ಆಲ್ ಇಸ್ಲಾಂ ಲೈಬ್ರರಿ
1

ಅಲ್ಲಾಹನಿಗೆ ಸರ್ವಸ್ತುತಿಗಳು, ಅವನು ತನ್ನ ದಾಸನ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಅದರಲ್ಲಿ ಯಾವುದೇ ವೈರುಧ್ಯವನ್ನು ಅವನು ಮಾಡಲಿಲ್ಲ.

2

ಋುಜುವಾದ ಗ್ರಂಥವಿದು. ಅವನು ತನ್ನ ಕಡೆಯಿಂದ ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯ ಬಗ್ಗೆ ತಾಕೀತು ಕೊಡಲಿಕ್ಕಾಗಿ ಮತ್ತು ಸತ್ಕರ್ಮವೆಸಗುವ ಸತ್ಯವಿಶ್ವಾಸಿಗಳಿಗೆ ಶ್ರೇಷ್ಠ ಪ್ರತಿಫಲವಿದೆಯೆಂಬ ಸುವಾರ್ತೆ ನೀಡಲಿಕ್ಕಾಗಿ.

3

ಅಲ್ಲಿ ಅವರು ಚಿರಕಾಲ ವಾಸಿಸುವರು.

4

ಮತ್ತು ಅಲ್ಲಾಹನಿಗೆ ಮಕ್ಕಳು ಇದ್ದಾರೆ ಎಂಬ ಮಾತನ್ನಾಡುವವರಿಗೆ ಶಿಕ್ಷೆಯ ಎಚ್ಚರಿಕೆ ನೀಡಲಿಕ್ಕಾಗಿ.

5

ಇವರ ಬಾಯಿಂದ ಹೊರಡುತ್ತಿರುವ ಪ್ರಸ್ತುತ ಮಾತು ಬಹಳ ಘೋರವಾಗಿದ್ದು ಇವರಿಗಾಗಲಿ, ಇವರ ಹಿರಿಯರಿಗಾಗಲಿ ಈ ಬಗ್ಗೆ ಯಾವುದೇ ಅರಿವಿಲ್ಲ. ಅವರು ಕೇವಲ ಸುಳ್ಳು ಮಾತಿನ ವಿನಾ (ಇನ್ನಾ ವುದೇ ಸತ್ಯವಿಚಾರವನ್ನು) ಹೇಳುವವರಲ್ಲ.

6

(ಓ ನಬಿಯೇ,) ಖುರ್‍ಆನನ್ನು ಇವರು ನಂಬದಿದ್ದಲ್ಲಿ ಇವರ ಬೆನ್ನ ಹಿಂದೆ ವ್ಯಥೆಯಿಂದ ತಮ್ಮ ಜೀವವನ್ನು ನಾಶಮಾಡಬೇಡಿರಿ.

7

ಜನರಲ್ಲಿ ಯಾರು ಉತ್ತಮರಾಗಿ ಬಾಳುತ್ತಾರೆಂದು ಪರೀಕ್ಷಿಸಲಿಕ್ಕೆಂದೇ ನಾವು ಭೂಮಿ ಮೇಲಿನ ವಸ್ತುವನ್ನು ಅದಕ್ಕೊಂದು ಅಲಂಕಾರವನ್ನಾಗಿ ಮಾಡಿದ್ದೇವೆ.

8

ಆದರೆ ಕೊನೆಗೆ ನಾವು ಅದರಲ್ಲಿರುವ ಸರ್ವವಸ್ತು ಗಳನ್ನು ನೆಲಸಮಗೊಳಿಸಿ ಬಂಜರು ನೆಲವನ್ನಾಗಿ ಮಾಡಲಿದ್ದೇವೆ.

9

ಅಲ್ಲ, ಗುಹೆ ಹಾಗೂ ರಖೀಮ್‍ನವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಸ್ಮಯವಾದುದೆಂದು ತಾವು ಭಾವಿಸಿರುವಿರಾ ?

10

ಯುವಕರು ಗುಹೆಯೊಳಗೆ ಆಶ್ರಯ ಪಡೆದ ಸಂದರ್ಭವನ್ನು ನೆನಪಿಸಿರಿ. ಆಗ ಅವರು ಪ್ರಾರ್ಥಿಸಿದರು `ಓ ನಮ್ಮ ಪ್ರಭೂ, ನಿನ್ನ ಪಾಲಿನ ಮಹತ್ತರವಾದ ಕೃಪೆಯನ್ನು ನಮಗೆ ದಯಪಾಲಿಸು. ನಮ್ಮ ಸರ್ವ ಕಾರ್ಯಗಳಲ್ಲಿ ನಮಗೆ ಸನ್ಮಾರ್ಗವನ್ನೇ ಅಣಿಗೊಳಿಸು’.

11

ನಂತರ ಆ ಗುಹೆಯಲ್ಲಿ ಅನೇಕ ವರ್ಷಗಳವರೆಗೆ ಅವರನ್ನು ನಾವು ಗಾಢ ನಿದ್ರೆಗೆ ತಳ್ಳಿದೆವು.

12

ತರುವಾಯ ಅವರು ಗುಹೆಯಲ್ಲಿ ತಂಗಿದ ಕಾಲವನ್ನು ಸರಿಯಾಗಿ ಗಣಿಸುವುದು ಎರಡು ಕಕ್ಷಿದಾರರಲ್ಲಿ ಯಾರೆಂದು ತಿಳಿಯತಕ್ಕ ರೀತಿಯಲ್ಲಿ ನಾವು ಅವರನ್ನು ಎಬ್ಬಿಸಿದೆವು.

13

(ಓ ನಬಿಯೇ,) ನಾವು ಅವರ ವೃತ್ತಾಂತವನ್ನು ತಮಗೆ ನೈಜ ರೂಪದಲ್ಲಿ ತಿಳಿಸುತ್ತೇವೆ. ಅವರು ತಮ್ಮ ಪ್ರಭುವಿನ ಮೇಲೆ ನಂಬಿಕೆಯಿರಿಸಿದ್ದ ಕೆಲವು ಯುವಕರಾಗಿದ್ದರು. ಅವರಿಗೆ ನಾವು ಸನ್ಮಾರ್ಗ ಪ್ರಜ್ಞೆಯನ್ನು ಹೆಚ್ಚಿಸಿಕೊಟ್ಟೆವು.

14

ಅವರು (ರಾಜನ ಮುಂದೆ) ಎದ್ದು ನಿಂತಾಗ ಅವರ ಹೃದಯಗಳಿಗೆ ನಾವು ಬಲ ನೀಡಿದೆವು. ಅವರು ಹೇಳಿದರು; ಭೂಮ್ಯಾಕಾಶಗಳ ಪ್ರಭುವೇ ನಮ್ಮ ಪ್ರಭುವಾಗಿದ್ದು, ನಾವು ಅವನನ್ನು ಬಿಟ್ಟು ಬೇರೆ ಯಾರನ್ನೂ ದೇವರನ್ನಾಗಿ ಮಾಡಿ ಆರಾಧಿಸಲಾರೆವು. ಹಾಗೇನಾದರೂ ನಾವು ಮಾಡಿದರೆ ನಮ್ಮದು ಅತಿರೇಕದ ಮಾತಾದೀತು.

15

ಈ ನಮ್ಮ ಜನಾಂಗವು ಅಲ್ಲಾಹನನ್ನು ಬಿಟ್ಟು ಹಲವು ಆರಾಧ್ಯರುಗಳನ್ನು ನಿರ್ಮಿಸಿದೆ. ಆದರೆ ಅವರಿಗೆ ಆರಾಧನೆ ಸಲ್ಲಿಸುವ ಬಗ್ಗೆ ಸ್ಪಷ್ಟವಾದ ಯಾವುದೇ ಪುರಾವೆಯನ್ನು ಅವರೇಕೆ ತಂದಿಲ್ಲ? ಆದ್ದರಿಂದ ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸಿ ಹೇಳುವವನಿಗಿಂತ ದೊಡ್ಡ ಅಕ್ರಮವೆಸಗುವವನು ಬೇರೆ ಇರುವನೇ?

16

ನೀವೀಗ ಅವರಿಂದಲೂ ಅಲ್ಲಾಹನ ಹೊರತು ಅವರ ಆರಾಧ್ಯ ಮೂರ್ತಿಗಳಿಂದಲೂ ಬೇರ್ಪ ಟ್ಟಿರುವಾಗ ಇನ್ನು ಆ ಗುಹೆಯತ್ತ ಅಭಯ ಪಡೆಯಿರಿ. ನಿಮ್ಮ ಪ್ರಭು ತನ್ನ ಅನುಗ್ರಹವನ್ನು ನಿಮಗೆ ವಿಸ್ತರಿಸಿ ಕೊಡುವನು. ನಿಮ್ಮ ಕಾರ್ಯದಲ್ಲಿ ಬೇಕಾದ ಸವಲತ್ತುಗಳನ್ನು ಒದಗಿಸಿ ಕೊಡುವನು. (ಎಂದವರು ಪರಸ್ಪರ ಹೇಳಿಕೊಂಡರು).

