ಅಲ್ಲಿ ಅವರು ಶಾಶ್ವತರು.

27

ಪಾಪ ಗಳಿಸಿದವರು ಅವರ ಪಾಪಗಳ ತಕ್ಕಂತೆ ಪ್ರತಿಫಲವು ಅದಕ್ಕೆ ಸಮಾನವಾದುದೇ ಆಗಿದೆ. ಅವಮಾನವು ಅವರನ್ನು ಆವರಿಸುವುದು. ಅವರನ್ನು ಅಲ್ಲಾಹನಿಂದ ರಕ್ಷಿಸುವವನಾರೂ ಇರಲಾರನು. ಕಾರಿರುಳ ತುಂಡುಗಳಿಂದ ಅವರ ಮುಖಗಳನ್ನು ಮುಚ್ಚಿದಂತಿದೆ. ಅವರೇ ನರಕದವರು. ಅದರಲ್ಲಿ ಅವರು ಶಾಶ್ವತರು.

28

ಅವರೆಲ್ಲರನ್ನೂ ನಾವು ಒಟ್ಟಾಗಿ ಸೇರಿಸುವ ಮತ್ತು ಬಹುದೇವಾರಾಧಕರೊಡನೆ, ನೀವೂ ನೀವು ಮಾಡಿಕೊಂಡ ಸಹಭಾಗಿಗಳೂ ಅಲ್ಲೇ ನಿಲ್ಲಿರೆಂದು ಹೇಳುವ ದಿನ. ಆ ಬಳಿಕ ನಾವು ಅವರನ್ನು ಪರಸ್ಪರ ಬೇರ್ಪಡಿಸುವೆವು. ಅವರ ಸಹಭಾಗಿಗಳು ಹೇಳುವರು, ನೀವು ನಮ್ಮನ್ನು ಆರಾಧಿಸುತ್ತಿರಲಿಲ್ಲ.

29

ಆದ್ದರಿಂದ ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಿಮ್ಮ ಆರಾಧನೆಯ ಬಗ್ಗೆ ನಾವು ಸಂಪೂರ್ಣ ಅಲಕ್ಷರಾಗಿದ್ದೆವು.

30

ಅಲ್ಲಿ ಪ್ರತಿಯೊಂದು ದೇಹವು ತಾನು ಮೊದಲೇ ಮಾಡಿದ ಕರ್ಮದ ಫಲವನ್ನು ಅನುಭವಿಸಿ ತಿಳಿಯುವುದು. ಅವರು ತಮ್ಮ ನೈಜ ಒಡೆ ಯನಾದ ಅಲ್ಲಾಹನ ಕಡೆಗೆ ಮರಳಿಸಲ್ಪಡುವರು ಮತ್ತು ಅವರು ಸೃಷ್ಟಿಸಿಕೊಂಡದ್ದೆಲ್ಲವೂ ಅವರಿಂದ ಕಾಣೆಯಾಗುವುವು .

31

ಕೇಳಿರಿ- ಆಕಾಶಗಳಿಂದಲೂ ಭೂಮಿಯಿಂದಲೂ ನಿಮಗೆ ಆಹಾರ ನೀಡುವವನು ಯಾರು? ಶ್ರವಣ ಮತ್ತು ದೃಷ್ಟಿಗಳನ್ನು ಅಧೀನಗೊಳಿಸಿದ್ದು ಯಾರು? ನಿರ್ಜಿವಿಯಿಂದ ಸಜೀವಿಯನ್ನು ಸಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಕಾರ್ಯವನ್ನು ನಿಯಂತ್ರಿಸುವುದು ಯಾರು? ಅಲ್ಲಾಹು ಎಂದೇ ಅವರು ಹೇಳುವರು. ಹಾಗಾದರೆ ಹೇಳಿರಿ; ಇಷ್ಟಾದರೂ ನೀವು ಜಾಗೃತರಾಗುವುದಿಲ್ಲವೇ?

32

ಅವನೇ ನಿಮ್ಮ ಯಥಾರ್ಥ ಪ್ರಭುವಾದ ಅಲ್ಲಾಹು. ಹೀಗಿದ್ದು ಸತ್ಯದ ಬಳಿಕ ಪಥ ಭ್ರಷ್ಟತೆಯ ವಿನಾ ಬೇರೇನು ಉಳಿದಿದೆ? ಹೇಗೆ ನೀವು ತಪ್ಪಿಸಲ್ಪಡುತ್ತಿರುವಿರಿ?

33

ಆ ಪ್ರಕಾರ ಕರ್ಮಭ್ರಷ್ಟರ ವಿಷಯದಲ್ಲಿ, ಅವರು ವಿಶ್ವಾಸವಿರಿಸಲಾರರೆಂಬ ನಿಮ್ಮ ಪ್ರಭುವಿನ ಮಾತು ನಿಜವಾಯಿತು.

34

(ಪ್ರವಾದಿಯವರೇ) ಹೇಳಿರಿ; ಸೃಷ್ಟಿಯ ಆರಂಭ ಮಾಡಿ, ನಂತರ ಅದನ್ನು ಪುನರಾವರ್ತಿಸುವ ಯಾರಾದರೂ ನೀವು ಸಹಭಾಗಿಗಳಾಗಿ ಸೇರಿಸಿ ದವರ ಕೂಟದಲ್ಲಿ ಇದ್ದಾರೇನು? ಹೇಳಿರಿ - ಸೃಷ್ಟಿಯನ್ನು ಆರಂಭಿಸುವವನೂ ಅದನ್ನು ಪುನರಾ ವರ್ತಿಸುವವನೂ ಕೇವಲ ಅಲ್ಲಾಹನೇ ಆಗಿರುವನು. ಹೀಗಿರುತ್ತ ನೀವು ಹೇಗೆ ತಪ್ಪಿಸಲ್ಪ ಡುತ್ತಿರುವಿರಿ?

35

ಹೇಳಿರಿ, ಸತ್ಯದ ಕಡೆಗೆ ಮಾರ್ಗದರ್ಶನ ನೀಡುವ ಯಾರಾದರೂ ನೀವಿರಿಸಿಕೊಂಡ ಸಹ ಭಾಗಿಗಳ ಕೂಟದಲ್ಲಿ ಇದ್ದಾರೇನು? ಹೇಳಿರಿ - ಅಲ್ಲಾಹನೇ ಸತ್ಯಕ್ಕೆ ದಾರಿ ತೋರುತ್ತಾನೆ. ಹೀಗಿದ್ದು ಸತ್ಯದ ಕಡೆಗೆ ಮಾರ್ಗದರ್ಶನ ಮಾಡು ವವನೋ ಅಥವಾ ತನಗೆ ಮಾರ್ಗದರ್ಶನ ಮಾಡಿಸದಿದ್ದರೆ ಸ್ವತಃ ಸನ್ಮಾರ್ಗ ಹೊಂದದವನೋ ಯಾರು ಅನುಸರಣೆಗೆ ಹೆಚ್ಚು ಅರ್ಹನು? ನಿಮ ಗೇನಾಗಿದೆ? ಹೇಗೆ ನೀವು ತೀರ್ಮಾನ ಕೈಗೊಳ್ಳುತ್ತೀರಿ?”

