ಹಾ ಮೀಮ್.
ಇದು ಪರಮ ದಯಾಳುವೂ, ಪರಮ ವತ್ಸಲನೂ ಆದವನ ಕಡೆಯಿಂದ ಅವತೀರ್ಣಗೊಂಡಿದೆ.
ಗ್ರಹಿಸಿಕೊಳ್ಳುವ ಜನರಿಗೆ ವಚನಗಳನ್ನು ವಿಶದೀಕರಿಸಲ್ಪಟ್ಟ ಅರಬಿ ಭಾಷೆಯಲ್ಲಿರುವ ಖುರ್‍ಆನ್ ಗ್ರಂಥವಾಗಿದೆ.
ಸುವಾರ್ತೆ ಹಾಗೂ ಮುನ್ನೆಚ್ಚರಿಕೆ ನೀಡುವ ಗ್ರಂಥ. ಆಗ ಇವರಲ್ಲಿ ಹೆಚ್ಚಿನವರು ಇದರಿಂದ ವಿಮುಖರಾದರು. ಅವರು ಕಿವಿಗೊಡುವುದಿಲ್ಲ.
ಅವರು ಹೇಳುತ್ತಾರೆ ``ನೀವು ಯಾವುದರ ಕಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಮುಚ್ಚಿಹೋಗಿವೆ. ನಮ್ಮ ಕಿವಿಗಳು ಕಿವುಡಾಗಿವೆ. ನಮ್ಮ - ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀನು ನಿನ್ನ ಧರ್ಮದಲ್ಲಿ ವರ್ತಿಸು. ನಾವು ನಮ್ಮ ಧರ್ಮದಲ್ಲಿ ವರ್ತಿಸುತ್ತೇವೆ”.
(ಸಂದೇಶವಾಹಕರೇ,) ಹೇಳಿರಿ, ನಾನು ನಿಮ್ಮಂ ತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ಆರಾಧ್ಯ ನು ಏಕಮಾತ್ರ ಆರಾಧ್ಯನೆಂದು ನನಗೆ ದಿವ್ಯ ಸಂದೇಶ ನೀಡಲಾಗಿದೆ. ಆದುದರಿಂದ ನೀವು ಅವನ ಕಡೆಗಿರುವ ಋಜುವಾದ ದಿಕ್ಕಿನಲ್ಲೇ ನೆಲೆಯೂರಿರಿ. ಅವನಲ್ಲಿ ಕ್ಷಮೆಯಾಚಿಸಿರಿ. ಬಹುದೇವ ವಿಶ್ವಾಸಿಗಳಿಗೆ ವಿನಾಶವಿದೆ.
ಅವರು ಝಕಾತ್ ಕೊಡುವುದಿಲ್ಲ. ಪರಲೋಕ ವನ್ನು ನಿಷೇಧಿಸುತ್ತಾರೆ.
ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗುವವರು ಯಾರೋ, ಅವರಿಗೆ ಎಂದೂ ಮುರಿಯದ ಸತ್ಫಲವಿದೆ.
(ಸಂದೇಶವಾಹಕರೇ) ಹೇಳಿರಿ;“ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ದೇವನನ್ನು ನೀವು ನಿರಾಕರಿಸುತ್ತೀರಾ? ಅವನಿಗೆ ಸಮಾನರನ್ನು ಕಲ್ಪಿಸುತ್ತೀರಾ? ಅವನೇ ಸರ್ವ ಲೋಕಗಳ ಪಾಲಕ ಪ್ರಭು.
ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿದನು. ಅದರಲ್ಲಿ ಅನುಗ್ರಹ ಬೀರಿದನು ಮತ್ತು ಭೂಮಿಯ ಸೃಷ್ಟಿಯ ಬಗ್ಗೆ ಅನ್ವೇಷಕರಿಗೆ ಕ್ಲಪ್ತವಾಗಿ ಉತ್ತರಿಸಬಹುದಾದ ಕ್ರಮದಲ್ಲಿ ನಾಲ್ಕು ದಿವಸಗಳೊಳಗೆ ಭೂಮಿಯಲ್ಲಿ ಅವನು ಜೀವಿಗಳಿಗೆ ಆಹಾರಗಳನ್ನು ನಿರ್ಣಯಿಸಿದನು.