17

ಸೂರ್ಯನು ಉದಯಿಸುವಾಗ ಅವರ ಗುಹೆಯನ್ನು ಬಿಟ್ಟು ಬಲಭಾಗಕ್ಕೆ ಸರಿಯುವಂತೆಯೂ ಅಸ್ತ ಮಿಸುವಾಗ ಎಡದಲ್ಲಾಗಿ ಅವರನ್ನು ಹಾದು ಹೋಗುವಂತೆಯೂ ತಾವು ಕಾಣುವಿರಿ. ಅವರಾದರೋ ಗುಹೆಯೊಳಗೆ ಅನುಕೂಲಕರ ಜಾಗದಲ್ಲಿದ್ದರು. ಇದೊಂದು ಅಲ್ಲಾಹನ ನಿದರ್ಶನ. ಅಲ್ಲಾಹನು ಯಾರಿಗೆ ದಾರಿ ತೋರುತ್ತಾನೆ, ಅವನು ನೇರ ಹಾದಿ ಹಿಡಿದನು. ಅಲ್ಲಾಹನು ಯಾರನ್ನು ದಾರಿ ತಪ್ಪಿಸುತ್ತಾನೆ, ಆತನಿಗೆ ದಾರಿ ತೋರುವ ಬೇರೆ ಯಾವುದೇ ಮಿತ್ರನನ್ನು ತಾವು ಕಾಣಲಾರಿರಿ.

18

ಅವರು ಎಚ್ಚರವಿದ್ದಾರೆಂದು ತಾವು ಭಾವಿಸುವಿರಿ. ಆದರೆ ಅವರು ನಿದ್ರಿಸುತ್ತಿದ್ದರು. ನಾವು ಅವರನ್ನು ಬಲಕ್ಕೂ ಎಡಕ್ಕೂ ಮಗ್ಗುಲು ಬದಲಿಸುತ್ತಿದ್ದೆವು. ಅವರ ನಾಯಿಯು ಹಜಾರದಲ್ಲಿ ತನ್ನ ಮೊಣಕೈ ಗಳನ್ನು ಹರಡಿ ಕುಳಿತಿತ್ತು. ತಾವು ಅವರನ್ನು ನೋಡಿದ್ದಲ್ಲಿ ಹಿಂದಿರುಗಿ ಓಡುತ್ತಿದ್ದಿರಿ ಹಾಗೂ ಅವರಿಂದಾಗಿ ಭಯದಲ್ಲಿ ತುಂಬಿ ಹೋಗುತ್ತಿದ್ದಿರಿ.

19

ಅದೇ ರೀತಿ ಅವರನ್ನು ನಾವು (ನಿದ್ದೆಯಿಂದ) ಎಬ್ಬಿಸಿದೆವು . ಅವರು ಪರಸ್ಪರ ಪ್ರಶ್ನಿಸುವ ಸ್ಥಿತಿಗೆ ತಲುಪಿದರು. ಅವರಲ್ಲೊಬ್ಬನು; ನೀವು ಎಷ್ಟು ಕಾಲ (ಇಲ್ಲಿ ನಿದ್ದೆಯಲ್ಲಿ) ತಂಗಿದಿರಿ? ಎಂದು ಕೇಳಿದನು. ಅದಕ್ಕೆ ಉಳಿದವರು ‘ಒಂದು ದಿನ ಅಥವಾ ದಿನದ ಕೊಂಚ ಹೊತ್ತು (ನಿದ್ರೆಯಲ್ಲಿ) ತಂಗಿದೆವು’ ಎಂದರು. (ಆದರೆ ಅದನ್ನು ಸರಿಯಾಗಿ ನಿರ್ಣಯಿಸಲು ಅವರಿಗೆ ಸಾಧ್ಯವಾಗಲಿಲ್ಲ.) ಅವರು ಹೇಳಿದರು ‘ನೀವು (ನಿದ್ರಿಸಿ) ತಂಗಿದ ಕಾಲಾವಧಿಯ ಬಗ್ಗೆ ಹೆಚ್ಚು ಬಲ್ಲವನು ನಿಮ್ಮ ಪ್ರಭುವೇ ಆಗಿರುವನು. ಆದ್ದರಿಂದ ನಿಮ್ಮಲ್ಲಿ ಒಬ್ಬನನ್ನು ನಿಮ್ಮ ಈ ಬೆಳ್ಳಿನಾಣ್ಯದೊಂದಿಗೆ ಪೇಟೆಗೆ ಕಳುಹಿಸಿರಿ. ಧರ್ಮಬದ್ಧ ಆಹಾರ ಎಲ್ಲಿ ಸಿಗುವುದೆಂದು ಅವನು ನೋಡಿ ಕೊಂಡು ಅದರಿಂದ ಸ್ವಲ್ಪ ಆಹಾರವನ್ನು ತರಲಿ. ಅವನು ನಯವಾಗಿ ವರ್ತಿಸಲಿ. ನಿಮ್ಮ ಬಗ್ಗೆ ಯಾವುದೇ ಮಾಹಿತಿಯನ್ನು ಅವನು ಕೊಡಬಾರದು’ .

20

ನಿಮ್ಮ ಮೇಲೆ ಅವರು ಏರಿಬಂದರೆ ನಿಮ್ಮನ್ನು ಅವರು ಕಲ್ಲೆಸೆದು ಕೊಲ್ಲುವರು. ಇಲ್ಲವೇ ಅವರ ಮಾರ್ಗಕ್ಕೆ ಬಲವಂತದಿಂದ ಮರಳಿ ಕೊಂಡೊಯ್ಯುವರು. ನೀವೇನಾದರೂ ಮರಳಿ ಹೋದರೆ ಖಂಡಿತ ನೀವು ಯಶಸ್ವಿಯಾಗಲಾರಿರಿ’.

21

ಅದೇ ರೀತಿ ಅಲ್ಲಾಹನ ವಾಗ್ದಾನವು ಸತ್ಯವೆಂದೂ ಅಂತ್ಯದಿನದಲ್ಲಿ ಯಾವುದೇ ಸಂಶಯವಿಲ್ಲವೆಂದೂ ಜನರಿಗೆ ತಿಳಿಯುವಂತಾಗಲು ನಾವು ಅವರಿಗೆ ಇವರನ್ನು ತೋರಿಸಿಕೊಟ್ಟೆವು. ಗುಹಾವಾಸಿಗಳ ಕಾರ್ಯದಲ್ಲಿ ಅವರು ತರ್ಕಿಸುತ್ತಿದ್ದಾಗ ಕೆಲವರು ‘ಇವರ ಮೇಲೊಂದು ಕಟ್ಟಡವನ್ನು ಕಟ್ಟಿಬಿಡಿರಿ. ಇವರ ಬಗ್ಗೆ ಇವರ ಪ್ರಭುವೇ ಚೆನ್ನಾಗಿ ಬಲ್ಲವನು’ ಎಂದರು. ಆದರೆ ಅವರ ಕಾರ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದವರು, ‘ನಾವು ಇವರ ಹತ್ತಿರ ದಲ್ಲೊಂದು ಮಸೀದಿಯನ್ನು ನಿರ್ಮಿಸಿ ಬಿಡು ತ್ತೇವೆ' ಎಂದರು 7.

22

ಇದೀಗ ಕೆಲವರು; ಅವರು ಮೂವರೆಂದೂ ನಾಲ್ಕನೆಯದು ಅವರ ನಾಯಿಯೆಂದೂ ಇನ್ನು ಕೆಲವರು ಅವರು ಐವರೆಂದೂ ಆರನೆಯದು ಅವರ ನಾಯಿಯೆಂದೂ ಹೇಳುತ್ತಾರೆ. ಹಾಗೆಂದು ಕೇವಲ ಊಹೆಯ ಆಧಾರದಲ್ಲಿ ಹೇಳುತ್ತಾರೆ. ಅವರು ಏಳು ಜನರೆಂದೂ ಎಂಟನೆಯದು ಅವರ ನಾಯಿ ಯೆಂದೂ ಬೇರೆ ಕೆಲವರು ಹೇಳುತ್ತಾರೆ. ಹೇಳಿರಿ. `ನನ್ನ ಪ್ರಭು ಅವರ ಸಂಖ್ಯೆಯ ಬಗ್ಗೆ ಚೆನ್ನಾಗಿ ಬಲ್ಲನು. ಕೆಲವು ಜನರಿಗಲ್ಲದೆ ಅವರ ಬಗ್ಗೆ ತಿಳಿದಿಲ್ಲ, ಅಂದ ಮೇಲೆ ಅವರ ಬಗ್ಗೆ ಸ್ಪಷ್ಟವಾದ ವಿಚಾರದ ಹೊರತು ವಾದಿಸಬೇಡಿರಿ. ಅವರ ಬಗ್ಗೆ ಯಾರಲ್ಲೂ ತೀರ್ಪು ಕೇಳಬೇಡಿರಿ.

23

ಯಾವುದರ ಬಗ್ಗೆಯೂ ಅದನ್ನು ನಾಳೆ ಖಂಡಿತ ಮಾಡುವೆನು ಎಂದು ಹೇಳಬೇಡಿರಿ.

24

`ಇನ್‍ಶಾ ಅಲ್ಲಾಹ್' ಎಂದು ಹೇಳದೆ ನಿಮಗದು ಮರೆತು ಬಿಟ್ಟರೆ (ನೆನಪಾದಾಗ) ನಿಮ್ಮ ಪ್ರಭುವನ್ನು ಸ್ಮರಿಸು. “ನನ್ನ ಪ್ರಭು ಇದಕ್ಕಿಂತ ಹತ್ತಿರದ ನೇರ ಮಾರ್ಗದಲ್ಲಿ ನನ್ನನ್ನು ಮುನ್ನಡೆಸುವ ಭರವಸೆಯಿದೆ' ಎಂದು ಹೇಳಿ ಬಿಡಿರಿ.

25

ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಕಾಲ ತಂಗಿದ್ದರು ಹಾಗೂ ಒಂಬತ್ತು ವರ್ಷವನ್ನು ಹೆಚ್ಚಿಸಿದರು.