36

ಅವರ ಪೈಕಿ ಹೆಚ್ಚಿನವರು ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ವಸ್ತುತಃ ಊಹೆಯು ಸತ್ಯದ ಸ್ಥಾನದಲ್ಲಿ ಒಂದಿಷ್ಟೂ ಪರ್ಯಾಪ್ತವಲ್ಲ. ಅಲ್ಲಾಹನು ಇವರು ಮಾಡುತ್ತಿರುವುದನ್ನೆಲ್ಲಾ ಚೆನ್ನಾಗಿ ಅರಿಯುತ್ತಾನೆ.

37

ಈ ಖುರ್‍ಆನ್ ಅಲ್ಲಾಹನಲ್ಲದವರಿಂದ ನಿರ್ಮಿಸಲಾಗಿಲ್ಲ. ನಿಜವಾಗಿ ಅದು ಹಿಂದೆ ಬಂದಿದ್ದ ದಿವ್ಯ ಸಂದೇಶದ ದೃಢೀಕರಣವೂ ದಿವ್ಯ ಗ್ರಂಥದ ವಿವರಣೆಯೂ ಆಗಿರುತ್ತದೆ. ಅದರಲ್ಲಿ ಯಾವ ಸಂದೇಹವೂ ಇಲ್ಲ. ಅದು ಸರ್ವಲೋಕಾಧಿಪತಿಯ ಕಡೆಯಿಂದ ಬಂದಿದೆ.

38

ಅದಲ್ಲ, ಇದನ್ನು ಪೈಗಂಬರರು ಸ್ವತಃ ರಚಿಸಿ ಕೊಂಡರೆಂದು ಇವರು ಹೇಳುತ್ತಾರೆಯೇ? ಹೇಳಿರಿ; ನೀವು (ನಿಮ್ಮ ಈ ಆಪಾದನೆಯ ಬಗ್ಗೆ) ಸತ್ಯವಾದಿಗಳಾಗಿದ್ದರೆ ಇದಕ್ಕೆ ಸಮಾನವಾದ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನನ್ನು ಬಿಟ್ಟು ಯಾರನ್ನು ನಿಮಗೆ ಕರೆಯಲು ಸಾಧ್ಯವಿದೆಯೋ ಅವರನ್ನೆಲ್ಲ ಕರೆದುಕೊಳ್ಳಿರಿ .

39

ಆದರೆ ಅದರ (ಖುರ್‍ಆನಿನ) ಜ್ಞಾನವನ್ನು ಅವರು ಸೂಕ್ಷ್ಮವಾಗಿ ತಿಳಿದಿಲ್ಲದ ಕಾರಣ ಅದರ ಭವಿಷ್ಯ ಫಲಗಳು ಅವರಿಗೆ ಬಾರದಿರುವ ಸ್ಥಿತಿಯಲ್ಲಿ ಇವರು ಸುಳ್ಳಾಗಿಸಿದರು. ಇದೇ ರೀತಿಯಲ್ಲಿ ಇವರ ಪೂರ್ವಿಕರೂ ಸುಳ್ಳಾಗಿಸಿದ್ದರು. ಆದ್ದರಿಂದ ಆ ಅಕ್ರಮಿಗಳ ಗತಿಯೇನಾಯಿತೆಂದು ನೋಡಿರಿ.

40

ಇದರಲ್ಲಿ (ಖುರ್‍ಆನಿನಲ್ಲಿ) ಕೆಲವರು ವಿಶ್ವಾಸವಿರಿಸುವರು ಮತ್ತು ಇನ್ನು ಕೆಲವರು ವಿಶ್ವಾಸವಿರಿಸಲಾರರು. ನಿಮ್ಮ ಪ್ರಭುವು ಗೊಂದಲಕಾರಿಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ.

41

ಇವರು ನಿಮ್ಮನ್ನು ಸುಳ್ಳಾಗಿಸುತ್ತಿದ್ದರೆ ಹೇಳಿರಿ;- `ನನ್ನ ಕರ್ಮ ನನಗೆ, ನಿಮ್ಮ ಕರ್ಮ ನಿಮಗೆ. ನಾನು ಮಾಡುತ್ತಿರುವ ಕರ್ಮದ ಹೊಣೆಯಿಂದ ನೀವು ಮುಕ್ತರು. ನೀವು ಮಾಡುತ್ತಿರುವ ಕರ್ಮದ ಹೊಣೆಯಿಂದ ನಾನು ಮುಕ್ತನು.

42

ಅವರ ಪೈಕಿ ನಿಮ್ಮ ಕಡೆಗೆ ಶೃದ್ಧೆಯಿಂದ ಕೇಳಿಸಿಕೊಳ್ಳುವವರೂ ಇದ್ದಾರೆ. ಆದರೆ ಕಿವುಡರು ಏನನ್ನೂ ಗ್ರಹಿಸದಿದ್ದರೂ ನೀವು ಅವರಿಗೆ ಕೇಳಿಸುವಿರಾ?

43

ಅವರ ಪೈಕಿ ನಿಮ್ಮತ್ತ ದಿಟ್ಟಿಸಿ ನೋಡುವವರೂ ಇದ್ದಾರೆ. ಆದರೆ ಕುರುಡರಿಗೆ ಏನೂ ಕಾಣದಿದ್ದರೂ ನೀವು ಅವರನ್ನು ಸನ್ಮಾರ್ಗಕ್ಕೆ ಹಚ್ಚುವಿರಾ?

44

ವಾಸ್ತವದಲ್ಲಿ ಅಲ್ಲಾಹ್ ಜನರಿಗೆ ಎಳ್ಳಷ್ಟೂ ಅನೀತಿ ತೋರಲಾರನು. ಆದರೆ ಜನರು ಪರಸ್ಪರ ಅನೀತಿ ತೋರುತ್ತಾರೆ.

45

ಅಲ್ಲಾಹ್ ಅವರನ್ನು ಒಟ್ಟು ಸೇರಿಸುವ ದಿನದಂದು ಹಗಲಿನ ಒಂದು ಕ್ಷಣಕಾಲ ಮಾತ್ರ (ಇಹಲೋಕದಲ್ಲಿ) ತಾವು ತಂಗಿದ್ದಂತೆ ತೋರುವುದು. ಅವರು ಪರಸ್ಪರ ಗುರುತಿಸುವರು. ಅಲ್ಲಾಹನ ಭೇಟಿಯನ್ನು ಸುಳ್ಳಾಗಿಸಿದವರು ನಿಜಕ್ಕೂ ನಷ್ಟ ಹೊಂದಿದರು. ಅವರು ಸತ್ಪಥಿಕರಾಗಲಿಲ್ಲ.