ಅನಂತರ ಅವನು ಆಕಾಶದ ಕಡೆಗೆ ಗಮನ ಹರಿಸಿದನು. ಅದೊಂದು ದಟ್ಟ ಧೂಮಪಟಲ ವಾಗಿತ್ತು. ಆಗ ಅವನು ಆಕಾಶ-ಭೂಮಿಗಳೊಡನೆ, ‘ನೀವು ವಿಧೇಯರಾಗಿ ಇಲ್ಲವೇ ಬಲಾತ್ಕಾರವಾಗಿ ಬನ್ನಿರಿ’ ಎಂದನು. ಅವೆರಡೂ, ‘ನಾವು ವಿಧೇಯರಾಗಿ ಬಂದಿದ್ದೇವೆ’ ಎಂದವು.
ಆಗ ಅವನು ಎರಡು ದಿನಗಳಲ್ಲಿ ಸಪ್ತಗಗನ ಗಳನ್ನು ರೂಪಿಸಿದನು. ಎಲ್ಲ ಆಕಾಶಗಳಲ್ಲೂ ಅದರ ಕಾರ್ಯವನ್ನು ಬೋಧಿಸಿದನು. ಭೂಮಿಗೆ ಹತ್ತಿರದ ಆಕಾಶವನ್ನು ನಾವು ದೀಪಗಳಿಂದ ಅಲಂಕರಿಸಿದೆವು ಮತ್ತು ಅದನ್ನು ಸಂರಕ್ಷಣೆಯನ್ನಾಗಿ ಮಾಡಿದೆವು. ಅಜೇಯನೂ, ಸರ್ವಜ್ಞನೂ ಆದ ಅಲ್ಲಾಹನ ನಿರ್ಣಯವಿದು.
ಇನ್ನು ಅವರು ವಿಮುಖರಾದರೆ ಹೇಳಿರಿ; ನಾನು ನಿಮ್ಮನ್ನು ಆದ್ ಮತ್ತು ಸಮೂದರಿಗೆ ಬಾಧಿಸಿದ ಉಗ್ರ ಶಿಕ್ಷೆಯಂಥ ಒಂದು ಶಿಕ್ಷೆಯ ಬಗ್ಗೆ ಎಚ್ಚರಿಸುತ್ತೇನೆ.
ಪ್ರವಾದಿಗಳು ಅವರ ಸಮಕಾಲೀನರಾಗಿಯೂ ಅವರ ಪೂರ್ವಕಾಲದಲ್ಲೂ ಅವರ ಬಳಿ ಬಂದು, ‘ನೀವು ಅಲ್ಲಾಹನ ಹೊರತು ಇನ್ನಾರಿಗೂ ಆರಾಧಿಸಬೇಡಿರಿ’ ಎಂದು ಹೇಳಿದಾಗ ಅವರು, ‘ನಮ್ಮ ಪ್ರಭು ಇಚ್ಛಿಸುತ್ತಿದ್ದರೆ ದೇವಚರರನ್ನು ಕಳುಹಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವ ಸಂದೇಶದೊಂದಿಗೆ ಕಳುಹಿಸಲಾಗಿ ದೆಯೋ ಅದನ್ನು ನಾವು ನಿರಾಕರಿಸುತ್ತೇವೆ’ ಎಂದರು.
ಆದ್ ಜನಾಂಗ ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಪಡುತ್ತಿದ್ದರು. ‘ಶಕ್ತಿಯಲ್ಲಿ ನಮ್ಮನ್ನು ಮೀರಿಸುವವರು ಯಾರಿದ್ದಾರೆ?’ ಎಂದರು. ಅವರನ್ನು ಸೃಷ್ಟಿಸಿದ ಅಲ್ಲಾಹನು ಅವರಿಗಿಂತ ಎಷ್ಟೋ ಅಧಿಕ ಶಕ್ತಿಶಾಲಿಯೆಂದು ಅವರಿಗೆ ಕಾಣ ಲಿಲ್ಲವೇ? ಅವರು ನಮ್ಮ ನಿದರ್ಶನಗಳನ್ನು ನಿರಾಕರಿಸುತ್ತಿದ್ದರು.