26

ಹೇಳಿರಿ; `ಅವರು ತಂಗಿದ ಕಾಲದ ಬಗ್ಗೆ ಅಲ್ಲಾ ಹನೇ ಹೆಚ್ಚಾಗಿ ಬಲ್ಲವನು . ಆಕಾಶ ಭೂಮಿಗಳ ಅದೃಶ್ಯವು ಆತನಿಗೇ ಮೀಸಲಾಗಿದೆ. ಅವನ ದೃಷ್ಟಿ ಅತ್ಯಂತ ತೀಕ್ಷ್ಣವೂ ಶ್ರವಣ ಅತ್ಯಂತ ಸೂಕ್ಷ್ಮವೂ ಆಗಿದೆ. ಆತನ ಹೊರತು ಅವರಿಗೆ ಯಾವ ರಕ್ಷಕನೂ ಇಲ್ಲ. ಆತ ತನ್ನ ಆಜ್ಞಾಧಿಕಾರದಲ್ಲಿ ಯಾರನ್ನೂ ಜೊತೆಗೂಡಿಸಿಲ್ಲ.

27

(ಓ ಪ್ರವಾದಿವರ್ಯರೇ,) ತಮ್ಮ ಪ್ರಭುವಿನ ಗ್ರಂಥದಿಂದ ಬೋಧಿಸಲಾದ ವಿಷಯವನ್ನು ತಾವು ಓದಿರಿ. ದೇವ ವಾಕ್ಯವನ್ನು ಬದಲಿಸುವ ಶಕ್ತಿ ಯಾರಿಗೂ ಇಲ್ಲ. ಅವನ ಹೊರತು ಇನ್ನಾರಿಂದಲೂ ಯಾವುದೇ ಅಭಯ ಸ್ಥಾನವನ್ನು ತಾವು ಪಡೆಯಲಾರಿರಿ.

28

ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಬೆಳ ಗು ಬೈಗುಗಳಲ್ಲಿ ದೇವೋಪಾಸನೆ ಮಾಡುತ್ತಿರುವ ಜನರ ಜತೆಗೆ ನೀವು ಸಹನೆಯೊಂದಿಗೆ ಇರಿ . ಇಹಜೀವನದ ಸೊಬಗನ್ನು ಬಯಸಿ ಅವರಿಂದ ತಮ್ಮ ಕಣ್ಣುಗಳು ತಪ್ಪದಿರಲಿ. ನಮ್ಮ ಸ್ಮರಣೆಯಿಂದ ಯಾರ ಹೃದಯವನ್ನು ನಾವು ಅಲಕ್ಷಿಸಿ ದ್ದೇವೆಯೋ ಮತ್ತು ಯಾವನು ತನ್ನಿಚ್ಚೆಯ ಹಿಂದೆ ಬಿದ್ದು ತನ್ನ ಕಾರ್ಯವು ಹತೋಟಿಗೆ ಸಿಗುವುದಿಲ್ಲವೋ ಅಂಥ ವ್ಯಕ್ತಿಯನ್ನು ತಾವು ಅನುಸರಿಸ ಬೇಡಿರಿ .

29

ಹೇಳಿರಿ, ಇದು (ಖುರ್‍ಆನ್) ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದ್ದು ಇಷ್ಟವಿದ್ದವರು ನಂಬಲಿ, ಬೇಡದವರು ನಿರಾಕರಿಸಲಿ. ನಿಜವಾ ಗಿಯೂ ಅಕ್ರಮಿಗಳಿಗಾಗಿ ನಾವು ನರಕಾಗ್ನಿಯ ನ್ನು ಸಜ್ಜುಗೊಳಿಸಿದ್ದೇವೆ. ಅದರ ಆವರಣವು ಅವರನ್ನು ಆವರಿಸಿದೆ. ಅವರು ನೆರವು ಕೇಳಿದರೆ ಮುಖವನ್ನೇ ವಿಕೃತಿಗೊಳಿಸಿಬಿಡುವ ಹಾಗೂ ಎಣ್ಣೆ ಡಬ್ಬದ ತಳದಲ್ಲಿರುವ ಜಿಡ್ಡಿನಂತಹ ದುರ್ಜಲವನ್ನು ಅವರಿಗೆ ನೀಡಲಾಗುವುದು. ಅದೆಷ್ಟು ನಿಕೃ ಷ್ಟವಾದ ಪೇಯ! ಅದೆಷ್ಟು ಕೆಟ್ಟ ತಂಗುದಾಣ!

30

ಯಾರು ಸತ್ಯವಿಶ್ವಾಸ ತಾಳಿ ಸತ್ಕರ್ಮಗಳನ್ನು ಕೈಗೊಳ್ಳುತ್ತಾರೋ ನಾವು ಸತ್ಕರ್ಮಿಗಳ ಪ್ರತಿ ಫಲವನ್ನು ವ್ಯರ್ಥಗೊಳಿಸಲಾರೆವು.

31

ಅವರಿಗಾಗಿ ತಳಭಾಗದಲ್ಲಿ ಕಾಲುವೆ ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅಲ್ಲಿ ಅವರಿಗೆ ಬಂಗಾರದ ಕಂಕಣವನ್ನು ತೊಡಿಸಲಾಗುವುದು. ಹಸಿರು ಬಣ್ಣದ ತೆಳು ಹಾಗೂ ದೊರಗಿನ ರೇಷ್ಮೆ ಬಟ್ಟೆಗಳನ್ನು ಅವರು ಉಟ್ಟಿರುತ್ತಾರೆ. ಅಲ್ಲಿ ಅಲಂಕೃತ ಒರಗುಮಂಚದಲ್ಲಿ ಒರಗಿ ಹಾಯಾಗಿರುತ್ತಾರೆ. ಅದೆಷ್ಟು ಉತ್ತಮ ಪ್ರತಿಫಲ! ಅದೆಷ್ಟು ಉತ್ತಮ ವಿಶ್ರಾಂತಿಧಾಮ.!

32

(ನಬಿವರ್ಯರೇ,) ತಾವು ಅವರಿಗೆ ಇಬ್ಬರ ಬಗ್ಗೆ ಒಂದು ಉಪಮೆಯನ್ನು ಹೇಳಿರಿ. ಅವರಲ್ಲೊಬ್ಬ ನಿಗೆ ನಾವು ದ್ರಾಕ್ಷೆಯ ಎರಡು ತೋಟಗಳನ್ನು ಕೊಟ್ಟೆವು. ಅವೆರಡನ್ನು ಖರ್ಜೂರ ಮರಗಳಿಂದ ಸುತ್ತುವರಿಸಿದೆವು. ಅವೆರಡರ ಮಧ್ಯೆ ಕೃಷಿಯನ್ನು ಬೆಳೆಸಿದೆವು.

33

ಆ ಎರಡು ತೋಟಗಳು ಹೇರಳ ಫಲ ಕೊಟ್ಟಿತು. ಯಾವುದೇ ಕೊರತೆಯನ್ನು ಅದು ಮಾಡಲಿಲ್ಲ. ಆ ಎರಡು ತೋಟಗಳ ನಡುವೆ ನಾವು ಕಾಲುವೆಯನ್ನು ಹರಿಸಿದ್ದೆವು.

34

ಅವನಿಗೆ ಬೇರೆಯೂ ಸೊತ್ತು ಇತ್ತು. ಒಮ್ಮೆ ಅವನು ತನ್ನ ಸಂಗಡಿಗನೊಂದಿಗೆ ವಾಗ್ವಾದ ಮಾಡುತ್ತಾ; “ನಾನು ನಿನಗಿಂತ ಹೆಚ್ಚು ಶ್ರೀಮಂತನೂ ನಿನಗಿಂತ ಜನಬಲವುಳ್ಳವನೂ ಆಗಿರುತ್ತೇನೆ” ಎಂದನು.

35

ಅವನು ತನ್ನ ತೋಟಕ್ಕೆ ಹೊಕ್ಕನು. ಅವನು ಸತ್ಯನಿಷೇಧಿಯಾಗಿದ್ದುಕೊಂಡೇ ಹೇಳಿದನು; `ಇದು ಎಂದಾದರೂ ನಾಶವಾದೀತೆಂದು ನಾನು ಭಾವಿಸುವುದಿಲ್ಲ’.

36

ಪ್ರಳಯ ಉಂಟಾದೀತೆಂದು ನಾನು ಭಾವಿಸುವುದಿಲ್ಲ. ಬಹುಶಃ ನನ್ನ ಪ್ರಭುವಿನ ಕಡೆಗೆ ನನ್ನನ್ನು ಮರಳಿಸಲಾದರೂ ಇದಕ್ಕಿಂತ ಉತ್ತಮವಾದ ನಿರ್ಗಮನವನ್ನು ಪಡೆಯುವೆನು.'

37

ಅವನೊಂದಿಗೆ ವಾಗ್ವಾದ ಮಾಡುತ್ತಾ ಜೊತೆಗಾರನು ಕೇಳಿದನು. `ಮಣ್ಣಿನಿಂದಲೂ ಆ ಬಳಿಕ ವೀರ್ಯದಿಂದಲೂ ನಿನ್ನನ್ನು ಸೃಷ್ಟಿಸಿ ನಂತರ ನಿನ್ನನ್ನು ಓರ್ವ ಸಂಪೂರ್ಣ ಮನುಷ್ಯನನ್ನಾಗಿ ರೂಪುಗೊಳಿಸಿದ ಪ್ರಭುವನ್ನು ನೀನು ನಿರಾಕರಿಸುವೆಯಾ?

38

ಆದರೆ ಅಲ್ಲಾಹನು ನನ್ನ ಪ್ರಭುವಾಗಿದ್ದು ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಜೊತೆ ಸೇರಿಸುವುದಿಲ್ಲ.