46

(ನಬಿಯರೇ) ಅವರಿಗೆ ನಾವು ತಾಕೀತು ಮಾಡು ತ್ತಿರುವ ಶಿಕ್ಷೆಗಳಲ್ಲಿ ಕೆಲವನ್ನು ನಾವು (ನಿಮ್ಮ ಜೀವಮಾನದಲ್ಲೇ) ನಿಮಗೆ ತೋರಿಸಬಹುದು ಅಥವಾ ಅದಕ್ಕಿಂತ ಮುಂಚೆಯೇ ನಿಮ್ಮನ್ನು ಮರಣಗೊಳಿಸಬಹುದು. ಹೇಗಿದ್ದರೂ ಇವರು ನಮ್ಮ ಕಡೆಗೆ ಬರಲಿಕ್ಕಿದೆ. ನಂತರ ಇವರು ಮಾಡುತ್ತಿರುವುದಕ್ಕೆಲ್ಲ ಅಲ್ಲಾಹು ಸಾಕ್ಷಿಯಾಗಿರುತ್ತಾನೆ.

47

ಪ್ರತಿಯೊಂದು ಸಮುದಾಯಕ್ಕೂ ಓರ್ವ ಸಂದೇಶವಾಹಕರಿರುತ್ತಾನೆ. ಒಂದು ಸಮುದಾಯದ ಬಳಿಗೆ ಅದರ ಸಂದೇಶವಾಹಕರು ಬಂದಾಗ ಅವರ ನಡುವೆ ನ್ಯಾಯಪೂರ್ಣವಾಗಿ ವಿಧಿಸಲಾ ಗುತ್ತದೆ. ಅವರ ಮೇಲೆ ಅಕ್ರಮವೆಸಗಲಾಗುವುದಿಲ್ಲ.

48

ಅವರು (ಸತ್ಯನಿಷೇಧಿಗಳು) ಹೇಳುತ್ತಾರೆ; ಈ ತಾಕೀತು ನೆರವೇರುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ ಹೇಳಿರಿ.

49

ಹೇಳಿರಿ, ಸ್ವತಃ ನನ್ನ ಲಾಭ-ಹಾನಿಗಳೂ ನನ್ನ ಅಧೀನದಲ್ಲಿಲ್ಲ. ಅಲ್ಲಾಹನು ಇಚ್ಛಿಸಿದ್ದು ಹೊರತು. ಪ್ರತಿಯೊಂದು ಸಮುದಾಯಕ್ಕೂ ಒಂದು ನಿಶ್ಚಿತ ಕಾಲಾವಧಿ ಇದೆ. ಆ ಕಾಲಾವಧಿ ಮುಗಿದಾಗ ಕ್ಷಣ ಮಾತ್ರವೂ ಹಿಂದೆ ಬರಲಾರರು, ಮುಂದೆ ಯೂ ಸರಿಯಲಾರರು.

50

(ಪ್ರವಾದಿಯವರೇ) ಹೇಳಿರಿ; - ಅಲ್ಲಾಹನ ಶಿಕ್ಷೆ ಯು ರಾತ್ರೆ ಅಥವಾ ಹಗಲಲ್ಲಿ ಹಠಾತ್ತನೆ ಬಂದೆರ ಗಿದ ನಂತರ ಶಿಕ್ಷಾರ್ಹರು ಆ ಶಿಕ್ಷೆಯ ವಿಚಾರ ದಲ್ಲಿ ತವಕಪಡುವ ಅಗತ್ಯವಾದರೂ ಏನಿದೆ?

51

ಇನ್ನು ಅದು (ಶಿಕ್ಷೆ) ನಿಮ್ಮ ಮೇಲೆ ಬಂದೆರಗುವಾಗಲೇ ನೀವು ಅದನ್ನು ನಂಬುವಿರಾ? ನೀವು ಈ ಶಿಕ್ಷೆಗೆ ತ್ವರೆ ಮಾಡುತ್ತಿದ್ದೀರಲ್ಲ. ಇದೀಗ ನಂಬಿ ಫಲವುಂಟೇ?

52

ಆ ಬಳಿಕ ಅಕ್ರಮಿಗಳೊಡನೆ ಹೇಳಲಾಗುವುದು. ನೀವು ಶಾಶ್ವತ ಶಿಕ್ಷೆಯನ್ನು ಸವಿಯಿರಿ. ನೀವು ಗಳಿಸುತ್ತಿದ್ದುದರ ಪ್ರತಿಫಲದ ಹೊರತು ಇನ್ನಾವ ಪ್ರತಿಫಲವನ್ನು ನಿಮಗೆ ಕೊಡಲಾಗುವುದೇ?

53

`ನೀವು ಹೇಳುತ್ತಿರುವುದು ನಿಜಕ್ಕೂ ಸತ್ಯವೇ? ಎಂದು ಅವರು ಕೇಳುತ್ತಾರೆ. ಹೇಳಿರಿ; `ನನ್ನ ಪ್ರಭುವಿನಾಣೆ, ಇದು ಖಂಡಿತವಾಗಿಯೂ ಸತ್ಯ. ತಡೆದು ಸೋಲಿಸುವ ಸಾಮಥ್ರ್ಯ ನಿಮಗಿಲ್ಲ.

54

ಅಕ್ರಮವೆಸಗಿದ ಪ್ರತಿಯೊಬ್ಬನ ಬಳಿ ಭೂಮಿಯ ಸಕಲ ಸಂಪತ್ತು ಇದ್ದರೂ ಅವನು ಅದನ್ನೆಲ್ಲ ಪ್ರಾಯಶ್ಚಿತ್ತವಾಗಿ ಕೊಡುತ್ತಿದ್ದನು. ಅವರು ಆ ಶಿಕ್ಷೆಯನ್ನು ಕಂಡಾಗ ಖೇದವನ್ನು ಮನದಲ್ಲೇ ಬಚ್ಚಿಡುವರು. ಆದರೆ ಅವರ ನಡುವೆ ನ್ಯಾಯೋಚಿತವಾದ ತೀರ್ಮಾನ ಕೈಕೊಳ್ಳಲಾ ಗುವುದು. ಅವರ ಮೇಲೆ ಯಾವ ಅಕ್ರಮವೂ ಆಗಲಾರದು.

55

ತಿಳಿಯಿರಿ! ಆಕಾಶಗಳಲ್ಲೂ ಭೂಮಿಯಲ್ಲೂ ಇರುವುದೆಲ್ಲವೂ ಅಲ್ಲಾಹನದೇ. ತಿಳಿಯಿರಿ ಅಲ್ಲಾಹನ ವಾಗ್ದಾನ ಸತ್ಯವಾದುದು. ಆದರೆ ಹೆಚ್ಚಿನವರು ಅರಿತಿರುವುದಿಲ್ಲ.

56

ಅವನೇ ಜೀವದಾನ ಮಾಡುತ್ತಾನೆ. ಅವನೇ ಮರಣ ಕೊಡುತ್ತಾನೆ. ಮತ್ತು ಅವನ ಕಡೆಗೇ ನಿಮ್ಮನ್ನು ಮರಳಿಸಲಾಗುವುದು.

57

ಜನರೇ, ನಿಮ್ಮ ಪ್ರಭುವಿನ ಕಡೆಯಿಂದ ಸದುಪದೇಶ ಹಾಗೂ ಮನಸ್ಸುಗಳೊಳಗಿನ ಕಾಯಿಲೆ ಗಳಿಗೆ ಶಮನವೂ ನಿಮಗೆ ಬಂದಿದೆ. ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗದರ್ಶನವೂ ಕೃಪೆಯೂ ಆಗಿರುತ್ತದೆ .