ಕೊನೆಗೆ ಕೆಲವು ಅಶುಭ ದಿನಗಳಲ್ಲಿ ಅವರ ಮೇಲೆ ಪ್ರಚಂಡ ಶೀತ ಗಾಳಿಯನ್ನು ನಾವು ಕಳುಹಿಸಿದೆವು. ಲೌಕಿಕ ಜೀವನದಲ್ಲೇ ಅವರಿಗೆ ನಾವು ಅಪಮಾನಕರ ಶಿಕ್ಷೆಯನ್ನು ಉಣಿಸಲಿಕ್ಕಾಗಿ. ಪರಲೋಕದ ಯಾತನೆಯು ಇದಕ್ಕಿಂತಲೂ ಹೆಚ್ಚು ಕಠಿಣಕರ. ಅಲ್ಲಿ ಅವರಿಗೆ ಯಾವ ಸಹಾಯವೂ ಸಿಗದು.
ಸತ್ಯವಿಶ್ವಾಸವನ್ನು ಸ್ವೀಕರಿಸಿ ದೇವನಿಷ್ಟೆ ತೋರುತ್ತಿದ್ದವರನ್ನು ನಾವು ರಕ್ಷಿಸಿದೆವು.
ಅಲ್ಲಾಹನ ಶತ್ರುಗಳನ್ನು ನರಕಾಗ್ನಿಯ ಕಡೆಗೆ ಒಟ್ಟುಗೂಡಿಸುವ ಮತ್ತು ಅಟ್ಟಿಸಿಕೊಂಡು ಹೋಗುವ ದಿನದ ಬಗ್ಗೆ ಯೋಚಿಸಿರಿ .
ಅವರೆಲ್ಲರೂ ಅಲ್ಲಿಗೆ ತಲಪಿದಾಗ ಅವರ ಕಿವಿಗಳೂ ಕಣ್ಣುಗಳೂ ಅವರ ಚರ್ಮಗಳೂ ಅವರು ಮಾಡುತ್ತಿದ್ದುದರ ಕುರಿತು ಅವರ ವಿರುದ್ಧ ಸಾಕ್ಷಿ ಹೇಳುವುವು.
ಅವರು ತಮ್ಮ ಚರ್ಮಗಳೊಡನೆ ಹೀಗೆ ಕೇಳು ವರು,-‘ನೀವು ನಮ್ಮ ವಿರುದ್ಧ ಸಾಕ್ಷಿ ಹೇಳಿದ್ದೇಕೆ?’ ಆಗ ಅವು `ಸಕಲ ವಸ್ತುವಿಗೂ ಮಾತನಾಡುವ ಶಕ್ತಿಯನ್ನು ದಯಪಾಲಿಸಿದ ಅಲ್ಲಾಹನೇ ನಮಗೂ ಮಾತಾಡುವ ಶಕ್ತಿಯನ್ನು ನೀಡಿರುವನು. ಅವನೇ ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದ್ದನು. ಅವನ ಕಡೆಗೇ ನಿಮ್ಮನ್ನು ಮರಳಿಸಲಾಗುವುದು.
ನಿಮ್ಮ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಲಿರುವುದನ್ನು ತಪ್ಪಿಸಿ ನೀವೇನೂ (ಪಾಪಕೃತ್ಯದಿಂದ) ದೂರವಾಗಿರಲಿಲ್ಲ . ಅಲ್ಲದೆ ನೀವು ನಿಮ್ಮ ಮಿಕ್ಕ ಕರ್ಮಗಳ ಬಗ್ಗೆ ಅಲ್ಲಾಹು ಅರಿತಿಲ್ಲ ಎಂದು ಭಾವಿಸಿಕೊಂಡಿದ್ದೀರಿ.
ನಿಮ್ಮ ಪ್ರಭುವಿನ ಬಗೆಗೆ ನೀವಿರಿಸಿಕೊಂಡಿದ್ದ ಭಾವನೆಯಿದು. ಇದೇ ನಿಮ್ಮನ್ನು ಕೆಡಿಸಿತು. ಇದರಿಂದ ನೀವು ಪರಾಜಿತರ ಕೂಟಕ್ಕೆ ಸೇರಿದಿರಿ’.
ಇನ್ನು ಅವರು ತಾಳ್ಮೆವಹಿಸಿದರೂ ನರಕಾಗ್ನಿಯೇ ಅವರ ವಾಸಸ್ಥಳ. ಅವರು ತೃಪ್ತಿಯನ್ನು ಬಯಸಿದರೂ ಅವರಿಗೆ ತೃಪ್ತಿ ದೊರೆಯಲಾರದು.