39

ನೀನು ನಿನ್ನ ತೋಟಕ್ಕೆ ಹೊಕ್ಕಾಗ `ಮಾಶಾ ಅಲ್ಲಾಹ್ ಲಾ ಖುವ್ವತ ಇಲ್ಲಾ ಬಿಲ್ಲಾಹ್' (ಕೈಗೂಡುವುದು ದೇವೇಚ್ಛೆ ಮಾತ್ರವಾಗಿದ್ದು ಅಲ್ಲಾ ಹನಿಂದ ಹೊರತು ಯಾವುದೇ ಶಕ್ತಿಯಿಲ್ಲ) ಎಂದೇಕೆ ಹೇಳಿಲ್ಲ? ಸೊತ್ತು ಸಂತತಿಗಳಲ್ಲಿ ನಾನು ನಿನಗಿಂತ ಕೀಳಾಗಿ ಕಾಣುತ್ತಿದ್ದರೆ,

40

ನಿನ್ನ ತೋಟಕ್ಕಿಂತ ಉತ್ತಮವಾದುದನ್ನು ನನ್ನ ಪ್ರಭು ನನಗೆ ಕೊಡಲಿಕ್ಕೂ ನಿನ್ನ ತೋಟಕ್ಕೆ ಆಕಾಶದಿಂದ ವಿಪತ್ತನ್ನು ಕಳುಹಿಸಿ ಅದನ್ನು ಜಾರುವ ನೆಲವನ್ನಾಗಿ ಮಾಡಲಿಕ್ಕೂ ಸಮರ್ಥನಿದ್ದಾನೆ.

41

ಅಥವಾ ಅದರ ನೀರು ನಿನಗೆಂದೂ ಹುಡುಕಿ ತೆಗೆಯಲು ಸಾಧ್ಯವಿಲ್ಲದ ಮಟ್ಟಿಗೆ ನೆಲಕ್ಕೆ ಇಂಗಿ ಹೋಗಲೂಬಹುದು.'

42

ಕೊನೆಗೆ ಆತನ ಫಲಗಳು ಸರ್ವನಾಶವಾದವು. ಅವನು ತನ್ನ ತೋಟಗಳು ತಡಿಕೆಗಳ ಮೇಲೆ ಮಗುಚಿ ಬಿದ್ದಾಗ ತಾನು ಅದಕ್ಕಾಗಿ ಮಾಡಿದ ವೆಚ್ಚವನ್ನು ನೆನೆಸಿ ಮರುಗಿದನು. `ನಾನು ನನ್ನ ಪ್ರಭುವಿನೊಂದಿಗೆ ಯಾರನ್ನೂ ಜೊತೆ ಸೇರಿಸದೇ ಇರುತ್ತಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.' ಎಂದನು.

43

. ಅಲ್ಲಾಹನ ಹೊರತು ಸಹಾಯ ಮಾಡಬಲ್ಲ ಯಾವ ತಂಡವೂ ಆತನಿಗೆ ಒದಗಿಬರಲಿಲ್ಲ. ಅವನು ಸ್ವಂತ ಸಹಾಯವನ್ನೂ ಪಡೆಯದಾದನು.

44

ಅಲ್ಲಿ ಅಧಿಪತ್ಯವು ಸತ್ಯಪೂರ್ಣವಾದ ಅಲ್ಲಾಹನಿಗೆ ಮಾತ್ರ. ಅವನು ಅತ್ಯುತ್ತಮ ಪ್ರತಿಫಲವನ್ನೂ ಫಲಿತಾಂಶವನ್ನೂ ನೀಡಬಲ್ಲವನಾಗಿದ್ದಾನೆ.

45

(ಓ ಪ್ರವಾದಿವರ್ಯರೇ,) ಇಹಜೀವನದ ಉಪಮೆ ಯನ್ನು ಅವರಿಗೆ ವಿವರಿಸಿ ಕೊಡಿರಿ. ಅದು ಆಕಾಶ ದಿಂದ ನಾವು ಸುರಿಸಿ ಕೊಡುವ ಮಳೆ ನೀರಿನಂತಿದೆ. ತನ್ಮೂಲಕ ಭೂಮಿಯ ಬೆಳೆಯು ದಟ್ಟವಾಗಿ ಬೆಳೆಯುತ್ತದೆ. ನಂತರ ಅದು ಗಾಳಿಯಲ್ಲಿ ಹಾರಿ ಹೋಗುವ ಹೊಟ್ಟಾಗಿ ಬಿಡುತ್ತದೆ. ಅಲ್ಲಾಹು ಸಕಲ ವಸ್ತುಗಳ ಮೇಲೆ ಸರ್ವ ಸಮರ್ಥನು.

46

ಸೊತ್ತು ಸಂತಾನವು ಲೌಕಿಕ ಜೀವನದ ಶೃಂಗಾರ. ಶಾಶ್ವತವಾಗಿ ಉಳಿಯುವ ಪುಣ್ಯ ಕಾರ್ಯ ಗಳೇ ತಮ್ಮ ಪ್ರಭುವಿನ ಬಳಿ ಸತ್ಫಲ ಹಾಗೂ ಆಸೆಪಡಲು ಯೋಗ್ಯವಾದುದು .

47

ಪರ್ವತಗಳನ್ನು ನಾವು ಹಾರಿಸುವ ದಿನವನ್ನು ನೆನಪಿಸಿರಿ. ಅಂದು ಭೂಮಿಯನ್ನು ತಾವು ಬಟ್ಟ ಬಯಲಿನಂತೆ ಕಾಣುವಿರಿ. ಯಾರೊಬ್ಬನನ್ನೂ ಬಿಟ್ಟು ಹೋಗದಂತೆ ಸರ್ವ ಜನರನ್ನು ನಾವಲ್ಲಿ ಒಟ್ಟುಗೂಡಿಸಲಿದ್ದೇವೆ.

48

ತಮ್ಮ ಪ್ರಭುವಿನ ಸನ್ನಿಧಿಗೆ ಅವರೆಲ್ಲರನ್ನು ಸಾಲು ಸಾಲಾಗಿ ತರಲಾಗುವುದು. (ಓ ಪುನರು ತ್ಥಾನ ನಿಷೇಧಿಗಳೇ,) ಪ್ರಥಮ ಬಾರಿಗೆ ನಾವು ನಿಮ್ಮನ್ನು ಸೃಷ್ಟಿಸಿದ ಪ್ರಕಾರ ಇದೀಗ ನಮ್ಮೆಡೆಗೆ ನೀವು ಬಂದಿರುವಿರಿ. ಆದರೆ ಪುನರುತ್ಥಾನಕ್ಕಾಗಿ ಯಾವುದೇ ವಾಗ್ದತ್ತ ಸಮಯವನ್ನು ನಾವು ನಿಶ್ಚಯಿಸಿಲ್ಲವೆಂದು ನೀವು ಬಗೆಯುತ್ತಿದ್ದಿರಿ.

49

ಅಂದು ಪ್ರತಿಯೊಬ್ಬರ ಕೈಗಳಿಗೆ ಕರ್ಮಪತ್ರವನ್ನು ವಿತರಿಸಲಾಗುವುದು. ಆಗ ಅದರಲ್ಲಿರುವ ತಮ್ಮ ಕರ್ಮಗಳ ಬಗ್ಗೆ ಅಪರಾಧಿಗಳು ಅಂಜಿ ತತ್ತರಿಸು ವುದನ್ನು ತಾವು ಕಾಣುವಿರಿ. ಆಗ ಅವರು ಹೇಳು ವರು `ಅಯ್ಯೋ, ನಮ್ಮ ನಾಶವೇ, ಇದೆಂಥ ಗ್ರಂಥ! ಯಾವುದೇ ಸಣ್ಣ ಹಾಗೂ ದೊಡ್ಡ ವಿಷಯವನ್ನು ಇದರಲ್ಲಿ ಕರಾರುವಾಕ್ಕಾಗಿ ಲಿಖಿತಗೊಳಿಸದೆ ಬಿಟ್ಟಿಲ್ಲವಲ್ಲ. ಅವರು ಏನೆಲ್ಲ ಮಾಡಿದ್ದಾರೆ, ಅವ ನ್ನೆಲ್ಲ ಅವರು ಕಣ್ಣಾರೆ ಕಾಣುವರು. ತಮ್ಮ ಪ್ರಭು ಯಾರಿಗೂ ಕಿಂಚಿತ್ತೂ ಅನ್ಯಾಯ ಮಾಡಲಾರ.

50

`ನೀವು ಆದಮರಿಗೆ ಸುಜೂದ್ ಮಾಡಿರಿ' ಎಂದು ನಾವು ದೇವಚರರಿಗೆ ಹೇಳಿದಾಗ ಇಬ್ಲೀಸನ ಹೊರತು ಎಲ್ಲರೂ ಸುಜೂದ್ ಮಾಡಿದರು. ಅವನು ಖೇಚರ ವರ್ಗದವನಾಗಿದ್ದನು. ತನ್ನಿ ಮಿತ್ತ ಅವನು ತನ್ನ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದನು. (ಓ ಜನರೇ,) ಹೀಗಿರುವಾಗ ನನ್ನನ್ನು ಬಿಟ್ಟು ಅವನನ್ನೂ ಅವನ ಸಂತಾನವನ್ನೂ ನೀವು ಆಪ್ತರನ್ನಾಗಿ ಮಾಡುವುದು ಸರಿಯೇ? ನಿಜದಲ್ಲಿ ಅವರು ನಿಮ್ಮ ಶತ್ರುಗಳು. ಅಕ್ರಮಿಗಳಿಗೆ ಬದಲಿಯಾಗಿ ಅತ್ಯಂತ ಕೆಟ್ಟ ಫಲವೇ ದಕ್ಕಿದೆ.