58

(ಓ ಪೈಗಂಬರರೇ,) ಹೇಳಿರಿ; ಇದನ್ನು ಅವತೀರ್ಣಗೊಳಿಸಿದ್ದು ಅಲ್ಲಾಹನ ಔದಾರ್ಯ ಮತ್ತು ಕೃಪೆಯಾಗಿರುತ್ತದೆ. ಈ ಮೂಲಕ ಜನರು ಸಂತೋಷಪಟ್ಟುಕೊಳ್ಳಲಿ. ಅದು ಅವರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಉತ್ತಮವಾಗಿದೆ.

59

(ಓ ಪೈಗಂಬರರೇ!) ಇವರೊಡನೆ ಹೇಳಿರಿ; `ಅಲ್ಲಾಹನು ನಿಮಗಾಗಿ ಇಳಿಸಿದ್ದ ಆಹಾರದ ಪೈಕಿ ನೀವಾಗಿಯೇ ಕೆಲವನ್ನು ನಿಷೇಧಗೊಳಿಸಿದ ಮತ್ತು ಕೆಲವನ್ನು ಅನುವದನೀಯಗೊಳಿಸಿ ದುದರ ಬಗ್ಗೆ ನೀವು ವಿವೇಚಿಸಿದ್ದೀರಾ ? ಕೇಳಿರಿ; ಅಲ್ಲಾಹನು ನಿಮಗೆ ಇದರ ಅನುಮತಿ ನೀಡಿದ್ದನೋ ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುತ್ತಿರುವಿರೋ?

60

ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವರ ಊಹೆಯು ನಿರ್ಣಾಯಕ ದಿನದಂದು ಹೇಗಿರುವುದು? ಅಲ್ಲಾಹನು ಜನರ ಮೇಲೆ ಔದಾರ್ಯದಾತನು. ಆದರೆ ಹೆಚ್ಚಿನವರು ಕೃತಜ್ಞತೆ ತೋರುವುದಿಲ್ಲ.

61

(ಓ ಪೈಗಂಬರರೇ,) ನೀವು ಯಾವುದೇ ಕಾರ್ಯದಲ್ಲಿ ಏರ್ಪಟ್ಟಿದ್ದರೂ ಖುರ್‍ಆನಿನಿಂದ ಅದರ ಬಗ್ಗೆ ಏನನ್ನು ಕೇಳಿಸುತ್ತಿದ್ದರೂ ಮತ್ತು (ಓ, ಜನರೇ,) ನೀವೂ ಯಾವುದೇ ಕರ್ಮವನ್ನು ಮಾಡುತ್ತಲಿದ್ದರೂ ಆ ವೇಳೆ ನಿಮ್ಮ ಮೇಲೆ ಸಾಕ್ಷಿಯಾಗಿ ನಾವು ಇರದೇ ಇಲ್ಲ. ನಿಮ್ಮ ಪ್ರಭುವಿನ ದೃಷ್ಟಿಯಿಂದ ಅಣುತೂಕದಷ್ಟೂ ಮರೆಯಾಗಿಲ್ಲ. ಭೂಮಿಯಲ್ಲೂ ಆಕಾಶದಲ್ಲೂ ಅಣುವಿಗಿಂತ ಸಣ್ಣದಿರಲಿ, ದೊಡ್ಡದಿರಲಿ ಎಲ್ಲವೂ ಸ್ಪಷ್ಟ ಗ್ರಂಥದಲ್ಲಿ ದಾಖಲುಗೊಂಡಿದೆ .

62

ತಿಳಿಯಿರಿ, ನಿಶ್ಚಯವಾಗಿಯೂ ಅಲ್ಲಾಹನ ಔಲಿಯಾಗಳಿಗೆ ಯಾವತ್ತೂ ಭಯವಿಲ್ಲ. ಅವರು ದುಃಖಿಸುವವರೂ ಅಲ್ಲ.

63

ಅವರು ಸತ್ಯವಿಶ್ವಾಸವಿರಿಸಿಕೊಂಡವರು ಮತ್ತು ಸೂಕ್ಷತೆ ಪಾಲಿಸುವವರು.

64

ಇಹ-ಪರ ಜೀವನದಲ್ಲ್ಲಿ ಅವರಿಗೆ ಭಾರೀ ಶುಭವಾರ್ತೆ ಇದೆ. ಅಲ್ಲಾಹನ ವಚನಗಳಿಗೆ ಬದಲಾವಣೆಯಿಲ್ಲ. ಅದೇ ಅತಿ ಹಿರಿದಾದ ಯಶಸ್ಸು.

65

(ಓ ಪೈಗಂಬರರೇ,) ಅವರ ಮಾತು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ, ಪ್ರತಿಷ್ಟೆಯು ಸರ್ವ ಸಂಪೂರ್ಣವಾಗಿ ಅಲ್ಲಾಹನದ್ದು. ಅವನುಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

66

ತಿಳಿಯಿರಿ - ಆಕಾಶಗಳಲ್ಲಿರುವವರಿರಲಿ ಅಥವಾ ಭೂಮಿಯ ಮೇಲಿರುವವರಿರಲಿ ಎಲ್ಲರೂ ಅಲ್ಲಾಹನ ಅಧೀನರು, ಅಲ್ಲಾಹನ ಹೊರತು (ಇತರರನ್ನು) ಆರಾಧಿಸುತ್ತಿರುವವರು (ನೈಜ) ಸಹಭಾಗಿಗಳನ್ನು ಹಿಂಬಾಲಿಸುತ್ತಿಲ್ಲ. ಅವರು ಬರೇ ಊಹೆಯನ್ನಷ್ಟೇ ಹಿಂಬಾಲಿಸುತ್ತಾರೆ. ಅವರು ಅದರಲ್ಲಿ ಸುಳ್ಳನ್ನೇ ಅನುಸರಿಸುತ್ತಿದ್ದಾರೆ.

67

ನೀವು ಪ್ರಶಾಂತಿಯನ್ನು ಪಡೆಯಲಾಗುವಂತೆ ನಿಮಗಾಗಿ ರಾತ್ರಿಯನ್ನು ಮಾಡಿದವನೂ ಪ್ರಕಾಶಮಾನವಾಗಿ ಹಗಲನ್ನು ಮಾಡಿದವನೂ ಅಲ್ಲಾಹನೇ ಆಗಿರುತ್ತಾನೆ. ಇದರಲ್ಲಿ ಆಲಿಸುವ ಜನರಿಗೆ ದೃಷ್ಪಾಂತಗಳಿವೆ.