ಅವರಿಗೆ ನಾವು ಕೆಲವು ಸಂಗಾತಿಗಳನ್ನು ನಿಶ್ಚಯಿಸಿದೆವು. ಆ ಸಂಗಡಿಗರು ಅವರ ಮುಂದೆ ಮತ್ತು ಹಿಂದೆ ಇರುವ ವಿಷಯಗಳನ್ನು ಅವರಿಗೆ ಮೋಡಿ ಮಾಡಿ ತೋರಿಸಿದರು. ಅವರಿಗೆ ಮುಂಚೆ ವಿನಾಶಕ್ಕೊಳಗಾದ ಜಿನ್ನ್ ಮತ್ತು ಮನುಷ್ಯ ಸಮುದಾಯಗಳ ಗುಂಪಿನಲ್ಲಿ ನಮ್ಮ ಶಿಕ್ಷೆಯ ತೀರ್ಮಾನ ಇವರಿಗೂ ನಿಜಗೊಂಡಿತು. ಅವರು ನಷ್ಟ ಹೊಂದಿದವರಾಗಿದ್ದರು.
‘ಈ ಖುರ್‍ಆನನ್ನು ಆಲಿಸಬೇಡಿರಿ. ಇದನ್ನು ಕೇಳಿಸಲಾದರೆ ನೀವು ಗುಲ್ಲೆಬ್ಬಿಸಿರಿ. ನೀವು ಗೆಲ್ಲುವಿರಂತೆ’ ಎಂದರು ಸತ್ಯನಿಷೇಧಿಗಳು.
ಆದರೆ ನಾವು ಸತ್ಯನಿಷೇಧಿಗಳಿಗೆ ಘೋರ ಶಿಕ್ಷೆಯನ್ನು ಉಣಿಸಲಿದ್ದೇವೆ. ಇವರು ಮಾಡುತ್ತಿದ್ದ ಈ ದುಷ್ಕರ್ಮಗಳ ಪ್ರತಿಫಲವನ್ನು ಅತ್ಯಂತ ಅಮಾನುಷ ರೀತಿಯಲ್ಲಿ ನೀಡಲಿದ್ದೇವೆ.
ಅಲ್ಲಾಹನ ಶತ್ರುಗಳಿಗೆ ಪ್ರತಿಫಲವಾಗಿ ಸಿಗಲಿರುವ ಕಠಿಣ ಸಜೆಯ ನರಕವದು. ಇವರ ಶಾಶ್ವತ ನೆಲೆಯು ಅದರಲ್ಲೇ ಇರುವುದು. ಅವರು ನಮ್ಮ ನಿದರ್ಶನಗಳನ್ನು ತಿರಸ್ಕರಿಸುತ್ತಿದ್ದ ಅಪರಾಧಕ್ಕೆ ಶಿಕ್ಷೆಯಿದು.
ಸತ್ಯನಿಷೇಧಿಗಳು ಹೇಳುವರು, ‘ನಮ್ಮ ಪ್ರಭೂ, ಜಿನ್ನ್ ಮತ್ತು ಮಾನವರ ಪೈಕಿ ನಮ್ಮನ್ನು ದಾರಿ ತಪ್ಪಿಸಿದ ಎರಡು ವಿಭಾಗವನ್ನು ನಮಗೊಮ್ಮೆ ತೋರಿಸಿಕೊಡು. ಅವರು ತೀವ್ರ ಅಪಮಾನಿತರಾಗುವಂತೆ ನಮ್ಮ ಕಾಲಡಿಗೆ ಹಾಕಿ ನಾವು ಅವರನ್ನು ತುಳಿದು ಬಿಡುತ್ತೇವೆ’.
‘ನಮ್ಮ ಪ್ರಭು ಅಲ್ಲಾಹನು’ ಎಂದು ಸಾರಿ ಆ ಬಳಿಕ ಕರ್ತವ್ಯ ಬದ್ಧರಾದವರ ಬಳಿಗೆ ದೇವಚರರು ಇಳಿದು ಬಂದು ಹೇಳುತ್ತಾರೆ. “ಹೆದರಬೇಡಿರಿ, ದುಃಖಿಸಬೇಡಿರಿ. ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸುವಾರ್ತೆಯಿಂದ ಸಂತಸಗೊಳ್ಳಿರಿ.