51

ಭೂಮಿ ಮತ್ತು ಆಕಾಶಗಳ ಸೃಷ್ಟಿಯಲ್ಲಿ ಸ್ವತಃ ಅವರ ಸೃಷ್ಟಿಯಲ್ಲಿ ಕೂಡ ಅವರಾರನ್ನು ನಾನು ಸಾಕ್ಷಿಗಳನ್ನಾಗಿ ಮಾಡಿಲ್ಲ. ದಾರಿಗೆಡಿಸುವ ಪಿಶಾಚಿಗಳನ್ನು ನನ್ನ ಸಹಾಯಕರಾಗಿ ನಾನು ನಿಯ ಮಿಸಿಯೂ ಇಲ್ಲ. (ಹೀಗಿರುವಾಗ ನನ್ನ ಆರಾಧನೆಯಲ್ಲಿ ಅಂಥವರನ್ನು ಸಹಭಾಗಿಗೊಳಿಸಿದ್ದು ನ್ಯಾಯವೇ?)

52

`ನೀವು ಬಗೆದ ನನ್ನ ಸಹಭಾಗಿಗಳನ್ನು ಕರೆ ಯಿರಿ' ಎಂದು ಅಲ್ಲಾಹು (ಬಹುದೇವಾರಾಧಕರಿಗೆ) ಹೇಳುವ ದಿನವನ್ನು ನೆನಪಿಸಿ. ಆಗ ಅವರು ಕರೆದು ನೋಡುವರು. ಆದರೆ ಅವರಿಗೆ ಉತ್ತರ ಕೊಡಲಾರರು. ನಾವು ಅವರ ನಡುವೆ ದುರ್ಗಮ ಸ್ಥಳವನ್ನು ನಿಶ್ಚಯಿಸಿ ಕೊಡುವೆವು .

53

ಅಪರಾಧಿಗಳು ನರಕವನ್ನು ಕಣ್ಣಾರೆ ಕಾಣುವರು ಮತ್ತು ನಾವು ಅದರಲ್ಲಿ ಬೀಳುವೆವೆಂದು ಅವರಿಗೆ ಮನದಟ್ಟಾಗುವುದು. ಅದರಿಂದ ಪಾರಾಗುವ ಯಾವುದೇ ದಾರಿಯನ್ನು ಅವರು ಕಂಡು ಕೊಳ್ಳಲಾರರು.

54

ನಾವು ಈ ಖುರ್‍ಆನಿನಲ್ಲಿ ಜನರಿಗೆ ಎಲ್ಲ ತರದ ಉಪಮೆಗಳನ್ನು ವಿವಿಧ ರೂಪದಲ್ಲಿ ವಿವರಿಸಿ ದ್ದೇವೆ. ಆದರೆ ಮನುಷ್ಯನು ಅಧಿಕ ವಿಷಯಗ ಳಲ್ಲೂ ಹಠಮಾರಿ ಧೋರಣೆಯನ್ನು ಹೊಂದಿರುವನು.

55

ಮನುಷ್ಯರನ್ನು ಮಾರ್ಗದರ್ಶನ ಬಂದಾಗ ಅದನ್ನು ನಂಬುವುದರಿಂದ ಹಾಗೂ ಅವರ ಪ್ರಭು ವಿನೊಡನೆ ಕ್ಷಮಾಯಾಚನೆ ಮಾಡುವುದರಿಂದ ಅವರನ್ನು ತಡೆದದ್ದು, ಗತಕಾಲದ ಜನಾಂಗಗಳ ಗತಿ ಬರುವುದು ಅಥವಾ ಮುಖಾಮುಖಿ ಶಿಕ್ಷೆ ಅವರಿಗೆ ಬರುವುದು ಎಂಬ ಅವರ ವಿಧಿ ಲಿಖಿತ ವಾಗಿತ್ತು.

56

ಸುವಾರ್ತೆ ಹಾಗೂ ಮುನ್ನೆಚ್ಚರಿಕೆ ಕೊಡುವವ ರನ್ನಾಗಿಯೇ ಹೊರತು ಸಂದೇಶವಾಹಕರನ್ನು ನಾವು ನಿಯೋಜಿಸುತ್ತಿಲ್ಲ. ಆದರೆ ಸತ್ಯನಿಷೇಧಿಗಳು ಸತ್ಯವನ್ನು ದಮನಿಸಲು ಮಿಥ್ಯ ಮಾರ್ಗದ ಮೂಲಕ ವಾದ ಹೂಡುತ್ತಾರೆ. ಅವರು ನನ್ನ ದೃಷ್ಟಾಂತಗಳನ್ನೂ ಅವರಿಗೆ ನೀಡಲಾದ ಮುನ್ನೆಚ್ಚರಿಕೆಯನ್ನೂ ಪರಿಹಾಸ್ಯವನ್ನಾಗಿ ಮಾಡಿದ್ದಾರೆ.

57

ತನ್ನ ಪ್ರಭುವಿನ ದೃಷ್ಟಾಂತಗಳ ಬಗ್ಗೆ ಬೋಧನೆ ನೀಡಿಯೂ ಯಾರು ಅದರಿಂದ ವಿಮುಖನಾಗು ತ್ತಾನೆ ಮತ್ತು ತನ್ನ ಸ್ವಂತ ಕೈಗಳಿಂದ ಮಾಡಿದ ಪಾಪ ಕೃತ್ಯಗಳನ್ನು ಮರೆತು ಬಿಡುತ್ತಾನೆ, ಅವನಿಗಿಂತ ದೊಡ್ಡ ಅಕ್ರಮಿ ಬೇರೆ ಯಾರೂ ಇಲ್ಲ. ಖಂಡಿತ ನಾವು ಅವರ ಹೃದಯಗಳಿಗೆ ಖುರ್ ಆನ್ ಗ್ರಹಿಸದಂತೆ ಮಾಡುವ ಪರದೆಯನ್ನು ಮತ್ತು ಅವರ ಕಿವಿಗಳಿಗೆ ಕಿವುಡನ್ನು ಇರಿಸಿದ್ದೇವೆ. ಈ ಕಾರಣದಿಂದ ನೀವು ಅವರನ್ನು ನೇರದಾರಿಗೆ ಕರೆದರೆ ಅವರೆಂದಿಗೂ ಸನ್ಮಾರ್ಗವನ್ನು ಪಡೆಯಲಾರರು.

58

ಮಹಾಕ್ಷಮಾಶೀಲನಾದ ನಿಮ್ಮ ಪ್ರಭುವು ಕರು ಣಾಮಯನೂ ಆಗಿರುತ್ತಾನೆ. ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯನ್ನು (ಇಹಲೋಕದಲ್ಲೇ) ಕೊಡುವುದಿದ್ದರೆ ಅವನು ಶಿಕ್ಷೆಯನ್ನು ತ್ವರಿತ ಗೊಳಿಸುತಿದ್ದನು. ಆದರೆ ಶಿಕ್ಷಾಕ್ರಮ ಕೈಗೊಳ್ಳಲು ನಿಶ್ಚಿತ ಅವಧಿಯನ್ನು ನಿಗದಿಪಡಿಸಲಾಗಿದೆ. ಆ ಅವಧಿ ತಲುಪಿಬಿಟ್ಟರೆ ಅದನ್ನು ತಪ್ಪಿಸಿ ಪಾರಾಗು ವ ಅಭಯ ಸ್ಥಾನವನ್ನು ಅವರು ಪಡೆಯಲಾರರು.

59

ಸತ್ಯವನ್ನು ನಿಷೇಧಿಸಿ ಅನ್ಯಾಯವೆಸಗಿದಾಗ ನಾವು ಅದೆಷ್ಟೋ ನಾಡಿನ ನಿವಾಸಿಗಳನ್ನು ನಾಶ ಮಾಡಿದ್ದೇವೆ. ಅವರ ನಾಶಕ್ಕೆ ನಾವು ನಿಶ್ಚಿತ ಅವಧಿಯನ್ನು ನಿಗದಿಪಡಿಸಿದ್ದೇವೆ.

60

`ಎರಡು ಸಾಗರ ಸಂಗಮಿಸುವ ಸ್ಥಾನಕ್ಕೆ ತಲು ಪುವವರೆಗೆ ನಾನು ಯಾತ್ರೆಯನ್ನು ಮುಂದುವರಿ ಸುವೆನು. ಇಲ್ಲವೇ ನಾನು ದೀರ್ಘಕಾಲದವರೆಗೆ ನಡೆಯುತ್ತಲೇ ಇರುವೆನು' ಎಂದು ಪ್ರವಾದಿ ಮೂಸಾ, ತಮ್ಮ ಜವಾನನೊಡನೆ ಹೇಳಿದ ಘಟನೆಯನ್ನು ನೆನಪಿಸಿರಿ.

61

ಅವರಿಬ್ಬರು ಕೂಡುಸಾಗರಕ್ಕೆ ತಲುಪಿದಾಗ ತಮ್ಮ ಮೀನನ್ನು ಜೊತೆಗೊಯ್ಯಲು ಮರೆತು ಬಿಟ್ಟರು. ಆಗ ಅದು ಸಮುದ್ರದಲ್ಲಿ ಸುರಂಗ ದಾರಿಯನ್ನು ಹಿಡಿಯಿತು.

62

ತರುವಾಯ ಅವರು ಆ ಸ್ಥಳವನ್ನು ಬಿಟ್ಟು ಮುಂದೆ ಸಾಗಿದಾಗ ತಮ್ಮ ಜವಾನನೊಡನೆ `ನಮ್ಮ ಬೆಳಗಿನ ತಿಂಡಿ ನೀಡು, ಇಂದು ನಾವು ನಡೆದು ಸುಸ್ತಾಗಿದ್ದೇವೆ' ಎಂದರು.