68

ಅಲ್ಲಾಹನು ತನಗೋರ್ವ ಪುತ್ರನನ್ನು ಮಾಡಿ ಕೊಂಡಿದ್ದಾನೆಂದು ಅವರು ಹೇಳಿದರು. ಅದ ರಿಂದ ಅವನು ಮುಕ್ತನು. ಪರಿಶುದ್ಧನು. ಪರಾಶ್ರಯ ರಹಿತನು. ಭೂಮಿ ಮತ್ತು ಆಕಾಶಗಳಲ್ಲಿರುವುದೆಲ್ಲವೂ ಅವನದ್ದು. ಇದಕ್ಕೆ (ದೇವನಿಗೆ ಸಂತಾನವಿದೆ ಎಂಬ ಮಾತಿಗೆ) ನಿಮ್ಮ ಬಳಿ ಯಾವುದೇ ಆಧಾರ ಪ್ರಮಾಣ ವಿಲ್ಲ. ಅಲ್ಲಾಹನ ಬಗ್ಗೆ ನಿಮಗೆ ತಿಳಿಯದಿದ್ದುದನ್ನು ಹೇಳುವಿರಾ?

69

(ಓ ಪೈಗಂಬರರೇ,) ಹೇಳಿರಿ; ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸುವವರು ಯಶಸ್ವಿಯಾಗಲಾರರು.

70

(ಅವರಿಗಿರುವುದು) ಇಹಲೋಕ ಜೀವನದ ಸುಖಾನುಭವ ಮಾತ್ರ. ಆಮೇಲೆ ಅವರು ನಮ್ಮ ಕಡೆಗೆ ಮರಳಬೇಕಾಗಿದೆ ಅನಂತರ ಅವರು ಸತ್ಯನಿಷೇಧ ಹೊಂದಿದ್ದ ಕಾರಣಕ್ಕಾಗಿ ನಾವು ಅವರನ್ನು ಘೋರ ಯಾತನೆಗೆ ಗುರಿಪಡಿಸುವೆವು.

71

ಇವರಿಗೆ ನೂಹರ ಸಮಾಚಾರ ಓದಿ ಕೇಳಿಸಿರಿ. ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ. ಓ ನನ್ನ ಜನಾಂಗ ಬಾಂಧವರೇ, ನನ್ನ ಸಾನಿಧ್ಯವೂ ಅಲ್ಲಾಹನ ದೃಷ್ಟಾಂತಗಳ ಕುರಿತ ನನ್ನ ವಿಜ್ಞಾಪನೆಯೂ ನಿಮಗೆ ದೊಡ್ಡ ಭಾರವಾಗಿರುವುದಾದರೆ ಅಲ್ಲಾಹನ ಮೇಲೆ ನಾನು ಭರವಸೆಯಿಸಿದ್ದೇನೆ. ನಿಮ್ಮ ಸಹಭಾಗಿ ಗಳನ್ನು ಜತೆಗೂಡಿಸಿಕೊಂಡು ಒಂದು ಒಮ್ಮತದ ನಿರ್ಧಾರಕ್ಕೆ ಬನ್ನಿರಿ. ಅನಂತರ ಅದನ್ನು ನನ್ನ ವಿರುದ್ಧ ಕಾರ್ಯಾಚರಣೆಗೆ ತನ್ನಿರಿ ನನಗೆ ಕಾಲಾವಕಾಶ ಕೊಡಲೇ ಬೇಡಿರಿ.

72

ಇನ್ನು ನೀವು (ನನ್ನ ಉಪದೇಶದಿಂದ) ವಿಮುಖರಾದರೆ, ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳಿಲ್ಲ. ನನ್ನ ಪ್ರತಿಫಲವು ಅಲ್ಲಾಹನಲ್ಲಿದೆ. ನಾನು (ಅಲ್ಲಾಹನಿಗೆ) ವಿಧೇಯರಾದವರಲ್ಲಿ ಸೇರುವಂತೆ ನನಗೆ ಆಜ್ಞಾಪಿಸಲಾಗಿರುತ್ತದೆ.

73

ಆದರೆ ಆ ಜನರು ಅವರನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನೂ ಅವರ ಸಂಗಡ ನಾವೆಯಲ್ಲಿದ್ದವರೆಲ್ಲರನ್ನೂ ರಕ್ಷಿಸಿದೆವು. ಅವರನ್ನು ನಾವು ಭೂಮಿಯಲ್ಲಿ ಉತ್ತರಾಧಿಕಾರಿಗಳಾಗಿ ಮಾಡಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರನ್ನು ಮುಳುಗಿಸಿಬಿಟ್ಟೆವು. ಆದುದರಿಂದ ಎಚ್ಚರಿಕೆ ನೀಡಲ್ಪಟ್ಟಿದ್ದವರ ಗತಿಯೇನಾಯಿತೆಂದು ನೋಡಿಕೊಳ್ಳಿರಿ.

74

ಮತ್ತೆ ಅವರ (`ನೂಹ’ರ) ತರುವಾಯ ಅನೇಕ ಸಂದೇಶವಾಹಕರನ್ನು ಆಯಾ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರ ಬಳಿಗೆ ದೃಷ್ಟಾಂತಗಳ ಸಹಿತ ಅವರು ಬಂದರು. ಆದರೆ ಅವರು ಈ ಮುಂಚೆ ಯಾವುದನ್ನು ಸುಳ್ಳಾಗಿಸಿ ದರೋ ಅದರಲ್ಲಿ ನಂಬಲು ಅವರು ಸಿದ್ದರಿರಲಿಲ್ಲ. ಹದ್ದು ಮೀರಿ ಸಾಗುವವರ ಹೃದಯಗಳ ಮೇಲೆ ಅದೇ ಪ್ರಕಾರ ನಾವು ಮುದ್ರೆಯೊತ್ತಿ ಬಿಡುತ್ತೇವೆ.

75

ಮತ್ತೆ ಅವರ ನಂತರ, ನಾವು ನಮ್ಮ ನಿದರ್ಶನಗಳ ಸಹಿತ ಫಿರ್‍ಔನ್ ಮತ್ತು ಅವನ ಸರದಾರರ ಕಡೆಗೆ ಮೂಸಾ ಹಾಗೂ ಹಾರೂನರನ್ನು ನಿಯೋಗಿಸಿದೆವು. ಆದರೆ ಅವರು ದರ್ಪವನ್ನು ತೋರಿದರು. ಅವರು ಅಪರಾಧಿ ಜನಾಂಗವಾಗಿದ್ದರು.

76

ಹಾಗೆ ನಮ್ಮ ಕಡೆಯಿಂದ ಸತ್ಯವು ಅವರಿಗೆ ಬಂದಾಗ ‘ಇದು ಸುವ್ಯಕ್ತ ಜಾಲವಿದ್ಯೆಯಾಗಿದೆ’ ಎಂದರವರು.

77

`ಮೂಸಾ’ರು ಹೇಳಿದರು, ಸತ್ಯವು ನಿಮಗೆ ಬಂದು ಮುಟ್ಟಿದಾಗ ಅದನ್ನು (ಜಾಲವಿದ್ಯೆ ಯೆಂದು) ಹೇಳುತ್ತೀರಾ? ಇದು ಜಾಲವಿದ್ಯೆ ಯೇ? ವಸ್ತುತಃ ಜಾಲವಿದ್ಯೆಗಾರರು ಯಶಸ್ವಿಗಳಾಗುವುದಿಲ್ಲ.