ನಾವು ಇಹ ಜೀವನದಲ್ಲೂ, ಪರಲೋಕದಲ್ಲೂ ನಿಮ್ಮ ಸಹಾಯಕರಾಗಿದ್ದೇವೆ. ಅಲ್ಲಿ ನಿಮ್ಮ ಮನಸ್ಸು ಬಯಸಿದ್ದೆಲ್ಲವೂ ನಿಮಗೆ ಸಿಗುವುದು. ನೀವು ಕೇಳುವ ಪ್ರತಿಯೊಂದು ವಸ್ತುವೂ ನಿಮಗಲ್ಲಿ ಸಿಗುವುದು.
ಪರಮ ಕ್ಷಮಾಶೀಲನೂ, ಕರುಣಾವಾರಿಧಿಯೂ ಆದ ಅಲ್ಲಾಹನ ಕಡೆಯಿಂದ ನಿಮಗಿರುವ ಆತಿಥ್ಯವಿದು”.
ಅಲ್ಲಾಹನ ಕಡೆಗೆ ಅಹ್ವಾನಿಸಿ, ಸತ್ಕರ್ಮವೆಸಗಿ ಮತ್ತು ‘ಖಂಡಿತ ನಾನೊಬ್ಬ ಮುಸ್ಲಿಮ್’ ಎಂದು ಹೇಳುವ ವ್ಯಕ್ತಿಗಿಂತ ಶ್ರೇಷ್ಠ ಮಾತನ್ನು ಹೇಳಿದವನು ಬೇರೆ ಯಾರಿದ್ದಾನೆ?
ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀನು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ತಟ್ಟಿ ಹಾಕು. ಹಾಗಾದಾಗ ನಿನ್ನೊಂದಿಗೆ ಹಗೆತನ ಕಟ್ಟಿಕೊಂಡವನು ನಿನ್ನ ಆಪ್ತಮಿತ್ರನಾಗಿ ಮಾರ್ಪಡುವನು.
ಸಹನಶೀಲರಿಗಲ್ಲದೆ ಅದು ಲಭಿಸದು. ಮಹಾ ಭಾಗ್ಯಶಾಲಿಗಳ ಹೊರತು ಇನ್ನಾರಿಗೂ ಅದು ಒಲಿಯದು.
ಶೈತಾನನ ಕಡೆಯಿಂದೇನಾದರೂ ದುಷ್ಟ ಪ್ರೇರಣೆ ನಿಮ್ಮನ್ನು ದಾರಿ ತಪ್ಪಿಸಿದರೆ ನೀವು ಅಲ್ಲಾ ಹನ ಅಭಯವನ್ನು ಯಾಚಿಸಿರಿ. ಅವನು ಸರ್ವಶ್ರುತನೂ, ಸರ್ವಜ್ಞನೂ ಆಗಿರುವನು.
ರಾತ್ರಿ ಹಗಲೂ ಸೂರ್ಯಚಂದ್ರರೂ ಅಲ್ಲಾಹನ ನಿದರ್ಶನಗಳಲ್ಲಿ ಸೇರಿವೆ. ಸೂರ್ಯನಿಗಾಗಲಿ, ಚಂದ್ರನಿಗಾಗಲೀ ಸಾಷ್ಟಾಂಗವೆರಗಬೇಡಿರಿ. ಪರಂತು ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೇ ಸಾಷ್ಟಾಂಗವೆರಗಿರಿ. ನೀವು ನಿಜಕ್ಕೂ ಅವನನ್ನೇ ಆರಾಧಿಸುವವರಾಗಿದ್ದರೆ !
ಇನ್ನು ಇವರು ಅಹಂಕರಿಸುವುದಾದರೆ ನಿಮ್ಮ ಪ್ರಭುವಿನ ಬಳಿ ಇರುವವರು (ದೇವಚರರು) ಆಹೋರಾತ್ರಿ ಅವನನ್ನು ಸ್ತುತಿಸುವರು. ಅವರೆಂದಿಗೂ ಬಳಲುವುದಿಲ್ಲ.