63

ಆಗ ಜವಾನನು, `ಗಮನಿಸುವಿರಾ? ನಾವು ಆ ಬಂಡೆಗಲ್ಲಿನಲ್ಲಿ ತಂಗಿದ್ದಾಗ ನಾನು ಮೀನನ್ನು ಮರೆತುಬಿಟ್ಟಿದ್ದೆ. ಅದನ್ನು ತಮ್ಮಲ್ಲಿ ಹೇಳದಂತೆ ಶೈತಾನನು ನನ್ನನ್ನು ಮರೆವೆಗೊಳಿಸಿದ್ದನು. ಮೀನು ಸಮುದ್ರದಲ್ಲಿ ವಿಸ್ಮಯದ ದಾರಿಯನ್ನು ಹಿಡಿಯಿತು' ಎಂದನು.

64

ಆಗ ಮೂಸಾ, `ನಾವು ಇದುವರೆಗೂ ಹುಡುಕುತ್ತಿರುವ ಸ್ಥಳ ಅದುವೇ' ಎಂದರು. ನಂತರ ಅವರಿ ಬ್ಬರು ತಮ್ಮ ಕಾಲು ಹೆಜ್ಜೆಯ ಗುರುತು ಹಿಡಿದು ಹಿಂದೆ ನಡೆದರು.

65

ಆಗ ಅವರು ನಮ್ಮ ದಾಸರ ಪೈಕಿ ಓರ್ವ ದಾಸನನ್ನು ಕಂಡರು. ಆ ದಾಸನಿಗೆ ನಮ್ಮ ಪಾಲಿನ ಅನುಗ್ರಹವನ್ನು ಕೊಟ್ಟಿದ್ದೆವು. ಅಲ್ಲದೆ ನಮ್ಮ ವತಿಯಿಂದ ವಿಶೇಷ ಜ್ಞಾನವನ್ನು ಕಲಿಸಿದ್ದೆವು .

66

ಮೂಸಾ ಅವರೊಡನೆ; ‘ನಿಮಗೆ ಕಲಿಸಿ ಕೊಡಲಾಗಿರುವ ಸನ್ಮಾರ್ಗ ಜ್ಞಾನವನ್ನು ನನಗೂ ಕಲಿಸಿ ಕೊಡಲೆಂದು ನಾನು ನಿಮ್ಮ ಜೊತೆ ಬರಲೇ’ ಎಂದು ಕೇಳಿದರು.

67

ಆಗ ಅವರು ಹೇಳಿದರು, ‘ನನ್ನ ಜೊತೆ ನಿಲ್ಲಲು ತಮಗೆ ಖಂಡಿತ ಸಹನೆ ಬರಲಾರದು’.

68

‘ತಾವು ಗ್ರಹಿಸದ ವಿಷಯದ ಬಗ್ಗೆ ತಾವು ಹೇಗೆ ಸಹಿಸುವಿರಿ ?’

69

ಆಗ ಮೂಸಾ `ಇನ್‍ಶಾ ಅಲ್ಲಾಹ್, ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ. ನಾನು ತಮ್ಮ ಯಾವುದೇ ಆದೇಶವನ್ನು ಉಲ್ಲಂಘಿಸಲಾರೆ' ಎಂದರು.

70

ಆಗ ಅವರು, ‘ತಾವು ನನ್ನ ಜತೆ ಬರುವುದಾದರೆ ನಾನು ಏನೇ ಮಾಡಿದರೂ ನಾನೇ ನಿಮಗೆ ವಿವರಿಸಿ ಕೊಡುವವರೆಗೆ ಅದರ ಬಗ್ಗೆ ಏನನ್ನೂ ಕೇಳಬಾರದು’ ಎಂದರು.

71

ತರುವಾಯ ಅವರಿಬ್ಬರೂ (ಕಡಲತೀರದಲ್ಲಿ ನಡೆಯುತ್ತ) ಸಾಗಿದರು. ಕೊನೆಗೆ ಅವರು (ಅಲ್ಲೇ ಹಾದು ಹೋಗುತ್ತಿದ್ದ) ಹಡಗಿಗೆ ಹತ್ತಿದರು. (ನಡು ಗಡಲಿಗೆ ತಲುಪಿದಾಗ) ಆ ವ್ಯಕ್ತಿ ಹಡಗಿನ ಹಲಗೆಯನ್ನು ಕಡಿದು ತೆಗೆದರು. ಆಗ ಮೂಸಾ ಆ ವ್ಯಕ್ತಿಗೆ ಹೇಳಿದರು. ‘ನೀವು ಹಡಗಿನ ಜನರನ್ನು ಮುಳುಗಿಸಿ ಬಿಡಬೇಕೆಂದು ಇದನ್ನು ಕಡಿದು ತೆಗೆದಿರಾ? ನಿಜಕ್ಕೂ ತಾವು ಬಲು ದೊಡ್ಡ ತಪ್ಪನ್ನೇ ಮಾಡಿದಿರಿ’.

72

ಆಗ ಅವರು; ‘ನನ್ನ ಜತೆಗೆ ನಿಮಗೆ ಸಹನೆ ಪಾಲಿಸಲು ಸಾಧ್ಯವಿಲ್ಲವೆಂದು ನಾನು ಮೊದಲೇ ಹೇಳಿರಲಿಲ್ಲವೇ?’ ಎಂದು ಕೇಳಿದರು.

73

ಆಗ ಮೂಸಾ, ‘ಮರೆತು ಹೇಳಿದುದಕ್ಕಾಗಿ ನನ್ನ ಮೇಲೆ ಕ್ರಮ ಕೈಗೊಳ್ಳಬೇಡಿರಿ. ನನ್ನ ವಿಷಯ ದಲ್ಲಿ ನಿಷ್ಟುರವಾಗಿ ವರ್ತಿಸಬೇಡಿರಿ. ಕನಿಕರ ತೋರಿರಿ’ ಎಂದರು.

74

ಅನಂತರ ಅವರಿಬ್ಬರೂ (ಹಡಗಿನಿಂದಿಳಿದು) ನಡೆಯುತ್ತ ಸಾಗಿದರು. ಕೊನೆಗೆ ಅವರು ಒಬ್ಬ ಬಾಲಕನನ್ನು ಕಂಡರು. ಕೂಡಲೇ ಆ ವ್ಯಕ್ತಿ ಅವ ನನ್ನು ಕೊಲೆ ಮಾಡಿದರು. ಮೂಸಾ ಹೇಳಿ ದರು. ‘ಪ್ರಾಯ ತುಂಬದ ಮುಗ್ಧ ಪ್ರಾಣವೊಂದನ್ನು ಮರಣ ದಂಡನೆಯ ಹೊರತು ಹತ್ಯೆ ಮಾಡಿದಿರಲ್ಲ ವೇ? ನಿಜಕ್ಕೂ ನೀವು ನೀಚ ಕಾರ್ಯವನ್ನೆಸಗಿದಿರಿ’.

75

ಆಗ ಅವರು ‘ನನ್ನ ಜೊತೆಗೆ ನಿಮಗೆ ಸಹನೆ ವಹಿಸಲು ಸಾಧ್ಯವಿಲ್ಲವೆಂದು ನಾನು ಮೊದಲೇ ಹೇಳಿರಲಿಲ್ಲವೇ?’ ಎಂದರು.

76

ಆಗ ಮೂಸಾ ‘ಇನ್ನು ಮುಂದೆ ಏನಾದರೂ ನಿಮ್ಮಲ್ಲಿ ನಾನು ಕೇಳಿದರೆ ನನ್ನೊಂದಿಗೆ ಸಹ ವಾಸ ಮಾಡದಿರಿ. ನನ್ನಿಂದ ನಿಮಗೆ (ನನ್ನನ್ನು ಬೇರ್ಪಡಿಸುವ) ಧಾರಾಳ ಕಾರಣ ಸಿಕ್ಕಿದೆ’ ಎಂದರು.

77

ಅನಂತರ ಅವರು ಮುಂದೆ ಸಾಗಿದರು. ಕೊನೆಗೆ ಒಂದು ಗ್ರಾಮಕ್ಕೆ ಬಂದರು. ಅಲ್ಲಿಯ ಜನರಲ್ಲಿ ಊಟ ಕೇಳಿದರು. ಆದರೆ ಇವರನ್ನು ಸತ್ಕರಿಸಲು ಅವರು ನಿರಾಕರಿಸಿದರು. ಆಗ ಅಲ್ಲೊಂದು ಕುಸಿದು ಬೀಳಲಿಕ್ಕಾದ ಗೋಡೆಯನ್ನು ಕಂಡರು. ಆ ವ್ಯಕ್ತಿ ಅದನ್ನು ಸರಿಪಡಿಸಿ ನಿಲ್ಲಿಸಿದರು. ಮೂಸಾ ಹೇಳಿದರು; ‘ನಿಮಗೆ ಇದನ್ನು ಸರಿ ಮಾಡಲೇಬೇಕೆಂದಿದ್ದರೆ ಮಜೂರಿಯನ್ನು ಪಡೆಯಬಹುದಿತ್ತಲ್ಲ?’

78

ಆಗ ಅವರು ಹೀಗೆ ಹೇಳಿದರು. ‘ನನ್ನ ಹಾಗೂ ನಿಮ್ಮ ನಡುವೆ ಬೇರ್ಪಡುವ ಸಮಯವಿದು. ಇನ್ನು ನಾನು ನಿಮಗೆ ತಾಳಿಕೊಳ್ಳಲಾಗದ ವಿಷಯಗಳ ಸೃಷ್ಟೀಕರಣವನ್ನು ವಿವರಿಸಿ ಕೊಡುತ್ತೇನೆ.