78

ಅವರು ಹೇಳಿದರು, ನಮ್ಮ ಪೂರ್ವಿಕರು ಯಾವುದರಲ್ಲಿ ನೆಲೆಗೊಂಡಿದ್ದನ್ನು ನಾವು ಕಂಡಿದ್ದೇವೋ ಅದರಿಂದ ನಮ್ಮನ್ನು ತಿರುಗಿಸಿ ಬಿಡಲಿಕ್ಕಾಗಿಯೂ ಭೂಮಿಯಲ್ಲಿ ನಿಮಗೆ ಹಿರಿಮೆ ಸಂಸ್ಥಾಪಿಸಲಿಕ್ಕಾಗಿಯೂ ನೀನು ಬಂದಿರುವೆಯಾ? ನಾವು ನಿಮ್ಮಿಬ್ಬರನ್ನು ನಂಬುವವರಲ್ಲ.

79

ಫಿರ್‍ಔನನು ಹೇಳಿದನು, ‘ಪ್ರತಿಯೊಬ್ಬ ನುರಿತ ಮಾಟಗಾರನನ್ನು ನೀವು ನನ್ನ ಮುಂದೆ ತನ್ನಿರಿ’.

80

ಹಾಗೆ ಮಾಟಗಾರರು ಬಂದಾಗ ಮೂಸಾ, ‘ನೀವು ಎಸೆಯಬೇಕಾದುದನ್ನು ಎಸೆಯಿರಿ’ ಎಂದರು.

81

ಅವರು ಎಸೆದಾಗ ಮೂಸಾರು ಹೇಳಿದರು, ‘ನೀವೀಗ ತಂದದ್ದು ಜಾದುವಾಗಿರುತ್ತದೆ. ಖಂಡಿತ ಅಲ್ಲಾಹು ಇದನ್ನು ಮಿಥ್ಯಗೊಳಿಸು ವನು. ಅಲ್ಲಾಹು ಕಿಡಿಗೇಡಿಗಳ ಪ್ರವೃತ್ತಿಯನ್ನು ಸರಿಯಾಗಲು ಬಿಡುವುದಿಲ್ಲ’.

82

ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿಯೇ ಮಾಡಿ ತೋರಿಸುವನು. ಇದರಿಂದ ಅಪರಾಧಿಗಳಿಗೆ ಎಷ್ಟೇ ಅನಿಷ್ಟಕರವಾದರೂ ಸರಿಯೇ.

83

ಆದರೆ ಮೂಸಾರನ್ನು ಆ ಜನಾಂಗದ ವಂಶದಿಂದ ಒಂದು ವಿಭಾಗದ ಹೊರತು ಇನ್ನಾರೂ ವಿಶ್ವಾಸವಿರಿಸಲಿಲ್ಲ. (ಅದು ಕೂಡಾ)ಫಿರ್‍ಔನ ಹಾಗೂ ತಮ್ಮ ಜನಾಂಗದ ಮುಖಂಡರು ಯಾತನೆಗೊಳಪಡಿಸುವರೇನೋ ಎಂಬ ಭಯದೊಂದಿಗಾಗಿತ್ತು. ಫಿರ್‍ಔನನು ಭೂಮಿಯ ಮೇಲೆ ಪ್ರಾಬಲ್ಯ ಹೊಂದಿದವನೂ ಹದ್ದುಮೀರಿದವನೂ ಆಗಿದ್ದನು.

84

ಮೂಸಾ ಹೇಳಿದರು; ನನ್ನ ಜನರೇ, ನಿಜಕ್ಕೂ ಅಲ್ಲಾಹನ ಮೇಲೆ ವಿಶ್ವಾಸವಿಡುತ್ತೀರಾದರೆ ಅವನ ಮೇಲೆ ಭರವಸೆಯನ್ನಿರಿಸಿರಿ - ನೀವು ನಿಜಕ್ಕೂ ಅವನಿಗೆ ಶರಣಾಗತರಾಗಿದ್ದರೆ.

85

ಆಗ ಅವರು ಹೇಳಿದರು; ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಓ ನಮ್ಮ ಪ್ರಭೂ, ನಮ್ಮನ್ನು ಈ ಅಕ್ರಮಿ ಜನಾಂಗಕ್ಕೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು. (ಮರ್ದನಕ್ಕೆ ಒಳಪಡಿಸದಿರು)

86

ನಿನ್ನ ಕೃಪೆಯಿಂದ ನಮ್ಮನ್ನು ಸತ್ಯನಿಷೇಧಿ ಜನಾಂಗದಿಂದ ರಕ್ಷಿಸು.

87

ಮೂಸಾ ಮತ್ತು ಅವರ ಸಹೋದರನಿಗೆ ನಾವು ಹೀಗೆ ಸೂಚನೆ ಕೊಟ್ಟೆವು. ನೀವಿಬ್ಬರೂ ನಿಮ್ಮ ಜನರಿಗಾಗಿ ಈಜಿಪ್ಟ್‍ನಲ್ಲಿ ಕೆಲವು (ಪ್ರತ್ಯೇಕ) ನಿವೇಶನಗಳನ್ನು ಒದಗಿಸಿರಿ, ನಿಮ್ಮ ಆ ನಿವೇಶನಗಳನ್ನು ಕಿಬ್ಲಃವನ್ನಾಗಿ ಮಾಡಿರಿ, ಂ ನಮಾಝನ್ನು ಸಂಸ್ಥಾಪಿಸಿರಿ ಮತ್ತು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ.

88

ಮೂಸಾರವರು ಹೇಳಿದರು, ಓ ನಮ್ಮ ಪ್ರಭೂ, ನೀನು ಫಿರ್‍ಔನ್ ಮತ್ತು ಅವನ ಸರದಾರರಿಗೆ ಲೌಕಿಕ ಜೀವನದಲ್ಲಿ ಅಲಂಕಾರ ಹಾಗೂ ಸಂಪ ತ್ತನ್ನು ಕೊಟ್ಟಿರುವಿ. ಓ ಪ್ರಭೂ, ಈ ಸಿರಿಸಂಪತ್ತು ಅವರು ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸಲು ಕಾರಣವಾಗಿದೆ. ಓ ಪ್ರಭೂ, ಅವರ ಸಂಪತ್ತನ್ನು ನಾಶಪಡಿಸು ಮತ್ತು ಅವರು ವೇದನಾಯುಕ್ತ ಶಿಕ್ಷೆಯನ್ನು ಕಣ್ಣಾರೆ ಕಾಣುವವರೆಗೂ ಅವರು ವಿಶ್ವಾಸವಿರಿಸದಂತೆ ಅವರ ಹೃದಯಗಳ ಮೇಲೆ ಕಾಠಿಣ್ಯ ನೀಡು.

89

ಅಲ್ಲಾಹ್ ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯು ಸ್ವೀಕರಿಸಲ್ಪಟ್ಟಿದೆ. ಆದ್ದರಿಂದ ನೀವು ದೃಢ ಚಿತ್ತರಾಗಿರಿ, ಅಜ್ಞಾನಿಗಳ ಮಾರ್ಗವನ್ನೆಂದಿಗೂ ಅನುಸರಿಸ ಬೇಡಿರಿ.