ಇದು ಅಲ್ಲಾಹನ ನಿದರ್ಶನಗಳಲ್ಲೊಂದು, ಭೂಮಿಯು ಒಣಗಿ ಬಿದ್ದಿರುವುದನ್ನು ನೀವು ಕಾಣುತ್ತೀರಿ, ಆ ಬಳಿಕ ನಾವು ಅದರ ಮೇಲೆ ನೀರನ್ನು ಸುರಿದರೆ, ತಕ್ಷಣ ಅದು ಅರಳುತ್ತದೆ ಹಾಗೂ ಬೆಳೆಯುತ್ತದೆ. ಖಂಡಿತವಾಗಿಯೂ ಭೂಮಿಯನ್ನು ಹೀಗೆ ಜೀವಂತಗೊಳಿಸುವವನೇ ಮೃತರ ಪುನರುಜ್ಜೀವಕನು. ನಿಶ್ಚಯವಾಗಿಯೂ ಅವನು ಎಲ್ಲ ವಸ್ತುಗಳ ಮೇಲೆ ಸಾಮಥ್ರ್ಯವುಳ್ಳವನು.
ನಮ್ಮ ದೃಷ್ಟಾಂತಗಳ ವಿರುದ್ಧ ಅಪಾರ್ಥ ಕಟ್ಟು ವವರು ನಮ್ಮ ದೃಷ್ಟಿಯಿಂದ ಮರೆಯಾಗಿಲ್ಲ. ನರ ಕಾಗ್ನಿಗೆ ಎಸೆಯಲ್ಪಡುವವನು ಉತ್ತಮನೋ ಅಥವಾ ಪುನರುತ್ಥಾನ ದಿನ ನಿರ್ಬಿಡೆಯಿಂದ ಹಾಜರಾಗುವವನು ಉತ್ತಮನೋ? ನೀವಿಚ್ಛಿಸು ವುದನ್ನು ಮಾಡಿರಿ. ನಿಮ್ಮ ಎಲ್ಲ ಕರ್ಮಗಳನ್ನು ಅಲ್ಲಾಹು ವೀಕ್ಷಿಸುತ್ತಿದ್ದಾನೆ.
ಬೋಧನೆಯು ತಮ್ಮ ಮುಂದೆ ಬಂದಾಗ ಅದನ್ನು ನಿಷೇಧಿಸಿದವರು ಇವರು. ಇದೊಂದು ಪ್ರತಾಪವುಳ್ಳ ಗ್ರಂಥವೇ ಸರಿ.
ಇದರ ಮುಂದಿನಿಂದಾಗಲಿ ಹಿಂದಿನಿಂದಾಗಲಿ ಮಿಥ್ಯ ನುಸುಳದು. ಇದು ಯುಕ್ತಿಪೂರ್ಣನೂ ಸ್ತುತ್ಯರ್ಹನೂ ಆದ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥ.
(ಸಂದೇಶವಾಹಕರೇ,) ನಿಮಗಿಂತ ಮುಂಚೆ ಗತಿ ಸಿದ ಸಂದೇಶವಾಹಕರಿಗೆ ಹೇಳದ ವಿಷಯವ ನ್ನೇನೂ ನಿಮಗೆ ಹೇಳಲಾಗುತ್ತಿಲ್ಲ. ನಿಸ್ಸಂದೇಹ ವಾಗಿಯೂ ನಿಮ್ಮ ಪ್ರಭು ಮಹಾ ಕ್ಷಮಾಶೀಲ ನೂ, ವೇದನಾಜನಕ ಶಿಕ್ಷೆಕೊಡುವವನೂ ಆಗಿ ದ್ದಾನೆ.
ನಾವು ಇದನ್ನು ಅನರಬಿ ಖುರ್‍ಆನನ್ನಾಗಿ ಮಾಡಿ ಕಳುಹಿಸುತ್ತಿದ್ದರೆ ಇವರು ಹೀಗೆ ಹೇಳುತ್ತಿದ್ದರು: “ಇದರ ಸೂಕ್ತಗಳನ್ನು ಸುಸ್ಪಷ್ಟವಾಗಿ ವಿವರಿ ಸಲಾಗಿಲ್ಲವೇಕೆ? ಗ್ರಂಥ ಅನರಬಿಯೂ ದೂತರು ಅರಬರೂ ಆಗಿದ್ದೇಕೆ? ಹೇಳಿರಿ, ಸತ್ಯವಿಶ್ವಾಸ ಸ್ವೀಕರಿಸುವವರ ಪಾಲಿಗೆ ಅದು (ಖುರ್‍ಆನ್) ಮಾರ್ಗದರ್ಶನವೂ ದಿವ್ಯಔಷಧವೂ ಆಗಿದೆ. ಆದರೆ ಸತ್ಯನಿಷೇಧಿಗಳ ಕಿವಿಗಳಲ್ಲಿ ಗಂಟು ಬಿದ್ದಿದೆ. ಅದು ಅವರ ಮೇಲೆ ಕುರುಡಾಗಿದೆ. ಅವರ ಅವಸ್ಥೆಯು ಅವರನ್ನು ದೂರದಿಂದ ಕರೆಯಲಾಗುತ್ತಿದೆಯೋ ಎಂಬಂತಿದೆ.