79

ಆ ಹಡಗು ಕಡಲಲ್ಲಿ ದುಡಿದು ಹೊಟ್ಟೆ ಹೊರೆಯುತ್ತಿದ್ದ ಬಡವರದ್ದಾಗಿತ್ತು. ಮುಂದೆ ಹೋಗುವಾಗ ದಾರಿಯಲ್ಲಿ ಅಕ್ರಮಿಯಾದ ರಾಜನೊಬ್ಬನಿದ್ದು ಅವನು (ಕೇಡಿಲ್ಲದ) ಎಲ್ಲ ಹಡಗುಗಳನ್ನು ಬಲ ವಂತವಾಗಿ ವಶಪಡಿಸಿಕೊಳ್ಳುತ್ತಿದ್ದನು. ಆದ್ದರಿಂದ ನಾನದನ್ನು ಕೇಡು ಮಾಡಲು ಬಯಸಿದೆ.

80

ಆ ಬಾಲಕನ ತಂದೆ ತಾಯಿಗಳು ಸತ್ಯ ವಿಶ್ವಾಸಿ ಗಳಾಗಿದ್ದರು. ಅವನು ಬೆಳೆದು ದೊಡ್ಡವನಾದರೆ ತನ್ನ ಹೆತ್ತವರನ್ನು ಅತಿಕ್ರಮ ಹಾಗೂ ಸತ್ಯ ನಿಷೇಧಕ್ಕೆ ಬಲವಂತವಾಗಿ ದೂಡಿಹಾಕುವ ಭಯ ನಮಗೆ ಕಾಡಿತು.

81

ಹೀಗಾಗಿ ಆತನಿಗಿಂತ ಶುದ್ಧ ಚಾರಿತ್ರ್ಯವಂತನೂ ನಿಕಟ ದಯಾವಂತನೂ ಆದ ಸಂತಾನವನ್ನು ಅವರ ಪ್ರಭು ಅವರಿಗೆ ಕರುಣಿಸುವಂತೆ ನಾವು ಬಯಸಿದೆವು.

82

ಆ ಗೋಡೆಯು ಪಟ್ಟಣದ ಇಬ್ಬರು ಅನಾಥ ಮಕ್ಕಳದ್ದಾಗಿತ್ತು. ಅದರ ಅಡಿಯಲ್ಲಿ ಮಕ್ಕಳಿಗಾಗಿ ಕೂಡಿಟ್ಟ ನಿಕ್ಷೇಪವಿತ್ತು. ಅವರ ತಂದೆ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು . ಆದ್ದರಿಂದ ಅವರಿಬ್ಬರು ಪ್ರೌಢಾವಸ್ಥೆಗೆ ತಲುಪಿದ ಮೇಲೆ ನಿಧಿಯನ್ನು ಅವರು ಹೊರತೆಗೆಯಲೆಂದು ನಿಮ್ಮ ಪ್ರಭು ಬಯಸಿದ್ದನು. ಇದು ನಿಮ್ಮ ರಕ್ಷಕನ ಮಹತ್ತರವಾದ ಕೃಪೆಯ ಫಲ. ನಾನಿದನ್ನು ನನ್ನ ಸ್ವಂತ ಅಭಿಪ್ರಾಯ ಪ್ರಕಾರ ಮಾಡಿಲ್ಲ. ಇವಿಷ್ಟು ನಿಮಗೆ ತಾಳಿಕೊಳ್ಳಲಾಗದ ವಿಷಯಗಳ ಸಾರಾಂಶ’ .

83

(ಓ ಪ್ರವಾದಿವರ್ಯರೇ,) ದ್ಸುಲ್ಖರ್ನೈನ್‍ರ ಬಗ್ಗೆ ಇವರು ನಿಮ್ಮಲ್ಲಿ ಪ್ರಶ್ನಿಸುತ್ತಾರೆ. ಅವರ ಚರಿತ್ರೆ ಯಿಂದ ಕೆಲವು ವಿವರವನ್ನು ನಾನು ನಿಮಗೆ ಓದಿ ಕೊಡುವೆನೆಂದು ಹೇಳಿರಿ.

84

ನಾವು ಅವರಿಗೆ ಭೂಮಿಯಲ್ಲಿ ಪ್ರಭುತ್ವವನ್ನು ದಯಪಾಲಿಸಿದ್ದೆವು. ಅವರಿಗೆ ಅಗತ್ಯವಾದ ಎಲ್ಲ ಕಾರ್ಯಕ್ಕೂ ದಾರಿಯನ್ನು ಸುಗಮಗೊಳಿಸಿದೆವು.

85

ಒಮ್ಮೆ ಅವರು (ಪಶ್ಚಿಮ) ಮಾರ್ಗಕ್ಕೆ ಹೊರಟರು.

86

ಕೊನೆಗೆ ಸೂರ್ಯಾಸ್ತದ ಸ್ಥಳಕ್ಕೆ ತಲುಪಿದಾಗ ಕಪ್ಪು ಕೆಸರಿನ ಚಿಲುಮೆಯಲ್ಲಿ ಸೂರ್ಯನು ಮುಳು ಗುವಂತೆ ಅವರಿಗೆ ಕಂಡಿತು. ಅಲ್ಲೊಂದು ಜನಾಂ ಗವನ್ನೂ ಅವರು ಕಂಡರು. ನಾವು ಅವರಿಗೆ ಹೀಗೆ ಹೇಳಿದೆವು. ‘ಓ ದ್ಸುಲ್ ಖರ್ನೈನ್, ಒಂದೋ ಅವರಿಗೆ ಶಿಕ್ಷೆ ನೀಡಿರಿ, ಇಲ್ಲವೇ ಉತ್ತಮ ಕ್ರಮ ಕೈಗೊಳ್ಳಿರಿ’.

87

ಆಗ ಅವರು ಹೇಳಿದರು, ‘ಯಾರು ಅನ್ಯಾಯ ವೆಸಗುತ್ತಾರೆ, ಅವನನ್ನು ನಾವು ಶಿಕ್ಷಿಸಲಿದ್ದೇವೆ. ನಂತರ ಅವನನ್ನು ತನ್ನ ಪ್ರಭುವಿನ ಕಡೆಗೆ ಮರಳಿಸಲಾಗುವುದು. ಆಗ ಪ್ರಭು ಆತನಿಗೆ ಇನ್ನಷ್ಟು ಕಠಿಣ ಶಿಕ್ಷೆ ಕೊಡುವನು’.

88

ಆದರೆ ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮ ಕೈಗೊಳ್ಳುತ್ತಾರೆ ಅಂಥವರಿಗೆ ಅತ್ಯಂತ ಉತ್ಕøಷ್ಟವಾದ ಪ್ರತಿಫಲವಿದೆ. ನಂತರ ಆತನಿಗೆ ಸರಳವಾದ ಆದೇಶಗಳನ್ನು ನಾವು ನೀಡಲಿದ್ದೇವೆ’.

89

ಅನಂತರ ಅವರು ಇನ್ನೊಂದು ದಾರಿಗೆ ಸಾಗಿದರು.

90

ಕೊನೆಗೆ ಸೂರ್ಯನು ಉದಯಿಸುವ ಪೂರ್ವ ಸೀಮೆಗೆ ತಲುಪಿದರು. ಅಲ್ಲಿ ಅವರಿಗೆ ಬಿಸಿಲ ದಗೆಯನ್ನು ತಡೆಯುವ ಯಾವುದೇ ಮರೆಯನ್ನು ನಾವು ವ್ಯವಸ್ಥೆಗೊಳಿಸದಂಥ ಜನಾಂಗದ ಮೇಲೆ ಉದಯಿಸುತ್ತಿರುವ ಸೂರ್ಯನನ್ನು ಕಂಡರು.

91

ದ್ಸುಲ್‍ಖರ್ನೈನ್‍ರ ವಿಷಯ ನಾವು ಹೇಳಿದಂತೆಯೇ ಇದೆ. ಅವರ ಬಳಿ ಇರುವುದರ ಬಗ್ಗೆ ನಮಗೆ ಸಂಪೂರ್ಣ ಜ್ಞಾನವಿದೆ.

92

ಅನಂತರ ಅವರು ಇನ್ನೊಂದು ದಾರಿಯಲ್ಲಿ ನಡೆದರು.

93

ಕೊನೆಗೆ ಎರಡು ಪರ್ವತಗಳ ನಡುವೆ ತಲುಪಿ ದಾಗ ಅದರ ಹತ್ತಿರದಲ್ಲಾಗಿ ಮಾತನ್ನು ಸರಿ ಯಾಗಿ ಗ್ರಹಿಸದ ಜನಾಂಗವನ್ನು ಕಂಡರು.

94

ಆಗ ಅವರು ‘ಓ ದುಲ್‍ಖರ್ನೈನ್, ಯಅï ಜೂಜ್ ಮತ್ತು ಮಅïಜೂಜರು ಈ ಭೂಪ್ರ ದೇಶದಲ್ಲಿ ಅನ್ಯಾಯವೆಸಗುತ್ತಿದ್ದಾರೆ. ಆದ್ದರಿಂದ ನಮ್ಮ ಹಾಗೂ ಅವರ ನಡುವೆ ಒಂದು ತಡೆ ಗೋಡೆಯನ್ನು ನಿರ್ಮಿಸಿಕೊಡುವ ಷರತ್ತಿನ ಮೇರೆಗೆ ನಾವು ನಿಮಗೆ ಅಪಾರ ಮೊತ್ತವನ್ನು ಪ್ರತಿಫಲವಾಗಿ ನಿಶ್ಚಯಿಸಿ ಕೊಡಲೇ?’ ಎಂದು ಕೇಳಿದರು.