90

ಇಸ್‍ರಾಈಲ ಸಂತತಿಯನ್ನು ನಾವು ಸಮುದ್ರ ದಾಟಿಸಿಕೊಂಡೊಯ್ದೆವು. ಅನಂತರ ಫಿರ್‍ಔನನೂ ಅವನ ಸೇನೆಯೂ ದಿಕ್ಕಾರ ಹಾಗೂ ವೈರದಿಂದ ಅವರನ್ನು ಬೆನ್ನಟ್ಟಿದರು . ಕೊನೆಗೆ ಫಿರ್‍ಔನನು ಮುಳುಗುತ್ತಿರುವಾಗ ಹೀಗೆಂದನು, ಇಸ್‍ರಾ ಈಲ ಸಂತತಿಯು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು ನಾನು ವಿಶ್ವಾಸವಿಟ್ಟೆನು. ಮತ್ತು ನಾನೂ ಶರಣಾಗತರಾದವರಲ್ಲಿ ಸೇರಿದ್ದೇನೆ.

91

(ಅಲ್ಲಾಹು ಹೇಳಿದನು;) ಈಗ ವಿಶ್ವಾಸ ವಿಡುತ್ತೀಯಾ? ವಸ್ತುತಃ ಇದಕ್ಕೆ ಮುಂಚಿನವರೆಗೂ ನೀನು ದಿಕ್ಕರಿಸುತ್ತಿದ್ದೆ ಮತ್ತು ಕಿಡಿಗೇಡಿಗಳಲ್ಲಿ ಒಬ್ಬನಾಗಿದ್ದೆ.

92

ನೀನು ಮುಂದಿನ ತಲೆಮಾರುಗಳಿಗೆ ಒಂದು ದೃಷ್ಟಾಂತವಾಗಿರುವಂತೆ ಇಂದು ನಿನ್ನ ಶವವನ್ನು ಸುರಕ್ಷಿತವಾಗಿರಿಸುವೆವು. ನಿಜಕ್ಕೂ ಜನರಲ್ಲಿ ಹೆಚ್ಚಿನವರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷ್ಯರಾಗಿದ್ದಾರೆ.

93

ಇಸ್‍ರಾಈಲ ಸಂತತಿಗಳಿಗೆ ಯೋಗ್ಯವಾದ ಒಂದು ನಿವೇಶನದಲ್ಲಿ ನಾವು ನಿವಾಸವನ್ನೊದಗಿಸಿದೆವು. ವಿಶಿಷ್ಟವಾದ ವಸ್ತುಗಳಿಂದ ಅವರಿಗೆ ನಾವು ಆಹಾರ ನೀಡಿದೆವು. ಮತ್ತು ಅವರಿಗೆ ಅತ್ಯುತ್ಕøಷ್ಟ ಜೀವನಾಧಾರಗಳನ್ನು ದಯಪಾಲಿಸಿದೆವು ಅದರೆ, ಅವರು ದಿವ್ಯಜ್ಞಾನ ಹೊಂದಿದ ಬಳಿಕವೂ ಭಿನ್ನಾಭಿಪ್ರಾಯ ತಾಳಿದರು. ನಿಶ್ಚಯವಾಗಿಯೂ ನಿನ್ನ ಪ್ರಭು ಪುನರು ತ್ಥಾನ ದಿನ ಅವರ ನಡುವೆ ಅವರು ಭಿನ್ನಾಭಿಪ್ರಾಯ ತಾಳುತ್ತಿದ್ದ ವಿಷಯದಲ್ಲಿ ತೀರ್ಪು ನೀಡುವನು.

94

ನಾವು ನಿಮಗೆ ಅವತೀರ್ಣಗೊಳಿಸಿದ (ಸನ್ಮಾರ್ಗ ದರ್ಶನದ) ಬಗೆಗೆ ನಿಮಗೆ ಯಾವುದೇ ಸಂಶಯವಿದ್ದರೆ, ನಿಮಗಿಂತ ಮುಂಚೆಯೇ ಗ್ರಂಥವನ್ನು ಓದುತ್ತಾ ಬಂದವರನ್ನು ವಿಚಾರಿಸಿರಿ. ವಾಸ್ತವದಲ್ಲಿ ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವೇ ಬಂದಿರುತ್ತದೆ. ಆದುದರಿಂದ ಸಂಶಯಗ್ರಸ್ತರಲ್ಲಿ ಸೇರಬೇಡಿರಿ .

95

ಅಲ್ಲಾಹನ ವಚನಗಳನ್ನು ಸುಳ್ಳಾಗಿಸಿ ತಳ್ಳಿ ಹಾಕಿದವರಲ್ಲೂ ನೀವಾಗಬೇಡಿರಿ. ಅನ್ಯಥಾ ನೀವು ನಷ್ಟವಂತರಲ್ಲಿ ಸೇರುವಿರಿ.

96

ಓoಟಿe

97

ವಾಸ್ತವದಲ್ಲಿ ಯಾರ ಬಗ್ಗೆ ನಿನ್ನ ಪ್ರಭುವಿನ (ಶಿಕ್ಷೆಯ) ವಚನವು ನಿಜವಾಯಿತೋ ಅವರು ಎಲ್ಲ ನಿದರ್ಶನಗಳು ಬಂದರೂ ವೇದನಾಯುಕ್ತ ಶಿಕ್ಷೆಯನ್ನು ಕಣ್ಣಾರೆ ಕಾಣುವವರೆಗೂ ವಿಶ್ವಾಸವಿರಿಸಲಾರರು.

98

ಯಾವುದೇ ಒಂದು ನಾಡಿನವರು ಶಿಕ್ಷೆಯ ಮೊದಲು ವಿಶ್ವಾಸವಿಟ್ಟು ಅದರ ವಿಶ್ವಾಸವು ಅದಕ್ಕೆ ಫಲಕಾರಿಯಾದುದುಂಟೇ? ಯೂನುಸರ ಜನಾಂಗದ ಹೊರತು. ಆ ಜನಾಂಗವು ಸತ್ಯ ವಿಶ್ವಾಸ ಸ್ವೀಕರಿಸಿದಾಗ ನಾವು ಅವರಿಂದ ಇಹಜೀವನದ ಅಪಮಾನಕರ ಶಿಕ್ಷೆಯನ್ನು ನೀಗಿಸಿ ಬಿಟ್ಟೆವು ಮತ್ತು ಅದಕ್ಕೆ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ನಾವು ಅವರಿಗೆ ಸೌಖ್ಯವನ್ನು ಕೊಟ್ಟೆವು .

99

ನಿಮ್ಮ ಪ್ರಭು ಇಚ್ಚಿಸಿರುತ್ತಿದ್ದರೆ, ಭೂವಾಸಿಗಳೆಲ್ಲರೂ ಒಟ್ಟಾಗಿ ವಿಶ್ವಾಸವಿಡುತ್ತಿದ್ದರು. ಹೀಗಿ ರುವಾಗ ಜನರೆಲ್ಲರೂ ಸತ್ಯವಿಶ್ವಾಸಿಗಳಾಗಬೇಕೆಂದು ನೀವು ಒತ್ತಾಯಪಡಿಸುವಿರಾ?