ನಾವು ಮೂಸಾರಿಗೆ ವೇದಗ್ರಂಥ ನೀಡಿದ್ದೆವು. ಆಮೇಲೆ ಅದರಲ್ಲಿ ಭಿನ್ನಮತ ತಲೆದೋರಿತು. ನಿಮ್ಮ ಪ್ರಭುವಿನ ಕಡೆಯಿಂದ ವಚನವು ಪೂರ್ವ ನಿರ್ಧರಿತವಾಗದೆ ಇರುತ್ತಿದ್ದರೆ ಅವರ ನಡುವೆ (ಈಗಲೇ) ತೀರ್ಮಾನ ಮಾಡಲಾಗುತ್ತಿತ್ತು. ನಿಜಕ್ಕೂ ಇವರು ಅದರ ಕುರಿತು ತೀವ್ರ ಸಂಶ ಯಕ್ಕೆ ಈಡಾಗಿದ್ದಾರೆ.
ಯಾವನು ಪುಣ್ಯಕಾರ್ಯಗಳನ್ನು ಮಾಡುತ್ತಾನೋ, ಅವನು ತನ್ನ ಹಿತಕ್ಕಾಗಿಯೇ ಮಾಡುತ್ತಾನೆ. ಯಾವನು ಪಾಪ ಮಾಡುತ್ತಾನೋ ಅದು ಅವನ ಮೇಲೆಯೇ ಇರುವುದು. ನಿಮ್ಮ ಪ್ರಭು ತನ್ನ ದಾಸರ ಪಾಲಿಗೆ ಅಕ್ರಮಿಯಲ್ಲ.
ಅಂತ್ಯ ಘಳಿಗೆಯ ಜ್ಞಾನವು ಅಲ್ಲಾಹನ ಕಡೆಗೇ ಮರಳುತ್ತದೆ. ಅವನ ಅರಿವಿಲ್ಲದೆ ಹಣ್ಣು ತಮ್ಮ ಮೊಗ್ಗುಗಳಿಂದ ಹೊರಬರುವುದಾಗಲಿ, ಯಾವಳೇ ಹೆಣ್ಣು ಗರ್ಭಧರಿಸುವುದಾಗಲಿ, ಹೆರುವುದಾಗಲಿ ಮಾಡುತ್ತಿಲ್ಲ. ‘ನನ್ನ ಸಹಭಾಗಿಗಳು ಎಲ್ಲಿದ್ದಾರೆ?’ ಎಂದು ಅವನು ಇವರನ್ನು ಕಡಿದು ಕೇಳುವ ದಿನ ಇವರು, `ಅದಕ್ಕೆ ಸಾಕ್ಷಿಯಾಗಿ ನಮ್ಮಲ್ಲಾರೂ ಇಲ್ಲ’ ಎಂದು ನಿನಗೆ ತಿಳಿಸುತ್ತಿದ್ದೇವೆ ಎನ್ನುವರು.
ಆಗ ಈ ಹಿಂದೆ ಇವರು ಆರಾಧಿಸುತ್ತಿದ್ದ ಎಲ್ಲ ಆರಾಧ್ಯರೂ ಇವರಿಂದ ತಪ್ಪಿ ಹೋಗುವರು. ತಮಗೆ ಯಾವುದೇ ಅಭಯ ಸ್ಥಾನ ಇಲ್ಲವೆಂದು ಅವರಿಗೆ ಮನದಟ್ಟಾಗುವುದು.