95

ಅದಕ್ಕೆ ಅವರು ‘ನನ್ನ ಪ್ರಭು ನನ್ನ ವಶಕ್ಕೆ ಕೊಟ್ಟಿರುವ ಅನುಗ್ರಹವೇ ನನಗೆ ನೀವು ಕೊಡುವ ಪ್ರತಿಫಲಕ್ಕಿಂತ ಲೇಸು. ಆದರೆ ನೀವು ನನಗೆ ಶಕ್ತಿ ಕೊಟ್ಟು ಸಹಾಯ ಮಾಡಿರಿ. ಅವರ ಮತ್ತು ನಿಮ್ಮ ನಡುವೆ ಬಲಿಷ್ಟವಾದ ತಡೆಗೋಡೆಯನ್ನು ನಾನು ನಿರ್ಮಿಸಿ ಕೊಡುತ್ತೇನೆ.

96

ನನಗೆ ಕಬ್ಬಿಣದ ತುಂಡುಗಳನ್ನು ತಂದು ಕೊಡಿರಿ’ ಎಂದರು. ಹೀಗೆ ಎರಡು ಪರ್ವತಗಳ ನಡುವೆ ಸಮಾನವಾಗಿ ಆ ಗೋಡೆ ಎತ್ತರಕ್ಕೆ ಏರಿದಾಗ ‘ನೀವು ಬೆಂಕಿಯುರಿಸಿ ಊದಿರಿ’ ಎಂದರು. ಕೊನೆಗೆ ಕಬ್ಬಿಣವನ್ನು ಬೆಂಕಿಯ ಕೆಂಡ ದಂತೆ ಮಾಡಿದಾಗ ಅವರು ‘ಕುದಿಯುವ ತಾಮ್ರ ವನ್ನು ತನ್ನಿರಿ, ಅದನ್ನು ಇದರ ಮೇಲೆ ಹೊಯ್ದು ಬಿಡುತ್ತೇನೆ’ ಎಂದರು.

97

ನಂತರ ಈ ತಡೆಯನ್ನೇರಿ ಬರಲು ಅವರಿಗೆ (ಯಅïಜೂಜ್ - ಮಅïಜೂಜರಿಗೆ) ಸಾಧ್ಯ ವಾಗಲಿಲ್ಲ. ಅದಕ್ಕೆ ಕನ್ನ ಕೊರೆದು ಹೊರಬರಲು ಅವರು ಅಸಮರ್ಥರಾದರು.

98

ದುಲ್‍ಖರ್ನೈನ್ ಹೇಳಿದರು. ‘ಈ ತಡೆಯು ನನ್ನ ಪ್ರಭುವಿನಿಂದ ಲಭಿಸಿದ ಒಂದು ಅನುಗ್ರಹವಾ ಗಿದ್ದು ಮುಂದೆ ಪ್ರಭುವಿನ ನಿಶ್ಚಿತ ಅವಧಿ ಬಂದಾಗ ಅವನು ಇದನ್ನು ನೆಲಸಮಗೊಳಿಸುವನು. ನನ್ನ ಪ್ರಭುವಿನ ನಿಶ್ಚಯವು ಅಚಲವಾಗಿರುತ್ತದೆ’.

99

ಅಂದು ಒಬ್ಬರ ಮೇಲೆ ಇನ್ನೊಬ್ಬರನ್ನು ಪರಸ್ಪರ ತೆರೆಗಳು ಅಪ್ಪಳಿಸಿ ಏರಿಬರುವಂತೆ ಬಿಟ್ಟು ಬಿಡಲಿದ್ದೇವೆ. ಕಹಳೆ ಮೊಳಗಿದ ಮೇಲೆ ಅವರೆಲ್ಲರನ್ನು ಒಟ್ಟುಗೂಡಿಸಲಿದ್ದೇವೆ.

100

ಸತ್ಯನಿಷೇಧಿಗಳ ಮುಂದೆ ಅಂದು ನಾವು ನರಕವನ್ನು ಪ್ರದರ್ಶಿಸಲಿದ್ದೇವೆ.

101

ತಮ್ಮ ಕಣ್ಣುಗಳಿಗೆ ಪರದೆ ಬಿದ್ದು ನನ್ನ ಬೋಧನೆಯಿಂದ ವಿಮುಖರಾಗಿದ್ದ ಹಾಗೂ ಅದನ್ನು ಕಿವಿಗೊಟ್ಟು ಆಲಿಸಲು ಸಾಧ್ಯವಾಗದೇ ಹೋದ.

102

ಸತ್ಯನಿಷೇಧಿಗಳು ನನ್ನನ್ನು ಬಿಟ್ಟು ನನ್ನ ದಾಸರನ್ನು ತಮ್ಮ ರಕ್ಷಕರನ್ನಾಗಿ ಮಾಡಲು ಬಯಸಿ ದ್ದಾರೆಯೇ? ಖಂಡಿತವಾಗಿಯೂ ನಾವು ಅವಿಶ್ವಾಸಿಗಳಿಗೆ ಸತ್ಕರಿಸಲು ನರಕವನ್ನು ಸಜ್ಜು ಗೊಳಿಸಿದ್ದೇವೆ.

103

(ನಬಿಯವರೇ) ಹೇಳಿರಿ, ಕರ್ಮಫಲವು ಅತ್ಯಂತ ಹೆಚ್ಚು ನಷ್ಟವಾದವರ ಬಗ್ಗೆ ನಿಮಗೆ ತಿಳಿಸಿ ಕೊಡಲೇ?

104

ಅಂದರೆ ಐಹಿಕ ಜೀವನದಲ್ಲಿ ಅವರ ಎಲ್ಲ ಪ್ರಯ ತ್ನಗಳು ವ್ಯರ್ಥವಾದವು. ಆದರೆ ಅವರು ತಾವು ಒಳ್ಳೆಯ ಕೆಲಸವನ್ನೇ ಮಾಡುತ್ತಿರುವುದಾಗಿ ತಪ್ಪು ತಿಳಿದಿರುವರು.

105

ಅವರು ತಮ್ಮ ಪ್ರಭುವಿನ ದೃಷ್ಟಾಂತಗಳಲ್ಲಿ ಹಾಗೂ ಆತನ ಸಾನಿಧ್ಯದಲ್ಲಿ ಬೇಟಿಯಾಗುವ ಬಗ್ಗೆ ಅವಿಶ್ವಾಸ ತಾಳಿದವರು. ಅಂತಲೇ ಅವರ ಸಕಲ ಕರ್ಮಗಳು ನುಚ್ಚುನೂರಾದವು. ಆದ್ದರಿಂದ ಪುನರುತ್ಥಾನದ ದಿನದಲ್ಲಿ ಯಾವುದೇ ತೂಕವನ್ನು ಅವರಿಗೆ ನಾವು ಕಲ್ಪಿಸಲಾರೆವು.

106

ಅವರು ಸತ್ಯ ನಿಷೇಧ ತಾಳಿ ನನ್ನ ವಚನಗಳನ್ನು ಮತ್ತು ನನ್ನ ಸಂದೇಶವಾಹಕರನ್ನು ಪರಿಹಾಸ್ಯ ಮಾಡಿದ ಕಾರಣಕ್ಕೆ ಅವರಿಗೆ ಸರಿಯಾದ ಪ್ರತಿಫಲ ನರಕ ಶಿಕ್ಷೆಯಾಗಿದೆ.

107

ಆದರೆ ಸತ್ಯವಿಶ್ವಾಸ ತಾಳಿ, ಸತ್ಕರ್ಮ ಕೈಗೊಂಡ ವಿಶ್ವಾಸಿಗಳ ನಿವಾಸವಾಗಿ ಫಿರ್‍ದೌಸ್‍ನ ಸ್ವರ್ಗಾರಾಮಗಳಿವೆ .

108

ಅವರು ಅಲ್ಲಿ ಸದಾ ಕಾಲ ನೆಲೆಸುವರು. ಅಲ್ಲಿಂದ ಬಿಟ್ಟು ಬೇರೆಡೆಗೆ ಹೋಗಲು ಅವರೆಂದೂ ಬಯಸಲಾರರು.

109

(ನಬಿಯೇ) ಹೇಳಿರಿ, ಸಮುದ್ರದ ಜಲವು ನನ್ನ ಪ್ರಭುವಿನ ವಚನಗಳನ್ನು ಬರೆಯುವ ಮಸಿ ಯಾಗಿದ್ದರೆ ನನ್ನ ಪ್ರಭುವಿನ ವಚನಗಳು ಮುಗಿಯುವ ಮುನ್ನ ಸಮುದ್ರಜಲವು ಮುಗಿದು ಬಿಡುತ್ತಿತ್ತು. ಅದಕ್ಕೆ ಸಮಾನವಾದ ಇನ್ನೊಂದು ಸಮುದ್ರವನ್ನು ನಾವು ಸಹಾಯಕ್ಕಾಗಿ ಕೊಂಡು ಬಂದರೂ ಸರಿಯೇ.

110

(ನಬಿಯೇ) ಹೇಳಿರಿ, ನಾನು ನಿಮ್ಮಂತಿರುವ ಓರ್ವ ಮನುಷ್ಯ. ನಿಮ್ಮ ಆರಾಧ್ಯನು ಏಕಮಾತ್ರ ಆರಾಧ್ಯನೆಂದು ನನಗೆ ಸಂದೇಶ ನೀಡಲಾಗಿದೆ. ಆದ್ದರಿಂದ ಯಾರಿಗೆ ಪ್ರಭುವಿನ ಭೇಟಿ ಮಾಡುವ ಹಂಬಲವಿದೆಯೋ ಅವನು ಸತ್ಕರ್ಮವನ್ನು ಮಾಡಲಿ ಹಾಗೂ ತನ್ನ ಪ್ರಭುವಿನ ಆರಾಧನೆಯಲ್ಲಿ ಆತನೊಂದಿಗೆ ಯಾರನ್ನೂ ಜೊತೆಗೂಡಿಸದಿರಲಿ.