100

ಯಾರೊಬ್ಬನೂ ಅಲ್ಲಾಹನ ಅನುಮತಿಯ ಹೊರತು ವಿಶ್ವಾಸವಿಡಲಾರನು. ಚಿಂತಿಸದವರ ಮೇಲೆ ಅಲ್ಲಾಹು ಸಜೆಯನ್ನು ಹೇರುತ್ತಾನೆ.

101

ಹೇಳಿರಿ; ಭೂಮಿ ಮತ್ತು ಆಕಾಶಗಳಲ್ಲಿರುವುದರತ್ತ ನೋಡಿರಿ. ವಿಶ್ವಾಸವಿರಿಸಿಕೊಳ್ಳದ ಜನಾಂಗಕ್ಕೆ ದೃಷ್ಟಾಂತಗಳೂ ಎಚ್ಚರಿಕೆಗಳೂ ಏನೂ ಪ್ರಯೋಜನ ವಾಗಲಾರವು !

102

ಇವರು ಇವರಿಗಿಂತ ಮುಂಚಿನವರು ಕಂಡಿದ್ದ ದುರ್ದಿನಗಳನ್ನೇ ಕಾಣಬೇಕೆಂದು ನಿರೀಕ್ಷಿಸುತ್ತಾರೇನು? ಹೇಳಿರಿ; ನಿರೀಕ್ಷಿಸುತ್ತಿರಿ, ನಾನೂ ನಿಮ್ಮೊಂದಿಗೆ ನಿರೀಕ್ಷಿಸುತ್ತಿರುತ್ತೇನೆ.’

103

ಆ ಬಳಿಕ ನಾವು ನಮ್ಮ ಸಂದೇಶವಾಹಕರನ್ನು ಸತ್ಯವಿಶ್ವಾಸಿಗಳನ್ನೂ ರಕ್ಷಿಸಿಕೊಳ್ಳುತ್ತೇವೆ. ಇದೇ ಪ್ರಕಾರ ನಮ್ಮ ಮೇಲಿನ ಒಂದು ಹೊಣೆಯಾಗಿ ನಾವು ಸತ್ಯವಿಶ್ವಾಸಿಗಳನ್ನು ರಕ್ಷಿಸುತ್ತೇವೆ.

104

(ಓ ಪೈಗಂಬರರೇ) ಹೇಳಿರಿ, ಓ ಜನರೇ, ನನ್ನ ಧರ್ಮದ ಬಗೆಗೆ ನೀವು ಸಂಶಯಗ್ರಸ್ತರಾಗಿದ್ದರೆ, ಇತ್ತ ಕೇಳಿರಿ! ನೀವು ಅಲ್ಲಾಹನ ಹೊರತು ಯಾರನ್ನು ಆರಾಧಿಸುತ್ತೀರೋ ಅವರನ್ನು ನಾನು ಆರಾಧಿಸುತ್ತಿಲ್ಲ. ಬದಲಾಗಿ ನಿಮ್ಮನ್ನು ಮೃತ್ಯು ಗೊಳಿಸುವ ಅಲ್ಲಾಹನನ್ನು ಮಾತ್ರ ನಾನು ಆರಾಧಿಸುತ್ತೇನೆ. ನಾನು ಸತ್ಯವಿಶ್ವಾಸಿಗಳಲ್ಲಾಗಿರ ಬೇಕೆಂದು ಆಜ್ಞಾಪಿಸಲ್ಪಟ್ಟಿರುತ್ತೇನೆ.

105

ಏಕಾಗ್ರಚಿತ್ತನಾಗಿ ನಿಮ್ಮ ಮುಖವನ್ನು ಧರ್ಮ ದಲ್ಲಿ ಸರಿಯಾಗಿ ನೆಲೆಗೊಳಿಸಿಕೊಳ್ಳಬೇಕೆಂದೂ ಖಂಡಿತಾ ನೀವು ಬಹುದೇವಾರಾಧಕರಲ್ಲಾಗಬಾರದೆಂದೂ ನನ್ನೊಡನೆ ಆಜ್ಞಾಪಿಸಲಾಗಿರುತ್ತದೆ.

106

ಅಲ್ಲಾಹನನ್ನು ಬಿಟ್ಟು, ನಿಮಗೆ ಉಪಕಾರವನ್ನಾಗಲಿ ಉಪದ್ರವವನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನೀವು ಆರಾಧಿಸಬೇಡಿರಿ. ನೀವು ಹಾಗೆ ಮಾಡಿದರೆ ಖಂಡಿತವಾಗಿಯೂ ಅಕ್ರಮಿಗಳಲ್ಲಾಗುವಿರಿ.

107

ಅಲ್ಲಾಹು ನಿಮ್ಮನ್ನು ಯಾವುದೇ ಕಷ್ಟಕ್ಕೆ ಗುರಿಪಡಿಸಿದರೆ, ಅವನ ಹೊರತು ಆ ಕಷ್ಟವನ್ನು ನಿವಾರಿಸುವವನು ಇನ್ನಾರೂ ಇಲ್ಲ. ಮತ್ತು ಅವನು ನಿಮಗೆ ಹಿತವನ್ನು ಬಯಸಿದರೆ ಅವನ ಔದಾ ರ್ಯವನ್ನು ತಡೆಯುವವನೂ ಯಾರೂ ಇಲ್ಲ. ಅವನು ತನ್ನ ದಾಸರ ಪೈಕಿ ತನಗಿಷ್ಟ ಬಂದವ ರಿಗೆ ಅನುಗ್ರಹ ತಲುಪಿಸುತ್ತಾನೆ. ಅವನು ಕ್ಷಮಾಶೀಲನೂ ದಯಾನಿಧಿಯೂ ಆಗಿರುತ್ತಾನೆ.

108

ಹೇಳಿರಿ, ಜನರೇ, ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಪರಮಸತ್ಯವು ಬಂದಿದೆ. ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗಿರುವನೋ ಅವನು ತನ್ನ ವಿರುದ್ಧವೇ ದಾರಿತಪ್ಪಿದನು. ನಾನು ನಿಮ್ಮ ಮೇಲೆ ಜವಾಬ್ದಾರನಲ್ಲ.

109

(ಓ ಪೈಗಂಬರರೇ), ನಿಮ್ಮ ಕಡೆಗೆ ಬಿತ್ತರಿಸಲಾಗುವ ದಿವ್ಯವಾಣಿಯನ್ನು ಅನುಸರಿಸಿರಿ. ಮತ್ತು ಅಲ್ಲಾಹನು ತೀರ್ಮಾನ ಮಾಡುವವ ರೆಗೂ ತಾಳ್ಮೆ ವಹಿಸಿರಿ. ಅವನು ಪರಮ ಶ್ರೇಷ್ಠ ತೀರ್ಪುಗಾರನಾಗಿರುವನು.