ಮಾನವನು ಒಳಿತಿಗಾಗಿ ಪ್ರಾರ್ಥಿಸಿ ದಣಿ ಯುವುದಿಲ್ಲ. ತನಗೇನಾದರೂ ವಿಪತ್ತು ಬಾಧಿಸಿದರೆ, ಆಗ ಅವನು ನಿರಾಶನೂ ಹತಾಶ ನೂ ಆಗಿ ಬಿಡುತ್ತಾನೆ.
ಆದರೆ ಅವನಿಗೆ ಕಷ್ಟ ಬಾಧಿಸಿದ ನಂತರ ನಾವು ಇವನಿಗೆ ನಮ್ಮ ಕೃಪೆಯ ಸವಿಯನ್ನುಣಿಸಿದಾಗ ಇವನು, “ಇದು ನನ್ನ ಹಕ್ಕು. ಪುನರುತ್ಥಾನವು ನೆಲೆಗೊಂಡೀತೆಂದು ನಾನು ಭಾವಿಸುವುದಿಲ್ಲ. ಇನ್ನು ಒಂದು ವೇಳೆ ನಾನು ನನ್ನ ಪ್ರಭುವಿನ ಕಡೆಗೆ ಮರಳಿಸಲ್ಪಟ್ಟರೂ ಅಲ್ಲೂ ನನಗೆ ಸುಖವೇ ಇರುವುದು” ಎನ್ನುತ್ತಾನೆ. ವಾಸ್ತವದಲ್ಲಿ ನಾವು ಸತ್ಯನಿಷೇಧಿಗಳಿಗೆ, ಅವರೆಸಗಿದ ಕರ್ಮದ ಬಗ್ಗೆ ಖಂಡಿತ ತಿಳಿಸುತ್ತೇವೆ. ಅಲ್ಲದೆ ನಾವು ಅವರಿಗೆ ಕರಾಳವಾದ ಶಿಕ್ಷೆಯ ಸವಿಯುಣಿಸುತ್ತೇವೆ.
ನಾವು ಮಾನವನಿಗೆ ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ. ಅವನ ಪಾಡಿಗೆ ಹೋಗುತ್ತಾನೆ. ಅವನಿಗೇನಾದರೂ ವಿಪತ್ತು ತಟ್ಟಿದರೆ ಬಹಳ ಹೆಚ್ಚು ಪ್ರಾರ್ಥಿಸುತ್ತಾನೆ.
ಹೇಳಿರಿ, “ಇದು (ಖುರ್‍ಆನ್) ಅಲ್ಲಾಹನ ಕಡೆಯಿಂದಲೇ ಬಂದಿದ್ದರೆ ಮತ್ತೆ ನೀವು ಇದನ್ನು ನಿಷೇಧಿಸಿದರೆ, ಸತ್ಯದಿಂದ ದೂರವಾದ ವಿರೋಧದಲ್ಲಿ ಬಿದ್ದವನಿಗಿಂತ ದೊಡ್ಡ ಪಥಭ್ರಷ್ಟನು ಯಾರೆಂದು ನೀವು ಆಲೋಚಿಸಿದಿರಾ?”
ಈ ಖುರ್‍ಆನ್ ನಿಜವಾಗಿಯೂ ಸತ್ಯವಾಗಿದೆಯೆಂಬುದು ಇವರಿಗೆ ವ್ಯಕ್ತವಾಗುವ ತನಕ, ದಿಗಂತಗಳಲ್ಲೂ, ಅವರೊಳಗೂ ನಮ್ಮ ದೃಷ್ಟಾಂತಗಳನ್ನು ಅವರಿಗೆ ನಾವು ತೋರಿಸಿ ಕೊಡುವೆವು. ನಿಮ್ಮ ಪ್ರಭು ಸಕಲ ವಿಷಯಗಳಿಗೂ ಸಾಕ್ಷಿ ಎಂಬುದು ನಿಮಗೆ ಸಾಲದೇ?
ತಿಳಿಯಿರಿ. ಇವರು ತಮ್ಮ ಪ್ರಭುವನ್ನು ಅಭಿ ಮುಖ ಗೊಳ್ಳಲಿರುವ ಕುರಿತು ಸಂದೇಹದಲ್ಲಿದ್ದಾರೆ. ತಿಳಿಯಿರಿ. ಅವನು ಸಕಲ ವಸ್ತುಗಳನ್ನು ಆವರಿಸಿರುತ್ತಾನೆ.